ಕೀರ್ತಿಯ ಬಾಯಿಂದ ಕಠೋರ ಮಾತು ಕೇಳಿಸಿಕೊಳ್ಳುವುದು ಸಂಜಯ್‌ ಗೆ ಹೊಸ ವಿಷಯವೇನಾಗಿರಲಿಲ್ಲ. ಅವನು ಅದಕ್ಕೆ ಒಗ್ಗಿ ಹೋಗಿದ್ದ……..

ಇಂದು ಆಫೀಸಿನ ಕೆಲಸ ಬೇಗ ಮುಗಿಯುತ್ತಿದ್ದಂತೆ ಸಂಜಯ್‌ ಹೋಟೆಲ್ ‌ಗೆ ಮರಳದೆ, ಜುಹೂ ಬೀಚ್‌ ಗೆ ಹೋದ. ಅವನು ಆ ಬೀಚ್‌ ಬಗ್ಗೆ ಬಹಳಷ್ಟು ಕೇಳಿದ್ದ. ಅಷ್ಟು ಪ್ರಸಿದ್ಧ ಹೆಸರಾಗಿತ್ತು ಅದು. ಅಲ್ಲಿಗೆ ತಲುಪುತ್ತಿದ್ದಂತೆ ಅವನಿಗೆ ಒಂದು ವಿಶಿಷ್ಟ ಶಾಂತಿಯ ಅನುಭವವಾಯಿತು. ಜನದಟ್ಟಣೆಯಿಂದ ಬಹುದೂರ ಅವನು ಒಂದು ಕಡೆ ಹೋಗಿ ಕುಳಿತ. ಹೋಗಿ ಬರುವ ಅಲೆಗಳ ಚೆಲ್ಲಾಟ ಗಮನಿಸತೊಡಗಿದ. ಎಷ್ಟೊಂದು ನೆಮ್ಮದಿ, ಶಾಂತಿ ಸಿಗುತ್ತಿತ್ತು ಎನ್ನುವುದರ ಬಗ್ಗೆ ವಿವರಿಸುವುದು ಕಷ್ಟ.

ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ ಅವನನ್ನು ತಡೆಯುವವರು ಅಲ್ಲಿ ಯಾರೂ ಇರಲಿಲ್ಲ. ತಲೆಯ ಮೇಲೆ ಸವಾರಿ ಮಾಡುವವರೂ ಇರಲಿಲ್ಲ. ಅಲ್ಲಿ ಇದ್ದದ್ದು ಕೇವಲ ಅವನೊಬ್ಬನೇ ಹಾಗೂ ಅವನ ಮನಶ್ಶಾಂತಿ. ಅಲ್ಲಿಯೇ ಕೆಲವು ದಿನ ಉಳಿಯಬೇಕು ಎಂದು ಅವನಿಗೆ ಮನಸ್ಸಾಗುತ್ತಿತ್ತು. ಜೀವನವಿಡೀ ಅಲ್ಲಿಯೇ ಇದ್ದರೂ ಅವನಿಗೆ ಯಾವುದೇ ಬಾಧೆ ಇರಲಿಲ್ಲ. ಅದು ಒಳ್ಳೆಯದೇ ಅಲ್ವೇ? ಸದಾ ತನ್ನ ತಲೆಯ ಮೇಲೆ ಮೆಣಸು ಅರೆಯುವವರ ಕಾಟವಂತೂ ಇರುವುದಿಲ್ಲ. ಆದರೆ ಅದೆಲ್ಲಿ ಸಾಧ್ಯವಿತ್ತು?

ಅಂದಹಾಗೆ, ಸಂಜಯ್‌ ದೀರ್ಘ ಉಸಿರೆಳೆದುಕೊಳ್ಳುತ್ತಾ ಬರುವ ಹೋಗುವ ಜನರನ್ನು ಬೇಲ್ ‌ಪುರಿ, ಪಾನಿಪುರಿ, ಸ್ಯಾಂಡ್‌ ವಿಚ್ ತಿನ್ನುತ್ತ ಆನಂದ ಅನುಭವಿಸುವವರನ್ನು ನೋಡತೊಡಗಿದ. ಬಹಳ ಹಿತಾನುಭವ ಎನಿಸುತ್ತಿತ್ತು ಅವನಿಗೆ. ಅತ್ತ ಕಡೆ ಒಂದು ಜೋಡಿ ಜಗತ್ತಿನ ಪರಿವೆಯೇ ಇಲ್ಲದೆ ಎಳನೀರು ಕುಡಿಯುವುದರಲ್ಲಿ ಮಗ್ನರಾಗಿದ್ದರು. ಅವರು ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು, ಒಂದೇ ಸ್ಟ್ರಾನಿಂದ ಎಳನೀರು ಹೀರುವುದನ್ನು ನೋಡಿದರೆ, ಅವರು ಪರಸ್ಪರ ಅತಿಯಾಗಿ ಪ್ರೀತಿಸುತ್ತಾರೆ ಎನ್ನುವುದು ಗೊತ್ತಾಗುತ್ತಿತ್ತು. ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ಅದೇನು ಮಾತನಾಡುತ್ತಾರೊ, ಆಮೇಲೆ ಪರಸ್ಪರ ನಗುತ್ತಿದ್ದರು.

ಅದು ಒಳ್ಳೆಯದೇ ಅಲ್ವಾ? ಜನರಿಗೆ ಅದು ಗೊತ್ತೂ ಕೂಡ ಆಗುವುದಿಲ್ಲ. ಪ್ರೀತಿಸುವ ಎರಡು ಹೃದಯಗಳು ಕಣ್ಣಲ್ಲಿಯೇ ತಮಗೆ ತಾವೇ ಮಾತಾಡಿಕೊಳ್ಳುತ್ತಾ ಇರುತ್ತಾರೆ. ಮುಗುಳ್ನಗುತ್ತಾ ಸಂಜಯ್‌ ಮನಸ್ಸಿನಲ್ಲಿಯೇ ಹೇಳಿಕೊಂಡ. ಮುಖ ಸುಳ್ಳು ಹೇಳಬಹುದು, ಆದರೆ ಕಣ್ಣುಗಳು ಸುಳ್ಳು ಹೇಳುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಮಾತುಗಳನ್ನು ಸರಿಯಾಗಿ ಮತ್ತು ಆಳವಾಗಿ ತಿಳಿದುಕೊಳ್ಳಬೇಕೆಂದರೆ, ಅವನ ಮುಖವನ್ನು ಅದರಲ್ಲೂ ಕಣ್ಣುಗಳನ್ನು ಗಮನಿಸಬೇಕು. ಪ್ರೀತಿಸುವ ಎರಡು ಹೃದಯಗಳು ಪರಸ್ಪರರನ್ನು ಚೆನ್ನಾಗಿ ಅರಿತುಕೊಂಡಿದ್ದರೆ ಅವರಿಗೆ ಮಾತನಾಡುವ ಅವಶ್ಯಕತೆಯೇ ಉಂಟಾಗುವುದಿಲ್ಲ.

ಕಣ್ಣಲ್ಲಿ ಕುಣಿಯುತ್ತ, ನಲಿಯುತ್ತ, ಚಿಮ್ಮುತ್ತ ನಾವು ಕೂಡ ಹೀಗೆಯೇ ಕಣ್ಣುಗಳಲ್ಲಿಯೇ ಮಾತಾಡುತ್ತಿದ್ದೆವು. ಆದರೆ ಕೀರ್ತಿ ಈಗ ನನ್ನ ಕಣ್ಣುಗಳಲ್ಲಿ ವಿಹಂಗಮ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ. ಇಲ್ಲದಿದ್ದರೆ ಅವಳಿಗೆ ನಾನು ಈಗಲೂ ಅದೆಷ್ಟು ಪ್ರೀತಿಸುತ್ತೇನೆ ಎನ್ನುವುದು ಏಕೆ ತಿಳಿಯುವುದಿಲ್ಲ. ನಿಜ ಹೇಳಬೇಕೆಂದರೆ ಅವಳು ನನಗೆ ಪತ್ನಿಗಿಂತ ಹೆಚ್ಚಾಗಿ ಹಿಟ್ಲರ್‌ ನಂತೆ ಭಾಸವಾಗುತ್ತಾಳೆ. ಅವಳು ಯಾವಾಗ, ಯಾವ ಮಾತಿಗೆ ಉರಿದು ಬೀಳುತ್ತಾಳೆ ಎನ್ನುವುದರ ಬಗ್ಗೆ ನನಗೆ ಭಯ ಆಗುತ್ತಿರುತ್ತದೆ. ಸಣ್ಣಪುಟ್ಟ ವಿಷಯವನ್ನು ದೊಡ್ಡದಾಗಿ ಮಾಡಿ ಅವಳು ಎಷ್ಟೊಂದು ಮಾತಾಡುತ್ತಾರೆ ಎಂದರೆ ನನ್ನ ಕಿವಿಗಳು ಝುಮ್ಮೆನ್ನುತ್ತವೆ.

ಸಂಜಯ್‌ ಯೋಚನೆಯಲ್ಲಿ ಮುಳುಗಿದ್ದಾಗ ಆಕಸ್ಮಿಕವಾಗಿ ಚೆಂಡೊಂದು ಬಂದು ಅವನ ಭುಜಕ್ಕೆ ತಗುಲಿತು.

“ಅಂಕಲ್, ಪ್ಲೀಸ್‌ ಥ್ರೊ ದಿ ಬಾಲ್‌,” ದೂರ ನಿಂತ ಮಗುವೊಂದು ಅತ್ಯಂತ ಮುಗ್ಧತೆಯಿಂದ ಹೇಳಿತು. ಆಗ ಸಂಜಯ್‌ ತನ್ನ ಕಾಲಿನಿಂದ ಚೆಂಡನ್ನು ಹೇಗೆ ಚಿಮ್ಮಿಸಿದನೆಂದರೆ, ಆ ಚೆಂಡು ನೇರವಾಗಿ ಹುಡುಗನ ಹತ್ತಿರವೇ ಹೋಗಿ ಬಿತ್ತು.

ಆ ಮಗು ಚಪ್ಪಾಳೆ ತಟ್ಟುತ್ತಾ, “ಅಂಕಲ್, ಯೂ ಆರ್‌ ದಿ ಗ್ರೇಟ್‌,” ಎಂದಿತು. ಅದನ್ನು ಕೇಳಿ ಸಂಜಯ್‌ ಗೆ ನಗು ಬಂತು.

“ಅಂಕಲ್, ಜಾಯಿನ್‌ ಮಿ,” ಎಂದು ಹೇಳಿದ ಆ 10 ವರ್ಷದ ಹುಡುಗ ಬಾಲ್ ‌ನ್ನು ಸಂಜಯ್‌ ಕಡೆ ಎಸೆದ. ಸಂಜಯ್‌ ಗೂ ಉತ್ಸಾಹ ಬಂತು. ಅವನು ಆ ಹುಡುಗನ ಜೊತೆ ಸೇರಿ ಆಡತೊಡಗಿದ. ನೋಡು ನೋಡುತ್ತಿದ್ದಂತೆ ಇನ್ನೂ ಕೆಲವು ಜನರು ಅವರೊಂದಿಗೆ ಸೇರಿ ಆಡಲಾರಂಭಿಸಿದರು. ಎಲ್ಲರ ಉತ್ಸಾಹ ಅದೆಷ್ಟು ಉನ್ನತ ಮಟ್ಟದಲ್ಲಿತ್ತೆಂದರೆ, ಅದರ ಬಗ್ಗೆ ಕೇಳಲೇಬೇಡಿ.

“ಅಂಕಲ್, ಯೂ ಆರ್‌ ಸಚ್‌ ಎ ಗ್ರೇಟ್‌ ಪರ್ಸನ್‌,” ಎಂದು ಹೇಳಿ ಆ ಮಗು ಚಪ್ಪಾಳೆ ತಟ್ಟಿದಾಗ ಇತರರು ಕೂಡ ಚಪ್ಪಾಳೆ ತಟ್ಟಿದರು.

