ಬೆಳಗ್ಗೆ ಏಳುತ್ತಿದ್ದಂತೆ ಅನೂಪ್ ತಾನಿಂದು ಆಫೀಸಿಗೆ ಹೋಗುವುದಿಲ್ಲವೆಂದು ತೀರ್ಮಾನಿಸಿಬಿಟ್ಟ. ಇಡೀ ದಿನ ವಿಶ್ರಾಂತಿ ಪಡೆಯಬೇಕು. ಇಲ್ಲವೇ ಯಾವುದಾದರೂ ಒಳ್ಳೆಯ ಪುಸ್ತಕ ಓದಬೇಕು. ಅದರಿಂದ ಅಷ್ಟಿಷ್ಟು ಒತ್ತಡ ಕಡಿಮೆಯಾಗುತ್ತದೆ. ಆ ಬಗ್ಗೆ ಯೋಚಿಸಿ ಅವನು ಎಲ್ಲಕ್ಕೂ ಮೊದಲು ತನ್ನ ಸೀನಿಯರ್ ಹಾಗೂ ಸಹೋದ್ಯೋಗಿಗಳಿಗೆ ಮೆಸೇಜ್ ಕಳಿಸಿದ. ಬಳಿಕ ಮನಸ್ಸಿಲ್ಲದ ಮನಸ್ಸಿನಿಂದ ಚಹಾ ತಯಾರಿಸತೊಡಗಿದ. ಅನೂಪ್ ಗೆ ಅಡುಗೆಮನೆಗೆ ಹೋಗುವುದು ಇಷ್ಟವಿರಲಿಲ್ಲ. ಕೋಮಲಾ ಅವನ ಜೊತೆಗೆ ಇರುವ ತನಕ ಅಡುಗೆಮನೆಗೆ ಹೋಗಿರಲಿಲ್ಲ. ಆದರೆ ಅವಳು ಹೊರಟು ಹೋದ ಬಳಿಕ ಅವನಿಗೆ ಅಡುಗೆಮನೆಗೆ ಹೋಗದೇ ವಿಧಿಯೇ ಇರಲಿಲ್ಲ.
ಕಳೆದ 5 ತಿಂಗಳಿನಿಂದ ಅವನು ಮಧ್ಯಾಹ್ನದ ಊಟವನ್ನು ಕ್ಯಾಂಟೀನ್ ನಲ್ಲಿ ಹಾಗೂ ರಾತ್ರಿ ಊಟವನ್ನು ಮನೆ ಸಮೀಪದ ಹೋಟೆಲ್ ನಲ್ಲಿ ಮಾಡುತ್ತಿದ್ದ, ಆದರೆ ಚಹಾ ಹಾಗೂ ಸಣ್ಣಪುಟ್ಟ ತಿಂಡಿಗಳಿಗಾಗಿ ಅಡುಗೆಮನೆಗೆ ಹೋಗಲೇಬೇಕಾದ ಅನಿವಾರ್ಯತೆ ಇತ್ತು.
ಅನೂಪ್ ಚಿಕ್ಕವನಿದ್ದಾಗೀ ಅವನ ತಾಯಿ ತಂದೆ ರಸ್ತೆ ಅಪಘಾತದಲ್ಲಿ ಅಸುನೀಗಿದ್ದರು. ಆಗಿನಿಂದ ಅವನ ಚಿಕ್ಕಮ್ಮ ಅವನನ್ನು ಪೋಷಿಸಿ ದೊಡ್ಡವನನ್ನಾಗಿ ಮಾಡಿದ್ದರು. ಅವರು ಅವನನ್ನು ಅದೆಷ್ಟು ಪ್ರೀತಿಸುತ್ತಿದ್ದರೆಂದರೆ, ಅವನಿಗೆ ಯಾವುದೇ ಕೆಲಸ ಮಾಡಲು ಕೂಡ ಹೇಳುತ್ತಿರಲಿಲ್ಲ. ಕಾಲೇಜು ವಿದ್ಯಾಭ್ಯಾಸವನ್ನು ಅವನು ಹಾಸ್ಟೆಲ್ ನಲ್ಲಿ ಇದ್ದುಕೊಂಡು ಪೂರೈಸಿದ. ಹೀಗಾಗಿ ಅವನಿಗೆ ಯಾವುದೇ ಮನೆಗೆಲಸ ಮಾಡುವ ಅವಕಾಶ ಸಿಗಲಿಲ್ಲ.
ಅವನೂ ಕೂಡ ಅದರ ಬಗ್ಗೆ ಆಸಕ್ತಿ ತೋರಿಸಲಿಲ್ಲ. ನೌಕರಿ ಮಾಡಲು, ಆರಂಭಿಸಿದ ಕೆಲವೇ ದಿನಗಳ ಬಳಿಕ ಕೋಮಲಾ ಅವನ ಜೀವನದಲ್ಲಿ ಬಂದಳು. ಆ ಬಳಿಕ ಅವನ ಜೀವನಕ್ಕೆ ರೆಕ್ಕೆ ಪುಕ್ಕ ಬಂದಿತೆನ್ನಬಹುದು.
ಅವನು ಇದೇ ಯೋಚನೆಯಲ್ಲಿ ಮುಳುಗಿರುವಾಗಲೇ ಅವನ ಫೋನ್ ರಿಂಗಾಯಿತು. ಫೋನ್ ಆಫೀಸಿನಿಂದ ಬಂದಿತ್ತು. ಅವನು ಫೋನ್ ಕೈಗೆತ್ತಿಕೊಂಡು ಮಾತನಾಡಲು ಆರಂಭಿಸಿದ. ಅದು ಸ್ವಲ್ಪ ದೀರ್ಘ ಸಂಭಾಷಣೆ. ಅವನು ಫೋನ್ ಸಂಭಾಷಣೆ ಮುಗಿಸಿ ವಾಪಸ್ ಬರುವ ಹೊತ್ತಿಗೆ ಚಹಾ ಅರ್ಧದಷ್ಟು ಉಕ್ಕಿ ಹೊರಚೆಲ್ಲಿತ್ತು. ಅವನಿಗೆ ಬಹಳ ಸಿಟ್ಟುಬಂತು. ಚಹಾ ಕುಡಿಯಬೇಕೆಂಬ ಮೂಡ್ ಹೊರಟೇಹೋಯಿತು. ಆಗ ಅವನಿಗೆ ನೆನಪಿಗೆ ಬಂತು, ಕೋಮಲಾ ಏನಾದರೂ ಇದ್ದಿದ್ದರೆ ಇಷ್ಟೊತ್ತಿಗೆ ತನಗೆ ಎರಡು ಸಲ ಚಹಾ ಕೊಟ್ಟಿರುತ್ತಿದ್ದಳು ಅಂತ.
