ಬೇರೆ ದಿನಗಳಿಗೆ ಹೋಲಿಸಿದರೆ ಇಂದು ಅಂಜಲಿ ಬೇಗನೇ ಎದ್ದಿದ್ದಳು. ಇಂದು ಅವಳಿಗೆ ಆಫೀಸಿನ ಮೊದಲ ದಿನವಾಗಿತ್ತು. ಮಾಸ್‌ ಕಮ್ಯುನಿಕೇಶನ್‌ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡ ಬಳಿಕ ಇಂದು ಅವಳು ಮೊದಲ ನೌಕರಿಗೆ ಬಹಳ ಕಷ್ಟಪಡಬೇಕಾಯಿತು. ಅನುಪಮ ದೇಹಸಿರಿಯಲ್ಲಿ ಅವಳು ಯಾರಿಗೂ ಕಡಿಮೆ ಇರಲಿಲ್ಲ.

ಎಲ್ಲರೂ ಅವಳ ಸೌಂದರ್ಯದ ಆರಾಧಕರಾಗಿದ್ದರು. ಅವಳಿಗೆ ತನ್ನ ತೀಕ್ಷ್ಣ ಬುದ್ಧಿಯ ಬಗ್ಗೆಯೂ ಸಂಪೂರ್ಣ ವಿಶ್ವಾಸವಿತ್ತು. ತನ್ನ ಕೆಲಸದಲ್ಲಿ ವೇಗ ಹಾಗೂ ಚಾಣಾಕ್ಷೆ, ಸ್ವಭಾವ ಕೂಡ ಮನಮೋಹಕ. ಎಲ್ಲರೊಂದಿಗೆ ಬೇಗ ಬೆರೆಯುವುದು, ತನಗೆ ಹೇಳಬೇಕಾದ್ದನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸುವುದು, ಕೇಳುಗರಲ್ಲಿ ತನ್ನ ಮಾತನ್ನು ಒಪ್ಪುವಂತೆ ಮಾಡುವುದು ಅವಳ ವಿಶೇಷತೆಗಳಲ್ಲಿ ಸೇರಿದ್ದವು. ಒಂದು ವಿಷಯದ ಬಗ್ಗೆ ಅವಳಲ್ಲಿ ಅರಿವಿತ್ತು. ಅದೇನೆಂದರೆ `ಫಸ್ಟ್ ಇಂಪ್ರೆಶನ್‌ ಇಸ್‌ ದಿ ಬೆಸ್ಟ್ ಇಂಪ್ರೆಶನ್‌’ ಹಾಗಿದ್ದರೆ ರಿಸ್ಕ್ ಏಕೆ ತೆಗೆದುಕೊಳ್ಳಬೇಕು?`ಅನರ್ಘ್ಯ ಅಡ್ವರ್‌ ಟೈಸಿಂಗ್‌ ಏಜೆನ್ಸಿ’ಯ ವಾತಾವರಣ ಅವಳಿಗೆ ಬಹಳ ಹಿಡಿಸಿತು. ಅಲ್ಲಿ ಒತ್ತಡ ಇದೆ ಅಥವಾ ಇಲ್ಲ ಎಂದು ಹೇಳುವುದು ಕಷ್ಟ ಎಂಬಂತಹ ಪರಿಸ್ಥಿತಿ ಇತ್ತು. ಅಲ್ಲಿನ ಟೀಮ್ ಗಳಲ್ಲಿ ಕೆಲಸದ ಬಗ್ಗೆ ಅಷ್ಟಿಷ್ಟು ಮಾತುಗಳು ಜೋರು ಜೋರಾಗಿ ಕೇಳಿಸಿ ಬರುತ್ತಿದ್ದವಾದರೂ, ಮತ್ತೆ ಕೆಲವೇ ಕ್ಷಣಗಳಲ್ಲಿ ಅಲ್ಲಿ, ನಗುವಿನ ಅಲೆ ತೇಲಿ ಬರುತ್ತಿತ್ತು. ಹಿನ್ನೆಲೆಯಲ್ಲಿ ಮಧುರ ಸಂಗೀತ ಕೇಳಿ ಬರುತ್ತಿತ್ತು. ಆಫೀಸಿನ ಗೋಡೆಗಳ ಮೇಲೆ ಏನೇನೊ ಗೀಚಿರುವ ಅಕ್ಷರಗಳು, ಪೋಸ್ಟರ್‌ ಗಳು ಅಂಟಿಸಲ್ಪಟ್ಟಿದ್ದವು.

ಅಂಜಲಿ ಅಲ್ಲಿನ ವಾತಾವರಣ ಕಂಡು ಖುಷಿಗೊಂಡಳು. ಅಲ್ಲಿನ ಮುಕ್ತ ವಾತಾವರಣ ಅವಳಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿತು. ತನಗೆ ಏನನ್ನಾದರೂ ಮಾಡುವ ಸ್ವಾತಂತ್ರ್ಯ ಸಿಗಬೇಕೆನ್ನುವುದು ಅವಳ ಅಪೇಕ್ಷೆಯಾಗಿತ್ತು. ಅವಳು ಈವರೆಗೂ ಜೀವನವನ್ನು ತನ್ನದೇ ಆದ ರೀತಿಯಲ್ಲಿ ಜೀವಿಸುತ್ತಾ ಬಂದಿದ್ದಳು. ಮುಂದೆಯೂ ಹೀಗೆಯೇ ಮಾಡುತ್ತಿರಬೇಕು ಎನ್ನುವುದು ಅವಳ ಮನದಿಚ್ಛೆಯಾಗಿತ್ತು.

ಬಾಸ್‌ ರವೀಂದ್ರರ ಕ್ಯಾಬಿನ್‌ ನಲ್ಲಿ ಕಾಲಿಡುತ್ತಾ ಅಂಜಲಿ ಹೇಳಿದಳು, “ಹಲೋ ರವೀಂದ್ರ, ಐ ಆ್ಯಮ್ ಅಂಜಲಿ, ಯುವರ್‌ ನ್ಯೂ ಎಂಪ್ಲಾಯಿ.”

ಅವಳ ಫಿಗರ್‌ ಹಗಿಂಗ್‌ ಯೆಲ್ಲೋ ಡ್ರೆಸ್‌ ರವೀಂದ್ರರನ್ನು ಕ್ಲೀನ್‌ ಬೋಲ್ಡ್ ಮಾಡಿಬಿಟ್ಟಿತ್ತು.

ಬಳಿಕ “ವೆಲ್ ‌ಕಮ್,” ಎಂದು ಹೇಳುತ್ತಾ ರವೀಂದ್ರರ ಬಾಯಿ ಹೇಗೆ ತೆರೆದುಕೊಂಡಿತ್ತೋ, ಹಾಗೆಯೇ ಇತ್ತು.

ಅಂಜಲಿ ಇಂತಹ ಪ್ರತಿಕ್ರಿಯೆಗಳನ್ನು ಮೊದಲೂ ಕಂಡಿದ್ದಳು. ಎದುರಿಗಿನ ವ್ಯಕ್ತಿಯ ಈ ರೀತಿಯ ಮನೋಸ್ಥಿತಿ ಕಂಡು ಅವಳಿಗೆ ಬಹಳ ಖುಷಿಯಾಗುತ್ತಿತ್ತು. ಅವಳಿಗೆ ಅದರಲ್ಲಿ ಒಂದು ಗೆಲುವಿನ ಅನುಭವವಾಗುತ್ತಿತ್ತು. ರವೀಂದ್ರ ಆ ಕಂಪನಿಯ ಬಾಸ್‌. ಆ ವ್ಯಕ್ತಿ ತನ್ನ ಬಗ್ಗೆ ಪ್ರಭಾವಿತನಾದರೆ ಬಾಯಿಗೆ ತಂತಾನೇ ಲಡ್ಡೂ ಬಂದು ಬಿದ್ದಂತೆ ಎಂಬ ಹೊಸ ಗಾದೆ ಮಾತು ಅವಳಿಗೆ ನೆನಪಿಗೆ ಬಂತು.

ರವೀಂದ್ರರಿಗೆ 40ರ ಆಸುಪಾಸು ವಯಸ್ಸು. ಅಷ್ಟಿಷ್ಟು ಬೊಜ್ಜು, ಅರೆಬೆರೆ ನೆರೆತ ಕೂದಲು ಹಾಗೂ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲಗಳು ಆಕರ್ಷಣೆಯ ವ್ಯಾಖ್ಯೆಯಿಂದ ಸ್ವಲ್ಪ ದೂರ ಉಳಿಯುವಂತೆ ಮಾಡಿದ್ದ.

ಬಾಸ್‌ ರವೀಂದ್ರ ವಿವಾಹಿತ, ಒಂದು ಮಗುವಿನ ತಂದೆ ಎಂಬುದನ್ನು ಅಂಜಲಿ ಮೊದಲೇ ತಿಳಿದುಕೊಂಡು ಬಂದಿದ್ದಳು. ಜೀವನದಲ್ಲಿ ಮೇಲೆ ಬರಲು ಒಂದಿಷ್ಟು ಸಂಗತಿಗಳನ್ನು ನಿರ್ಲಕ್ಷ್ಯ ಮಾಡಲೇಬೇಕು ಎನ್ನುವುದು ಅಂಜಲಿಯ ತರ್ಕವಾಗಿತ್ತು.

ತನ್ನ ಮುಖದಲ್ಲಿ ಮುಗುಳ್ನಗೆಯ ಬೆಳದಿಂಗಳು ಚಿಮ್ಮಿಸುತ್ತಾ ಅಂಜಲಿ ಬಾಸ್‌ ರವೀಂದ್ರ ಎದುರು ಕುಳಿತಳು. ಅವಳ ಮುಖದಲ್ಲಿ ಎಷ್ಟು ಮುಗ್ಧತೆ ಇತ್ತೋ ಅವಳ ಕಣ್ಣುಗಳಲ್ಲಿ ಎದುರಿಗಿನ ವ್ಯಕ್ತಿಯನ್ನು ಸೆಳೆಯುವ ಚಾಕಚಕ್ಯತೆ ಕೂಡ ಇತ್ತು.

ರವೀಂದ್ರ ಅವಳನ್ನು ಆಸೆಗಣ್ಣುಗಳಿಂದ ನೋಡುತ್ತಾ ಹೇಳಿದ, “ನೀವು ನಮ್ಮ ಏಜೆನ್ಸಿಗೆ ಬಂದಿರುವುದರಿಂದ ನಮ್ಮಲ್ಲಿ ಇನ್ನಷ್ಟು ಉತ್ತಮ ಕೆಲಸಗಳಾಗುತ್ತವೆ ಎಂಬ ನಂಬಿಕೆ ನನಗಿದೆ. ನನಗೆನ್ನಿಸುವ ಪ್ರಕಾರ ನಿಮಗೆ ಮೀಡಿಯಾ ಪ್ಲಾನಿಂಗ್‌ ಡಿಪಾರ್ಟ್‌ ಮೆಂಟ್ ಹೆಚ್ಚು ಸೂಕ್ತ ಅನಿಸುತ್ತೆ. ನಿಮ್ಮ ಎ ವನ್‌ ಗ್ರೇಡ್‌ ಹಾಗೂ ಪರ್ಸನಾಲಿಟಿಯಿಂದ ನೀವು ಬಹುಬೇಗ ಪ್ರಮೋಶನ್‌ಪಡೆದುಕೊಳ್ಳುವಿರಿ.”

“ನಾನೂ ಕೂಡ ಅದನ್ನೇ ಬಯಸುತ್ತೇನೆ. ನನ್ನ ಯಶಸ್ಸಿಗಾಗಿ ನೀವು ಹೇಗೆ ಹೇಳುತ್ತೀರೊ, ನಾನು ಹಾಗೆಯೇ ಮಾಡುತ್ತೇನೆ,” ದ್ವಂದ್ವಾರ್ಥ ಸಂಭಾಷಣೆಯಲ್ಲಿ ಅಂಜಲಿ ನಿಪುಣೆಯಾಗಿದ್ದಳು. ಅವಳ ಕಣ್ಣುಗಳಲ್ಲಿನ ಸನ್ನೆಯನ್ನು ಅರ್ಥ ಮಾಡಿಕೊಳ್ಳುತ್ತಾ ರವೀಂದ್ರ ಅವಳನ್ನು ಒಬ್ಬ ಸಾದಾಸೀದಾ ಹುಡುಗನ ಕೈಕೆಳಗೆ ನೇಮಕ ಮಾಡುವ ನಿರ್ಧಾರ ಕೈಗೊಂಡು ಆ ಬಳಿಕ ತನ್ನ ಕ್ಯಾಬಿನ್‌ ಗೆ ಅರುಣ್‌ ನನ್ನು ಕರೆಸಿಕೊಂಡು ಹೇಳಿದರು, “ಸಿಮೆಂಟ್‌ ಕಂಪನಿಯ ಹೊಸ ಪ್ರಾಜೆಕ್ಟ್ ಗಾಗಿ ಅಂಜಲಿ ನಿನಗೆ ಅಸಿಸ್ಟೆಂಟ್ ಮಾಡುತ್ತಾಳೆ. ಇಂದಿನಿಂದ ಅವಳು ನಿನ್ನ ಟೀಮ್ ನಲ್ಲಿ ಇರುತ್ತಾಳೆ.”