ತನ್ನ ಒಂದು ಸಣ್ಣ ಗೆಲುವಿಗಾಗಿ, ಇಂದು ಸಂಜಯ್‌ ಎಷ್ಟೊಂದು ಖುಷಿಪಟ್ಟನೆಂದರೆ, ತನ್ನ ಸಾಮರ್ಥ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಗುತ್ತಿತ್ತು. ಅಲ್ಲಿ ಯಾರೊಬ್ಬರೂ ಕೂಡ ತಮ್ಮಿಂದಾಗಿ ಆ ಗೆಲುವು ಸಿಕ್ಕಿತು ಎಂದು ಹೇಳುವವರಿರಲಿಲ್ಲ. ತನ್ನ ಕೈ ಮೇಲೆತ್ತಿ ಎಲ್ಲರಿಗೂ ಬೈ ಬೈ ಹೇಳುತ್ತಾ ಸಂಜಯ್‌ ಮುಂದೆ ಹೋದ.

`ಕಾಲೇಜಿನ ದಿನಗಳಲ್ಲಿ ನಾನು ಒಳ್ಳೆಯ ಫುಟ್ಬಾಲ್ ಆಟಗಾರನಾಗಿದ್ದೆ ಎಂಬ ವಿಷಯ ಇಲ್ಲಿನ ಯಾರೊಬ್ಬರಿಗೂ ಗೊತ್ತಿರಲಿಲ್ಲ. ನಾನು ಕಾಲೇಜಿನ ಲೀಡರ್‌ ಕೂಡ ಆಗಿದ್ದೆ. ಬಹಳಷ್ಟು ಹುಡುಗಿಯರು ಕೂಡ ನನ್ನ ಸಲಹೆ ಪಡೆದುಕೊಳ್ಳಲು ಬರುತ್ತಿದ್ದರು. ಓದಿನಲ್ಲೂ ಕೂಡ ನಾನು ಮುಂದಿದ್ದೆ. ಹಾಗಾಗಿ ನಾನು ಕಾಲೇಜಿನ ಪ್ರಿನ್ಸಿಪಾಲ್ ರಿಗೂ ಫೇವರಿಟ್‌ ಆಗಿದ್ದೆ. ಆದರೆ ಕಾಲಕ್ಕೆ ತಕ್ಕಂತೆ ಎಲ್ಲದರ ಮೇಲೂ ಧೂಳು ಮೆತ್ತಿಕೊಂಡಿತು. ಇಂದು ಅದೇ ಹಳೆಯ ಉತ್ಸಾಹ ಕಂಡು ನನ್ನಲ್ಲಿ ಅದೆಷ್ಟು ಸ್ಛೂರ್ತಿ ಬಂದಿದೆ ಎಂದು ನಾನಷ್ಟೇ ಊಹಿಸಿಕೊಳ್ಳಲು ಸಾಧ್ಯ. ನಾನು ಅತ್ಯುತ್ತಮ ಆಟಗಾರನಷ್ಟೇ ಅಲ್ಲ, ಸ್ವತಂತ್ರ ಪ್ರವೃತ್ತಿಯ ವ್ಯಕ್ತಿ ಎಂಬುದನ್ನು ನಾನು ಹೇಗೆ ಮರೆತೆ?’ ಎಂದು ಗಾಢ ಉಸಿರೆಳೆದುಕೊಳ್ಳುತ್ತಾ ಸಂಜಯ್‌ ಅತ್ತಿತ್ತ ನೋಡತೊಡಗಿದ. ಜನರು ಹೊರಟು ಹೋಗುತ್ತಿದ್ದರು. ಆದರೆ ಅವನು ಇನ್ನಷ್ಟು ಹೊತ್ತು ಅಲ್ಲಿಯೇ ಇರಲು ಯೋಚಿಸುತ್ತಿದ್ದ. ಏಕೆಂದರೆ ಅವನಿಗೆ ಇಲ್ಲಿ ಶಾಂತಿಯ ಅನುಭವ ಆಗುತ್ತಿತ್ತು.

ಮುಂಬೈನ ಸಮುದ್ರ ದಂಡೆಯ ಮೇಲೆ ಕುಳಿತು ಅವನು ಮರಳಿನ ಮೇಲೆ ಅತ್ತಿತ್ತ ಗೆರೆ ಎಳೆಯುತ್ತಾ ಯೋಚಿಸತೊಡಗಿದ. ಮೊದಲು ನಮ್ಮಿಬ್ಬರ ನಡುವೆ ಅದೆಷ್ಟು ಪ್ರೀತಿ ಇತ್ತು. ಎರಡು ದೇಹ ಒಂದೇ ಜೀವ ಎಂಬಂತಿದ್ದೆವು. ಆದರೆ ಇವತ್ತು ಅದೆಷ್ಟು ಬದಲಾಗಿ ಹೋಗಿದೆ. ಕೀರ್ತಿಯ ದೃಷ್ಟಿಯಲ್ಲಿ ನಾನು ಮೂರ್ಖ ವ್ಯಕ್ತಿ. ಯಾವುದೇ ಕೆಲಸಕ್ಕೆ ಬಾರದವು. ಇಂದು ನಾನು ಮತ್ತು ಕೀರ್ತಿ ಒಂದಾಗದೇ ಹೋಗಿದ್ದರೆ, ನಿನ್ನ ಬಗೆಗಿನ ಜನರ ದೃಷ್ಟಿ ಬೇರೆಯದೇ ಆಗಿರುತ್ತಿತ್ತು ಎಂದು ಮನಸ್ಸಿನಲ್ಲಿ ಯೋಚಿಸುತ್ತ ಸಂಜಯ್‌ ಆಕಾಶದತ್ತ ನೋಡಿದ.

ಕೀರ್ತಿ ಮತ್ತು ಸಂಜಯ್‌ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಜಯ್‌ ಮೊದಲ ಬಾರಿ ಕೀರ್ತಿಯನ್ನು ಕಂಪನಿಯ ಮೀಟಿಂಗ್‌ ನಲ್ಲಿ ನೋಡಿದಾಗ, ಅವಳತ್ತ ನೋಡುತ್ತಲೇ ಉಳಿದುಬಿಟ್ಟ. ಹಾಲಿನಂತಹ ರೂಪ, ಉದ್ದನೆಯ ಕಾಯ, ದೊಡ್ಡ ದೊಡ್ಡ ಕಣ್ಣುಗಳು, ಇಳಿಬಿಟ್ಟ ಕೂದಲು ಹಾಗೂ ಮಾತಿನ ವೈಖರಿಯ ಬಗ್ಗೆ ಅವನು ಮನಸೋತಿದ್ದ.

ಕೀರ್ತಿ ಕೂಡ ಸಂಜಯ್‌ ನ ದಷ್ಟಪುಷ್ಟ ದೇಹ, ಗುಂಗುರು ಕೂದಲು ಹಾಗೂ ಅವನ ನಯವಿನಯದ ಮಾತುಗಳ ಬಗ್ಗೆ ಮೋಹಿತಳಾಗಿದ್ದಳು. ಕೆಲವೇ ತಿಂಗಳುಗಳಲ್ಲಿ ಅವರ ಸ್ನೇಹ ಅದೆಂಥ ಮಟ್ಟಕ್ಕೆ ಹೋಗಿ ನಿಂತಿತೆಂದರೆ, ಒಂದು ದಿನ ಭೇಟಿ ಆಗದೇ ಇರಲು ಆಗುತ್ತಿರಲಿಲ್ಲ. ಆಫೀಸ್‌ ಅವಧಿಯ ಬಳಿಕ ಅವರು ವಾಟ್ಸ್ ಆ್ಯಪ್‌ ನಲ್ಲಿ ಚಾಟಿಂಗ್‌ ಜೊತೆಗೆ ಫೋನ್‌ ನಲ್ಲೂ ಮಾತನಾಡುತ್ತಿದ್ದರು. ಇದರ ಜೊತೆಗೆ ಸುತ್ತಾಡಿ, ಸಿನಿಮಾ ನೋಡಲು ಹೋಗುವುದು, ರಜೆಯ ದಿನಗಳಲ್ಲಿ ಹಿಲ್ ‌ಸ್ಟೇಷನ್‌ ಗಳಿಗೆ ಭೇಟಿ ಕೊಡುವುದು ಮಾಡುತ್ತಿದ್ದರು. ಕೆಲವೊಮ್ಮೆ ಸಂಜಯ್‌ ಅವಳಿಗೆ ದುಬಾರಿ ಉಡುಗೊರೆಗಳನ್ನು ತಂದುಕೊಡುತ್ತಿದ್ದ. ಕೀರ್ತಿ ಕೂಡ ಅವನಿಗೆ ಇಷ್ಟವಾಗುವಂತಹ ಗಿಫ್ಟ್ ಕೊಡುತ್ತಿದ್ದಳು.

ಜಗತ್ತಿನ ಪರಿವೆಯೇ ಇಲ್ಲದೆ ಇಬ್ಬರೂ ಪರಸ್ಪರರಲ್ಲಿ ಕಳೆದುಹೋಗುತ್ತಿದ್ದರು. ತಾವು ಪರಸ್ಪರರಿಗಾಗಿಯೇ ಹುಟ್ಟಿದ್ದೇವೆ. ಜನ್ಮ ಜನ್ಮಾಂತರಗಳಿಗೂ ತಾವು ಬೇರೆ ಬೇರೆ ಆಗುವುದಿಲ್ಲ ಎಂದು ಅವರ ಮನಸ್ಸು ಒತ್ತಿ ಹೇಳುತ್ತಿತ್ತು. ತಾವು ಎಷ್ಟೊಂದು ಒಳ್ಳೆಯ ಹಾಗೂ ಪ್ರೀತಿ ಪಾತ್ರ ಜೀವನ ಸಂಗಾತಿಗಳಾಗಬಹುದೆಂದರೆ, ತಾವು ಇಡೀ ಜೀವನವನ್ನು ಖುಷಿಯಿಂದ ಕಳೆಯಬಹುದು ಎಂದು ಅವನಿಗೆ ಅನಿಸುತ್ತಿತ್ತು. ಕೀರ್ತಿ ಸಂಜಯ್‌ ನ ಮೇಲೆ ಹಕ್ಕಿನಿಂದ ಆರ್ಡರ್‌ ಮೇಲೆ ಆರ್ಡರ್‌ ಕೊಡುತ್ತಿದ್ದರೆ, ಸಂಜಯ್‌ ನಗುನಗುತ್ತಲೇ ಅವಳ ನಖರಾಗಳನ್ನು ಸಹಜವಾಗಿ ಸ್ವೀಕರಿಸುತ್ತಿದ್ದ.

“ಇಲ್ಲ ಸಂಜಯ್‌, ನನಗೆ ಶಾರೂಖ್‌ ಸಿನಿಮಾನೇ ನೋಡಬೇಕು. ಇಲ್ಲದಿದ್ದರೆ ನಾನು ಸಿನಿಮಾಕ್ಕೆ ಬರುವುದೇ ಇಲ್ಲ. ಬೇಕಾದರೆ ನೀನೊಬ್ಬನೇ ಹೋಗಿ ಕನ್ನಡ ಸಿನಿಮಾ ನೋಡಿ ಬಾ,” ಎಂದು ಮೂಗು ಸಿಂಡರಿಸುತ್ತಾ ಹೇಳುತ್ತಿದ್ದಳು.

“ನೀವು ಹುಡುಗಿಯರು ಇದ್ದೀರಲ್ಲ…. ಸಿನಿಮಾ ಒಳ್ಳೆಯದಿರಲಿ, ಕೆಟ್ಟದ್ದಿರಲಿ ಹೋಗಲೇಬೇಕು. ಶಾರೂಖ್‌ ಗಿಂತ ನಾನೇನು ಕಮ್ಮಿಯಿದ್ದೇನೇ ಹೇಳು,” ಎಂದು ಅವಳತ್ತ ನೋಡುತ್ತಾ ನಕ್ಕ.

ಅವನ ಡೈಲಾಗ್‌ ಕೇಳಿ ಕೀರ್ತಿ ಕೂಡ ನಕ್ಕುಬಿಟ್ಟಳು.

“ಇರಲಿ ಬಿಡಿ, ಇರಲಿ. ನನ್ನ ಶಾರೂಖ್‌ ಗೂ ನಿಮಗೂ ಹೋಲಿಕೆ ಮಾಡಲು ಆಗುವುದೇ ಇಲ್ಲ.”

