ಕಾಮಸೂತ್ರದ ಹೆಸರು ಕೇಳುತ್ತಿದ್ದಂತೆ ಏನೋ ಅಳುಕು, ಯಾವುದೋ ಸಂಕೋಚ ವಾಸ್ತವದಲ್ಲಿ 2000 ವರ್ಷಗಳಷ್ಟು ಹಳೆಯ ಈ ಗ್ರಂಥ ತಂತಾನೇ ಪರಿಪೂರ್ಣವಾಗಿದೆ. ಈ ಗ್ರಂಥ ಖುಷಿಯಿಂದ ಕೂಡಿದ ಜೀವನ ನಡೆಸುವ ವಿಧಾನವನ್ನು ತಿಳಿಸುತ್ತದೆ. ಅದೇ ರೀತಿ ಇದು ಶಕ್ತಿ, ಸಂತೃಪ್ತಿ ಮತ್ತು ಆನಂದ ಹೇಗೆ ತಂದುಕೊಡುತ್ತದೆ ಎಂಬುದರ ಬಗೆಗೂ ತಿಳಿಸುತ್ತದೆ.
ಕಾಮಸೂತ್ರದ ಉದ್ದೇಶ
ಲೈಂಗಿಕತೆಗೆ ಸಂಬಂಧಿಸಿದಂತೆ ಕೆಲವು ಭಾಗಗಳನ್ನು ಹೊರತುಪಡಿಸಿದರೆ, ಈ ಕಾಮಸೂತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೀತಿ, ನೀತಿ ಸಮಾಜದಲ್ಲಿ ನಮ್ಮ ವರ್ತನೆ, ಪೋಷಾಕು, ಅಲಂಕಾರ ಹಾಗೂ ಆಕರ್ಷಕವಾಗಿ ಕಂಡುಬರುವುದು ಹೇಗೆ ಎಂಬುದರ ಬಗ್ಗೆ ಈ ಗ್ರಂಥ ಬೆಳಕು ಚೆಲ್ಲುತ್ತದೆ. ಸುಂದರ ಹಾಗೂ ಯೋಗ್ಯ ಯುವಕ ಹೇಗಿರಬೇಕು, ಅದೇ ರೀತಿ ಗುಣವಂತ ಯುವತಿ ಎಲ್ಲರಿಗೂ ಇಷ್ಟವಾಗುವಂತಹ ಯಾವ ಯಾವ ವಿಶೇಷ ಗುಣಗಳನ್ನು ಹೊಂದಿರಬೇಕು ಎಂಬುದನ್ನು ತಿಳಿಸುತ್ತದೆ.
ಈ ಶಾಸ್ತ್ರ ತಿಳಿಸುವುದೇನೆಂದರೆ, ಜ್ಞಾನ ಪಡೆಯಲು ಹಾಗೂ ಅದನ್ನು ಅನುಸರಿಸಲು ಈ ಮಾತುಗಳನ್ನು ಕಲಿಯಬಹುದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಈ ಶಾಸ್ತ್ರದ ಬಗ್ಗೆ ಅರಿತುಕೊಂಡರೆ, ನಾಗರಿಕ ಸಮಾಜ ನಿರ್ಮಾಣವಾಗುತ್ತದೆ. ಅದು ಶಿಕ್ಷಣ, ಸಂಸ್ಕೃತಿ, ಕಲೆ, ಆನಂದ ಹಾಗೂ ಉತ್ಸವದ ಆನಂದ ಪಡೆದುಕೊಳ್ಳುತ್ತದೆ.
ಸುಖೀ ವೈವಾಹಿಕ ಜೀವನ
ವಾತ್ಸಾಯನ ಋಷಿಗಳ ಈ ಪ್ರಾಚೀನ ಗ್ರಂಥದಲ್ಲಿ ಸೃಜನಶೀಲತೆ ಹಾಗೂ ಆನಂದದ ಅನುಭವ ನೀಡುವ ಸೆಕ್ಸ್ ಕೆಟ್ಟ ಸಂಗತಿಯೇನಲ್ಲ ಎನ್ನುವುದನ್ನು ತಿಳಿಸುತ್ತದೆ. ಸಮಾಗಮದ ಸಂದರ್ಭದಲ್ಲಿ ಗಂಡ ಹೆಂಡತಿ ಪರಸ್ಪರರ ಬಗ್ಗೆ ಸಂಪೂರ್ಣ ಸಮರ್ಪಿತರಾಗಿರುತ್ತಾರೆ. ಅದರಲ್ಲಿ ದೇಹ ಹಾಗೂ ಮನಸ್ಸುಗಳ ಮಿಲನ ಆಗುತ್ತದೆ.
