ಕ್ಯಾಥರಿನ್‌ ತಡ ರಾತ್ರಿ ತನ್ನ ಕಾರನ್ನು ಡ್ರೈವ್ ವೇನಲ್ಲಿ ಪಾರ್ಕ್‌ ಮಾಡಿ, ಓಲಾಡುತ್ತಾ ಬ್ಯಾಕ್‌ ಯಾರ್ಡ್‌ ಡೋರ್‌ ತೆರೆಯಲು ಪ್ರಯತ್ನ ಮಾಡತೊಡಗಿದಳು. ಅವಳು ಮದ್ಯದ ಅಮಲಿನಲ್ಲಿದ್ದಳು. ಹೀಗಾಗಿ ಅವಳಿಗೆ ಕೀಯನ್ನು ಹೋಲ್ ‌ನಲ್ಲಿ ಸರಿಯಾಗಿ ತೂರಿಸಲೂ ಆಗುತ್ತಿರಲಿಲ್ಲ. ಹೊರಗೆ ಧ್ವನಿ ಕೇಳಿ ಶ್ಯಾಮ್ ಒಳಗಿನಿಂದ ಬಾಗಿಲು ತೆರೆದ. ಕ್ಯಾಥರಿನ್‌ ತನ್ನ ಬ್ಯಾಗ್‌ ನ್ನು ಒಂದೆಡೆ ಎಸೆದು ಲಿವಿಂಗ್‌ ರೂಮ್ ನ ಸೋಫಾದ ಮೇಲೆ ಧೊಪ್ಪೆಂದು ಬಿದ್ದಳು.

ಅವಳನ್ನು ಉದ್ದೇಶಿಸಿ ಸ್ಯಾಮ್, “ಕ್ಯಾಥ್‌, ನೀನು ಕೇವಲ ನನ್ನ ವೈಫ್‌ ಅಷ್ಟೇ ಅಲ್ಲ, ಒಬ್ಬ ಮಗಳ ತಾಯಿ ಕೂಡ. ನಾನು ನಿನ್ನ ರಂಪಾಟಗಳನ್ನು ಇಷ್ಟವಿಲ್ಲದಿದ್ದರೂ ಸಹಿಸಿಕೊಳ್ತೀನಿ. ಆದರೆ ಪಾಪ ಲಲಿತಾಳ ಬಗ್ಗೆ ಯೋಚಿಸು, ಅವಳಿಗೆ ಈಗ 3 ವರ್ಷ ಅಷ್ಟೆ. ನಿನ್ನ ಅವಶ್ಯಕತೆ ಅವಳಿಗೆ ತುಂಬಾ ಇದೆ,” ಎಂದು ಹೇಳಿದ.

“ವಾಟ್‌ ಸ್ಯಾಮ್, ನೀನೂ ಕೂಡ ಎಷ್ಟು ಹಳೆಕಾಲದ ಮಾತು ಹೇಳ್ತಿರುವೆ. ಲಲಿತಾಳನ್ನು ನಾವು ಬೇಬಿ ಕೇರ್‌ ಗೆ ಕಳಿಸಿ ಕೊಡ್ತಿದ್ದೇವೆ. ಅವಳಿಗೇ ಏನೂ ಸಮಸ್ಯೆ ಇರದಿರುವಾಗ ನಿನಗೇನು ಸಮಸ್ಯೆ ಇದೆ? ಈಗ ನನ್ನ ಮೂಡ್‌ ಹಾಳು ಮಾಡಬೇಡ. ಹೊರಡು ಈಗ ಮಲಗು,” ಎಂದಳು.

ಬೆಡ್‌ ಮೇಲೆ ಲಲಿತಾಳನ್ನು ನೋಡಿ ಕ್ಯಾಥರಿನ್‌ ಗೆ ಪಿತ್ತ ನೆತ್ತಿಗೇರಿದಂತಾಯಿತು. ಅವಳು ಜೋರಾಗಿ ಚೀರುತ್ತಾ, “ನಾನು ಇವಳಿಗಾಗಿ ಕಳೆದ 10 ದಿನಗಳಿಂದ ಬೇರೆ ರೂಮಿನಲ್ಲಿ ಮಲಗುವ ವ್ಯವಸ್ಥೆ ಮಾಡಿರುವೆ. ಇಂದು ಇವಳು ಮತ್ತೇಕೆ ಇಲ್ಲಿ ಬಂದಿದ್ದಾಳೆ? ಅವಳನ್ನು ಅವಳ ರೂಮಿಗೆ ಕಳಿಸು,” ಎಂದಳು.

“ಅತ್ತು ಅತ್ತು ಬಹಳ ಕಷ್ಟಪಟ್ಟು ಈಗಷ್ಟೇ ಮಲಗಿದ್ದಾಳೆ. ಅವಳ ನಿದ್ದೆ ಹಾಳು ಮಾಡಬೇಡ. ಇವತ್ತಿನಿಂದ ಮಗು ಇಲ್ಲಿಯೇ ಮಲಗಲಿ,” ಎಂದ.

ಕ್ಯಾಥರಿನ್‌ ಅವಳನ್ನು ಬಲವಂತದಿಂದ ತನ್ನ ಬಾಹುಗಳಲ್ಲಿ ಎತ್ತಿಕೊಂಡು ಬೇರೆ ರೂಮಿಗೆ ಕರೆದೊಯ್ಯತೊಡಗಿದಳು. ಆಗ ಸ್ಯಾಮ್ ಕೋಪದಿಂದ ಅವಳ ಕೈಯಿಂದ ಲಲಿತಾಳನ್ನು ಕಿತ್ತುಕೊಂಡು ಬೆಡ್‌ ಮೇಲೆ ಮಲಗಿಸಿದ.

ಕ್ಯಾಥರಿನ್‌ ಕೂಡ ಕೋಪದಿಂದ ಚೀರುತ್ತಲೇ, “ಹೌ ಡೇರ್‌ ಯೂ ಅಸಾಲ್ಟ್ ಮೀ!” ಎಂದಳು.

“ನಾನು ನಿನಗೆಲ್ಲಿ ಅಸಾಲ್ಟ್ ಮಾಡಿದೆ? ನಿನ್ನ ಕೈಯಿಂದ ಮಗಳನ್ನು ಕಿತ್ತುಕೊಂಡು ಬೆಡ್‌ ಮೇಲೆ ಮಲಗಿಸಿದೆ ಅಷ್ಟೆ,” ಸ್ಯಾಮ್ ಹೇಳಿದ.

“ಇಟ್ಸ್ ಆಲ್ ದಿ ಸೇಮ್. ನೀನು ಒತ್ತಾಯಪೂರ್ವಕವಾಗಿ ನನ್ನಿಂದ ಕಿತ್ತುಕೊಂಡೆ. ನೀವಿಬ್ಬರೂ ಈ ರೂಮಿನಿಂದ ಹೊರ ನಡೆಯಿರಿ,” ಎಂದಳು.

ಇಬ್ಬರ ಜೋರು ಜೋರು ಧ್ವನಿಯಿಂದ ಲಲಿತಾ ಹೆದರಿ ಎದ್ದು ಕುಳಿತಳು. ಸ್ಯಾಮ್ ಅವಳನ್ನು ತನ್ನ ತೋಳಿನ ಮೇಲೆ ಮಲಗಿಸಿಕೊಂಡು ಲಲಿತಾಳ ರೂಮಿಗೆ ಹೋಗಿ ಇಬ್ಬರೂ ಅಲ್ಲೇ ಮಲಗಿಕೊಂಡರು.

ಸ್ಯಾಮ್ ಭಾರತೀಯ ಮೂಲದ ಎಂಜಿನಿಯರ್‌. ಕೆಲವು ವರ್ಷಗಳ ಮುಂಚೆ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ಬಂದಿದ್ದ ಹಾಗೂ ಅವನಿಗೆ ಗ್ರೀನ್‌ ಕಾರ್ಡ್‌ ದೊರಕಿತ್ತು. ಅವನ ತಾಯಿ ತಂದೆ ಭಾರತದಲ್ಲಿಯೇ ವಾಸವಾಗಿದ್ದರು. ಮುಂದಿನ 1-2 ವರ್ಷಗಳಲ್ಲಿ ಅವನಿಗೆ ಅಮೆರಿಕಾದ ನಾಗರಿಕತ್ವ ದೊರಕುವ ಸಾಧ್ಯತೆ ಇತ್ತು. 5 ವರ್ಷಗಳ ಹಿಂದಷ್ಟೇ ಅವನು ಅಮೆರಿಕನ್‌ ಹುಡುಗಿ ಕ್ಯಾಥರಿನ್ ಳನ್ನು ಮದುವೆಯಾಗಿದ್ದ. ಅಂದಹಾಗೆ ಅವಳು ವಯಸ್ಸಿನಲ್ಲಿ ಅವನಿಗಿಂತ ದೊಡ್ಡವಳಾಗಿದ್ದಳು.