“ಈ ಏಜೆನ್ಸಿಗೆ ಬಂದು ಎಷ್ಟು ವರ್ಷವಾಯಿತು?” ಅಂಜಲಿ ಅರುಣ್‌ ಗೆ ಮೊದಲ ಪ್ರಶ್ನೆ ಕೇಳಿದಳು.

ಅರುಣ್‌ ಸೌಮ್ಯ ಸ್ವಭಾವದ ಸರಳ ಹುಡುಗ. ಅವನು, “1 ವರ್ಷವಾಯಿತು. ಕೆಲಸ ಕಲಿಯಲು ಬಹಳ ಒಳ್ಳೆಯ ಸ್ಥಳ. ಬಹಳಷ್ಟು ಒಳ್ಳೆಯ ಪ್ರಾಜೆಕ್ಟ್ ಗಳು ಬರ್ತಾ ಇರುತ್ತವೆ. ನೀವು ಈ ಮುಂಚೆ ಎಲ್ಲಿ ಕೆಲಸ ಮಾಡಿದ್ರಿ?” ಉತ್ತರಿಸಿದ.

ಅರುಣ್‌ ನ ಪ್ರಶ್ನೆಗೆ ಅಂಜಲಿ ಉತ್ತರ ಕೊಡದೇ ನೇರವಾಗಿ ಕೆಲಸದ ಬಗ್ಗೆ ಕೇಳಿದಳು, “ನಾನು ಏನು ಮಾಡಬೇಕಾಗಿ ಬರಬಹುದು? ಅಂದಹಾಗೆ ನಾನು ಕ್ಲೈಂಟ್‌ ಸರ್ವೀಸಿಂಗ್‌ ನಲ್ಲಿ ಎತ್ತಿದ ಕೈ. ನನಗೆ ಆ ಸಿಮೆಂಟ್‌ ಕಂಪನಿ ಹಾಗೂ ನಮ್ಮ ಕ್ರಿಯೇಟಿವ್ ಟೀಮ್ ನಡುವೆ ಕೋ ಆರ್ಡಿನೇಷನ್‌ ನ ಕೆಲಸ ನಿರ್ವಹಣೆ ಮಾಡಲು ಕೊಡಿ.”

ಮರುದಿನ ಅಂಜಲಿ ಎಲ್ಲಕ್ಕೂ ಮುಂಚೆ ರವೀಂದ್ರರ ಕ್ಯಾಬಿನ್‌ ಗೆ ಭೇಟಿ ಕೊಡುವುದರ ಮೂಲಕ ತನ್ನ ಕೆಲಸ ಆರಂಭಿಸಿದಳು.

“ಹಾಯ್‌ ರವೀಂದ್ರ ಗುಡ್‌ ಮಾರ್ನಿಂಗ್‌,” ಎಂದು ಹೇಳುತ್ತಾ ಅವಳು ಮೊದಲ ದಿನ ಕಲಿತ ಎಲ್ಲ ಕೆಲಸಗಳ ವಿವರ ಒಪ್ಪಿಸುತ್ತಾ, ರವೀಂದ್ರರವರಿಂದ ಕೆಲವು ಟಿಪ್ಸ್ ಪಡೆದುಕೊಳ್ಳುವ ಅಭಿನಯ ಮಾಡಿದಳು. ಆದರೆ ಬದಲಿಗೆ ರವೀಂದ್ರರಿಗೆ ತನ್ನ ಸೌಂದರ್ಯ ಆಸ್ವಾದನೆ ಮಾಡುವ ಸಂಪೂರ್ಣ ಅವಕಾಶ ಕೊಟ್ಟಳು. ರವೀಂದ್ರರ ಚಂಚಲ ಕಣ್ಣುಗಳು ಅವಳ ದೇಹವನ್ನು ಮನಸೋಕ್ತವಾಗಿ ಆನಂದಿಸುತ್ತಿದ್ದ. ಅವಳು ನಿಶ್ಚಿಂತಳಾಗಿ ಮುಗುಳ್ನಗೆ ಬೀರುತ್ತಾ ಅವನ ಆಸಕ್ತಿಯನ್ನು ಇನ್ನಷ್ಟು ಕೆರಳಿಸುವಂತೆ ಮಾಡಿದಳು.

ಅಂಜಲಿ ಬಹುಬೇಗ ರವೀಂದ್ರನ ನಿಕಟ ವಲಯದಲ್ಲಿ ತನ್ನದೇ ಆದ ಜಾಗ ಗುರುತಿಸಿಕೊಂಡಳು. ರವೀಂದ್ರರ ಕ್ಯಾಬಿನ್‌ ಗೆ ಭೇಟಿ ಕೊಡುವುದರ ಮೂಲಕ ಅವಳು ತನ್ನ ದಿನವನ್ನು ಆರಂಭಿಸುವುದು ದೈನಂದಿನ ರೂಢಿಯಾಯಿತು. ರವೀಂದ್ರ ಕೂಡ ಅವಳ ಯೌವನದ ಅಮಲಿನಲ್ಲಿ ಸದಾ ತೇಲುತ್ತಿದ್ದ.

ಅಂದು ಬೆಳಗ್ಗೆ ಕಾಫಿ ಕೊಡುವ ನೆಪದಲ್ಲಿ ರವೀಂದ್ರ ಅವಳ ಕೈಯನ್ನು ನಿಧಾನವಾಗಿ ಸ್ಪರ್ಶಿಸಿದ. ಅಂಜಲಿ ಅದಕ್ಕೆ ಪ್ರತಿಯಾಗಿ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು. ರವೀಂದ್ರನ ಧೈರ್ಯ ಕುಸಿಯಬೇಕೆಂದೇನೂ ಅವಳು ಬಯಸಿರಲಿಲ್ಲ. ಬಳಿಕ ಅವಳು ತನ್ನ ಕೆಲಸ ತೋರಿಸುವ ನೆಪದಲ್ಲಿ ರವೀಂದ್ರನ ಸಮೀಪದಲ್ಲಿ ಹೋಗಿ ಹೇಗೆ ನಿಂತಳೆಂದರೆ, ಅವಳ ಕೂದಲು ರವೀಂದ್ರನ ಭುಜದ ಮೇಲೆ ಉಯ್ಯಾಲೆಯಾಡತೊಡಗಿದವು. ಸನ್ನೆಯ ಭಾಷೆ ಎರಡೂ ಕಡೆಯಿಂದ ಸಂವಹನಾಗುತ್ತಿತ್ತು.

ಅಷ್ಟರಲ್ಲಿ ಅರುಣ್‌ ಬಾಸ್‌  ಕ್ಯಾಬಿನ್‌ ಗೆ ಬರುತ್ತಿದ್ದಂತೆ ಇಬ್ಬರೂ ಒಮ್ಮೆಲೆ ಜಾಗೃತರಾದರು. ಕುದ್ದು ಉಕ್ಕೇರುತ್ತಿದ್ದ ಹಾಲಿಗೆ ಒಮ್ಮೆಲೇ ನೀರಿನ ಹನಿ ಸೋಂಕಿದಂತಾಯ್ತು. ಆದರೆ ಅರುಣ್‌ ನ ಶಾಂತ ಕಣ್ಣುಗಳು ತನ್ನ ಚಾತುರ್ಯ ಮೆರೆಯುತ್ತಾ ಅಲ್ಲಿನ ವಾತಾವರಣವನ್ನು ಸ್ಪಷ್ಟವಾಗಿ ಗ್ರಹಿಸಿದವು.

ಈ ಪ್ರಕರಣದ ಬಳಿಕ ಅಂಜಲಿಯ ಬಗ್ಗೆ ಅರುಣ್‌ ನ ಧೋರಣೆ ಬದಲಾಗಿಬಿಟ್ಟಿತು. ಈವರೆಗೆ ಅಂಜಲಿಯನ್ನು ಕಲಿಯುವ ಹುಡುಗಿ ಎಂದು ಭಾವಿಸಿ ಅವಳಿಗೆ ತನ್ನಿಂದ ಸಾಧ್ಯವಿದ್ದದ್ದನ್ನೆಲ್ಲ ಕಲಿಸುತ್ತಿದ್ದ. ಆದರೆ ಇಂದಿನ ದೃಶ್ಯದ ಬಳಿಕ ಅವನಿಗೆ ಈ ಹುಡುಗಿಯ ಮುಗ್ಧತೆಯ ಮುಖವಾಡದ ಹಿಂದೆ ಅವಕಾಶ ಗಿಟ್ಟಿಸಿಕೊಳ್ಳುವ ಹುಡುಗಿ ಇದ್ದಾಳೆಂದು ತಿಳಿಯಿತು. ಕಾರ್ಪೋರೇಟ್‌ ವರ್ಲ್ಡ್ ಒಂದು ಮಾಸ್ಯುರೇಡ್‌ ಪಾರ್ಟಿಯ ಹಾಗೆ ಇರಬಹುದು. ಅಲ್ಲಿ ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೇರೆಯವರೆದುರು ತಮ್ಮದೇ ಆದ ಹೊಸ ರೂಪ ಪ್ರದರ್ಶಿಸಲು ಆತುರರಾಗಿತ್ತಾರೆ.

ಇವತ್ತು ಅರುಣ್‌ ಅಂಜಲಿಗೆ ಊಟದ ಸಮಯದಲ್ಲಿ ಕಂಪನಿ ಕೊಡಬಾರದೆಂದು ನಿರ್ಧರಿಸಿ, “ಅಂಜಲಿ ನನಗೆ ಸ್ವಲ್ಪ ಕೆಲಸವಿದೆ. ನೀನು ಊಟ ಮುಗಿಸಿಕೊ,” ಎಂದು ಹೇಳಿದ. ಅವನಿಗೆ ಅವಳ ನಿಕಟತೆ ಬೇಕೆನಿಸುತ್ತಿರಲಿಲ್ಲ. ಅವನ ಧೋರಣೆ ಕಂಡು ಇತರರು ಕೂಡ ಅಂಜಲಿಯನ್ನು ನಿರ್ಲಕ್ಷಿಸಲು ಆರಂಭಿಸಿದರು. ಇದರಿಂದಾಗಿ ಅಂಜಲಿಗೆ ಕೆಲಸ ಮಾಡುವುದು ಹಾಗೂ ಹೊಸದೇನನ್ನಾದರೂ ತಿಳಿದುಕೊಳ್ಳುವುದು ಕಷ್ಟವಾಗತೊಡಗಿತು.

“ಹೊಸದಾಗಿ ಪಿಚ್‌ ಬಂದಿದೆಯಲ್ಲ, ಅದರಲ್ಲಿ ನಾನು ನಿಮ್ಮ ಜೊತೆ ಸೇರಬಹುದಾ? ನನಗೆ ಪಿಚ್‌ ಪ್ರೆಸೆಂಟೇಶನ್‌ ಮಾಡಲು ಗೊತ್ತಾಗುತ್ತದೆ,” ಅಂಜಲಿ ತನ್ನ ಪರಿಪೂರ್ಣ ಕಾರ್ಯ ಸಾಧ್ಯತೆಯ ಬಗ್ಗೆ ಒತ್ತು ಕೊಟ್ಟು ಅರುಣ್‌ ಗೆ ಹೇಳಿದಳು. ಅವಳು ತನ್ನ ಕೆಲಸದಲ್ಲಿ ನಿಪುಣಳಾಗಿಯೂ ಕೂಡ ಅರುಣ್‌ ನ ಅಹಂಗೆ ತಗಲುವಂತೆ ಹೇಳಿದಳು.

“ಆ ಕೆಲಸ ಎಲ್ಲ ಮುಗಿದು ಹೋಗಿದೆ. ನಿಮ್ಮನ್ನು ಮುಂದಿನ ಪಿಚ್‌ ಗೆ ತೆಗೆದುಕೊಂಡು ಹೋಗ್ತೀನಿ. ಇವತ್ತು ನೀವು ಬೇರೆ ಪ್ರಸೆಂಟೇಶನ್‌ ಮೇಲೆ ಕೆಲಸ ಮಾಡಿ,” ಎಂದು ಹೇಳುವುದರ ಮೂಲಕ ಅರುಣ್‌ ಅವಳು ಕೇವಲ ಆಫೀಸಿನಲ್ಲಿಯೇ ಮಗ್ನಳಾಗಿರಬೇಕೆಂದು ಪ್ರಯತ್ನ ಮಾಡತೊಡಗಿದ.

