ಸಿಂಗಾಪೂರದಿಂದ ಸಂಗೀತಾ ಉತ್ಸಾಹಭರಿತ ಧ್ವನಿಯಲ್ಲಿ ಫೋನ್‌ ನಲ್ಲಿ ತಂದೆ ವಿಕಾಸ್‌ ಹಾಗೂ ತಾಯಿ ರಾಧಾಗೆ, “ನಾನು ಶೀಘ್ರದಲ್ಲಿಯೇ ಆದಿತ್ಯನನ್ನು ಭೇಟಿ ಮಾಡಿಸ್ತೀನಿ. ಬಹಳ ಒಳ್ಳೆಯ ಹುಡುಗ. ನನ್ನ ಜೊತೆಯಲ್ಲೇ ಅವನ ಎಂಬಿಎ ಕೂಡ ಮುಗಿತಿದೆ. ನಾವಿಬ್ಬರೂ ಭಾರತಕ್ಕೆ ಬಂದ ಬಳಿಕ ಮುಂದಿನ ಯೋಜನೆ ಮಾಡುತ್ತೇವೆ,” ಎಂದು ಹೇಳಿದಳು.

ಅವಳ ಮಾತು ಕೇಳಿಸಿಕೊಂಡ ವಿಕಾಸ್‌, “ಒಳ್ಳೆಯದಾಯ್ತು ಸಂಗೀತಾ, ಬೇಗನೇ ಬನ್ನಿ. ಆದಿತ್ಯ ಯಾವ ಕಡೆಯ ಹುಡುಗ….?” ಎಂದು ಖುಷಿಯಿಂದಲೇ ಕೇಳಿದರು.

“ಅವನು ಮೈಸೂರಿನವನು.”

“ಅರೆ ವಾಹ್‌! ನೀನು ಭಾರತೀಯ ಹುಡುಗನನ್ನೇ ಆಯ್ಕೆ ಮಾಡಿಕೊಂಡೆ. ನೀನು ಯಾವುದಾದರೂ ವಿದೇಶಿ ಹುಡುಗನನ್ನು ಆಯ್ಕೆ ಮಾಡಿಕೊಳ್ಳಬಹುದೆಂದು ನಿನ್ನ ಅಮ್ಮ ಅಂದುಕೊಂಡಿದ್ದಳು.”

ಆ ಕಡೆಯಿಂದ ಸಂಗೀತಾ ಜೋರಾಗಿ ನಕ್ಕಳು. “ಅಮ್ಮನಿಗೆ ಏನು ಅನಿಸುತ್ತೋ ಅದು ಎಂದಾದರೂ ನಿಜ ಆಗುತ್ತಾ ಅಪ್ಪಾ? ಫೋನ್‌ ಸ್ಪೀಕರ್‌ ಆನ್‌ ಆಗಿದೆ, ಆದರೂ ಅಮ್ಮ ಏನೂ ಹೇಳ್ತಿಲ್ಲ ಏಕೆ…..?”

“ಬಹುಶಃ ನಿನ್ನ ಅಮ್ಮನಿಗೆ ಆದಿತ್ಯನ ಬಗ್ಗೆ ಕೇಳಿ ಶಾಕ್‌ ಆಗಿದೆ ಅನಿಸುತ್ತೆ.”

ರಾಧಾರ ಮೂಡ್‌ ನಿಜಕ್ಕೂ ಕೆಟ್ಟು ಹೋಗಿತ್ತು. ಆ ವಿಷಯ ಕೇಳಿ ಅವರು ಏನೂ ಮಾತಾಡಲಿಲ್ಲ. ವಿಕಾಸ್‌ ಫೋನ್‌ ಕಟ್‌ ಮಾಡಿದಾಗ ರಾಧಾರ ಕೋಪ ಸ್ಛೋಟಗೊಂಡಿತು, “ಅವಳು ಓದುವ ನೆಪದಲ್ಲಿ ಮೋಜು ಮಾಡಲು ಹೋಗಿದ್ದಾಳೆಂದು ನನಗೆ ಗೊತ್ತಿತ್ತು. ಆದರೆ ಈಗ ಗೊತ್ತಾಗುತ್ತೆ ಅವಳನ್ನು ಓದಲು ಕಳಿಸಿದ್ದಾ ಅಥವಾ ಹುಡುಗನನ್ನು ಹುಡುಕಿಕೊಳ್ಳೊಕಾ ಅಂತಾ…….”

“ಅದೇನು ಮಾತಾಡ್ತಿದ್ದೀಯ ನೀನು. ಈಗ ಅವಳಿಗೆ ಜಾಬ್‌ ಕೂಡ ಸಿಗುತ್ತೆ. ತನ್ನಿಷ್ಟದ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದರಲ್ಲಿ ತಪ್ಪೇನಿದೆ? ಸಂಗೀತಾ ತಿಳಿವಳಿಕೆಯುಳ್ಳವಳು. ಅವಳು ಏನು ನಿರ್ಧಾರ ಕೈಗೊಳ್ಳುತ್ತಾಳೋ, ಸರಿಯಾಗೇ ಇರುತ್ತೆ,” ವಿಕಾಸ್‌ಹೇಳಿದರು.

“ಅವಳು ಯಾರೊಂದಿಗೂ ಹೊಂದಿಕೊಂಡು ಹೋಗುವುದಿಲ್ಲ. ಯಾವುದಕ್ಕೂ ಉಪಯೋಗವಿಲ್ಲ. ಅವಳಿಗೆ ಯಾವುದೇ ಶಿಸ್ತು ಸಂಸ್ಕಾರ ಇಲ್ಲ. ಅಂದಹಾಗೆ ಅವಳು ಓದೋಕೆ ಅಂತ ಲೋನ್‌ ತೆಗೆದುಕೊಂಡಿದ್ದಾಳೆ. ಇನ್ನು ಮದುವೆಯಾಗಿ ಸುಮ್ಮನೆ ಕುಳಿತುಕೊಂಡರೆ ಅದನ್ನು ತೀರಿಸೋರು ಯಾರು? ಈ ಹುಡುಗಿ ಯಾರೊಬ್ಬರಿಗೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ,” ಎಂದು ರಾಧಾ ಮಗಳ ಬಗ್ಗೆ ಮನಬಂದಂತೆ ಮಾತಾಡುತ್ತಲೇ ಇದ್ದರು.

ವಿಕಾಸ್‌ ಗೆ ಹೆಂಡತಿ ಆಡಿದ ಮಾತುಗಳನ್ನು ಕೇಳಿ ಕೋಪ ಬಂತು, “ನಿನ್ನನ್ನು ನೀನು ಅಂತರ್ಯಾಮಿ ಎಂದ ತಿಳಿದುಕೊಳ್ತೀಯಾ. ಈಗ ಗೊತ್ತಾಗುತ್ತೆ ಅಂತ ಹೇಳ್ತಿಯಲ್ಲ, ಅಕ್ಕಪಕ್ಕದ ಹೆಂಗಸರ ಹರಟೆಯ ಹೊರತಾಗಿ ನಿನಗೆ ಬೇರೆ ವಿಷಯ ಏನು ಗೊತ್ತಿದೆ?”

ಪ್ರತಿಯೊಂದು ವಿಷಯದ ಹಾಗೆ ಈ ವಿಷಯದ ಬಗೆಗೂ. ಇಬ್ಬರ ನಡುವೆ ಸಾಕಷ್ಟು ವಾದವಿವಾದ ನಡೆಯಿತು. ಅದು ನಿಲ್ಲುವ ಹಾಗೆ ಕಾಣದಿದ್ದಾಗ ವಿಕಾಸ್‌ ವಿಷಯ ಬದಲಿಸಿ ಸುಮ್ಮನಾಗಿ ಬಿಟ್ಟರು. ಆದಿತ್ಯನ ಬಗ್ಗೆ ಸಕಾರಾತ್ಮಕವಾಗಿ ಮಾತಾಡಬೇಕು. ಮಗಳ ಅಪೇಕ್ಷೆ ಏನು, ಅದರ ಬಗ್ಗೆ ಏಕೆ ಕೇಳಿಸಿಕೊಳ್ಳುವುದಿಲ್ಲ ಎನ್ನುವುದೇ ವಿಕಾಸ್‌ ನ ತಕರಾರು. ಬಳಿಕ ವಿಕಾಸ್‌ ಚಪ್ಪಲಿ ಹಾಕಿಕೊಂಡು, “ನಾನು ಹೊರಗೆ ಹೋಗುವೆ, ನೀನೊಬ್ಬಳೇ ಮಾತಾಡುತ್ತಿರು….” ಎನ್ನುತ್ತಾ ಅಲ್ಲಿಂದ ಹೊರನಡೆದರು.

ಇದೇನು ಮೊದಲ ಬಾರಿಯ ಜಗಳವಾಗಿರಲಿಲ್ಲ. ವಾಗ್ವಾದ ಪ್ರಿಯೆ ರಾಧಾರ ಅಚ್ಚುಮೆಚ್ಚಿನ ಡೈಲಾಗ್‌ ಎಂದರೆ `ಈಗ ಗೊತ್ತಾಗುತ್ತೆ!’ ಎನ್ನುವುದಾಗಿತ್ತು.

