ಬಾಲಿವುಡ್ ನ ಪ್ರಸಿದ್ಧ ನಟಿ ಸಮೀಕ್ಷಾ ಭಟ್ನಾಗರ್ ಮೂಲತಃ ಉತ್ತರಾಖಂಡ ರಾಜ್ಯದ ಡೆಹರಾಡೂನ್ ನಗರದವಳು. ಅವಳಿಗೆ ಬಾಲ್ಯದಿಂದಲೂ ಸಂಗೀತ, ನೃತ್ಯಗಳಲ್ಲಿ ಆಸಕ್ತಿ ಹೆಚ್ಚು. ಅವಳ ಈ ಹವ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು, ಕಲೆಯಲ್ಲಿ ಪ್ರಗತಿ ಹೊಂದಲು, ಆ ಸಣ್ಣ ಊರಿನಿಂದ ಹೆತ್ತವರು ದೆಹಲಿಯ ಮಹಾನಗರಕ್ಕೆ ಬಂದರು. ಇಲ್ಲಿ ಸಮೀಕ್ಷಾ ತನ್ನದೇ ಆದ ಕಥಕ್ ನೃತ್ಯ ಅಕಾಡೆಮಿ ತೆರೆದಳು. ಅದಾದ 2 ವರ್ಷಗಳ ನಂತರ ತನ್ನ ಪ್ರತಿಭೆಯನ್ನು ಇಡೀ ವಿಶ್ವಕ್ಕೆ ಸಾರಲು ಅವಳು ಮುಂಬೈಗೆ ಬಂದಳು. ಮೊದಲ ಬಾರಿಗೆ ಕಿರುತೆರೆಯಲ್ಲಿ `ಏಕ್ ವೀರ್ ಕೀ ಅರ್ದಾನ್ ವೀರಾ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದೇ, ಹಲವು ಸೀರಿಯಲ್ಸ್ ಮುಖಾಂತರ ಮನೆ ಮಾತಾದಳು. ಅಲ್ಲಿಂದ ಬಾಲಿವುಡ್ ಗೆ ಎಂಟ್ರಿ ಪಡೆಯಲು ದಾರಿಯಾಯಿತು.
ಯಾವ ನಿರ್ಮಾಪಕರ ಸಹಾಯ ಇಲ್ಲದೆ, ಕೆಲವು ಮ್ಯೂಸಿಕ್ ಆಲ್ಬಂಗಳು ಹಾಗೂ `ಭ್ರಾಮಕ್’ ಲಘು ಚಿತ್ರಗಳನ್ನು ತಾನೇ ತಯಾರಿಸಿದಳು. ಇವು ನೆಟ್ ಫ್ಲಿಕ್ಸ್ ನಲ್ಲಿ ಸಾಕಷ್ಟು ಜನಪ್ರಿಯ ಆದವು. ಇತ್ತೀಚೆಗೆ ಇವಳು `ಧೂಪ್ ಛಾಲ್’ ಒಳಗೊಂಡಂತೆ 4-5 ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ.
ಡೆಹರಾಡೂನ್ ನಂಥ ಸಣ್ಣ ನಗರದಿಂದ ಮುಂಬೈ ಮಹಾನಗರಿಯ ಪ್ರಯಾಣ, ನಟಿ ಆದುದು ಹೇಗನ್ನಿಸಿತು?
