ನಯನಾ ಕೈಯಲ್ಲಿ ಹಿಡಿದುಕೊಂಡ ಕಾಗದದ ತುಂಡನ್ನು ಅದೆಷ್ಟೋ ಹೊತ್ತಿನಿಂದ ನೋಡುತ್ತಾ ನಿಂತಿದ್ದಳು. ಅವಳಿಗಂತೂ ಸಂತೋಷವಾಗುತ್ತಿರಲಿಲ್ಲ. ಎಲ್ಲಿಯವರೆಗೆ ಅಂದುಕೊಂಡಿದ್ದನ್ನು ಸಾಧಿಸಲು ಆಗುವುದಿಲ್ಲವೋ, ಅಲ್ಲಿಯವರೆಗೆ ಮನಸ್ಸಿನ ಮೇಲೆ ಒಂದು ರೀತಿಯ ಆವೇಶ ಆವರಿಸಿಕೊಂಡಿರುತ್ತದೆ. ಆ ಕಾಗದದ ತುಂಡು ಅವಳ ಸರ್ವಸ್ವವನ್ನೇ ಕಿತ್ತುಕೊಂಡಿತ್ತು. ಆ ದಿನದ ಸಂಜೆ ಎಂದಿನಂತಿರಲಿಲ್ಲ. ಅವಳ ಉತ್ಸಾಹ ಒಂದೇ ಏಟಿಗೆ ಕತ್ತರಿಸಿ ಬಿದ್ದಂತಿತ್ತು. ಈಗ ಏನೇ ಆಗಲಿ ತನ್ನ ಪಾಲಿಗೆ ಬಂದದ್ದನ್ನು ಅನುಭವಿಸಲೇ ಬೇಕಿತ್ತು.

ಮರುಕ್ಷಣವೇ ಅವಳು ಗಾಢ ಮೇಕಪ್‌ ಬಳಿದುಕೊಂಡು ತನ್ನ ಭಾವನೆಗಳನ್ನು ಬಚ್ಚಿಟ್ಟುಕೊಂಡು, ಒಂದು ಡಿಸ್ಕೋತೆಕ್‌ ಗೆ ಹೋದಳು. ಇದೇ ಬೇಕಿತ್ತು ಅವಳಿಗೆ, ಇದನ್ನೇ ತಾನೇ ಅವಳು ಬಯಸಿದ್ದು, ಆದರೆ ಅವಳಿಗೆ ಈಗ ಕಣ್ಣೀರೇಕೆ ಬರುತ್ತಿದೆ? ಅವಳಿಗೆ ಕುಣಿಯಲು ಏಕೆ ಆಗುತ್ತಿಲ್ಲ? ಆ ಹಾಡು, ಆ ಸದ್ದು ಅವಳಿಗೆ ಇಷ್ಟವಾಗುತ್ತಿತ್ತು. ಇಂದೇಕೆ ಅವಳಿಗೆ ಅದು ಕರ್ಣಕಠೋರ ಎನಿಸುತ್ತಿದೆ?

ಇದೇ ಬೇಕಿತ್ತಲ್ಲವೇ ಅವಳಿಗೆ…. ಹಾಗಿದ್ದರೆ ಮನಸೇಚ್ಛೇ ಕುಣಿಯುವ ಬದಲು, ಅವಳ ಕಾಲುಗಳೇಕೆ ನಿಂತಲ್ಲಿಯೇ ಕದಲದಂತೆ ನಿಂತುಬಿಟ್ಟಿವೆ?

ಮತ್ತೆ ಈ ಕಣ್ಣೀರು…. ಮೂರ್ಖಳನ್ನಾಗಿಸುವ ಹನಿಗಳು, ಅವಳನ್ನು ಯಾವಾಗೆಂದಾಗ ಭಾವಾವೇಶಕ್ಕೆ ಒಳಪಡಿಸುತ್ತವೆ. ಇವೇ ಆ ಕಣ್ಣೀರ ಧಾರೆಗಳು ನಯನಾಳ ಜೀವನವನ್ನು ಕ್ಲಿಷ್ಟಕರ ಆಗಿಸಿಬಿಟ್ಟಿವೆ. ಕಣ್ಣೀರ ಧಾರೆ ಮನಸ್ಸಿನ ಮೌನದ ಮಾತು ಎಂದೂ ಹೇಳಲಾಗುತ್ತದೆ. ಆದರೆ ಕ್ಷಣಕ್ಷಣಕ್ಕೂ ಬದಲಾಗುವ ಮನಸ್ಸಿನ ಜೊತೆ ಜೊತೆಗೆ ಇವು ಕೂಡ ತಮ್ಮ ಪ್ರಕೃತಿ ಬದಲಿಸುತ್ತಿರುತ್ತವೆ. ಮನಸ್ಸಿನ ಕ್ಲಿಷ್ಟತೆಯನ್ನು ಮತ್ತಷ್ಟು ವಿಕ್ಷಿಪ್ತಗೊಳಿಸುತ್ತವೆ.

ವೇಗವಾಗಿ ಕೇಳಿಬರುತ್ತಿದ್ದ ಸಂಗೀತ ನಗುತ್ತ ಚೀರುತ್ತಿರುವ ಜನರು, ಬಣ್ಣದ ಬೆಳಕು, ರಹಸ್ಯಮಯ ಅಂಧಕಾರ, ಹೋಗುವುದು, ಬರುವುದು ನಿಖರವಾಗಿ ಅವಳ ಮನಸ್ಥಿತಿಯ ಹಾಗೆಯೇ ಇತ್ತು.

ಈ ಸದ್ದು ಒಂದಿಷ್ಟು ಕಡಿಮೆಯಾದರೆ, ಮೌನ ಆವರಿಸಿಕೊಂಡರೆ ಎಷ್ಟು ಚೆನ್ನಾಗಿರುತ್ತೆ!

ಅವಳ ಮನಸ್ಸು ಚಿತ್ರ ವಿಚಿತ್ರ ವಿಕ್ಷಿಪ್ತದಂತಾಗುತ್ತಾ ಹೊರಟಿತ್ತು. ಮನಸ್ಸು ಬಿಟ್ಟು ಬಂದ ಆ ದಾರಿಯತ್ತ ಏಕೆ ಸುಳಿಯುತ್ತಿತ್ತು? ಈವರೆಗೆ ಅವಳಿಗೆ ಅದನ್ನು ಬಿಟ್ಟು ಬರುವ ಆತುರ ಇತ್ತು.

ನಯನಾಳ ಮದುವೆ ಎಂಜಿನಿಯರ್‌ ಜಗದೀಶ್‌ ಜೊತೆ ಆಗಿತ್ತು. ಅವನು ದೇಶದ ಟಾಪ್‌ ಎಂಜಿನಿಯರಿಂಗ್‌ ಕಾಲೇಜೊಂದರಲ್ಲಿ ಓದಿದ ಪ್ರತಿಭಾವಂತ ವಿದ್ಯಾರ್ಥಿ. ನಯನಾ ಕೂಡ ಎಂಜಿನಿಯರಿಂಗ್‌ ಡಿಗ್ರಿ ಪಡೆದಿದ್ದಳು ಹಾಗೂ  ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆ ಹೊತ್ತಿಗೆ ಎಲ್ಲವೂ ರಂಗುರಂಗಾಗಿತ್ತು. ನಯನಾಳ ತವರು ಬೆಂಗಳೂರಿನಲ್ಲೇ. ಮದುವೆ ಬಹಳ ಅದ್ಧೂರಿಯಿಂದ ನಡೆದಿತ್ತು. ಮದುವೆಯ ಬಳಿಕ ಅವಳು ತನ್ನೂರು ಬಿಟ್ಟು ಜಗದೀಶ್‌ ವಾಸಿಸುತ್ತಿದ್ದ ಊರಿಗೆ ಹೋಗಬೇಕಾಯಿತು. ಆ ಬಳಿಕ ಇಬ್ಬರೂ ಹನಿಮೂನ್‌ ಗೆಂದು ಹೊರಟು ಹೋದರು.