ಹಿರಿಯ ಮಗಳು ಪ್ರಿಯಾ ಕೆನಡಾದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಳು. ಸಂಗೀತಾ ಸದ್ಯ ಸಿಂಗಾಪೂರ್‌ ನಲ್ಲಿದ್ದಳು. ಯಾರು ಯಾವುದೇ ಮಾತು ಆಡಲಿ ರಾಧಾ ಹೇಳುವುದು ಇಷ್ಟೇ, ನನಗೆ ಇದೆಲ್ಲ ಗೊತ್ತಿತ್ತು ಎಂದು. ನಾನು ಪ್ರಪಂಚವನ್ನು ಅದೆಷ್ಟು ಕಂಡಿದ್ದೇನೆಂದರೆ ನನಗೆ ಗೊತ್ತಿರದ ಯಾವುದೇ ಸಂಗತಿ ಇಲ್ಲ ಎನ್ನುವುದು ಆಕೆಯ ಡೈಲಾಗ್‌ ಆಗಿರುತ್ತಿತ್ತು. ತನ್ನಿಂದ ಯಾರೂ ಏನೂ ಬಚ್ಚಿಡಲಾಗದು ಎನ್ನುವುದು ಅವರ ಅನಿಸಿಕೆ. ಅದು ಅಡುಗೆಯ ವಿಷಯ, ಫ್ಯಾಷನ್‌, ರಾಜಕೀಯ ಯಾವುದೇ ಆಗಿರಬಹುದು. ಅದೆಲ್ಲದರ ಬಗ್ಗೆ ಆಕೆ ಹೇಳುವುದು, ನನಗೆ ಈ ವಿಷಯ ಮೊದಲೇ ಗೊತ್ತಿತ್ತು ಎಂದು. ಕೆಲವು ದಿನಗಳ ಹಿಂದಷ್ಟೇ ಆಕೆ ಯಾರ ಜೊತೆಗೋ ಮಾತಾಡುತ್ತಾ ರೈತರ ಸತ್ಯಾಗ್ರಹ ನಡೆಯುವ ಕುರಿತು ನನಗೆ ಮೊದಲೇ ಗೊತ್ತಿತ್ತು ಎಂದಿದ್ದರು.

ಆ ಮಾತು ಕೇಳಿಸಿಕೊಂಡು ವಿಕಾಸ್‌ ಆಕೆಯನ್ನು ಕೆಣಕಿದ್ದರು, “ಅದೇನು ಮಾತು ಹೇಳ್ತೀಯಾ ರಾಧಾ, ರೈತರ ಆಂದೋಲನ ನಡೆಯುತ್ತೆ ಅಂತ ನಿನಗೆ ಮೊದಲೇ ಗೊತ್ತಿತ್ತಾ? ಬೇರೆಯವರ ಮುಂದೆ ಮಾತಾಡುವಾಗ ಏನು ಮಾತಾಡಬೇಕು ಅಂತಾ ಯೋಚಿಸಿ ಮಾತಾಡು.”

“ಹೀಗಾಗುತ್ತೆ ಅಂತ ನನಗೆ ಮೊದಲೇ ಗೊತ್ತಿತ್ತು.”

ಎಷ್ಟೋ ಸಲ ವಿಕಾಸ್‌ ಹೆಂಡತಿಯ ಮಾತುಗಳಿಂದಾಗಿ ಸಹೋದ್ಯೋಗಿಗಳ ಮುಂದೆ ಅಪಹಾಸ್ಯಕ್ಕೀಡಾಗುತ್ತಿದ್ದರು. ಅಮ್ಮ ಇದ್ದಾಗ ತಮ್ಮ ಗೆಳತಿಯರಾರು ಬರದ ಹಾಗೆ ಎರಡೂ ಹೆಣ್ಣುಮಕ್ಕಳು ಎಚ್ಚರ ವಹಿಸುತ್ತಿದ್ದರು. ವಿಕಾಸ್‌ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್‌. ಆದರೆ ರಾಧಾ ಬಹಳ ಜಿಪುಣರಾಗಿದ್ದರು, ಮಾತಿನಲ್ಲಿ ಬಹಳ ತೀಕ್ಷ್ಣವಾಗಿದ್ದರು. ಅವರಿಗೆ ತಮ್ಮ ಜ್ಞಾನದ ಬಗ್ಗೆ ಬಹಳ ಹೆಮ್ಮೆ ಇತ್ತು. ಅದು ಬೇರೆಯವರ ದೃಷ್ಟಿಯಲ್ಲಿ ಮೂರ್ಖತೆಯಲ್ಲಿ ಬದಲಾಗಿತ್ತು.

ಮರುದಿನ ರಾಧಾ ಸಂಗೀತಾಳಿಗೆ ಫೋನ್‌ ಮಾಡಿ, “ನೀನು ಮದುವೆಯಾಗಿ ಹೊರಟುಹೋದರೆ ನಿನ್ನ ಸಾಲ ತೀರಿಸುವವರಾರು?” ಎಂದು ನೇರವಾಗಿ ಕೇಳಿದರು.

“ನಾನು ಭಾರತಕ್ಕೆ ಬಂದ ಬಳಿಕ ಕೆಲಸಕ್ಕೆ ಹೋಗಿ ಸಾಲವನ್ನು ತೀರಿಸ್ತೀನಿ. ನಾನು ಸಿಂಗಾಪೂರದಿಂದ ಬೆಂಗಳೂರಿಗೆ ಬರ್ತೀನಿ. ಆಗಲೇ ನಿಮಗೆ ಆದಿತ್ಯನನ್ನು ಭೇಟಿ ಮಾಡಿಸ್ತೀನಿ,” ಎಂದಳು ಸಂಗೀತಾ.

ರಾಧಾ ಯಾವುದೇ ಉತ್ಸಾಹ ತೋರಿಸಲಿಲ್ಲ. ಸಂಗೀತಾ ಉದಾಸಭರಿತಳಾಗಿ ಫೋನ್‌ ಇಟ್ಟಳು. ಸಂಗೀತಾ ಮತ್ತು ಆದಿತ್ಯರನ್ನು ಏರ್‌ ಪೋರ್ಟ್‌ ನಿಂದ ಕರೆತರಲು ವಿಕಾಸ್‌ ಹೋಗಲಿದ್ದರು. ವಿಕಾಸ್‌ ಆಫೀಸ್‌ ನಿಂದ ನೇರವಾಗಿ ಏರ್‌ ಪೋಟ್‌ ಗೆ ಹೋಗುವುದು, ತಡರಾತ್ರಿ ಎಲ್ಲರೂ ಸೇರಿ ಮನೆಗೆ ಬರುವುದು, ಮನೆಯಲ್ಲಿಯೇ ಎಲ್ಲರೂ ಕೂಡಿ ಡಿನ್ನರ್‌ ಮಾಡುವುದೆಂದು ನಿರ್ಧಾರವಾಗಿತ್ತು.

ಆದಿತ್ಯ ಪ್ರಥಮ ಭೇಟಿಯಲ್ಲಿಯೇ ಇಷ್ಟವಾದ. ಆದರೆ ರಾಧಾಗೆ ಮನಸ್ಸಿನಲ್ಲಿ ಒಂದು ಬೇಸರವಿತ್ತು. ಮಗಳನ್ನು ಓದಲೆಂದು ಕಳಿಸಿದ್ದೆ, ಅವಳು ಹುಡುಗನನ್ನು ಆಯ್ಕೆ ಮಾಡಿಕೊಂಡು ಬಂದ ಬಗ್ಗೆ ಅವಳ ಮೇಲೆ ಆಕೆಗೆ ಕೋಪವಿತ್ತು. ಪತಿ ಈಗಾಗಲೇ ಆದಿತ್ಯನನ್ನು ಭಾವಿ ಅಳಿಯನೆಂದು ಭಾವಿಸಿರುವ ಬಗೆಗೂ ಸಿಟ್ಟು ಇತ್ತು.

ಆದಿತ್ಯನ ತಂದೆಗೆ ಮೈಸೂರಿನಲ್ಲಿ ದೊಡ್ಡ ಬಿಸ್‌ ನೆಸ್‌ ಇದೆ. ಅವರದು ಬಹು ದೊಡ್ಡ ಕುಟುಂಬ. ಇಬ್ಬರೇ ಮಕ್ಕಳು. ಅದರಲ್ಲಿ ಆದಿತ್ಯ ಮೊದಲನೆಯವನು. ಅಭಯ್‌ ಎರಡನೆಯವನು. ಅವನಿನ್ನೂ ಓದುತ್ತಿದ್ದಾನೆಂದು ಸಂಗೀತಾ ಫೋನ್‌ ನಲ್ಲೇ ಹೇಳಿದ್ದಳು. ಆದಿತ್ಯನ ಜೊತೆ ಮಾತಾಡಿದ ಬಳಿಕ ರಾಧಾರಿಗೆ ಅವನಲ್ಲಿ ಯಾವುದೇ ಲೋಪ ಕಂಡುಹಿಡಿಯಲು ಸಾಧ್ಯವಿರಲಿಲ್ಲ. ಆದರೂ ಮಗಳು ತನಗಾಗಿ ಹುಡುಗನನ್ನು ಆಯ್ಕೆ ಮಾಡಿಕೊಂಡಿದ್ದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ವಿಕಾಸ್‌ ಗೆ ಆದಿತ್ಯ ಬಹಳ ಇಷ್ಟವಾಗಿದ್ದ. ಅವನ ಜೊತೆ ಅದೆಷ್ಟು ಚೆನ್ನಾಗಿ ಬೆರೆಯುತ್ತಿದ್ದರೆಂದರೆ, ಅವನು ತಮ್ಮ ಕುಟುಂಬದ ಸದಸ್ಯನೇ ಎಂಬಂತೆ.

