– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರದ ಟೀಸರ್ ಇಲ್ಲಿದೆ
ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ಹಾಗೂ ಒಂದೆರಡು ಚಿತ್ರಗಳಲ್ಲೂ ನಟಿಸಿರುವ ಸುನಿಲ್ ನಾಯಕನಾಗಿ ನಟಿಸಿರುವ ವಿಭಿನ್ನ ಪ್ರೇಮ ಕಥಾಹಂದರ ಹೊಂದಿದ ಚಿತ್ರ ಒಲವಿನ ಪಯಣ. ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನ ಬದುಕು, ಪ್ರೇಮ ಪಯಣದ ಕಥೆಯನ್ನು ಈ ಚಿತ್ರದ ಮೂಲಕ ನಿರ್ದೇಶಕ ಕಿಶನ್ ಬಲ್ನಾಡ್ ಅವರು ಹೇಳಹೊರಟಿದ್ದಾರೆ, ಫೆ.21ರಂದು ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟೀಸರ್ ಮತ್ತು ಹಾಡುಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆಯಿತು.
ಹಳ್ಳಿ ಮದ್ಯಮ ವರ್ಗದ ಹುಡುಗ ಶ್ರೀಮಂತ ವರ್ಗದ ಹುಡುಗಿ ಪ್ರೀತಿ ಕಥೆ ಚಿತ್ರದ ಕಥಾಹಂದರ. ಸುನಿಲ್ ಜತೆ ಖುಶಿ ಹಾಗೂ ಪ್ರಿಯಾ ಹೆಗ್ಡೆ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ, ಮುಳಗುಂದ ಕ್ರಿಯೇಷನ್ಸ್ ಮೂಲಕ ನಾಗರಾಜ್ ಎಸ್. ಮುಳಗುಂದ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ, ಚಿತ್ರದ ಕಥೆ ಕೂಡ ಅವರದೇ. ಕಿಶನ್ ಬಲ್ನಾಡ್ ನಿರ್ದೇಶನದ ಈ ಚಿತ್ರಕ್ಕೆ ಸೂರ್ಯಕಿರಣ್ ಹಾಗೂ ಸುನೀಲ್ ಚಿತ್ರಕಥೆ, ಸಂಭಾಷಣೆಗಳನ್ನು ರಚಿಸಿದ್ದಾರೆ.
ನಿರ್ದೇಶಕ ಕಿಶನ್ ಮಾತನಾಡಿ, ಕಳೆದ 17 ವರ್ಷಗಳಿಂದ ನಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ ನಿರ್ದೇಶನ ಮಾಡಲು ಸಾಧ್ಯವಾಗಲಿಲ್ಲವಲ್ಲ ಎಂಬ ಕೊರಗಿತ್ತು. ಸುನಿಲ್ ಅದನ್ನು ನೀಗಿಸಿದರು, ಒಳ್ಳೇ ನಿರ್ಮಾಪಕರನ್ನು ಹುಡುಕಿಕೊಟ್ಟರು, ನಿರ್ಮಾಪಕರೇ ಮಾಡಿಕೊಂಡಿದ್ದ ಕಥೆಯಿದು, ಎರಡು ಸಿನಿಮಾಗಾಗುವಷ್ಟಿದ್ದ ಆ ಕಥೆಯನ್ನು ಒಂದು ಸಿನಿಮಾಗೆ ರೆಡಿ ಮಾಡಿಕೊಂಡು, ವಿರಾಜಪೇಟೆಯಲ್ಲಿ 12 ದಿನ ಉಳಿದಂತೆ ಬೆಂಗಳೂರಿನಲ್ಲಿ ಚಿತ್ರೀಕರಿಸಿದೆವು. ಕಲಾವಿದರೆಲ್ಲ ತಂತಮ್ಮ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ್ದಾರೆ, ಚಿತ್ರದ 3 ಹಾಡುಗಳಿಗೆ ಸಾಯಿ ಸರ್ವೇಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ, ರಾಜೇಶ್ ಕೃಷ್ಣನ್, ವೀರ ಸಮರ್ಥ್ ಹಾಗೂ ಸಾಯಿಸರ್ವೇಶ್ ಅವರೂ ಹಾಡಿದ್ದಾರೆ ಎಂದು ಹೇಳಿದರು,
ನಾಯಕ ಸುನಿಲ್ ಆರಂಭದಲ್ಲಿ ನಾನು ನಿರ್ಮಾಪಕರ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದೆ, ಅವರಿಗೆ ಮೊದಲಿಂದಲೂ ಸಿನಿಮಾ ಮೇಲೆ ಪ್ರೀತಿ, ನಾನೊಂದು ಚಿತ್ರ ನಿರ್ಮಿಸಬೇಕು ಎಂದು ಕಾಯುತ್ತಿದ್ದರು. ನಾನು ಮೊದಲು ಬೇಡ ಎಂದು ಸಲಹೆ ನೀಡಿದೆ. ಆದರೆ ಅವರು ಚಿತ್ರ ಮಾಡಲೇಬೇಕೆಂದು ಹಠಕ್ಕೆ ಬಿದ್ದಾಗ ಸರಿ ಅಂತ ನಿರ್ದೇಶಕ ಕಿಶನ್ ರನ್ನು ಪರಿಚಯಿಸಿದೆ. ನಂತರ ನಾವೆಲ್ಲ ಅವರ ಜತೆ ಕೈಜೋಡಿಸಿದೆವು, ಕಥೆ, ಚಿತ್ರಕಥೆಗೆ ಬ್ಯಾಕ್ ಬೋನ್ ಆಗಿ ನಿಂತವರು ಸೂರ್ಯಕಿರಣ್.
ಇದು ಮಿಡಲ್ ಕ್ಲಾಸ್ ಹುಡುಗನ ಜೀವನದ ಪಯಣ, ಅದರಲ್ಲಿನ ಏಳು ಬೀಳುಗಳು, ತೊಂದರೆಗಳು, ಅಲ್ಲಿಂದ ಆತ ಹೊರಬರಲು ಹೇಗೆಲ್ಲ ಹೋರಾಡುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು.
ನಾಯಕಿ ಖುಷಿ ಶ್ರೀಮಂತ ಮನೆತನದ ಹುಡುಗಿ, ನಂತರ ನಾಯಕನ ಪತ್ನಿಯಾಗಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಎಂಬ ಬೋಲ್ಡ್ , ಇಂಡಿಪೆಂಡೆಟ್ ಹುಡುಗಿಯ ಪಾತ್ರವನ್ನು ಪ್ರಿಯಾ ಹೆಗ್ಡೆ ಅವರು ನಿರ್ವಹಿಸಿದ್ದಾರೆ, ನಾಗೇಶ್ ಮಯ್ಯ, ಪದ್ಮಜಾರಾವ್, ಬಲ ರಾಜ್ವಾಡಿ, ಪೃಥ್ವಿರಾಜ್, ಸುಧಾಕರ ಬನ್ನಂಜೆ, ಸೂರ್ಯಕಿರಣ್, ಧನಂಜಯ್, ರಾಮ್ ಧನುಷ್, ಬೇಬಿ ರಿಧಿ ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಜೀವನ್‌ಗೌಡ ಅವರ ಛಾಯಾಗ್ರಹಣ, ಕೀರ್ತಿರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.