ಜಗದೀಶ್‌ ನ ಊರು ಕೋಲಾರ ಹತ್ತಿರದ ಒಂದು ಹಳ್ಳಿ. ಅವನು ಗಣಿ ಎಂಜಿನಿಯರಿಂಗ್‌ ನಲ್ಲಿ ಪದವಿ ಪಡೆದಿದ್ದ. ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದ ಝಾರ್ಖಂಡ್‌ ನ ರಾಯ್ಪುರ್‌ ನಲ್ಲಿ ಅವನಿಗೆ ಪೋಸ್ಟಿಂಗ್‌ ಸಿಕ್ಕಿತು. ಅಲ್ಲಿಯೇ ಸಮೀಪದಲ್ಲಿ ಅವನಿಗೆ ಕ್ವಾರ್ಟರ್ಸ್‌ ಕೂಡ ಸಿಕ್ಕಿತು. ಅಲ್ಲಿಯೇ ಸಮೀಪದಲ್ಲಿ ಪೀಪಲ್ ವಾರ್‌ ಎಂಬಲ್ಲಿ ಕ್ವಾರಿಯಲ್ಲಿ ಡ್ಯೂಟಿಗೆ ಹಾಕಲಾಗಿತ್ತು. ಅಲ್ಲಿ ಆಫೀಸರ್‌ ಹಾಗೂ ಕಾರ್ಮಿಕರ ಕುಟುಂಬಗಳು ಕ್ವಾರ್ಟರ್ಸ್‌ ನಲ್ಲಿ ವಾಸಿಸುತ್ತಿದ್ದ. ಜಗದೀಶ್‌ ಗೂ ಒಂದು ಬಂಗ್ಲೆ ಸಿಕ್ಕಿತ್ತು. ಅದರ ಎದುರುಗಡೆ ಒಂದು ಪುಟ್ಟ ಕೈ ತೋಟ ಕೂಡ ಇತ್ತು. ಹನಿಮೂನ್‌ ನಿಂದ ವಾಪಸ್‌ಬಂದು ನಯನಾಳ ಜೊತೆ ತನ್ನ ಬಂಗ್ಲೆಯಲ್ಲಿ ಬಹಳ ಖುಷಿಯಿಂದ ವಾಸಿಸತೊಡಗಿದ. ಈವರೆಗೆ ಅವನು ಗೆಸ್ಟ್ ಹೌಸ್‌ ನಲ್ಲಿ ಇದ್ದ. ಈಗ ತನ್ನದೇ ಆದ ಪ್ರತ್ಯೇಕ ಮನೆ ಹಾಗೂ ಹೆಂಡತಿ ಬಂದದ್ದರಿಂದಾಗಿ ಅವನ ಖುಷಿ ದ್ವಿಗುಣಗೊಂಡಿತ್ತು. ಜೀವನದ ಈ ನವೀಕರಣದಿಂದ ಉತ್ಸಾಹಿತನಾದ ಜಗದೀಶ್‌ ತನ್ನ ಕ್ವಾರ್ಟರ್ಸ್‌ ನ್ನು ಮನೆಯಾಗಿ ಬದಲಿಸಲು ಪ್ರಯತ್ನ ನಡೆಸತೊಡಗಿದ. ನಯನಾ ಕೂಡ ಅದೇ ಹುಮ್ಮಸ್ಸಿನಿಂದ ಅವನ ನೂತನತೆಗೆ ಉತ್ಸಾಹ ತುಂಬತೊಡಗಿದಳು.

ನವಿವಾಹಿತ ಜೋಡಿಗೆ ಕಾಲೋನಿಯ ಯಾವುದಾದರೊಂದು ಮನೆಯಿಂದ ಊಟಕ್ಕೆ ಆಹ್ವಾನ ಬರುತ್ತಲೇ ಇತ್ತು. ನಗರದಿಂದ ಬಹುದೂರ ಆ ಪುಟ್ಟ ಕಾಲೋನಿಯಲ್ಲಿ ಎಲ್ಲರೂ ಬಹಳ ಆತ್ಮೀಯತೆಯಿಂದ ವಾಸಿಸುತ್ತಿದ್ದರು. ಒಬ್ಬ ಸೀನಿಯರ್‌ ಆಫೀಸರ್‌ ನ ಹೆಂಡತಿ ನೀನು ನನ್ನ ಸೋದರಿ ಎಂದರೆ, ಮತ್ತೊಬ್ಬರು ಅವಳನ್ನು ಮಗಳೆಂದು ಕರೆದರು. ಹೀಗಾಗಿ ನಯನಾಳಿಗೆ  1 ವಾರದ ತನಕ ತನ್ನ ಮನೆಯಲ್ಲಿ ಒಲೆ ಹೊತ್ತಿಸುವ ಅವಶ್ಯಕತೆಯೇ ಉಂಟಾಗಲಿಲ್ಲ. ಯಾರಾದರೂ ಒಬ್ಬರು ಅವರ ಬಗ್ಗೆ ಗಮನ ಕೊಡುತ್ತಲೇ ಇದ್ದರು.

ಈ ಮಧ್ಯೆ ನಯನಾ ವೃದ್ಧ ಮಹಿಳೆಯೊಬ್ಬಳಿಗೆ ಮನೆಗೆಲಸ ಕೊಟ್ಟಿದ್ದರಿಂದಾಗಿ ಅವಳು ಸರ್ವೆಂಟ್ಸ್ ಕ್ವಾರ್ಟರ್ಸ್‌ ನಲ್ಲಿಯೇ ವಾಸಿಸತೊಡಗಿದಳು. ನಯನಾ ವರ್ಕ್‌ ಫ್ರಮ್ ಹೋಮ್ ಮಾಡತೊಡಗಿದಳು.

ಪೀಪಲ್ ವಾರ್‌ ಗ್ರಾಮದಿಂದ ರಾಂಚಿ ಕೆಲವೇ ಕಿ.ಮಿ.ನಷ್ಟು ದೂರದಲ್ಲಿತ್ತು. ಒಂದು ತಿಂಗಳಲ್ಲಿ ಅವಳು ಅದೆಷ್ಟು ಸಲ ಕಾಡಿ ಬೇಡಿ ಹಲವು ಸಲ ರಾಂಚಿಗೆ ಹೋಗಿ ಬಂದಿದ್ದಳು. ಆದರೆ ಅಗತ್ಯ ಸಾಮಗ್ರಿಗಳ ಅಂಗಡಿಗಳು ಅವರ ಕ್ವಾರ್ಟರ್ಸ್‌ ಹತ್ತಿರದಲ್ಲಿಯೇ ಇದ್ದ. ಆದರೆ ರಾಂಚಿ ರಾಂಚಿಯೇ! ಒಂದು ಸುಂದರ ಪರ್ವತೀಯ ಪ್ರದೇಶ. ಬೆಂಗಳೂರಿನ ಕಣ್ಣು ಕುಕ್ಕುವ ಬೆಳಕು ಅಲ್ಲಿರಲಿಲ್ಲ. 2 ತಿಂಗಳಾಗುತ್ತಾ ಬಂದಿತ್ತು. ಅಷ್ಟರಲ್ಲಿ ನಯನಾಳಿಗೆ ಅಲ್ಲಿನ ವಾತಾವರಣ ಬೇಸರ ತರಿಸುತ್ತಿತ್ತು. ಆಫೀಸರ್‌ ಕ್ಲಬ್‌ ನಲ್ಲಿ ನಡೆಯುತ್ತಿದ್ದ ಸಾಪ್ತಾಹಿಕ ಪಾರ್ಟಿ ಅವಳ ಮನಸ್ಸಿಗೆ ಇಷ್ಟವಾಗುತ್ತಿರಲಿಲ್ಲ. ಅಲ್ಲಿನ ಮನೆ ವಾತಾವರಣ ಅವಳಿಗೆ ಹಿಡಿಸುತ್ತಿರಲಿಲ್ಲ. ಜಗದೀಶ್‌ ಕೂಡ ದಿನದಿಂದ ದಿನಕ್ಕೆ ವ್ಯಸ್ತನಾಗುತ್ತಾ ಹೊರಟಿದ್ದ. ಕಲ್ಲಿದ್ದಲು ಗಣಿಗಾರಿಕೆಯ ಕೆಲಸ ಬಹಳ ಕಷ್ಟಕರ ಕೆಲಸವಾಗಿರುತ್ತದೆ. ಅಲ್ಲಿನ ಅಪಾಯ ಯಾವುದೇ ಸೈನಿಕನಿಗಿಂತ ಕಡಿಮೆ ಏನಿರಲಿಲ್ಲ. ಕಲ್ಲಿದ್ದಲಿನ ಧೂಳಿನಿಂದ ಮೆತ್ತಿಕೊಂಡ ಮುಖ ಹೊತ್ತು ಜಗದೀಶ್‌ ಮನೆಗೆ ಬಂದಾಗ ಅವಳ ಮನಸ್ಸು ಹೇಗ್ಹೇಗೊ ವಿಚಾರ ಮಾಡುತ್ತಿತ್ತು. ಜಗದೀಶ್‌ ಅವಳಿಗೆ ಗಣಿ ಪ್ರದೇಶದಲ್ಲಿ ನಡೆಯುವ ಕೆಲಸಗಳ ಬಗ್ಗೆ ವಿವರಿಸುತ್ತಿದ್ದ. ಕಲ್ಲಿದ್ದಲನ್ನು ಕತ್ತರಿಸುವ ಬಗೆ, ಭಾರಿ ಭಾರಿ ಯಂತ್ರಗಳ ಜೊತೆ ತಾವು ಕೆಲಸ ಮಾಡುವ ರಿಸ್ಕ್ ಬಗ್ಗೆಯೂ ಅವನು ಅವಳಿಗೆ ಹೇಳಿಕೊಳ್ಳುತ್ತಿದ್ದ. ಬಾಸ್‌ ರ ಶಭಾಷ್‌ ಗಿರಿ ಅಥವಾ ಗದರಿಕೆ ಬಗ್ಗೆ ಅವನು ಹೇಳಿದಾಗ, ಅವಳಿಗೆ ಅದನ್ನು ಕೇಳಿಸಿಕೊಳ್ಳಬೇಕು ಎನಿಸುತ್ತಿರಲಿಲ್ಲ. ಅವಳ ಪ್ರತಿಕ್ರಿಯೆಯ ಬಗ್ಗೆ ಗಮನಿಸುತ್ತಾ ಜಗದೀಶ್