ಡಿನ್ನರ್‌ ಸಮಯದಲ್ಲಿ ಸಂಗೀತಾ, “ಅಮ್ಮಾ, ನಾವು ಇವತ್ತು ರಾತ್ರಿಯೇ ಮೈಸೂರಿಗೆ ಹೋಗಲಿದ್ದೇವೆ. ಅವನ ತಾಯಿ ತಂದೆ ನಮ್ಮನ್ನು ಸ್ವಾಗತಿಸಿ ಕರೆದುಕೊಂಡು ಹೋಗಲು ರೈಲು ನಿಲ್ದಾಣಕ್ಕೆ ಬರಲಿದ್ದಾರೆ. ನಾನು ಬಹಳ ಬೇಗ ಅಲ್ಲಿಂದ ವಾಪಸ್ ಬರ್ತೀನಿ,” ಎಂದು ಹೇಳಿದಳು.

“ನೀನು ನಮ್ಮನ್ನು ಕೇಳದೆಯೇ ನಿನಾಗಿಯೇ ಮದುವೆಯಾಗಲಿರುವ ಹುಡುಗನ ಮನೆಗೆ ಹೋಗ್ತೀಯಾ ಅಂತ ನನಗೆ ಗೊತ್ತಿತ್ತು…. ಈಗ ಗೊತ್ತಾಗುತ್ತೆ…..” ಎಂದರು ರಾಧಾ.

ವಿಕಾಸ್‌ ಆದಿತ್ಯನ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಯನ್ನು ಸಂಭಾಳಿಸುತ್ತಾ, “ನಿನಗೆ ಈ ವಿಷಯ ಮೊದಲೇ ಗೊತ್ತಿದ್ದುದು ಒಳ್ಳೇಯದೇ ಆಯ್ತು ಬಿಡು. ನೀನು ಮಗಳನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ,” ಎಂದರು.

ಸಂಗೀತಾ ಅಮ್ಮನ ಮಾತುಗಳ ಬಗ್ಗೆ ಗಮನವನ್ನೇ ಕೊಟ್ಟಿರಲಿಲ್ಲ. ಯುವ ಹೃದಯಗಳು ಕನಸುಗಳಲ್ಲಿ ಮುಳುಗಿ ಹೋಗಿದ್ದವು. ಇಬ್ಬರು ಪರಸ್ಪರ ದೃಷ್ಟಿಹರಿಸುತ್ತಾ ಮುಗುಳ್ನಗುತ್ತಿದ್ದರು. ಆ ದೃಶ್ಯ ವಿಕಾಸ್‌ ಗೆ ಬಹಳ ಇಷ್ಟವಾಗಿತ್ತು. ರಾತ್ರಿ ಇಬ್ಬರೇ ಇದ್ದಾಗ ರಾಧಾ ಈ ಬಗ್ಗೆ ಗೊಣಗಾಡುತ್ತಿದ್ದರು.

ವಿಕಾಸ್‌ ಹೆಂಡತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾ, “ನೀನು ಒಳ್ಳೆಯ ವಿಷಯಕ್ಕಾದರೂ ಸಂತೋಷ ಪಡುವುದನ್ನು ಕಲಿತುಕೋ. ಸಂಗೀತಾ ಅಷ್ಟೊಂದು ಒಳ್ಳೆಯ ಹುಡುಗನನ್ನು ಆಯ್ಕೆ ಮಾಡಿದ್ದಾಳೆ. ಅವಳು ನಿಜಕ್ಕೂ ಬಹಳ ತಿಳಿವಳಿಕೆಯುಳ್ಳವಳು. ಅವನ ಬಗ್ಗೆ ಚೆನ್ನಾಗಿ ತಿಳಿದುಕೊಂಡೇ ನಮಗೆ ಭೇಟಿ ಮಾಡಿಸಲು ಕರೆದುಕೊಂಡು ಬಂದಿದ್ದಾಳೆ,” ಎಂದರು.

“ಅವಳು ಮದುವೆ ಮಾಡಿಕೊಂಡು ಪಶ್ಚಾತ್ತಾಪಪಡುತ್ತಾಳೆ. ಅವಳು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅವಳಿಗೆ ಏನೊಂದೂ ಕೆಲಸ ಕಾರ್ಯ ಗೊತ್ತಿಲ್ಲ. ಅವಳಿಗೆ ಗೊತ್ತಿರುವುದು ಕೇವಲ ಸುತ್ತಾಡುವುದು. ಆಗ ಗೊತ್ತಾಗುತ್ತೆ ಅವಳಿಗೆ, ಮದುವೆ ಮಾಡಿಕೊಂಡು ತಪ್ಪು ಮಾಡಿದೆ ಎಂದು ಅಳುತ್ತಾ ಕೂರುತ್ತಾಳೆ,” ಎಂದರು ಕೋಪದಲ್ಲಿ.

ವಿಕಾಸ್‌ ಗೂ ಕೋಪ ಬಂತು, “ನೀನೆಂಥ ತಾಯಿ. ಮಗಳ ಬಗ್ಗೆ ಈ ರೀತಿ ಕೆಟ್ಟದಾಗಿ ಯೋಚಿಸ್ತೀಯಲ್ಲ. ನಿನ್ನ ಬಗ್ಗೆ ನನಗೆ ನಾಚಿಕೆ ಆಗುತ್ತೆ,” ಎಂದರು.

ಸಂಗೀತಾಳಿಗೆ ಅಮ್ಮನ ಮನಸ್ಥಿತಿ ಚೆನ್ನಾಗಿ ಗೊತ್ತಿತ್ತು. ಅವಳು ಒಳಗೊಳಗೆ ಬಹಳ ದುಃಖಿತಳಾಗಿದ್ದಳು. ಅವಳು ಆದಿತ್ಯನನ್ನು ಬಹಳ ಪ್ರೀತಿಸುತ್ತಿದ್ದಳು. ಅವನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದಳು. ಆದರೆ ತಾಯಿ ಈ ಬಗ್ಗೆ ಒಳ್ಳೆಯ ರೀತಿಯಲ್ಲಿ ಯೋಚಿಸುವುದಿಲ್ಲ ಎಂದು ಅವಳಿಗೆ ಗೊತ್ತಿತ್ತು. ಮರುದಿನ ಪ್ರಿಯಾಳ ಫೋನ್‌ ಬಂತು. ಸಂಗೀತಾಳ ಬಗ್ಗೆ ಅವಳು ಬಹಳ ಖುಷಿಯಾಗಿದ್ದಳು.

“ಆದಿತ್ಯ ಬಹಳ ಒಳ್ಳೆಯ ಕುಟುಂಬದ ಹುಡುಗ. ಹಾಗೆಂದೇ ಅವಳು ಅವನನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾಳೆ. ನಾವಾಗಿಯೇ ಹುಡುಕಿದ್ದರೂ ಅವಳಿಗೆ ಇಂತಹ ಒಳ್ಳೆಯ ಹುಡುಗ ಸಿಗುತ್ತಿರಲಿಲ್ಲ,” ಎಂದು ಸಂತೋಷದಿಂದ ಹೇಳಿದಳು.

“ನೀನೂ ಅವಳ ಪರ ತುತ್ತೂರಿ ಊದುತ್ತೀಯಾ ಅಂತಾ ನನಗೆ  ಮೊದಲೇ ಗೊತ್ತಿತ್ತು,” ಎಂದು ರಾಧಾ ಗುಡುಗಿದರು.

“ಓಹೊಹೋ! ಅಮ್ಮ ನಿಮಗೆ ಪ್ರತಿಯೊಂದು ವಿಷಯ ಮೊದಲೇ ಗೊತ್ತಿರುತ್ತಲ್ಲ…. ಅದರ ಬಗ್ಗೆಯೇ ನಮಗೆ ಯೋಚನೆ ಆಗುತ್ತಿರುತ್ತದೆ. ಯಾರಾದರೂ ಹೇಳೋದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿಮ್ಮಾ…..” ಎಂದಳು.

ಪ್ರಿಯಾಳ ಫೋನ್‌ ಕಟ್‌ ಆಗುತ್ತಿದ್ದಂತೆ, ಇತ್ತ ಕಡೆಯಿಂದ ಸಂಗೀತಾ ಫೋನ್‌ ಮಾಡಿ ಆದಿತ್ಯನ ತಾಯಿ ತಂದೆಯರ ಜೊತೆ ಮಾತಾಡಿಸಿದಳು. ವಿಕಾಸ್‌ ಗೆ ಅವರಿಬ್ಬರ ಸ್ವಭಾವ ಬಹಳ ಇಷ್ಟವಾಯಿತು. ಆದಿತ್ಯನ ತಾಯಿ ತಂದೆಗೆ ಸಂಗೀತಾಳನ್ನು ಭೇಟಿಯಾಗಿ ಬಹಳ ಖುಷಿಯಾಗಿತ್ತು. ಅವಳು ಎಷ್ಟು ಸಾಧ್ಯವೋ, ಅಷ್ಟು ಬೇಗ ಅವಳನ್ನು ತಮ್ಮ ಸೊಸೆಯಾಗಿ ಮಾಡಿಕೊಳ್ಳಲು ಇಚ್ಛಿಸಿದ್ದರು.

