19 ವರ್ಷದೊಳಗಿನ ವನಿತೆಯರ ಭಾರತ ಕ್ರಿಕೆಟ್​ ತಂಡ ಅಭೂತಪೂರ್ವ ಸಾಧನೆ ಮಾಡಿದೆ. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಎರಡನೇ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿದೆ. ಗೊಂಗಡಿ ತ್ರಿಶಾ ಅವರ ಅದ್ಭುತ ಆಲ್-ರೌಂಡ್ ಪ್ರದರ್ಶನದಿಂದಾಗಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡ ಅಜೇಯವಾಗಿ ಫೈನಲ್ ತಲುಪಿ ಐತಿಹಾಸಿಕ ಜಯ ಗಳಿಸಿದೆ. ಎರಡನೇ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಮಹಿಳಾ ತಂಡ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

WOMEN 19 CRICKET (6)

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್​ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 82 ರನ್​ಗಳಿಸಲಷ್ಟೇ ಶಕ್ತವಾಯಿತು. 83 ರನ್​ಗಳ ಗುರಿ ಬೆನ್ನಟ್ಟಿದ ಭಾರತ, ಕೇವಲ 11.2 ಓವರ್​ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿ ವಿಶ್ವಕಪ್ ತನ್ನದಾಗಿಸಿತು. ಗೊಂಗಡಿ ತ್ರಿಶಾ 44 ರನ್ ಗಳಿಸಿದ್ರೆ, ಸನಿಕಾ ಚಲ್ಕೆ 26 ರನ್ ಗಳಿಸಿ ಗೆಲುವಿನ ರೂವಾರಿಯಾದರು.

WOMEN 19 CRICKET (2)

ಇದಕ್ಕೂ ಮೊದಲು 2023ರಲ್ಲಿ ನಡೆದಿದ್ದ ಮೊದಲ ಆವೃತ್ತಿಯನ್ನು ಕೂಡ ಶೆಫಾಲಿ ವರ್ಮಾ ನಾಯಕತ್ವದ ಭಾರತ ತಂಡ ಗೆದ್ದುಕೊಂಡಿತ್ತು. ಇದೀಗ ಸತತ ಎರಡನೇ ಬಾರಿಗೆ ಭಾರತ ಈ ಟ್ರೋಫಿ ಎತ್ತಿಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಯುವ ಆಲ್ ರೌಂಡರ್ ಗೊಂಗಡಿ ತ್ರಿಶಾ ಪಾತ್ರವೇ ಬಹುಮುಖ್ಯವಾಗಿತ್ತು.

WOMEN 19 CRICKET (1)

ಈ ಬಾರಿ ತ್ರಿಶಾ ಫೈನಲ್ ಪಂದ್ಯದಲ್ಲಿ ಮಾತ್ರವಲ್ಲದೆ ಇಡೀ ಪಂದ್ಯಾವಳಿಯಲ್ಲೇ ಸೂಪರ್‌ಸ್ಟಾರ್ ಪ್ರದರ್ಶನ ನೀಡಿದರು. ಫೈನಲ್‌ನಲ್ಲಿ ಬ್ಯಾಟಿಂಗ್​ನಲ್ಲಿ 44 ರನ್‌ಗಳ ಇನ್ನಿಂಗ್ಸ್‌ ಆಡುವುದಕ್ಕೂ ಮೊದಲು ಬೌಲಿಂಗ್​ನಲ್ಲಿ ಮಿಂಚಿದ ತ್ರಿಶಾ ಪ್ರಮುಖ 3 ವಿಕೆಟ್‌ಗಳನ್ನು ಪಡೆದರು. ಈ ಆಲ್‌ರೌಂಡರ್ ಪ್ರದರ್ಶನಕ್ಕಾಗಿ ತ್ರಿಶಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

WOMEN 19 CRICKET (11)

5 ಕೋಟಿ ರೂ ಬಹುಮಾನ: ಸತತ ಎರಡನೇ ಬಾರಿಗೆ ಅಂಡರ್19 ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 5 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ, “ಗಮನಾರ್ಹ ಸಾಧನೆ ಮಾಡಿದ ಮಹಿಳಾ ತಂಡ, ಮುಖ್ಯ ಕೋಚ್​ ಮತ್ತು ಹೆಡ್​ ಕೋಚ್​ ಅವರನ್ನು ಬಿಸಿಸಿಐ ಅಭಿನಂದಿಸುತ್ತದೆ. ತಂಡದ ಅಭೂತಪೂರ್ವ ಪ್ರದರ್ಶನಕ್ಕೆ 5 ಕೋಟಿ ರೂ. ಬಹುಮಾನ ಘೋಷಿಸಲಾಗುತ್ತಿದೆ” ಅಂತಾ ತಿಳಿಸಿದೆ. ​

WOMEN 19 CRICKET (3)

ಪ್ರಧಾನಿ ಮೋದಿ ಅಭಿನಂದನೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಮಹಿಳಾ ತಂಡವನ್ನು ಅಭಿನಂದಿಸಿದ್ದಾರೆ ‘X’ ನಲ್ಲಿ ಪೋಸ್ಟ್ ಮಾಡಿದ ಅವರು, “2025ರ ಐಸಿಸಿ ಅಂಡರ್19 ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಅಭಿನಂದನೆಗಳು. ನಮ್ಮ ನಾರಿ ಶಕ್ತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಇದು ನಮ್ಮ ತಂಡದ ಅತ್ಯುತ್ತಮ ಪ್ರದರ್ಶನ ಮತ್ತು ತಾಳ್ಮೆಯ ಆಟದ ಫಲಿತಾಂಶ. ಅನೇಕ ಉದಯೋನ್ಮುಖ ಕ್ರೀಡಾಪಟುಗಳಿಗೆ ಈ ಸಾಧನೆ ಸ್ಫೂರ್ತಿ ನೀಡುತ್ತದೆ” ಅಂತಾ ಕೊಂಡಾಡಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