ನನ್ನ ಅಭಿಪ್ರಾಯದಲ್ಲಿ ನಮ್ಮ ದೇಶದ ಪ್ರತಿಯೊಬ್ಬ ಹುಡುಗಿಯೂ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ಪಡಲೇಬೇಕು. ಈ ಕನಸು ಕಾಣಲಿಕ್ಕೆ ಹಳ್ಳಿಯೇನು…. ದಿಲ್ಲಿಯೇನು? ನನ್ನ ಕನಸನ್ನು ನನಸಾಗಿಸಲು ನಮ್ಮ ತಾಯಿ ತಂದೆ ಬಹಳ ಶ್ರಮಪಟ್ಟಿದ್ದಾರೆ. ಚಿಕ್ಕವಳಿದ್ದಾಗಿನಿಂದ ನನ್ನ ತಾಯಿಯ ಬಳಿಯಲ್ಲೇ ಕಥಕ್ ನೃತ್ಯಾಭ್ಯಾಸ ಕಲಿತೆ. ಮೊದಲಿನಿಂದ ಅದರಲ್ಲಿ ನಿಪುಣೆಯಾದ ಆಕೆ, ನಾನೂ ಅದರಲ್ಲಿ ಪಾರಂಗತಳಾಗಬೇಕೆಂದು ಆಶಿಸಿದರು. ಹಾಗೆಯೇ ಸಂಗೀತಾಭ್ಯಾಸ ಸಹ ಮಾಡಿದೆ. ಇದೆಲ್ಲ ನನ್ನ ಮೆಚ್ಚಿನ ಹವ್ಯಾಸಗಳು.
ನಮ್ಮೂರಿನಿಂದ ಮೊದಲು ದೆಹಲಿಗೆ ಬಂದೆ. ಅಲ್ಲಿ ನಾನು ಬಹಳಷ್ಟು ಕಲಿತೆ. ಏನಾದರೂ ರಚನಾತ್ಮಕವಾಗಿ ಚಟುವಟಿಕೆ ಆರಂಭಿಸಬೇಕಿದ್ದರೆ, ಮುಂಬೈಗೆ ಹೋಗಲೇಬೇಕು ಎಂದು ತಿಳಿದುಕೊಂಡೆ. ಇಲ್ಲಿಗೆ ಬಂದ ಮೇಲೆ ಉತ್ತಮ ಪ್ರತಿಕ್ರಿಯೆ ದೊರಕಿತು. `ವೀರ್…ವೀರಾ’ ಧಾರಾವಾಹಿಯಲ್ಲಿ ಮೊದಲ ಅವಕಾಶ ಸಿಕ್ಕಿತು.
ಸಾಮಾನ್ಯವಾಗಿ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ಮೇಲೆ ಕಲಾವಿದರು ಥಿಯೇಟರ್ ಕಡೆ ನಾಟಕಗಳಲ್ಲಿ ಆಸಕ್ತಿ ತೋರುವುದಿಲ್ಲ. ನೀನು ಧಾರಾವಾಹಿಗಳಲ್ಲಿ ಚೆನ್ನಾಗಿ ಮಿಂಚುತ್ತಿದ್ದರೂ ನಾಟಕಗಳಿಗೆ ಮರಳಿದೆಯಲ್ಲ….?
ಜನ ನನ್ನನ್ನು ಧಾರಾವಾಹಿಗಳಿಂದ ಗುರುತಿಸಿ ಮೆಚ್ಚಿಕೊಂಡರು. ಅದಷ್ಟೇ ನನಗೆ ಸಾಲದು ಎನಿಸಿತು. ಒಬ್ಬ ಕಲಾವಿದೆಯಾಗಿ ನಾನು ಇದಕ್ಕಿಂತ ಉತ್ತಮ ಪರ್ಫಾರ್ಮೆನ್ಸ್ ನೀಡಬಲ್ಲೆ ಎನಿಸಿತು.
ಆದರೆ ಯಾರದ್ದಾದರೂ ಗೈಡೆನ್ಸ್ ಬೇಕೆನಿಸಿತು. ಇದನ್ನು ನಾಟಕಗಳಲ್ಲಿ ಸ್ಪಷ್ಟ ಗುರುತಿಸಿದೆ. ನಾಟಕಗಳ ನಿರ್ದೇಶಕರು ನನ್ನನ್ನು ತಿದ್ದಿ, ತೀಡಿ ಹೆಚ್ಚು ಕಲಿಸಿದರು. ಒಂದೇ ಡೈಲಾಗ್ ನ್ನು ಹಲವು ವಿಧದಲ್ಲಿ ಒಪ್ಪಿಸಿ ಅವರ ಮನಗೆದ್ದೆ! ಹೀಗೆ ನಾಟಕಗಳಲ್ಲಿನ ಅಭಿನಯ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಸದಾ ಪ್ರಗತಿ ಹೊಂದಬೇಕೆಂಬುದೇ ನನ್ನ ಗುರಿ. ಇಲ್ಲಿಯವರೆಗೂ ನಟನೆಯಲ್ಲಿ ನನಗೆ ಸಂತೃಪ್ತಿ ದೊರಕಿಲ್ಲ. ನಾನು `ರೋಶೋಮನ್ ಬ್ಲೂಸ್’ ನಾಟಕದ 70 ಯಶಸ್ವೀ ಪ್ರದರ್ಶನ ನೀಡಿದ್ದೇನೆ. ಅಲ್ಲಿಂದ ಮುಂದೆ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು.
ನಿನ್ನ ಮೊದಲ ಚಿತ್ರದ ಬಗ್ಗೆ ಹೇಳು…….
ನಾನು ನಟಿಸಿದ ಮೊದಲ ಚಿತ್ರ `ಕ್ಯಾಲೆಂಡರ್ ಗರ್ಲ್.’ ಇದರಲ್ಲಿ ನಾನು ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದೆ, ಅಷ್ಟೆ. ನಿಜ ಅರ್ಥದಲ್ಲಿ ನಾನು ನಾಯಕಿಯಾಗಿ ನಟಿಸಿದ ಚಿತ್ರ `ಪೋಸ್ಟರ್ ಬಾಯ್ಸ್,’ ಇದನ್ನೇ ನನ್ನ ಮೊದಲ ಚಿತ್ರ ಎಂದು ಹೇಳಿಕೊಳ್ಳಲು ಬಯಸುತ್ತೇನೆ. ನನಗೆ ಮೊದಲಿನಿಂದಲೂ ಸಿನಿಮಾ ನಟಿ ಆಗಬೇಕೆಂಬ ಹುಚ್ಚಿತ್ತು. ಸಿಕ್ಕಿದ ಅವಕಾಶ ಬಿಡಬಾರದೆಂದು ಕಿರುತೆರೆ ಧಾರಾವಾಹಿ ಒಪ್ಪಿಕೊಂಡೆ. ಬಾಲಿವುಡ್ ನಲ್ಲಿ ನನ್ನ ಗುರುತಿನವರು ಯಾರೂ ಇರಲಿಲ್ಲ. ನನ್ನ ಪ್ರತಿಭೆಗೊಂದು ಅವಕಾಶ ಸಿಕ್ಕಾಗ, ಅದನ್ನು ಜನ ಗುರುತಿಸಲಿ ಎಂದೇ ಟಿವಿ ನಟಿಯಾದೆ. ಟಿವಿ ಮಾಧ್ಯಮದಿಂದ ಬಹಳಷ್ಟು ಕಲಿತಿದ್ದೇನೆ. ಕಿರುತೆರೆಯಿಂದಾಗಿ ನನ್ನ ಪರ್ಫಾರ್ಮೆನ್ಸ್ ಬಗ್ಗೆ ಜನ ಬೇಗ ಪ್ರತಿಕ್ರಿಯೆ ನೀಡುವಂತಾಯಿತು. ಅದನ್ನು ಅರ್ಥ ಮಾಡಿಕೊಂಡು ನನ್ನ ಲೋಪದೋಷಗಳನ್ನು ತಿದ್ದಿಕೊಂಡೆ. ಟಿವಿಯಿಂದಾಗಿ ನಾನು ಡೈಲಾಗ್ಸ್ ಬೇಗನೇ ಕಲಿಯತೊಡಗಿದೆ. ಹೀಗೆ ನಮ್ಮ ಡೈಲಾಗ್ ಡೆಲಿವರಿ ಸುಧಾರಿಸುತ್ತದೆ.