ಕೋಮಲಾಳ ನೆನಪು ಬರುತ್ತಿದ್ದಂತೆ ಅವನ ಮನಸ್ಸು ಕೋಪಕ್ಕೆ ತುತ್ತಾಯಿತು. ಅವನು ಮನಸ್ಸಿಲ್ಲದ ಮನಸ್ಸಿನಿಂದ ಟಿ.ವಿ ಆನ್ ಮಾಡಿದ. ತನ್ನಿಷ್ಟದ ಚಾನೆಲ್ ಗಳ ಹುಡುಕಾಟದಲ್ಲಿ ವೇಗವಾಗಿ ಚಾನೆಲ್ ಬದಲಿಸತೊಡಗಿದ. ಅವನು ಹಿಂದೆ ಹೀಗೆಲ್ಲ ಮಾಡುತ್ತಿದ್ದಾಗ ಕೋಮಲಾ ಅವನನ್ನು ಗದರಿಸುತ್ತಿದ್ದಳು.
“ಇದೇನು ಮಾಡ್ತಾ ಇದ್ದೀರಾ, ನೀವೂ ನೋಡುವುದಿಲ್ಲ, ನೋಡುವವರಿಗೂ ನೋಡಲು ಬಿಡುವುದಿಲ್ಲ. ನಿಮಗೆ ಕೋಪ ಬಂದಿದೆ ಎನ್ನುವುದು ನನಗೆ ಗೊತ್ತು. ಆದರೆ ನೀವು ಆ ಕೋಪವನ್ನು ಟಿ.ವಿ ಮೇಲೆ ಏಕೆ ತೋರಿಸ್ತಾ ಇದೀರಾ? ಟಿ.ವಿ ಏನಾದರೂ ಕೆಟ್ಟು ಹೋದರೆ ಖರ್ಚಿನ ಹೊರೆ ನಮಗೇ ಅಲ್ವೇ? ಕೊಡಿ ಇಲ್ಲಿ ನನಗೆ ರಿಮೋಟ್,” ಎನ್ನುತ್ತಾ ಅವಳು ಅವನ ಕೈಯಿಂದ ರಿಮೋಟ್ ತನ್ನ ಕೈಗೆ ತೆಗೆದುಕೊಳ್ಳುತ್ತಿದ್ದಳು.
“ನಾನು ಕೋಪದಲ್ಲಿದ್ದೇನೆ ಎಂದು ನಿನಗೆ ಹೇಗೆ ಗೊತ್ತಾಯ್ತು?”
“ನನಗೆ ಎಲ್ಲ ಗೊತ್ತು….. ನಾನು ಅಂತರ್ಯಾಮಿ,” ಎಂದು ಹೇಳುತ್ತಾ ಅವಳು ಜೋರಾಗಿ ನಕ್ಕು ಬಿಡುತ್ತಿದ್ದಳು. ಅವಳ ನಗುವಿನಲ್ಲಿ ಅವನ ಕೋಪ ಅದೆಲ್ಲಿ ಹೋಗುತ್ತಿತ್ತೋ ಏನೊ? ಅವನು ಇಷ್ಟಪಟ್ಟೂ ಕೂಡ ಅವಳನ್ನು ಮರೆಯಲು ಆಗುತ್ತಿರಲಿಲ್ಲ. ಆಕಸ್ಮಿಕವಾಗಿ ಅವನ ನೆನಪಿನಂಗಳದಲ್ಲಿ ಕೋಮಲಾ ಜೊತೆಗಿನ ಪ್ರಥಮ ಭೇಟಿಯ ದೃಶ್ಯ ಸಿನಿಮಾದ ಹಾಗೆ ಪ್ರತ್ಯಕ್ಷವಾಗತೊಡಗಿತು.
ಅನೂಪ್ ಗೆ ಎಂಬಿಎ ಮುಗಿಯುತ್ತಿದ್ದಂತೆ ಬೆಂಗಳೂರಿನ ಒಂದು ಎಂ.ಎನ್.ಸಿಯಲ್ಲಿ ನೌಕರಿ ಸಿಕ್ಕಿತು. ಕಂಪನಿ ಅವನಿಗೆ ವಾಸ್ತವ್ಯದ ವ್ಯವಸ್ಥೆ ಕೂಡ ಮಾಡಿತ್ತು. ಹೀಗಾಗಿ ಅವನು ಟೆನ್ಶನ್ ಫ್ರೀ ಆಗಿದ್ದ. ಈ ವಿಷಯ ಕೇಳಿ ಅವನ ಚಿಕ್ಕಮ್ಮ ಕೂಡ ಖುಷಿಗೊಂಡಿದ್ದರು. ಏಕೆಂದರೆ ಬೆಂಗಳೂರಿನಲ್ಲಿ ಮನೆ ಮಾಡುವುದು ಎಷ್ಟು ಕಷ್ಟ ಎನ್ನುವುದು ಚಿಕ್ಕಮ್ಮನಿಗೆ ಗೊತ್ತಿತ್ತು. ಅನೂಪ್ ಗೆ ಫ್ಲ್ಯಾಟ್ ದೊರತಿದ್ದು ಮಾರತ್ ಹಳ್ಳಿಯಲ್ಲಿ ಹಾಗೂ ಆಫೀಸ್ ಇದ್ದುದು ಸಿಲ್ಕ್ ಬೋರ್ಡ್ ಸಮೀಪ. ಹೀಗಾಗಿ ಅಲ್ಲಿಗೆ ಹೋಗಿ ಬರಲು ಅವನಿಗೆ ಹೆಚ್ಚು ಸಮಯ ತಗುಲುತ್ತಿರಲಿಲ್ಲ.