ತನ್ನ ಕೈಯಿಂದ 2 ಪಿಚ್‌ ಪ್ರೆಸೆಂಟೇಶನ್‌ ಗಳು ತಪ್ಪಿಹೋದದ್ದರಿಂದ ಅಂಜಲಿಗೆ ಅರುಣ್‌ ನ ಯೋಚನೆ ಅರ್ಥವಾಗತೊಡಗಿತು. ಅವನು ನನಗೆ ಇಂಥದ್ದರಲ್ಲಿ ಅವಕಾಶ ಕೊಡದೇ ಹೋದರೆ ನಾನು ಅನುಭವ ಪಡೆಯುವುದು ಹೇಗೆ? ಎಂದು ಯೋಚಿಸುತ್ತಾ ಅವಳು ನೇರವಾಗಿ ರವೀಂದ್ರರ ಕ್ಯಾಬಿನ್‌ ಗೆ ಹೋದಳು.

“ರವೀಂದ್ರ, ಇಂದು ನಾನು ನಿಮ್ಮೊಂದಿಗೆ ಲಂಚ್‌ ಗೆ ಬರಬಹುದಾ? ಇವತ್ತು ನನ್ನ ಬಳಿ ಇಂಡೆಕ್ಷನ್‌ ಫೀಡ್‌ ಬ್ಯಾಕ್‌ ಬಾಕಿ ಇದೆ,” ಎಂದು ತನ್ನ ಪ್ರಸ್ತಾಪವನ್ನು ಹೇಗೆ ಪ್ರಸ್ತುತಪಡಿಸಿದಳೆಂದರೆ ಅದು ಅತ್ಯಂತ ಅವಶ್ಯಕ ಎಂದು ಪರಿಗಣಿಸಲ್ಪಡಲಿ ಎಂದು.

ಲಂಚ್‌ ಟೈಮ್ ನಲ್ಲಿ ಅಂಜಲಿ ತನ್ನ ಕೆಲಸ ವಿವರ ಹೇಳಿಕೊಂಡಳು. ಅದರ ಜೊತೆ ಜೊತೆಗೆ ಮೆಲ್ಲನೆಯ ಧ್ವನಿಯಲ್ಲಿ ಅವರಿಗೆ ಒಂದು ಸ್ವತಂತ್ರ ಕ್ಲೈಂಟ್‌ ಕೊಡಲು ಪ್ರಸ್ತಾಪ ಇಟ್ಟುಬಿಟ್ಟಳು.

“ಟೀಮ್ ನಲ್ಲಿ ಎಲ್ಲರೂ ಎಷ್ಟು ಬಿಜಿಯಾಗಿರುತ್ತಾರೆಂದರೆ ಯಾರೊಬ್ಬರಿಂದ ಕೆಲಸ ಕಲಿಸುವುದು ನನಗೆ ಅವರ ಕೆಲಸಕ್ಕೆ ಅಡ್ಡಿ ಮಾಡಿದಂತೆ ಅನಿಸುತ್ತದೆ. ನನ್ನ ಶಿಕ್ಷಣ, ನನ್ನ ಪರಿಶ್ರಮ ಹಾಗೂ ಅನುಭವದ ಆಧಾರದ ಮೇಲೆ ನಾನು ಒಂದು ಕ್ಲೈಂಟ್‌ ನ್ನು ಹ್ಯಾಂಡ್‌ ಮಾಡಬಲ್ಲೆ ಎಂಬ ವಿಶ್ವಾಸ ನನಗಿದೆ. ಒಂದು ವೇಳೆ ನೀವು ಅನುಮತಿ ಕೊಟ್ಟರೆ?”

ಮಾತುಕಥೆಯ ಸಂದರ್ಭದಲ್ಲಿ ಅಂಜಲಿ ತನ್ನ ಕಣ್ಣುಗಳನ್ನು ಪಿಳಿಪಿಳಿ ಗುಟ್ಟುವಂತೆ ಮಾಡುವುದು ಅವಳ ಭಾವನೆಗಳ ಅರ್ಥಪೂರ್ಣ ಚಾಲನೆ, ಅವಳ ತುಟಿಗಳಲ್ಲಿ ಕಾಣುತ್ತಿದ್ದ ನಗು ಎಷ್ಟೊಂದು ಮನಮೋಹಕವಾಗಿತ್ತೆಂದರೆ ರವೀಂದ್ರನ ಪುರುಷ ಮನಸ್ಸು ಅವಳಿಗೆ ಅವಕಾಶ ಕೊಟ್ಟುಬಿಡಬೇಕೆಂದು ನಿರ್ಧರಿಸಿತು.

“ಸರಿ ಸರಿ, ನಿನಗೆ ಯಾವ ಕ್ಲೈಂಟ್‌ ಕೊಡಬೇಕೆಂದು ಯೋಚನೆ ಮಾಡ್ತೀನಿ.”

ಆ ದಿನ  ಸಂಜೆ ಅಂಜಲಿ ಆರ್ಟ್‌ ಗ್ಯಾಲರಿಗೆ ಹೋಗಲು ನಿರ್ಧರಿಸಿದಳು. ಅವಳು ಉದ್ಯೋಗಕ್ಕೆ ತೊಡಗಿದಾಗಿನಿಂದ ಎಲ್ಲರೂ ಸುತ್ತಾಡಲು ಹೋಗಿರಲಿಲ್ಲ. ಆ ಆರ್ಟ್‌ ಗ್ಯಾಲರಿ ನಗರದ ಹೆಸರಾಂತ ತಾಣ. ಹೀಗಾಗಿ ಅವಳು ಅತ್ತ ಕಡೆ ಹೆಜ್ಜೆ ಹಾಕಿದಳು. ಅಲ್ಲಿನ ವೈವಿಧ್ಯಮಯ ಚಿತ್ರಗಳನ್ನು ಗಮನಿಸುತ್ತ ಹೊರಟಾಗ, ಮುಂದಿನ ಪೇಂಟಿಂಗ್‌ ಮೇಲೆ ಹೆಚ್ಚು ಟ್ರೆಂಡ್‌ ಆಗಿದ್ದ ಲಾಂಜರಿ ಬ್ರ್ಯಾಂಡ್‌`ಆಸಮ್’ನ ಮೂಲಕ ಪ್ರದೀಪ್‌ ಅವರನ್ನು ಕಂಡು ಒಂದಿಷ್ಟು ಯೋಚನೆ ಮಾಡತೊಡಗಿದಳು. ಏಜೆನ್ಸಿಯಲ್ಲಿ ಈ ಪ್ರದೀಪ್‌ ದತ್ತ ಬಗ್ಗೆ ಅವಳು ಕೇಳಿದ್ದಳು. ಮೊದಲು ಇವರು ಅಕೌಂಟ್‌ ಅನರ್ಘ್ಯ ಬಳಿಯೇ ಇತ್ತು. ಆದರೆ ಕಳೆದ ವರ್ಷದಿಂದ ಅವರು ಈ ಕಾಂಟ್ರ್ಯಾಕ್ಟ್ ರದ್ದು ಮಾಡಿದ್ದರು. ಆ ಕಾರಣದಿಂದ ಏಜೆನ್ಸಿಗೆ ಸಾಕಷ್ಟು ಹಾನಿ ಆಗಿತ್ತು. ತನ್ನ ಸಾಮರ್ಥ್ಯ ಏನು ಎಂದು ತೋರಿಸಿಕೊಳ್ಳಲು ಇದೊಂದು ಅದ್ಭುತ ಅವಕಾಶ ಎಂದು ಅವಳಿಗೆ ಅನಿಸಿತು. ಅವಳು ತಕ್ಷಣವೇ ಪ್ರದೀಪ್‌ ದತ್ತ ಬಳಿ ಹೋದಳು.

“ನೀವು ಪ್ರದೀಪ್‌ ದತ್ತ ಅಲ್ಲವೇ? ಆಸಮ್ ಬ್ರ್ಯಾಂಡ್‌ ನ ಮಾಲೀಕ,” ಅವಳು ತನ್ನ ಮುಖದಲ್ಲಿ ಉತ್ಸಾಹದ ಅನೇಕ ದೀಪಗಳನ್ನು ಬೆಳಗಿಸುತ್ತ ತನ್ನ ಮಾತನ್ನು ಆರಂಭಿಸಿದಳು.

“ಹೌದು. ನೀವು ನಮ್ಮ ಕ್ಲೈಂಟ್‌ ಆಗಿದ್ದೀರೇನು?” ಪ್ರದೀಪ್‌ ತಮ್ಮ ಬ್ರ್ಯಾಂಡ್‌ ನ್ನು ಪ್ರಮೋಟ್‌ ಮಾಡುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ.

“ನಾನು ನಿಮ್ಮ ಕ್ಲೈಂಟ್‌ ಹಾಗೂ ನೀವು ನಮ್ಮ  ಕ್ಲೈಂಟ್‌.”

“ನನಗೆ ನಿಮ್ಮ ಮಾತಿನ ಅರ್ಥ ಆಗಲಿಲ್ಲ.”

“ಅಂದಹಾಗೆ, ನನಗೂ ನಿಮ್ಮ ಮಾತಿನ ಅರ್ಥ ಆಗಲಿಲ್ಲ.”

“ಅಂದಹಾಗೆ, ನಾನು ನಿಮ್ಮ ಬ್ರ್ಯಾಂಡ್‌ ಲಾಂಜರಿ ಬಳಸುತ್ತೇನೆ ಮತ್ತು ಒಬ್ಬ ಹ್ಯಾಪಿ ಕ್ಲೈಂಟ್‌. ನನ್ನ ಹೆಸರು ಅಂಜಲಿ. ನಾನು ಅನರ್ಘ್ಯ ಅಡ್ವರ್‌ ಟೈಸಿಂಗ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತೇನೆ. ಆದರೆ ನೀವು ನಮ್ಮ ಏಜೆನ್ಸಿಯ ಹ್ಯಾಪಿ ಕ್ಲೈಂಟ್‌ ಆಗಿಲ್ಲ. ನಾನು ಹೇಳಿದ್ದು ಸರಿ ಅಲ್ವಾ?” ಅವಳು ತನ್ನ ಕೈಯನ್ನು ಪ್ರದೀಪ್‌ ಮುಂದೆ ಚಾಚುತ್ತಾ ಹೇಳಿದಳು.

“ಅಂದರೆ ನೀವು ಇಲ್ಲಿಗೆ ಅನರ್ಘ್ಯದಿಂದ ಬಂದಿದ್ದೀರಾ?” ಪ್ರದೀಪ್‌ ಅವಳ ಕೈ ಕುಲುಕುತ್ತಾ ಕೇಳಿದ. ಆದರೆ ಅವರ ಮುಖದಲ್ಲಿ ಚಿಂತೆಯ ಗೆರೆಗಳು ಕಾಣುತ್ತಿದ್ದವು, “ನಾನು ಕೆಲಸದ ವಿಷಯವನ್ನು ಆಫೀಸಿನಲ್ಲಷ್ಟೇ ಚರ್ಚಿಸುತ್ತೇನೆ,” ಎಂದು ಹೇಳುತ್ತ ಅವರು ಮುಂದೆ ಸಾಗಿದರು.

“ಪ್ರದೀಪ್‌, ನಾನು ನಿಮಗೆ ಕೊಡಲಿರುವ ಫೀಡ್‌ ಬ್ಯಾಕ್‌ ನ್ನು ನೀವು ಕೇಳಿಸಿಕೊಳ್ಳಲೇಬೇಕು. ಅದು ಕೂಡ ಫ್ರೀಯಾಗಿ. ನಾನು ಇಲ್ಲಿ ಆ್ಯಡ್‌ ಏಜೆನ್ಸಿಯ ಕಾರ್ಯಕರ್ತೆಯಾಗಿ ಬಂದಿಲ್ಲ. ನಾನು ನಿಮ್ಮ ಕ್ಲೈಂಟ್‌ ಆಗಿ ಬಂದಿದ್ದೇನೆ. ನಾನು ಇಲ್ಲಿ ನಮ್ಮನ್ನು ಭೇಟಿ ಆಗ್ತೀನಿ ಎನ್ನುವ ಕಲ್ಪನೆ ಕೂಡ ನನಗಿರಲಿಲ್ಲ,” ಅಂಜಲಿಯ ಮುಖದಲ್ಲಿ ಮುಗ್ಧತೆ ಹಾಗೂ ಪ್ರಾಮಾಣಿಕತೆಯ ಭಾವನೆ ಎದ್ದು ಕಾಣುತ್ತಿತ್ತು. ಅವಳು ತನ್ನ ಅಭಿವ್ಯಕ್ತಿಯನ್ನು ಸಂದರ್ಭಕ್ಕನುಸಾರ ಬದಲಿಸಿಕೊಳ್ಳುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು.