`ಪೋಸ್ಟರ್ ಬಾಯ್ಸ್‘ ಚಿತ್ರದಲ್ಲಿ ಮೊದಲ ಸಲ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಶ್ರೇಯಸ್ ತಲ್ಪಡೆಯಂಥ ಘಟಾನುಘಟಿಗಳ ಜೊತೆ ನಿನಗೆ ನಟಿಸುವ ಅವಕಾಶ ಸಿಕ್ಕಿತು. ಆಗ ನಿನಗೇನಾದರೂ ಭಯವಿತ್ತೇ?
ನಾನು ಟಿವಿಯಲ್ಲಿ ನಟಿಸುತ್ತಿದ್ದಾಗ ಒಬ್ಬ ಅಸಿಸ್ಟೆಂಟ್ ಡೈರೆಕ್ಟರ್ ನನಗೆ, ನೀನು ಬಹಳ ಬ್ಯೂಟಿಫುಲ್, ನಟನೆಯಲ್ಲೂ ಪಳಗಿದ್ದಿ. ಆದಷ್ಟು ಬೇಗ ಸಿನಿಮಾ ಸೇರಿಬಿಡು, ಎಂದಿದ್ದರು. ಅವಕಾಶ ಸಿಕ್ಕಿದಾಗ ಖಂಡಿತಾ ಅದನ್ನು ಮಾಡುತ್ತೇನೆ ಎಂದಿದ್ದೆ. ಕೆಲವು ದಿನಗಳಾದ ಮೇಲೆ ಅವರೇ ನನಗೆ ಫೋನ್ ಮಾಡಿ, ಈ ಚಿತ್ರಕ್ಕಾಗಿ ಆಡಿಷನ್ ಗೆ ಕರೆಸಿಕೊಂಡರು. ನನಗೆ ಆಡಿಷನ್ ಸ್ಕ್ರಿಪ್ಟ್ ಸಿಕ್ಕಿತು. ಅದರಲ್ಲಿ ಆಡಿಷನ್ ಮಾಡಿ ಕಳುಹಿಸಿಕೊಟ್ಟೆ. ಇದಾದ ಕೆಲವೇ ದಿನಗಳಲ್ಲಿ ನಾನು ಈ ಚಿತ್ರದಲ್ಲಿ ನಟಿಸತೊಡಗಿದೆ. ಮುಂದೆ ನಾನು ಪ್ರಗತಿಯ ಮೆಟ್ಟಿಲೇರಲೇಬೇಕು ಎಂದು ನಿರ್ಧರಿಸಿದೆ. ಆ ಚಿತ್ರಕ್ಕಾಗಿ ನಾನು ಕಷ್ಟಪಟ್ಟು ಕೆಲಸ ಮಾಡಿದೆ. ಮೊದಲ ದಿನವೇ ನನಗೆ 4 ಪುಟಗಳ ದೃಶ್ಯ ಕೊಟ್ಟಿದ್ದರು. ಮೊದಲ ದೃಶ್ಯದಲ್ಲೇ ನಾನು ಬಾಬಿಯನ್ನು ಬೈಯಬೇಕಿತ್ತು.