ಈ ಮಿಲನದಿಂದಾಗಿಯೇ ಆನಂದದ ಅನುಭವ ಹಾಗೂ ಮಕ್ಕಳ ಜನನವಾಗುತ್ತದೆ. ಕುಟುಂಬ ಬೆಳೆಯುತ್ತದೆ. ಸಂತೋಷ ಹೆಚ್ಚುತ್ತದೆ. ಪರಸ್ಪರರ ಬಗ್ಗೆ ಸಮರ್ಪಣೆ ಹಾಗೂ ನಿರಂತರ ಆನಂದ ಗಂಡ ಹೆಂಡತಿಯ ಜೊತೆ ಜೊತೆಗೆ ಕುಟುಂಬದ ಖುಷಿಗೂ ಆಧಾರವೆಂಬಂತೆ ಸಾಬೀತಾಗುತ್ತದೆ.
ಕಾಮಸೂತ್ರ ಹಿಂದೂ ಪರಂಪರೆ
ಕಾಮಸೂತ್ರದ ಮೂಲದಲ್ಲಿ ಪ್ರೀತಿ ಇರುವುದು ತಿಳಿದುಬರುತ್ತದೆ. ಹಿಂದೂ ಜೀವನಶೈಲಿಯಲ್ಲಿ ಧರ್ಮ, ಅರ್ಥ ಮತ್ತು ಮೋಕ್ಷದ ಜೊತೆಗೆ ಕಾಮಕ್ಕೂ ವಿಶೇಷ ಮಹತ್ವ ಕೊಡಲಾಗಿದೆ. ಕಾಲಾಂತರದಲ್ಲಿ ಕಾಮ ಅಂದರೆ ಸೆಕ್ಸ್ ಗೆ ದೇಶ, ಕಾಲ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಸಂಕೋಚದಿಂದ ಕಾಣಲಾಯಿತು. ಧರ್ಮ, ಅರ್ಥದ ಬಳಿಕ ಹಿಂದೂ ನಂಬಿಕೆಯಲ್ಲಿ ಕಾಮಕ್ಕೆ ವಿಶೇಷ ಸ್ಥಾನವಿದೆ. ಅಂದಹಾಗೆ ಕಾಮವೆನ್ನುವುದು ಒಂದು ಅನುಭವ. ಎಲ್ಲ ಪಂಚೇಂದ್ರಿಯಗಳಿಗೂ ಇದರಿಂದ ಆನಂದದ ಅನುಭವವಾಗುತ್ತದೆ.
ಯಾವಾಗ ತಪ್ಪೆನಿಸುತ್ತದೆ?
ಯುವಕನೊಬ್ಬ ಯುವತಿಯ ಸಹಮತಿ ಇಲ್ಲದೆ ಒತ್ತಾಯಪೂರ್ವಕವಾಗಿ ಲೈಂಗಿಕ ಚಟುವಟಿಕೆ ನಡೆಸಿದರೆ ಆಗ ಅದು ತಪ್ಪೆನಿಸುತ್ತದೆ. ಇದನ್ನು ಎಲ್ಲ ಕಡೆಯೂ ಅಪರಾಧದ ಶ್ರೇಣಿಯಲ್ಲಿ ಇರಿಸಲಾಗಿದೆ. ಅದೇ ರೀತಿ ಯಾವುದಾದರೂ ಸ್ವಾರ್ಥಕ್ಕಾಗಿ, ದ್ವೇಷ ಭಾವನೆಯಿಂದ ಸೆಕ್ಸ್ ಚಟುವಟಿಕೆ ನಡೆಸಿದಾಗ, ಆಗಲೂ ಇದರ ಸ್ವರೂಪ ಹಾಗೂ ಆನಂದ ಕೊನೆಗೊಳ್ಳುತ್ತದೆ ಅಥವಾ ಕಡಿಮೆಯಾಗುತ್ತದೆ. ಅಂದಹಾಗೆ ಸೆಕ್ಸ್ ಎನ್ನುವುದು ನಿರ್ಮಲ ಹಾಗೂ ನಿಶ್ಚಲವಾಗಿರುತ್ತದೆ. ಈ ರೂಪದಲ್ಲಿಯೇ ಅದು ಪ್ರತಿಯೊಂದು ಬಗೆಯ ಆನಂದದ ಅನುಭವ ನೀಡುತ್ತದೆ.