ಅನೂಪ್ ತನ್ನ ವರ್ತನೆ ಹಾಗೂ ತನ್ನ ಕಾರ್ಯ ಕೌಶಲ್ಯದ ಕಾರಣದಿಂದ ತನ್ನ ಕಂಪನಿಯಲ್ಲಿ ಬಹುಬೇಗ ಜನಪ್ರಿಯನಾದ. ಅವನ ಬಾಸ್ ಅನೂಪ್ ನ ಪರ್ಫಾರ್ಮೆನ್ಸ್ ಬಗ್ಗೆ ಬೇರೆಯವರಿಗೆ ಉದಾಹರಣೆ ಕೊಡುತ್ತಿದ್ದರು.
ಅದೊಂದು ದಿನ ಬಾಸ್ ಅವನನ್ನು ಕರೆದು ಹೇಳಿದರು. ನಾವು ಶೀಘ್ರ ಒಂದು ಹೊಸ ಪ್ರಾಡಕ್ಟ್ ಲಾಂಚ್ ಮಾಡಲಿದ್ದೇವೆ. ಅದರ ಮಾರ್ಕೆಟಿಂಗ್ ಟೀಮ್ ಗೆ ನೀವೇ ಲೀಡ್ ಮಾಡಬೇಕು. ಅದರ ಜೊತೆ ಜೊತೆಗೆ ನೀವು ಆ್ಯಡ್ ಕಂಪನಿಗೂ ಕೋ ಆರ್ಡಿನೇಟ್ ಮಾಡಬೇಕು. ಅದು ನಮ್ಮ ಕಂಪನಿಯ ಆ್ಯಡ್ ತಯಾರಿಸುವ ಹೊಣೆ ಹೊತ್ತಿದೆ. ಇದೆಲ್ಲ ಒಂದು ಕಾಲಮಿತಿಯೊಳಗೆ ಮುಗಿಯಬೇಕಿದೆ.
ಬಾಸ್ ಹೇಳಿದ್ದನ್ನು ಕೇಳಿಸಿಕೊಂಡು ಅನೂಪ್ ಬಹಳ ಖುಷಿಗೊಂಡ. ತನ್ನ ಚಿಕ್ಕಮ್ಮನಿಗೂ ಈ ವಿಷಯ ಅರುಹಿದ. ಮರುದಿನವೇ ಅವನಿಗೆ ಎಂಜಿ ರೋಡ್ ನಲ್ಲಿದ್ದ ಆ್ಯಡ್ ಕಂಪನಿಗೆ ಹೋಗಿ ಮಾತುಕಥೆ ನಡೆಸಲು ಸೂಚಿಸಲಾಯಿತು. ಬಾಸ್ ಅನೂಪ್ ಗೆ ಕೋಮಲಾ ಶರ್ಮ ಅವರ ನಂಬರ್ ಸಹ ಕೊಟ್ಟಿದ್ದರು. ಏಕೆಂದರೆ ಆಫೀಸ್ ಕಂಡುಹಿಡಿಯಲು ಯಾವುದೇ ತೊಂದರೆಯಾಗಬಾರದು ಎನ್ನುವುದು ಅವರ ಯೋಚನೆಯಾಗಿತ್ತು.
ಅನೂಪ್ ಊಟ ಮುಗಿಸಿ ಆ್ಯಡ್ ಕಂಪನಿ ಆಫೀಸಿಗೆ ಹೋಗಿ ಆಫೀಸ್ ವಿಳಾಸ ಪತ್ತೆಹಚ್ಚಲು ಅವನಿಗೆ ಸ್ವಲ್ಪ ಹೊತ್ತು ಕಾಯಬೇಕಾಗಿ ಬಂತು. ಬಳಿಕ ಆಫೀಸ್ ಬಾಯ್ ಅವನನ್ನು ಮೀಟಿಂಗ್ ರೂಮಿಗೆ ಕರೆದುಕಂಡುಹೋದ. ಮೀಟಿಂಗ್ ನಲ್ಲಿ ಕೋಮಲಾ ಹೊರತಾಗಿ ಇನ್ನಿಬ್ಬರೂ ಇದ್ದರು. ಅವರೆಂದರೆ ವಿನುತಾ ಹಾಗೂ ನವ್ಯಾ. ಎಲ್ಲರೂ ಪರಸ್ಪರ ಪರಿಚಯ ಮಾಡಿಕೊಂಡ ಬಳಿಕ ಆ್ಯಡ್ ಕ್ಯಾಂಪೇನ್ ಬಗ್ಗೆ ಸಾಕಷ್ಟು ದೀರ್ಘ ಚರ್ಚೆ ನಡೆಯಿತು.
ನಡುನಡುವೆ ಅನೂಪ್ ತನ್ನ ಬಾಸ್ ಗೆ ಅಪ್ ಡೇಟ್ ಕೊಡುತ್ತಿದ್ದ. ಟೀ ಬ್ರೇಕ್ ನಲ್ಲಿ ಅಷ್ಟಿಷ್ಟು ಪರ್ಸನಲ್ ಮಾತುಕತೆಗಳು ನಡೆದವು. ಅನೂಪ್ ತನ್ನ ಬಗೆಗೂ ವಿವರವಾಗಿ ತಿಳಿಸಿದ ಹಾಗೂ ಈ ಪ್ರಾಜೆಕ್ಟ್ ಬಗ್ಗೆ ತಾನು ಬಹಳ ಉತ್ಸಾಹಿತನಾಗಿದ್ದೇನೆ. ಅದು ಯಶಸ್ವಿಯಾಗಬೇಕು ಎನ್ನುವುದು ತನ್ನ ಅಪೇಕ್ಷೆ ಎಂದು ಹೇಳಿದ. ಕೋಮಲಾ ಹಾಗೂ ತಂಡದವರು ಈ ಬಗ್ಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.