ಈ ದೃಶ್ಯ ಓ.ಕೆ ಆದಾಗ, ಸುತ್ತಲೂ ನೆರೆದಿದ್ದರು, ಮೆಚ್ಚಿ ಚಪ್ಪಾಳೆ ತಟ್ಟಿದರು. ಅಲ್ಲಿಂದ ಮುಂದೆ ನನ್ನ ಆತ್ಮವಿಶ್ವಾಸ ಹೆಚ್ಚಿತು. ಬಾಬಿ-66 ನನಗೆ ಬಹಳ ಸಪೋರ್ಟ್ ಮಾಡಿದರು. ಶ್ರೇಯಸ್ ತಲ್ಪಡೆ ಆಗಾಗ ಉತ್ತಮ ಸಲಹೆ ನೀಡುತ್ತಿದ್ದರು. ಇಂಥ ಮಹಾನ್ ದಿಗ್ಗಜರ ಜೊತೆ ಮೊದಲ ಸಲ ನಟಿಸುತ್ತಿದ್ದೇನೆ ಎಂಬ ಭಯ ಬರಲೇ ಇಲ್ಲ! ಚಿತ್ರ ರಿಲೀಸ್ ಆದಾಗ, ಬಾಬಿ ಜೊತೆ ನನ್ನ ನಟನೆಯನ್ನು ಎಲ್ಲರೂ ಮೆಚ್ಚಿದರು. ಆದರೆ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂಥ ಹಣ ಮಾಡಲಿಲ್ಲ. ಇದೀಗ `ಧೂಪ್‌ಛಾಲ್’ ಚಿತ್ರ ರಿಲೀಸ್ ಆಗಲಿ ಎಂದು ಕಾತುರದಿಂದ ಕಾಯುತ್ತಿದ್ದೇನೆ.
`ಧೂಪ್ ಛಾಲ್’ ಚಿತ್ರ, ಅದರಲ್ಲಿ ನಿನ್ನ ಪಾತ್ರದ ಕುರಿತು ವಿವರಿಸು…….
ಒಬ್ಬ ಕಲಾವಿದೆಯಾಗಿ ನನ್ನನ್ನು ನಾನು ಎಕ್ಸ್ ಪ್ಲೋರ್ ಮಾಡಿಕೊಳ್ಳ ಬಯಸುತ್ತೇನೆ. ಯಾರದೋ ಏನೋ ಗಿಲಿಟು ಮಾತು ನಂಬಿ ಮುಂದಿನ ಅವಕಾಶ ಬಯಸಲಾರೆ. ಒಂದು ದಿನ ಡೈರೆಕ್ಟರ್ ಹೇಮಂತ್ ರಿಂದ ಈ ಚಿತ್ರಕ್ಕಾಗಿ ಕರೆ ಬಂತು. ಸಂಪೂರ್ಣ ಕೌಟುಂಬಿಕ ಚಿತ್ರ. ಕೌಟುಂಬಿಕ ಗಟ್ಟಿ ಬಾಂಧ್ಯದ ಕುರಿತಾಗಿ ಈ ಚಿತ್ರದ ಕಥೆ ಇದೆ.
ನೀವು ಒಟ್ಟು ಕುಟುಂಬದ ಸದಸ್ಯರಾಗಿರುವಾಗ ಮಾತ್ರ ನಿಮಗೆ ಕೌಟುಂಬಿಕ ಮೌಲ್ಯಗಳ ಮಹತ್ವದ ಬಗ್ಗೆ ತಿಳಿಯಲು ಸಾಧ್ಯ. ಅನಗತ್ಯವಾಗಿ ವಿಭಕ್ತ ಕುಟುಂಬದ ಪ್ರೈವೆಸಿ ಬಗ್ಗೆ ತಲೆ ಕೆಡಿಸಿಕೊಂಡರೇನು ಲಾಭ? ಈ ಚಿತ್ರದಲ್ಲಿ ಪತಿ ಪತ್ನಿ, ಅಣ್ಣ ತಮ್ಮ, ಅತ್ತಿಗೆ ನಾದಿನಿಯವರ ಸಂಬಂಧಗಳ ಸಮೀಕರಣದ ಬಗ್ಗೆ ಉತ್ತಮ ವ್ಯಾಖ್ಯಾನವಿದೆ. ಪತಿ ರಹಿತ ಪತ್ನಿ, ಅವಿಭಕ್ತ ಕುಟುಂಬದಲ್ಲಿ ಹೇಗಿರಲು ಸಾಧ್ಯ ಎಂದು ತೋರಿಸಲಾಗಿದೆ. ಜೀವನ ಮೌಲ್ಯಗಳ ಗಟ್ಟಿ ಮಾತುಗಳಿವೆ. ಇಲ್ಲಿ ಭಾವನೆಗಳ ಮಹಾಪೂರವೇ ಇದೆ. ಇದರಲ್ಲಿ ನನ್ನ ಮನಸ್ಸಿಗೆ ಹಿಡಿಸಿದ ಗೃಹಿಣಿಯ ಪಾತ್ರದಲ್ಲಿ ನಟಿಸಿರುವೆ.