ಆ ಮಾತಿಗೆ ಕೀರ್ತಿಯನ್ನು ತಬ್ಬಿಕೊಳ್ಳುತ್ತ ಸಂಜಯ್‌ ಹೇಳಿದ, “ಆ `ಡರ್‌’ ಸಿನಿಮಾದಲ್ಲಿ ಶಾರೂಖ್‌ ಕಿರಣ್‌ ಬಗ್ಗೆ ಪ್ರೀತಿ ಇಟ್ಟುಕೊಂಡ ಹಾಗೆ ನಾನು ಕೂಡ ನಿನ್ನ ಬಗ್ಗೆ ಪ್ರೀತಿ ಹೊಂದಿದ್ದೇನೆ,” ಎಂದು ಹೇಳಿದ.

ಹೌದೌದು, ನಿಮ್ಮ ಮಾತಿನಲ್ಲಿ ದಮ್ ಇದೆ ಎಂದು ಹೇಳುತ್ತಾ ಅವನ ಹಣೆಯ ಮೇಲೆ ಚುಂಬನದ ಮೊಹರು ಒತ್ತಿದಳು.

ಸಿನಿಮಾ ಹಾಲ್ ‌ನಿಂದ ಹೊರಬರುತ್ತಾ ಸಂಜಯ್‌, “ನನಗೆ ಸಿನಿಮಾ ಒಂದಷ್ಟು ಹಿಡಿಸಲಿಲ್ಲ,” ಎಂದು ಮುಖ ಸಿಂಡರಿಸುತ್ತಾ ಹೇಳಿದ.

“ನನಗೂ ಹಾಗೆ ಅನಿಸಿತು. ಆದರೆ ಅದರಲ್ಲಿ ಶಾರೂಖ್‌ ಇದ್ದನಲ್ಲ,” ಎಂದು ಹೇಳುತ್ತಾ ಕೀರ್ತಿ ನಕ್ಕಾಗ, ಸಂಜಯ್‌ ಅವಳ ಕಡೆಯೇ ನೋಡುತ್ತಿದ್ದ. ನಗುತ್ತಿರುವಾಗ ಕೀರ್ತಿಯ ಎಡಗೆನ್ನೆಯ ಮೇಲೆ ಕಂಡು ಬಂದ ಗುಳಿ ನೋಡಿ ಅವನು ಬೆರಗಾಗಿ ಹೋದ. ಮುಂಚೆಯೂ ಅವನು ಇದೇ ಕಾರಣದಿಂದ ಅವಳ ಬಗ್ಗೆ ಬಹಳ ಮೋಹಿತನಾಗುತ್ತಿದ್ದ.

ಸಂಜಯ್‌ ನ ಕೆಲವು ಅಭ್ಯಾಸಗಳ ಬಗ್ಗೆ ಕೀರ್ತಿ ಮುಖ ಸಿಂಡರಿಸುತ್ತ ಅವನ ಬಗ್ಗೆ, “ನಮ್ಮ ಮದುವೆಯಂತೂ ಆಗಲಿ. ಆ ಬಳಿಕ ನೋಡಿ ನಾನು ಹೇಗೆ ನಿಮ್ಮ ಲೈಫ್‌ ಕೋಚ್‌ ಆಗ್ತೀನೀಂತ. ಹೇಗ್ಹೇಗೆ ಇರಬೇಕು ಅಂತ ಕಲಿಸ್ತೀನಿ ನಿಮಗೆ,” ಎಂದು ಸಿಡುಕುತ್ತಲೇ ಹೇಳುತ್ತಿದ್ದಳು.

ಅವಳ ಮಾತುಗಳಿಗೆ ಸಂಜಯ್‌ ನಗುತ್ತಾ, “ಇಷ್ಟೊಂದು ಸುಂದರ ಲೈಫ್‌ ಕೋಚ್‌ ಯಾರಿಗೆ ಬೇಕಿಲ್ಲ ಹೇಳು. ನನ್ನ ಜೀವನ ಯಶಸ್ವಿಯಾಗುತ್ತದೆ,” ಎಂದು ಹೇಳಿದ.

ಕೀರ್ತಿ ಈ ರೀತಿ ನಿರ್ಬಂಧ ಹಾಕುವುದು ತರಾಟೆಗೆ ತೆಗೆದುಕೊಳ್ಳುವುದು ಅವನಿಗೆ ಬಹಳ ಇಷ್ಟವಾಗುತ್ತಿತ್ತು. ಅವಳು ತನ್ನನ್ನು ಅತಿಯಾಗಿ ಪ್ರೀತಿಸುತ್ತಾಳೆ. ಅದೇ ಕಾರಣದಿಂದ ಅವಳು ತನ್ನನ್ನು ಹೀಗೆ ನಿರ್ಬಂಧಿಸುವುದು ತರಾಟೆಗೆ ತೆಗೆದುಕೊಳ್ಳುವುದು ಮಾಡುತ್ತಾಳೆ ಎಂದು ಭಾವಿಸುತ್ತಿದ್ದ.

“ಹೌದು. ನಿಮ್ಮ ಜೀವನ ಬಹುಬೇಗ ಯಶಸ್ವಿಯಾಗುತ್ತದೆ. ಈಗ ನಡೆಯಿರಿ,” ಎಂದು ನಗುತ್ತಾ ಸಂಜಯ್‌ ನ ಪಕ್ಕದ ಸೀಟಿನಲ್ಲಿ  ಕುಳಿತುಕೊಳ್ಳುತ್ತಾ ಕೀರ್ತಿ, “ಹೀಗೇಕೆ ನೋಡುತ್ತಿರುವಿರಿ? ನಿಮ್ಮ ಮೇಲೆ ನನಗೆ ಯಾವುದೇ ಹಕ್ಕು ಇಲ್ಲವೇ?” ಕೇಳಿದಳು.

ಅವಳ ಮಾತಿಗೆ ಸಂಜಯ್‌, “ಹೌದೌದು. ಸಂಪೂರ್ಣ ಹಕ್ಕು ಇದೆ,” ಎಂದು ಹೇಳುತ್ತಾ ಅವಳ ಕೆನ್ನೆಗೆ ಮುತ್ತಿನ ಮೊಹರು ಒತ್ತಿದ.

2 ರ್ಷಗಳ ಪ್ರೀತಿಯ ರಿಲೇಶನ್‌ ಶಿಪ್‌ ಬಳಿಕ ತಮ್ಮ ತಾಯಿ ತಂದೆಯರ ಆಶೀರ್ವಾದ ಪಡೆದು ಇಬ್ಬರೂ ವಿವಾಹ ಬಂಧನಕ್ಕೆ ಒಳಗಾದರು. ಆ ಬಳಿಕ ಅವರಿಗೆ ಜೀವನ ಹೇಗೆ ಅನಿಸತೊಡಗಿತೆಂದರೆ, ಸಪ್ತವರ್ಣದ ಆಕಾಶದಡಿ ಕೇವಲ ರೊಮ್ಯಾನ್ಸ್ ಮಾತ್ರ ಇದೆ ಎಂದೆನಿಸತೊಡಗಿತ್ತು.

ಮದುವೆಯ 1 ವರ್ಷದ ಬಳಿಕ ಪ್ರಣೀತಾ ಅವರ ಜೀವನದಲ್ಲಿ ಪ್ರವೇಶಿಸಿದಳು. ಕೆಲವು ತಿಂಗಳುಗಳ ಬಳಿಕ ಅಜ್ಜಿ ತಾತ ಮೊಮ್ಮಗಳನ್ನು ಸಂಭಾಳಿಸಿದರು. ಆದರೆ ಆ ಬಳಿಕ ಅವರು ಊರಿಗೆ ಹೊರಟು ಹೋದರು. ಮಗಳ ಒಳ್ಳೆಯ ಬೆಳವಣಿಗೆಗೆ ಶಿಕ್ಷಣದ ಅಗತ್ಯ ಗಮನಿಸಿ ಕೀರ್ತಿ ತನ್ನ ನೌಕರಿಗೆ ರಾಜೀನಾಮೆ ಕೊಟ್ಟಳು. ಮಗಳು ದೊಡ್ಡವಳಾದ ಬಳಿಕ ಮತ್ತೆ ನೌಕರಿ ಮಾಡಬಹುದೆಂದು ಕೀರ್ತಿ ಯೋಚಿಸಿದಳು.

ಆದರೆ ಅದು ಹಾಗಾಗಲೇ ಇಲ್ಲ. ಏಕೆಂದರೆ ಪ್ರಣೀತಾ ಯಾವಾಗಲೂ ಅನಾರೋಗ್ಯದಿಂದ ಇರುತ್ತಿದ್ದಳು. ಅವಳು ಹುಟ್ಟಿನಿಂದಲೇ ದುರ್ಬಲ ದೇಹ ಹೊಂದಿದ್ದಳು. ವೈದ್ಯರ ಪ್ರಕಾರ, ಅವಳಿಗೆ 24 ಗಂಟೆಯೂ ಯಾರಾದರೊಬ್ಬರ ಉಸ್ತುವಾರಿ ಬೇಕೇ ಬೇಕಾಗುತ್ತದೆ. ಅದೇ ಕಾರಣದಿಂದ ಕೀರ್ತಿ ಮಗಳಿಗಾಗಿ ತನ್ನ ನೌಕರಿಯನ್ನು ತ್ಯಜಿಸಿದಳು.

ಕ್ರಮೇಣ ಪ್ರಣೀತಾಳ ಆರೋಗ್ಯ ಸುಧಾರಿಸುತ್ತಾ ಹೊರಟಿತ್ತು. ಆದರೆ ಕೀರ್ತಿಗೆ ಮಾತ್ರ ಪುನಃ ನೌಕರಿ ಮಾಡಲೇಬೇಕೆಂಬ ಆಸಕ್ತಿ, ಹುಮ್ಮಸ್ಸು ಬರಲಿಲ್ಲ. ಏಕೆಂದರೆ ಅವಳು ತನ್ನೆಲ್ಲ ಸಮಯವನ್ನೂ ಕುಟುಂಬಕ್ಕಾಗಿ ಮೀಸಲಿಡಬೇಕೆಂದು ನಿರ್ಧರಿಸಿದ್ದಳು.

ಸಂಜಯ್‌ ಆಫೀಸಿನ ಜೊತೆ ಜೊತೆಗೆ ಹೊರಗಿನ ಕೆಲಸ ಕಾರ್ಯಗಳನ್ನು ಕೂಡ ನಿರ್ವಹಿಸುತ್ತಿದ್ದ. ಕೀರ್ತಿ ಮನೆಯ ಜೊತೆಗೆ ತನ್ನ ಮಗಳ ಆರೋಗ್ಯದ ಬಗೆಗೂ ಗಮನ ಹರಿಸುತ್ತಿದ್ದಳು. ಅಂದಹಾಗೆ, ಕೀರ್ತಿಗೆ ಆರಂಭದಿಂದಲೇ ಪ್ರತಿಮಾತಿಗೂ ಎದುರು ಮಾತಾಡುವುದು ರೂಢಿಯಾಗಿತ್ತು. ಅದನ್ನು ಸಂಜಯ್‌ ಕೆಟ್ಟದೆಂದು ಭಾವಿಸುತ್ತಿರಲಿಲ್ಲ. ಆದರೆ ಪ್ರಣೀತಾಳ ಜನನದ ಬಳಿಕ ಅದೆಲ್ಲ ಹೆಚ್ಚುತ್ತಲೇ ಹೋಯಿತು. ಕೀರ್ತಿಯ ಮತ್ತೊಂದು ರೂಪ ಅವನ ಮುಂದೆ ಅನಾವರಣವಾಗುತ್ತಾ ಹೊರಟಿತ್ತು. ಮಾತು ಮಾತಿಗೆ ಅವಳು ಅವನನ್ನು ಹೇಗೆ ಝಾಡಿಸಿಬಿಡುತ್ತಿದ್ದಳೆಂದರೆ, ಎಲ್ಲರೆದುರು ಅವಮಾನ ಮಾಡುತ್ತಿದ್ದಳು. ಅವನು ತಂದ ಯಾವುದೇ ವಸ್ತುಗಳಲ್ಲಿ ಅವಳು ಏನಾದರೊಂದು ಲೋಪ ಎತ್ತುತ್ತಿದ್ದಳು. ಜಾಸ್ತಿ ಕೋಪ ಬಂದಾಗ ಅವಳು ಆ ವಸ್ತುವನ್ನೇ ಎತ್ತಿ ಬಿಸಾಡುತ್ತಿದ್ದಳು.