ಅವಳು ತನ್ನ ಮಾತನ್ನು ಮುಂದುವರಿಸುತ್ತಾ, “ನೀವು ನಿಮ್ಮ ಜಾಹೀರಾತನ್ನು ಆ್ಯಡ್‌ ಏಜೆನ್ಸಿಯ ಮುಖಾಂತರ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿ ಇನ್‌ ಫ್ಲೂಯೆನ್ಸ್ ಮುಖಾಂತರ ಮಾಡುತ್ತಿದ್ದೀರಿ ಎನ್ನುವುದು ನನಗೆ ಗೊತ್ತು. ಆದರೆ ಒಬ್ಬ ಇನ್ ಫ್ಲೂಯೆನ್ಸರ್‌ ನ ರೀಚ್‌ ಅವನ ಫಾಲೋಯರ್ಸ್‌ ತನಕ ಮಾತ್ರ ಸೀಮಿತವಾಗಿರುತ್ತದೆ. ನನ್ನ ಒಂದು ಸಲಹೆಯೇನೆಂದರೆ, ನಿಮ್ಮ ಪ್ರಾಡಕ್ಟ್ ನ್ನು ಬಳಸುವವರು ಸಾಮಾನ್ಯ ಗೃಹಿಣಿಯರು ಅಥವಾ ಉದ್ಯೋಗಸ್ಥೆಯರೇ ಹೆಚ್ಚು. ಅವರ ಫಿಗರ್‌ ಮಾಡೆಲ್ ‌ಗೆ ಹೋಲಿಸಿದರೆ ಅತ್ಯಂತ ಭಿನ್ನವಾಗಿರುತ್ತದೆ.

“ಮಾಡೆಲ್ ‌ನ ಫಿಗರ್‌ ಒಂದು ಆದರ್ಶ ಫಿಗರ್‌ ಆಗಿರುತ್ತದೆ. ಆದರೆ ಸಾಮಾನ್ಯ ಮಹಿಳೆಯರ ಅವಶ್ಯಕತೆಯೇ ಭಿನ್ನವಾಗಿರುತ್ತದೆ. ನೀವು ನಿಮ್ಮ ಜಾಹೀರಾತಿನಲ್ಲಿ ಮಾಡ್‌ ಬದಲಿಗೆ ಸಾಮಾನ್ಯ ಮಹಿಳೆಯೊಬ್ಬಳಿಂದ ನಿಮಗೆ ಹೇಳಬೇಕಾದ್ದನ್ನು ಹೇಳಿಸಬಹುದಲ್ವಾ? ಹಾಗೊಂದು ವೇಳೆ ಇದು ಸಾಧ್ಯವಾದರೆ ಇದು ಸಾಮಾನ್ಯರ ಮೇಲೆ ಪ್ರಭಾವ ಬೀರುತ್ತದೆ,” ಎಂದು ಹೇಳಿ ಅಂಜಲಿ ಪ್ರದೀಪ್‌ ದತ್ತರವರ ಪ್ರತಿಕ್ರಿಯೆಗಾಗಿ ನಿರೀಕ್ಷಿಸತೊಡಗಿದಳು.

ಕೆಲವು ಕ್ಷಣ ಮೌನವಾಗಿದ್ದು, ಅಂಜಲಿಯ ಸಲಹೆಯನ್ನು ಸ್ವೀಕರಿಸಿ, ತನ್ನ ಕೈಗಡಿಯಾರದ ಕಡೆ ನೋಡುತ್ತಾ, “ನಿಮ್ಮನ್ನು ಭೇಟಿಯಾಗಿ ಬಹಳ ಖುಷಿಯಾಯ್ತು. ಅಂಜಲಿ, ಆಲ್ ದಿ ಬೆಸ್ಟ್,” ಎಂದು ಹೇಳುತ್ತಾ ಪ್ರದೀಪ್‌ ಅಲ್ಲಿಂದ ಹೊರಟು ಹೋದರು.

ಅವರ ಮುಖದಲ್ಲಿ ಯಾವುದೇ ಭಾವನೆಗಳು ಕಂಡುಬರದ್ದರಿಂದ ದ್ವಂದ್ವಕ್ಕೊಳಗಾದ ಅಂಜಲಿ ಸ್ವಲ್ಪ ಹೊತ್ತು ಅಲ್ಲಿಯೇ ನಿಂತಳು.

ಮರುದಿನ ಅಂಜಲಿ ತನ್ನ ಕಂಪ್ಯೂಟರ್‌ ನಲ್ಲಿ ಏನೋ ಕೆಲಸ ಮಾಡುವುದರಲ್ಲಿ ಮಗ್ನಳಾಗಿದ್ದಳು. ಆಗ ರವೀಂದ್ರರ ಫೋನ್‌ ಬಂತು, “ಅಂಜಲಿ, ನನ್ನ ಕ್ಯಾಬಿನ್‌ ಗೆ ಬರ್ತೀರಾ?”

ಅಂಜಲಿ ತಕ್ಷಣವೇ ರವೀಂದ್ರರ ಕ್ಯಾಬಿನ್‌ ಗೆ ಹೋದಳು. ಅದಾಗಲೇ ಪ್ರದೀಪ್‌ ದತ್ತ ಅಲ್ಲಿ ಬಂದು ಕುಳಿತಿರುವುದನ್ನು ನೋಡಿ ಅವಳ ಆಶ್ಚರ್ಯಕ್ಕೆ ಮೇರೆಯೇ ಇರಲಿಲ್ಲ. ಅವಳು ಖುಷಿಯಿಂದ ತಲೆ ಅಲ್ಲಾಡಿಸುತ್ತ `ಹಲೋ’ ಎಂದು ಹೇಳುತ್ತಾ ಕುರ್ಚಿಯ ಮೇಲೆ ಆಸೀನಳಾದಳು.

“ಪ್ರದೀಪ್‌ ದತ್ತ ಮತ್ತೊಮ್ಮೆ ನಮ್ಮ ಕಂಪನಿ ಜೊತೆ ಮುಂದುವರಿಯಲು ಆಸಕ್ತಿ ತೋರಿದ್ದಾರೆ. ಅವರ ಅಕೌಂಟ್‌ ನ್ನು ನೀನೇ ಹ್ಯಾಂಡಲ್ ಮಾಡು,” ಎಂದು ಹೇಳುತ್ತಾ  ರವೀಂದ್ರ ನಕ್ಕರು. ಅವರ ಮುಖದಲ್ಲಿ ಕಾಂಟ್ರಾಕ್ಟ್ ವಾಪಸ್‌ ದೊರೆತ ಬಗ್ಗೆ ಗೆಲುವಿನ ನಗುವಿತ್ತು. ಅಂಜಲಿಯ ಮುಖದಲ್ಲಿ ಸಾರ್ಥಕತೆಯ ಭಾವ. ಅವಳು ಆ ರೀತಿಯಲ್ಲಿ ತನ್ನ ಸ್ವತಂತ್ರ ಅಕೌಂಟ್‌ ನ್ನು ವಹಿಸಿಕೊಂಡಳು.

“ಈ ಕಾಂಟ್ರ್ಯಾಕ್ಟ್ ನ ಖುಷಿಗೆ ನಾನು ನಿಮ್ಮನ್ನು ಒಂದು ಡಿನ್ನರ್‌ ಗೆ ಆಹ್ವಾನ ಮಾಡಬಹುದೇ?” ಎಂದು ಅಂಜಲಿ ಕೇಳಿದಳು.

ಅವಳು ಹೇಳಿದ್ದನ್ನು ಕೇಳಿ ರವೀಂದ್ರ ಚಕಿತರಾದರು. ನಂತರ, “ಇವತ್ತು ಬೇಡ, ನಾಳೆ ಹಾಗೋಣ. ಇವತ್ತು ನನಗೆ ನನ್ನ ಹೆಂಡತಿಯ ಜೊತೆ ಔಟಿಂಗ್‌ ಇದೆ,” ಎಂದು ಉದ್ದೇಶಪೂರ್ವಕವಾಗಿ ಹೆಂಡತಿಯ ಬಗ್ಗೆ ಉಲ್ಲೇಖಿಸಿದರು. ಏಕೆಂದರೆ ಅಂಜಲಿ ಭವಿಷ್ಯದಲ್ಲಿ ತನ್ನ ಬಗ್ಗೆ ಏನೇನೊ ಕಲ್ಪನೆ ಮಾಡಿಕೊಳ್ಳುವಂತಾಗಬಾರದು ಮತ್ತು ಫ್ಲರ್ಟ್‌ ಯಾರಿಗೆ ತಾನೇ ಇಷ್ಟವಾಗುವುದಿಲ್ಲ….. ಅದು ಕೂಡ ಸೇಫ್‌ ಝೋನ್‌ ನಲ್ಲಿ ಆಗ್ತಿರಬೇಕು.

ಆಸಮ್ ನ ಆಫೀಸಿಗೆ ಅಂಜಲಿ ಮೀಡಿಯಾ ಪ್ಲಾನಿಂಗ್‌ ಡಿಪಾರ್ಟ್‌ ಮೆಂಟ್‌ ವತಿಯಿಂದ ಕ್ರಿಯೇಟಿವ್ ‌ಡಿಸೈನ್‌ ತೋರಿಸಲು ತಲುಪಿದಾಗ ಅಲ್ಲಿ ಅವಳಿಗೆ ಮನೋಜ್‌ ಭೇಟಿಯಾದ. ಆಸಮ್ ನ ವತಿಯಿಂದ ಅಂಜಲಿಗೆ ಕೆಲಸ ಕಲಿಸಲು ಮನೋಜ್‌ ನನ್ನು ನೇಮಿಸಲಾಗಿತ್ತು. ಇಂದು ಒಂದು ಲಾಂಜರಿ ಬ್ರ್ಯಾಂಡ್‌ ನ ಜೊತೆ ಮೀಟಿಂಗ್‌ ಗೆ ಅಂಜಲಿ ಅತ್ಯಂತ ಸೆಕ್ಸಿ ಡ್ರೆಸ್‌ ಧರಿಸಿ ಬಂದಿದ್ದಳು. ಮನೋಜ್‌ ಅವಳದೇ ವಯಸ್ಸಿನ ಅವಿವಾಹಿತ ಯುವಕ. ಅಂಜಲಿಯ ಬಗ್ಗೆ ಆಕರ್ಷಿತನಾದ.

“ಹಾಯ್‌ ಅಂಜಲಿ,” ಎಂದು ಹೇಳುತ್ತಾ ಮನೋಜ್‌ ಅವಳನ್ನು ಬಿಟ್ಟಗಣ್ಣಿನಿಂದ ಹಾಗೆಯೇ ನೋಡುತ್ತಿದ್ದ.

“ನಾನು ನಿಮ್ಮ ಮಾರ್ಕೆಟಿಂಗ್‌ ಕ್ಲೈಂಟ್‌,” ತನ್ನ ತುಟಿಗಳ ವಿಶಿಷ್ಟ ಚಲನೆಯ ಮುಖಾಂತರ ಅವಳು ಕೂಡ ಉದ್ದೇಶಪೂರ್ವಕವಾಗಿ ತನ್ನ ಕೈಯನ್ನು ಅವನ ಕಡೆ ಕೈ ಚಾಚುತ್ತಾ, “ನಾನು ನಿಮಗೆ ಸರ್ವೀಸ್‌ ಕೊಡ್ತೀನಿ. ಆದರೆ ಅಂತಿಂಥ ಸರ್ವೀಸ್‌ ಮಾತ್ರ ಕೇಳಬಾರದು,” ಎಂದು ಹೇಳುತ್ತಾ ಅವನ ಭುಜದ ಮೇಲೆ ಕೈ ಇರಿಸುತ್ತಾ ನಕ್ಕಳು.

ಅವಳ ತುಂಟತನದ ನಯನಗಳು ಅವನಲ್ಲಿ ವಿಚಿತ್ರ ಸಂವೇದನೆಯನ್ನುಂಟು ಮಾಡಿದ. ಈವರೆಗೂ ಅವನು ಇಷ್ಟೊಂದು ಹಾಟ್ ಹುಡುಗಿಯ ಜೊತೆ ಕೆಲಸ ಮಾಡಿರಲಿಲ್ಲ. ಬಹುಬೇಗ ಇಬ್ಬರಲ್ಲೂ ಸ್ನೇಹವಾಯಿತು. ಮುಂದಿನ ವಾರ ನಡೆಯಲಿದ್ದ ತನ್ನ ಆಫೀಸಿನ ಪಾರ್ಟಿಗೆ ಅಂಜಲಿಗೆ ಆಹ್ವಾನ ಕೊಟ್ಟುಬಿಟ್ಟ.

“ಇಷ್ಟು ಬೇಗ ಪಾರ್ಟಿಗೆ ಆಹ್ವಾನ? ನಾವು ಇಂದಷ್ಟೇ ಭೇಟಿಯಾಗಿದ್ದೇವೆ,” ಅಂಜಲಿ ಮನೋಜ್‌ ನ ವೇಗವನ್ನು ತಗ್ಗಿಸುವ ನಾಟಕ ಆಡುತ್ತಾ ಹೇಳಿದಳು.

“ನಾನು ಸಮಯ ಹಾಳು ಮಾಡಲು ಇಷ್ಟಪಡುವುದಿಲ್ಲ,” ಅವನು ಭಾರಿ ವೇಗದಲ್ಲಿ ಓಡಲು ಇಚ್ಛಿಸುತ್ತಿದ್ದ.