ಅನೂಪ್ ಮೆಲ್ಲನೆಯ ಧ್ವನಿಯಲ್ಲಿ, “ತಾನಿನ್ನೂ ಬ್ಯಾಚುಲರ್ ಆಗಿದ್ದೇನೆ. ರಾತ್ರಿ ಎಷ್ಟೇ ತಡವಾದರೂ ಕೆಲಸ ಮಾಡಲು ಸಿದ್ಧ,” ಎಂದು ಹೇಳಿದ. ಅದಕ್ಕೆ ಪ್ರತಿಯಾಗಿ ಕೋಮಲಾ ಕೂಡ ತಾನಿನ್ನೂ ಬ್ಯಾಚುಲರ್ ಹಾಗೂ ಹಲಸೂರಿನಲ್ಲಿ ವಾಸಿಸುತ್ತಿದ್ದು ಅಗತ್ಯವಿದ್ದರೆ ಎಷ್ಟೇ ತಡವಾದರೂ ಕೆಲಸ ಮುಗಿಸಿ ಹೋಗಲು ಸಿದ್ಧ ಎಂದಳು. ಆ ದಿನ ಮೀಟಿಂಗ್ ಹೆಚ್ಚು ಹೊತ್ತು ನಡೆಯಿತು. ಹೀಗಾಗಿ ಅವನ ಜೊತೆಗೇ ಆಫೀಸಿನಿಂದ ಹೊರಟಳು. ಇಬ್ಬರೂ ಸ್ವಲ್ಪ ದೂರದ ತನಕ ಜೊತೆ ಜೊತೆಗೆ ಇದ್ದರು. ತಾನು ಮೂಲತಃ ಶಿವಮೊಗ್ಗದವಳು. ಬೆಂಗಳೂರಿನಲ್ಲಿ ಅಪ್ಪನ ಬಿಸ್ ನೆಸ್ ಇದೆ ಎಂದು ತನ್ನ ಪರಿಚಯ ಮಾಡಿಕೊಂಡಳು. ಅನೂಪ್ ಕೂಡ ತನ್ನ ಪರಿಚಯ ಮಾಡಿಕೊಂಡ. ನಂತರ ಇಬ್ಬರೂ ಬೇರೆ ಬೇರೆ ಆಟೋಗಳಲ್ಲಿ ತಮ್ಮ ತಮ್ಮ ಮನೆಗಳಿಗೆ ಹೊರಟರು.
ಅನೂಪ್ ಮನೆ ತಲುಪಿ ಬಹಳ ಹೊತ್ತಿನ ತನಕ ಈ ಪ್ರಾಜೆಕ್ಟ್ ಬಗ್ಗೆ ಯೋಚಿಸುತ್ತಿದ್ದ. ಒಂದು ವೇಳೆ ತಾನು ಇದರಲ್ಲಿ ಯಶಸ್ವಿ ಆಗಿದ್ದೇ ಆದರೆ ತನಗೆ ಒಳ್ಳೆಯ ಗ್ರೋಥ್‌ಸಿಗುತ್ತದೆಂದು ಅವನು ಯೋಚಿಸಿದ. ಅವನಿಗೆ ಕೋಮಲಾ ಬಹಳ ಒಳ್ಳೆಯವಳು ಎನಿಸಿದಳು. ಕೆಲಸದಲ್ಲಿ ನಿಪುಣೆ, ಸರ್ವರಲ್ಲೂ ಬೆರೆಯುವ ಸ್ವಭಾವ, ನಮ್ರತೆ ಅವನು ಎಂತಹ ಸಂಗಾತಿ ಬಯಸುತ್ತಿದ್ದನೊ, ಅದೇ ರೀತಿಯ ಗುಣಗಳು ಅವಳಲ್ಲಿದ್ದವು. ಅವನಿಗೆ ತನ್ನ ಬಗ್ಗೆಯೇ ನಗು ಬಂತು, ತಾನು ಇದೇನು ಯೋಚಿಸುತ್ತಿದ್ದೇನೆ ಎಂದುಕೊಂಡ.
ಮರುದಿನ ಆಫೀಸ್ ತಲುಪಿ ತನ್ನ ಬಾಸ್ ಗೆ ಸಂಪೂರ್ಣ ಮಾಹಿತಿ ನೀಡಿದ. ಅವರು ಅನೂಪ್ ನ ಕೆಲಸದ ಬಗ್ಗೆ ಪ್ರಶಂಸಿಸುತ್ತಾ ಉಳಿದೆಲ್ಲ ಸಂಗತಿಗಳಿಗಿಂತ ನೀವು ಅದೇ ಪ್ರಾಜೆಕ್ಟ್ ಬಗ್ಗೆ ಗಮನ ಕೇಂದ್ರೀಕರಿಸಿ ಎಂದು ಬಾಸ್ ಅವನಿಗೆ ಸಲಹೆ ನೀಡಿದರು. ಮುಂದಿನ ತಿಂಗಳೇ ಆ ಪ್ರಾಡಕ್ಟ್ ನ್ನು ಲಾಂಚ್ ಮಾಡಬೇಕಿತ್ತು. ಹಾಗಾಗಿ ಎಂ.ಜಿ. ರೋಡ್ ನಲ್ಲೇ 10-15 ದಿನ ಕುಳಿತುಕೊಳ್ಳಬೇಕಿದ್ದರೂ ಸರಿ ಎಂದು ಬಾಸ್ ಹೇಳಿದ್ದರು.
ಅನೂಪ್ ಬಾಸ್ ಗೆ ಹೇಳಿದ್ದ, “ಸರ್, ನನ್ನ ಮೇಲೆ ನಂಬಿಕೆ ಇಡಿ. ನೀವು ನನ್ನ ಮೇಲೆ ಯಾವ ನಂಬಿಕೆ ಇಟ್ಟಿದ್ದೀರೊ, ಅದನ್ನು ನಾನು ಉಳಿಸಿಕೊಳ್ಳುತ್ತೇನೆ. ನನಗೆ ಇದೊಂದು ಚಾಲೆಂಜ್ ಆಗಿದೆ.”
“ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇದೆ. ಹಾಗೆಂದೇ ನಾನು ಈ ಕೆಲಸವನ್ನು ನಿಮಗೆ ಒಪ್ಪಿಸಿದ್ದೇನೆ. ನೀವು ನನ್ನನ್ನು ನಿರಾಶೆ ಪಡಿಸುವುದಿಲ್ಲ ಎಂದು ನನಗೆ ಗೊತ್ತಿದೆ.”
“ಇಲ್ಲ ಸರ್, ನನ್ನ ಕೆಲವು ಸೀನಿಯರ್ಸ್ ಈ ಕುರಿತಂತೆ ನಿಮ್ಮ ಬಗ್ಗೆ ಬೇಸರ ಹೊಂದಿದ್ದರೆನ್ನುವುದು ನನಗೆ ಗೊತ್ತಿದೆ. ಆದರೂ ನೀವು ನನ್ನ ಜೊತೆಗೆ ಇರುವುದು ನನಗೆ ಖುಷಿ ಕೊಟ್ಟಿದೆ.”
“ಡೋಂಟ್ ವರೀ ಫಾರ್ ಆಲ್ ಸಚ್ ಇಶ್ಯೂಸ್ ಅನೂಪ್. ನೀವು ಈ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ.”
“ಥ್ಯಾಂಕ್ಯೂ ಸರ್,” ಎಂದು ಹೃದಯಪೂರ್ವಕವಾಗಿ ಹೇಳುತ್ತಾ, ತನ್ನ ಕೆಲಸದಲ್ಲಿ ಮಗ್ನನಾದ. ಮಾರ್ಕೆಟ್ ಸ್ಟ್ರಾಟರ್ಜಿ ತಯಾರಿಸುವಲ್ಲಿ ಹಾಗೂ ಮೀಟಿಂಗ್ ನಲ್ಲಿಯೇ ಒಂದು ವಾರ ಕಳೆದುಹೋಯಿತು. ಮರು ವಾರ ಅವನು ಪೂರ್ತಿಯಾಗಿ ಆ್ಯಡ್ ಕಂಪನಿಗಾಗಿಯೇ ಮೀಸಲಿಟ್ಟಿದ್ದ, ಏಕೆಂದರೆ ಈ ಸಲ ಎಲ್ಲವನ್ನೂ ಫೈನಲ್ ಮಾಡಿ ಸೇಲ್ಸ್ ಹೆಡ್ ಹಾಗೂ ಸಿಇಓಗಾಗಿ ಪ್ರೆಸೆಂಟ್‌ಮಾಡಲು ಸಾಧ್ಯವಾಗಿರಬೇಕು. ಅವನು ಕೋಮಲಾಗೆ ಮೊದಲೇ ಫೋನ್ ಮಾಡಿ ತನ್ನ 3 ದಿನಗಳ ಪ್ರೋಗ್ರಾಮ್ ತಿಳಿಸಿದ.
ಸೋಮವಾರದಂದು ಅವನು ನೇರವಾಗಿ ಕೋಮಲಾಳ ಆಫೀಸಿಗೆ ತಲುಪಿದ ಹಾಗೂ ಇಡೀ ದಿನ ಅಲ್ಲಿಯೇ ಇದ್ದ. ಕೋಮಲಾ ತನ್ನೊಂದಿಗೆ ಮೊದಲಿಗಿಂತ ಹೆಚ್ಚು ಫ್ರೀ ಆಗಿದ್ದಾಳೆಂದು ಅವನಿಗೆ ಅನಿಸಿತು. ಕೋಮಲಾಗೂ ಆ ಆ್ಯಡ್ ಒಂದು ಚಾಲೆಂಜ್ ನಂತೆ ಇತ್ತು. ಹಾಗಾಗಿ ಅವಳು ಪರಿಪೂರ್ಣ ಸಿದ್ಧತೆಯೊಂದಿಗೆ ಆ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಳು. ಎಲ್ಲರ ಪರಿಶ್ರಮದಿಂದ ಸಿದ್ಧಗೊಂಡ ಆ ಆ್ಯಡ್ ಬಹಳ ಆಕರ್ಷಕವಾಗಿತ್ತು. ಆ್ಯಡ್ ಕಂಪನಿಯ ಡೈರೆಕ್ಟರ್ ಕೂಡ ನೋಡುತ್ತಿದ್ದಂತೆಯೇ ಅದನ್ನು ಓಕೆ ಮಾಡಿದರು.
ಆ ದಿನ ಕೂಡ ಅನೂಪ್ ಹಾಗೂ ಕೋಮಲಾ ಜೊತೆ ಜೊತೆಗೆ ಹೊರಟರು. ಅನೂಪ್ ಹೇಳಿದ, “ಕೋಮಲಾ, ನೀವು ಶ್ರಮವಹಿಸಿ ಅದನ್ನು ಮುಗಿಸಿದ್ದೀರಿ. ಅದಕ್ಕಾಗಿ ನಿಮಗೆ ನನ್ನಿಂದ ಕಾಫಿ ಟ್ರೀಟ್ ಸಿಗುತ್ತೆ.”
“ಅಂದಹಾಗೆ ನೀವು ಕಾಫಿ ಟ್ರೀಟ್ ಮೂಲಕ ಮುಗಿಸೋಕೆ ಹೊರಟಿದ್ದೀರಾ ಅನಿಸುತ್ತೇ…..”
“ಹಾಗೇನಿಲ್ಲ ಕೋಮಲಾ, ನಿಮ್ಮ ಇಡೀ ಟೀಮ್ ಗೆ ನಾನು ಲಂಚ್ ಪಾರ್ಟಿ ಕೊಡುತ್ತೇನೆ. ಪ್ರಾಜೆಕ್ಟ್ ಲಾಂಚ್ ಆಗಲಿ ಅನ್ನೋದನ್ನೇ ಕಾಯ್ತಿದೀನಿ.”
“ನಾನಿಂದು ನನ್ನಿಷ್ಟದ ಕಾಫಿ ಆರ್ಡರ್ ಮಾಡ್ತೀನಿ. ನಿಮಗೇನಾದರೂ ಸಮಸ್ಯೆ ಇದೆಯಾ?”
“ಖಂಡಿತಾ ಇಲ್ಲ.”
ಕೋಮಾ ವೇಟರ್ ನನ್ನು ಕರೆದು 2 ಕೆಫೆ ಮೋಚ್ ಹಾಗೂ ಸ್ಯಾಂಟ್ ವಿಚ್ ಆರ್ಡರ್ ಮಾಡಿದಳು. ಬಳಿಕ ಅನೂಪ್ ಗೆ ಹೇಳಿದಳು, “ಇಂದು ಅಷ್ಟಿಷ್ಟು ಹಸಿವು ಇದೆ. ನಿಮಗೂ ಅನಿಸ್ತಿರಬೇಕು ಅಲ್ವೇ?”
“ಹಸಿವಂತೂ ಇಲ್ಲ. ಆದರೆ ಅವಶ್ಯವಾಗಿ ಶೇರ್ ಮಾಡ್ತೀನಿ.”