ಆದಾಗ್ಯೂ ಸಂಜಯ್‌ ಅವಳ ಯಾವ ಮಾತಿಗೂ ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಅವಳು ಶಾಂತಳಾದಾಗ, ಅವಳಿಗೆ ತನ್ನ ತಪ್ಪಿನ ಅರಿವಾಗಬಹುದೆಂದು ಅವನು ಯೋಚಿಸುತ್ತಿದ್ದ. ಆದರೆ ಸಂಜಯ್‌ ನ ಯೋಚನೆ ತಪ್ಪಾಗಿತ್ತು. ಏಕೆಂದರೆ ಕೀರ್ತಿಗೆ ತನ್ನ ತಪ್ಪಿನ ಅರಿವಾಗಲೇ ಇಲ್ಲ. ತನ್ನದೇ ಸರಿ, ಉಳಿದವರದ್ದೇ ತಪ್ಪು ಎಂದು ಅವಳು ಯೋಚಿಸುತ್ತಿದ್ದಳು.

ದಿನದಿಂದ ದಿನಕ್ಕೆ ಕೀರ್ತಿಯ ವರ್ತನೆ ಪತಿ ಹಾಗೂ ಮಗಳ ವಿರುದ್ಧ ಕಠೋರವಾಗುತ್ತಾ ಹೋಯಿತು. ಯಾವುದಾದರೊಂದು ಮಾತಿಗೆ ಅವಳು ಮನೆಯಲ್ಲಿ ವಿವಾದ ಎಬ್ಬಿಸಿಬಿಡುತ್ತಿದ್ದಳು. ತನ್ನ ತಪ್ಪಿಲ್ಲದಿದ್ದರೂ ಸಂಜಯ್‌ ನೇ ಕೇಳಬೇಕಾಗಿ ಬರುತ್ತಿತ್ತು. ಏಕೆಂದರೆ ಮನೆಯಲ್ಲಿ ಶಾಂತಿ ನೆಲೆಸಬೇಕಿತ್ತು.

ಸಂಜಯ್‌ ಗೆ ಮನೆಯಲ್ಲಿ ಚಪ್ಪಲಿ ಧರಿಸಿ ಅಡ್ಡಾಡುವುದು ಎಳ್ಳಷ್ಟೂ ಇಷ್ಟವಾಗುತ್ತಿರಲಿಲ್ಲ. ಆದರೆ ಅವನು ಧರಿಸಲೇಬೇಕಾಗುತ್ತಿತ್ತು. ಏಕೆಂದರೆ ಕೀರ್ತಿ ಚಪ್ಪಲಿ ಧರಿಸಿಯೇ ಓಡಾಡಬೇಕೆಂದು ಹೇಳುತ್ತಿದ್ದಳು. ಊಟ ಮಾಡುವಾಗ ಬಾಯಿಯಿಂದ ಧ್ವನಿ ಹೊರಡಿಸಬಾರದು, ಆಫೀಸಿನಿಂದ ಬಂದ ಬಳಿಕ ಚಪ್ಪಲಿಗಳನ್ನು, ಬಟ್ಟೆಗಳನ್ನು ಸ್ವಸ್ಥಾನದಲ್ಲಿ ಇಡಲೇಬೇಕೆಂದು, ಬೇರೆಯವರು ಬಂದಾಗ ಎಷ್ಟು ಮಾತಾಡಬೇಕೋ, ಅಷ್ಟೇ ಮಾತಾಡಬೇಕು, ಸಂಬಂಧಿಕರು ಯಾರಾದರೂ ಮನೆಗೆ ಬರುವವರಿದ್ದರೆ, ಅದಕ್ಕೆ ಹೆಂಡತಿಯ ಅನುಮತಿ ಪಡೆಯಬೇಕಿತ್ತು.

ಸ್ವಚ್ಛತೆಯ ಬಾಬತ್ತಿನಲ್ಲಂತೂ ಅವಳು ಬಹಳ ಕಟ್ಟುನಿಟ್ಟು. ಕೊಳಕು ಕಾಲಿನಲ್ಲಿ ಯಾರೊಬ್ಬರೂ ಹಾಸಿಗೆಯ ಮೇಲೆ ಹೆಜ್ಜೆ ಇಡುವಂತಿರಲಿಲ್ಲ. ಯಾರಾದರೂ ಆ ತಪ್ಪು ಮಾಡಿದರೆ ಅವರನ್ನು ಅಷ್ಟು ಸುಲಭವಾಗಿ ಕ್ಷಮಿಸುತ್ತಿರಲಿಲ್ಲ.

ಆಫೀಸಿನಿಂದ ಬಂದಾಗ ಸಂಜಯ್‌ ಹೆಂಡತಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಿ ರೊಮ್ಯಾಂಟಿಕ್‌ ಮೂಡ್‌ ನಲ್ಲಿ ಅವಳನ್ನು ಹಿಂದಿನಿಂದ ತಬ್ಬಿಕೊಳ್ಳುತ್ತಿದ್ದ. ಆಗ ಕೀರ್ತಿ ಅವನನ್ನು ಜೋರಾಗಿ ತಳ್ಳುತ್ತಾ, “ದೂರ ಸರಿಯಿರಿ. ಮೊದಲು ನೀವು ಫ್ರೆಶ್‌ ಆಗಿ ಬನ್ನಿ. ಅಲ್ಲಿಯವರೆಗೆ ನಾನು ಊಟಕ್ಕೆ ಸಿದ್ಧ ಮಾಡ್ತೀನಿ,” ಎನ್ನುತ್ತಿದ್ದಳು.

ಅವಳ ಈ ರೀತಿಯ ವರ್ತನೆಯಿಂದ ಸಂಜಯ್‌ ನ ರೊಮ್ಯಾಂಟಿಕ್‌ ಮೂಡ್‌ ಠುಸ್‌ ಆಗುತ್ತಿತ್ತು. ಆ ಬಳಿಕ ಅವನಿಗೆ ಕೀರ್ತಿಯ ಸನಿಹ ಹೋಗುವ ಮನಸ್ಸೇ ಬರುತ್ತಿರಲಿಲ್ಲ. ಬಾಥ್‌ ರೂಮಿನಿಂದ ಒದ್ದೆ ಟವೆಲ್ ‌ನ್ನು ಹಾಗೆ ಎಸೆದದ್ದಕ್ಕೆ, ವಸ್ತುಗಳನ್ನು ಸರಿಯಾಗಿ ಇಡದದ್ದಕ್ಕೆ, ಮತ್ತೆ ಕೆಲವೊಮ್ಮೆ ಮಾರ್ಕೆಟ್‌ ನಿಂದ ತರಕಾರಿ ಹಣ್ಣು ತಂದ ಬಗ್ಗೆ ಕೀರ್ತಿ ಅವನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. ಸಂಜಯ್‌ ನ ತೂಕ ಇತ್ತೀಚೆಗೆ ಹೆಚ್ಚಾಗುತ್ತಿರುವ ಬಗ್ಗೆಯೂ ಅವಳು ಆಕ್ಷೇಪ ಎತ್ತುತ್ತಿದ್ದಳು. ಆ ಕಾರಣದಿಂದ ಅವಳು ಅವನಿಗೆ ಡಯೆಟ್‌ ಫುಡ್‌ ಅಂದರೆ ಎಣ್ಣೆ ಮಸಾಲೆ ಕಡಿಮೆಯಿರುವ ಆಹಾರ ಸಿದ್ಧಪಡಿಸಿ ಬಡಿಸುತ್ತಿದ್ದಳು.

ಸಂಜಯ್‌ ಗೆ ಗ್ರೀನ್‌ ಟೀ ಕುಡಿಯುವುದು ಎಳ್ಳಷ್ಟೂ ಇಷ್ಟವಿರಲಿಲ್ಲ. ಆದರೆ ಅವನಿಗೆ ಕುಡಿಯಲೇಬೇಕಾಗಿ ಬರುತ್ತಿತ್ತು. 2-3 ದಿನಗಳಿಗೊಮ್ಮೆಯಾದರೂ ನಾನ್‌ ವೆಜ್‌ ತಿನ್ನುತ್ತಿದ್ದ ಸಂಜಯ್‌ ಗೆ ಈಗ ಅವೆಲ್ಲ ನಿಷಿದ್ಧ ಆಹಾರಗಳಾಗಿಬಿಟ್ಟಿದ್ದವು. ನೀನು ಬೇಡವೆಂದರೆ ನಾನು ತಿನ್ನುವುದನ್ನೇ ಬಿಟ್ಟುಬಿಡುತ್ತೇನೆ ಎಂದು ಹೇಳುತ್ತಿದ್ದ. ಏಕೆಂದರೆ ಅವಳು ಶಾಂತವಾಗಿದ್ದರೆ ಸಾಕು ಎಂದು ಅವನು ಬಯಸುತ್ತಿದ್ದ. ಮೊದ ಮೊದಲು ಬಿಂದಾಸ್‌ ಆಗಿ ಇರುತ್ತಿದ್ದ ಸಂಜಯ್‌ ಈಗೀಗ ಮನಸ್ಸಲ್ಲೇ ಕೊರಗುವಂತಾಗಿತ್ತು.

ಕೀರ್ತಿಯ ಹಿಟ್ಲರ್‌ ಗಿರಿಯ ವರ್ತನೆಯಿಂದ ಸಂಜಯ್‌ ಗೆ ಮನೆಯೇ ಜೈಲಿನಂತಾಗಿಬಿಟ್ಟಿತ್ತು. ಹಾಗಾಗಿ ಅವನು ಹೊರಗೆ ಹೋಗಿಬಿಡುತ್ತಿದ್ದ. ತಾನು ಕೀರ್ತಿಯ ಸೂತ್ರದ ಬೊಂಬೆಯಾಗಿಬಿಟ್ಟಿದ್ದೇನೆಂದು ಅವನಿಗೆ ತನ್ನ ಬಗ್ಗೆಯೇ ಹೇಸಿಗೆ ಎನಿಸುತ್ತಿತ್ತು. ಅತ್ತ 11 ವರ್ಷದ ಮಗಳು ಪ್ರಣೀತಾ ಕೂಡ ಅಮ್ಮನಿಂದಾಗಿ ಭಯಭೀತಳಾಗಿ ಇರುತ್ತಿದ್ದಳು. ಅವಳು ಎಷ್ಟು ಗಂಟೆ ಟಿವಿ ನೋಡಬೇಕು, ಯಾರು ಯಾರ ಜೊತೆ ಆಟ ಆಡಬೇಕು ಎಂಬುದನ್ನು ಕೀರ್ತಿಯೇ ನಿರ್ಧರಿಸುತ್ತಿದ್ದಳು.

ಪ್ರಣೀತಾ ಯಾವುದಾದರೂ ತಪ್ಪು ಮಾಡಿದರೂ ಸಾಕು ಅವಳಿಗೆ ಶಿಕ್ಷೆ ಕೊಡುತ್ತಿದ್ದಳು. ತಾನು ಶಿಕ್ಷೆ ಕೊಡುವುದರಿಂದ ಅವಳು ಮತ್ತೊಮ್ಮೆ ತಪ್ಪು ಮಾಡುವುದಿಲ್ಲ ಎನ್ನುವುದು ಕೀರ್ತಿಯ ಯೋಚನೆಯಾಗಿತ್ತು. ಆದರೆ ಅವಳ ಮುಗ್ಧ ಮನಸ್ಸಿನ ಮೇಲೆ ತನ್ನ ಶಿಕ್ಷೆ ದುಷ್ಪರಿಣಾಮ ಬೀರುತ್ತದೆ ಎನ್ನುವುದರ ಅರಿವು ಮಾತ್ರ ಅವಳಿಗೆ ಇದ್ದಂತಿರಲಿಲ್ಲ. ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಿದರೆ, ಅದು ಅವರ ಮೆದುಳಿನ ಕಾರ್ಯವೈಖರಿಯನ್ನೇ ಬದಲಿಸಿಬಿಡುತ್ತದೆ ಎಂಬ ಸಂಶೋಧನೆಗಳ ಮಾಹಿತಿ ಬಹುಶಃ ಕೀರ್ತಿಗೆ ಗೊತ್ತಿರಲಿಲ್ಲವೇನೊ. ಸದಾ ನಗುನಗುತ್ತಾ ಇರುತ್ತಿದ್ದ ಪ್ರಣೀತಾ ಈಗ ಸದಾ ಮೌನವಾಗಿಯೇ ಇರುತ್ತಿದ್ದಳು.

