ನಯನಾ ಕೈಯಲ್ಲಿ ಹಿಡಿದುಕೊಂಡ ಕಾಗದದ ತುಂಡನ್ನು ಅದೆಷ್ಟೋ ಹೊತ್ತಿನಿಂದ ನೋಡುತ್ತಾ ನಿಂತಿದ್ದಳು. ಅವಳಿಗಂತೂ ಸಂತೋಷವಾಗುತ್ತಿರಲಿಲ್ಲ. ಎಲ್ಲಿಯವರೆಗೆ ಅಂದುಕೊಂಡಿದ್ದನ್ನು ಸಾಧಿಸಲು ಆಗುವುದಿಲ್ಲವೋ, ಅಲ್ಲಿಯವರೆಗೆ ಮನಸ್ಸಿನ ಮೇಲೆ ಒಂದು ರೀತಿಯ ಆವೇಶ ಆವರಿಸಿಕೊಂಡಿರುತ್ತದೆ. ಆ ಕಾಗದದ ತುಂಡು ಅವಳ ಸರ್ವಸ್ವವನ್ನೇ ಕಿತ್ತುಕೊಂಡಿತ್ತು. ಆ ದಿನದ ಸಂಜೆ ಎಂದಿನಂತಿರಲಿಲ್ಲ. ಅವಳ ಉತ್ಸಾಹ ಒಂದೇ ಏಟಿಗೆ ಕತ್ತರಿಸಿ ಬಿದ್ದಂತಿತ್ತು. ಈಗ ಏನೇ ಆಗಲಿ ತನ್ನ ಪಾಲಿಗೆ ಬಂದದ್ದನ್ನು ಅನುಭವಿಸಲೇ ಬೇಕಿತ್ತು.
ಮರುಕ್ಷಣವೇ ಅವಳು ಗಾಢ ಮೇಕಪ್ ಬಳಿದುಕೊಂಡು ತನ್ನ ಭಾವನೆಗಳನ್ನು ಬಚ್ಚಿಟ್ಟುಕೊಂಡು, ಒಂದು ಡಿಸ್ಕೋತೆಕ್ ಗೆ ಹೋದಳು. ಇದೇ ಬೇಕಿತ್ತು ಅವಳಿಗೆ, ಇದನ್ನೇ ತಾನೇ ಅವಳು ಬಯಸಿದ್ದು, ಆದರೆ ಅವಳಿಗೆ ಈಗ ಕಣ್ಣೀರೇಕೆ ಬರುತ್ತಿದೆ? ಅವಳಿಗೆ ಕುಣಿಯಲು ಏಕೆ ಆಗುತ್ತಿಲ್ಲ? ಆ ಹಾಡು, ಆ ಸದ್ದು ಅವಳಿಗೆ ಇಷ್ಟವಾಗುತ್ತಿತ್ತು. ಇಂದೇಕೆ ಅವಳಿಗೆ ಅದು ಕರ್ಣಕಠೋರ ಎನಿಸುತ್ತಿದೆ?
ಇದೇ ಬೇಕಿತ್ತಲ್ಲವೇ ಅವಳಿಗೆ.... ಹಾಗಿದ್ದರೆ ಮನಸೇಚ್ಛೇ ಕುಣಿಯುವ ಬದಲು, ಅವಳ ಕಾಲುಗಳೇಕೆ ನಿಂತಲ್ಲಿಯೇ ಕದಲದಂತೆ ನಿಂತುಬಿಟ್ಟಿವೆ?
ಮತ್ತೆ ಈ ಕಣ್ಣೀರು.... ಮೂರ್ಖಳನ್ನಾಗಿಸುವ ಹನಿಗಳು, ಅವಳನ್ನು ಯಾವಾಗೆಂದಾಗ ಭಾವಾವೇಶಕ್ಕೆ ಒಳಪಡಿಸುತ್ತವೆ. ಇವೇ ಆ ಕಣ್ಣೀರ ಧಾರೆಗಳು ನಯನಾಳ ಜೀವನವನ್ನು ಕ್ಲಿಷ್ಟಕರ ಆಗಿಸಿಬಿಟ್ಟಿವೆ. ಕಣ್ಣೀರ ಧಾರೆ ಮನಸ್ಸಿನ ಮೌನದ ಮಾತು ಎಂದೂ ಹೇಳಲಾಗುತ್ತದೆ. ಆದರೆ ಕ್ಷಣಕ್ಷಣಕ್ಕೂ ಬದಲಾಗುವ ಮನಸ್ಸಿನ ಜೊತೆ ಜೊತೆಗೆ ಇವು ಕೂಡ ತಮ್ಮ ಪ್ರಕೃತಿ ಬದಲಿಸುತ್ತಿರುತ್ತವೆ. ಮನಸ್ಸಿನ ಕ್ಲಿಷ್ಟತೆಯನ್ನು ಮತ್ತಷ್ಟು ವಿಕ್ಷಿಪ್ತಗೊಳಿಸುತ್ತವೆ.
ವೇಗವಾಗಿ ಕೇಳಿಬರುತ್ತಿದ್ದ ಸಂಗೀತ ನಗುತ್ತ ಚೀರುತ್ತಿರುವ ಜನರು, ಬಣ್ಣದ ಬೆಳಕು, ರಹಸ್ಯಮಯ ಅಂಧಕಾರ, ಹೋಗುವುದು, ಬರುವುದು ನಿಖರವಾಗಿ ಅವಳ ಮನಸ್ಥಿತಿಯ ಹಾಗೆಯೇ ಇತ್ತು.
ಈ ಸದ್ದು ಒಂದಿಷ್ಟು ಕಡಿಮೆಯಾದರೆ, ಮೌನ ಆವರಿಸಿಕೊಂಡರೆ ಎಷ್ಟು ಚೆನ್ನಾಗಿರುತ್ತೆ!
ಅವಳ ಮನಸ್ಸು ಚಿತ್ರ ವಿಚಿತ್ರ ವಿಕ್ಷಿಪ್ತದಂತಾಗುತ್ತಾ ಹೊರಟಿತ್ತು. ಮನಸ್ಸು ಬಿಟ್ಟು ಬಂದ ಆ ದಾರಿಯತ್ತ ಏಕೆ ಸುಳಿಯುತ್ತಿತ್ತು? ಈವರೆಗೆ ಅವಳಿಗೆ ಅದನ್ನು ಬಿಟ್ಟು ಬರುವ ಆತುರ ಇತ್ತು.
ನಯನಾಳ ಮದುವೆ ಎಂಜಿನಿಯರ್ ಜಗದೀಶ್ ಜೊತೆ ಆಗಿತ್ತು. ಅವನು ದೇಶದ ಟಾಪ್ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಓದಿದ ಪ್ರತಿಭಾವಂತ ವಿದ್ಯಾರ್ಥಿ. ನಯನಾ ಕೂಡ ಎಂಜಿನಿಯರಿಂಗ್ ಡಿಗ್ರಿ ಪಡೆದಿದ್ದಳು ಹಾಗೂ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆ ಹೊತ್ತಿಗೆ ಎಲ್ಲವೂ ರಂಗುರಂಗಾಗಿತ್ತು. ನಯನಾಳ ತವರು ಬೆಂಗಳೂರಿನಲ್ಲೇ. ಮದುವೆ ಬಹಳ ಅದ್ಧೂರಿಯಿಂದ ನಡೆದಿತ್ತು. ಮದುವೆಯ ಬಳಿಕ ಅವಳು ತನ್ನೂರು ಬಿಟ್ಟು ಜಗದೀಶ್ ವಾಸಿಸುತ್ತಿದ್ದ ಊರಿಗೆ ಹೋಗಬೇಕಾಯಿತು. ಆ ಬಳಿಕ ಇಬ್ಬರೂ ಹನಿಮೂನ್ ಗೆಂದು ಹೊರಟು ಹೋದರು.
ಜಗದೀಶ್ ನ ಊರು ಕೋಲಾರ ಹತ್ತಿರದ ಒಂದು ಹಳ್ಳಿ. ಅವನು ಗಣಿ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದ. ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದ ಝಾರ್ಖಂಡ್ ನ ರಾಯ್ಪುರ್ ನಲ್ಲಿ ಅವನಿಗೆ ಪೋಸ್ಟಿಂಗ್ ಸಿಕ್ಕಿತು. ಅಲ್ಲಿಯೇ ಸಮೀಪದಲ್ಲಿ ಅವನಿಗೆ ಕ್ವಾರ್ಟರ್ಸ್ ಕೂಡ ಸಿಕ್ಕಿತು. ಅಲ್ಲಿಯೇ ಸಮೀಪದಲ್ಲಿ ಪೀಪಲ್ ವಾರ್ ಎಂಬಲ್ಲಿ ಕ್ವಾರಿಯಲ್ಲಿ ಡ್ಯೂಟಿಗೆ ಹಾಕಲಾಗಿತ್ತು. ಅಲ್ಲಿ ಆಫೀಸರ್ ಹಾಗೂ ಕಾರ್ಮಿಕರ ಕುಟುಂಬಗಳು ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದ. ಜಗದೀಶ್ ಗೂ ಒಂದು ಬಂಗ್ಲೆ ಸಿಕ್ಕಿತ್ತು. ಅದರ ಎದುರುಗಡೆ ಒಂದು ಪುಟ್ಟ ಕೈ ತೋಟ ಕೂಡ ಇತ್ತು. ಹನಿಮೂನ್ ನಿಂದ ವಾಪಸ್‌ಬಂದು ನಯನಾಳ ಜೊತೆ ತನ್ನ ಬಂಗ್ಲೆಯಲ್ಲಿ ಬಹಳ ಖುಷಿಯಿಂದ ವಾಸಿಸತೊಡಗಿದ. ಈವರೆಗೆ ಅವನು ಗೆಸ್ಟ್ ಹೌಸ್ ನಲ್ಲಿ ಇದ್ದ. ಈಗ ತನ್ನದೇ ಆದ ಪ್ರತ್ಯೇಕ ಮನೆ ಹಾಗೂ ಹೆಂಡತಿ ಬಂದದ್ದರಿಂದಾಗಿ ಅವನ ಖುಷಿ ದ್ವಿಗುಣಗೊಂಡಿತ್ತು. ಜೀವನದ ಈ ನವೀಕರಣದಿಂದ ಉತ್ಸಾಹಿತನಾದ ಜಗದೀಶ್ ತನ್ನ ಕ್ವಾರ್ಟರ್ಸ್ ನ್ನು ಮನೆಯಾಗಿ ಬದಲಿಸಲು ಪ್ರಯತ್ನ ನಡೆಸತೊಡಗಿದ. ನಯನಾ ಕೂಡ ಅದೇ ಹುಮ್ಮಸ್ಸಿನಿಂದ ಅವನ ನೂತನತೆಗೆ ಉತ್ಸಾಹ ತುಂಬತೊಡಗಿದಳು.