ಇಬ್ಬರೂ ಸುಮಾರು ಅರ್ಧ ಗಂಟೆ ಕಾಲ ಜೊತೆ ಜೊತೆಗೆ ಇದ್ದರು. ಈ ಅವಧಿಯಲ್ಲಿ ಪರಸ್ಪರರು ಸಾಕಷ್ಟು ವಿಷಯ ಶೇರ್ ಮಾಡಿಕೊಂಡರು. ಆಸಕ್ತಿ, ಫ್ಯೂಚರ್ ಪ್ಲಾನ್, ಕುಟುಂಬದ ಬಗ್ಗೆ ಹೀಗೆ ಸಾಕಷ್ಟು ವಿಷಯ ಪ್ರಸ್ತಾಪವಾದವು. ಅದಕ್ಕೆ ಪ್ರತಿಯಾಗಿ ಅನೂಪ್ ಕೂಡ, “ನನಗೆ ಬೆಂಗಳೂರು ಇಷ್ಟ. ಇಲ್ಲಿಯೇ ಸೆಟಲ್ ಆಗುವ ಅಪೇಕ್ಷೆ ಇದೆ,” ಎಂದು ಹೇಳಿದ.
ಕೋಮಲಾ ಕೂಡ, “ನನಗೆ ಬೆಂಗಳೂರು ಮೊದಲ ಆದ್ಯತೆ,” ಎಂದಳು.
ಕಾಫಿ ಕುಡಿದ ಬಳಿಕ ಇಬ್ಬರೂ ಹೊರಬಂದು ಹಾಗೆ ಮಾತನಾಡುತ್ತಾ, ಮುಖ್ಯರಸ್ತೆಗೆ ಬಂದು ಪರಸ್ಪರರಿಗೆ ಬೈ ಹೇಳುತ್ತಾ ತಮ್ಮ ತಮ್ಮ ಮನೆಗಳಿಗೆ ಆಟೋದಲ್ಲಿ ಹೊರಟರು.
ಮನೆಗೆ ತಲುಪಿದ ಬಳಿಕ ಅನೂಪ್ ಕೋಮಲಾ ಬಗ್ಗೆಯೇ ಯೋಚಿಸುತ್ತಿದ್ದ. ಅವನಿಗೆ ಕೋಮಲಾಳ ಮಾತುಕತೆಯ ರೀತಿ ಬಹಳ ಇಷ್ಟವಾಗಿತ್ತು. ತಾನು ಅತ್ಯಂತ ನಿಕಟವರ್ತಿಯ ಜೊತೆ ಮಾತನಾಡುತ್ತಿದ್ದೇನೆ ಎಂದು ಅವನಿಗೆ ಅನಿಸುತ್ತಿತ್ತು. ಒಂದಿಷ್ಟೂ ಅಹಂ ಇಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಬೆಳೆದರೂ ಕೂಡ ಅದೆಷ್ಟು ಸಹಜವಾಗಿ ಇರುತ್ತಾಳೆ ಎನಿಸಿತು. ಅವನಿಗೆ ಅಂತಹ ಲೈಫ್ ಪಾರ್ಟ್ ನರ್ ಬೇಕಿತ್ತು. ಇಡೀ ರಾತ್ರಿ ಅವನು ಇದೇ ವಿಚಾರಗಳು ಹಾಗೂ ಕಲ್ಪನೆಗಳಲ್ಲಿ ಕಳೆದ.
ಬೆಳಗ್ಗೆ ಆಫೀಸ್ ತಲುಪುತ್ತಿದ್ದಂತೆ ಅವನು ಬಾಸ್ ಸುದರ್ಶನ್ ಅವರಿಗೆ ಫೈನಲ್ ಡಮ್ಮಿ ತೋರಿಸಿದ. ಬಳಿಕ ಅವರನ್ನು ಬೋರ್ಡ್ ರೂಮ್ ಗೆ ಕರೆದುಕೊಂಡು ಹೋದ. ಪ್ರೆಸೆಂಟೇಶನ್ ಗಾಗಿ ಬೋರ್ಡ್ ರೂಮ್ ನಲ್ಲಿ ಆಗಲೇ ಸೇಲ್ಸ್ ಹೆಡ್ ಹಾಗೂ ಸಿಇಓ ಉಪಸ್ಥಿತರಿದ್ದರು.
ಆರಂಭದಲ್ಲಿ ಅನೂಪ್ ಸಾಕಷ್ಟು ನರ್ವಸ್ ಆಗಿದ್ದ. ಆದರೆ ಅಷ್ಟೇ ಆತ್ಮವಿಶ್ವಾಸದಿಂದ ಮಾರ್ಕೆಟಿಂಗ್ ಸ್ಟ್ರಾಟರ್ಜಿ ಹಾಗೂ ಜಾಹೀರಾತಿನ ಎಲ್ಲ ವಿವರಗಳನ್ನು ತಿಳಿಸಿದ. ಅದನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು.
ಸಿಇಓ ಅವನ ಬೆನ್ನು ತಟ್ಟುತ್ತಾ ಹೇಳಿದರು, “ಯಂಗ್ ಮ್ಯಾನ್, ಯೂ ಹ್ಯಾವ್ ಎ ಬ್ರೈಟ್ ಫ್ಯೂಚರ್. ಕೀಪ್ ಇಟ್ ಅಪ್!”
ಅನೂಪ್ ನ ಖುಷಿಗೆ ಮೇರೆಯೇ ಇರಲಿಲ್ಲ. ಆಫೀಸಿನ ಎಲ್ಲರೂ ಕೂಡ ಅವನನ್ನು ಹೊಗಳುತ್ತಿದ್ದರು. ಎಲ್ಲಕ್ಕೂ ಹೆಚ್ಚು ಹೊಗಳಿದ್ದು ಬಾಸ್ ಸುದರ್ಶನ್. ಅವರಿಗೆ ತಮ್ಮ ನಿರ್ಧಾರದ ಬಗ್ಗೆ ಬಹಳ ಹೆಮ್ಮೆಯಿತ್ತು. ಅನೂಪ್ ಈ ಬಗ್ಗೆ ಎಲ್ಲಕ್ಕೂ ಮೊದಲು ತನ್ನ ಚಿಕ್ಕಮ್ಮನಿಗೆ ಹಾಗೂ ಆ ಬಳಿಕ ಕೋಮಲಾಗೆ ಈ ವಿಷಯ ತಿಳಿಸಿದ. ಇಬ್ಬರೂ ಬಹಳ ಖುಷಿಪಟ್ಟರು. ಕೋಮಲಾಳಂತೂ ಲಂಚ್ ನ ಡೇಟ್ ಕೂಡ ನಿರ್ಧರಿಸಿಬಿಟ್ಟಳು.