“ನೋಡಿ, ನಾನು ನಿಮ್ಮ ಬಟ್ಟೆ, ಔಷಧಿ ಮುಂತಾದವುಗಳನ್ನು ನಿಮ್ಮ ಸೂಟ್‌ ಕೇಸ್‌ ನಲ್ಲಿ ಹಾಕಿಟ್ಟಿದ್ದೇನೆ,” ಎಂದು ಆಫೀಸಿನ ಕೆಲಸದ ಪ್ರಯುಕ್ತ ಮುಂಬೈಗೆ ಹೊರಟು ನಿಂತಿದ್ದ ಸಂಜಯ್‌ ಗೆ ಮಗುವಿಗೆ ಹೇಳಿದ ಹಾಗೆ ಹೇಳಿದ್ದಳು. ಆಗ ಸಂಜಯ್‌, “ಸರಿ…. ಸರಿ,” ಎಂದು ಹೇಳುತ್ತಾ ಅಲ್ಲಿಂದ ಹೆಜ್ಜೆ ಹಾಕಿದ.

“ನಾನು ಹೇಳಿದ್ದು ನಿಮ್ಮ ತಲೆಗೆ ಹೋಯಿತಾ? ಅಥವಾ ಹಾಗೆ ಸುಮ್ಮನೆ `ಸರಿ…. ಸರಿ….’ ಎಂದು ಹೇಳುತ್ತಿದ್ದೀರಾ? ಮುಂಬೈಗೆ ಹೋಗಿ ಅಲ್ಲಿಂದ ಕಾಲ್ ‌ಮಾಡಿ, `ಅದನ್ನು ಎಲ್ಲಿಟ್ಟಿದ್ದೀಯಾ? ಇದನ್ನು ಎಲ್ಲಿಟ್ಟಿದ್ದೀಯಾ?’ ಎಂದು ಕೇಳ್ತಾ ಇರ್ತೀರಾ?” ಎಂದು ಕೀರ್ತಿ ಅವನನ್ನು ತರಾಟೆಗೆ ತೆಗೆದುಕೊಂಡಳು.

“ಹೌದು ಕೀರ್ತಿ. ನೀನು ಯಾವ ವಸ್ತು ಎಲ್ಲಿಟ್ಟಿದ್ದೀಯಾ ಎನ್ನುವುದು ನನಗೆ ಗೊತ್ತಾಯಿತು. ನಾನು ಅದನ್ನು ಮರೆಯುವುದಿಲ್ಲ. ಆದರೆ ಒಂದು ವಿಷಯ ಹೇಳಲಾ? ನನ್ನ ಗೆಳೆಯರ ಮುಂದಂತೂ ನೀನಿಲ್ಲದೆ ನನ್ನ ಯಾವುದೇ ಕೆಲಸ ಆಗುವುದಿಲ್ಲ ಎನ್ನುವುದನ್ನು ಮಾತ್ರ ಅವರ ಮುಂದೆ ಹೇಳಲು ಹೋಗಬೇಡ. ನನಗೇನೂ ಬರೋದೇ ಇಲ್ಲ, ನಿನ್ನನ್ನೇ ನಾನು ಅವಲಂಬಿಸಿರುವೆ ಎಂದು ಹೇಳುವುದು ಸರಿ ಅಲ್ಲ ಅಲ್ಲವೇ?”

“ನಿನ್ನೆಯ ಮಾತನ್ನು ನೀವಿನ್ನೂ ಮರೆತೇ ಇಲ್ವೇ?” ಕೀರ್ತಿ ಸೂಟ್‌ ಕೇಸ್‌ ನ ಝಿಪ್‌ ಎಳೆಯುತ್ತಾ, “ನಾನು ಹಾಗೆ ಕೇಳಿದ್ರೆ ತಪ್ಪೇನು? ನಿಮಗೆ ಒಂದು ಬಟ್ಟೆ ಸಹ ಸರಿಯಾಗಿ ಖರೀದಿಸಲು ಬರುವುದೇ ಇಲ್ಲ. ಮತ್ತೆ ನೀವು ಬಟ್ಟೆ ಖರೀದಿಸಲು ಹೋಗ್ತೀರಾ, ಹೀಗಾಗಿ ಹಣ ವ್ಯರ್ಥ ಆಗುತ್ತೆ. ಈಗ ಹೊರಡಿ. ಮುಂಬೈ ತಲುಪುತ್ತಿದ್ದಂತೆ ಫೋನ್‌ ಮಾಡುವುದನ್ನು ಮರೆಯಬೇಡಿ. ನಿಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯಬೇಡಿ. ಏಕೆಂದರೆ ನಾನು ನಿಮ್ಮ ಜೊತೆ ಅಲ್ಲಿರುವುದಿಲ್ಲ, ಅರ್ಥ ಆಯ್ತಾ? ಮತ್ತೊಂದು ವಿಷಯ ಹೊರಗಿನದೇನನ್ನೂ ತಿನ್ನಬೇಡಿ. ಈಗ ಎಂಥ ರೋಗದ ಹಾವಳಿ ಇದೆ ನಿಮಗೆ ಗೊತ್ತೇ ಇದೆಯಲ್ಲ,” ಎಂದಳು ಸುದೀರ್ಘವಾಗಿ.

“ಆಯ್ತು ಆಯ್ತು…. ನನಗೀಗ ಹೋಗಲು ಅವಕಾಶ ಕೊಡು,” ಎಂದು ಸಂಜಯ್‌ ಸ್ವಲ್ಪ ಬೇಸರದಿಂದಲೇ ಹೇಳಿದ. ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಅವನಿಗೆ ಮನೆಯಿಂದ ಹೊರಟುಬಿಡಬೇಕು ಎಂದು ಅನ್ನಿಸುತ್ತಿತ್ತು. ಇಲ್ಲದಿದ್ದರೆ ಅವಳು ಮತ್ತೆ ಮತ್ತೆ ಅವನಿಗೆ ತಿಳಿಸಿ ಹೇಳುತ್ತಲೇ ಇರುತ್ತಿದ್ದಳು.

ಸಂಜಯ್‌ ಮನೆಯಿಂದ ಹೊರಡುವ ಮೊದಲು ಕೀರ್ತಿ ಮತ್ತೆರಡು ಸಲ ಅವನಿಗೆ ಸಲಹೆ ಕೊಡುತ್ತಲೇ ಇದ್ದಳು. ಅದರಿಂದಾಗಿ ಅವನು ಒಳಗೊಳಗೆ ಸಿಡಿಮಿಡಿಗೊಂಡಿದ್ದ. ಆದರೆ ಅವನು ಅದನ್ನು ಮಾತಿನ ಮೂಲಕ ವ್ಯಕ್ತಪಡಿಸಿರಲಿಲ್ಲ. ಅವನು ಬೈ ಬೈ ಎಂದು ಹೇಳುತ್ತಾ ಮನೆಯಿಂದ ಹೊರಟ. ಸಂಜಯ್‌ ನ ಮೌನದ ಪರಿಣಾಮವೇ ಅವಳು ಇಷ್ಟೊಂದು ತಲೆಯೇರಿ ಮಾತನಾಡಲು ಸಾಧ್ಯವಾಗಿತ್ತು. ತಾನೊಬ್ಬಳೇ ಅತಿ ಬುದ್ಧಿವಂತೆ, ಎಲ್ಲ ವಿಷಯದ ಬಗ್ಗೆ ತನಗಷ್ಟೇ ಗೊತ್ತಿದೆ, ಸಂಜಯ್‌ ಮೂರ್ಖ ಎನ್ನುವುದು ಅವಳ ಅಭಿಪ್ರಾಯವಾಗಿತ್ತು. ತಾನು ಅವನ ಜೀವನದಲ್ಲಿ ಬರದೇ ಹೋಗಿದ್ದರೆ ಅವನ ಸ್ಥಿತಿ ಏನಾಗುತ್ತಿತ್ತೋ ಏನೋ ಎಂದು ಅವಳು ಮನಸ್ಸಿನಲ್ಲಿ ನೆನೆಸಿಕೊಳ್ಳುತ್ತಿದ್ದಳು.

ಸಂಜಯ್‌ ಜೀವನದಲ್ಲಿ ತಾನು ಬಂದದ್ದು ಇತ್ತೀಚಗಷ್ಟೆ. ಅದಕ್ಕೂ ಮೊದಲು ಅವನು ತನ್ನನ್ನು ತಾನೇ ನೋಡಕೊಳ್ಳುತ್ತಿದ್ದ. ಇಂದು ಅವನು ಇಷ್ಟೊಂದು ದೊಡ್ಡ ಹುದ್ದೆಯಲ್ಲಿದ್ದಾನೆಂದರೆ, ಅದು ಕೀರ್ತಿಯ ಕಾರಣದಿಂದಲ್ಲ, ತನ್ನ ಸಾಮರ್ಥ್ಯದ ಬಲದಿಂದ.

ಜನರು ಅವನ ಕೆಲಸದ ಬಗ್ಗೆ ಪ್ರಶಂಸೆ ಮಾಡುತ್ತಾರೆಂದರೆ, ಅದು ಕೀರ್ತಿಯ ಕಾರಣದಿಂದಲ್ಲ, ಅವನ ಪರಿಶ್ರಮದ ಕಾರಣದಿಂದ. ಆಫೀಸಿನ ಹಲವರು ಮುಂಬೈಗೆ ಹೋಗಲು ಇಚ್ಛಿಸಿದ್ದರು. ಆದರೆ ಬಾಸ್‌ ಆ ಕೆಲಸಕ್ಕೆ ಆಯ್ಕೆ ಮಾಡಿದ್ದು ಸಂಜಯ್‌ ನನ್ನು ಮಾತ್ರ. ಏಕೆಂದರೆ ಅವನೊಬ್ಬನೇ ಅಷ್ಟೊಂದು ದೊಡ್ಡ ಮೀಟಿಂಗ್‌ ನ್ನು ನಿರ್ವಹಣೆ ಮಾಡಲು ಸಾಧ್ಯವಿತ್ತು.

ಸಂಜಯ್‌ ಏರ್‌ ಪೋರ್ಟ್‌ ನಿಂದ ಹೊರಗೆ ಕಾಲಿಡುತ್ತಿದ್ದ. ಅಷ್ಟರಲ್ಲಿ ಅವನ ಫೋನ್‌ ಹೊಡೆದುಕೊಳ್ಳತೊಡಗಿತು. ಅದು ಕೀರ್ತಿಯ ಫೋನ್‌ ಆಗಿತ್ತು.

“ಹ್ಞಾಂ ಹೇಳು…..” ಒಂದು ಕೈಯಲ್ಲಿ ಬ್ಯಾಗ್‌ ಹಿಡಿದುಕೊಂಡು, ಮತ್ತೊಂದು ಕೈಯಿಂದ ಟ್ಯಾಕ್ಸಿಯವನಿಗೆ ಸೂಚನೆ ಕೊಡುತ್ತಿರುವಾಗ ಫೋನ್‌ ಅವನ ಕೈಯಿಂದ ಬೀಳುತ್ತಿರುವುದು ಸ್ವಲ್ಪದರಲ್ಲಿ ಬಚಾವಾಯಿತು.