ಮೌಲ್ಯಗಳ ಬಗ್ಗೆ ಗಮನವಿರಲಿ
ಮೌಲ್ಯಗಳ ಹೊರತು ಸೆಕ್ಸ್ ಅಪೂರ್ಣ ಎನಿಸುತ್ತದೆ. ಈ ಮೌಲ್ಯ ಸ್ತ್ರೀ ಹಾಗೂ ಪುರುಷರ ನಡುವೆ ಇರುತ್ತದೆ. ಸಮಾಜಕ್ಕೂ ತನ್ನದೇ ಆದ ಮೌಲ್ಯವಿರುತ್ತದೆ. ಸ್ತ್ರೀಗೆ ಪುರುಷರ ಮೌಲ್ಯದ ಬಗ್ಗೆ, ಪುರುಷನಿಗೆ ಸ್ತ್ರೀಯ ಮೌಲ್ಯದ ಬಗ್ಗೆ ಹಾಗೂ ಇಬ್ಬರಿಗೂ ಸಮಾಜದ ಮೌಲ್ಯದ ಬಗ್ಗೆ ಹಾಗೂ ಇಬ್ಬರಿಗೂ ಸಮಾಜದ ಮೌಲ್ಯದ ಅರಿವು ಇರಬೇಕು. ಹೀಗೆ ಮಾಡಿದಾಗಲೇ ದೈಹಿಕ ಆನಂದದ ಜೊತೆಗೆ ಮಾನಸಿಕ ಆನಂದದ ಅನುಭವ ಕೂಡ ಉಂಟಾಗುತ್ತದೆ. ವ್ಯಕ್ತಿ ಹಾಗೂ ಸಮಾಜದ ಮೌಲ್ಯ ಅಥವಾ ಬೇರೆ ಬೇರೆ ವ್ಯಕ್ತಿಗಳು ಹಾಗೂ ಸಮಾಜಕ್ಕೆ ವಿಭಿನ್ನ ಮೌಲ್ಯಗಳಿರುತ್ತವೆ. ಅವುಗಳನ್ನು ಗೌರವಿಸಬೇಕಾಗುತ್ತದೆ.
ಗೃಹಾಲಂಕಾರವನ್ನು ಕಲಿಸುತ್ತದೆ
ಕಾಮಸೂತ್ರದಲ್ಲಿ ಗೃಹಾಲಂಕಾರ ಹಾಗೂ ಅದರ ಮಹತ್ವದ ಬಗೆಗೂ ವರ್ಣನೆ ಇದೆ. ಒಂದು ಒಳ್ಳೆಯ ಮನೆಯಲ್ಲಿ ಒಂದು ಉದ್ಯಾನ ಹಾಗೂ ಅಡುಗೆಮನೆಯ ಉದ್ಯಾನ ಅಂದರೆ ಕಿಚನ್ ಗಾರ್ಡನ್ ಮಹತ್ವ ತಿಳಿಸಲಾಗಿದೆ. ಆ ಉದ್ಯಾನಗಳ ಸೌಂದರ್ಯ ವ್ಯಕ್ತಿಯೊಬ್ಬರ ಬೆಳವಣಿಗೆ ಹಾಗೂ ಮೆದುಳಿನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕೂಡ. ಅಷ್ಟೇ ಅಲ್ಲ, ಮನೆಯಲ್ಲಿ ಅಲಂಕಾರದ ಮಹತ್ವದ ಬಗೆಗೂ ಒತ್ತಿ ಹೇಳಲಾಗಿದೆ.