“ಹಗಲುಗನಸು ಕಾಣುತ್ತಿರುವಿರಾ?”

“ಹಗಲು ಹೊತ್ತು ಕನಸು ಕಾಣುವುದನ್ನು ಪ್ಲಾನಿಂಗ್‌ ಎನ್ನುತ್ತಾರೆ ಮೇಡಂ,” ಅಂಜಲಿಯ ಮೋಡಿ ಮೊದಲ ದಿನದಿಂದಲೇ ಅವನ ತಲೆಯೇರಿ ಮಾತನಾಡುತ್ತಿತ್ತು.

ಪಾರ್ಟಿಯಲ್ಲಿ ಅಂಜಲಿ ಕಪ್ಪು ಶೈನಿಂಗ್‌ ಡ್ರೆಸ್‌ ಧರಿಸಿದ್ದಳು. ಮನೋಜ್‌ ನಂತೂ ಅವಳ ಹತ್ತಿರದಿಂದ ದೂರ ಸರಿಯಲು ತಯಾರಿರಲಿಲ್ಲ. ಅವಳಿಗಾಗಿ ಒಮ್ಮೆ ಸ್ನ್ಯಾಕ್ಸ್ ತಂದರೆ ಮತ್ತೊಮ್ಮೆ ಡ್ರಿಂಕ್ಸ್ ತಂದುಕೊಡುತ್ತಿದ್ದ.

“ಏನ್‌ ಮಾಡ್ತಿದಿರಾ ಮನೋಜ್‌, ನನಗೇನು ಬೇಕೋ ಅದನ್ನು ನಾನೇ ತಗೋತೀನಿ,” ಎಂದು ಅವನ ಚಟುವಟಿಕೆಗಳಿಂದ ಪುಳಕಿತ ಮನಸ್ಸಿನಿಂದ ಅಂಜಲಿ ಮೇಲ್ಮಾತಿಗೆ ಹೇಳಿದಳು.

“ನಾನು ಇದನ್ನು ನಿಮಗಾಗಿ ಅಲ್ಲ ನನಗಾಗಿ ಮಾಡುತ್ತಿರುವೆ. ಯಾರನ್ನು ಖುಷಿಪಡಿಸುವುದರಿಂದ ನಾನು ಖುಷಿಯಾಗಿರಬಹುದು ಎನ್ನುವುದು ನನಗೆ ಗೊತ್ತು,” ಎಂದು ಮನೋಜ್‌ ಅವಳ ಜೊತೆ ಫ್ಲರ್ಟ್‌ ಮಾಡುವ ಯಾವ ಅವಕಾಶವನ್ನು ತಪ್ಪಿಸಿಕೊಳ್ಳಲು ಇಚ್ಛಿಸುತ್ತಿರಲಿಲ್ಲ.

ಪಾರ್ಟಿಯಲ್ಲಿ ಎಲ್ಲರೂ ಬಹಳ ಆನಂದ ಅನುಭವಿಸಿದರು. ತಿಂದರು, ಕುಡಿದರು, ಕುಣಿದರು, ಪಾರ್ಟಿ ಇನ್ನೇನು ಮುಗಿಯುತ್ತಿತ್ತು. ಅಷ್ಟರಲ್ಲಿ ಪ್ರದೀಪ್‌ ಅವಳ ಹತ್ತಿರ ಬಂದರು. ಅವರಿಗಾಗಿಯೇ ಅವಳು ಅಷ್ಟು ಹೊತ್ತಿನಿಂದಲೂ ಕಾಯುತ್ತಿದ್ದಳು.

ಆಸಮ್ ನ ಪಾರ್ಟಿಗೆ ಬರಲು ಅದೂ ಕೂಡ ಒಂದು ಕಾರಣವಾಗಿತ್ತು.

“ನಿಮ್ಮನ್ನು ಇಲ್ಲಿ ನೋಡಿ ಬಹಳ ಖುಷಿಯಾಯಿತು,” ಎಂಬ ಸಂಕ್ಷಿಪ್ತ ವಾಕ್ಯ ಅವರ ಬಾಯಿಂದ ಹೊರಹೊಮ್ಮಿತು.

“ನಿಮಗೆ ಪ್ರದೀಪ್‌ ಹೇಗೆ ಗೊತ್ತು?” ಅವರ ಭೇಟಿಯ ಬಗ್ಗೆ ಮನೋಜ್‌ ಅಚ್ಚರಿಗೊಳಗಾದ.

“ಬಹಳ ಬಿಂದಾಸ್‌ ಚೀಸ್‌ ನೀವು.”

“ಚೀಸ್‌ ಅಂತ ಯಾರಿಗೆ ಹೇಳ್ತೀಯಾ?” ಅವಳು ತನ್ನ ಕೋಮಲ ಬೆರಳುಗಳಿಂದ ಅವನ ಕೆನ್ನೆಗೆ ನಿಧಾನವಾಗಿ ತಟ್ಟುತ್ತಾ ಹೇಳಿದಳು.

“ಆಫ್ಟರ್‌ಆಲ್, ಪ್ರದೀಪ್‌ ದತ್ತ ನಮ್ಮ ಕ್ಲೈಂಟ್‌ ಆಗಿದ್ದಾರೆ,” ಅವಳು ಅದಕ್ಕೂ ಹೆಚ್ಚಿಗೆ ಏನನ್ನು ಹೇಳಲು ಇಚ್ಛಿಸಲಿಲ್ಲ.

ಅಂಜಲಿ ಪ್ರತಿ ಎರಡು ದಿನಗಳಿಗೊಮ್ಮೆ ಆಸಮ್ ಆಫೀಸಿಗೆ ಹೋಗುತ್ತಿದ್ದಳು. ಮನೋಜ್‌ ಜೊತೆಗೆ ಫ್ಲರ್ಟ್‌ ಮಾಡುವುದರಿಂದ ಅವಳ ಹಲವು ಕೆಲಸಗಳು ಆಗುತ್ತಿದ್ದವು. ಆ್ಯಡ್‌ ಕ್ಯಾಂಪೇನ್‌ ಡಿಸೈನಿನಲ್ಲಿ ಯಾವುದಾದರೂ ಕೊರತೆಯಿದ್ದರೆ, ಆ ಕೆಲಸ ಮಾಡಿಸಿಕೊಳ್ಳುತ್ತಿದ್ದಳು. ಜೊತೆಗೆ ಆಸಮ್ ನ ಫೈನಾನ್ಸ್ ಸೆಕ್ಷನ್‌ ನಿಂದಲೂ ಅಂಜಲಿ ಸಕಾಲಕ್ಕೆ ಪೇಮೆಂಟ್‌ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಳು.

“ನಮ್ಮ ಫೈನಾನ್ಸ್ ಡಿಪಾರ್ಟ್‌ ಮೆಂಟ್‌ ಪೇಮೆಂಟ್‌ ಬಗ್ಗೆ ಬಹಳ ಕೆಟ್ಟ ಹೆಸರು ಪಡೆದಿದೆ. ಆದರೆ ನಿನ್ನ ಪೇಮೆಂಟ್‌ ಗಳು ಮಾತ್ರ ಟೈಮ್ ನಲ್ಲಿ ಆಗ್ತಿವೆ. ಅಲ್ಲೂ ಕೂಡ ನಿನ್ನ ಜಾದೂ ನಡೀತೀದಿಯಾ?” ಎಂದು ಕೇಳಿದಾಗ ಅವಳು ನಕ್ಕು ಸುಮ್ಮನಾದಳು. ತನ್ನ ಸೆಕ್ಸಿ ಬಾಡಿಯ ಬಗ್ಗೆ ಆಸೆಬುರುಕು ಕಣ್ಣುಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯವಲ್ಲ. ಅದರಿಂದ ಹಲವು ಲಾಭಗಳಿವೆ ಎನ್ನುವುದನ್ನು ಮನೋಜ್‌ ಗೆ ಹೇಗೆ ತಾನೇ ಹೇಳಲು ಸಾಧ್ಯ. ಕಣ್ಣುಗಳ ಸನ್ನೆ ಒಮ್ಮೊಮ್ಮೆ ಕೈ ಸ್ಪರ್ಶಿಸಿದರೆ ಸಾಕು, ತನಗೆ ಬೇಕಾದ ಕೆಲಸ ಆಯಿತೆಂದೇ ಅರ್ಥ.

ಕೆಲವು ತಿಂಗಳು ಕಳೆದ ಬಳಿಕ ಇಷ್ಟೊಂದು ದಿನಗಳ ಪರಿಚಯ, ಪ್ರತಿ ಭೇಟಿಯಲ್ಲೂ ಫ್ಲರ್ಟ್‌, ಇಂತಹ ಎಲ್ಲ ಕಾರಣಗಳಿಂದ ಅಂಜಲಿಗೆ ಉಂಟಾದ ಒಂದು ಆಶಾಭಾವನೆಯೆಂದರೆ ಅವನು ತನ್ನೊಂದಿಗೆ ಲಿವ್ ‌ಇನ್‌ ನಲ್ಲಿ ಇರಲು ಪ್ರಸ್ತಾಪಿಸಬಹುದು ಎಂದು. ಹಾಗಾಗಿ ಅವಳು ತನ್ನ ಮಾಲೀಕನನ್ನು ಮಹಾಜಿಪುಣ ಹೆಚ್ಚು ಬಾಡಿಗೆ ಪಡೆಯುತ್ತಾನೆ, ಯಾವುದೇ ಸೌಲಭ್ಯಗಳಿಲ್ಲ ಎಂಬ ವಿಷಯವನ್ನು ಪ್ರಸ್ತಾಪಿಸುತ್ತಾ ಯಾರಾದರೂ ನನ್ನ ಬಾಡಿಗೆ ಹಣವನ್ನು ಅರ್ಧ ಶೇರ್‌ ಮಾಡಿಕೊಳ್ಳಬಹುದಾ?” ಎಂದು ಕೇಳಿದಳು.

“ನೀನು ನಿನ್ನ ರೂಮ್ ನ್ನು ಶೇರ್‌ ಮಾಡಿಕೊಳ್ಳಲು ಸಿದ್ಧಳಿರುವೆಯಾ? ನಾನಂತೂ ನನ್ನ ರೂಮ್ ನ್ನು ಯಾರಿಗೂ ಶೇರ್ ಮಾಡುವುದಿಲ್ಲ. ನನಗೆ ನನ್ನ ಪ್ರೈವೆಸಿ ಬಹಳ ಇಷ್ಟ,” ಎಂದು ಮನೋಜ್‌ ಹೇಳಿದಾಗ, ಅಂಜಲಿಯ ಮನೋಬಲವೇ ಕುಗ್ಗಿದಂತಾಯ್ತು.

“ಅಂಜಲಿ, ನನ್ನ ಕ್ಯಾಬಿನ್‌ಗೆ ಬರ್ತೀಯಾ?” ಎಂದು ರವೀಂದ್ರ ಇಂಟರ್‌ ಕಾಮ್ ನಲ್ಲಿ ಹೇಳಿದರು.

ಅಂಜಲಿ ಅಲ್ಲಿ ಪ್ರವೇಶಿಸುತ್ತಿದ್ದಂತೆಯೇ ಎಲ್ಲೆಡೆಯಿಂದಲೂ “ಹ್ಯಾಪಿ ಬರ್ಥ್‌ ಡೇ ಟೂ ಯೂ,” ಎಂಬ ನಿನಾದ ಹೊರಹೊಮ್ಮಿತು.

ರವೀಂದ್ರ ಇಂದು ಅವಳ ಹುಟ್ಟುಹಬ್ಬವನ್ನು ಸ್ವತಃ ತಮ್ಮದೇ ಕ್ಯಾಬಿನ್‌ ನಲ್ಲಿ ಎಲ್ಲರೆದುರು ಆಚರಿಸುತ್ತಿದ್ದರು.

“ಅಂಜಲಿ, ನಮ್ಮ ಆಫೀಸಿಗೆ ಬಂದಾಗಿನಿಂದ ನಮ್ಮ ಏಜೆನ್ಸಿ ಎಲ್ಲಿಂದ ಎಲ್ಲೆಲ್ಲಿಗೂ ತಲುಪುವಂತಾಯ್ತು,” ಎಂದು ಅವಳ ಪರಿಶ್ರಮವನ್ನು ಎಲ್ಲರೆದುರು ಹೊಗಳಿದರು.

“ಬಹುಶಃ ನಾವು ಇಲ್ಲಿ ಕೆಲಸ ಮಾಡಲು ಅಲ್ಲ, ಹರಟೆ ಹೊಡೆಯಲು ಬಂದಿದ್ದೇವೆ ಎಂದೆನಿಸುತ್ತೆ,” ಹಿಂದಿನಿಂದ ಗುಸುಗುಸು ಶಬ್ದಗಳು ಕೇಳಿಬಂದವು.