“ಇರು, ನಾನು ನಿನಗೆ ಆಮೇಲೆ ಕಾಲ್ ‌ಮಾಡ್ತೀನಿ,” ಎನ್ನುತ್ತಾ ಫೋನ್‌ ಕಟ್‌ ಮಾಡಿದ. ದಾರಿಯುದ್ದಕ್ಕೂ ಬಾಸ್‌ ನಿಂದ ಅವನಿಗೆ ಹಲವು ಸಲ ಫೋನ್‌ ಬರುತ್ತಲೇ ಇತ್ತು. ಇಂದು ಮಾಡಬೇಕಾದ ಕೆಲಸದ ಬಗ್ಗೆ ಹಾಗೂ ಮೀಟಿಂಗ್‌ ಬಗ್ಗೆ ಇಬ್ಬರೂ ಚರ್ಚಿಸುತ್ತಿದ್ದರಿಂದ ಅವನಿಗೆ ಹೆಂಡತಿಗೆ ಫೋನ್‌ ಮಾಡುತ್ತೇನೆಂದು ಹೇಳಿದ್ದು ನೆನಪಿಗೆ ಬರಲೇ ಇಲ್ಲ.

ಹೋಟೆಲ್ ‌ತಲುಪಿ ತನ್ನ ಫೋನ್‌ ಚೆಕ್‌ ಮಾಡಿ ನೋಡಿದಾಗ ಕೀರ್ತಿಯಿಂದ ಹಲವು ಸಲ ಮಿಸ್ಡ್ ಕಾಲ್ ‌ಗಳು ಬಂದಿದ್ದವು. `ಛೇ… ಕೀರ್ತಿಗೆ ಫೋನ್‌ ಮಾಡುವುದು ಮರೆತೇಹೋಯ್ತು,’ ಎಂದು ಯೋಚಿಸುತ್ತಾ ಅವನಿಗೆ ಭಯದಿಂದ ಗಂಟಲು ಒಣಗಿಹೋಯಿತು. `ನಾನ್ಹೇಗೆ ಫೋನ್‌ ಮಾಡಲು ಮರೆತೆ? ಈಗ ಅವಳು ನನ್ನನ್ನು ಸುಮ್ಮನೆ ಬಿಡುವುದಿಲ್ಲ,’ ಎಂದು ತನಗೆ ತಾನೇ ಹೇಳಿಕೊಂಡ. ಮೀಟಿಂಗ್‌ ಸಮಯದಲ್ಲಿ ಅವನು ತನ್ನ ಫೋನ್‌ ನ್ನು ಸೈಲೆಂಟ್‌ ಮೋಡ್‌ ಗೆ ಹಾಕಿದ್ದ. ಹಾಗಾಗಿ ಅವನಿಗೆ ಫೋನ್‌ ರಿಂಗ್‌ ಆದದ್ದು ಗೊತ್ತೇ ಆಗಿರಲಿಲ್ಲ.

ಅವನು ಗಡಿಬಿಡಿಯಿಂದ ಹೆಂಡತಿಗೆ ಫೋನ್‌ ಮಾಡಬೇಕೆನ್ನುವಷ್ಟರಲ್ಲಿ ಬಾಸ್‌ ನಿಂದ ಫೋನ್‌ ಬಂತು, “ಹೇಗಿತ್ತು ಮೀಟಿಂಗ್‌?” ಎಂದು ಚರ್ಚಿಸಿ ಫೋನ್‌ ಇಡುವಷ್ಟರಲ್ಲಿ ಮತ್ತೆ ಕೀರ್ತಿಯದ್ದೇ ಫೋನ್‌, “ಕೀರ್ತಿ ನಾನೇ ನಿನಗೆ ಫೋನ್‌ ಮಾಡುತ್ತಿದ್ದೆ ಅಷ್ಟರಲ್ಲಿ…….” ಸಂಜಯ್‌ ಸ್ಪಷ್ಟೀಕರಣ ಕೊಡಲು ಯತ್ನಿಸಿದ.

ಆದರೆ ಅವಳು ಫೋನ್‌ ನಲ್ಲಿಯೇ ಕೂಗಾಡತೊಡಗಿದಳು, “ನನಗೆ ಗೊತ್ತಿತ್ತು. ನೀವು ಹೀಗೇ ಮಾಡುತ್ತೀರಿ ಎಂದು. ಅಲ್ಲಿಗೆ ಹೋಗುತ್ತಿದ್ದಂತೆ ನನ್ನನ್ನು ನಿರ್ಲಕ್ಷ್ಯ ಮಾಡುತ್ತೀರಿ, ಮರೆತುಬಿಡುತ್ತೀರಿ. ನೀವು ಅಷ್ಟು ಮರೆಗುಳಿನಾ? ನಾನು ನಿಮಗೆ ಎಷ್ಟೊತ್ತಿನಿಂದ ಕಾಲ್ ‌ಮಾಡ್ತಾನೇ ಇದ್ದೀನಿ. ನಿಮ್ಮ ಫೋನ್‌ ಬಿಝಿ ಬರ್ತಾನೇ ಇತ್ತು. ಅಷ್ಟೊತ್ತಿನಿಂದ ಯಾರ ಜೊತೆ ಮಾತಾಡ್ತಾ ಇದ್ದೀರಿ? ನನ್ನ ಬಗ್ಗೆ ನಿಮಗೆ ಮರತೇ ಹೋಯ್ತಾ? ಮಾತಾಡಿ, ಯಾಕೆ ಮಾತಾಡ್ತಾ ಇಲ್ಲ…..?” ಒಂದೇ ಸಮನೆ ಅವಳು ಫೋನ್ ನಲ್ಲಿ ಎಷ್ಟೊಂದು ಜೋರಾಗಿ ಕೂಗಾಡತೊಡಗಿದಳೆಂದರೆ, ಅವನ ತಲೆ ಗಿರ್ರೆನ್ನತೊಡಗಿತು. ಅವನು ಮೀಟಿಂಗ್‌ ನಿಂದಾಗಿ ದಣಿದು ಸುಸ್ತಾಗಿಹೋಗಿದ್ದ. ಅದಕ್ಕೆ ಮಿಗಿಲೆಂಬಂತೆ ಕೀರ್ತಿಯ ಕಿರುಚಾಟ ಬೇರೆ. ಕೀರ್ತಿಗೆ ಇದೆಲ್ಲ ಅರ್ಥ ಆಗುವುದೇ ಇಲ್ಲ. ನಾನು ಹೋಟೆಲ್ ಗೆ ಮೋಜು ಮಾಜಾ ಮಾಡಲು ಬಂದಿಲ್ಲ. ಆಫೀಸಿನ ಕೆಲಸದ ನಿಮಿತ್ತ ಬಂದಿದ್ದೇನೆ ಎಂದು ಹೇಳಬೇಕು ಎನಿಸಿತು. ಆದರೆ ಅವನು ಕೇವಲ `ಸಾರಿ,’ ಎಂದಷ್ಟೇ ಹೇಳಿ ಫೋನ್‌ ಇಟ್ಟುಬಿಟ್ಟ. ಏಕೆಂದರೆ ಅವಳಿಗೆ ತಿಳಿ ಹೇಳುವುದರಿಂದ ಯಾವುದೇ ಲಾಭವಿಲ್ಲವೆಂದು ಅವನಿಗೆ ಗೊತ್ತಿತ್ತು.

ಕೀರ್ತಿಯ ಬಾಯಿಂದ ಕರ್ಣಕಠೋರ ಮಾತುಗಳನ್ನು ಕೇಳುವುದು ಸಂಜಯ್‌ ಗೇನು ಹೊಸ ಸಂಗತಿಯಾಗಿರಲಿಲ್ಲ. ಅವನು ಅದಕ್ಕೆ ಒಗ್ಗಿ ಹೋಗಿದ್ದ. ಬಹಳ ಹೊತ್ತಿನ ತನಕ ಸುಮ್ಮನೆ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದ, ನಿದ್ರೆಯೂ ಬರಲಿಲ್ಲ. ಅವನಿಗೆ ಆಗಾಗ ಮಗಳ ಮುಖ ಕಣ್ಮುಂದೆ ಬರುತ್ತಿತ್ತು. ಅವಳು ಫೋನ್‌ ನಲ್ಲಿ ಬಿಕ್ಕುತ್ತಲೇ, `ಅಮ್ಮ ನನಗೆ ಹೊಡೆದಳು.’ ಎಂದು ಹೇಳಿದ್ದಳು. ನಿನ್ನೆ ಅವಳು ಪಿಜ್ಜಾ ತಿನ್ನಲೇಬೇಕೆಂದು ಹಠ ಮಾಡಿದ್ದಳಂತೆ.

“ಪುಟ್ಟಾ ಅಳಬೇಡ, ನಾನು ಬಂದ ಮೇಲೆ ಪಿಜ್ಜಾ ತಿನ್ನಲು ಹೋಗೋಣ, ಆಗಬಹುದಾ? ಈಗ ಅಳುವುದನ್ನು ನಿಲ್ಲಿಸು. ಇಲ್ಲದಿದ್ದರೆ ಅಮ್ಮ ನಿನ್ನನ್ನು ಮತ್ತೆ ಹೊಡೆಯುತ್ತಾಳೆ. ಅವಳು ಹೇಳಿದಂತೆ ಕೇಳಿ ಸುಮ್ಮನಾಗು,”  ಎಂದು ಮಗಳನ್ನು ಸಾಕಷ್ಟು ಹೊತ್ತು ರಮಿಸಿ ಸಮಾಧಾನ ಪಡಿಸಿದ್ದರಿಂದ ಅವಳು ಅಳುವುದನ್ನು ನಿಲ್ಲಿಸಿ ಸುಮ್ಮನಾಗಿದ್ದಳು.

`ಮಗುವಿಗೆ ನೀನೇಕೆ ಹೊಡೆದೆ? ಅವಳಿಗೆ ಪ್ರೀತಿಯಿಂದ ತಿಳಿಹೇಳಬಹುದಿತಲ್ವಾ? ಹೊಡೆಯುವುದು ಅಶ್ಯವಿತ್ತಾ?’ ಎಂದು ಕೀರ್ತಿಯನ್ನು ಕೇಳಬೇಕೆನಿಸಿತು. ಆದರೆ ಕೇಳಿ ಏನು ಲಾಭ? ಅವಳು ತನಗೆ ಅನಿಸಿದಂತೆಯೇ ಮಾಡುತ್ತಾಳೆ. ಕೋಪ ಹೆಚ್ಚಾಗಿ ತನ್ನ ಮೇಲಿನ ಸಿಟ್ಟನ್ನು ಮಗಳ ಮೇಲೆ ತೀರಿಸಿಕೊಳ್ಳುತ್ತಾಳೆ.

ಸಂಜಯ್‌ ಊಟ ಮುಗಿಸಿ ಇನ್ನೇನು ಮಲಗಲು ಹೊರಟಿದ್ದ. ಅಷ್ಟರಲ್ಲಿ ಮತ್ತೊಮ್ಮೆ ಕೀರ್ತಿಯ ಫೋನ್‌ ಬಂತು, “ನೀವು ಊಟ ಮಾಡಿದ್ರಾ? ಏನು ತಿಂದ್ರಿ? ಹೆಚ್ಚು ಕ್ಯಾಲೋರಿ ಇರುವ ಆಹಾರ ತಿನ್ನಲಿಲ್ಲ ತಾನೇ? ನೆನಪಿಟ್ಟುಕೊಂಡು ಔಷಧಿ, ಮಾತ್ರೆ ತೆಗೆದುಕೊಳ್ಳುತ್ತೀದ್ದೀರೋ ಇಲ್ವೋ?” ಎಂದು ಕೇಳಿದಳು.

“ಹೌದು ಔಷಧಿ ಸರಿಯಾದ ಟೈಮಲ್ಲಿ ತಗೊಂಡಿರುವೆ. ಊಟ ಅತ್ಯಂತ ಸಾದಾ ಸೀದಾ ಮಾಡಿದೆ. ನೀನು ಅದರ ಬಗ್ಗೆ ಏನೂ ಚಿಂತೆ ಮಾಡಬೇಡ,” ಎಂದು ಹೇಳಿದ.