ಮುಂದಿನ ರಜೆ ಕಾರ್ಯಕ್ರಮ ಹಾಕುವ ಬಗ್ಗೆ ಯೋಚಿಸುತ್ತಿದ್ದ.

ಆದರೆ ಏನಿತ್ತೋ ಅದು ಇದ್ದೇ ಇತ್ತು. ಹಣವಂತೂ ಬರುತ್ತಿತ್ತು. ಅದು ನಯನಾಳಿಗೆ ಬಹಳ ಇಷ್ಟವಾಗುತ್ತಿತ್ತು. ಆದರೆ ವಾಸ್ತವದ ಸಂಗತಿ ಏನೆಂದರೆ ಅವಳಿಗೆ ಮಹಾನಗರದ ಜೀವನಶೈಲಿಯ ಕೊರತೆ ಅನಿಸುತ್ತಿತ್ತು. ಇಲ್ಲಿರುವ ಮಹಿಳೆಯರು ಹೇಗೆ ಖುಷಿಯಿಂದ ಇರುತ್ತಾರೆಂದು ಅವಳಿಗೆ ಆಶ್ಚರ್ಯ ಆಗುತ್ತಿತ್ತು. ಅಲ್ಲಿರುವ ಶಾಂತ ವಾತಾವರಣದಲ್ಲಿ ಅವಳಿಗೆ ಸುಖಾನುಭವವಾಗದೆ, ಏನೋ ಕಳೆದುಕೊಂಡಂತೆ ಅನಿಸುತ್ತಿತ್ತು. ಅಲ್ಲಿ ಯಾವುದೇ ಮಾಲ್ ‌ಗಳಿರಲಿಲ್ಲ. ಮಲ್ಟಿಪ್ಲೆಕ್ಸ್ ಗಳಿರಲಿಲ್ಲ. ಅವಿಲ್ಲದೆ ಇರುವ ಹೇಗೆ ತಾನೇ ಇರುತ್ತಾರೋ? ಅಂದು ಭಾನುವಾರವಾಗಿತ್ತು. ಅವರ ಮದುವೆಯಾಗಿ 2 ತಿಂಗಳು ಪೂರ್ತಿಯಾದ ಖುಷಿಯಲ್ಲಿ ಕೇಕ್‌ ಕೂಡ ಕತ್ತರಿಸಲಾಗಿತ್ತು. 5-6 ಜನ ಸಹೋದ್ಯೋಗಿಗಳಿಗೆ ಊಟಕ್ಕೂ ಆಹ್ವಾನಿಸಲಾಗಿತ್ತು. ರಾತ್ರಿ ಅವಳು ಸೋಶಿಯಲ್ ಮೀಡಿಯಾದಲ್ಲಿ ತನ್ನ ಗೆಳತಿಯ ಚಿತ್ರಗಳನ್ನು ನೋಡುತ್ತಿದ್ದಳು. ಅವಳು ಬೆಂಗಳೂರಿನ ಯಾವುದೊ ಒಂದು ಮಾಲ್ ‌ನಲ್ಲಿ ಸುತ್ತಾಡುತ್ತಾ ತೆಗೆದಿದ್ದ ಚಿತ್ರಗಳಾಗಿದ್ದವು.

ಆಕಸ್ಮಿಕವಾಗಿ ಅವಳಿಗೆ ತನ್ನ ಜೀವನ ವ್ಯರ್ಥವಾಗುತ್ತಿದೆ ಎನಿಸಿತು. ಅವಳು ತನ್ನ ಕೆಟ್ಟುಹೋದ ಮೂಡ್‌ ಬಗ್ಗೆ ಜಗದೀಶ್‌ ಗೆ ಆ ವಿಷಯ ತಿಳಿಸಿದಳು. ಜಗದೀಶ್‌ ಪ್ರತಿಯೊಂದು ರೀತಿಯಲ್ಲೂ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ. ಆದರೆ ನಯನಾಳ ತಲೆಯಲ್ಲಿ ಭೂತ ಸವಾರಿಯಾದಂತೆ ಕಾಣುತ್ತಿತ್ತು.

ನಯನಾಳಿಗೆ ಅವಳ ತಾಯಿ ಮೊದಲೇ ಸೂಚನೆ ಕೊಟ್ಟಿದ್ದರು. ಅವನ ನೌಕರಿ ಯಾವುದೊ ರಾಜ್ಯದ ಕಾಡಿನಲ್ಲಿ ಗಣಿ ಪ್ರದೇಶದಲ್ಲಿ ಇರುತ್ತದೆ. ನೋಡು ವಿಚಾರ ಮಾಡು ಎಂದು ಹೇಳಿದ್ದರು. ಆದರೆ ನಯನಾಳಿಗೆ ಅವನ ದೊಡ್ಡ ಮೊತ್ತದ ಸಂಬಳ ಆಕರ್ಷಿತಗೊಳಿಸುತ್ತಿತ್ತು. ಆದರೆ ಈಗ ಅವಳಿಗೆ ಎಲ್ಲವೂ ನೀರಸ ಎನಿಸುತ್ತಿತ್ತು. ಅಲ್ಲಿನ ಜನರು, ಅಲ್ಲಿನ ಪರಿಸರ ಹಾಗೂ ಸ್ವತಃ ಜಗದೀಶ್‌ ಕೂಡ. ಅವಳ ಪ್ರೀತಿಯ ಅಮಲು ಧುತ್ತೆಂದು ಇಳಿದುಹೋಗಿತ್ತು. ಆ ಭಾನುವಾರದಂದು ಅವಳು ಅವನಿಗೆ ಸ್ಪಷ್ಟಪಡಿಸಿದಳು, “ನಾನೆಂದೂ ಖಾಯಂ ಆಗಿ ಇಲ್ಲಿರಲು ಆಗುವುದಿಲ್ಲ.”

ಕೆಲವೇ ದಿನಗಳಲ್ಲಿ ಅವಳು ಜಗದೀಶ್‌ ಗೆ ಮತ್ತೊಂದು ವಿಷಯ ತಿಳಿಸಿದಳು, “ಕಂಪನಿ ಈಗ ವರ್ಕ್‌ ಫ್ರಮ್ ಹೋಮ್ ಗೆ ಒಪ್ಪಿಗೆ ಸೂಚಿಸುತ್ತಿಲ್ಲ. ಕಂಪನಿಗೆ ಬಂದು ಕೆಲಸ ಮಾಡಿ ಎಂದು ಸೂಚಿಸುತ್ತಿದ್ದಾರೆ. ಈಗ ನಾನು ಬೆಂಗಳೂರಿಗೆ ಹೋಗಿ ಕೆಲಸ ಮಾಡಲೇಬೇಕಿದೆ,” ಎಂದಳು. ಅವಳ ಹೇಳಿಕೆ ಜಗದೀಶ್‌ ಗೆ ಸ್ವಲ್ಪ ಅಚ್ಚರಿ ತರಲಿಲ್ಲ.

“ಆಯ್ತು ನಿನ್ನಿಚ್ಛೆಯಂತೆ ಆಗಲಿ,” ಎಂದ. ಅವಳ ಸಂತೋಷಭರಿತ ಮುಖ ಜಗದೀಶ್‌ ಗೆ ಉದಾಸತನ ಮೂಡಿಸುತ್ತಿತ್ತು, “ನಾನು ಮೇಲಿಂದ ಮೇಲೆ ಬರ್ತಾ ಇರ್ತೀನಿ,” ಎಂದು ಹೇಳಿ ಜಗದೀಶ್‌ ನನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದಳು.