ಇದಲ್ಲದೆ ನಿನ್ನ ಮುಂದಿನ ಚಿತ್ರಗಳೇನು…..?
`ಧೂಪ್ ಛಾಲ್’ ನಂತರ ನಾನು `ಜಾಗಿಪುರ್’ ಚಿತ್ರದಲ್ಲಿ ನಟಿಸುತ್ತಿರುವೆ. ಇದನ್ನು ಭಾರತ ಬಾಂಗ್ಲಾದೇಶದ ಬಾರ್ಡರ್ ನಲ್ಲಿ ಚಿತ್ರಸಲಾಗದೆ. ಇದು ರಾಜಕೀಯ ವಿಡಂಬನೆಯ ಚಿತ್ರ. ಜೊತೆಗೆ ಕೌಟುಂಬಿಕ ಸಂಬಂಧಗಳಿಗೂ ಹೆಚ್ಚಿನ ಮಹತ್ವ ಇದೆ. ನಾನು ಇದರಲ್ಲಿ ಲಾಯರ್ ಆಗಿ ನಟಿಸಿದ್ದೇನೆ. ನಾಯಕಿ ಇಲ್ಲಿ ತನ್ನ ತಮ್ಮನಿಗಾಗಿ ಹೋರಾಡುತ್ತಾಳೆ. ಇಲ್ಲಿ ನನ್ನೊಂದಿಗೆ ಸಹ ವಕೀಲರಾಗಿ ಜಾವೇದ್ ಜಾಫ್ರಿ ನಟಿಸಿದ್ದಾರೆ.
ಮತ್ತೊಂದು ಚಿತ್ರ `ದಿ ಎಂಡ್’ ಈ ಚಿತ್ರ ಹಿಂದಿ, ಪಂಜಾಬಿ ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ಈ ಚಿತ್ರದಲ್ಲಿ ನನ್ನೊಂದಿಗೆ ದೇವ್ ಶರ್ವ, ದಿವ್ಯಾ ದತ್ತಾ, ದೀಪ್ ಸಿಂಗ್ ರಾಣಾ ಸಹ ಇದ್ದಾರೆ. ಇದಾದ ಮೇಲೆ ಒಂದು ಹಾಸ್ಯ ಪ್ರಧಾನ ವೆಬ್ ಸೀರೀಸ್ `ಜೋ ಮೇರೆ ಆಕಾ’ದಲ್ಲೂ ನಟಿಸಿರುವೆ. ಇಲ್ಲಿ ನನ್ನೊಂದಿಗೆ ಶ್ರೇಯಸ್ ತಲ್ಪಡೆ, ಕೃಷ್ಣ, ಅಭಿಷೇಕ್ ಸಹ ಇದ್ದಾರೆ.
ನೀನು ನಿನ್ನ ಸಂಗೀತದ ಪ್ರತಿಭೆಯಿಂದ ರೂಪಿಸಿದ ಆಲ್ಬಂ ವಿಡಿಯೋ ಬಗ್ಗೆ ತಿಳಿಸು. ಕಥಕ್ ಡ್ಯಾನ್ಸ್, ಕುರಿತಾಗಿಯೂ ಏನಾದರೂ ಮಾಡಲಿರುವೆಯಾ?
ಸೋಶಿಯಲ್ ಮೀಡಿಯಾದಲ್ಲಿ ನಾನು ನನ್ನ ಕಥಕ್ ನೃತ್ಯಗಳ ಪ್ರದರ್ಶನದ ಪೋಸ್ಟಿಂಗ್ ಮಾಡುತ್ತಿರುತ್ತೇನೆ. ಇದರ ಹೊರತಾಗಿ ನನ್ನ ಒಂದು ಚಿತ್ರ `ಧಡ್ ಕೆ ದಿಲ್ ಬರಾಬರ್’ನಲ್ಲಿ ನಾನು ಕಥಕ್ ಡ್ಯಾನ್ಸ್ ಟೀಚರ್ ಪಾತ್ರ ವಹಿಸಿದ್ದೇನೆ. ಮಕ್ಕಳಿಗೆ ಕ್ಲಾಸಿಕ್ ಡ್ಯಾನ್ಸ್ ಕಲಿಸುವುದರಲ್ಲಿ ತನ್ನ ಜೀವನದ ಸಾರ್ಥಕತೆ ಕಂಡುಕೊಳ್ಳುವ ತ್ಯಾಗಮಯಿ ಪಾತ್ರವಿದು. ಈ ಚಿತ್ರದ ಆರಂಭದಲ್ಲೇ ನನ್ನ ನೃತ್ಯ ಪ್ರದರ್ಶನವಿದೆ. ಜೊತೆಗೆ ಕಥಕ್ ಕುರಿತಾಗಿ ಸ್ಪೆಷಲ್ ವಿಡಿಯೋ ಮಾಡಲಿದ್ದೇನೆ. ಸಂಗೀತದ ಆಲ್ಬಂ ಬರುತ್ತಲೇ ಇರುತ್ತದೆ.
ಯಾವ ರೀತಿಯ ಪಾತ್ರ ನಿರ್ವಹಿಸಲು ನಿನಗೆ ಆಸೆ?
ನಾನು ನಾಯಕನ ಜೊತೆ ಮರ ಸುತ್ತುವ ನಾಯಕಿಯಾಗಿ ನಟಿಸಲಾರೆ, ಬಹಳ ವಿಭಿನ್ನ, ಗಟ್ಟಿ ಪಾತ್ರಗಳನ್ನೇ ಬಯಸುತ್ತೇನೆ. ನಾನು ಪ್ರಿಯಾಂಕಾ ಚೋಪ್ರಾರ `ಬರ್ಫಿ’ ಚಿತ್ರ ನೋಡಿದಾಗಿನಿಂದ ಆಕೆಯ ಕಟ್ಟಾ ಅಭಿಮಾನಿಯಾದೆ. ಇದರಲ್ಲಿನ ಆಕೆಯ ಮೂಕಿ ಪಾತ್ರ ಎಂಥವರ ಮನಸ್ಸನ್ನೂ ಕರಗಿಸುತ್ತದೆ. ಅದೇ ತರಹ `ಮರ್ದಾನಿ’ ಚಿತ್ರ ಸಹ ನನಗೆ ತುಂಬಾ ಇಷ್ಟು ನಾನೂ ಸಹ ಮಾರ್ಷಲ್ ಆರ್ಟ್‌ಜಿಮ್ನಾಸ್ಟಿಕ್ಸ್ ನಲ್ಲಿ ಟ್ರೇನಿಂಗ್ ಪಡೆದಿದ್ದೇನೆ. ಫಾಸ್ಟ್ ಬೈಕ್ ಡ್ರೈವಿಂಗ್ ನಲ್ಲಿ ಪ್ರವೀಣೆ! ಯಾವುದಾದರೂ ಸ್ತ್ರೀ ಸೈನಿಕಳ ಸಾಹಸಿ ಪಾತ್ರ ಮಾಡಲು ಬಯಸುವೆ. `ನೀರಜಾ ಬಾನೆಟ್’ನಂಥ ಸಾಹಸಿ ಮಹಿಳಾ ಪೈಲಟ್ ನಾನಾಗ ಬಯಸುತ್ತೇನೆ!
– ಸ್ವರೂಪಾ ಸಂಪತ್