`ನಾನೇನು ಚಿಕ್ಕ ಮಗುವಾ? ನೀನು ಪದೇ ಪದೇ ತಿಳಿಸಿಹೇಳೋಕೆ, ಮನುಷ್ಯನಿಗೆ ಹಸಿವಾದಾಗ ತಿಂದೇ ತಿನ್ನುತ್ತಾನೆ. ಅಗತ್ಯ ಎನಿಸಿದರೆ ಔಷಧಿ ಸಹ ಕುಡಿಯುತ್ತಾನೆ. ಇದರಲ್ಲಿ ಹೇಳುವಂತದೇನಿದೆ. ನಿಜ ಹೇಳ್ತೀನಿ ನಾನು ಒಂದೆರಡು ದಿನ ಔಷಧಿ ಸೇವಿಸದಿದ್ದರೂ ಪ್ರಾಣ ಹೋಗುವುದಿಲ್ಲ. ಆದರೆ ಕೀರ್ತಿಯ ಸಿಡಿಲಿನಂತಹ ಮಾತುಗಳಿಂದ ನನಗೊಂದು ದಿನ ಹಾರ್ಟ್‌ ಆಟ್ಯಾಕ್ ಆದರೂ ಆಗಬಹುದು,’ ಎಂದು ಯೋಚಿಸುತ್ತಾ ಅವನು ದಿಂಬನ್ನು ಜೋರಾಗಿ ಮಂಚದ ಮೇಲೆ ಸವೆದ.

ಹಣ ಗಳಿಕೆಯ ಹೊರತು ತನಗೆ ಇನ್ನೇನೂ ಬರುವುದಿಲ್ಲ. ಹಾಗಾಗಿ ಹೊರಗಿನದನ್ನು ತಾನೇ ಸಂಭಾಳಿಸಬೇಕಾಗಿ ಬರುತ್ತದೆ. ಅವಳು ನಗುನಗುತ್ತಲೇ ಸಂಬಂಧಿಕರು, ಪರಿಚಿತರು, ಸ್ನೇಹಿತರ ಎದುರು ತನ್ನನ್ನು ಅವಮಾನಿಸುತ್ತಾಳೆ. ಆದರೂ ಸಂಜಯ್ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರುತ್ತಿದ್ದ. ಆದರೆ ಒಳಗೊಳಗೆ ಅವನ ಹೃದಯ ಎಷ್ಟು ರೋಧಿಸುತ್ತಿತ್ತು ಎನ್ನುವುದು ಅವನೊಬ್ಬನಿಗೆ ಮಾತ್ರವೇ ಗೊತ್ತಿತ್ತು. ತನ್ನ ಸ್ನೇಹಿತರು ಹಾಗೂ ಪರಿಚಿತರು ಹಂಗಿಸುವುದನ್ನು ನೋಡಿ ಅವನು ಬೇಸತ್ತು ಹೋಗಿದ್ದ.

`ಹೆಂಡತಿ ಇದ್ದರೆ ಸಂಜಯ್‌ ನ ಹೆಂಡತಿಯ ಹಾಗಿರಬೇಕು. ಎಷ್ಟೊಂದು ಓದಿದ್ದಾಳೆ, ಸಂಜಯ್‌ ನ ಜೀವನವನ್ನೇ ಬದಲಿಸಿಬಿಟ್ಟಳು. ಇಲ್ಲದಿದ್ದರೆ ಅವನ ಜೀವನ ದಾರಿ ತಪ್ಪಿದ ಹಡಗಿನಂತಾಗುತ್ತಿತ್ತು,’ ಎಂದೆಲ್ಲಾ ಛೇಡಿಸುತ್ತಿದ್ದರು.

ನಾನು ಮೊದಲೇ ಸರಿಯಿದ್ದೆ. ಆಗ ನಾನು ಸ್ವತಂತ್ರನಾಗಿದ್ದೆ. ಮನಸ್ಸಿಗೆ ತೋಚಿದಂತೆ ಮಾಡಬಹುದಿತ್ತು. ಆಗ ತಡೆಯುವವರು ಯಾರೂ ಇರಲಿಲ್ಲ ಎಂದು ಗೆಳೆಯರಿಗೆ ಹೇಗೆ ತಿಳಿಸಿ ಹೇಳಲಿ? ಈಗ ತನ್ನ ಜೀವನ ಜೈಲಿನ ಕೈದಿಯಂತಾಗಿದೆ. ಅಲ್ಲಿ ಕೀರ್ತಿ ಯಾವಾಗಲೂ ಕಾವಲು ಕಾಯುತ್ತಿರುತ್ತಾಳೆ.

ಸಂಜಯ್‌ ಗೆ ತನ್ನ ಗಳಿಕೆಯ ಮೇಲೂ ಯಾವುದೇ ಹಕ್ಕು ಇಲ್ಲದಂತಾಗಿಬಿಟ್ಟಿತ್ತು. ಏಕೆಂದರೆ ಅವನು ಗಳಿಸಿದ ಹಣದ ಪೂರ್ತಿ ಲೆಕ್ಕಾಚಾರವನ್ನು ಕೀರ್ತಿಯೇ ನೋಡಿಕೊಳ್ಳುತ್ತಿದ್ದಳು. ದೈನಂದಿನ ಖರ್ಚಿಗೆ ಅವಳೇ ಅವನಿಗೆ ಒಂದಿಷ್ಟು ಕೊಡುತ್ತಿದ್ದಳು. ಆದರೆ ಅದಕ್ಕೆಲ್ಲ ಅವನು ಲೆಕ್ಕ ಕೊಡಬೇಕಿತ್ತು. ಅವನಿಗೆ ಬಟ್ಟೆ, ಚಪ್ಪಲಿ ಅಥವಾ ಬೇರೆ ಯಾವುದೇ ಅವಶ್ಯಕ ವಸ್ತು ಬೇಕಿದ್ದರೂ ಕೀರ್ತಿಯೇ ಖರೀದಿಸುತ್ತಿದ್ದಳು. ಸಂಜಯ್‌ ನ ಆಯ್ಕೆ ಏನಿದ್ದರೂ `ಔಟ್‌ ಆಫ್‌ ಡೇಟೆಡ್‌’ ಆಗಿಬಿಟ್ಟಿತ್ತು. ಯಾರಾದರೂ ಸಂಜಯ್‌ ನ ಬಟ್ಟೆ, ಚಪ್ಪಲಿಯ ಬಗ್ಗೆ ಪ್ರಶಂಸೆ ಮಾಡಿದ್ರೂ ಅವಳು ತಕ್ಷಣವೇ ಅದು ನನ್ನ ಆಯ್ಕೆ ಎಂದು ಹೇಳಿಬಿಡುತ್ತಿದ್ದಳು. ಜನರೆದುರು ಅವಳು ಸಂಜಯ್‌ ನನ್ನು ಹಳ್ಳಿ ಗಮಾರ ಎಂಬಂತೆ ಸಾಬೀತು ಮಾಡಿಬಿಡುತ್ತಿದ್ದಳು.

ಸಂಜಯ್‌ ಫೋನ್‌ ನೋಡ್ತಾ ಇದ್ರೆ ಅದಕ್ಕೂ ಅವಳು ಆಕ್ಷೇಪ ಎತ್ತುತ್ತಿದ್ದಳು, “ನಿಮ್ಮಿಂದಾಗಿಯೇ ಮಗಳು ಹಾಳಾಗ್ತಿದ್ದಾಳೆ,” ಹಾಗಾಗಿ ಕೀರ್ತಿಯ ಎದುರು ಫೋನ್‌ ಮುಟ್ಟುವ ಧೈರ್ಯ ಕೂಡ ಮಾಡುತ್ತಿರಲಿಲ್ಲ. ಆದರೆ ಅವಳು ಮಾತ್ರ ಗೆಳತಿಯರು, ಸಂಬಂಧಿಕರ ಜೊತೆ ಗಂಟೆಗಟ್ಟಲೇ ಮಾತನಾಡುತ್ತಿದ್ದಳು. ತನ್ನ ಮನಸ್ಸಿಗೆ ಬಂದಾಗ ಶಾಪಿಂಗ್‌ ಗೆ ಹೋಗುತ್ತಿದ್ದಳು. ಗೆಳತಿಯರ ಮುಂದೆ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅವಳು ಪ್ರತಿ ತಿಂಗಳೂ ಹೊಸ ಸೀರೆ ಮತ್ತು ಒಡವೆ ಖರೀದಿಸುತ್ತಿದ್ದಳು. ಸೌಂದರ್ಯಕ್ಕೆ ಮೆರುಗು ಕೊಡಲು ಬ್ಯೂಟಿ ಪಾರ್ಲರ್‌ ಗೂ ಭೇಟಿ ಕೊಡುತ್ತಿದ್ದಳು.

ಸಂಜಯ್‌ ಕಷ್ಟಪಟ್ಟು ದುಡಿದ ಹಣವನ್ನು ಅವಳು ನೀರಿನಂತೆ ಖರ್ಚು ಮಾಡುತ್ತಿದ್ದಳು. ಏಕೆಂದರೆ ಅದು ಅವಳ ಜನ್ಮಸಿದ್ಧ ಹಕ್ಕು ಎನ್ನುವಂತೆ ವರ್ತಿಸುತ್ತಿದ್ದಳು. ಅದಕ್ಕೆ ಗಂಡನೇನಾದರೂ ಕೇಳಿದರೆ ಅದನ್ನು ಕೌಟುಂಬಿಕ ದೌರ್ಜನ್ಯ ಎಂದು ಹೇಳಿ ಠಾಣೆ ತನಕ ಎಳೆದೊಯ್ಯುತ್ತಾರೆ. ಹಾಗಿದ್ದರೆ ಗಂಡ ಹಾಗೂ ಮಕ್ಕಳ ಬಗ್ಗೆ ಇಷ್ಟೊಂದು ನಿರ್ಬಂಧ ಏಕೆ? ಎಂದು ಯೋಚಿಸಿಯೇ ಸಂಜಯ್

ವಿಚಲಿತನಾಗುತ್ತಿದ್ದ.

ಆದರೆ ಕೀರ್ತಿಗೆ ಈ ಬಗ್ಗೆ ಪ್ರಶ್ನಿಸಲು ಅವನಿಗೆ ಧೈರ್ಯವೇ ಬರುತ್ತಿರಲಿಲ್ಲ. ಈ ಮನೆಯಲ್ಲಿ ಸಂಜಯ್‌ ಮತ್ತು ಪ್ರಣೀತಾಳಿಗೆ ಮಾತ್ರ ಶಿಸ್ತು ಅನ್ವಯಿಸುತ್ತದೆ. ಕೀರ್ತಿಗೆ ಮಾತ್ರ ಅದ್ಯಾವುದೂ ಅನ್ವಯಿಸುವುದಿಲ್ಲ. ಅವಳಿಗೆ ತನ್ನದೇ ಆದ ರೀತಿಯಲ್ಲಿ ಜೀವನ ನಡೆಸುವ ಸಂಪೂರ್ಣ ಹಕ್ಕಿದೆ.

ಬಾಲ್ಯದಲ್ಲಿ ಸಂಜಯ್‌ ತನ್ನ ಅಮ್ಮ, ಅಪ್ಪನಿಗೆ ಹೆದರಿ ಜೀವನ ನಡೆಸುತ್ತಿದ್ದರು. ಯಾವ ಮಾತಿಗೆ ಅವರು ಸಿಟ್ಟಾಗುತ್ತಾರೋ ಎಂದು ಕ್ಷಣ ಕ್ಷಣ ಅವನ ಅಮ್ಮ ಆತಂಕದಿಂದಲೇ ಕಾಲ ಕಳೆಯುತ್ತಿದ್ದರು. ಒಮ್ಮೆ ಮಾಡಿದ ಅಡುಗೆ ಬಗ್ಗೆ, ಇನ್ನೊಮ್ಮೆ ಧರಿಸುವ ಬಟ್ಟೆಯ ಬಗ್ಗೆ ಹೆಂಡತಿಯನ್ನು ಅವಮಾನಿಸುತ್ತಿದ್ದರು ಅಪ್ಪ. ಅಮ್ಮ ಮಾತ್ರ ತಲೆ ತಗ್ಗಿಸಿ ಅವರು ಹೇಳಿದಂತೆ ಕೇಳುತ್ತಿದ್ದರು. ತಾನು ಹಳ್ಳಿಯವಳು, ಬುದ್ಧಿ ಇಲ್ಲದವಳು, ಗಂಡ ತನಗೆ ಸರಿಯಾಗಿಯೇ ಹೇಳುತ್ತಿದ್ದಾರೆಂದು ಆಕೆ ಭಾವಿಸುತ್ತಿದ್ದರು. ಅಪ್ಪನ ಕಠೋರ ವರ್ತನೆಯ ಕಾರಣದಿಂದಲೇ ಸಂಜಯ್‌ ಎಸ್‌.ಎಸ್‌.ಎಲ್.ಸಿ ಬಳಿಕ ಹೊರಗೆ ಓದಲು ಹೋಗಿದ್ದ.