“ನಮ್ಮ ಹುಟ್ಟುಹಬ್ಬವನ್ನು ಎಂದೂ ಆಚರಿಸಿಲ್ಲ,” ಎಂದು ಅರುಣ್‌ ರಾಗ ತೆಗೆದ. ತನ್ನ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಅಂಜಲಿಗೆ ಇಂದು ಹುಟ್ಟುಹಬ್ಬ ಆಚರಿಸುತ್ತಿರುವುದು ಅವನ ಗೊಣಗಾಟಕ್ಕೆ ಕಾರಣವಾಗಿತ್ತು.

“ಅಂಜಲಿ ನಿಮ್ಮ ಕಡೆ ಬಾಸ್‌ ಹೀಗೆ ಉಪಕೃತರಾಗಲು ಏನು ಕಾರಣ?” ಹಿಂದಿನಿಂದ ಕೇಳಿ ಬರುತ್ತಿದ್ದ ವಾಗ್ಬಾಣಗಳು ಅವಳ ಎದೆಯನ್ನು ಇರಿಯುತ್ತಿದ್ದವು.

ಆಫೀಸಿನಲ್ಲಿ ಭರ್ಜರಿ ಪಾರ್ಟಿ. ಒಮ್ಮೆ ರವೀಂದ್ರ ಮತ್ತೊಮ್ಮೆ ಮನೋಜ್‌ ಫೈನಾನ್ಸ್ ಡಿಪಾರ್ಟ್‌ ಮೆಂಟಿನ ಅನಿಲ್ ‌ಹೀಗೆ ಎಲ್ಲ ಕಡೆಯೂ ಅಂಜಲಿ ತನ್ನ ಮೋಹಜಾಲ ಪಸರಿಸಲು ನೋಡಿದಳು. ಆದರೆ ಕೈಗೆ ಸಿಕ್ಕಿದ್ದೇನು? ಆಫೀಸ್‌ ನವರ ಗುಸುಗುಸು ಮಾತುಗಳು ಮಾತ್ರ. ಪುರುಷ ಸಹೋದ್ಯೋಗಿಗಳ ಜೊಲ್ಲು ಸುರಿಸುವ ದೃಷ್ಟಿ ಅಥವಾ ಮಹಿಳಾ ಸಹೋದ್ಯೋಗಿಗಳ ತಿರಸ್ಕಾರದ ದೃಷ್ಟಿ.

ಈಗ ಅಂಜಲಿಗೆ 32 ವರ್ಷ ತುಂಬಿತ್ತು. ಇಷ್ಟೊಂದು ಸುಂದರ ಹಾಗೂ ಹಾಟ್‌ ಫಿಗರ್‌ ಆಗಿಯೂ ಕೂಡ ಯಾರೂ ಅವಳ ಕೈ ಹಿಡಿಯಲು ತಯಾರಿರಲಿಲ್ಲ. ಎಲ್ಲರಿಗೂ ಅವಳೊಂದಿಗೆ ಸರಸವಾಡಬೇಕೆಂಬ ಚಪಲವಷ್ಟೇ ಇತ್ತು. ಆತಂಕ ಭರಿತ ಮನಸ್ಸು, ನಿದ್ರಾಹೀನ ಕಣ್ಣುಗಳ ಮುಖಾಂತರ ಅಂಜಲಿ ಅದೆಷ್ಟೋ ಗಂಟೆ ಹಾಗೆಯೇ ಹಾಸಿಗೆಯಲ್ಲಿ ಬಿದ್ದುಕೊಂಡು ಕೋಣೆಯ ಛಾವಣಿಯನ್ನು ನೋಡುತ್ತಿದ್ದಳೊ ಏನೋ?

ಕಳೆದ ತಿಂಗಳು ಅವಳು ಡಾಕ್ಟರ್‌ ಬಳಿ ನಿಯಮಿತ ಚೆಕಪ್‌ ಗೆ ಹೋದಾಗ ಅವರು ಅವಳಿಗೆ ಕೆಲವು ಸಲಹೆ ಕೊಟ್ಟಿದ್ದರು. “ನೋಡಿ ಅಂಜಲಿ, ಸ್ತ್ರೀಯರ ದೇಹ ಒಂದು ಜೈವಿಕ ಗಡಿಯಾರದ ಲೆಕ್ಕಾಚಾರದಲ್ಲಿ ನಡೆಯುತ್ತಿರುತ್ತದೆ. ತಾಯಿ ಹಾಗೂ ಮಗುವಿನ ಒಳ್ಳೆಯ ಆರೋಗ್ಯಕ್ಕೆ 30 ವರ್ಷಕ್ಕಿಂತ ಮುಂಚೆ ಮಗುವಾದರೆ ಒಳ್ಳೆಯದು. ಆದರೆ 35 ದಾಟುವುದು ಒಳ್ಳೆಯದಲ್ಲ. ನಿಮ್ಮ ಬಯಾಲಜಿಕಲ್ ಕ್ಲಾಕ್‌ ಓಡುತ್ತಿದೆ. ನೀವೀಗ ಸೆಟಲ್ ಆಗುವ ಬಗ್ಗೆ ಯೋಚಿಸಬೇಕು,” ಎಂಬ ವಿಚಾರಗಳಲ್ಲಿ ಸುತ್ತುವರೆದ ಅಂಜಲಿಯ ಕಿವಿಗಳಲ್ಲಿ ಗಡಿಯಾರದ ಟಿಕ್‌ ಟಿಕ್‌ ಶಬ್ದ ಹೊಡೆದುಕೊಳ್ಳತೊಡಗಿತು. ಅವಳು ಚಿಂತೆಯಿಂದ ದಿಂಬನ್ನು ಕಿವಿಗೆ ಹಿಡಿದುಕೊಂಡಳು.

ಮರುದಿನ ಅಂಜಲಿ ಆಫೀಸಿನಲ್ಲಿ ಹೊಸದೊಂದು ಪ್ರಾಜೆಕ್ಟ್ ನ ಪಿಚ್‌ ಬಗ್ಗೆ ಕೇಳಿದಾಗ, ರವೀಂದ್ರರ ಕ್ಯಾಬಿನ್‌ ಗೆ ಹೋಗಿ ಅದನ್ನು ತನಗೆ ಕೊಡಬೇಕೆಂದು ಕೋರಿದಳು.

“ಆದರೆ ಈ ಪ್ರಾಜೆಕ್ಟ್ ಮುಂಬೈನಲ್ಲಿದೆ. ಆದರೆ ನೀನು ಬೆಂಗಳೂರಿನ `ಆಸಮ್’ ಪ್ರಾಜೆಕ್ಟ್ ಹ್ಯಾಂಡಲ್ ಮಾಡ್ತಿರುವೆ,” ರವೀಂದ್ರರ ಸ್ವರದಲ್ಲಿ ಸ್ವಲ್ಪ ಹಿಂಜರಿಕೆ ಇತ್ತು.

“ಆದರೆ ಏನಾಯ್ತು ಸರ್‌, ನಾನು ಎಡರನ್ನೂ ಹ್ಯಾಂಡಲ್ ಮಾಡಬಲ್ಲೆ. ಮುಂಬೈನಲ್ಲೂ ನಮ್ಮದೊಂದು ಆಫೀಸ್‌ ಇದೆಯಲ್ವಾ….. ನಾನು ಅಲ್ಲಿಗೆ ವಿಜಿಟ್‌ ಮಾಡ್ತಾ ಇರ್ತೀನಿ. `ಆಸಮ್’ ಬಗ್ಗೆ ಅಲ್ಲಿಂದಲೇ ನಿಗಾ ಇಟ್ಟಿರ್ತೀನಿ,” ಅಂಜಲಿ ರವೀಂದ್ರರಿಗೆ ತನ್ನ ಮಾತನ್ನು ಒಪ್ಪಿಕೊಳ್ಳುವಂತೆ ಹೇಳಿದಳು.

ಮುಂಬೈಗೆ ತಲುಪಿದ ಅಂಜಲಿ ಅಲ್ಲಿನ ಆಫೀಸ್‌ ಗೆಸ್ಟ್ ಹೌಸ್‌ ನಲ್ಲಿ ಉಳಿದುಕೊಂಡಳು. ಆ ಕೋಣೆ ಅತ್ಯಂತ ಸಾಧಾರಣವಾಗಿತ್ತು. ಆದರೆ ಅವಳು ಇಲ್ಲಿಗೆ ಬಂದ ಉದ್ದೇಶವೇ ಬೇರೆ ಆಗಿತ್ತು. ತನ್ನ ವಯಸ್ಸು ಮರಳಿನಂತೆ ಕೈಯಿಂದ ಜಾರಿ ಹೋಗಿಬಿಟ್ಟರೆ ಏನು ಗತಿ? ತಾನು ಆಮೇಲೆ ಕೈ ಕೈ ಹಿಸುಕಿಕೊಳ್ಳುವಂತಾಗಬಾರದು ಎಂದು ಅವಳು ಯೋಚಿಸುತ್ತಿದ್ದಳು. ತನ್ನ ಸೆಕ್ಸಿ ಬಾಡಿಯಿಂದಾಗಿ ಅವಳು ಹತ್ತು ಹಲವು ಅವಕಾಶಗಳನ್ನು ಪಡೆದಿದ್ದಳು. ತನ್ನ ಬುದ್ಧಿ ಹಾಗೂ ಚಪಲತೆಯ ಮುಖಾಂತರ ಅವಳು ಹಲವರನ್ನು ಮೋಹಿತಳಾಗಿಸಿದ್ದಳು.

ತನ್ನ ಇದೇ ಆಕರ್ಷಣೆಯ ಬಲದಿಂದ ತನಗೆ ಸಂಗಾತಿ ದೊರಕಬಹುದೆಂಬ ಅಪೇಕ್ಷೆ ಅವಳಿಗಿತ್ತು. ಆದರೆ ಹೆಚ್ಚುತ್ತಿರುವ ವಯಸ್ಸು ಅವಳನ್ನು ಹೆದರಿಸಿಬಿಟ್ಟಿತ್ತು. ಮನೋಜ್‌ ವಿಷಯ ಮುಂದುವರಿಸಬಹುದು. ಆದರೆ ಈವರೆಗೂ ಅವನು ಅಂತಹ ಯಾವುದೇ ಸಂಕೇತ ಕೊಟ್ಟಿಲ್ಲ. ಅವನು ಕೇವಲ ಫ್ಲರ್ಟ್‌ ಗೆ ಸೀಮಿತನಾಗಿದ್ದಾನೆ.

ತಾನು ಸಕಾಲದಲ್ಲಿಯೇ ಒಬ್ಬ ಸಂಗಾತಿಯನ್ನು ಹುಡುಕಿಕೊಳ್ಳಬೇಕು. ಮುಂಬೈನ 2 ಆಫೀಸುಗಳಲ್ಲಿ ಅಂದರೆ ತನ್ನದೇ ಆಫೀಸ್‌ಅಥವಾ ಕ್ಲೈಂಟ್‌ ಆಫೀಸಿನಲ್ಲಿ ತನಗೆ ಅಂಥವರು ಯಾರಾದರೂ ಸಿಕ್ಕಿಯೇ ಸಿಕ್ಕಬಹುದು ಎಂಬ ಆಶಾಭಾವನೆ ಅವಳಿಗಿತ್ತು.

ಅಂಜಲಿ ಮುಂಬೈನ ಕ್ಲೈಂಟ್‌ ಆಫೀಸಿಗೆ ಹೋದಾಗ, ಅಲ್ಲಿ ಅವಳನ್ನು ಒಬ್ಬ ಹುಡುಗನಿಗೆ ಭೇಟಿ ಮಾಡಿಸಲಾಯಿತು. ಅವನನ್ನು ಕಂಡು ಅವಳ ಮನಸ್ಸಿನಲ್ಲಿ ಬಂಗಾರದಂತಹ ಆಸೆ ಚಿಗುರತೊಡಗಿತ್ತು.

“ಮೈ ನೇಮ್ ಈಸ್‌ ಸೃಜನ್‌. ನಾನು ಈ ಆಫೀಸಿನ ಮುಖಾಂತರ ನಿಮ್ಮ ಕಾಂಟ್ಯಾಕ್ಟ್ ಪಾಯಿಂಟ್‌ ಆಗಿರ್ತೀನಿ,” ಅವನು ತನ್ನ ಪರಿಚಯ ಮಾಡಿಕೊಂಡ.

“ನಿಮ್ಮ ಹೆಸರು, ನಿಮ್ಮ ವ್ಯಕ್ತಿತ್ವ ಎಲ್ಲ ಅದ್ಭುತ. ನಿಮ್ಮನ್ನು ಭೇಟಿಯಾಗಿ ನನಗೆ ಬಹಳ ಖುಷಿಯಾಯಿತು,” ಅಂಜಲಿ ತನ್ನ ಹೃದಯದಲ್ಲಿ ಏಳುತ್ತಿದ್ದ ಪ್ರೇಮದ ಅಲೆಗಳನ್ನು ಹರಿದು ಹೋಗಲು ಅವಕಾಶ ಕೊಟ್ಟಳು.