ಜಗದೀಶ್‌ ಅವಳನ್ನು ರಾಂಚಿ ಏರ್‌ ಪೋರ್ಟ್‌ ತನಕ ಕಳಿಸಲು ಹೋಗಿದ್ದ. ಬೆಂಗಳೂರಿನಲ್ಲಿ ವಾಸಿಸಲು ಫ್ಲ್ಯಾಟ್‌ ಹಾಗೂ ಇತರೆ ವ್ಯವಸ್ಥೆಗಳಿಗಾಗಿ ಅವನು ಹಣ ಸಹ ಕಳುಹಿಸಿಕೊಟ್ಟ. ನಯನಾಳ ಕೆಲಸ ಹೇಳಿಕೊಳ್ಳುವಂಥದ್ದೇನಲ್ಲ. ಅವಳು ಅತ್ಯಂತ ವೈಭವಯುತವಾಗಿ ಜೀವಿಸುವ ಯೋಚನೆ ಮಾಡಿದಂತೆ, ಸಂಬಳವೇನೂ ಬರುತ್ತಿರಲಿಲ್ಲ.

ಈಗ ಸೋಶಿಯಲ್ ಮೀಡಿಯಾದಲ್ಲಿ ನಯನಾ ಸಕ್ರಿಯವಾಗಿದ್ದಳು. ಬೆಂಗಳೂರಿನ ವಿಶಿಷ್ಟ ಜಾಗದಲ್ಲಿ ಸುತ್ತಾಡಿದ ಫೋಟೋಗಳು ಪ್ರತ್ಯಕ್ಷವಾಗುತ್ತಿದ್ದವು. ಅವಳು ಎಷ್ಟು ಖುಷಿಯಿಂದ ಕಂಡುಬರುತ್ತಿದ್ದಳೊ, ಜಗದೀಶ್‌ ಮಾತ್ರ ಅಷ್ಟೇ ಉದಾಸ, ಚಿಂತಾಕ್ರಾಂತನಾಗಿ ಕಾಣುತ್ತಿದ್ದ. ಅವನಿಗೆ ತನ್ನ ವೈವಾಹಿಕ ಜೀವನದ ಅಂಧಕಾರ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ವೃದ್ಧ ಕೆಲಸದಾಕೆ ಅವನಿಗೆ ಅಡುಗೆ ಮಾಡಿ ಬಡಿಸುತ್ತಿದ್ದಳು. ಕಾಲೋನಿಯ ಎಲ್ಲ ಮಹಿಳೆಯರು ಒಬ್ಬ ಒಳ್ಳೆಯ ವ್ಯಕ್ತಿಯ ಜೀವನ ಹಾಳು ಮಾಡಿ ಹೋಗಿದ್ದಕ್ಕೆ ಅವಳನ್ನೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು.

ಮನುಷ್ಯನೊಬ್ಬ ಮಾನಸಿಕವಾಗಿ ಸ್ಥಿರವಾಗಿದ್ದಾಗ ಮಾತ್ರ ತನ್ನ ಕಾರ್ಯಕ್ಷೇತ್ರದಲ್ಲೂ ಒಳ್ಳೆಯ ಪರ್ಫಾರ್ಮೆನ್ಸ್ ತೋರಿಸಬಹುದು. ಜಗದೀಶ್‌ ಯಾವಾಗಲೂ ದುಃಖಿತನೆಂಬಂತೆ, ಉದಾಸನೆಂಬಂತೆ ಇರುತ್ತಿದ್ದ. ಕಲ್ಲಿದ್ದಲ ಗಣಿಯಲ್ಲಿ ಅವನು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿತ್ತು. ಆದರೆ ಅದಕ್ಕೆ ತದ್ವಿರುದ್ಧ ಎಂಬಂತೆ ಇರುತ್ತಿದ್ದ.

ಆ ದಿನ ಗಣಿಯಲ್ಲಿ ಮೈನ್ಸ್ ಇನ್‌ ಸ್ಪೆಕ್ಷನ್‌ ಗಾಗಿ ಯಾವುದೊ ಒಂದು ಟೀಮ್ ಬಂದಿತ್ತು. ನಯನಾ ಬೆಂಗಳೂರಿಗೆ ಹೊರಟು ಹೋಗಿ 6 ತಿಂಗಳು ಆಗುತ್ತಾ ಬಂದಿತ್ತು. ಆದರೆ ಏಕೋ ಏನೋ, ನಯನಾಳ ವರ್ತನೆಯಲ್ಲಿ ತನ್ನ ಬಗ್ಗೆ ಯಾವುದೇ ಪ್ರೀತಿಯನ್ನು ಕಂಡುಕೊಂಡಿರಲಿಲ್ಲ. ಟೀಮ್ ನವರು ಕೇಳಿದ ಪ್ರಶ್ನೆಗೆ ಅವನು ಅಸ್ಪಷ್ಟ ಗೊಂದಲಕಾರಿ ಉತ್ತರ ಕೊಡುತ್ತಿದ್ದ. ಅವನ ಜೊತೆಗಿದ್ದ ಪರ್ಸನಲ್ ಮ್ಯಾನೇಜರ್‌ ಪ್ರೇರಣಾ ಅವನ ಮಾತುಗಳಿಗೆ ಸ್ಪಷ್ಟನೆ ಕೊಡುತ್ತಾ, ತಂಡದವರ ಗೊಂದಲ ನಿವಾರಣೆ ಮಾಡುವ ಪ್ರಯತ್ನ ನಡೆಸಿದಳು. ಪ್ರೇರಣಾಳಿಗೆ ಜಗದೀಶ್‌ ನ ಮನಸ್ಥಿತಿಯ ಅರಿವಿತ್ತು. ಆದರೆ ಇವತ್ತು ಮಾತ್ರ ಅವನ ಸ್ಥಿತಿ ಹೆಚ್ಚೇ  ತೊಂದರೆಯಿಂದ ಕೂಡಿತ್ತು.

ಗಣಿಯಲ್ಲಿ ಸಾಗುತ್ತಿದ್ದಾಗ ಎತ್ತರದ ದಾರಿಯಲ್ಲಿ ಜಗದೀಶ್‌ ಕಾಲು ಜಾರಿ, ಕತ್ತರಿಸಲ್ಪಟ್ಟ ಕಲ್ಲಿದ್ದಲಿನ ಸಡಿಲವಾದ ರಾಶಿಯ ಮುಖಾಂತರ ಕೆಳಕ್ಕೆ ಜಾರಿದ. ಬಾಸ್‌, ಪ್ರೇರಣಾಗೆ ಸೂಚನೆ ಕೊಡುತ್ತಾ, ಹೇಗಾದರೂ ಮಾಡಿ ಜಗದೀಶ್‌ ನನ್ನು ಕಾಪಾಡಬೇಕು. ಡಾಕ್ಟರ್‌ ಹಾಗೂ ಆ್ಯಂಬುಲೆನ್ಸ್ ನ ವ್ಯವಸ್ಥೆ ಮಾಡಬೇಕೆಂದು ಹೇಳಿದರು. ಅವರು ಅಲ್ಲಿಗೆ ಬಂದಿದ್ದ ಟೀಮ್ ಮುಂದೆ ಜಗದೀಶ್ ನಮ್ಮ ಅತ್ಯಂತ ನಿಪುಣ ಆಫೀಸರ್‌ ಗಳಲ್ಲಿ ಒಬ್ಬರು ಎಂದು ಹೇಳಿ ಟೀಮ್ ನರಿಗೆ ಜಗದೀಶ್‌ ನ ಪ್ರಾಮಾಣಿಕ ಕೆಲಸದ ಬಗ್ಗೆ ವಿವರಣೆ ಕೊಟ್ಟರು.

ಕಲ್ಲಿದ್ದಲು ಗಣಿಗಳಲ್ಲಿ ಚಿಕ್ಕಪುಟ್ಟ ಅವಕಾಶಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಯಾವುದೇ ದೊಡ್ಡ ದುರಂತ ಸಂಭವಿಸದಿರಲಿ ಎನ್ನುವುದು ಇದರ ಹಿಂದಿನ ಎಚ್ಚರಿಕೆಯಾಗಿರುತ್ತದೆ.

