ಬಾಲಿವುಡ್ ನ ಪ್ರಸಿದ್ಧ ನಟಿ ಸಮೀಕ್ಷಾ ಭಟ್ನಾಗರ್ ಮೂಲತಃ ಉತ್ತರಾಖಂಡ ರಾಜ್ಯದ ಡೆಹರಾಡೂನ್ ನಗರದವಳು. ಅವಳಿಗೆ ಬಾಲ್ಯದಿಂದಲೂ ಸಂಗೀತ, ನೃತ್ಯಗಳಲ್ಲಿ ಆಸಕ್ತಿ ಹೆಚ್ಚು. ಅವಳ ಈ ಹವ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು, ಕಲೆಯಲ್ಲಿ ಪ್ರಗತಿ ಹೊಂದಲು, ಆ ಸಣ್ಣ ಊರಿನಿಂದ ಹೆತ್ತವರು ದೆಹಲಿಯ ಮಹಾನಗರಕ್ಕೆ ಬಂದರು. ಇಲ್ಲಿ ಸಮೀಕ್ಷಾ ತನ್ನದೇ ಆದ ಕಥಕ್ ನೃತ್ಯ ಅಕಾಡೆಮಿ ತೆರೆದಳು. ಅದಾದ 2 ವರ್ಷಗಳ ನಂತರ ತನ್ನ ಪ್ರತಿಭೆಯನ್ನು ಇಡೀ ವಿಶ್ವಕ್ಕೆ ಸಾರಲು ಅವಳು ಮುಂಬೈಗೆ ಬಂದಳು. ಮೊದಲ ಬಾರಿಗೆ ಕಿರುತೆರೆಯಲ್ಲಿ `ಏಕ್ ವೀರ್ ಕೀ ಅರ್ದಾನ್ ವೀರಾ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದೇ, ಹಲವು ಸೀರಿಯಲ್ಸ್ ಮುಖಾಂತರ ಮನೆ ಮಾತಾದಳು. ಅಲ್ಲಿಂದ ಬಾಲಿವುಡ್ ಗೆ ಎಂಟ್ರಿ ಪಡೆಯಲು ದಾರಿಯಾಯಿತು.
ಯಾವ ನಿರ್ಮಾಪಕರ ಸಹಾಯ ಇಲ್ಲದೆ, ಕೆಲವು ಮ್ಯೂಸಿಕ್ ಆಲ್ಬಂಗಳು ಹಾಗೂ `ಭ್ರಾಮಕ್' ಲಘು ಚಿತ್ರಗಳನ್ನು ತಾನೇ ತಯಾರಿಸಿದಳು. ಇವು ನೆಟ್ ಫ್ಲಿಕ್ಸ್ ನಲ್ಲಿ ಸಾಕಷ್ಟು ಜನಪ್ರಿಯ ಆದವು. ಇತ್ತೀಚೆಗೆ ಇವಳು `ಧೂಪ್ ಛಾಲ್' ಒಳಗೊಂಡಂತೆ 4-5 ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ.
ಡೆಹರಾಡೂನ್ ನಂಥ ಸಣ್ಣ ನಗರದಿಂದ ಮುಂಬೈ ಮಹಾನಗರಿಯ ಪ್ರಯಾಣ, ನಟಿ ಆದುದು ಹೇಗನ್ನಿಸಿತು?
ನನ್ನ ಅಭಿಪ್ರಾಯದಲ್ಲಿ ನಮ್ಮ ದೇಶದ ಪ್ರತಿಯೊಬ್ಬ ಹುಡುಗಿಯೂ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ಪಡಲೇಬೇಕು. ಈ ಕನಸು ಕಾಣಲಿಕ್ಕೆ ಹಳ್ಳಿಯೇನು.... ದಿಲ್ಲಿಯೇನು? ನನ್ನ ಕನಸನ್ನು ನನಸಾಗಿಸಲು ನಮ್ಮ ತಾಯಿ ತಂದೆ ಬಹಳ ಶ್ರಮಪಟ್ಟಿದ್ದಾರೆ. ಚಿಕ್ಕವಳಿದ್ದಾಗಿನಿಂದ ನನ್ನ ತಾಯಿಯ ಬಳಿಯಲ್ಲೇ ಕಥಕ್ ನೃತ್ಯಾಭ್ಯಾಸ ಕಲಿತೆ. ಮೊದಲಿನಿಂದ ಅದರಲ್ಲಿ ನಿಪುಣೆಯಾದ ಆಕೆ, ನಾನೂ ಅದರಲ್ಲಿ ಪಾರಂಗತಳಾಗಬೇಕೆಂದು ಆಶಿಸಿದರು. ಹಾಗೆಯೇ ಸಂಗೀತಾಭ್ಯಾಸ ಸಹ ಮಾಡಿದೆ. ಇದೆಲ್ಲ ನನ್ನ ಮೆಚ್ಚಿನ ಹವ್ಯಾಸಗಳು.
