ಜೀವನವೆಂಬ ಗಣಿತದಲ್ಲಿ ನಾವು ಎಷ್ಟೋ ಯಶಸ್ವಿ ತಂತ್ರಜ್ಞಾನ ಉಪಯೋಗಿಸಿದರೂ, ಒಂದು ಹಂತದಲ್ಲಿ ಅನಿಶ್ಚಿತತೆಯನ್ನು ಎದುರಿಸಬೇಕಾಗಿ ಬರುತ್ತದೆ. ಅದು ಮಲ್ಲಿಕಾಳೇ ಆಗಿರಬಹುದು, ಅಚ್ಯುತ್ ಅಥವಾ ದರ್ಶನ್ ಇರಬಹುದು. ಮಾರ್ಜಿನ್ ಆಫ್ ಎರರ್ ನ ಸಾಧ್ಯತೆ ಎಲ್ಲರ ಜೀವನದಲ್ಲೂ ಇರುತ್ತದೆ. ಯಾರು ಈ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು ಎನ್ನುವುದೇ ವಿಶೇಷ ಸಂಗತಿ. ಮಲ್ಲಿಕಾ ಈ ವಿಷಯ ತಿಳಿದುಕೊಂಡಳೋ ಅಥವಾ ದರ್ಶನ್ ಈ ಸತ್ಯ ಅರ್ಥ ಮಾಡಿಕೊಂಡನೊ ಅಥವಾ ಅಚ್ಯುತ್ ಆ ಇತಿಮಿತಿಯನ್ನು ಅರ್ಥ ಮಾಡಿಕೊಂಡು ಅದನ್ನು ಬದಿಗೆ ಸರಿಸಿ ಹೊಸದಾರಿ ಕಂಡುಕೊಂಡನೊ ಏನೋ?
ಚಿಕ್ಕದಾದ ಫ್ಲ್ಯಾಟ್ ನ ಸುಸಜ್ಜಿತ ಕೋಣೆಯಲ್ಲಿ ಮಧ್ಯರಾತ್ರಿ 12 ಗಂಟೆಯ ಹೊತ್ತಿಗೆ ಮಲ್ಲಿಕಾ ಹಾಗೂ ದರ್ಶನ್ ಇಬ್ಬರೂ ಅಕ್ಕಪಕ್ಕದಲ್ಲಿಯೇ ಮಲಗಿದ್ದರು.
25 ವರ್ಷದ ಮಲ್ಲಿಕಾ ಪಾರದರ್ಶಿ ಗುಲಾಬಿ ವರ್ಣದ ನೈಟ್ ಗೌನ್ ನಲ್ಲಿ ಅಪ್ರತಿಮ ಸುಂದರಿಯಂತೆ ಕಾಣಿಸುತ್ತಿದ್ದಳು. 32 ವರ್ಷದ ದರ್ಶನ್ ನಿದ್ರೆಯಲ್ಲಿಯೂ ಕೂಡ ಅವಳ ಉಪಸ್ಥಿತಿಯನ್ನು ಅನುಭವಿಸುತ್ತಾ ಗೊತ್ತಿಲ್ಲದೆಯೇ ಅವಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾನೆ. ತೃಪ್ತಿ ಹಾಗೂ ಖುಷಿಯ ಸ್ಪಂದನದಿಂದ ಅವನ ನಿದ್ದೆಗೆ ಅಷ್ಟಿಷ್ಟು ಅಡಚಣೆ ಉಂಟಾಗುತ್ತಿದ್ದರೂ, ಮಲ್ಲಿಕಾ ತನ್ನ ಬಳಿ ಗಾಢ ನಿದ್ರೆಯಲ್ಲಿ ಮಲಗಿರುವುದನ್ನು ನೋಡಿ ಖಚಿತತೆಯ ಖುಷಿಯಲ್ಲಿ ಪುನಃ ನಿದ್ರೆಗೆ ಜಾರುತ್ತಿದ್ದ.
ನೆಮ್ಮದಿಯ ನಿದ್ರೆ ಕಳೆದುಕೊಂಡಿದ್ದ ಕಾರಣದಿಂದಲೇ, ಅವನು ಆ ನೆಮ್ಮದಿ ಹುಡುಕಿಕೊಂಡು ಮಂಗಳೂರಿನಿಂದ ಇಡೀ ರಾತ್ರಿ ಎಚ್ಚರದಿಂದಿರುತ್ತಿದ್ದ ಮುಂಬೈಗೆ ಓಡಿ ಬಂದಿದ್ದ. ಇಲ್ಲದಿದ್ದರೆ ಮಂಗಳೂರಿನಲ್ಲಿ ಚೆನ್ನಾಗಿ ನಡೆಯುತ್ತಿದ್ದ ಪುಟ್ಟ ಹೋಟೆಲ್ ಬಿಟ್ಟು ಅವನೇಕೆ ಬರುತ್ತಿದ್ದ?
ಓಹ್ ಆ ಹುಡುಗಿಯನ್ನು ನೆನಪಿಸಿಕೊಂಡು ಅವನ ಹೃದಯ ಮುರುಟಿ ಹೋಗುತ್ತದೆ. ನಂಬಿಕೆ, ಪ್ರೀತಿ, ಸಂವೇದನೆ ಅರ್ಥವಿಲ್ಲದ ಪದಗಳು ಎನ್ನುವುದು ಅವನ ಗಮನಕ್ಕೆ ಬಂದು ಹೋಗುತ್ತದೆ.
ದರ್ಶನ್ ನ ನಿದ್ರೆ ಏಕೆ ನೆಮ್ಮದಿಯನ್ನು ಕಳೆದುಕೊಂಡಿದೆ? ಕಳೆದುಕೊಂಡ ನೆಮ್ಮದಿ ಮತ್ತೆ ಸಿಗುವುದೇ ಇಲ್ಲವೇನೊ ಎಂಬಂತೆ ಭಾಸವಾಗುತ್ತಿತ್ತು. ಆದರೂ ಅವನು ಹಾಗೆಯೇ ಮಲಗಿದ್ದ.
ಅವನು ಕೆಲವೇ ಕೆಲವು ಗಂಟೆ ಮಾತ್ರ ನಿದ್ರಿಸಿದ್ದನೇನೋ, ಈ ಸಲ ಮತ್ತೆ ಅವನ ಕೈಗಳು ಮಲ್ಲಿಕಾಳತ್ತ ಚಾಚಿದಾಗ, ಅವನು ಬೆಚ್ಚಿ ಒಮ್ಮೆಲೇ ಎದ್ದು ಕುಳಿತ. ತನ್ನ ಪಕ್ಕದಲ್ಲಿ ಮಲ್ಲಿಕಾ ಇರಲಿಲ್ಲ. ಮತ್ತೆ ಎದ್ದು ಹೋಗಿದ್ದಳು ಅವನ ಪ್ರೇಯಸಿ, ಅವನ ಲಿವ್ ಇನ್ ಪಾರ್ಟ್‌ನರ್ ಮಲ್ಲಿಕಾ. ಸಾಮಾನ್ಯವಾಗಿ ಮಧ್ಯರಾತ್ರಿಯ ಹೊತ್ತಿಗೆ, ದರ್ಶನ್ ಗೆ ಹೇಳದೆಯೇ ಅವಳು ಹಾಸಿಗೆಯಿಂದ ಎದ್ದು ಹೊರಟು ಹೋಗುತ್ತಿದ್ದಳು.
ದರ್ಶನ್ ಗೆ ಬಹಳ ಗಾಬರಿಯಾಗುತ್ತಿತ್ತು. ಅವನು ನಿದ್ರೆಯಿಂದ ಎಚ್ಚರಗೊಳ್ಳುತ್ತಿದ್ದಂತೆ ಮಲ್ಲಿಕಾಳನ್ನು ನೋಡಲು ಹೋಗುತ್ತಿದ್ದ.
ಇಂಥದೇ ಒಂದು ಮುಂಜಾನೆ ದರ್ಶನ್ ಗೆ ನಿಹಾರಿಕಾ ಕೂಡ ಕಂಡು ಬಂದಿರಲಿಲ್ಲ. ಅವಳು ಎಂದೂ ಬರದ ದಾರಿಯಲ್ಲಿ ಹೋಗಿದ್ದಳು.
ದರ್ಶನ್ ಗಾಬರಿಗೊಂಡು ಮನೆಯ ಮೂಲೆ ಮೂಲೆಯಲ್ಲಿ ಹುಡುಕುತ್ತಾನೆ. ಅವಳು ಡ್ರಾಯಿಂಗ್ ರೂಮ್ ಅಥವಾ ಬಾಲ್ಕನಿಯಲ್ಲಿ ಕುಳಿತು ಫೋನ್ ನಲ್ಲಿ ಮಾತಾಡುತ್ತಿರುತ್ತಿದ್ದಳು. ದರ್ಶನ್ ನನ್ನು ನೋಡಿ ಸಿಡಿಮಿಡಿಗೊಳ್ಳುತ್ತಿದ್ದಳು.