ಜಗದೀಶ್‌ ನ ಬಲಗಾಲಿನ ಮೂಳೆಗೆ ಏಟಾಗಿತ್ತು ಹಾಗೂ ಕೈಗಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಮುಖಕ್ಕೂ ತರಚಿದ  ಗಾಯವಾಗಿತ್ತು. ಹೀಗಾಗಿ ಅವನೀಗ ಬೆಡ್‌ ರೆಸ್ಟ್ ಗೆ ದಾಖಲಾಗಿದ್ದ.

ಆಸ್ಪತ್ರೆಯಲ್ಲಿರುವಷ್ಟು ದಿನ ಪ್ರೇರಣಾ ಅವನ ಜೊತೆಗೇ ಇದ್ದಳು. ಮತ್ತೆ ಕೆಲವು ಸಿಬ್ಬಂದಿಗಳು ಆಗಾಗ ಬಂದು ಹೋಗುತ್ತಿದ್ದರು. ಅವನು ಮನೆಗೆ ಹೋಗುವ ತನಕ ಈ ದುರಂತದ ವಿಷಯ ಕಾಲೋನಿಯ ಮಹಿಳೆಯರಿಗೆಲ್ಲ ಗೊತ್ತಾಗಿ ಹೋಗಿತ್ತು. ಚಿಕ್ಕಪುಟ್ಟ ಸ್ಥಳಗಳಲ್ಲಿ ಪರಸ್ಪರರ ಆತ್ಮೀಯ ಗುಣದಿಂದಾಗಿ ಆ ಸ್ಥಳಗಳು ಅಷ್ಟು ಸುಂದರವಾಗಿ ಕಾಣುತ್ತವೆ. ಅಲ್ಲಿ ಎಲ್ಲರಿಗೂ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ನಯನಾಳಿಗೆ ಇದೇ ಸಂಗತಿ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಅದು ತಮ್ಮಂಥವರ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಭಾವಿಸುತ್ತಿದ್ದಳು.

ಪ್ರೇರಣಾಳಿಗೆ ಮಾತು ಮಾತಿನಲ್ಲಿ ಗೊತ್ತಾದ ಒಂದು ವಿಷಯವೆಂದರೆ, ಅಂದು ಜಗದೀಶ್‌ ನ ಜನ್ಮದಿನ. ಆದರೆ ಕಳೆದರೆಡು ದಿನಗಳಿಂದ ನಯನಾ ಅವನಿಗೆ ಫೋನ್‌ ಕೂಡ ಮಾಡಿರಲಿಲ್ಲವಂತೆ. ಆದರೆ ಆ ಎರಡು ದಿನಗಳಲ್ಲಿ ಅವನ ಕ್ರೆಡಿಟ್‌ ಕಾರ್ಡ್‌ ನಿಂದ ಸಾಕಷ್ಟು ಮೊತ್ತ ಖರ್ಚಾದ ಸಂದೇಶಗಳು ಅವನ ಮೊಬೈಲ್ ‌ಗೆ ಬಂದಿದ್ದ.

ಮನೆಗೆಲಸದ ವೃದ್ಧೆ ತನ್ನ ಮನೆ ಯಜಮಾನನನ್ನು ಹೇಗೆ ಆರೈಕೆ ಮಾಡಬೇಕೆಂದು ಹೆದರಿ ಹೋಗಿದ್ದಳು. ಅಕ್ಕಪಕ್ಕದ ಮಹಿಳೆಯರು ಹಗಲು ಹೊತ್ತಿನಲ್ಲಿ ಅವನ ಊಟ ತಿಂಡಿಯ ವ್ಯವಸ್ಥೆ ಮಾಡುತ್ತಿದ್ದರು. ರಾತ್ರಿ ಪ್ರೇರಣಾ ಡಿನ್ನರ್‌ ಗೆ ಸಹಾಯ ಮಾಡುತ್ತಾ, ಜನ್ಮದಿಂದು ಕೇಕ್‌ ವೊಂದನ್ನು ತಂದು ಜಗದೀಶ್‌ ನ ಚಿಂತೆಯನ್ನು ದುಃಖವನ್ನು ಅಷ್ಟಿಷ್ಟು ಕಡಿಮೆ ಮಾಡಲು ಪ್ರಯತ್ನಿಸಿದಳು.

ಈ ಮಧ್ಯೆ ಜಗದೀಶನ ಮನೆಯಲ್ಲಿ ಕೇಕ್‌ ಕತ್ತರಿಸಿದ ಫೋಟೋವೊಂದನ್ನು ಪಕ್ಕದ ಮನೆಯ ಮಹಿಳೆಯೊಬ್ಬಳು ನಯನಾಳಿಗೆ ಕಳಿಸಿದಳು. ಆಶ್ಚರ್ಯದ ಸಂಗತಿಯೆಂಬಂತೆ, ನಯನಾ ಅವಳಿಗೆ ಸಂದೇಶ ಕಳುಹಿಸಿ, ಜಗದೀಶ್‌ ಪಕ್ಕದಲ್ಲಿ ಕೇಕ್‌ ಕಟ್‌ ಮಾಡಲು ನೆರವಾಗುತ್ತಿರುವ ಯುವತಿ ಯಾರೆಂದು ಅವಳು ಕೇಳಿದಳು. ಪಕ್ಕದಮನೆಯ ಹೆಂಗಸಿಗೆ ಅವಳು ಕೇಳಿದ ಪ್ರಶ್ನೆ ಬಹಳ ಅಸಹಜ ಎನಿಸಿತು. ಪತ್ನಿಯಾದವಳಿಗೆ ಗಂಡನ ಕಾಲಿಗೆ ಹಾಕಿದ ಪ್ಲಾಸ್ಟರ್‌ ಕಾಣಿಸದೆ, ಪಕ್ಕದಲ್ಲಿ ಕುಳಿತ ಯುವತಿ ಮಾತ್ರ ಕಾಣಿಸಿದ್ದು ಬಹಳ ಆಶ್ಚರ್ಯವೆನಿಸಿತು.

ಬಹಳ ವಿಚಾರವಂತ ಮಹಿಳೆಯಾಗಿದ್ದ ಅವಳಿಗೆ ಜಗದೀಶನ ಹೆಂಡತಿ ನೌಕರಿಯ ನೆಪದಲ್ಲಿ ಬೆಂಗಳೂರಿನಲ್ಲಿ ವೈಭವದ ಜೀವನ ನಡೆಸುತ್ತಿದ್ದಾಳೆಂದು ತಿಳಿಯಿತು. ಪ್ರೇರಣಾ ಜಗದೀಶ್‌ ಬಗ್ಗೆ ಹೆಚ್ಚುವರಿ ಕಾಳಜಿ ತೋರಿಸುತ್ತಿದ್ದಳು. ಕಾಲೋನಿಯಲ್ಲಿ ಎಲ್ಲರೂ ವಿವಾಹಿತರಾಗಿದ್ದರೆ, ಅವಳಿನ್ನೂ ಅವಿವಾಹಿತೆಯಾಗಿದ್ದಳು. ಜಗದೀಶ್‌ ಮದುವೆಯಾಗಿದ್ದೂ ಕೂಡ ಅವಿವಾಹಿತನಂತೆ ಜೀವನ ನಡೆಸುತ್ತಿದ್ದ. ಆ ದಿನ ಅವಳು ತಡ ರಾತ್ರಿಯ ತನಕ ಅಲ್ಲಿಯೇ ಉಳಿದು ಜಗದೀಶನಿಗೆ ಔಷಧಿ ಮಾತ್ರೆ ಕೊಟ್ಟು ತನ್ನ ಕ್ವಾರ್ಟರ್ಸ್‌ ಗೆ ವಾಪಸ್‌ ಆಗಿದ್ದಳು. ಮರುದಿನ ಬೆಳಗ್ಗೆ ಅವಳು ತಿಂಡಿ ಹಾಗೂ ಫ್ಲಾಸ್ಕ್ ನಲ್ಲಿ ಚಹಾ ತೆಗೆದುಕೊಂಡು ಜಗದೀಶ್‌ ನ ಕ್ವಾರ್ಟರ್ಸ್‌ ಗೆ ಬಂದಳು.

ಪ್ರೇರಣಾ ಕೆಲಸದಾಕೆಯ ಸಹಾಯದಿಂದ ಅವನನ್ನು ಎಬ್ಬಿಸಿ ಕೂರಿಸುತ್ತಿದ್ದಳು. ಅಷ್ಟರಲ್ಲಿ ನಯನಾಳ ಫೋನ್‌ ಬಂತು. “ನಿನ್ನೆಯಂತೂ ಚೆನ್ನಾಗಿ ಪಾರ್ಟಿ ಮಾಡಿದಿರಿ. ನಿಮ್ಮೊಂದಿಗೆ ಕುಳಿತು ಕೇಕ್‌ ಕತ್ತರಿಸುತ್ತಿದ್ದ ಅವಳು ಯಾರು? ನನ್ನ ಬೆನ್ನ ಹಿಂದೆ ನೀವು ಈ ರೀತಿಯ ಪ್ರೀತಿಯ ಚೆಲ್ಲಾಟ ನಡೆಸುತ್ತೀರೆಂದು ನಾನು ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ನೀವು ನೋಡಲು ಬಹಳ ಮುಗ್ಧರು. ಆದರೆ ಒಳಗೊಳಗೆ…..”