ಈ ಮದುವೆ ಸ್ಯಾಮ್ ನ ತಾಯಿ ತಂದೆಯ ಇಚ್ಛೆಗೆ ವಿರುದ್ಧವಾಗಿತ್ತು. ಕ್ಯಾಥರಿನ್‌ ಅವನದೇ ಕಂಪನಿಯಲ್ಲಿ ರಿಸೆಪ್ಶನಿಸ್ಟ್ ಆಗಿದ್ದಳು. ಅವಳಿಗೆ ಹೆಚ್ಚಿಗೆ ಓದಲು ಆಗಿರಲಿಲ್ಲ. ಅವಳ ತಾಯಿ ಬಾಲ್ಯದಲ್ಲೇ ತೀರಿಕೊಂಡಿದ್ದರು. ತಾಯಿ ತೀರಿಕೊಂಡ ಒಂದು ವರ್ಷದಲ್ಲೇ ಅವಳ ತಂದೆ ಮರು ಮದುವೆ ಆಗಿದ್ದರು. ಇವರ ಮದುವೆಯಾದ 1 ವರ್ಷದ ಬಳಿಕ ತಂದೆ ಸಹ ತೀರಿಕೊಂಡರು. ತಂದೆಯ ಆಸ್ತಿಯ ಹೊರತಾಗಿ ಅವಳಿಗೆ ಇನ್ಶೂರೆನ್ಸ್ ನಿಂದಲೂ ಹಣ ಬಂದಿತ್ತು. ಕ್ಯಾಥರಿನ್‌ ಬಾಲ್ಯದಿಂದಲೇ ಸ್ವಚ್ಚಂಧ ಸ್ವಭಾವದವಳಾಗಿದ್ದಳು. ಅವಳು ಶ್ಯಾಮ್ ನನ್ನು ಸ್ಯಾಮ್ ಎಂದು ಕರೆಯುತ್ತಿದ್ದಳು. ಅವನು ಅವಳನ್ನು ಕ್ಯಾಥ್‌ ಎಂದು ಕರೆಯುತ್ತಿದ್ದ.

ಬೆಳಗ್ಗೆ ಎದ್ದಾಗ ಸ್ಯಾಮ್ ಅವಳನ್ನು, “ಕ್ಯಾಥ್‌, ನಿನ್ನೆ ರಾತ್ರಿಯ ಘಟನೆ ನಿನಗೆ ನೆನಪಾದರೂ ಇದೆಯಾ?” ಎಂದು ಕೇಳಿದ.

“ನನಗೆ ಎಲ್ಲವೂ ನೆನಪಿದೆ. ನಾನು ಅಷ್ಟೊಂದು ಕುಡಿದಿರಲಿಲ್ಲ,” ಎಂದಳು.

“ಇನ್ನಷ್ಟು ಕುಡಿದಿದ್ದರೆ, ಮತ್ತಷ್ಟು ರಂಪ ಮಾಡ್ತಿದ್ದೆ ಅನ್ನು,” ಎಂದ.

“ರಂಪ ಮಾಡಿದ್ದು ನೀನು, ನಾನಲ್ಲ. ನಾನು ಕೇವಲ ಲಲಿತಾಳನ್ನು ಪ್ರತ್ಯೇಕ ರೂಮ್ ನಲ್ಲಿ ಮಲಗಿಸುವ ವ್ಯವಸ್ಥೆ ಮಾಡಿದ್ದೆ. ಅವಳ ಮೇಲೆ ನಿಗಾ ಇಡಲು ಕ್ಯಾಮೆರಾ ಕೂಡ ಅಳವಡಿಸಿದ್ದೆ.

“ಲಲಿತಾಳಿಗೆ ಅಮ್ಮ ಅಪ್ಪ ಇಬ್ಬರ ಪ್ರೀತಿಯೂ ಬೇಕು. ಪ್ರತ್ಯೇಕವಾಗಿ ಮಲಗಿಸುವಷ್ಟು ದೊಡ್ಡವಳಲ್ಲ ಅವಳು.”

“ಇದು ನಿಮ್ಮ ಇಂಡಿಯಾ ಅಲ್ಲ. ಇಲ್ಲಿ 1 ವರ್ಷದ ಮಗುನನ್ನು ಕೂಡ ಜನರು ಪ್ರತ್ಯೇಕವಾಗಿ ಮಲಗಿಸುವ ವ್ಯವಸ್ಥೆ ಮಾಡುತ್ತಾರೆ.”

“ಇಂಡಿಯಾ ಹಾಗೂ ಅಮೆರಿಕಾದ ಮಾತು ಎಲ್ಲಿಂದ ಬಂತು? ನಾನಂತೂ ಹಲವು ವರ್ಷಗಳಿಂದ ಅಮೆರಿಕಾದಲ್ಲಿದ್ದೇನೆ. ಇಲ್ಲಿಯೇ ಉಳಿಯಲು ಇಚ್ಛಿಸಿದ್ದೇನೆ. ಅದನ್ನು ಗಮನಿಸಿಯೇ ನೀನು ನನ್ನನ್ನು ಮದುವೆಯಾಗಿರುವೆ.”

“ಅದೇ, ನನ್ನ ದೊಡ್ಡ ತಪ್ಪಾಗಿತ್ತು.”

“ಈಗ ವ್ಯರ್ಥ ಮಾತುಗಳಿಗೆ ಏಕೆ ಅಷ್ಟೊಂದು ಮಹತ್ವ ಕೊಡ್ತಿರುವೆ? ಲಲಿತಾಳನ್ನು ಡೇ ಕೇರ್‌ ಗೆ ಹಾಕ್ತೀನಿ. ನೀನೇ ಡ್ರಾಪ್‌ಮಾಡ್ತೀಯೋ ಇಲ್ವೋ?”

“ಇಲ್ಲ ಇಂದು ನಾನು ಹಾಫ್‌ ಡೇ ರಜೆ ಹಾಕ್ತೀನಿ. ನೀನೇ ಡ್ರಾಪ್‌ ಮಾಡು.”

“ಅಂದಹಾಗೆ, ಬಾಸ್‌ ಕೂಡ ನಿನಗೆ ಆಫೀಸಿಗೆ ಕುಡಿದು ಬರಬಾರದು ಎಂದು ತಿಳಿಸಿ ಹೇಳು ಅಂತಿದ್ರು. ಯಾರೊ ನಿನ್ನ ವಿರುದ್ಧ ಕಂಪ್ಲೇಂಟ್‌ ಮಾಡಿದ್ದಾರೆ.”

“ಬಾಸ್‌ ಗೇನು? ಅವರಿಗೆ ಹೇಳೋದೇ ಕೆಲಸ. ನೌಕರಿ ನನಗೆ ಅನಿವಾರ್ಯವಲ್ಲ. ಅದು ನನ್ನ ಟೈಮ್ ಪಾಸ್‌ ಗೆ.”

“ನಿನಗೆ ಅದು ಟೈಮ್ ಪಾಸ್‌ ನಿನಗಿರಬಹುದು. ಆದರೆ ಆಫೀಸ್‌ ಅನ್ನೋದು ಟೈಮ್ ಪಾಸ್‌ ಗೆ  ಅಲ್ಲ.”

“ನೀನು ನಿನ್ನ ಕೆಲಸ ಮಾಡು. ಬಾಸ್‌ ನ್ನು ನಾನು ಹ್ಯಾಂಡ್‌ ಮಾಡ್ತೀನಿ.”

ಕ್ಯಾಥರಿನ್‌ ಸಾಮಾನ್ಯವಾಗಿ ವೀಕೆಂಡ್‌ ನಲ್ಲಿ ಕ್ಲಬ್‌ ನಿಂದ ಅಮಲಿನ ಸ್ಥಿತಿಯಲ್ಲಿ ವಾಪಸ್‌ ಬರುತ್ತಿದ್ದಳು. ಆಗ ಸ್ಯಾಮ್ ಗೂ ಅವಳಿಗೂ ಜಗಳವಾಗುತ್ತಿತ್ತು. ಸ್ಯಾಮ್ ಗೆ ಕ್ಲಬ್‌ ನಲ್ಲಿ ಯಾವುದೇ ಆಸಕ್ತಿ ಇರುತ್ತಿರಲಿಲ್ಲ. ಅದೊಂದು ಸಲ ಕ್ಯಾಥರಿನ್‌ ಅದೆಷ್ಟು ಕುಡಿದಿದ್ದಳೆಂದರೆ ಕಾರನ್ನು ಬೇರೆ ಯಾರೋ ಒಬ್ಬ ವ್ಯಕ್ತಿ ಚಲಾಯಿಸಿಕೊಂಡು ಬಂದು, ಅವಳನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು ಬಂದಿದ್ದ. ಸ್ಯಾಮ್ ಬಾಗಿಲು ತೆರೆದಾಗ ಅವನು ಕೋಪದಿಂದ ಕೆಂಡವಾಗಿ ಹೋಗಿದ್ದ. ಸ್ಯಾಮ್ ಆ ವ್ಯಕ್ತಿಗೆ ಧನ್ಯವಾದ ಹೇಳಿ ಅವನನ್ನು ಕಳಿಸಿಕೊಟ್ಟ.