ವಿಕಾಸ್‌ ಕೂಡ ಈ ಮದುವೆಗೆ ತಮ್ಮ ಒಪ್ಪಿಗೆ ಸೂಚಿಸಿದಾಗ, ಆದಿತ್ಯನ ತಂದೆ, “ನೀವು ಒಂದು ಸಲ ಬಂದು ನಮ್ಮ ಮನೆ ನೋಡಿ ಖಾತ್ರಿ ಮಾಡಿಕೊಳ್ಳಿ. ಸಂಗೀತಾ ನಮ್ಮ ಮನೆಯಲ್ಲಿ ಖುಷಿಯಾಗಿರುತ್ತಾಳೆ ಎನ್ನುವುದು ನಿಮಗೆ ಗೊತ್ತಾಗಬೇಕು,” ಎಂದು ಹೇಳಿದ್ದನ್ನು ಕೇಳಿ ವಿಕಾಸ್‌ಗೆ ಬಹಳ ಖುಷಿಯಾಯಿತು.

“ನಾವು ಆದಷ್ಟು ಬೇಗನೆ ಬರುತ್ತೇವೆ,” ಎಂದು ಅವರಿಗೆ ಹೇಳಿದರು.

ಎರಡೂ ಕುಟುಂಬಗಳು ಈಗ ಮುಂದಿನ ಕಾರ್ಯಕ್ರಮದಲ್ಲಿ ಮಗ್ನರಾದರು. ಸಂಗೀತಾ 2 ದಿನಗಳಲ್ಲಿ ವಾಪಸ್‌ ಬಂದಳು. ಅವಳು ಬ್ಯಾಗ್‌ ತೆರೆದು ಸಾಕಷ್ಟು ಗಿಫ್ಟ್ ಗಳನ್ನು ತೋರಿಸುತ್ತಾ, “ಅಮ್ಮಾ, ಅಪ್ಪಾ, ಇಲ್ನೋಡಿ. ಅವರು ನನಗೆ ಉಡುಗೊರೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅವರು ಎಷ್ಟೊಂದು ಪ್ರೀತಿಯಿಂದ ನೋಡಿಕೊಂಡರೆಂದರೆ, ಅದರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ನನಗೆ ಬಹಳ ಖುಷಿಯಾಯ್ತು,” ಎಂದಳು.

ರಾಧಾ ಎಲ್ಲರನ್ನೂ ನೋಡಿದರು. ಆದರೆ ಅದರ ಬಗ್ಗೆ ಏನೂ ಹೇಳಲಿಲ್ಲ. ತಮ್ಮ ಕೋಣೆಗೆ ಹೊರಟುಹೋದರು.

10 ದಿನಗಳ ಬಳಿಕ ಸಂಗೀತಾ ಹೊರಟು ಹೋದಳು. ಅವಳ ಕೋರ್ಸ್‌ ಮುಗಿದಿತ್ತು. ಅವಳಿಗೆ ಅಲ್ಲಿಯೇ ಯಾವುದಾದರೂ ಜಾಬ್ ಹುಡುಕಬೇಕಿತ್ತು. ಆದಿತ್ಯ ಈಗ ಮೈಸೂರಿನಲ್ಲಿಯೇ ತನ್ನ ಕುಟುಂಬದ ವ್ಯವಹಾರ ನೋಡಿಕೊಳ್ಳುವ ಯೋಜನೆ ಮಾಡಿದ್ದ.

ಆದಿತ್ಯನ ತಂದೆ ಅನಿಲ್ ‌ಹಾಗೂ ತಾಯಿ ಮಧು ಬೆಂಗಳೂರಿಗೆ ಬಂದು ಹೋಟೆಲ್ ‌ನಲ್ಲಿ ಉಳಿದುಕೊಂಡು, ವಿಕಾಸ್‌ ಮತ್ತು ರಾಧಾರನ್ನು ಭೇಟಿಯಾಗಲು ಬಂದರು. ಅವರ ಅದ್ಭುತ ಉತ್ಸಾಹ, ದಾಂಪತ್ಯ ಪ್ರೀತಿ ಕಂಡು ರಾಧಾ ಅಚ್ಚರಿಗೊಂಡರು. ಅವರು ವಿಕಾಸ್‌ ಹಾಗೂ ರಾಧಾರಿಗಾಗಿ ಸಾಕಷ್ಟು ಗಿಫ್ಟ್ ಗಳನ್ನು ತಂದಿದ್ದರು. ರಾಧಾ ಮಾಡಿದ ಅಡುಗೆಯ ಸವಿ ಸವಿದು ಅವರನ್ನು ಮನಸಾರೆ ಹೊಗಳಿದರು.

ಅವರ ಮಾತು ಕೇಳಿಸಿಕೊಂಡು ರಾಧಾ, “ಆದರೆ ನಮ್ಮ ಸಂಗೀತಾಗೆ ಏನೂ ಮಾಡಲು ಬರುವುದಿಲ್ಲ. ನಾವು ನಿಮಗೆ ಮೊದಲೇ ಹೇಳಲಿಲ್ಲ ಅಂತ ನೀವು ಅಂದ್ಕೊಬಾರದು. ಅದಕ್ಕೆ ನಾನು ನಿಮಗೆ ಮೊದಲೇ ಈ ವಿಷಯ ತಿಳಿಸುತ್ತಿದ್ದೇನೆ,” ಎಂದರು.

ಆದಿತ್ಯನ ತಾಯಿ ನಗುತ್ತಲೇ, “ಸಂಗೀತಾ ಬಹಳ ಮುದ್ದಾದ ಹುಡುಗಿ. ಅವಳೇ ತನಗೇನೂ ಬರುವುದಿಲ್ಲ ಎಂದು ನಮಗೆ ಹೇಳಿದಳು. ಅಂದಹಾಗೆ ನಮ್ಮ ಮನೆಯಲ್ಲಿ ಅಡುಗೆ ಮಾಡುವ ಅವಶ್ಯಕತೆಯೇ ಇಲ್ಲ. ನಮ್ಮ ಮನೆಯಲ್ಲಿ ಇಬ್ಬರು ಅಡುಗೆಯವರಿದ್ದಾರೆ. ಅಡುಗೆಮನೆಗೆ ನಾನೂ ಸಹ ಹೋಗುವುದಿಲ್ಲ. ಇಂದಿನ ಕಾಲದ ಹುಡುಗಿಯರು ತಮ್ಮ ಕೆರಿಯರ್ ರೂಪಿಸಿಕೊಳ್ಳಲು ಕಷ್ಟಪಡುತ್ತಾರೆ. ಅವಶ್ಯಕತೆ ಬಿದ್ದಾಗ ಅವರು ಎಲ್ಲವನ್ನೂ ಮಾಡಲು ಕಲಿಯುತ್ತಾರೆ. ಸಂಗೀತಾ ಅಲ್ಲಿ ಒಬ್ಬಳೇ ಇದ್ದಾಳೆಂದರೆ ಅವಳು ಬಹಳಷ್ಟನ್ನು ಮಾಡಲು ಕಲಿತಿರುತ್ತಾಳೆ,” ಎಂದರು.

ರಾಧಾ ಮೌನವಾಗಿ ಇದ್ದರು. ಅನಿಲ್ ‌ಹಾಗೂ ಮಧು ಇರುವಷ್ಟು ಹೊತ್ತು ಚೆನ್ನಾಗಿ ಸಮಯ ಕಳೆದರು. ಅವರು ಹೊರಟು ನಿಂತಾಗ ಅವರಿಗೂ ಗಿಫ್ಟ್ ಕೊಟ್ಟು ಕಳುಹಿಸಿದರು. ಮುಂದಿನ ವಾರ ವಿಕಾಸ್‌ ಹಾಗೂ ರಾಧಾ ಮೈಸೂರಿಗೆ ಹೋಗುವುದೆಂದು ನಿರ್ಧಾರವಾಯಿತು. ಆಗಲೇ ನಿಶ್ಚಿತಾರ್ಥ ಮಾಡುವುದು ಹಾಗೂ ಸಂಗೀತಾಳನ್ನು ಕರೆಸಿಕೊಳ್ಳುವುದು ಎಂದು ತೀರ್ಮಾನಿಸಲಾಯಿತು.

ಆ ವಿಷಯ ಕೇಳಿ ರಾಧಾಗೆ ವಿಪರೀತ ಕೋಪ ಬಂತು. “ಅವಳು ಈಗಷ್ಟೇ ಹೋಗಿದ್ದಾಳಲ್ಲ….. ಅವಳನ್ನು ಮತ್ತೆ ಕರೆಸಿಕೊಳ್ಳುವುದಾ? ಬರುವ ಖರ್ಚನ್ನು ಮತ್ತೆ ನಾವು ಭರಿಸಬೇಕಾ?” ಎಂದು ಪತಿಯನ್ನು ಕೇಳಿದರು.

ಸಂಗೀತಾ ಅಪ್ಪನಿಂದ ಈ ವಿಷಯ ತಿಳಿದುಕೊಂಡು ಫೋನ್‌ ಮಾಡಿ, “ಅಮ್ಮಾ, ನೀವು ಟಿಕೆಟ್‌ ಬಗ್ಗೆ ಚಿಂತೆ ಮಾಡಬೇಡಿ. ಆದಿತ್ಯ ನನಗೆ ಆಗಲೇ ಟಿಕೆಟ್‌ ಬುಕ್‌ ಮಾಡಿ ಕಳಿಸಿಕೊಟ್ಟಿದ್ದಾರೆ,” ಎಂದು ಹೇಳಿದಳು.