ನಯನಾಳ ವ್ಯಂಗ್ಯಭರಿತ ಬಾಣಗಳು ಅವನ ಎದೆಯನ್ನು ಸೀಳುತ್ತಿದ್ದವು. ಅವಳಾಡಿದ ಎಲ್ಲ ಮಾತುಗಳು ಕೋಣೆಯಲ್ಲಿ ಪ್ರತಿಧ್ವನಿಸುತ್ತಿದ್ದವು. ಪ್ರೇರಣಾಳ ಮುಂದೆ ಅವನ ಕುಟುಂಬದ ಪೊಳ್ಳುತನ ಬಯಲಾಗಿತ್ತು. ಆದರೆ ಅವನು ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ಅದನ್ನು ಬಚ್ಚಿಟ್ಟುಕೊಂಡು ಹೋಗುತ್ತಿದ್ದ.

ಜಗದೀಶ್‌ ಅವಳ ಪಾಲಿಗೆ ಹ್ಞಾಂ…. ಹ್ಞೂಂ ಹೊರತಾಗಿ ಬೇರೇನೂ ಹೇಳುತ್ತಿರಲಿಲ್ಲ. ನಯನಾಳ ಮಾತಿನ ವೈಖರಿ ಮೇರೆ ಮೀರುತ್ತಲೇ ಇತ್ತು. ಹೆಣ್ಣು ಅಬಲೆ ಎಂದು ಯಾರು ತಾನೇ ಹೇಳುತ್ತಾರೆ? ನಯನಾಳ ಶುಷ್ಕ ವರ್ತನೆಯಿಂದಂತೂ ಹಾಗೆಯೇ ಅನಿಸುತ್ತಿತ್ತು. ಅವಳಲ್ಲಿ ಸಂವೇದನಾಶೀಲತೆಯಾಗಲಿ, ಪ್ರೀತಿಯಾಗಲಿ ಇರಲಿಲ್ಲ.

“ನಾನೀಗ ತೊಂದರೆಯಲ್ಲಿದ್ದೇನೆ, ಮಾತನಾಡಲು ಕಷ್ಟವಾಗುತ್ತಿದೆ. ನೀನು ಇಷ್ಟಪಟ್ಟರೆ ಆಮೇಲೆ ಕಾಲ್ ‌ಮಾಡ್ತೀನಿ.”

“ಇಲ್ಲ ಕೇಳಿ, ನಿಮ್ಮ ಕ್ರೆಡಿಟ್‌ ಕಾರ್ಡ್‌ ನ ಲಿಮಿಟ್‌ ನ್ನು ಹೆಚ್ಚಿಸಿ. ನನಗೆ ಒಂದು ದೊಡ್ಡ ಸ್ಕ್ರೀನ್‌ನ ಟಿ.ವಿ ತೆಗೆದುಕೊಳ್ಳಬೇಕಿದೆ. ನಿಮ್ಮ ಕಾರ್ಡ್‌ ನ ಲಿಮಿಟ್‌ ಮುಗಿದುಹೋಗಿದೆ. ಬೆಂಗಳೂರಿನಂಥ ಮಹಾನಗರದಲ್ಲಿ ಖರ್ಚುಗಳು ಸಾವಿರಾರು ಇರುತ್ತವೆ. ಅದು ನಿಮಗೆ ಹೇಗೆ ಗೊತ್ತಾಗಬೇಕು? ನಾನು ನನ್ನ ಫ್ರೆಂಡ್ಸ್ ಜೊತೆಗೆ ಶಾಪಿಂಗ್‌ ಹೋಗಿದ್ದೆ. ಅಲ್ಲಿ ನೋಡಿದ್ರೆ ನಿಮ್ಮ ಕಾರ್ಡ್‌ ಡೀಕ್ಲೆನ್ ಆಯಿತು. ನನಗೆ ಅಲ್ಲಿ ಎಲ್ಲರೆದುರು ನಾಚಿ ತಲೆ ತಗ್ಗಿಸುವ ಹಾಗಾಯಿತು. ನಿಮಗೆ ನನ್ನ ಬಗ್ಗೆ ಸ್ವಲ್ಪ ಕಾಳಜಿ ಇಲ್ಲ.”

ನಯನಾ ಮಾತನಾಡುತ್ತಲೇ ಇದ್ದಳು. ಜಗದೀಶನ ಹೃಯದಲ್ಲಿ ಇನ್ನಷ್ಟು ರಂಧ್ರಗಳಾಗುತ್ತಾ ಹೊರಟಿತ್ತು. ಅವಳು ಒಂದು ಸಲ ತನ್ನ ಬಗ್ಗೆ ಮಾತಾಡಲಿಲ್ಲ. ಕೇವಲ ಹಣದ ಬಗೆಗಷ್ಟೇ ಸಂಬಂಧ ಉಳಿದುಕೊಂಡಿದೆಯಾ? ಆ ಎಲ್ಲ ವಿಷಯಗಳು ಪ್ರೇರಣಾಳ ಗಮನಕ್ಕೂ ಬಂದುಬಿಟ್ಟಿದ್ದವು. ಹಾಗಾಗಿ ಅವಳ ಮನಸ್ಸು ರೋಧಿಸುತ್ತಿತ್ತು. ಸಂಜೆಯಾಗುವ ಹೊತ್ತಿಗೆ ಅವನ ತಾಯಿ ತಂದೆಯರು ಅವನ ಕ್ವಾರ್ಟರ್ಸ್‌ ಗೆ ಬಂದು ತಲುಪಿದರು.

ಜಗದೀಶನ ತಾಯಿ ತಂದೆ ಬಂದಿದ್ದರಿಂದ ಪ್ರೇರಣಾಳಿಗೂ ನಿಶ್ಚಿಂತೆಯಾಗಿತ್ತು. ಜಗದೀಶನ ತಾಯಿಗೆ ತನ್ನ ಸೊಸೆ ಮಗನ ಜೊತೆ ಇಲ್ಲವೆನ್ನುವುದು ಕೂಡ ಗೊತ್ತಿರಲಿಲ್ಲ. ಬೆಂಗಳೂರಿಗೆ ಹೋಗಿರುವ ವಿಷಯವನ್ನು ಮಗ ಅವರಿಗೆ ತಿಳಿಸಿರಲಿಲ್ಲ. ಹಾಗೆ ತಿಳಿಸುವುದು ತನ್ನದೇ ಸೋಲು ಎನ್ನುವುದು ಅವನಿಗೆ ಗೊತ್ತಿತ್ತು. ಹಾಗಾಗಿ ಅವನು ತನ್ನ ವೈವಾಹಿಕ ಜೀವನದ ಯಾವುದೇ ಕಹಿಸತ್ಯವನ್ನು ಅವರ ಮುಂದೆ ಹೇಳುತ್ತಿರಲಿಲ್ಲ.

ಈಗ ಅಮ್ಮನ ಮುಂದೆ ಎಲ್ಲ ವಿಷಯಗಳು ತಿಳಿದು ಹೋದಾಗ ಅವನಿಗೂ ಅಷ್ಟಿಷ್ಟು ನಿರಾಳ ಎನಿಸಿತು. ತನ್ನ ಅನಾರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿ ಅದು ಇನ್ನೂ ಬಹುಬೇಗ ಗುಣವಾಗುತ್ತದೆ ಎನಿಸತೊಡಗಿತು.

ಜಗದೀಶನ ತಾಯಿ, ಸೊಸೆ ನಯನಾಳಿಗೆ ಫೋನ್‌ ಮಾಡಿ, ನೀನು ಗಂಡನ ಜೊತೆಗಿದ್ದು ಅವನ ಆರೋಗ್ಯ ನೋಡಿಕೊಳ್ಳುವುದನ್ನು ಬಿಟ್ಟು ಅಲ್ಲಿಯೇ ಏಕೆ ಇದ್ದೀಯಾ ಎಂದು ಕೇಳಿದರು. ಅವಳಿಗೂ ಈ ವಿಷಯ ಗೊತ್ತಿದ್ದೂ, ಉದ್ದೇಶಪೂರ್ವಕವಾಗಿ ಗಂಡನ ಬಳಿ ಇಲ್ಲವೆನ್ನುವುದು ಅವರ ಗಮನಕ್ಕೆ ಬಂದಿತು.