ನಂತರ, “ಇದೆಂಥ ಅಸಭ್ಯತನ? ಪರಪುರುಷ ನಿನ್ನನ್ನು ಎತ್ತಿಕೊಂಡು ಬರುವಷ್ಟರಮಟ್ಟಿಗೆ ನೀನು ಕಂಠಪೂರ್ತಿ ಕುಡಿಯುವುದೇಕೆ?” ಎಂದು ಕ್ಯಾಥರಿನ್‌ ಳನ್ನು ಕೇಳಿದ.

“ಅವನೇನು ಅಪರಿಚಿತ ವ್ಯಕ್ತಿಯಲ್ಲ. ನನ್ನ ಕ್ಲಾಸ್‌ ಮೇಟ್‌ ಆಗಿದ್ದ. ನಾವಿಬ್ಬರೂ ಅನೇಕ ಸಲ ಡೇಟ್‌ ಗೆ ಹೋಗಿದ್ದೆವು,” ಎಂದಳು.

“ಮತ್ತೇನು? ನೀನು ಅವನೊಂದಿಗೆ ಫಿಸಿಕಲ್ ಕೂಡ ಇದ್ದಿರಬಹುದು. ಶೇಮ್ ಆನ್‌ ಯೂ!”

“ಮೈಂಡ್‌ ಯುವರ್‌ ಟಂಗ್‌. ನಾನೇನು ಬಾವಿಯ ಕಪ್ಪೆಯಲ್ಲ. ನಾನು ನಿನ್ನ ಹಾಗೆ ಕನ್ಸರ್ ವೇಟಿವ್ ‌ಅಲ್ಲ. ನನಗೆ ಈ ಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿಲ್ಲ.”

“ನನಗೆ ಚೆನ್ನಾಗಿ ಗೊತ್ತು. ನಿನ್ನ ಸ್ಟೆಪ್‌ ಮಾಮ್ ಜೊತೆಗೆ ನಿನಗೆ ಹೊಂದಾಣಿಕೆ ಇರಲಿಲ್ಲ ಮತ್ತು ನಿನ್ನ ಅಪ್ಪ ಹೆಂಡ್ತಿಯ ಗುಲಾಮನಾಗಿದ್ದ. ಹೀಗಾಗಿ ನೀನು ಹೆಚ್ಚಿನ ಸಮಯ ಅಜ್ಜಿಯ ಮನೆಯಲ್ಲಿಯೇ ಇರುತ್ತಿದ್ದೆ. ಆ ಬಳಿಕ ಬೋರ್ಡಿಂಗ್‌ ಗೆ ಹೋದೆ. ನೀನೊಂದು ದಿನ ವೆಕೆಶನ್‌ ನಲ್ಲಿ ವಿಯಾಮಿನಲ್ಲಿ ಸಿಕ್ಕಿದ್ದೆ. ನನ್ನ ಬಗ್ಗೆ ಅದ್ಹೇಗೆ ನಿನಗೆ ಪ್ರೀತಿಯಾಯಿತೊ ಏನೋ?”

“ನನ್ನ ಬಗ್ಗೆ ಪ್ರೀತೀನಾ? ನೀನು ನನಗೆ ಬಿಯರ್‌ ಆಫರ್‌ ಮಾಡಿದ್ದೆ ಮತ್ತು ನನ್ನೊಂದಿಗೆ ಡ್ಯಾನ್ಸ್ ಮಾಡಿದ್ದೆ. ನಾನು ನಿನ್ನ ಬಳಿ ಬಂದಿರಲಿಲ್ಲ.”

“ಸ್ಟಾಪ್‌ ಇಟ್‌ ನೌ, ಗೋ ಟು ಬೆಡ್‌. ನಾಳೆ ಬೆಳಗ್ಗೆ ಮಾತಾಡೋಣ.”

ಇದೇ ರೀತಿ ನಾನು ನೀನು, ನೀನು ನಾನು ಅಂತ ಇಬ್ಬರೂ ದಿನ ಕಿತ್ತಾಡುತ್ತಿದ್ದರು. ಈಗ ಲಲಿತಾ ಬೆಳೆದು ದೊಡ್ಡವಳಾಗಿದ್ದಳು. ಅವಳು ತನ್ನ ಅಮ್ಮನ ವರ್ತನೆಯಿಂದ ಬೇಸರದಲ್ಲಿದ್ದಳು. ಅವಳಿಗೆ ಅಪ್ಪನ ಬಗ್ಗೆ ಬಹಳ ಪ್ರೀತಿಯಿತ್ತು. ಹೈಸ್ಕೂಲ್ ‌ಶಿಕ್ಷಣಕ್ಕಾಗಿ ಅವಳನ್ನು ಬೋರ್ಡಿಂಗ್‌ ಗೆ ಕಳಿಸಿಕೊಡಲಾಗಿತ್ತು. ಕ್ಯಾಥರಿನ್‌ ಗೆ ತನ್ನ ಮಗಳ ಬಗ್ಗೆ ಅಷ್ಟೇನೂ ಚಿಂತೆ ಇರಲಿಲ್ಲ. ಅದೊಂದು ದಿನ ಕ್ಯಾಥರಿನ್‌ ಇಡೀ ರಾತ್ರಿ ಹೊರಗೆ ಕಳೆದು ಮನೆಗೆ ಬಂದಿದ್ದಳು. ಆಗ ಮನೆಯಲ್ಲಿ ಜ್ವಾಲಾಮುಖಿ ಸಿಡಿಯುವುದು ಸಾಮಾನ್ಯವಾಗಿತ್ತು. ಸ್ಯಾಮ್ ಅವಳನ್ನು ತರಾಟೆಗೆ ತೆಗೆದುಕೊಳ್ಳುತ್ತಾ, “ಈಗ ಬರುವ ಅವಶ್ಯಕತೆಯಾದರೂ ಏನಿತ್ತು? ಇನ್ನೂ 3-4 ದಿನ ಮೋಜು ಮಾಡಿ ಬರಬಹುದಿತ್ತಲ್ಲ,” ಎಂದ.

ಕ್ಯಾಥರಿನ್‌ ಕೂಡ ಕೋಪದಿಂದ, “ಡೋಂಟ್‌ ಟ್ರೈ ಟು ಬಿ ಲೈಕ್‌ ರೂಡ್‌ ಇಂಡಿಯನ್‌ ಹಸ್ಬೆಂಡ್‌. ಇದು ನನ್ನಪ್ಪನ ಮನೆ. ನಾನು ನಿನಗೆ ಇಲ್ಲಿ ಆಶ್ರಯ ಕೊಟ್ಟಿದ್ದೇನೆ. ಹಾಗೆಂದೇ ಇಲ್ಲಿದ್ದೀಯಾ. ನಾನು ನನ್ನ ಮನಸ್ಸಿಗೆ ಬಂದಾಗ ಬರ್ತೀನಿ ಹೋಗ್ತೀನಿ.”

“ಸರಿ, ನಿನ್ನ ಮನೆ ನಿನಗೇ ಇರಲಿ. ನಿನಗೆ ನನ್ನ ಹೆಂಡತಿಯಾಗಿ ಇರಬೇಕಿದ್ದರೆ, ನೀನು ನಿನ್ನ ಧೋರಣೆ ಹಾಗೂ ವರ್ತನೆ ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ನಿನಗೆ ನನ್ನ ಜೀವನದಲ್ಲಿ ಯಾವುದೇ ಸ್ಥಾನ ಇಲ್ಲ.”

“ನೀನು ನನಗೆ ದಿನ ಇದೇ ರೀತಿ ಅಡೆ ತಡೆ ಉಂಟು ಮಾಡುತ್ತಿದ್ದರೆ ನಿನಗೂ ಕೂಡ ನನ್ನ ಮನೆಯಲ್ಲಿ ಯಾವುದೇ ಜಾಗ ಇಲ್ಲ. ನೀನು ಹೊರಟು ಹೋಗಬಹುದು.”

“ನಾನು ಖುಷಿಯಿಂದಲೇ ಹೊರಟು ಹೋಗ್ತೀನಿ. ಆದರೆ ಲಲಿತಾಳ ಬಗ್ಗೆ ಏನು ಮಾಡುವುದು?”

“ಅವಳ ರೂಪ ನಿನ್ನಂತಿದ್ದರೂ, ಬಣ್ಣ ಅಮೆರಿಕನ್ನರದ್ದಾಗಿದೆ. ಇಲ್ಲದಿದ್ದರೆ ಅವಳಿಗೆ ಅಮೆರಿಕನ್‌ ಹುಡುಗ ಸಿಗುವುದು ಕಷ್ಟವಾಗುತ್ತಿತ್ತು. ಅವಳ ಬಗ್ಗೆ ಏನೇ ಆದ್ರೂ ಒಳ್ಳೆಯದೇ ಆಗುತ್ತದೆ.”