ಅವಳ ಮಾತನ್ನು ಕೇಳಿಸಿಕೊಂಡು ಸೃಜನ್‌ ಮೆಲ್ಲನೆ ನಕ್ಕ. ಕೆಲಸದ ಮೇಲಿನ ಹಿಡಿತದಿಂದ ಅಂಜಲಿ ಮೊದಲ ಮೀಟಿಂಗ್‌ ನಲ್ಲಿಯೇ ತನ್ನ ಪ್ರಭಾವ ಬೀರಿದಳು. ಮಧ್ಯಾಹ್ನದ ಲಂಚ್‌ ಟೈಮ್ ಗೆ ಸೃಜನ್‌ ಕೇಳಿದ, “ಆಫೀಸಿನ ವತಿಯಿಂದ ನಿಮಗೆ ಏನು ಆರ್ಡರ್‌ ಮಾಡಬಹುದು?”

“ಏನಾದರೂ ನಡೆದೀತು. ಆದರೆ ಜೊತೆಗೆ ನಿಮ್ಮ ಕಂಪನಿ ಕೊಡಬೇಕು,” ಅಂಜಲಿ ಈಗ ಸಮಯ ಹಾಳು ಮಾಡಿಕೊಳ್ಳಲು ತಯಾರಿರಲಿಲ್ಲ.

ಮೊದಲ ದಿನವೇ ಇಬ್ಬರಲ್ಲೂ ಒಳ್ಳೆಯ ಸ್ನೇಹ ಬೆಳೆಯಿತು. ತನ್ನ ಬಾಲ್ಯ, ಶಿಕ್ಷಣ, ಕೆರಿಯರ್‌ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಶೇರ್‌ ಮಾಡಿಕೊಂಡ ಬಳಿಕ ಇಬ್ಬರೂ ಸಂಜೆ ತಮ್ಮ ತಮ್ಮ ಸ್ಥಳಗಳಿಗೆ ಹೊರಟರು.

ಗೆಸ್ಟ್ ಹೌಸ್‌ ಗೆ ಹೋದ ಅಂಜಲಿ ಬಟ್ಟೆ ಬದಲಿಸಿ ಗೇಟ್‌ ವೇ ಆಫ್‌ ಇಂಡಿಯಾ ನೋಡಲು ಹೊರಟಳು. `ನಾಳೆ ನನಗೆ ಮುಂಬೈ ಪ್ರದಕ್ಷಿಣೆ ಮಾಡಿಸು,’ ಎಂದು ಹೇಳಬೇಕೆಂದು ಯೋಚಿಸತೊಡಗಿದಳು. ಮೊದಲ ದಿನವೇ ಹಾಗೆ ಹೇಳಿದ್ದರೆ ಅವನು ಏನೆಂದು ಭಾವಿಸುತ್ತಾನೋ ಎಂದು ಸುಮ್ಮನಿದ್ದಳು. ಬೆಳಗ್ಗೆ ಯಾವ ಕೋಣೆ ಅವಳಿಗೆ ಸಾಧಾರಣ ಅನಿಸಿತ್ತೋ, ಅದೇ ಈಗ ಅವಳನ್ನು ಪ್ರಕಾಶಮಾನವಾದ ಕನಸುಗಳು ಆರಿಸಿಕೊಂಡಿದ್ದವು.

ಮರುದಿನ ಕ್ಲೈಂಟ್‌ ಆಫೀಸಿಗೆ ಹೋಗುವ ದಾರಿಯಲ್ಲಿ ಮನೋಜ್‌ ನ ಫೋನ್‌ ಬಂತು, “ಹೇಗಿದೆಯಾ ಜಾನೇ ಮನ್‌ ಮುಂಬೈ ಹೇಗೆನ್ನಿಸ್ತಿದೆ?”

“ಫಸ್ಟ್ ಕ್ಲಾಸ್‌. ಈ ಮಹಾನಗರ ಹಾಗೂ ಇಲ್ಲಿನ ಜನರೂ ಕೂಡ,” ಅಂಜಲಿ ಸ್ವಲ್ಪ ಖುಷಿಯಿಂದಲೇ ಹೇಳಿದಳು.

“ನಮ್ಮ ಬೆಂಗಳೂರಿನ ಬೆಳದಿಂಗಳೇ ಹೊರಟು ಹೋಗಿದೆ,” ಎಂದು ಮನೋಜ್‌ ತನ್ನ ಧ್ವನಿಯಲ್ಲಿ ಉದಾಸತನ ಬೆರೆಸಿ ಹೇಳುವ ನಾಟಕ ಆಡಿದ.

“ಅಂದಹಾಗೆ ನಾನು ನಿನಗೆ ಏನನ್ನೋ ಕಳಿಸಿರುವೆ. ನಿನ್ನ ಫೋನ್‌ ಚೆಕ್‌ ಮಾಡು ಹಾಗೂ ನನ್ನ ಕಿಸ್‌ ಸಿಕ್ಕಿತಾ ಹೇಳು?” ಮನೋಜ್‌ ಅಂಜಲಿಗೆ ಚುಂಬನದ ಎಮೋಜಿಯನ್ನು  ಕಳಿಸಿಕೊಟ್ಟಿದ್ದ.

“ನೀನೋ…..” ತಾನು ದೂರ ಆಗಿರುವ ಕಾರಣದಿಂದ ಮನೋಜ್‌ ಗೆ ತನ್ನ ಕೊರತೆ ಭಾಸವಾಗುತ್ತಿದೆ. ಅದಕ್ಕೆ ಅವನಿಗೆ ಸಂಬಂಧ ಮುಂದುವರಿಸುವ ಇಚ್ಛೆ ಇದೆ, ಎನಿಸಿತು.

“ಇವತ್ತು ಸಂಜೆ ಆಫೀಸಿನಲ್ಲಿ ಎಚ್‌.ಆರ್‌. ಈವೆಂಟ್‌ ಇದೆ.” ಎಂದು ಸೃಜನ್‌ ಅಂಜಲಿಗೆ ತಿಳಿಸಿದ. ಅಲ್ಲಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದರ ಬಗೆಗೂ ಹೇಳಿದ. ಆ ಕಾರಣದಿಂದ ಅಂಜಲಿ ಬೇರೆ ಕಡೆ ಎಲ್ಲೂ ಹೋಗದೆ, ಅಲ್ಲಿಯೇ ಉಳಿದುಕೊಂಡಳು. ಅಲ್ಲಿ ಹಲವಾರು ಜನರು ತಮ್ಮ ಕಲೆಗಳನ್ನು ಪ್ರದರ್ಶಿಸಿದರು. ಸೃಜನ್‌ ನ ಒತ್ತಾಯದ ಮೇರೆಗೆ ಅಂಜಲಿ ಕೂಡ ಒಂದು ಹಾಡು ಹಾಡಿದಳು. ಆ ಹಾಡು ಪ್ರೇಮಗೀತೆಯಾಗಿತ್ತು.

“ನಾನು ನಿನ್ನ ಹಾಡಿಗೆ ಮನಸೋತು ಹೋದೆ,” ಎಂದು ಸೃಜನ್‌ ಅವಳನ್ನು ಹೊಗಳುತ್ತಾ ಹೇಳಿದ.

“ಕೇವಲ ಹಾಡಿಗಷ್ಟೇನಾ……?” ಅಂಜಲಿ ಮುಗುಳ್ನಗುತ್ತಾ ಕೇಳಿದಳು.

“ಇಲ್ಲ, ಇಲ್ಲ, ನಾನು ನಿನ್ನ ಪ್ರತಿಯೊಂದೂ ಚಟುವಟಿಕೆಯನ್ನು ಇಷ್ಟಪಡುತ್ತೇನೆ.”

“ಚೆನ್ನಾಗಿ ಪ್ಲರ್ಟ್‌ ಮಾಡ್ತೀಯಾ?” ಅಂಜಲಿ ಸ್ವಲ್ಪ ನಾಚಿಕೊಳ್ಳುತ್ತಾ ಹೇಳಿದಳು.

“ಯಾರು ಫ್ಲರ್ಟ್‌ ಮಾಡ್ತಿದಾರೆ. ನಾನಂತೂ ನಿಜವನ್ನೇ ಹೇಳ್ತಿರುವೆ,” ಸೃಜನ್‌ ಸಾಕಷ್ಟು ಖುಷಿಯಿಂದ ಹೇಳಿದ.

ಇವತ್ತು ಹಾಡು ಹಾಡುತ್ತಾ ಅಂಜಲಿ ಹಲವು ಸಲ ಸೃಜನ್‌ ಗೆ ಕಣ್ಣಿಂದಲೇ ಸನ್ನೆ ಮಾಡುತ್ತಿದ್ದಳು. ಅದರಿಂದ ಅವನ ಧೈರ್ಯ ಹೆಚ್ಚಿತ್ತು. ಈ ವಿಷಯವನ್ನು ಸೃಜನ್‌ ಹೊರತುಪಡಿಸಿ ಆಫೀಸಿನ ಬಹಳಷ್ಟು ಜನರಿಗೆ ಗೊತ್ತಾಗಿತ್ತು.

ಹಲವು ಸಹೋದ್ಯೋಗಿಗಳು ಅಂಜಲಿ ಹಾಗೂ ಸೃಜನ್‌ ಜೋಡಿಯ ಬಗ್ಗೆ ಸಾಕಷ್ಟು ಛೇಡಿಸಿದ್ದರು. ಅದರಿಂದ ಅಂಜಲಿ ಪುಳಕಿತಳಾಗಿದ್ದಳು. ಸೃಜನ್‌ ಕೂಡ ಮುಗುಳ್ನಕ್ಕು ತನ್ನ ಸಮ್ಮತಿ ಸೂಚಿಸಿದ.

ಮುಂಬೈನ ವಾತಾವರಣವನ್ನು ಮನಸ್ಸು ಪೂರ್ತಿ ತುಂಬಿಸಿಕೊಳ್ಳುವ ಇಚ್ಛೆಯಿಂದ ಅಂಜಲಿ, “ಇವತ್ತು ಜುಹೂ ಬೀಚ್‌ ಗೆ  ಕರೆದುಕೊಂಡು ಹೋಗ್ತೀಯಾ?” ಎಂದು ಸೃಜನ್‌ ಗೆ ಕೇಳಿದಳು.

ಆಫೀಸ್‌ ಮುಗಿಸಿದ ಬಳಿಕ ಸೃಜನ್‌ ಹಾಗೂ ಅಂಜಲಿ ಜುಹೂ ಬೀಚ್‌ ನತ್ತ ಹೊರಟರು. ರಾತ್ರಿಯ ಬೆಳದಿಂಗಳ ಬೆಳಕಲ್ಲಿ ಇಬ್ಬರೂ ಏಕಾಂತ ಸ್ಥಳವನ್ನು ಆಯ್ಕೆ ಮಾಡಿಕೊಂಡರು. ಅಲ್ಲಿನ ತಂಪಾದ ಮರಳಿನ ಮೇಲೆ ಕುಳಿತು, ಬಂದು ಹೋಗುತ್ತಿದ್ದ ಅಲೆಗಳಲ್ಲಿ ತಮ್ಮ ಕಾಲುಗಳನ್ನು ತೊಯ್ಯಿಸಿಕೊಳ್ಳತೊಡಗಿದರು.

ಸ್ವಲ್ಪ ಹೊತ್ತಿನಲ್ಲಿಯೇ ಅಂಜಲಿ ಹಾಡು ಗುನುಗತೊಡಗಿದಳು.

ಅಂಜಲಿಯ ಕಣ್ಣುಗಳಲ್ಲಿ ಎಂತಹ ಒಂದು ಆಕರ್ಷಣೆಯಾಯಿತೆಂದರೆ, ಸೃಜನ್‌ ಅವಳತ್ತ ಮುಂದುವರಿದು ಅವಳ ತುಟಿಗಳ ಮೇಲೆ ತನ್ನ ತುಟಿಗಳನ್ನಿಟ್ಟ. ಅಂಜಲಿ ಅವನನ್ನು ತಡೆಯಲು ಹೋಗಲಿಲ್ಲ. ನೀರಿನ ಶೀತಲತೆ, ಬೆಳದಿಂಗಳ ಅಂದ, ವಯಸ್ಸಿನ ಉತ್ತುಂಗತೆ. ಈ ಸ್ನೇಹಮಯ ಕ್ಷಣಗಳಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ಒಂದು ನಿರ್ದಿಷ್ಟ ಹಂತಕ್ಕೆ ತಂದು ನಿಲ್ಲಿಸಿದರು.

ಬೆಂಗಳೂರಿಗೆ ಬಂದ ಬಳಿಕ ಅಂಜಲಿ ಎಲ್ಲಕ್ಕೂ ಮುಂಚೆ ಬಾಸ್‌ ರವೀಂದ್ರರನ್ನು ಭೇಟಿಯಾಗಿ ಮಾತುಕಥೆ ನಡೆಸಿದಳು.