ನಯನಾ ಮುಗ್ಧತೆಯಿಂದ, “ಅತ್ತೆ, ನನ್ನ ಬಳಿ ಈಗ ಬೆಂಗಳೂರಿನಿಂದ ರಾಂಚಿಗೆ ಬರಲು ಫ್ಲೈಟ್‌ ಚಾರ್ಜ್‌ ಕೊಡುವಷ್ಟು ಹಣ ಕೂಡ ಇಲ್ಲ. ಜಗದೀಶ್‌ ರ ಕ್ರೆಡಿಟ್‌ ಕಾರ್ಡ್‌ ನ ಲಿಮಿಟ್‌ ಈ ತಿಂಗಳು ಮುಗಿದು ಹೋಗಿದೆ,” ಎಂದಳು.

ಜಗದೀಶ್‌ ನ ತಾಯಿ ತಂದೆ ತಲೆ ಮೇಲೆ ಕೈ ಹೊತ್ತು ಕುಳಿತರು. ಇದೆಂಥ ಮಾನಸಿಕತೆ ಇವಳದ್ದು? ಎಂದು ಯೋಚಿಸಿ ಅವಳಿಗೆ ಫ್ಲೈಟ್‌ ಟಿಕೆಟ್‌ ಮಾಡಿಸಿ ಅದನ್ನು ಕಳಿಸಿಕೊಟ್ಟರು. ಆ ಉಪಕಾರಕ್ಕಾಗಿ ಅವಳು ಗಂಡನಿದ್ದ ಪೀಪಲ್ ವಾರ್‌ ಕ್ವಾರ್ಟಸ್‌ ಗೆ ಬಂದಳು. ಹಲವು ತಿಂಗಳುಗಳ ಬಳಿಕ ಹೆಂಡತಿಯನ್ನು ಕಂಡು ಜಗದೀಶನಿಗೆ ಬಹಳ ಸಂತೋಷವಾಯಿತು. ಅವನಿಗೆ ಹಳೆ ನೆನಪು ಮರುಕಳಿಸಿತು. ನಯನಾಳ ಜೊತೆಗೆ ಕಳೆದ ಆ ದಿನಗಳು ಕಣ್ಮುಂದೆ ಬಂದವು. ಆದರೆ ನಯನಾಳ ನಖರಾಗಳಿಗೆ ಕೊನೆಯೇ ಇರಲಿಲ್ಲ. ಸಾಧಾರಣ ಕುಟುಂಬದಿಂದ ಬಂದು, ಸಾಧಾರಣ ನೌಕರಿ ಮಾಡುವ ಹುಡುಗಿಗೆ ಗಂಡನ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ಉತ್ಕಟೇಚ್ಛೆ ತಲೆಗೇರಿತ್ತು. ಮನೆಗೆ ಕಾಲಿಡುತ್ತಿದ್ದಂತೆಯೇ ಅವಳಿಗೆ ಅಲ್ಲಿನ ದೂರುಗಳು ಒಂದೊಂದಾಗಿ ತಲೆ ಸೇರತೊಡಗಿದವು. ಜಗದೀಶ್‌ ನ ಡ್ರೈವರ್‌ ಏರ್‌ ಪೋರ್ಟ್‌ ಗೆ ಅವಳನ್ನು ಕರೆದುಕೊಂಡು ಹೋಗಲು ಬಂದಿದ್ದ. ಅವನ ಜೂನಿಯರ್ ಎದುರುಗಡೆಯೇ ಅವಳು ಕಲ್ಲಿದ್ದಲ್ಲಿನ ರಸ್ತೆಗಳ, ನಿರ್ಜನ ರಸ್ತೆಗಳ, ಜನರ ಮುಗ್ಧತೆಯ ಬಗ್ಗೆ ತನ್ನ ಮನದ ಕಹಿ ಮಾತುಗಳನ್ನು ಬಿಚ್ಚಿಟ್ಟಳು.

ಜಗದೀಶ್‌ ಹಾಸಿಗೆಯಲ್ಲಿದ್ದಾನೆ, ಅವನು ನಿಸ್ಸಹಾಯಕ ಎಂಬ ವಿಷಯ ಅವಳಿಗೆ ಸ್ವಲ್ಪ ಹೊತ್ತಿನ ಬಳಿಕ ಅರಿವಿಗೆ ಬಂದಿತು. ನಂತರ ಅವಳಿಗೆ ಹೆಚ್ಚಾದ ಕೆಲಸದ ಬಗೆಗೂ ತೊಂದರೆ ಎನಿಸತೊಡಗಿತು. ಅತ್ತೆ ಮಾವನ ಎದುರೇ ಅವಳು ತನ್ನ ಅಸಮಾಧಾನವನ್ನು ವ್ಯಕ್ತಪಡಿಸತೊಡಗಿದಳು. ನಯನಾ ಬಂದ ಸುದ್ದಿ ಕೇಳಿ ಕಾಲೋನಿಯ ಮಹಿಳೆಯರು ಹಾಗೂ ಜಗದೀಶನ ಸಹೋದ್ಯೋಗಿಗಳು ಭೇಟಿಯಾಗಲು ಬರತೊಡಗಿದರು.

ಎಲ್ಲರೂ ಡ್ರಾಯಿಂಗ್‌ ರೂಮಿನಲ್ಲಿ ಕುಳಿತು ಮಾತಾಡುತ್ತಿದ್ದರು. ಒಳಗೆ ಜಗದೀಶ್‌ ಜೊತೆಗೆ ಕುಳಿತಿದ್ದ ನಯನಾ, “ನನಗೆ ಇದೇ ವಿಷಯ ಇಷ್ಟವಾಗುವುದಿಲ್ಲ. ಇಲ್ಲಿ ಜನರು ಯಾಗಾಲೂ ಎಲ್ಲ ವಿಷಯಗಳಲ್ಲೂ ಮೂಗು ತೂರಿಸುತ್ತಾರೆ. ಇಲ್ಲಿ ಪ್ರೈವೆಸಿ ಎನ್ನುವುದು ಎಲ್ಲಿದೆ? ಅಂದಹಾಗೆ ನೀವು ಕೈ ಹಿಡಿದು ಕೇಕ್‌ ಕತ್ತರಿಸುತ್ತಿದ್ದಿರಲ್ಲ ಆ ಹುಡುಗಿ ಎಲ್ಲಿ ಕಾಣಿಸ್ತಾ ಇಲ್ಲ?” ಎಂದು ಕೇಳಿದಳು.

“ನಯನಾ, ಹೀಗೆ ಮಾತಾಡಬೇಡ. ನನಗೆ ಅಪಘಾತವಾದಾಗ ಇದೇ ಜನರು ನನ್ನ ಆರೈಕೆ ಮಾಡಲು ಬಂದಿದ್ದರು. ಪ್ರೇರಣಾಳಿಗಳಂತೂ ನೀನು ಸದಾ ಋಣಿಯಾಗಿರಬೇಕು,” ಎಂದ.

ನಯನಾ ಬಂದು 2-3 ದಿನಗಳ ಬಳಿಕ ಜಗದೀಶನ ತಾಯಿ ತಂದೆ ತಮ್ಮೂರಿಗೆ ಹೊರಟುಹೋದರು. ಮಗನ ಕುಟುಂಬದಲ್ಲಿ ಮತ್ತೆ ನಗು ಮರಳಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು.

ಅಮ್ಮ ಒಂದು ಸಲ ಹೇಳಿಯೇ ಬಿಟ್ಟರು, “ಜಗ್ಗು, ನೀನೇ ಏಕೆ ಬೆಂಗಳೂರಿನ ಆಸುಪಾಸು ನಿನ್ನ ನೌಕರಿ ಹುಡುಕಬಾರದು ಅದರಿಂದ ಸೊಸೆಗೂ ಖುಷಿಯಾಗುತ್ತದಲ್ಲ.”

“ಅಮ್ಮ ನಾನು ಓದಿರೋದು ಮೈನಿಂಗ್‌ ಎಂಜಿನಿಯರಿಂಗ್‌. ನನ್ನ ನೌಕರಿ ಇರೋದು ಇಂತಹ ನಗರಗಳಲ್ಲಿಯೇ. ಬೆಂಗಳೂರಿನಲ್ಲಿ ಕಲ್ಲಿದ್ದಲು ಗಣಿಗಾರಿಕೆ ಎಲ್ಲಿದೆ?”

ಜಗದೀಶನ ಮಾತು ನಿಜವೇ ಆಗಿತ್ತು. ಮುಂದಿನ 3-4 ದಿನಗಳಲ್ಲಿಯೇ ಮಹಾನಗರದ ಹಕ್ಕಿಯ ರೆಕ್ಕೆಗಳು ಅಲ್ಲಿ ಹಾರಾಡಲು ಕಾತರಿಸತೊಡಗಿದವು. ಅವಳಿಗೆ ಬೆಂಗಳೂರಿನ ಕಣ್ಣು ಕುಕ್ಕುವ ಬೆಳಕಿನ ಕೊರತೆ ಭಾಸವಾಗತೊಡಗಿತು. ಝಾರ್ಖಂಡ್‌ ನ ಆ ಆಂತರಿಕ ಪ್ರದೇಶದ ಹಸಿರು ಕಾಡು, ವನ್ಯ ಸಂಪತ್ತಿನ ನಡುವೆ ಇದ್ದ ಕಾಲೋನಿಯ ಶಾಂತ ವಾತಾವರಣ ಮತ್ತು ಖುಷಿ ಖುಷಿಯಿಂದಿರುವ ಜನರು ಅವಳಿಗೆ ಮುಖ ಸಿಂಡರಿಸುವ ಜನ ಎಂಬಂತೆ ಭಾಸವಾಗುತ್ತಿದ್ದರು. ಬಂಗಲೆ, ಕಾರು, ಡ್ರೈವರ್‌ ಹಾಗೂ ಗೌರವ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಜನರ ಪ್ರೀತಿ ವಿಶ್ವಾಸ ಹಾಗೂ ಸ್ನೇಹ ಅವಳಿಗೆ ಬಂಧನವೆಂಬಂತೆ ಅನಿಸುತ್ತಿದ್ದವು. ಅವಳು ಅಲ್ಲಿಂದ ಹೇಗಾದರೂ ಮಾಡಿ ಹೊರಡುವ ಉಪಾಯ ಹುಡುಕುತ್ತಿದ್ದಳು. ಅವಳು ಎಲ್ಲರಿಗೂ ಕೇಕ್‌ ಕತ್ತರಿಸುವಾಗ ಜೊತೆಗಿದ್ದ ಹುಡುಗಿ ಯಾರೆಂದು ಕೇಳುತ್ತಿದ್ದಳು. ಆದರೆ ಯಾರೊಬ್ಬರೂ ಪ್ರೇರಣಾಳ ಬಗ್ಗೆ ಹೇಳಲಿಲ್ಲ. ಆಗ ಜನರಿಗೆ ನಯನಾಳ ಜಾಗದಲ್ಲಿ ಪ್ರೇರಣಾಳೇ ಇದ್ದಿದ್ದರೆ ಜಗದೀಶನ ಜೀವನ ಸುಂದರವಾಗಿರುತ್ತಿತ್ತು ಎಂದು ಅನಿಸದೇ ಇರಲಿಲ್ಲ.

“ಜಗದೀಶ್‌, ನಾನು ಕೆಲಸದ ಅಜ್ಜಿಗೆ ಎಲ್ಲ ವಿಷಯ ತಿಳಿಸಿದ್ದೇನೆ. ಅವರು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನಗೆ ವಾಪಸ್‌ ಹೋಗಲೇಬೇಕಿದೆ. ಇಲ್ಲಿ ನನಗೆ ಉಸಿರುಗಟ್ಟಿದಂತೆ ಆಗುತ್ತದೆ. ನಾನು 2-3 ತಿಂಗಳಲ್ಲಿ ಪುನಃ ಬರ್ತೀನಿ. ನನಗೆ ವರ್ಕ್ ಫ್ರಮ್ ಹೋಮ್ ಇಷ್ಟವಿಲ್ಲ ಎನ್ನುವುದು ನಿನಗೆ ಗೊತ್ತೇ ಇದೆಯಲ್ಲ,” ಎಂದು ಹೇಳುತ್ತಾ ನಯನಾ ತನ್ನ ಬಟ್ಟೆಗಳನ್ನು ಬ್ಯಾಗಿಗೆ ಹಾಕತೊಡಗಿದಳು.

ಜಗದೀಶ್‌ ಹಾಸಿಗೆಯ ಮೇಲೆ ಪ್ಲಾಸ್ಟರ್‌ ಹಾಕಿದ್ದ ತನ್ನ ಕಾಲನ್ನು ನೇವರಿಸುತ್ತಾ ಅವಳನ್ನೇ ನೋಡುತ್ತಿದ್ದ. ಕಾಲಿನ ಪ್ಲಾಸ್ಟರ್ ತೆಗೆಯಲು ಇನ್ನೂ 5 ವಾರಗಳ ಸಮಯವಿತ್ತು. ಭಾವುಕ, ಸಂವೇದನಾಶೀಲ ಜಗದೀಶ್‌ ತನ್ನ ಪತ್ನಿಯ ಅವತಾರ ಕಂಡು ದಂಗಾಗಿ ಹೋಗಿದ್ದ. ಹೃದಯಾಂತರಾಳದಲ್ಲಿ ಏನೋ ಕುಸಿಯುತ್ತಿರುವಂತೆ ಭಾಸವಾಗುತ್ತಿತ್ತು. ಹೊರಟು ನಿಂತಿದ್ದ ನಯನಾಳಿಗೆ ಅವನು ಈ ಸಲ ಏನನ್ನೂ ಹೇಳಲಿಲ್ಲ. ಅವನು ಮಗ್ಗುಲು ಬದಲಿಸಿ ಮಲಗಿದ. ತನ್ನ ಕಣ್ಣೀರು ನೋಡಿ ಅವಳು ತನ್ನನ್ನು ದುರ್ಬಲ ಎಂದು ಭಾವಿಸದಿರಲಿ ಹಾಗೂ ಇನ್ನಷ್ಟು ಮತ್ತಷ್ಟು ಮೂಕ ಶೋಷಣೆ ನಡೆಸದಿರಲಿ ಎನ್ನುವುದು ಅವನ ಮನದ ಇಚ್ಛೆಯಾಗಿತ್ತು.

ಜಗದೀಶ್‌ ಈ ಸಲ ಅವಳನ್ನು ತನ್ನ ಹೃದಯದಿಂದಷ್ಟೇ ವಿದಾಯ ಹೇಳಲಿಲ್ಲ. ತನ್ನ ಜೀವನದಿಂದಲೂ ವಿದಾಯ ಹೇಳಿದ. ಒಂದರ್ಥದಲ್ಲಿ ಗೃಹಸ್ಥ ಜೀವನದಿಂದ ಅವನಿಗೂ ಸಾಕಾಗಿ ಹೋಗಿತ್ತು. ತಾನು ವಾಪಸ್ಸಾಗುತ್ತಿದ್ದಂತೆ ಜಗದೀಶ್‌ ತನಗೆ ವಿಚ್ಛೇದನ ಪತ್ರ ಕಳಿಸುತ್ತಾನೆ ಎಂದು ನಯನಾ ಕನಸಿನಲ್ಲೂ ಕೂಡ ಯೋಚನೆ ಮಾಡಿರಲಿಲ್ಲ. ಅವಳು ಅವನ ಹಣದಲ್ಲಿ ಐಷಾರಾಮಿ ಜೀವನ ನಡೆಸಲು ಯೋಚಿಸುತ್ತಿದ್ದಳು. ಆದರೆ ಹಳ್ಳಿ ಹುಡುಗನಂತೆ ಕಾಣುವ ಮುಗ್ಧ ಜಗದೀಶ್‌ ವಜ್ರದ ಹಾಗ ಕಠಿಣ ಮನಸ್ಸಿನವನಾಗುತ್ತಾನೆಂದು ಅವಳು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಅವನನ್ನು ಭಾವುಕ ಮೂರ್ಖನನ್ನಾಗಿಸಿ ತನ್ನದೆಲ್ಲವನ್ನು ಸಾಧಿಸಿಕೊಳ್ಳಬೇಕೆಂದು ನಯನಾ ಯೋಚಿಸಿದ್ದಳು. ಅವನು ತನ್ನನ್ನು ತಿರಸ್ಕರಿಸಿದ ಬಳಿಕ ಅವಳಿಗೆ ಜೀವನದ ವೈಭೋಗ ಅನುಭವಿಸುವ ನೆನಪಾಗುತ್ತಿತ್ತು. ಆದರೆ ಜೀವನ ಮತ್ತೆ ಮತ್ತೆ ಅವಕಾಶ ಕೊಡುವುದಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