ಮರುದಿನ ಸ್ಯಾಮ್ 3 ದೊಡ್ಡ ಬಾಕ್ಸ್ ಗಳಲ್ಲಿ ತನ್ನ ಬಟ್ಟೆ ಹಾಗೂ ಇತರೆ ಸಾಮಗ್ರಿಗಳನ್ನು ತೆಗೆದುಕೊಂಡು ಕಂಪನಿಯ ಗೆಸ್ಟ್ ಹೌಸ್‌ ಗೆ ಹೊರಟುಹೋದ. ಅಲ್ಲಿಂದ 2 ವಾರಗಳ ಬಳಿಕ ಒಂದು ಅಪಾರ್ಟ್‌ ಮೆಂಟ್‌ ಗೆ ಶಿಫ್ಟ್ ಆದ. ಅಲ್ಲಿ ಅವನಿಗೆ ಕ್ಯಾಥರಿನ್‌ ಳ ಕೀಲನಿಂದ ಡೈವೋರ್ಸ್‌ ನೋಟೀಸ್‌ ಸಿಕ್ಕಿತು. ಸ್ಯಾಮ್ ತನ್ನ ಮಗಳಿಗೆ ಎಲ್ಲ ಕಥೆ ಹೇಳಿದ.

ಸ್ಯಾಮ್ ಹಾಗೂ ಕ್ಯಾಥರಿನ್‌ ಇಬ್ಬರೂ ವಕೀಲರ ಬಳಿ ಕುಳಿತಿದ್ದರು.

ವಕೀಲರು, “ಕ್ಯಾಥರಿನ್‌, ನಿಮ್ಮಿಬ್ಬರಲ್ಲಿನ ಅನೇಕ ಭಿನ್ನಾಭಿಪ್ರಾಯಗಳ ಕಾರಣದಿಂದ ವಿಚ್ಛೇದನಕ್ಕೆ ಬೇಡಿಕೆ ಸಲ್ಲಿಸಿದ್ದಾಳೆ. ಈ ಬಗ್ಗೆ ನೀವು ಏನು ಹೇಳಲು ಇಚ್ಛಿಸುವಿರಿ?”

“ಕ್ಯಾಥರಿನ್‌ ಸರಿಯಾಗಿಯೇ ಹೇಳಿದ್ದಾಳೆ,” ಸ್ಯಾಮ್ ಹೇಳಿದ.

“ನೀವು ನಿಮ್ಮ ಆಸ್ತಿಯ ಹಂಚಿಕೆಯನ್ನು ಕೋರ್ಟ್‌ ನಿಂದ ಹೊರಗಡೆ ಪರಸ್ಪರ ಸಮ್ಮತಿಯ ಮೇರೆಗೆ ನಿರ್ಧರಿಸಿಕೊಳ್ಳಿ. ಇಲ್ಲದಿದ್ದರೆ ಹೆಚ್ಚು ಸಮಯ ಹಿಡಿಯುತ್ತೆ.”

“ಈ ಬಂಗ್ಲೆಯನ್ನು ನನ್ನ ಡ್ಯಾಡಿ ನನ್ನ ಹೆಸರಿಗೆ ಮದುವೆಗೂ ಮೊದಲೇ ಬರೆಸಿದ್ದರು. ಇದರಲ್ಲಿ ಸ್ಯಾಮ್ ಗೆ ಯಾವುದೇ ಹಕ್ಕಿಲ್ಲ,” ಕ್ಯಾಥರಿನ್‌ ವಕೀಲರಿಗೆ ಹೇಳಿದಳು.

“ನಾನು ನನ್ನ ಮನೆಯನ್ನು ಮದುವೆಗೂ ಮೊದಲೇ ಖರೀದಿಸಿದ್ದೆ. ಅದರ ಮೇಲೆ ಕ್ಯಾಥರಿನ್‌ ಗೆ ಯಾವುದೇ ಹಕ್ಕು ಇರುವುದಿಲ್ಲ. ಅದರ ಇಎಂಐನ್ನು ನಾನೊಬ್ಬನೇ ಭರ್ತಿ ಮಾಡುತ್ತಾ ಬಂದಿದ್ದೇನೆ. ಈಗ ಅದನ್ನು ಬಾಡಿಗೆಗೆ ಕೊಟ್ಟಿದ್ದೇನೆ,” ಎಂದ ಸ್ಯಾಮ್.

“ಇದಂತೂ ಒಳ್ಳೆಯದೇ ಆಯಿತು. ಈಗ ನೀವು ಬೇರೆ ವಿಷಯಗಳು ಅಂದರೆ ಯಾವುದಾದರೂ ಸಾಲಗಳು ಇದ್ದರೆ ಅದರ ಬಗ್ಗೆ ಹೇಳಿ,” ವಕೀಲರು ಕೇಳಿದರು.

ಸ್ಯಾಮ್ ಮತ್ತು ಕ್ಯಾಥರಿನ್‌ ಇಬ್ಬರೂ ತಂತಮ್ಮ ಬ್ಯಾಂಕ್‌ ಬ್ಯಾಲೆನ್ಸ್ ತಮ್ಮ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದರು. ಕೆಲವು ಫರ್ನೀಚರ್‌ ನ್ನು ಸ್ಯಾಮ್ ತನ್ನ ಕಾರ್ಡ್‌ ನಿಂದ ತೆಗೆದುಕೊಂಡಿದ್ದ. ಅವನ್ನು ಅವನು ತನ್ನ ಫ್ಲಾಟಿಗೆ ಒಯ್ಯುವುದಾಗಿ ಹೇಳಿಕೊಂಡ.

“ನಿಮ್ಮ ಮಗಳು ಈಗ ವಯಸ್ಕಳಾಗಿದ್ದಾಳೆ. ಕೋರ್ಟ್‌ ಮುಂದೆ ಅವಳನ್ನು ಹಾಜರುಪಡಿಸಬೇಕಾಗುತ್ತದೆ. ಅವಳು ಯಾರ ಬಳಿ ಇರುತ್ತಾಳೆಂದು ತಿಳಿಸಬೇಕಾಗುತ್ತದೆ,” ವಕೀಲರು ಹೇಳಿದರು.

ಲಲಿತಾ ಕೋರ್ಟ್‌ ಮುಂದೆ ಹೇಳಿಕೆ ಕೊಟ್ಟು ತಂದೆಯ ಬಳಿ ಇರುವುದಾಗಿ ಸ್ಪಷ್ಟಪಡಿಸಿದಳು. ಕಾನೂನಿನ ಪ್ರಕಾರ ಕ್ಯಾಥರಿನ್‌ ಗೆ ಅವಳ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಹಾಗೂ ಅವಳ ಇಚ್ಛೆಗೆ ವಿರುದ್ಧವಾಗಿ ಕ್ಯಾಥರಿನ್‌ ಅವಳನ್ನು ಭೇಟಿ ಆಗುವ ಹಾಗಿಲ್ಲ. ಕೆಲವು ದಿನಗಳಲ್ಲಿ ಅವರ ವಿಚ್ಛೇದನ ಆಯಿತು.

ಕ್ಯಾಥರಿನ್‌ ಬಳಿ ಹಣಕ್ಕೆ ಯಾವುದೇ ಕೊರತೆ ಇರಲಿಲ್ಲ. ಅವಳು ತನ್ನದೇ ಆದ ರೀತಿಯಲ್ಲಿ ತನ್ನ ಲೈಫ್‌ ಸ್ಟೈಲ್ ‌ನಡೆಸುತ್ತಿದ್ದಳು. ಸ್ಯಾಮ್ ಟೆಕ್ಸಾಸ್‌ ನ ಆ್ಯಸ್ಟಿನ್‌ ನಗರಕ್ಕೆ ಟ್ರಾನ್ಸ್ ಫರ್‌ ಮಾಡಿಸಿಕೊಂಡ. ಕ್ಯಾಲಿಫೋರ್ನಿಯಾದಲ್ಲಿ ಮನೆಗಳ ಬೆಲೆ ಬಹಳ ಹೆಚ್ಚು. ಮನೆ ಮಾರಿದ್ದರಿಂದ ಅವನಿಗೆ ದೊರೆತ ಹಣದಲ್ಲಿ ಆ್ಯಸ್ಟಿನ್‌ ನಲ್ಲಿ 2 ಮನೆಗಳನ್ನು ಸುಲಭವಾಗಿ ಕೊಂಡುಕೊಳ್ಳಬಹುದಿತ್ತು. ಆದರೆ 3 ಬೆಡ್‌ ರೂಮಿನ ಮನೆಯನ್ನಷ್ಟೇ ಅವನು ಖರೀದಿಸಿದ.

ಲಲಿತಾ ಹ್ಯೂಸ್ಟನ್‌ ನ ರೈನ್‌ ಯೂನಿವರ್ಸಿಟಿಯಲ್ಲಿ ಅಡ್ಮಿಶನ್‌ ಮಾಡಿಸಿಕೊಂಡಳು. ಹ್ಯೂಸ್ಟನ್‌ ನಿಂದ ಆ್ಯಸ್ಟಿನ್‌ ಕೇವಲ ಎರಡೂವರೆ ಗಂಟೆಯ ಪ್ರಯಾಣ. ಹೀಗಾಗಿ ಸ್ಯಾಮ್ ಲಲಿತಾಳನ್ನು ಮೇಲಿಂದ ಮೇಲೆ ಭೇಟಿ ಆಗಲು ಸಾಧ್ಯವಿತ್ತು. ಕ್ಯಾಥರಿನ್‌ಕೂಡ 4-5 ತಿಂಗಳಿಗೊಮ್ಮೆ ಲಲಿತಾಳನ್ನು ಭೇಟಿಯಾಗಲು ಬಂದು 1-2 ಗಂಟೆ ಅವಳ ಜೊತೆಗಿದ್ದು ಅದೇ ರಾತ್ರಿ ಕ್ಯಾಲಿಫೋರ್ನಿಯಾಕ್ಕೆ ಹೊರಟು ಹೋಗುತ್ತಿದ್ದಳು.

ಇತ್ತ ಈಗ ಕ್ಯಾಥರಿನ್‌ ಪರಿಪೂರ್ಣ ಸ್ವಾತಂತ್ರ್ಯ ಪಡೆದಿದ್ದಳು. ಅವಳು ಕಂಪನಿಯ ಕೆಲಸ ಬಿಟ್ಟು ಮನೆಯಿಂದಲೇ ಕೆಲವು ಬಿಸ್‌ ನೆಸ್‌ ಆರಂಭಿಸಿದ್ದಳು. 45 ವರ್ಷದವಳಾಗಿದ್ದ ಕ್ಯಾಥರಿನ್‌ ಈಗ ದಿನ ಕುಡಿಯಲು ಶುರು ಮಾಡಿದ್ದಳು. ಅದೊಂದು ದಿನ ಅವಳು ಕುಡಿದ ಅಮಲಿನಲ್ಲಿ ಒಬ್ಬ ಯುವಕನಿಗೆ ಡಿಕ್ಕಿ ಹೊಡೆದಳು. ಆ ಡಿಕ್ಕಿಯ  ರಭಸ ಹೇಗಿತ್ತೆಂದರೆ, ಅವನ ಕೈಯಲ್ಲಿನ ಫೋನ್‌ ರಸ್ತೆಯ ಮೇಲೆ ಬಿದ್ದು ಒಡೆದುಹೋಯಿತು. ಕ್ಯಾಥರಿನ್‌ ಸಾರಿ ಹೇಳಿದ ಬಳಿಕ, ಅವನು ಫೋನ್‌ ಎತ್ತಿಕೊಳ್ಳುತ್ತಾ, “ನಾನು ಮೊದಲೇ ತೊಂದರೆಯಲ್ಲಿದ್ದೆ. ಇದು ಇವತ್ತೇ ಹಾಳಾಗಬೇಕಿತ್ತಾ?” ಎಂದ.

ಕ್ಯಾಥರಿನ್‌ ಒಡೆದುಹೋದ ಫೋನ್‌ ನ್ನು ತನ್ನ ಕೈಗೆತ್ತಿಕೊಂಡು, “ಐ ಆ್ಯಮ್ ಸಾರಿ. ನಾನು ಇದನ್ನು ಸರಿಪಡಿಸ್ತೀನಿ. ಅಲ್ಲಿಯತನಕ ನನ್ನ ಫೋನ್‌ ನ್ನು ನಿನ್ನ ಹತ್ತಿರ ಇಟ್ಟುಕೊ. ಈ ನನ್ನ ಕಾರ್ಡ್‌ ನ್ನು ನಿನ್ನ ಬಳಿ ಇಟ್ಟುಕೊಂಡು ನನ್ನ ಫೋನ್‌ ಗಾಗಿ ಕಾಯುತ್ತಾ ಇರು. ನೀನು ನಿನ್ನ ಹೆಸರನ್ನಾದರೂ ತಿಳಿಸು,” ಎಂದು ಕೇಳಿದಳು.

“ರಾಜನ್‌,” ಎಂದಷ್ಟೇ ಹೇಳಿದ. ಕ್ಯಾಥರಿನ್‌ ಳ ಸಂದೇಶ ತಲುಪುತ್ತಿದ್ದಂತೆ ರಾಜನ್‌ ಒಂದು ಹೋಟೆಲ್ ಗೆ ಹೋದ. ಅದೊಂದು ಫೈವ್‌ ಸ್ಟಾರ್‌ ಹೋಟೆಲ್ ‌ಆಗಿತ್ತು. ಕ್ಯಾಥರಿನ್‌ ಅವನಿಗೆ ಅದೇ ಹೋಟೆಲ್ ‌ನಲ್ಲಿ ಡಿನ್ನರ್‌ ಮಾಡಿಸಿದಳು ಹಾಗೂ ಅವನ ಬಗ್ಗೆ ಕೆಲವು ಮಾಹಿತಿ ಪಡೆದಳು. ತಾನು ಭಾರತದಿಂದ ಎಂ.ಎಸ್‌ ಮಾಡಲು ಬಂದಿರುವುದಾಗಿ, ತನಗೆ ಯಾವುದೇ ಸ್ಕಾಲರ್‌ಶಿಪ್‌ದೊರೆತಿಲ್ಲ. ತಾನು ಯಾವುದಾದರೂ ಪಾರ್ಟ್‌ ಟೈಮ್ ಕೆಲಸ ಮಾಡಿ ಓದಿನ ಖರ್ಚು ಹೊಂದಿಸುವುದಾಗಿ, ಯೋಚಿಸಿದ್ದೆ. ಆದರೆ ಈವರೆಗೆ ಯಾವುದೇ ಜಾಬ್‌ ದೊರೆತಿಲ್ಲವೆಂದು ಅವನು ತಿಳಿಸಿದ.

ರಾಜನ್‌ ನ ಕಥೆ ಕೇಳಿದ ಕ್ಯಾಥರಿನ್‌, “ನೀನು ಎಷ್ಟು ಸಮಯ ಜಾಬ್‌ ಗಾಗಿ ಕೊಡುತ್ತಿಯೋ, ಅದಕ್ಕೂ ಕಡಿಮೆ ಸಮಯವನ್ನು ನೀನು ನನಗಾಗಿ ಕೊಡುವುದಾದರೆ, ನಾನು ನಿನ್ನ ಎಲ್ಲ ಖರ್ಚನ್ನೂ ಭರಿಸುತ್ತೇನೆ,” ಎಂದು ಹೇಳಿದಳು.

“ಅದು ಹೇಗೆ?”

“ನೀನು ನೋಡ್ತಾ ಹೋಗು….”

ಹೋಗುವ ಸಮಯದಲ್ಲಿ ಕ್ಯಾಥರಿನ್‌ ಅವನಿಗೆ ಲೇಟೆಸ್ಟ್ ಮಾಡೆಲ್ ‌ನ ಐ ಫೋನ್‌ ಕೊಡುತ್ತಾ, “ನಿನ್ನ ಫೋನ್‌ ರಿಪೇರಿ ಮಾಡುವುದು ವ್ಯರ್ಥ. ಅದಕ್ಕೂ ಕಡಿಮೆ ಖರ್ಚಿನಲ್ಲಿಯೇ ಹೊಸ ಫೋನ್‌ ಬರುತ್ತದೆ, ಇಲ್ಲಿ ಲೇಬರ್‌ ಖರ್ಚೂ ದುಬಾರಿಯಾಗಿದೆ,” ಎಂದಳು.

ರಾಜನ್‌ ಗೆ ಅವಳ ಕೈಯಿಂದ ಫೋನ್‌ ತೆಗೆದುಕೊಳ್ಳಲು ಸಂಕೋಚವಾಗುತ್ತಿತ್ತು. “ಇದನ್ನು ಇಟ್ಟುಕೊ. ನನ್ನ ಕಡೆಯಿಂದ ಗಿಫ್ಟ್ ಎಂದು ತಿಳಿದುಕೊ. ಅಂದಹಾಗೆ ನೀನು ನನಗಾಗಿ ಯಾವಾಗ ಸಮಯ ಕೊಡಲು ಆಗುತ್ತದೆ?” ಎಂದು ಕೇಳಿದಳು ಕ್ಯಾಥರಿನ್‌.

“ವೀಕೆಂಡ್‌ ನಲ್ಲಿಯೇ ಸಾಧ್ಯ.”

“ನೋ ಪ್ರಾಬ್ಲಂ. ನಿನ್ನ ಫೋನ್‌ ಗಾಗಿ ವೇಟ್‌ ಮಾಡ್ತಾ ಇರ್ತೀನಿ.”

ಒಂದು ಶನಿವಾರ ಕ್ಯಾಥರಿನ್‌ ರಾಜನ್‌ ಗೆ ಫೋನ್‌ ಮಾಡಿ ಒಂದು ಸ್ಟೋರ್‌ ಬಳಿ ಬರಲು ತಿಳಿಸಿದಳು. ಅಲ್ಲಿ ಕ್ಯಾಥರಿನ್‌ ಕಾರಿನಲ್ಲಿ ಕುಳಿತು ಅವನಿಗಾಗಿ ದಾರಿ ಕಾಯುತ್ತಿದ್ದಳು. ಅವಳು ರಾಜನ್‌ ನನ್ನು ಕಾರಿನಲ್ಲಿ ಕುಳಿತುಕೊಳ್ಳಲು ಹೇಳಿ ಒಂದು ಪ್ರೈವೇಟ್‌ ರೆಸಾರ್ಟ್‌ ಗೆ ಕರೆದುಕೊಂಡು ಹೋದಳು. ಅಲ್ಲಿಗೆ ಹೋದ ಬಳಿಕ ಅವಳು, “ನೀನು ನನಗಾಗಿ ಎಷ್ಟು ಸಮಯ ಕೊಡಲು ಆಗುತ್ತೆ?” ಎಂದು ಕೇಳಿದಳು.

“ನನಗೆ ಅರ್ಥ ಆಗಲಿಲ್ಲ….”

“ಇದರಲ್ಲಿ ತಿಳಿಯದೇ ಇರುವಂತಹ ವಿಷಯ ಏನಿಲ್ಲ. ನೀನು ಎರಡು ದಿನ ಫ್ರೀ ಆಗಿರುವೆ. ನೀನು ಇಷ್ಟಪಟ್ಟರೆ ಸೋಮವಾರ ಬೆಳಗ್ಗೆ ತನಕ ನಾವಿಬ್ಬರೂ ಇಲ್ಲಿ ಉಳಿದುಕೊಳ್ಳಬಹುದು. ಒಂದು ವೇಳೆ ಬೇಗ ಹೋಗಬೇಕೆಂದಿದ್ದರೆ ಹೋಗೋಣ. ನನ್ನೊಂದಿಗೆ ಯಾವುದೇ ಔಪಚಾರಿಕತೆ ಬೇಡ. ನನ್ನೊಂದಿಗೆ ಮುಕ್ತವಾಗಿ ಮಾತಾಡಬಹುದು. ನಿನಗೆ ಹೇಗೆ ಬೇಕೋ ಹಾಗೆ ಮಾಡಬಹುದು,” ಎಂದಳು ಹೇಳಿದಾಗ, ರಾಜನ್‌ ಅವಳತ್ತ ಆಶ್ಚರ್ಯದಿಂದ ನೋಡತೊಡಗಿದ.

ರಾಜನ್‌ ಆಶ್ಚರ್ಯಚಕಿತನಾಗಿ ಇರುವುದನ್ನು ನೋಡಿ, “ಈಗ ಹೇಳು, ನೀನು ಎಲ್ಲಿಯತನಕ ಇಲ್ಲಿರಲು ಇಷ್ಟಪಡ್ತೀಯಾ?”

“ನಾನು ನಾಳೆ ಸಂಜೆಗೆ ವಾಪಸ್‌ ಆಗಲು ಇಷ್ಟಪಡ್ತೀನಿ. 2-3 ಗಂಟೆಗಳಲ್ಲಿ ಒಂದು ಪ್ರಾಜೆಕ್ಟ್ ನ ಉಳಿದ ಕೆಲಸವನ್ನು ಮುಗಿಸಬೇಕಿದೆ. ಆದರೆ ಇಲ್ಲಿ ಒಂದೇ ರೂಮಿನಲ್ಲಿ ಇರಬೇಕಾ?”

“ಇಷ್ಟೊಂದು ದೊಡ್ಡ ಸೂಟ್‌ ಇಬ್ಬರಿಗೆ ಸಾಕಾಗುವುದಿಲ್ಲವೇನು? ಎಂಜಾಯ್‌ ಇಟ್ ‌ದೆನ್‌,” ಎಂದಳು.

ರಾಜನ್‌ ಹಾಗೂ ಕ್ಯಾಥರಿನ್‌ ಅಲ್ಲಿ ಎರಡು ದಿನಗಳ ಕಾಲ ಇದ್ದರು. ರಾಜನ್‌ ಪುಕ್ಕಟೆಯಾಗಿಯೇ ಲಂಚ್‌, ಡಿನ್ನರ್‌, ಡ್ರಿಂಕ್ಸ್, ವಾಟರ್‌ ಪಾರ್ಕ್‌ ಈ ಎಲ್ಲದರ ಆನಂದ ಪಡೆದ. ಭಾನುವಾರ ಸಂಜೆ ರಾಜನ್‌ ನನ್ನು ಡ್ರಾಪ್‌ ಮಾಡುತ್ತಾ ಕ್ಯಾಥರಿನ್‌ ಅವನಿಗೆ 1000 ಡಾಲರ್‌ ಕ್ಯಾಶ್‌ ಕೊಟ್ಟಳು.

“ಇದೇ ನಿನ್ನ ಜಾಬ್‌ ಆಗಿರುತ್ತದೆ ಮತ್ತು ಇದೇ ರೀತಿ ನಿನಗೆ ನಿಯಮಿತವಾಗಿ ಪೇಮೆಂಟ್‌ ದೊರೆಯುತ್ತಿರುತ್ತದೆ. ಕಡಿಮೆ ಎನಿಸಿದರೆ ಹೇಳು,” ಎಂದಳು.

ರಾಜನ್‌ ಹಾಗೂ ಕ್ಯಾಥರಿನ್‌ ಅದೇ ರೀತಿ ಭೇಟಿ ಆಗ್ತಾ ಇದ್ದರು. ಎಂದಾದರೊಮ್ಮೆ ಅವರು ಸಮೀಪದಲ್ಲಿಯೇ ಶಾರ್ಟ್‌ ವೆಕೇಶನ್ ಗಾಗಿ ಒಂದು ದಿನದ ಮಟ್ಟಿಗೆ ಹೊರಡುತ್ತಿದ್ದರು. ಈ ಅವಧಿಯಲ್ಲಿ ಇಬ್ಬರೂ ಕುಡಿಯುತ್ತಿದ್ದರು. ಕ್ಯಾಥರಿನ್‌ ಸ್ವಲ್ಪ ಹೆಚ್ಚು ಕುಡಿಯುತ್ತಿದ್ದಳು. ಅವಳ ಅನುಕಂಪದಿಂದಾಗಿ ಇಬ್ಬರ ಧೈರ್ಯದ ಮೇರೆ ಮೀರುತ್ತಿತ್ತು ಹಾಗೂ ಮುಂದೆಯೂ ಅದು ಮೀರಿದಾಗ ಯಾವುದೇ ಸಂಕೋಚ ಅಡ್ಡಿ ಆತಂಕ ಇರುತ್ತಿರಲಿಲ್ಲ.

ರಾಜನ್‌ ಗೆ ಕ್ಯಾಶ್‌ ನ ಹೊರತಾಗಿ ಒಳ್ಳೊಳ್ಳೆ ಗಿಫ್ಟ್, ಲ್ಯಾಪ್‌ ಟಾಪ್‌, ಕ್ಯಾಮೆರಾ, ಆ್ಯಪೆಲ್ ವಾಚ್‌ ಮುಂತಾದವು ದೊರಕುತ್ತಿದ್ದವು.  ರಾಜನ್‌ ನ ಸಂಪೂರ್ಣ ಖರ್ಚನ್ನು ಅವಳೇ ವಹಿಸಿಕೊಳ್ಳುತ್ತಿದ್ದಳು. ಇಬ್ಬರ ಅಗತ್ಯಗಳು ಪೂರೈಸುತ್ತಿದ್ದವು. ನೋಡು ನೋಡುತ್ತಿದ್ದಂತೆ ರಾಜನ್‌ ನ ಓದು ಮುಗಿಯಿತು ಹಾಗೂ ಅವನಿಗೆ ಟೆಕ್ಸಾಸ್‌ ನಲ್ಲಿ ಜಾಬ್‌ ದೊರಕಿತು.

ಹೋಗುವಾಗ ಕ್ಯಾಥರಿನ್‌, “ನೀನು ಇಷ್ಟಪಟ್ಟರೆ ಆಗಾಗ ಇಲ್ಲಿಗೆ ಬರ್ತಾ ಇರಬಹುದು. ನಿನಗೆ ಎರಡೂ ಬದಿಯ ಏರ್‌ ಟಿಕೆಟ್ ವ್ಯವಸ್ಥೆ ಮಾಡ್ತೀನಿ,” ಎಂದಳು.

ಹ್ಯೂಸ್ಟನ್‌ ನ ರೈಸ್‌ ಯೂನಿವರ್ಸಿಟಿಯ ಕೆಫ್ಟೇರಿಯಾದ ಒಂದು ಮೂಲೆ ಟೇಬಲ್ ನಲ್ಲಿ ಲಲಿತಾ ಕಾಫಿ ಕುಡಿಯುತ್ತಾ ಕುಳಿತಿದ್ದಳು. ಅವಳು ಯಾವ ಟೇಬಲ್ ನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದಳೋ ಅದು ಚಿಕ್ಕ ಟೇಬಲ್ ಆಗಿತ್ತು. ಅಲ್ಲಿ ಕೇವಲ 2 ಕುರ್ಚಿಗಳು ಮಾತ್ರ ಇದ್ದವು. ಆ ಟೇಬಲ್ ಬಳಿ ಕೇವಲ ಲಲಿತಾಳಷ್ಟೇ ಕುಳಿತಿದ್ದಳು. ಉಳಿದ ಟೇಬಲ್ ಗಳಲ್ಲಿ ವಿದ್ಯಾರ್ಥಿಗಳ ಗುಂಪೇ ಕುಳಿತಿರುತ್ತಿತ್ತು. ಅದೇ ಟೇಬಲ್ ಹತ್ತಿರ ಬಂದ ಒಬ್ಬ ವ್ಯಕ್ತಿ ಕೈಯಲ್ಲಿ ಮಗ್‌ ಹಿಡಿದು, ಅವಳನ್ನು, “ನೀವು ಯಾರಿಗಾದರೂ ಕಾಯುತ್ತಿದ್ದೀರಾ…..?” ಎಂದ.

yah-rista-nahi-ho-sakta-story-2

ಲಲಿತಾ ಕೆಲವು ಕ್ಷಣ ಅವನನ್ನೇ ನೋಡುತ್ತಾ ಉಳಿದುಬಿಟ್ಟಳು. ನಂತರ ಮುಗುಳ್ನಗುತ್ತಾ, “ಹೌದು, ನಾನು ಯಾರೊ ಒಬ್ಬರಿಗಾಗಿ ಕಾಯುತ್ತಿದ್ದೆ,” ಎಂದಳು.

“ಸಾರಿ,” ಎನ್ನುತ್ತಾ ಆ ವ್ಯಕ್ತಿ ಹಿಂತಿರುಗಿದ. “ಹಲೋ, ನೀವು ನನ್ನ ಪೂರ್ತಿ ಮಾತು ಕೇಳಿಸಿಕೊಳ್ಳಲಿಲ್ಲ,” ಎಂದಳು ಲಲಿತಾ.

“ಏನು ಹೇಳಿ….?”

“ಅಂದಹಾಗೆ ನಾನು ನಿಮಗಾಗಿಯೇ ದಾರಿ ಕಾಯ್ತಿದ್ದೆ,” ಎಂದು ಹೇಳುತ್ತಾ ಲಲಿತಾ ಮುಗುಳ್ನಕ್ಕಳು. ನಂತರ, “ನೀವಿಲ್ಲಿ ನಿಶ್ಚಿಂತರಾಗಿ ಕುಳಿತುಕೊಳ್ಳಬಹುದು,” ಎಂದಳು.

ಥ್ಯಾಂಕ್ಸ್ ಹೇಳಿ ಅವನು ಕುಳಿತುಕೊಂಡ. “ಈ ಕೆಫ್ಟೇರಿಯಾದಲ್ಲಿ ನಾನು ನಿಮ್ಮನ್ನು ಮೊದಲ ಬಾರಿ ನೋಡ್ತಿರುವೆ,” ಎಂದಳು.

“ಹೌದು. ನಾನು ರಾಜನ್‌. ಇವತ್ತಷ್ಟೇ ಕಂಪ್ಯೂಟರ್‌ ಸೈನ್ಸ್ ನಲ್ಲಿ ಟೀಚಿಂಗ್‌ ಅಸಿಸ್ಟೆಂಟ್‌ಹುದ್ದೆಗೆ ಜಾಯಿನ್‌ ಆಗ್ತಿರುವೆ.”

“ಗ್ರೇಟ್‌, ಹಾಗಿದ್ರೆ ನಾನು ನಿಮ್ಮ ಸ್ಟೂಡೆಂಟ್‌ ಲಲಿತಾ. ಬಿಟೆಕ್‌ ಫೈನಲ್ ನಲ್ಲಿರುವೆ. ನಿಮ್ಮನ್ನು ಭೇಟಿಯಾಗಿ ಖುಷಿಯಾಯ್ತು. ನೀವು ಏಷಿಯನ್‌ ಆಗಿರಬಹುದು ಅಲ್ವೇ?”

“ಹೌದು. ನಾನು ಇಂಡಿಯನ್‌. ನನ್ನ ಅಂದಾಜಿನ ಪ್ರಕಾರ, ನೀವು ಬಣ್ಣದಿಂದ ಅಮೆರಿಕನ್‌ ಹಾಗೂ ರೂಪದಲ್ಲಿ ಇಂಡಿಯನ್‌ ಥರ ಕಾಣ್ತೀರಿ.”

“ನೀವು ಸರಿಯಾಗಿ ಹೇಳಿದಿರಿ. ನನ್ನ ಅಪ್ಪ ಇಂಡಿಯನ್‌ ಹಾಗೂ ಮಾಮ್ ಅಮೆರಿಕನ್‌. ಈಗ ಅವರು ಬೇರೆ ಬೇರೆ ಆಗಿದ್ದಾರೆ. ನಾನು ಅಪ್ಪನ ಜೊತೆ ಇರ್ತೀನಿ.”

ಸ್ವಲ್ಪ ಹೊತ್ತಿನ ಮೌನದ ಬಳಿಕ ರಾಜನ್‌ ಹೇಳಿದ, “ನೀವು ಏಕಾಂತದಲ್ಲಿ ಈ ಮೂಲೆಯಲ್ಲಿ ಕುಳಿತು ಯಾರನ್ನೋ ಕಾಯುತ್ತಿದ್ದಿರಿ. ಎಂದು ನಾನು ನಿಮ್ಮನ್ನು ಕೇಳಿದೆ.”

“ನಾನಿಲ್ಲಿ ಸಾಮಾನ್ಯವಾಗಿ ಏಕಾಂಗಿಯಾಗಿ ಕುಳಿತುಕೊಳ್ಳಲು ಇಷ್ಟಪಡ್ತೀನಿ. ಬಹುಶಃ ನಾಳೆಯಿಂದ ಈ ಸೀಟ್‌ಖಾಲಿಯಾಗಿರಲಾರದು ಎಂದು ಭಾವಿಸಿರುವೆ.”

“ಏಕೆ?”

“ಏಕೆಂದರೆ, ನೀವು ಇಲ್ಲಿ ಕುಳಿತುಕೊಳ್ತೀರಾ……”

“ನೀವು ಬಹಳ ಚೆನ್ನಾಗಿ ತಮಾಷೆ ಮಾಡ್ತೀರಾ…..”

“ಅಂದಹಾಗೆ ತಮಾಷೆ ಮಾಡುವ ಅವಕಾಶಗಳು ಕಡಿಮೆಯೇ ಸಿಗುತ್ತವೆ. ಆದರೆ ನಾನು ನಿಮ್ಮ ಸ್ಟೂಡೆಂಟ್‌. ಹೀಗಾಗಿ ನನ್ನನ್ನು ನೀನು ಎಂದು ಕರೆದರೆ ಹೆಚ್ಚು ಸೂಕ್ತವಾಗಿರುತ್ತದೆ.

”ಲಲಿತಾ ಹಾಗೂ ರಾಜನ್‌ ನಡುವೆ ನಿಕಟತೆ ಹೆಚ್ಚುತ್ತಾ ಹೋಯಿತು. ಇಬ್ಬರೂ ಪರಸ್ಪರರನ್ನು ಇಷ್ಟಪಡಲಾರಂಭಿಸಿದರು. ಲಲಿತಾಳ ತಂದೆ ಸ್ಯಾಮ್ ಗೂ ಕೂಡ ರಾಜನ್‌ ಇಷ್ಟವಾಗಿದ್ದ. 6 ತಿಂಗಳಲ್ಲಿ ಲಲಿತಾಳ ಬಿಟೆಕ್‌ ಪೂರ್ತಿಯಾಯಿತು. ಆಗ ರಾಜನ್ ಅವಳನ್ನು, “ಈಗ ನಾವು ಮದುವೆ ಮಾಡಿಕೊಳ್ಳಬಹುದಾ?” ಎಂದು ಕೇಳಿದ.

“ನಾನು ಹಾಗೂ ಡ್ಯಾಡ್‌ ಕೂಡ ಇದನ್ನೇ ಯೋಚಿಸುತ್ತಿದ್ದೇವೆ.”

“ಹಾಗಿದ್ದರೆ ಶುಭ ಕೆಲಸದಲ್ಲಿ ವಿಳಂಬ ಮಾಡಬಾರದು. ಇಬ್ಬರೂ ಸೇರಿ ಇದನ್ನು ಬಹುಬೇಗ ನಿಭಾಯಿಸೋಣ.”