“ಅವರು ಮದುವೆಗೆ ಇಷ್ಟು ಆತುರ ತೋರುತ್ತಿರುವುದನ್ನು ನೋಡಿದರೆ ಇದರಲ್ಲಿ ಏನೋ ಗೊಂದಲವಿದೆ ಅನಿಸುತ್ತೆ. ಅಷ್ಟು ದೊಡ್ಡ ಮನೆತನದ ಕುಟುಂಬ ಸಂಗೀತಾಳನ್ನು ಸೊಸೆಯಾಗಿ ಸ್ವೀಕರಿಸುತ್ತಿರುವುದು ನನಗೆ ಸಂದೇಹಕ್ಕೆ ಎಡೆ ಮಾಡಿಕೊಡುತ್ತಿದೆ. ಅದರ ಬಗ್ಗೆ ಆಮೇಲೆ ಗೊತ್ತಾಗೇ ಆಗುತ್ತೆ……” ಎಂದು ಗೊಣಗಾಡಿದರು.

“ಗೊಂದಲ, ಸಂದೇಹ ಬೇರೆಲ್ಲೂ ಇಲ್ಲ. ಎಲ್ಲಾ ನಿನ್ನ ಮನಸ್ಸಿನಲ್ಲೇ ಇದೆ,” ಎಂದರು ವಿಕಾಸ್‌.

ಸಂಗೀತಾ ನೇರವಾಗಿ ಮೈಸೂರಿಗೇ ಬಂದಿಳಿದಳು. ವಿಕಾಸ್‌ ಹಾಗೂ ರಾಧಾ ಕೂಡ ಅವಳ ಜೊತೆ ಸೇರಿಕೊಂಡರು. ಪ್ರಿಯಾ ತಾನು ನೇರವಾಗಿ ಮದುವೆಗೆ ಬರುವುದಾಗಿ ಹೇಳಿದಳು. ಮೈಸೂರಿನ ಆದಿತ್ಯನ ವಿಶಾಲವಾದ ಬಂಗಲೆ, ಅಲ್ಲಿ ಹಲವು ಕೆಲಸಗಾರರು ಇರುವುದನ್ನು ನೋಡಿ ರಾಧಾ ದಂಗಾಗಿ ಹೋದರು. ಅಲ್ಲಿದ್ದ ಪ್ರತಿಯೊಬ್ಬರ ಸ್ವಭಾವ ಅದೆಷ್ಟು ನಮ್ರತೆ, ಸಹಜತೆಯಿಂದ ತುಂಬಿತ್ತೆಂದರೆ, ಯಾರೊಬ್ಬರಲ್ಲೂ ಗರ್ವ ಕಾಣಿಸುತ್ತಿರಲಿಲ್ಲ. ರಾಧಾರ ಸಹಜ ಸ್ವಭಾವವೆಂಬಂತೆ ಅದರಲ್ಲಿಯೂ ಲೋಪ ದೋಷ ಹುಡುಕಲು ನೋಡಿದರು. ಆದರೆ ಯಾವೊಂದು ಲೋಪ ಕಾಣಿಸಲಿಲ್ಲ.

ಆದಿತ್ಯನ ತಾಯಿ ಮಧು ಹಾಗೂ ಸಂಗೀತಾ ಫೋನ್‌ ನಲ್ಲಿಯೇ ಸಂಪರ್ಕದಲ್ಲಿದ್ದುಕೊಂಡು ನಿಶ್ಚಿತಾರ್ಥದ ಪೋಷಾಕುಗಳನ್ನು ಖರೀದಿಸಿದ್ದರು. ಆ ಬಗ್ಗೆ ತಿಳಿದ ರಾಧಾ ಚಕಿತರಾದರು. ಆದಿತ್ಯನ ತಂದೆ, ಅಭಯ್‌, ಸಂಗೀತಾಳ ಜೊತೆ ತಮಾಷೆ ಮಾಡುವುದರಲ್ಲಿ ಮಗ್ನರಾಗಿದ್ದರು.

ವಿಕಾಸ್‌ ಹಾಗೂ ರಾಧಾರಿಗಾಗಿ ಗೆಸ್ಟ್ ರೂಮ್ ಬುಕ್‌ ಮಾಡಲಾಗಿತ್ತು. ಅನಿಲ್ ‌ಹಾಗೂ ಮಧು ಅವರ ಚಿರಪರಿಚಿತರು ಸೇರಿದಂತೆ ಸುಮಾರು 100 ಜನರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಜರುಗಿತು. ವಿಕಾಸ್‌ ಖರ್ಚು ಹಂಚಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದಾಗ, ಅನಿಲ್ ‌ಕೈ ಜೋಡಿಸಿ, “ನಮಗೆ ನಿಮ್ಮಿಂದ ಒಂದು ರೂ. ಕೂಡ ಬೇಕಿಲ್ಲ. ಸಂಗೀತಾ ನಮ್ಮ ಮನೆಗೆ ಬರುತ್ತಿರುವುದೇ ನಮಗೆ ಖುಷಿ. ಎಲ್ಲ ಖರ್ಚನ್ನೂ ನಮಗೆ ಮಾಡಲು ಬಿಡಿ,” ಎಂದು ವಿನಯದಿಂದ ಕೇಳಿದರು.

ರಾಧಾ ವಿಕಾಸ್‌ ಕಿವಿಯಲ್ಲಿ, “ಇಷ್ಟೊಂದು ಒಳ್ಳೆಯವರಾಗಿ ತೋರಿಸಿಕೊಳ್ಳುತ್ತಿದ್ದಾರೆ. ಇಂತಹವರ ಬಣ್ಣ ಆಮೇಲೆ ಬಯಲಾಗುತ್ತೆ. ಆಗ ವಿಷಯ ಏನೂಂತ ಗೊತ್ತಾಗುತ್ತೆ,” ಎಂದು ಮೆಲ್ಲನೆ ಉಸುರಿದರು.

ಸಮೀಪದಲ್ಲಿಯೇ ಕುಳಿತಿದ್ದ ಸಂಗೀತಾಳಿಗೆ ಅಮ್ಮ ಹೇಳಿದ್ದು ಕೇಳಿಸಿತು. ಅವಳು, “ಅಮ್ಮಾ, ನಿಮ್ಮ ಮಾತಿಗೂ ಒಂದು ಮಿತಿ ಇರಲಿ. ಅಷ್ಟೊಂದು ಒಳ್ಳೆಯ ಜನರ ಬಗ್ಗೆ ನಿಮಗೆ ಹೀಗೇ ಹೇಳಲು ಮನಸ್ಸಾದರೂ ಹೇಗೆ ಬರುತ್ತೆ? ನನ್ನ ಬಟ್ಟೆ, ಆಭರಣ ಎಲ್ಲವನ್ನೂ ಆದಿತ್ಯನ ಮಮ್ಮಿಯೇ ಕೊಡಿಸಿದ್ದಾರೆ. ನಿಮಗೆ ಏನೊಂದನ್ನೂ ಖರೀದಿಸಲು ಅವಕಾಶ ಕೊಡಲಿಲ್ಲ. ಈಗ ಮದುವೆಗೂ ಸಂಪೂರ್ಣ ಶಾಪಿಂಗ್‌ ಮಾಡಲು ಸಿದ್ಧತೆ ನಡೆಸಿದ್ದಾರೆ. ಇಂಥದರಲ್ಲಿ ನಿಮ್ಮ ಮಾತು. ಛೇ…ಛೇ…. ಬಹಳ ಬೇಜಾರಾಗುತ್ತೆ,” ಎಂದಳು ಸ್ವಲ್ಪ ಸಿಡುಕಿನಿಂದ.

“ನಿನಗೇನು ಗೊತ್ತಿದೆ…. ನಿಮ್ಮಂಥ ಹುಡುಗಿಯರು ಆಮೇಲೆ ಆಳುತ್ತಾ ಕೂರುತ್ತೀರಿ ಅಷ್ಟೆ. ಆಗ ಗೊತ್ತಾಗುತ್ತೆ…..” ಸಂಗೀತಾಳಿಗೆ ಅಮ್ಮನ ಮಾತು ಕೇಳಿ ಅಳುವೇ ಬಂದುಬಿಟ್ಟಿತು. ಅವಳು ಅಳುತ್ತಿರುವುದನ್ನು ನೋಡಿ ವಿಕಾಸ್‌ ಅವಳನ್ನು ತಬ್ಬಿಕೊಂಡು ಸಮಾಧಾನಪಡಿಸುತ್ತಾ, “ಸಂಗೀತಾ, ದುಃಖಿಸಬೇಡ, ನಿನ್ನ ಅಮ್ಮನಿಗೆ ಸ್ವಲ್ಪ ಹೆಚ್ಚೇ ಎಲ್ಲಾ ಮೊದಲೇ ಗೊತ್ತಿರುತ್ತದೆ. ನೀನೇನು ಯೋಚಿಸಬೇಡ,” ಎಂದರು.

ವಿಕಾಸ್‌ ಮತ್ತು ಸಂಗೀತಾಳಿಗೆ ರಾಧಾ ಬಗ್ಗೆ ಬೇಸರವಿತ್ತು. ಆದರೆ ಇದು ರಾಧಾರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ಕೂಡಿ ಕುಳಿತರು. ಆಗ ಮಧು, “ನಾನು ನಿಮ್ಮೊಂದಿಗೆ ಒಂದಿಷ್ಟು ತುರ್ತು ವಿಚಾರ ತಿಳಿಸಬೇಕಿದೆ,” ಎಂದರು.