ಆದರೆ ಅವನಿಗೆ ತಾನೂ ಒಂದು ದಿನ ಅಮ್ಮನ ಹಾಗೆ ಹೆದರಿಕೆಯಿಂದಲೇ ಜೀವನ ನಡೆಸಬೇಕಾಗಿ ಬರುತ್ತದೆ ಎಂಬುದು ಮಾತ್ರ ಗೊತ್ತಿರಲಿಲ್ಲ. ಅವನು ಆಗಾಗ ಅಮ್ಮನಿಗೆ, “ನೀನೇಕೆ ಸುಮ್ಮನೆ ಇರ್ತೀಯಾ? ಏಕೆ ಮಾತಾಡುವುದಿಲ್ಲ?” ಎಂದು ಕೇಳುತ್ತಿದ್ದ. ಆದರೆ ಅವನಿಗೆ ಈಗ ಗೊತ್ತಾಗುತ್ತಿತ್ತು. ಮನೆಯ ಶಾಂತಿಗೆ ಭಂಗ ಆಗಬಾರದೆಂದು ಒಬ್ಬ ವ್ಯಕ್ತಿ ಏನೂ ಮಾತನಾಡದೇ ಸುಮ್ಮನಿರುತ್ತಾನೆ ಎಂದು. ಆದರೆ ಬೇರೊಬ್ಬ ವ್ಯಕ್ತಿ ಈ ಮೌನದ ದುರ್ಲಾಭ ಹೇಗೆ ಪಡೆದುಕೊಳ್ಳುತ್ತಾನೆ ಎಂಬುದು ಅವನಿಗೆ ಈಗ ತಿಳಿಯುತ್ತಿತ್ತು. ಸಂಜಯ್‌ ನ ಮೌನದ ಕಾರಣದಿಂದಾಗಿಯೇ ಅವನ ಕುಟುಂಬ ದೂರವಾಗಿದೆ.

ಕಳೆದ ವರ್ಷ ರಕ್ಷಾಬಂಧನದ ಸಂದರ್ಭದಲ್ಲಿ ತನ್ನ ತಂಗಿ ಶಶಿರೇಖಾಗೆ ಮನೆಗೆ ಬರಬೇಡ, ನಾನೇ ನಿನ್ನ ಮನೆಗೆ ಬರ್ತೀನಿ ಎಂದು ಹೇಳಿದ್ದ.

ಅವನು ತಂಗಿಯ ಮನೆಗೆ ಹೊರಟಾಗ ಅವನ ಕೈಗೆ 500 ರೂ. ಕೊಟ್ಟು, “ಇಷ್ಟೇ ಸಾಕು, ಇದಕ್ಕಿಂತ ಹೆಚ್ಚು ಕೊಡಲು ಇನ್ನೇನಿದೆ? ಒಬ್ಬಳೇ ತಂಗಿಗೆ ಕೊಡಲು ಬೇರೆ ಅಣ್ಣಂದಿರೂ ಇದ್ದಾರೆ. ಅವರೂ ಕೊಡಲು ಬಿಡಿ,” ಎಂದು ಹೇಳಿದ್ದಳು. ಆ ಮಾತು ಕೇಳಿ ಅವನಿಗೆ ಬಹಳ ದುಃಖವಾಗಿತ್ತು. ಸಂಜಯ್‌ ನ ತಾಯಿಗೆ ಇದೆಲ್ಲ ಸಹಜವಾಗಿ ಅರ್ಥವಾಗುತ್ತಿತ್ತು. ಹೀಗಾಗಿ ಅವರು ತಮ್ಮ ಕಡೆಯಿಂದ ಉಡುಗೊರೆ ಕೊಟ್ಟು ಸಂಜಯ್‌ ಕೊಟ್ಟ ಉಡುಗೊರೆ ಎಂದು ಸುಳ್ಳು ಹೇಳಿದ್ದರು. ಆದರೆ ಈ ಸತ್ಯ ಎಷ್ಟು ದಿನ ಮುಚ್ಚಿಡಲು ಸಾಧ್ಯ? ಒಂದಿಲ್ಲೊಂದು ದಿನ ಹೊರಗೆ ಬಂದೇ ಬರುತ್ತಲ್ಲ.

ಕೀರ್ತಿಯ ಹಿಟ್ಲರ್‌ ಗಿರಿ ವರ್ತನೆಯಿಂದ ಸಂಜಯ್‌ ನ ಕುಟುಂಬದವರು ಅವನ ಮನೆಗೆ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದರು. ಸಂಜಯ್‌ ಮನೆಯಲ್ಲಿ ಎಲ್ಲರೂ ಅವನನ್ನು `ಅಮ್ಮಾವ್ರ ಗಂಡ’ ಎಂದೇ ಕರೆಯುತ್ತಾರೆ. ಅವನು ಅವಳಿಗೆ ಗೌರವ ಕೊಡುತ್ತಾನೆ. ಆದರೆ ಅವಳು ಈ ಮಾತನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತಾಳೆ? ಅವಳಂತೂ ಯಾವಾಗಲೂ ಇತರರನ್ನು ಅವಮಾನಿಸುವುದರಲ್ಲೇ ಖುಷಿಪಡುತ್ತಾಳೆ.

ಸಂಜಯ್‌ ಗೆ ಮನಸ್ಸಾದಾಗೆಲ್ಲ ಅವನು ತನ್ನವರನ್ನು ನೋಡಲು ಹೊರಟು ಹೋಗುತ್ತಿದ್ದ. ಏಕೆಂದರೆ ಕೀರ್ತಿಗೆ ಅವನ ಮನೆ ಯಾರ್ಯಾರೂ ಇಷ್ಟವಿರಲಿಲ್ಲ. ತನ್ನದೇ ಮನೆಯಲ್ಲಿ ಸಂಜಯ್‌ ಎಷ್ಟೊಂದು ಪರಕೀಯನಾಗಿಬಿಟ್ಟಿದ್ದನೆಂದರೆ, ತನ್ನ ಮನೆಗೆ ಯಾರನ್ನು ಕರೆಸಬೇಕು, ಯಾರನ್ನು ಕರೆಸಬಾರದು ಎಂದು ನಿರ್ಧರಿಸುವಷ್ಟೂ ಸ್ವತಂತ್ರವಿರಲಿಲ್ಲ. ಆದರೆ ಕೀರ್ತಿ ತವರಿನವರು ಮಾತ್ರ ಯಾವಾಗಬೇಕೆಂದಾಗ ಅಲ್ಲಿಗೆ ಬರಬಹುದಾಗಿತ್ತು. ಕೀರ್ತಿ ಅವರು ಬಂದರೆ ನೀರಿನ ಹಾಗೆ ಹಣ ಖರ್ಚು ಮಾಡುತ್ತಿದ್ದಳು. ಅದನ್ನೆಲ್ಲ ನೋಡಿ ಸಂಜಯ್‌ ಗೆ ವಿಪರೀತ ಕೋಪ ಬರುತ್ತಿತ್ತು. ಆದರೆ ಅನು ಏನೂ ಮಾತನಾಡದೆ ತೆಪ್ಪಗಿರುತ್ತಿದ್ದ.

“ಒಂದು ವೇಳೆ ತಾನು ಅವರ ಜೀವನದಲ್ಲಿ ಬರದೇ ಹೋಗಿದ್ದರೆ, ಅವರು ಈ ಸ್ಥಿತಿಗೆ ಬರಲು ಸಾಧ್ಯವೇ ಇರುತ್ತಿರಲಿಲ್ಲ,” ಎಂದು ಅವರಿವರ ಮುಂದೆ ಹೇಳುತ್ತಾ, ಸಂಜಯ್‌ ನ ಶ್ರೇಯಸ್ಸು ತನ್ನದೇ ಎಂದು ಹೇಳಿಕೊಂಡು, ಅದರಲ್ಲಿ ಸಂಜಯ್‌ ನ ತಾಯಿ ಝೀರೋ ಎಂದು ಸಾಬೀತುಪಡಿಸುತ್ತಿದ್ದಳು. ತನ್ನ ಸ್ನೇಹಿತರು, ಕುಟುಂಬದ ಎಲ್ಲರೆದುರು ಸಂಜಯ್‌ ನ ಆತ್ಮಗೌರವ, ಆತ್ಮವಿಶ್ವಾಸ ಚೂರು ಚೂರಾಗುತ್ತಿತ್ತು. ಕೀರ್ತಿ ಅವನನ್ನು ಹೇಗೆ ಧಿಕ್ಕರಿಸುತ್ತಿದ್ದಳೆಂದರೆ, ಅವನು ಯಾವುದಕ್ಕೂ ಪ್ರಯೋಜನ ಇಲ್ಲವೆಂಬಂತೆ.

“ಹಾಯ್‌ ಸ್ಟ್ರಾಂಗ್‌ ಮ್ಯಾನ್‌. ನೀವು ಇದುವರೆಗೂ ಇಲ್ಲಿಯೇ ಇದ್ದೀರಾ?” ಹಿಂದಿನಿಂದ ಯಾರದೋ ಸ್ಪರ್ಶವಾದಾಗ ಅವನು ತಿರುಗಿ ನೋಡಿದ. ಅದೇ ಮಗು ತನ್ನ ತಾಯಿಯ ಕೈ ಹಿಡಿದುಕೊಂಡು ನಿಂತಿತ್ತು.

`ನಾನು ಮತ್ತು ಸ್ಟ್ರಾಂಗ್‌’ ಸಂಜಯ್‌ ಮನಸ್ಸಿನಲ್ಲಿಯೇ, `ತಪ್ಪು ನನ್ನದೇ. ನನ್ನನ್ನು ನಾನೇ ಇಷ್ಟೊಂದು ದುರ್ಬಲ ಮಾಡಿಕೊಂಡುಬಿಟ್ಟೆ. ಹೀಗಾಗಿ ಅವಳು ನನ್ನ ಮೇಲೆ ಸವಾರಿ ಮಾಡುವಂತಾಯಿತು. ಲೈಫ್‌ ಕೋಚ್‌ ನ ಹೆಸರಿನಲ್ಲಿ ಅವಳು ನನ್ನನ್ನು ಶೋಷಣೆ ಮಾಡಿದಳು. ಆದರೆ ಇನ್ನು ಮುಂದೆ ಹೀಗಾಗಲ್ಲ. ಇಷ್ಟು ದಿನ ಆಗಿದ್ದು ಸಾಕು, ಈಗ ನಾನೇ ಸ್ಟ್ರಾಂಗ್ ಆಗುತ್ತೇನೆ. ಇನ್ಮುಂದೆ ನಾನಾಗಲಿ, ಪ್ರಣೀತಾ ಆಗಲಿ ಕೀರ್ತಿಯ ದೌರ್ಜನ್ಯಕ್ಕೆ ತುತ್ತಾಗುವುದಿಲ್ಲ. ಇನ್ಮುಂದೆ ನನಗೆ ಏನು ಸರಿ ಕಾಣುತ್ತದೋ, ಅದನ್ನೇ ಮಾಡ್ತೀನಿ. ಅವಳಿಗೆ ಇಷ್ಟವಾದರೆ ಸರಿ, ಇಲ್ಲವಾದರೆ ನಮ್ಮ ದಾರಿಗಳು ಬೇರೆ ಬೇರೆ ಆಗುತ್ತವೆ,’ ಎಂದು ಸಂಜಯ್‌ ಯೋಚಿಸಿ ದೀರ್ಘ ನಿಟ್ಟುಸಿರುಬಿಟ್ಟ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