ನಮ್ಮೂರಿನಿಂದ ಮೊದಲು ದೆಹಲಿಗೆ ಬಂದೆ. ಅಲ್ಲಿ ನಾನು ಬಹಳಷ್ಟು ಕಲಿತೆ. ಏನಾದರೂ ರಚನಾತ್ಮಕವಾಗಿ ಚಟುವಟಿಕೆ ಆರಂಭಿಸಬೇಕಿದ್ದರೆ, ಮುಂಬೈಗೆ ಹೋಗಲೇಬೇಕು ಎಂದು ತಿಳಿದುಕೊಂಡೆ. ಇಲ್ಲಿಗೆ ಬಂದ ಮೇಲೆ ಉತ್ತಮ ಪ್ರತಿಕ್ರಿಯೆ ದೊರಕಿತು. `ವೀರ್...ವೀರಾ' ಧಾರಾವಾಹಿಯಲ್ಲಿ ಮೊದಲ ಅವಕಾಶ ಸಿಕ್ಕಿತು.
ಸಾಮಾನ್ಯವಾಗಿ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ಮೇಲೆ ಕಲಾವಿದರು ಥಿಯೇಟರ್ ಕಡೆ ನಾಟಕಗಳಲ್ಲಿ ಆಸಕ್ತಿ ತೋರುವುದಿಲ್ಲ. ನೀನು ಧಾರಾವಾಹಿಗಳಲ್ಲಿ ಚೆನ್ನಾಗಿ ಮಿಂಚುತ್ತಿದ್ದರೂ ನಾಟಕಗಳಿಗೆ ಮರಳಿದೆಯಲ್ಲ....?
ಜನ ನನ್ನನ್ನು ಧಾರಾವಾಹಿಗಳಿಂದ ಗುರುತಿಸಿ ಮೆಚ್ಚಿಕೊಂಡರು. ಅದಷ್ಟೇ ನನಗೆ ಸಾಲದು ಎನಿಸಿತು. ಒಬ್ಬ ಕಲಾವಿದೆಯಾಗಿ ನಾನು ಇದಕ್ಕಿಂತ ಉತ್ತಮ ಪರ್ಫಾರ್ಮೆನ್ಸ್ ನೀಡಬಲ್ಲೆ ಎನಿಸಿತು.
ಆದರೆ ಯಾರದ್ದಾದರೂ ಗೈಡೆನ್ಸ್ ಬೇಕೆನಿಸಿತು. ಇದನ್ನು ನಾಟಕಗಳಲ್ಲಿ ಸ್ಪಷ್ಟ ಗುರುತಿಸಿದೆ. ನಾಟಕಗಳ ನಿರ್ದೇಶಕರು ನನ್ನನ್ನು ತಿದ್ದಿ, ತೀಡಿ ಹೆಚ್ಚು ಕಲಿಸಿದರು. ಒಂದೇ ಡೈಲಾಗ್ ನ್ನು ಹಲವು ವಿಧದಲ್ಲಿ ಒಪ್ಪಿಸಿ ಅವರ ಮನಗೆದ್ದೆ! ಹೀಗೆ ನಾಟಕಗಳಲ್ಲಿನ ಅಭಿನಯ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಸದಾ ಪ್ರಗತಿ ಹೊಂದಬೇಕೆಂಬುದೇ ನನ್ನ ಗುರಿ. ಇಲ್ಲಿಯವರೆಗೂ ನಟನೆಯಲ್ಲಿ ನನಗೆ ಸಂತೃಪ್ತಿ ದೊರಕಿಲ್ಲ. ನಾನು `ರೋಶೋಮನ್ ಬ್ಲೂಸ್' ನಾಟಕದ 70 ಯಶಸ್ವೀ ಪ್ರದರ್ಶನ ನೀಡಿದ್ದೇನೆ. ಅಲ್ಲಿಂದ ಮುಂದೆ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತು.