ಪ್ರಿನ್ಸಿಪಾಲ್ ಅಮರ್ ದೃಷ್ಟಿ ಇತ್ತೀಚೆಗೆ ಅಮೃತಾಳ ಮೇಲೆಯೇ ಇರುತ್ತಿತ್ತು. ಅಮೃತಾ ಇತ್ತೀಚೆಗಷ್ಟೇ ಆ ಶಾಲೆಗೆ ಬಂದಿದ್ದಳು. ಅವಳ ವ್ಯಕ್ತಿತ್ವ ಇತರರಿಗಿಂತ ಸ್ವಲ್ಪ ಭಿನ್ನವಾಗಿತ್ತು. ಉದ್ದನೆಯ ಕಾಯ, ಗೌರವರ್ಣ, ಗುಂಗುರು ಕೂದಲು ಹಾಗೂ ಆತ್ಮವಿಶ್ವಾಸಭರಿತ ನಡೆಯುಳ್ಳ ಅಮೃತಾ 30-32 ವರ್ಷದವಳಾಗಿ ಇದ್ದಿರಬಹುದು. 48ನೇ ವಯಸ್ಸಿನಲ್ಲೂ ಅಮರ್ ಏಕಾಂಗಿಯಾಗಿದ್ದರು. 10 ವರ್ಷಗಳಷ್ಟು ಹಿಂದೆಯೇ ಅವರ ಹೆಂಡತಿ ತೀರಿಕೊಂಡಿದ್ದರು. ಆಗಿನಿಂದ ಅವರು ಶಾಲೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಆದರೆ ಅವರಿದ್ದ ಶಾಲೆಗೆ ಅಮೃತಾ ಬಂದಾಗಿನಿಂದ ಅವರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಅಮೃತಾ ಕೂಡ ವಿವಾಹಿತೆ. ಆದರೆ ಹೃದಯದ ಮೇಲೆ ಯಾರು ತಾನೇ ಒತ್ತಡ ಹೇರಲು ಆದೀತು. ಅಂದರೆ ಪ್ರಿನ್ಸಿಪಾಲ್ ಅಮರ್ ಗೆ ಅಮೃತಾಳನ್ನು ನೋಡಿ ಅವರ ಹೃದಯ ನಿಯಂತ್ರಣಕ್ಕೆ ಸಿಗದಂತಾಯಿತು.
``ಅಮೃತಾ, ಬನ್ನಿ ಕುಳಿತುಕೊಳ್ಳಿ,'' ಪ್ರಿನ್ಸಿಪಾಲರು ಅಮೃತಾಳನ್ನು ತಮ್ಮ ಕ್ಯಾಬಿನ್ ಗೆ ಕರೆಸಿಕೊಂಡರು.
ಅವರ ದೃಷ್ಟಿ ಅಮೃತಾ ತಲೆಯಲ್ಲಿ ಮುಡಿದುಕೊಂಡ ಗುಲಾಬಿ ಹೂವಿನ ಮೇಲೆ ನೆಟ್ಟಿತ್ತು. ಅಮೃತಾಳ ತಲೆಯಲ್ಲಿ ಪ್ರತಿದಿನ ಒಂದು ಪುಟ್ಟ ಗುಲಾಬಿ ಹೂ ಇರುತ್ತಿತ್ತು. ಪ್ರತಿದಿನ ಅದರ ಬಣ್ಣ ಬೇರೆ ಬೇರೆ ಆಗಿರುತ್ತಿತ್ತು. ಪ್ರಿನ್ಸಿಪಾಲ್ ಅಮರ್ ಇಂದು ಕೇಳಿಯೇ ಬಿಟ್ಟರು, ``ನಿಮ್ಮ ತಲೆಗೆ ಪ್ರತಿದಿನ ಗುಲಾಬಿ ಹೂ ಯಾರು ಮುಡಿಸುತ್ತಾರೆ?''
``ಯಾರು ಮುಡಿಸುತ್ತಾರೆ ಎನ್ನುವುದು ಮಹತ್ವದಲ್ಲ ಸರ್. ಆದರೆ ನಿಮ್ಮ ದೃಷ್ಟಿ ಅದರ ಮೇಲೆಯೇ ಇರುತ್ತದೆ ಎನ್ನುವುದು ಮುಖ್ಯ. ನಿಮ್ಮ ಉದ್ದೇಶವಾದರೂ ಏನು ಸ್ಪಷ್ಟಪಡಿಸಿ,'' ತುಂಟತನದ ಮುಗುಳ್ನಗೆ ಬೀರುತ್ತ ಅಮೃತಾ ಕೇಳಿದಳು. ಪ್ರಿನ್ಸಿಪಾಲ್ ಸಾಹೇಬರಿಗೆ ಒಮ್ಮಲೆ ಗಲಿಬಿಲಿ. ಅವರು ತಮ್ಮನ್ನು ತಾವು ಸಂಭಾಳಿಸಿಕೊಳ್ಳುತ್ತಾ, ``ಇಲ್ಲ ಇಲ್ಲ.... ಹಾಗೇನೂ ಇಲ್ಲ. ಅಂದಹಾಗೆ ನನ್ನ ದೃಷ್ಟಿಯಂತೂ ನಿಮ್ಮ ಮೇಲೆಯೇ ಇತ್ತು,'' ಹೇಳಿದರು.
ಅಮೃತಾ ಅಚ್ಚರಿಯ ಕಂಗಳಿಂದ ಪ್ರಿನ್ಸಿಪಾಲ್ ಕಡೆ ನೋಡುತ್ತಾ, ಸುಂದರ ಮುಗುಳ್ನಗೆ ಬೀರುತ್ತಾ, ``ಈ ವಿಷಯ ನನಗೆ ಗೊತ್ತಿತ್ತು. ಆದರೆ ನಾನು ಅದನ್ನು ನಿಮ್ಮ ಬಾಯಿಂದ ಕೇಳಲು ಕಾತುರಳಾಗಿದ್ದೆ. ಅಂದಹಾಗೆ ನೀವು ನನ್ನ ಬಗ್ಗೆ ಬಹಳ ಆಸಕ್ತಿ ತೋರಿರುವುದು ನಿಜಕ್ಕೂ ಕುತೂಹಲಕರ.''
``ಥ್ಯಾಂಕ್ಸ್.'' ಅಮೃತಾಳ ಕಮೆಂಟ್ ಬಗ್ಗೆ ಪ್ರಿನ್ಸಿಪಾಲರು ಒಂದಿಷ್ಟು ಸಂಕೋಚದಿಂದಲೇ, ``ನಾನು ನಿಮಗಾಗಿ ಏನು ತರಿಸಲಿ, ಕಾಫಿ ಅಥವಾ ಟೀ?'' ಕೇಳಿದರು.
``ಬೇಡ ಬೇಡ ಸರ್, ನನಗೆ ನೀರು ಸಾಕು. ನಿಮ್ಮ ಮಾತುಗಳೇ ಚಹಾ ಕಾಫಿಯ ಕೆಲಸ ಮಾಡಿಬಿಟ್ಟವು,'' ಎಂದು ಹೇಳುತ್ತಾ ಅಮೃತಾ ನಕ್ಕಳು.
ಇಂತಹ ಚಿಕ್ಕ ಪುಟ್ಟ ಸಂಭಾಷಣೆಗಳ ಬಳಿಕ ಕೊನೆಗೊಮ್ಮೆ ಪ್ರಿನ್ಸಿಪಾಲ್ ಸಾಹೇಬರು ಧೈರ್ಯ ಮಾಡಿ, ``ನೀವು ನನಗೆ ಬಹಳ ಇಷ್ಟವಾಗಿರುವಿರಿ. ಅಂದಹಾಗೆ ನಾನು ವಿವಾಹಿತ ಮಹಿಳೆಯೊಬ್ಬಳ ಜೊತೆ ಈ ತೆರನಾದ ಮಾತುಗಳನ್ನು ಹೇಳುವುದು ಸರಿಯಲ್ಲ. ಆದರೂ ಒಂದು ಸಲ ಹೇಳಲು ಬಯಸಿದ್ದೆ,'' ಎಂದರು,``ಅಮರ್ ಸರ್, ಪ್ರತಿಯೊಂದು ಮಾತನ್ನು ಬಾಯಿಯಿಂದ ಹೇಳಲೇಬೇಕೆಂದಿಲ್ಲ. ಕೆಲವೊಂದು ಸಲ ಕಣ್ಣುಗಳೇ ಅದನ್ನು ಹೇಳಿಬಿಡುತ್ತವೆ.''