ಅದನ್ನು ಕೇಳಿ ರಾಧಾ, `ನಾನು ನಿಮಗೆ ಹೇಳಿದ್ನಲ್ಲ, ಅದೇ ಇರಬಹುದು,’ ಎಂದು ಗಂಡನತ್ತ ಸನ್ನೆ ಮಾಡುತ್ತಾ, ಮಧುಗೆ, “ಹೇಳಿ…. ಹೇಳಿ…. ಏನು ವಿಷಯ?” ಎಂದರು ಕಾತುರತೆಯಿಂದ.

“ನೋಡಿ, ನಮಗೆ ಹಣದ ಕೊರತೆ ಏನಿಲ್ಲ. ನಮ್ಮದೇನಿದ್ದರೂ ಮಕ್ಕಳ ಖುಷಿಯಲ್ಲಿ ಖುಷಿ ಕಾಣಬೇಕಿದೆ. ನಮ್ಮಿಚ್ಛೆ ಏನೆಂದರೆ ಈ ಮದುವೆಯನ್ನು ಬೇಗ ಮಾಡಿ ಮುಗಿಸಬೇಕು. ಆಗ ಮನೆಯಲ್ಲಿ ವಿಶಿಷ್ಟ ಬೆಳಕು ಮೂಡುತ್ತದೆ. ನನಗೆ ಹೆಣ್ಣುಮಕ್ಕಳಿಲ್ಲ. ಸಂಗೀತಾಳ ಜೊತೆಗೆ ಇರುವ ಇಚ್ಛ ಪ್ರಬಲವಾಗುತ್ತಿದೆ. ನನಗೆ ಬಹಳ ಕಾಯುವುದಕ್ಕೆ ಆಗುವುದಿಲ್ಲ. ನಾವು ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತೇವೆ.

“ಸಂಗೀತಾ, ತನ್ನ ಎಜುಕೇಶನ್‌ ಗಾಗಿ ತೆಗೆದುಕೊಂಡು ಸಾಲವನ್ನು ನಾವೇ ತೀರಿಸ್ತೀವಿ. ಅವಳು ನಮ್ಮ ಬಿಸ್‌ ನೆಸ್ ನೋಡಿಕೊಂಡು ಹೋದರೆ ಸಾಕು. ಅವಳು ಒಬ್ಬಳೇ ಎಲ್ಲೆಲ್ಲೂ ಉಳಿದುಕೊಂಡು ಉದ್ಯೋಗ ಮಾಡುವ ಅಗತ್ಯವಿಲ್ಲ. ಸಂಗೀತಾ ಆದಿತ್ಯ ಇಬ್ಬರೂ ಸೇರಿ ಬಿಸ್‌ ನೆಸ್‌ ಮುಂದುವರಿಸಬೇಕು. ಜೊತೆಗೆ ಅವರು ನಮ್ಮೊಂದಿಗೇ ಇರಬೇಕು. ಇದಕ್ಕಿಂತ ನಮಗೆ ಹೆಚ್ಚೇನೂ ಬೇಕ್ಕಿಲ್ಲ,” ಎಂದರು.

ವಿಕಾಸ್‌ ಕೈ ಮುಗಿಯುತ್ತಾ, “ನೀವು ಹೇಳಿದಂತೆಯೇ ಆಗಲಿ. ನಾವು ಅದಕ್ಕೆ ಸಿದ್ಧರಿದ್ದೇವೆ. ಸಂಗೀತಾಳ ಲೋನ್‌ ತೀರಿಸುವ ಬಗ್ಗೆ ನೀವು ಯೋಚಿಸಬೇಡಿ. ನಮ್ಮ ಒಂದು ಫ್ಲಾಟ್‌ ಬಾಡಿಗೆಗೆ ಕೊಟ್ಟಿದ್ದೇವೆ. ಅದನ್ನು ಸಂಗೀತಾಳಿಗೆ ಕೊಡಲೆಂದೇ ಇನ್ವೆಸ್ಟ್ ಮಾಡಿದ್ದು. ಈಗ ಅದನ್ನು ಮಾರಿಬಿಡುತ್ತೇವೆ. ಅದರಿಂದ ಲೋನ್‌ ಚುಕ್ತಾ ಆಗುತ್ತದೆ. ನೀವು ಮದುವೆಗೆ ಯಾವ ಡೇಟ್‌ ಫಿಕ್ಸ್ ಮಾಡುತ್ತೀರೊ ಅದಕ್ಕೆ ನಮ್ಮ ಪರಿಪೂರ್ಣ ಒಪ್ಪಿಗೆ ಇದೆ,” ಎಂದರು.

ಮಧು ಖುಷಿಯಿಂದ ಸಂಗೀತಾಳನ್ನು ತಬ್ಬಿಕೊಂಡು, “ನನ್ನ ಪ್ರೀತಿಯ ಸೊಸೆ ಬಹುಬೇಗ ನಮ್ಮ ಮನೆ ತುಂಬುತ್ತಾಳೆ. ನೀನು ಸಿಂಗಾಪೂರಕ್ಕೆ ಹೋಗಿ ನಿನ್ನ ವಸ್ತುಗಳನ್ನು ತೆಗೆದುಕೊಂಡು ಬಂದುಬಿಡು. ಬೇಕೆಂದರೆ ನಿನ್ನ ಜೊತೆ ಆದಿತ್ಯನನ್ನು ಕೂಡ ಕರೆದುಕೊಂಡು ಹೋಗು,” ಎಂದರು.

ಸಂಗೀತಾ ನಾಚಿಕೊಂಡಳು. ಅಭಯ್‌ ಕೂಡ ತಮಾಷೆ ಮಾಡಿದ. ಮುಂದಿನ ಕಾರ್ಯಕ್ರಮಗಳು ನಿರ್ಧಾರವಾಗುತ್ತಿದ್ದವು. ರಾಧಾರಿಗಂತೂ ಅಚ್ಚರಿ, ಗಾಬರಿ. ಇದೆಲ್ಲ ಇಷ್ಟೊಂದು ಬೇಗ ಏಕೆ? ಇವರೆಲ್ಲ ಎಂತಹ ಜನ? ಯಾರಾದ್ರೂ ಇಷ್ಟು ಒಳ್ಳೆಯವರಾಗಿರಲು ಹೇಗೆ ಸಾಧ್ಯ?

ಬೆಂಗಳೂರಿಗೆ ವಾಪಸ್ಸಾಗುತ್ತಾ ಸಂಗೀತಾ ತಾಯಿಯನ್ನು, “ಅಮ್ಮಾ, ನಿಮಗೆ ಎಲ್ಲ ಸರಿ ಅನಿಸಿತು ಅಲ್ವೇ?” ಎಂದು ಕೇಳಿದಳು.

“ನೋಡೋಣ ಆ ಕುಟುಂಬದವರು ಬಹಳ ಹೆಚ್ಚೇ ಒಳ್ಳೆಯವರು ಎನಿಸುತ್ತಿದ್ದಾರೆ. ಅಲ್ಲಿ ನೀನು ಎಷ್ಟು ಖುಷಿಯಾಗಿ ಇರುತ್ತಿಯೋ ನೋಡಬೇಕು. ಮುಂದೆ ಎಲ್ಲ ಗೊತ್ತಾಗುತ್ತೆ,” ಎಂದರು.

ಸಂಗೀತ ಪುನಃ ಮೌನ ವಹಿಸಿದಳು. ರಾಧಾ ಪುನಃ. “ಎಲ್ಲ ವಿಷಯಗಳನ್ನು ನೀವೊಬ್ಬರೇ ನಿರ್ಧಾರ ಮಾಡಿದಿರಿ. ನನ್ನನ್ನು ಒಂದು ಮಾತು ಕೇಳಲಿಲ್ಲ…..” ಎಂದು ಗಂಡನನ್ನು ದೂರಿದರು.

“ಕೇಳುವುದೇನಿದೆ? ನನಗೆ ಎಲ್ಲ ಸರಿಯಾಗಿದೆ ಅನಿಸಿತು. ಒಳ್ಳೆಯ ಜನ ಬೇರೆ,” ಎಂದರು ವಿಕಾಸ್‌.

ಎರಡೂ ಕಡೆಯಿಂದ ಮದುವೆಯ ಸಿದ್ಧತೆಗಳು ಆರಂಭವಾದವು. 2 ತಿಂಗಳ ಬಳಿಕ ಮದುವೆ ನಿರ್ಧಾರವಾಗಿತ್ತು. ಪ್ರಿಯಾ ಕೂಡ ತನ್ನ ಕುಟುಂಬ ಸಮೇತ ಬರುವವಳಿದ್ದಳು. ಸಂಗೀತಾ ತನ್ನ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟಳು. ಸಿಂಗಾಪೂರ್‌ ನಿಂದ ಎಲ್ಲವನ್ನೂ ಕ್ಲಿಯರ್‌ ಮಾಡಿಕೊಂಡು ವಾಪಸ್‌ ಆದಳು.

ಮಧು ಸಂಗೀತಾಳಿಗೆ ಆಗಾಗ ಫೋನ್‌ ಮಾಡಿ ಅವಳ ಇಷ್ಟದಂತೆಯೇ ಎಲ್ಲ ಸಿದ್ಧತೆಗಳನ್ನು ಮಾಡಲಾರಂಭಿಸಿದರು.