ಮದುವೆಯ ಸಿದ್ಧತೆಗಳು ನಡೆದಿದ್ದವು. ಮದುವೆಯ ಕಾರ್ಡ್‌ ಕೂಡ ಪ್ರಿಂಟ್‌ ಆಗಿತ್ತು. ಸ್ಯಾಮ್, ಲಲಿತಾ ಹಾಗೂ ರಾಜನ್‌ ಒಂದೆಡೆ ಸೇರಿ ಮದುವೆಯ ಯೋಜನೆ ಮಾಡುತ್ತಿದ್ದರು.

ಸ್ಯಾಮ್ ಮತ್ತು ರಾಜನ್‌ ಗೆಸ್ಟ್ ಗಳ ಲಿಸ್ಟ್ ಸಿದ್ಧಪಡಿಸುತ್ತಿದ್ದರು. ಅವರಿಗೆಲ್ಲ ಕಾರ್ಡ್‌ ತಲುಪಿಸಬೇಕಿತ್ತು. ರಾಜನ್‌ ಕೂಡ ತನ್ನದೇ ಕೆಲವು ಗೆಸ್ಟ್ ಗಳ ಹೆಸರು ಬರೆಯುತ್ತಲಿದ್ದವು.

ರಾಜನ್‌ ಲಲಿತಾಳ ಫೋಟೋ ಆಲ್ಬಂ ನೋಡುತ್ತಿದ್ದ. ಅದರಲ್ಲಿ ಅವನಿಗೆ ಆಕಸ್ಮಿಕವಾಗಿ ಕ್ಯಾಥರಿನ್‌ ಳ ಫೋಟೋ ಮೇಲೆ ಗಮನಹೋಯಿತು. ಅವನು ಲಲಿತಾಳನ್ನು ಕೇಳಿದ, “ಈ ಲೇಡಿ ಯಾರು?”

“ಇವರು ನನ್ನ ಅಮ್ಮ. ಅಂದಹಾಗೆ ಈಗ ಇವರ ಜೊತೆ ಹೆಚ್ಚು ಕಡಿಮೆ ಸಂಪರ್ಕ ಕಡಿತಗೊಂಡಿದೆ. ಆದಾಗ್ಯೂ ಔಪಚಾರಿಕತೆಗೆಂಬಂತೆ ಒಂದು ಕಾರ್ಡ್‌ ನ್ನು ಅವರಿಗೂ ಕಳಿಸುತ್ತಿದ್ದೇವೆ. ಅವರು ಬರುವುದಾದರೆ ಬರಲಿ,” ಎಂದು ಹೇಳುತ್ತಾ  ಲಲಿತಾ ಕ್ಯಾಥರಿನ್‌ ಹೆಸರಿಗೆ ಬರೆದಿದ್ದ ಕಾರ್ಡ್‌ ನ್ನು ರಾಜನ್‌ ಗೆ ತೋರಿಸಲೆಂದು ಮುಂದಾದಳು.

ಕ್ಯಾಥರಿನ್‌ ಬಗ್ಗೆ ತಿಳಿದುಕೊಂಡ ಬಳಿಕ ರಾಜನ್‌ ನ ಮುಖದ ಬಣ್ಣವೇ ಬದಲಾಗಿಹೋಯಿತು. ಆದರೂ ಅದನ್ನು ಅವನು ಬಚ್ಚಿಡಲು ಪ್ರಯತ್ನಿಸತೊಡಗಿದ. ಸ್ವಲ್ಪ ಹೊತ್ತಿನ ಬಳಿಕ ಅವನು ಹೊರಟುನಿಂತಾಗ ಲಲಿತಾ ಅವನನ್ನು ಕಳಿಸಲು ಹೊರಗೆ ಕಾರಿನ ತನಕ ಬಂದಳು. ಆಗ ರಾಜನ್‌ ಧೈರ್ಯ ತಂದುಕೊಂಡು ಹೇಳಿದ, “ನೀವು ಈಗ ಮದುವೆಯ ಕಾರ್ಡ್‌ ಗಳನ್ನು ಪೋಸ್ಟ್ ಮಾಡಬೇಡಿ.”

“ಏಕೆ? ಮದುವೆಯ ಸಿದ್ಧತೆಗಳು ನಡೆಯುತ್ತಿವೆ. ಮದುವೆಯ ಕಾರ್ಡ್‌ ಗಳು ಪ್ರಿಂಟ್‌ ಆಗಿವೆ.”

“ಹೀಗಾಗಿಯೇ ಹೇಳ್ತಿರುವೆ. ಈಗ ಕೇವಲ ಪ್ರಿಂಟ್‌ ಆಗಿವೆ ಅಷ್ಟೇ. ಅವನ್ನು ಅಲ್ಲಿಯೇ ತಡೆಹಿಡಿಯಿರಿ. ಯಾರಿಗೂ ಕಳಿಸಬೇಡಿ. ಇದರಲ್ಲಿಯೇ ನಿಮ್ಮ ಹಿತ ಅಡಗಿದೆ.”

“ಇದೆಲ್ಲ ಆಕಸ್ಮಿಕವಾಗಿ ಏನಾಗುತ್ತಿದೆ……? ಏನಾಗಿದೆ ನಿಮಗೆ? ನೀವು ಮದುವೆಯನ್ನು ಪೋಸ್ಟ್ ಪೋನ್‌ ಮಾಡಲು ಏಕೆ ಹೇಳುತ್ತಿರುವಿರಿ?”

“ನಾನು ಮದುವೆಯನ್ನು ಪೋಸ್ಟ್ ಪೋನ್‌ ಮಾಡಲು ಹೇಳ್ತಿಲ್ಲ. ಈ ಮದುವೆಯನ್ನೇ ರದ್ದು ಮಾಡಲು ಅಪೇಕ್ಷಿಸಿರುವೆ. ಈ ಸಂಬಂಧ ಯಾವುದೇ ಕಾರಣಕ್ಕೂ ಆಗದು. ಐ ಆ್ಯಮ್ ಡೀಪ್ಲಿ ಸಾರಿ…. ಬಟ್‌ ಹೆಲ್ಪ್ ಲೆ‌ಸ್‌.”

“ಆದರೆ ಈ ಮದುವೆ ಏಕೆ ಆಗುವುದಿಲ್ಲ?”

“ನಾನು ಇದಕ್ಕೂ ಹೆಚ್ಚು ಸ್ಪಷ್ಟೀಕರಣ ನೀಡಲು ಇಚ್ಛಿಸುವುದಿಲ್ಲ. ನಾನು ನೀನು ಇನ್ಮುಂದೆ ಸ್ನೇಹಿತರಾಗಿರೋಣ. ಓ.ಕೆ. ಬೈ…..’

`ರಾಜನ್‌ ಕಾರನ್ನು ಸ್ಟಾರ್ಟ್‌ ಮಾಡಿ ವೇಗವಾಗಿ ಹೊರಟುಹೋದ. ಅವನು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದ, `ನಾನು ಕ್ಯಾಥರಿನ್‌ ಫೋಟೋ ನೋಡಿದ್ದು ಒಳ್ಳೆಯದಾಯ್ತು. ಆಕಸ್ಮಿಕವಾಗಿ ಕ್ಯಾಥರಿನ್‌ ಳನ್ನು ಮದುವೆ ಮನೆಯಲ್ಲೇನಾದರೂ ಭೇಟಿಯಾಗಿದ್ದರೆ ಎಂತಹ ದುರಂತವಾಗುತ್ತಿತ್ತು. ನಾನು ಈ ನರಕವನ್ನು ಈ ಕ್ಷಣವೇ ಬಿಟ್ಟು ಹೋಗುವುದರಲ್ಲಿಯೇ ನನ್ನ ಹಿತ ಅಡಗಿದೆ.’

ಲಲಿತಾ ಹಾಗೂ ಸ್ಯಾಮ್ ಕೂಡ ಯೋಚಿಸುತ್ತಿದ್ದರು. ರಾಜನ್‌ ಈ ಮದುವೆಯನ್ನು ಆಕಸ್ಮಿಕವಾಗಿ ಬೇಡ ಎನ್ನಲು ಏನು ಕಾರಣವಿರಬಹುದು? ಅದೆಷ್ಟೋ ದಿನಗಳ ಬಳಿಕ ಅವರಿಗೆ ಇದುವರೆಗೂ ಅದರ ಕಾರಣ ಗೊತ್ತಾಗಲಿಲ್ಲ. ಅದೊಂದು ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಏಕೆಂದರೆ ರಾಜನ್‌ ಆ ನಗರವನ್ನೇ ಬಿಟ್ಟು ದೂರ ಹೊರಟುಹೋಗಿದ್ದಾನೆ.. ಬಹುಶಃ ಅಮೆರಿಕಾದಿಂದ ದೂರ ಬೇರೆ ಯಾವುದೋ ದೇಶಕ್ಕೆ….!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