ಸಂಗೀತ ಕೂಡ ಹಿತಕರ
ಕಾಮಸೂತ್ರದಲ್ಲಿ ಸಂಗೀತದ ಬಗೆಗೂ ವಿಶೇಷ ಗಮನ ಕೊಡಲಾಗಿದೆ. ವೈಯಕ್ತಿಕವಾಗಿ ಸಂಗೀತ ಒಳ್ಳೆಯದೇ ಆಗಿರುತ್ತದೆ. ಒಳ್ಳೆಯ ಕಂಠ ವಾದನ ಇತರರನ್ನು ಮಂತ್ರಮುಗ್ಧಗೊಳಿಸುತ್ತದೆ. ನೃತ್ಯ, ಗಾಯನ ಅಥವಾ ವಾದನದಿಂದ ನಿಪುಣ ಸ್ತ್ರೀ ಅಥವಾ ಪುರುಷರು ಬೇರೊಬ್ಬರ ಹೃದಯದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಬಹುದು.
ಹೀಗಾಗಿ ಪ್ರಾಚೀನ ಕಾಲದಲ್ಲಿ ರಾಜರ ಒಡ್ಡೋಲಗದಲ್ಲಿ ಸಂಗೀತ ಸಭೆಗಳನ್ನು ಆಯೋಜಿಸಲಾಗುತ್ತಿತ್ತು. ಜನರೂ ಕೂಡ ತಮ್ಮದೇ ಆದ ರೀತಿಯಲ್ಲಿ ಚಿಕ್ಕಪುಟ್ಟ ಕಾರ್ಯಕ್ರಮ ಏರ್ಪಡಿಸುತ್ತಿರುತ್ತಾರೆ. ಸಂಜೆ ಹೊತ್ತಿನ ಸಂಗೀತ ಹಾಗೂ ಮನರಂಜನೆಯ ಬಗ್ಗೆ ವಿಶೇಷ ಮಹತ್ವ ಕೊಡಲಾಗಿದೆ.
ಮಹಿಳೆಯರಿಗೆ ವಿಶೇಷ ಸ್ಥಾನ
ಕಾಮಸೂತ್ರ ಅತ್ಯಂತ ಹಳೆಯದಾದಾಗ್ಯೂ ಈಗಲೂ ಅತ್ಯಂತ ಪ್ರಸ್ತುತ ಎನಿಸುತ್ತದೆ. ಈ ಗ್ರಂಥ ಮಹಿಳೆಯರ ಖುಷಿಯ ಬಗ್ಗೆ ಹೆಚ್ಚು ಗಮನಕೊಟ್ಟಿದೆ. ಆದರ್ಶ ಮನೆಯೊಂದು ಹೇಗಿರಬೇಕೆಂದರೆ, ಅಲ್ಲಿ ಮಹಿಳೆಯರಿಗೆ ಖಾಸಗಿ ಕ್ಷಣಗಳನ್ನು ಆನಂದದಿಂದ ಅನುಭವಿಸಲು ವಿಶೇಷ ಸ್ಥಳಾವಕಾಶ ಇರಬೇಕು. ಅಲ್ಲಿ ಪತಿ, ಅಷ್ಟೇ ಏಕೆ ರಾಜ ಕೂಡ ಒಳಪ್ರವೇಶಿಸಲು ಸಂಬಂಧಪಟ್ಟ ಮಹಿಳೆಯ ಅನುಮತಿ ಪಡೆಯಬೇಕಾಗುತ್ತಿತ್ತು. ಇದು ಏಕೆಂದರೆ, ಮಹಿಳೆಯರಿಗೆ ತಮ್ಮ ಖಾಸಗಿ ಕ್ಷಣಗಳು ಸಿಗುವಂತಾಗಬೇಕು. ಆ ಅವಧಿಯಲ್ಲಿ ಯಾರ ಹಸ್ತಕ್ಷೇಪ ಇರಬಾರದು. ಅವಳು ಯಾವ ರೀತಿಯ ಅಲಂಕಾರವನ್ನೇ ಮಾಡಿಕೊಳ್ಳಲಿ, ಯಾವ ರೀತಿಯ ಪೋಷಾಕು ಧರಿಸಲಿ, ಸ್ನಾನ ಮಾಡಲಿ, ಯಾವ ಅವಸ್ಥೆಯಲ್ಲಿ ಬೇಕಾದರೂ ಇರಲಿ, ತನಗಿಷ್ಟವಾದಂತೆ ಹಾಡಲಿ, ನೃತ್ಯ ಮಾಡಲಿ ಅಥವಾ ಆಹಾರ ಸೇವಿಸಲಿ ಅವಳನ್ನು ಯಾರೂ ತಡೆಯಬಾರದು.