ನಿರ್ಧರಿಸಲ್ಪಟ್ಟ ದಿನಾಂಕದಂದು ಪ್ರಾಡಕ್ಟ್ ಲಾಂಚ್ ಆಯಿತು. ಎಲ್ಲರೂ ಅನೂಪ್ ನ ಪರ್ಫಾರ್ಮೆನ್ಸ್ ಬಗ್ಗೆ ಹೊಗಳುತ್ತಿದ್ದರು.
ಅನೂಪ್ ಕೋಮಲಾಳ ಇಡೀ ಟೀಮ್ ಗೆ ಲಂಚ್ ಪ್ರಾಮಿಸ್ ಮಾಡಿದ್ದ. ಆದರೆ ಆ ಟೀಮ್ ನ ಇಬ್ಬರು ರಜೆಯಲ್ಲಿದ್ದರು. ಹೀಗಾಗಿ ಲಂಚ್ ಡೇಟ್ ಫಿಕ್ಸ್ ಮಾಡಲು ಆಗುತ್ತಿರಲಿಲ್ಲ. ಮೊದಲು ಡಿನ್ನರ್ ನ ಪಾರ್ಟಿ ಆಗಬೇಕು. ಆ ಬಳಿಕವೇ ಲಂಚ್ ಪಾರ್ಟಿ ಮಾಡೋಣ ಎಂದು ನಿರ್ಧರಿಸಲಾಯಿತು. ಮುಂದಿನ ವಾರದ ಶುಕ್ರವಾರ ರಾತ್ರಿಯೇ ಎಂ.ಜಿ ರಸ್ತೆ ಹೋಟೆಲ್ ಒಂದರಲ್ಲಿ ಡಿನ್ನರ್ ಗೆ ಹೋಗುವ ಬಗ್ಗೆ, ಫಿಕ್ಸ್ ಆಯಿತು. ಆ ದಿನ ಆಫೀಸಿನಿಂದ ನೇರವಾಗಿ ಡಿನ್ನರ್ ಗೆ ಹೋಗದೆ ಅವನು ಮನೆಗೆ ಹೋಗಿ ಅಲ್ಲಿಂದ ರೆಸ್ಟೊರೆಂಟ್ ಗೆ ಹೋದ.
ಅನೂಪ್ ಹೋಟೆಲ್ ಗೆ ಹೋದ ಕೆಲವೇ ನಿಮಿಷಗಳಲ್ಲಿ ಕೋಮಲಾ ಕೂಡ ಅಲ್ಲಿಗೆ ಬಂದು ತಲುಪಿದಳು. ಅವಳು ದೂರದಲ್ಲಿರುವಾಗಲೇ ಕೈ ಅಲ್ಲಾಡಿಸಿದಳು. ಸ್ವಲ್ಪ ಹೊತ್ತು ಅವನು ಅವಳನ್ನು ಗುರುತಿಸಲೇ ಇಲ್ಲ. ಏಕೆಂದರೆ ಈವರೆಗೆ ಅವನು ಕೋಮಲಾಳನ್ನು ಮಾಡ್ ಡ್ರೆಸ್ ನಲ್ಲಿ ನೋಡಿದ್ದ. ಇವತ್ತು ಅವಳು ಸೀರೆ ಉಟ್ಟಿದ್ದಳು.
ಅವಳು ಅವನ ಹತ್ತಿರ ಬಂದಾಗ ಅವಳೇ ಕೇಳಿದಳು, “ನೀವು ಹೀಗೇಕೆ, ನನ್ನನ್ನು ನೋಡುತ್ತಿರುವಿರಿ? ನಾನು ಸೀರೆ ಉಟ್ಟಿದ್ದೇನೆ ಎಂದಾ? ನನಗೆ ಸೀರೆ ಎಂದರೆ ಬಹಳ ಇಷ್ಟ. ಆಫೀಸಿನಲ್ಲಿ ಸೀರೆ ಯಾರೂ ಉಡುದಿಲ್ಲವೆಂದರೆ ನಾನು ಹೇಗೆ ಉಡಲಿ ಹೇಳಿ?”
“ನಿಜ ಹೇಳಲಾ…. ನೀವು ತಪ್ಪು ತಿಳಿಯಬಾರದು. ಸೀರೆಯಲ್ಲಿ ನೀವು ಬಹಳ ಸುಂದರವಾಗಿ ಕಾಣುತ್ತಿರುವಿರಿ. ಹಾಗಾಗಿ ದೃಷ್ಟಿ ಕದಲಿಸಲು ಆಗುತ್ತಿಲ್ಲ.”
“ನನ್ನನ್ನು ತಮಾಷೆ ಮಾಡ್ತಿದಿರಾ ನೀವು. ಬನ್ನಿ ಒಳಗೆ ಹೋಗೋಣ.”
“ಇಲ್ಲ ಕೋಮಲಾ, ನಾನು ನಿಜವನ್ನೇ ಹೇಳುತ್ತಿರುವೆ.”
“ಬನ್ನಿ….. ಬನ್ನಿ…. ಒಳಗೆ ಹೋಗೋಣಾ,” ಎಂದು ಹೇಳುತ್ತಾ ಇಬ್ಬರೂ ಒಳಗೆ ಹೋದರು.
ಆ ಹೋಟೆಲ್ ನಲ್ಲಿ ಆಗಲೇ ಸಾಕಷ್ಟು ಜನ ಕಾಯುತ್ತಿದ್ದರು. ಅವರು ಮೊದಲೇ ಸೀಟ್ ರಿಸರ್ವ್ ಮಾಡಿದ್ದರಿಂದ ಅವರಿಗೆ ಕಾಯಬೇಕಾದ ಅವಶ್ಯಕತೆ ಉಂಟಾಗಲಿಲ್ಲ.