“ಓಹ್‌ ಅಂಜಲಿ, ನೀವು ಆಫೀಸಿನಲ್ಲಿ ಇಲ್ಲದೇ ಇರುದು ಒಂದು ರೀತಿಯ ಮರುಭೂಮಿಯಂತಾಗಿತ್ತು. ಈಗ ನಮ್ಮ ಆಫೀಸಿಗೆ ಪುನಃ ಜೀವಕಳೆ ಬಂತು,” ಎಂದು ರವೀಂದ್ರ ಅವಳೊಂದಿಗೆ ಫ್ಲರ್ಟ್‌ ಮಾಡಿದ.

“ಅಂದಹಾಗೆ ನೀನು ವಾಪಸ್‌ ಬಂದ ಖುಷಿಗೆ ನಾಳೆ ಒಂದು ಪಾರ್ಟಿ ಇಟ್ಟಿದ್ದೇವೆ. ಪಾರ್ಟಿಗೆ ಚೆನ್ನಾಗಿ ರೆಡಿಯಾಗಿ ಬಾ. ನಿನ್ನ ಬೆಳದಿಂಗಳ ರೂಪ ನೋಡುವ ಮನಸ್ಸಾಗುತ್ತಿದೆ.”

ಅಂಜಲಿ ಮನಸ್ಸಿನಲ್ಲಿಯೇ, `ಈ ಮನುಷ್ಯನಿಗೆ ಹೆಂಡತಿ ಇದ್ದಾಳೆ, ಮಗು ಇದೆ, ಆದರೂ ಫ್ಲಟ್‌ ಮಾಡಬೇಕೆನ್ನುವ ಚಪಲ,’ ಎಂದು ಹೇಳಿಕೊಳ್ಳುತ್ತ ತನ್ನ ಮುಂಗುರುಳನ್ನು ತಡವಿ ಹಿಂದೆ ಸರಿಸುತ್ತಾ ಹೇಳಿದಳು, “ನಿಮ್ಮದೇನೂ ಅಭ್ಯಂತರ ಇರದಿದ್ದರೆ ನಾನು ನನ್ನ ಕ್ಲೈಂಟ್‌ ನ್ನು ಜೊತೆಗೆ ಕರೆದುಕೊಂಡು ಬರಬಹುದಾ?” ರವೀಂದ್ರ ಅವಳ ಮಾತಿಗೆ ಒಪ್ಪಿಗೆ ಸೂಚಿಸಿದ.

ಅಂಜಲಿ ಮುಂಬೈನಿಂದ ವಾಪಸ್‌ ಬಂದಿದ್ದಾಳೆಂಬ ವಿಷಯ ಮನೋಜ್‌ ಗೆ ಗೊತ್ತಾಯಿತು. ಅವನು ತಕ್ಷಣವೇ ಅವಳಿಗೆ ಫೋನ್ ಮಾಡಿದ, “ಆಹಾ! ಇವತ್ತು ವಾತಾವರಣ ಅದೆಷ್ಟು ಸೊಗಸಾಗಿದೆ ಎಂದರೆ…..”

“ಓಹೋ! ಬಣ್ಣದ ಮಾತುಗಳನ್ನು ಹೇಳಲು ಯಾರಾದರೂ ನಿನ್ನಿಂದ ಕಲಿತುಕೊಳ್ಳಬೇಕು. ನಾಳೆ ನಮ್ಮ ಆಫೀಸಿನ ಪಾರ್ಟಿಯಲ್ಲಿ ಭೇಟಿಯಾಗೋಣ. ಈಗ ನಾನು ಬಹಳ ಬಿಜಿ,” ಆತುರಾತುರದಲ್ಲಿ ಅಂಜಲಿ ಅವನ ಫೋನ್‌ ಕಟ್‌ ಮಾಡಿದಳು.

ಅವಳ ಶುಷ್ಕ ವರ್ತನೆ ಅವನಿಗೆ ಒಂದಿಷ್ಟು ಆಶ್ಚರ್ಯವನ್ನುಂಟು ಮಾಡಿತು. ಆದರೆ ಪಾರ್ಟಿಯಲ್ಲಿ ಅವನು ಅವಳನ್ನು ಯಾವ ರೀತಿ ಬರಬಹುದೆಂದು ನಿರೀಕ್ಷಿಸಿದ್ದಾನೊ, ಅದಕ್ಕೂ ಮೀರಿದ ಕಲ್ಪನೆಯಲ್ಲಿ ಅವಳು ಅಲ್ಲಿಗೆ ಬಂದಿದ್ದಳು. ಪಾರ್ಟಿಯಲ್ಲಿ ಅಂಜಲಿ ನಗುನಗುತ್ತಲೇ ಸೃಜನ್‌ ನ ಬಾಹುಗಳಲ್ಲಿ ತನ್ನ ಬಾಹುಗಳನ್ನು ಸೇರಿಸಿಕೊಂಡೇ ಎಂಟ್ರಿಯಾದಳು. ಪ್ರೀತಿಯಲ್ಲಿ ತಲ್ಲೀನರಾದ ಯುವ ಜೋಡಿ ಎಂಬಂತೆ ಅವರು ಬಿಂಬಿತರಾಗುತ್ತಿದ್ದರು.

ಅಂಜಲಿ ರವೀಂದ್ರರ ಹತ್ತಿರ ಹೋಗಿ, “ಇವರು ಸೃಜನ್‌, ಮುಂಬೈನ ನಮ್ಮ ಕ್ಲೈಂಟ್‌,” ಎಂದು ಹೇಗೆ ಹೇಳಿದಳೆಂದರೆ, ಅವನು ತನ್ನ ಅತ್ಯಂತ ನಿಕಟರ್ತಿ ಎಂಬಂತೆ. ಇಬ್ಬರ ಮುಖದಲ್ಲಿ ತೇಲುತ್ತಿದ್ದ ಪ್ರಖರ ಹೊಳಪು ಅವರಿಬ್ಬರ ನಡುವಣ ಸಂಬಂಧ ತಿಳಿಯಲು ಸಾಕಷ್ಟಿತ್ತು.

“ಐ ಆ್ಯಮ್ ಹ್ಯಾಪಿ ಫಾರ್‌ ಯೂ,” ಎಂದು ರವೀಂದ್ರ ಹೇಳಿದಾಗ, ಅಂಜಲಿ ಹೇಳಿದಳು, “ಕೇವಲ ಹ್ಯಾಪಿ ಆಗಿರುವುದರಿಂದ ಸಾಲದು. ನನಗೆ ನಿಮ್ಮಿಂದ ಏನೋ ಬೇಕಿದೆ. ನಾನು ಮುಂಬೈ ಆಫೀಸಿಗೆ ಟ್ರಾನ್ಸ್ ಫರ್‌ ಕೇಳುತ್ತಿದ್ದೇನೆ.”

ಅಂಜಲಿಯ ಬಾಯಿಂದ ಟ್ರಾನ್ಸ್ ಫರ್‌ ಶಬ್ದ ಕೇಳಿ ರವೀಂದ್ರಗೆ ಒಂದು ರೀತಿಯ ಆಘಾತವೇ ಆಯಿತು, “ಇಲ್ಲ ಅಂಜಲಿ, ಇದು ಸಾಧ್ಯವೇ ಇಲ್ಲ. ಬೆಂಗಳೂರು ಆಫೀಸ್‌ ಗೆ ನಿನ್ನ ಅವಶ್ಯಕತೆ ಹೆಚ್ಚಿಗೆ ಇದೆ. ನಾನು ನಿನ್ನನ್ನು ಮುಂಬೈಗೆ ಕಳಿಸಿಕೊಡಲು ಆಗುವುದಿಲ್ಲ,” ಆತ ಕಡ್ಡಿ ತುಂಡು ಮಾಡಿದಂತೆ ಹೇಳಿ ಅವಳ ಉತ್ಸಾಹವನ್ನು ಕುಗ್ಗಿಸಲು ಪ್ರಯತ್ನಿಸಿದ.

ಆಗ ಮನೋಜ್‌ ಪಾರ್ಟಿಗೆ ಬಂದ. ಇವತ್ತು ಅಂಜಲಿ ಅವನತ್ತ ಕಣ್ಣೆತ್ತಿ ಕೂಡ ನೋಡಲಿಲ್ಲ. ಅವಳ ಶುಷ್ಕ ವರ್ತನೆಯ ಬಗ್ಗೆ ಅವನಿಗೆ ಬೇಸರವಾಗುತ್ತಿತ್ತು. ಅಷ್ಟರಲ್ಲಿ ಯಾರೋ ಒಬ್ಬರು ದುಃಖಭರಿತ ಶಾಯರಿಯೊಂದನ್ನು ಹಾಡಿದರು. ಮನೋಜ್‌ ಗೆ ಅದನ್ನು ತನಗಾಗಿಯೇ ಹೇಳುತ್ತಿದ್ದಾರೆಂದು ಭಾಸವಾಯಿತು.

ಅಂಜಲಿ ಕೂಡ ಒಂದು ಹಾಡು ಹಾಡಿದಳು. ಅವಳ ಹಾಡಿಗೆ ಎಲ್ಲರೂ ಚಪ್ಪಾಳೆ ತಟ್ಟಿದರು. ರವೀಂದ್ರ ಹಾಗೂ ಮನೋಜ್ ಹೊರತುಪಡಿಸಿ. ಅವಳ ಇಂದಿನ ಧೋರಣೆ ಇಬ್ಬರಿಗೂ ಇಷ್ಟವಿರಲಿಲ್ಲ. ಆದರೆ ಅಂಜಲಿ ಆ ಇಬ್ಬರ ಕಡೆ ಕಿಂಚಿತ್ತೂ ಗಮನ ಕೊಡದೆ, ಮನೋಜ್‌ ಗೆ ಸೃಜನ್‌ ನನ್ನು ಭೇಟಿ ಮಾಡಿಸಿದಳು.

ಮರುದಿನ ಅಂಜಲಿ ಬಾಸ್‌ ರವೀಂದ್ರರ ಚೇಂಬರ್‌ ಗೆ ಹೋಗಿ ತನ್ನ ರಾಜೀನಾಮೆ ಪತ್ರವನ್ನು ಕೊಟ್ಟಳು, “ರವೀಂದ್ರ ಸರ್‌, ಇದೋ ನನ್ನ ರಾಜೀನಾಮೆ ಪತ್ರ. ನೀವು ನನ್ನ 15 ದಿನಗಳ ನೋಟೀಸ್‌ ಪೀರಿಯಡ್‌ ಬಿಟ್ಟು ಬಿಟ್ರೆ ನನಗೆ ಬಹಳ ಖುಷಿಯಾಗುತ್ತೆ. ನೀವ ನನ್ನ ಕೆಲಸದ ಬಗ್ಗೆ, ನನ್ನ ಶ್ರಮದ ಬಗ್ಗೆ ಗೌರವ ಕೊಟ್ಟಿದ್ದೀರಿ ಎಂದು ಭಾವಿಸ್ತೀನಿ,” ಎಂದಳು.

“ಅಂಜಲಿ, ಯಾರದ್ದೊ ಮಾತನ್ನು ನಂಬಿ ರಾಜೀನಾಮೆ ಕೊಡುವುದು ಜಾಣತನದ ಮಾತಲ್ಲ. ನೀನು ಮತ್ತೊಮ್ಮೆ ಯೋಚಿಸು ಎಂದು ನಾನು ಹೇಳ್ತೀನಿ,” ಅವಳ ಆ ನಿರ್ಧಾರ ರವೀಂದ್ರರಿಗೆ ಅನಿರೀಕ್ಷಿತವಾಗಿತ್ತು.

“ಸರ್‌, ನಾನು ಈವರೆಗೆ ಯಾರದ್ದೊ ಭರವಸೆಯ ಮೇಲೆ, ಯಾರದ್ದೊ ಕನಸುಗಳಲ್ಲಿ ಮುಳುಗಿಹೋಗಿದ್ದೆ. ಆದರೆ ಈಗ ನನಗೆ ವಾಸ್ತವದ ಅರಿವು ಆಗಿದೆ. ನಾನು ಸೃಜನ್‌ ರನ್ನು ಮದುವೆ ಆಗ್ತಿದ್ದೇನೆ.”

ಅಂಜಲಿಯ ಆ ಮಾತುಗಳ ಬಗ್ಗೆ ರವೀಂದ್ರರಿಗೆ ಶಾಕ್‌ ಹೊಡೆದಂತೆ ಆಯಿತು. ಅಂಜಲಿ ಇವತ್ತು ತನ್ನ ಮುಂಬರುವ ದಿನಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದಳು. ಅವಳು ಈರೆಗೆ ಯಾವುದಕ್ಕಾಗಿ ಹುಡುಕಾಟ ನಡೆಸುತ್ತಿದ್ದಳೊ, ಆ ನಿಧಿ ಇವತ್ತು ಅವಳಿಗೆ ಸಿಕ್ಕಿಬಿಟ್ಟಿತ್ತು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