ದಿನಚರಿಯ ವರ್ಣನೆ
ಕಾಮಸೂತ್ರದಲ್ಲಿ ಒಳ್ಳೆಯ ದಿನಚರಿಯ ವರ್ಣನೆ ಕೂಡ ಸಿಗುತ್ತದೆ. ಇದರಲ್ಲಿ ಸ್ವಚ್ಛತೆ, ಸ್ನಾನ ಮುಂತಾದವುಗಳ ಬಳಿಕವೇ ದಿನದ ಆರಂಭ, ಆ ಬಳಿಕವೇ ರಾಜಕೀಯ ಇಲ್ಲವೇ ವ್ಯಾಪಾರದ ಕೆಲಸಗಳು ಸೇರಿವೆ. ಮಧ್ಯಾಹ್ನದ ಊಟದ ಬಳಿಕ ಕುದುರೆ ಅಥವಾ ತಮ್ಮ ಮೆಚ್ಚಿನ ಪ್ರಾಣಿಯ ಜೊತೆ ಸುತ್ತಾಟ, ಮನರಂಜನೆಯ ಇತರೆ ಸಾಧನಗಳ ಉಲ್ಲೇಖವಿದೆ. ಆ ಬಳಿಕ ಸಂಜೆ ಸ್ನಾನ ಸುಂಗಧಿತ ದ್ರವ್ಯಗಳ ಉಪಯೋಗ, ಸಂಗೀತ ಮುಂತಾದವುಗಳಲ್ಲಿ ಸಮಯ ಕಳೆಯುವುದು ಒಳ್ಳೆಯದೆಂದು ಹೇಳಲಾಗಿದೆ.
ಸ್ಪರ್ಧೆಗಳೂ ಕೂಡ ಮಹತ್ವದ್ದು
ಕಾಮಸೂತ್ರದ ಪ್ರಕಾರ, ಜೀವನವನ್ನು ಜೀವಂತವಾಗಿರಿಸಿಕೊಳ್ಳಲು ಸಂಗೀತದ ಜೊತೆಗೆ ಆಟ, ಸಾಮಾನ್ಯಜ್ಞಾನ ಹಾಗೂ ಪರಾಕ್ರಮಕ್ಕೆ ಸಂಬಂಧಪಟ್ಟ ಇತರೆ ಸ್ಪರ್ಧೆಗಳಿಗೂ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ಈ ಸ್ಪರ್ಧೆಗಳನ್ನು ನೋಡುವವರಿಗೆ ಮನರಂಜನೆಯಂತೂ ಆಗಿಯೇ ಆಗುತ್ತದೆ. ಇದರಿಂದ ವಿಜೇತರಿಗೆ ಸಮಾಜದಲ್ಲಿ ಗೌರವ ಸನ್ಮಾನಗಳೂ ಕೂಡ ಹೆಚ್ಚುತ್ತವೆ. ನವಯುವಕ ಅಥವಾ ನವಯುವತಿಯ ಖ್ಯಾತಿ ಹೆಚ್ಚುತ್ತದೆ. ಅವರ ಅಭಿಮಾನಿಗಳು ಹೆಚ್ಚುತ್ತಾರೆ.
ಸೆಕ್ಸ್ ಲೈಫ್ ನ ಉತ್ತಮ ವಿಧಾನಗಳು
ಕಾಮಸೂತ್ರದ ಎರಡನೇ ಭಾಗ ಪ್ರಾಯೋಗಿಕ ರೀತಿಯಲ್ಲಿ ಕಾಮ ಅಥವಾ ಸೆಕ್ಸ್ ಮುಖಾಂತರ ತಮ್ಮ ಸೆಕ್ಸ್ ಜೀವನವನ್ನು ಅತ್ಯುತ್ತಮಗೊಳಿಸುವ ವಿಧಿ ವಿಧಾನಗಳನ್ನು ತಿಳಿಸಲಾಗಿದೆ. ಸ್ತ್ರೀ ಪುರುಷ ಅಥವಾ ಗಂಡ ಹೆಂಡತಿ ಪರಸ್ಪರರನ್ನು ನೋಡುವ, ಸ್ಪರ್ಶಿಸುವ, ಆಕರ್ಷಿಸುವ, ಸುಗಂಧ ದ್ರವ್ಯದ ಬಳಕೆ ಮತ್ತು ನೈಸರ್ಗಿಕ ಸಂಗೀತ ಮತ್ತು ಧ್ವನಿಗಳ ನಡುವೆ ಅಂತರಂಗದ ಕ್ಷಣಗಳನ್ನು ಹೆಚ್ಚೆಚ್ಚು ಆನಂದಭರಿತಗೊಳಿಸುವ ವಿಧಾನ ತಿಳಿಸಲಾಗಿದೆ.
ದೇಗುಲಗಳ ಚಿತ್ರಗಳ ಮಹತ್ವ
ಮಧ್ಯಪ್ರದೇಶದ ಖಜುರಾಹೊ ಸಹಿತ ಹಲವು ಪ್ರಾಚೀನ ದೇಗುಲಗಳಲ್ಲಿ ವಿಭಿನ್ನ ಬಗೆಯ ಪ್ರೇಮ ಮುದ್ರೆಗಳಲ್ಲಿ ಯುವಕ ಯುವತಿಯರನ್ನು ಚಿತ್ರಿಸಲಾಗಿದೆ. ಇದು ಭಾರತೀಯ ಸಮಾಜದಲ್ಲಿ ಕಾಮದ ಕುರಿತಾದ ಆಸಕ್ತಿ ಹಾಗೂ ಸ್ವೀಕೃತಿಯನ್ನು ಬಿಂಬಿಸುತ್ತದೆ. ದೇಗುಲಗಳಲ್ಲಿ ಈ ತೆರನಾದ ಚಿತ್ರಗಳು ಪ್ರಸ್ತುತ ಸೆಕ್ಸ್ ಜೀವನದ ಮಹತ್ವದ ಭಾಗ ಎಂಬುದನ್ನು ತೋರಿಸಿಕೊಡುತ್ತದೆ. ಸಮರ್ಪಣೆ ಹಾಗೂ ಹೊಣೆಗಾರಿಕೆಯೊಂದಿಗೆ ಇದರ ನಿರ್ವಹಣೆ ಮಾಡುತ್ತಾ ಸಂಸಾರದ ಜೊತೆಗೆ ಆಧ್ಯಾತ್ಮಿಕ ಆನಂದವನ್ನು ಕೂಡ ಪಡೆದುಕೊಳ್ಳಬಹುದು.
ಸಂಗಾತಿಯ ಆಯ್ಕೆ ಹೇಗಿರಬೇಕು?
ಒಳ್ಳೆಯ ಜೀವನ ನಡೆಸುವುದರ ಬಗ್ಗೆ ಹೇಳಿದ್ದಲ್ಲದೆ, ಕಾಮಸೂತ್ರ ಒಳ್ಳೆಯ ಸಂಗಾತಿ ಆಯ್ಕೆ ಮಾಡಿಕೊಳ್ಳುವ ರೀತಿ ನೀತಿಗಳನ್ನು ತಿಳಿಸಿಕೊಡುತ್ತದೆ. ಈ ಗ್ರಂಥ ವಿಭಿನ್ನ ಸ್ವಭಾವ ಹಾಗೂ ನಡವಳಿಕೆ ಇರುವ ಸ್ತ್ರೀ ಪುರುಷರಿಗಾಗಿ ಅವರಿಗೆ ಸೂಕ್ತ ಎನಿಸುವ ಸಂಗಾತಿಯ ವಿಶೇಷತೆಗಳ ಬಗ್ಗೆ ಒತ್ತಿ ಹೇಳುತ್ತದೆ. ಇದರ ಜೊತೆಗೆ ಯುವಕ ಅಥವಾ ಯುವತಿ ಹೇಗೆ ನಡೆದುಕೊಳ್ಳಬೇಕು, ಅದರಿಂದ ತನ್ನ ಮೆಚ್ಚಿನ ಯುವಕ ಅಥವಾ ಯುವತಿಯ ಮನ ಗೆಲ್ಲಲು ಸಾಧ್ಯವಾಗಬೇಕು ಮತ್ತು ಮದುವೆಯ ಬಳಿಕ ಎಂದೆಂದಿಗೂ ಪರಸ್ಪರ ಹತ್ತಿರದವರಾಗಬೇಕು.
– ಮನೋಹರ್