“ಈ ಶ್ರೀಮಂತರು ನಾಲ್ಕು ದಿನ ಒಳ್ಳೆವಯರಾಗಿ ತೋರಿಸಿಕೊಳ್ಳುತ್ತಾರೆ. ಆಮೇಲೆ ಅವರ ನಿಜವಾದ ಬಣ್ಣ ಬಯಲಾಗುತ್ತದೆ. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ,” ಎಂದು ಮೂಗು ಮುರಿದರು ರಾಧಾ.

ಸಂಗೀತಾ ಮನಸ್ಸಿನಲ್ಲಿಯೇ ಬೇಸರಗೊಂಡಿದ್ದಳು. ಮದುವೆಯ ಸಮಯದಲ್ಲಿ ಅಮ್ಮನ ಚಿತ್ರ ವಿಚಿತ್ರ ಮಾತುಗಳು ನಿಲ್ಲುವ ಹಾಗೆ ಕಾಣುತ್ತಿರಲಿಲ್ಲ. ರಾಧಾ ಏನೇ ಕೆಲಸ ಮಾಡಿದರೂ ಅದನ್ನು ಒಂದು ಹೊರೆ ಎಂಬಂತೆ ಭಾವಿಸಿ ಮಾಡುತ್ತಿದ್ದರು. ಮಗಳಿಗೆ ಒಳ್ಳೆಯ ಮನೆತನ ಸಿಗುತ್ತಿರುವುದು ಅವರಿಗೆ ಖುಷಿಯನ್ನುಂಟು ಮಾಡಿರಲಿಲ್ಲ. ಆದಿತ್ಯನ ಕುಟುಂಬದ ಬಗ್ಗೆ ಆಗಾಗ ಏನಾದಾರೊಂದು ವಿಷಯ ಪ್ರಸ್ತಾಪಿಸಿ, ಅವರನ್ನು ಅವಹೇಳನ ಮಾಡಿ ಮಾತನಾಡುತ್ತಿದ್ದರು. ಅದರಿಂದ ಸಂಗೀತಾಳ ಮುಖ ಕುಂದುತ್ತಿತ್ತು. ವಿಕಾಸ್ ಅವರಿಗೆ ಎಲ್ಲ ಗೊತ್ತಾಗುತ್ತಿತ್ತು. ಆದರೆ ಅವರು ಏನೂ ಮಾಡುವ ಹಾಗಿರಲಿಲ್ಲ. ಏಕೆಂದರೆ ರಾಧಾಗೆ ಏನಾದರೂ ಮಾಡಿ ಮನೆಯ ವಾತಾರಣ ಕಲುಷಿತಗೊಳ್ಳುವುದು ಅವರಿಗೆ ಬೇಕಿರಲಿಲ್ಲ.

ಪ್ರಿಯಾ ತನ್ನ ಕುಟುಂಬ ಸಮೇತ ಬಂದಿದ್ದಳು. ಅವಳ ಗಂಡ ವಿಶಾಲ್ ಮತ್ತು  ಮಕ್ಕಳಾದ ಸೀಮಾ, ಹೇಮಾ ಚಿಕ್ಕಮ್ಮನ ಮದುವೆಯ ಬಗ್ಗೆ ಬಹಳ ಉತ್ಸಾಹಿತರಾಗಿದ್ದರು. ಎಲ್ಲರೂ ಖುಷಿಯಿಂದಿದ್ದರು. ಆದರೆ ಅಮ್ಮ ರಾಧಾರ ಜಗಳಗಂಟ ಸ್ವಭಾವ, ಖುಷಿಯಲ್ಲಿ ಹುಳಿ ಹಿಂಡುವ ಕೆಲಸ ನಡೆದೇ ಇತ್ತು. ವಿಕಾಸ್‌ ತಮ್ಮ ಬಜೆಟ್‌ ಗೆ ಅನುಗುಣವಾಗಿ ಹಣವನ್ನು ಅನಿಲ್ ‌ಅಕೌಂಟ್‌ ಗೆ ಟ್ರಾನ್ಸ್ ಫರ್‌ ಮಾಡಿದ್ದರು. ಎಲ್ಲ ವ್ಯವಸ್ಥೆಯನ್ನು ಆದಿತ್ಯನ ಕುಟುಂಬವೇ ನೋಡಿಕೊಳ್ಳುತ್ತಿತ್ತು.

ಎರಡು ದಿನ ಮೊದಲೇ ಸಂಗೀತಾಳ ಕುಟುಂಬ ಮೈಸೂರಿಗೆ ತಲುಪಿತು. ಆದಿತ್ಯನ ಕುಟುಂಬದವರು ಅವರನ್ನೆಲ್ಲ ಕರೆತರಲು ರೈಲು ನಿಲ್ದಾಣಕ್ಕೆ ಹಲವು ವಾಹನಗಳನ್ನು ಕಳುಹಿಸಿಕೊಟ್ಟಿದ್ದರು. ಅನಿಲ್ ‌ಹಾಗೂ ಮಧು ಸ್ವತಃ ಮೈಸೂರು ರೈಲು ನಿಲ್ದಾಣಕ್ಕೆ ಬಂದು ಸಂಗೀತಾಳ ಕುಟುಂಬದವರನ್ನು ಬರಮಾಡಿಕೊಂಡರು. ಬಳಿಕ ಮೈಸೂರಿನ ಪ್ರಸಿದ್ಧ ಹೋಟೆಲ್ ‌ನಲ್ಲಿ ಅವರಿಗೆ ಎಲ್ಲ ವ್ಯವಸ್ಥೆ ಮಾಡಲಾಯಿತು.

ಮದುವೆ ವಿಧಿವಿಧಾನಗಳ ಪ್ರಕಾರ ಬಹಳ ಅಚ್ಚುಕಟ್ಟಾಗಿ ನಡೆಯಿತು. ಊಟದ ವ್ಯವಸ್ಥೆಯಂತೂ ಬಹಳ ಅದ್ಧೂರಿಯಾಗಿತ್ತು. ಎಲ್ಲರೂ ಆದಿತ್ಯನ ಕುಟುಂಬದವರನ್ನು ಬಾಯ್ತುಂಬ ಹೊಗಳುತ್ತಿದ್ದರು.

ಮದುವೆಯ ಮರುದಿನ ಸಂಗೀತಾಳ ಕುಟುಂಬದವರು ಬೆಂಗಳೂರಿಗೆ ಹೊರಟುಹೋದರು. ಪ್ರಿಯಾಳ ಕುಟುಂಬ ಸಹ ಬೆಂಗಳೂರಿಗೆ ಬಂದಿತ್ತು. ಒಂದೆರಡು ದಿನಗಳ ಬಳಿಕ ಪ್ರಿಯಾ ಮಕ್ಕಳೊಂದಿಗೆ ಮಂಗಳೂರಿನ ಗಂಡನ ಮನೆಗೆ ಹೊರಟುಹೋದಳು.

ವಿಕಾಸ್‌ ಪುನಃ ಆಫೀಸ್‌ ಕೆಲಸದಲ್ಲಿ ಮಗ್ನರಾದರು. ರಾಧಾ ತಮ್ಮ ಹಳೆಯ ಧೋರಣೆ ಮುಂದುವರಿಸಿದರು. ಪ್ರತಿಯೊಂದು ವಿಷಯದಲ್ಲಿ ತಮ್ಮದೇ ಸತ್ಯ ಎಂದು ಪ್ರತಿಪಾದಿಸುತ್ತಿದ್ದರು.

ಸಂಗೀತಾ ಫೋನ್‌ ಮಾಡಿದಾಗೆಲ್ಲ ರಾಧಾ, “ನಿನ್ನ ಗಂಡನ ಮನೆಯಲ್ಲಿ ಪರಿಸ್ಥಿತಿ ಹೇಗಿದೆ?” ಎಂದು ಕೆದಕಿ ಕೆದಕಿ ಕೇಳುತ್ತಿದ್ದರು.

ಸಂಗೀತಾ ಪ್ರಶಂಸೆ ಮಾಡಿ ಏನಾದರೂ ಹೇಳಿದರೆ, “ನನಗೆ ಅದೆಲ್ಲ ಗೊತ್ತಿದೆ. ಈ ಪ್ರೀತಿ ಗೀತಿ ಕೆಲವೇ ದಿನಗಳ ಮಾತು. ಮುಂದೆ ಏನಾಗುತ್ತೆ  ಅಂತ ಗೊತ್ತಾಗುತ್ತೆ….” ಎಂದು ಮುಖ ಮುರಿಯುತ್ತಿದ್ದರು.

ಸಂಗೀತಾ ಮನೆಯ ವ್ಯಪಾರ ವಹಿವಾಟನ್ನು ಮುಂದುವರಿಸಿಕೊಂಡು ಹೊರಟಿದ್ದಳು. ಒಂದು ಹೊಸ ಶೋರೂಮ್ ತೆರೆಯುವ ಚಟುವಟಿಕೆಗಳು ಆರಂಭವಾಗಿದ್ದವು. ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆದಿತ್ಯ ಹಾಗೂ ಸಂಗೀತಾರಿಗೆ ವಹಿಸಿಕೊಡಲಾಗಿತ್ತು. ಅವರಿಗಾಗಿ ಒಂದು ಕಾರು ಹಾಗೂ ಡ್ರೈವರ್‌ ಸದಾ ತಯಾರಾಗಿರುತ್ತಿದ್ದರು.