ಅನೂಪ್ ಕುಳಿತುಕೊಳ್ಳುತ್ತಲೇ, “ಕೋಮಲಾ, ನೀವು ಆರ್ಡರ್ ಕೊಡಿ. ನಿಮಗೆ ಇದರ ಬಗ್ಗೆ ಸಾಕಷ್ಟು ಐಡಿಯಾ ಇದೆ. ಆ ಬಳಿಕ ನನ್ನ ಇಷ್ಟದ ಬಗ್ಗೆ ಹೇಳ್ತೀನಿ,” ಎಂದು ಅನೂಪ್ ನಗುತ್ತಲೇ ಹೇಳಿದ.
“ನಿಮಗೆ ಯಾವುದು ಇಷ್ಟವೋ ಅದನ್ನೇ ಆರ್ಡರ್ ಮಾಡಿ.”
ಅವಳು ಸೂಪ್, ಸ್ಟಾರ್ಟರ್ ಹಾಗೂ ಮೇನ್ ಕೋರ್ಸ್ ನ್ನು ಒಂದೇ ಸಲಕ್ಕೆ ಆರ್ಡರ್ ಮಾಡಿದಳು.
ಸ್ವಲ್ಪ ಹೊತ್ತು ಶಾಂತಳಾಗಿದ್ದ ಕೋಮಲಾಳೇ ತನ್ನ ಮೌನ ಮುರಿದಳು, “ನಾನು ಕೂಡ ನಿಮ್ಮ ಪ್ರಾಜೆಕ್ಟ್ ಬಗ್ಗೆ ಬಹಳ ಟೆನ್ಶನ್‌ನಲ್ಲಿದ್ದೆ. ಅದು ಹೇಗಾಗುತ್ತೊ ಎಂಬ ಆತಂಕ ಇತ್ತು. ಆದರೆ ನಮ್ಮ ಕೆಲಸ ನಿಮ್ಮ ಕಂಪನಿಗೆ ಇಷ್ಟವಾಯಿತು. ನನಗದು ಬಹಳ ಖುಷಿಯಾಯಿತು.”
“ನೀವು ಕೂಡ ಬಹಳ ಕಷ್ಟಪಟ್ಟಿರಿ. ಹೀಗಾಗಿ ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಅಂದಹಾಗೆ ನೀವು ಫೀಲ್ಡ್ ಗೆ ಬಂದು ಎಷ್ಟು ವರ್ಷವಾಯಿತು?”
“ನನಗೆ ಈ ಫೀಲ್ಡ್ ನಲ್ಲಿ 4 ವರ್ಷದ ಅನುಭವವವಿದೆ. ನಾನು ಗ್ರಾಜ್ಯುಯೇಶನ್ ಬಳಿಕ ಮಾಸ್ ಕಮ್ಯುನಿಕೇಶನ್ ನಲ್ಲಿ ಅಡ್ವಾನ್ಸ್ ಡಿಪ್ಲೋಮಾ ಮಾಡಿದೆ. ಬಳಿಕ ಜಾಬ್ ಗೆ ಬಂದೆ.”
“ನಿಮ್ಮ ರಿಲೇಟಿವ್ ಬೆಂಗಳೂರಿನಲ್ಲಿಯೇ ಇದ್ದಾರಾ ಅಥವಾ ಶಿವಮೊಗ್ಗಕ್ಕೆ ಹೋಗುತ್ತಿರುತ್ತೀರಾ?”
“ನಮ್ಮ ಹೆಚ್ಚಿನ ರಿಲೇಟಿವ್ಸ್ ಬೆಂಗಳೂರಿನಲ್ಲಿಯೇ ಇದ್ದಾರೆ. ಅಪ್ಪ ಮಾತ್ರ ಆಗಾಗ ಶಿಮಮೊಗ್ಗವರೆಗೆ ಹೋಗ್ತಾ ಇರುತ್ತಾರೆ. ನಾನು ವರ್ಷಕ್ಕೊಮ್ಮೆ ಮಾತ್ರ ಯಾವುದಾದರೂ ಫಂಕ್ಷನ್ ಗೆ ಹೋಗ್ತೀನಿ.”
ಅಲ್ಲಿಯರೆಗೆ ವೇಟರ್ ಊಟ ಸರ್ವ್ ಮಾಡಿದ, ಬಳಿಕ ಮಾತುಕತೆ ಮುಂದುವರಿಯಿತು.
“ಒಂದು ವಿಷಯ ಕೇಳಲಾ….. ನೀವು ತಪ್ಪು ತಿಳಿಯಬಾರದು.”
“ಪ್ರಶ್ನೆ ಕೇಳಲು ಅನುಮತಿಯ ಅಗತ್ಯವಿಲ್ಲ. ನೀವು ಅವಶ್ಯವಾಗಿ ಕೇಳಬಹುದು.”
“ನಿಮಗೆ ಯಾರಾದರೂ ಬಾಯ್ ಫ್ರೆಂಡ್ ಇರಬೇಕು ಅಲ್ಲವೇ?”
“ನೀವು ಇದನ್ನೇ ಹೇಗೆ ಹೇಳ್ತೀರಾ?” ಅವಳು ಮುಗುಳ್ನಗುತ್ತಾ ಕೇಳಿದಳು.
“ನಿಮಗೆ ಈ ಬಗ್ಗೆ ಬೇಸರವಾದರೆ ಕ್ಷಮಿಸಿ.”
“ನೋಡಿ, ನೀವು ಯಾವ ಸೆನ್ಸ್ ನಲ್ಲಿ ಕೇಳುತ್ತಿದ್ದೀರೋ ಆ ಸೆನ್ಸ್ ನಲ್ಲಿ ನನಗೆ ಯಾರೂ ಬಾಯ್ ಫ್ರೆಂಡ್ ಗಳಿಲ್ಲ. ಅಂದಹಾಗೆ ನನಗೆ ಹುಡುಗರಲ್ಲಿ ಅನೇಕ ಫ್ರೆಂಡ್ ಗಳಿದ್ದಾರೆ.”
“ನೀವು ಮದುವೆಯ ಬಗ್ಗೆ ಏನು ಯೋಚಿಸಿದ್ದೀರಾ?”
“ನೀವಂತೂ ