ದೀಪಾವಳಿ 3 ದಿನಗಳ ದೊಡ್ಡ ಹಬ್ಬವಾಗಿ ಇಡೀ ರಾಷ್ಟ್ರಾದ್ಯಂತ ಅತಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಇದನ್ನು ಕಾಲಕ್ಕೆ ತಕ್ಕಂತೆ ಆಧುನಿಕ ಶೈಲಿಯಲ್ಲಿ ಹೊಸ ಬಗೆಯಲ್ಲಿ ಏಕೆ ಆಚರಿಸಬಾರದು....?
ಕಳೆದ 1 ವಾರದಿಂದ ಪ್ರಿಯಾ ದೀಪಾವಳಿ ಹಬ್ಬಕ್ಕಾಗಿ ಶಾಪಿಂಗ್ ನಲ್ಲಿ ಬಿಝಿ. ಇಂದು ಅವಳು ಹೊಸ ಡ್ರೆಸ್ ಕೊಳ್ಳಲು ಹೊರಟಿದ್ದಳು. ಅವಳ ಅತ್ತೆಮನೆಯವರು, ಪ್ರಿಯಾ ಈ ಸಲ ಸುಂದರ ಸೀರೆ, ಬ್ಯೂಟಿಫುಲ್ ಸಲ್ವಾರ್ ಸೂಟ್ ಮುಂತಾದ ಎಥ್ನಿಕ್ ಡ್ರೆಸ್ ತರಬಹುದೆಂದು ಎಣಿಸುತ್ತಿದ್ದರು. ಏಕೆಂದರೆ ಎಲ್ಲೆಡೆ ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಎಥ್ನಿಕ್ ಡ್ರೆಸೆಸ್ ಮಾತ್ರವೇ ಹೆಚ್ಚು ಸೂಕ್ತ ಎಂದು ಬಹುತೇಕರು ಭಾವಿಸುತ್ತಾರೆ.
ಆದರೆ ಪ್ರಿಯಾಳ ಮನದಲ್ಲಿ ಬೇರೆಯೇ ವಿಚಾರವಿತ್ತು. ಅವಳು ಸಂಜೆ ವಾಪಸ್ಸು ಮನೆ ಸೇರಿದಾಗ, ಅವಳ ಬಳಿ ಹಲವಾರು ವೆಸ್ಟ್ರನ್ ಡ್ರೆಸೆಸ್ ಇದ್ದವು. ಅವಳು ತಂದಿದ್ದರಲ್ಲಿ ಮೆರೂನ್ ಕಲರ್ ನ ಸ್ಟೈಲಿಶ್ ಮಿಡಿಯ ಬಾಹುಗಳಲ್ಲಿ ಗೋಲ್ಡನ್ ಸ್ಟೋನ್ಸ್ ಹುದುಗಿಸಲಾಗಿತ್ತು. ಅದರ ಮೇಲೆ ಗೋಲ್ಡನ್ ಕಲರಿನ ಜ್ಯಾಕೆಟ್ ಇತ್ತು. ಒಟ್ಟಾರೆ ಆ ಡ್ರೆಸ್ ಇತರ ಎಲ್ಲಾ ಉಡುಗೆಗಳಿಗಿಂತ ಮಿರಿ ಮಿರಿ ಮಿಂಚುತ್ತಿತ್ತು. ಮನೆಯ ಹಿರಿಯರು ಏನೆಂದುಕೊಳ್ಳುತ್ತಾರೋ ಎಂದು ಅವಳಿಗೆ ಅಳುಕಿದ್ದೇ ಇತ್ತು. ಹೀಗಾಗಿ ಅವಳು ಅತ್ತೆ ಬಳಿ ವಿನಮ್ರಳಾಗಿ, ``ಹಬ್ಬದ ದಿನ ಸಂಜೆಗೆ ನಾನು ಇದೇ ಡ್ರೆಸ್ ಹಾಕಿಕೊಳ್ಳಲೇ ಅತ್ತೆ?'' ಎಂದು ಕೇಳಿದಳು.
ಅತ್ತೆ ಅವಳ ಕಡೆ ಆಶ್ಚರ್ಯದಿಂದ ನೋಡುತ್ತಾ, ``ಇದೇನಮ್ಮ, ಹಬ್ಬಕ್ಕೆ ಲಕ್ಷಣವಾಗಿ ರೇಷ್ಮೆ ಸೀರೆ ಕೊಳ್ಳಬಾರದಿತ್ತೇ?'' ಎಂದು ಕೇಳಿದರು.
``ಅಯ್ಯೋ.... ಕಳೆದ ವರ್ಷ ನನ್ನ ಹೊಸ ಸೀರೆಗೆ ಹೊರಗೆ ದೀಪ ಜೋಡಿಸುವಾಗ ಬೆಂಕಿ ತಗುಲಿ ಎಂಥ ಅನಾಹುತವಾಯಿತು ಅಂತ ನಿಮಗೆ ನೆನಪಿಲ್ಲವೇ?'' ಎಂದು ಪ್ರಿಯಾ ಕೇಳಿದಳು.
``ಅದೇನೋ ನೆನಪಿದೆ ಕಣೆ. ಆದರೆ ಅದು ನಿನ್ನ ನಿರ್ಲಕ್ಷ್ಯದಿಂದಾಗಿ ಆಗಿದ್ದು ಅಲ್ಲವೇ? ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಲಕ್ಷಣವಾಗಿ ಸೀರೆ ಉಟ್ಟು, ಸರಭರ ಓಡಾಡುತ್ತಾ, ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡರೆ ಗೃಹಿಣಿಗೆ ಎಂಥ ಚಂದ ಅಲ್ಲವೇ....?'' ಅತ್ತೆ ವಿವರಿಸಿದರು.
ಅಷ್ಟರಲ್ಲಿ ಅವಳ ಪತಿ ವಿನೋದ್ ಹೇಳಿದ, ``ಹಾಗಲ್ಲಮ್ಮ.... ಯಾರಿಗೆ ಯಾವುದು ಸ್ಟೈಲಿಶ್ ಹಾಗೂ ಕಂಫರ್ಟೆಬಲ್ ಎನಿಸುತ್ತದೋ ಅದನ್ನೇ ಧರಿಸಬೇಕು. ಅದನ್ನು ಬಿಟ್ಟು ಯಾವುದು ಅತಿ ಭಾರಿ ಎನಿಸುತ್ತದೋ ಅಂಥದನ್ನು ಧರಿಸಿದರೆ ಸುಖವಾಗಿ ಓಡಾಡುವುದಾದರೂ ಹೇಗೆ? ಇವಳಿಗೆ ಅಚ್ಚುಕಟ್ಟಾಗಿ ನೆರಿಗೆ ಹಿಡಿದು ಸರಿಯಾಗಿ ಸೀರೆ ಉಡಲಿಕ್ಕೂ ಬರೋದಿಲ್ಲ. ಅದನ್ನು ಟಿಪ್ ಟಾಪಾಗಿ ಉಟ್ಟ ಮೇಲೆ ಸರಿಯಾಗಿ ಮೇಂಟೇನ್ ಮಾಡಬೇಕು. ಆದರೂ ಅವಳು ಮದುವೆಯಾದ 3 ವರ್ಷಗಳೂ ಸೀರೆ ಉಟ್ಟುಕೊಂಡೇ ಹಬ್ಬ ಮಾಡಿದಳಲ್ಲವೇ? ಆದರೆ ಕಳೆದ ವರ್ಷವಂತೂ ದೀಪದ ಉರಿ ಇವಳ ಸೀರೆಗೆ ತಗುಲಿ ದೊಡ್ಡ ಅನಾಹುತ ಆಗುವುದರಲ್ಲಿತ್ತು, ಸ್ವಲ್ಪದರಲ್ಲಿ ಅದು ಬಗೆಹರಿಯಿತು. ಹಾಗಾಗಿ ಅವಳು ಈ ಸಲ ಸೀರೆ ಬಿಟ್ಟು ಬೇರೆ ಡ್ರೆಸ್ ಧರಿಸಿ ಓಡಾಡಿದರೆ ತಪ್ಪೇನು?''