ಸಂಗೀತಾಳಿಗೆ ಗಂಡನ ಮನೆಯಲ್ಲಿ ಬಹಳ ಪ್ರೀತಿ ದೊರಕುತ್ತಿತ್ತು. ಕೆಲವೇ ದಿನಗಳಲ್ಲಿ ಮೈದುನ ಅಭಯ್‌ ನ ಮದುವೆ ನಿಶ್ಚಯವಾಯಿತು. ಅವನ ಗರ್ಲ್ ಫ್ರೆಂಡ್‌ ತಾರಾಳ ಜೊತೆ ಮದುವೆ ಆಗಲಿತ್ತು.

ರಾಧಾಗೆ ಈ ವಿಷಯ ಗೊತ್ತಾಗಿ, “ಸಂಗೀತಾ, ಇನ್ಮುಂದೆ ನಿನಗೆ ಗೊತ್ತಾಗುತ್ತೆ. ವಾರಗಿತ್ತಿ ಜೊತೆಗೆ ನೀನು ಹೇಗೆ ಹೊಂದಾಣಿಕೆ ಮಾಡಿಕೊಳ್ತಿಯಾ ಅಂತ? ಮನೆಯವರ ಪ್ರೀತಿ ಕೂಡ ಹಂಚಲ್ಪಡುತ್ತದೆ. ಮನೆಯಲ್ಲಿ ಎಷ್ಟೊಂದು ವಿಷಯಗಳು ಬದಲಾಗುತ್ತವೆ ನೋಡ್ತಾ ಇರು,” ಎಂದರು.

ಸಂಗೀತಾ ಏನೂ ಮಾತಾಡಲಿಲ್ಲ. ಅಭಯ್‌ ನ ಮದುವೆ ಸಮಾರಂಭಕ್ಕೆ ರಾಧಾ ಹಾಗೂ ವಿಕಾಸ್‌ ಕೂಡ ಹೋಗಿದ್ದರು. ಈ ಬಾರಿಯೂ ಅವರಿಗೆ ಅದೇ ಪ್ರೀತಿ ಆದರದ ಸತ್ಕಾರ ಸಿಕ್ಕಿತು.

ಸಂಗೀತಾಳಿಗೆ ಹೊಸ ಸೊಸೆಯ ಜೊತೆ ಚೆನ್ನಾಗಿ ಹೊಂದಾಣಿಕೆ ಆಗತೊಡಗಿತು. ಇಬ್ಬರೂ ಸೊಸೆಯಂದಿರು ಮನೆಯಲ್ಲಿ ಖುಷಿಯಿಂದ ಓಡಾಡಿಕೊಂಡಿದ್ದರು.

ರಾಧಾ ಹಾಗೇಯ ಒಮ್ಮೆ ಸಂಗೀತಾಳಿಗೆ ಫೋನ್‌ ಮಾಡಿ, “ಹೊಸ ಸೊಸೆಯ ಜೊತೆ ನಿನಗೆ ಹೊಂದಾಣಿಕೆ ಆಗುತ್ತಿದೆಯೇ?” ಎಂದು ಕೇಳಿದರು.

“ಅಮ್ಮಾ, ಅವಳು ನನ್ನ ತಂಗಿತರ. ನಾನು ಅವಳು ಬಿಟ್ಟಿರಲಾರದಂತಹ ಸ್ನೇಹಿತೆಯರಾಗಿದ್ದೇವೆ,” ಎಂದು ಹೇಳಿದಳು.

ರಾಧಾ ಮಗಳ ಮಾತು ಕೇಳಿಸಿಕೊಂಡು, “ಸಂಗೀತಾ, ನಾನು ಇಂತಹ ಸಂಬಂಧಗಳನ್ನು ಸಾಕಷ್ಟು ನೋಡಿದ್ದೇನೆ. ನಿಮ್ಮ ನಡುವಿನ ಪ್ರೀತಿ ಕೆಲವು ದಿನಗಳ ಬಳಿಕ ಜಗಳದಲ್ಲಿ ಬದಲಾದರೂ ಆಶ್ಚರ್ಯವಿಲ್ಲ. ನಾನು ಹೇಳಿದ್ದು ಸರಿ ಎಂದು ನಿನಗೆ ಆಮೇಲೆ ಗೊತ್ತಾಗುತ್ತೆ…..” ಎಂದರು.

ಇಂದು ಸಂಗೀತಾ ಧೈರ್ಯವಾಗಿ ಉತ್ತರ ಕೊಟ್ಟಳು. ವಿಕಾಸ್‌ ಕೂದ ಅಲ್ಲಿಯೇ ಕುಳಿತಿದ್ದರು. ಫೋನ್‌ ಸ್ಪೀಕರ್‌ ಆನ್‌ ಆಗಿತ್ತು. ಸಂಗೀತಾ  ಸ್ಛೋಟಗೊಂಡಿದ್ದಳು, “ಹೌದು. ನನಗೆ ಚೆನ್ನಾಗಿ ಗೊತ್ತಾಗಿದೆ. ನಿಮಗೆ ಎಲ್ಲಾ ಸಂಬಂಧಗಳು ನಿರರ್ಥಕ ಅಲ್ವೆ? ನಿಮಗೆ ಯಾವ ಸಂಬಂಧದಲ್ಲೂ ಪ್ರೀತಿವಿಶ್ವಾಸ ಕಾಣಿಸುವುದಿಲ್ಲ. ಎಲ್ಲದರಲ್ಲೂ ತಪ್ಪು ಹುಡುಕುತ್ತೀರಿ. ಅಮ್ಮಾ, ನಿಮಗೆ ಪ್ರತಿ.ಒಂದರಲ್ಲೂ ಕೆಡುಕಾಗುತ್ತದೆ ಅನಿಸುತ್ತದೆ? ನಾನು ಈ ಮನೆಗೆ ಬಂದ ನಂತರವೇ ಶಾಂತವಾಗಿರುವುದು ಎಷ್ಟು ಸುಲಭ ಎಂದು ಗೊತ್ತಾಯಿತು. ಪ್ರೀತಿ ಕೊಡಿ ಪ್ರೀತಿ ತೆಗೆದುಕೊಳ್ಳಿ ಎಂಬ ತತ್ವ ನಿಮಗೂ ಗೊತ್ತಿದ್ದರೆ ಎಷ್ಟೋ ಒಳ್ಳೆಯದಾಗಿರುತ್ತಿತ್ತು. ನನಗಂತೂ ಅದು ಇಲ್ಲಿ ಚೆನ್ನಾಗಿ ಗೊತ್ತಾಯಿತು. ನಿಮ್ಮೊಂದಿಗೆ ಇದ್ದಾಗ ನನಗದು ಅನುಭವಕ್ಕೆ ಬಂದಿರಲೇ ಇಲ್ಲ.

“ಇನ್ಮುಂದೆ ನನಗೆ ಅದೆಲ್ಲ ಮೊದಲೆ ಗೊತ್ತಿತ್ತು. ನಿನಗೆ ಹಾಗಾಗುತ್ತೇ ಹೀಗಾಗುತ್ತೆ ಆಗ ಗೊತ್ತಾಗುತ್ತೆ ಎಂದೆಲ್ಲ ಹೇಳೋಕೆ ಹೋಗಬೇಡಿ. ಇಲ್ಲಿ ಎಷ್ಟೊಂದು ಪ್ರೀತಿ ಇದೆಯೆಂದರೆ ಅದನ್ನು ನಾನು ಹೇಳೋಕೆ ಪದಗಳೇ ಇಲ್ಲ. ನಾನು ಮುಂದೆಯೂ ಕೂಡ ಹೀಗೆ ಸುಖ ಸಂತೋಷದಿಂದ ಇರಲು ಪ್ರಯತ್ನಿಸುತ್ತೇನೆ. ನನಗೆ ಪ್ರೀತಿಯನ್ನು ಕೊಡುವವರಿಗೆ ನಾನು ಅದನ್ನು ಇನ್ನಷ್ಟು, ಮತ್ತಷ್ಟು ಕೊಡಲು ಬಯಸ್ತೀನಿ. ನನಗೆ ಇದು ಸಂತೋಷದ ವಿಷಯವಾಗಿದೆ,” ಎಂದು ಹೇಳಿ ಫೋನ್‌ ಇಟ್ಟುಬಿಟ್ಟಳು.

ಆಗ ರಾಧಾರ ಮುಖ ನೋಡಬೇಕಿತ್ತು. ಸಂಗೀತಾ ಈ ಹಿಂದೆ ಹೀಗೆಲ್ಲಾ ಮಾತಾಡಿರಲಿಲ್ಲ. ಇಂದು ಅವಳು ತನ್ನ ಮಾತನ್ನು ಹೇಗೆ ಹೇಳಿ ಫೋನ್‌ ಇಟ್ಟಳೆಂದರೆ, ರಾಧಾ ಮುಖ ಎತ್ತಲಾರದಷ್ಟು ಅವಮಾನದಿಂದ ಕುಗ್ಗಿ ಹೋಗಿದ್ದರು. ವಿಕಾಸ್‌ ತಮ್ಮ ನಗುವನ್ನು ತಡೆದುಕೊಳ್ಳಲಾಗದೆ ಆ ಕೋಣೆಯಿಂದ ಎದ್ದು ಇನ್ನೊಂದು ಕೋಣೆಗೆ ಹೊರಟುಹೋದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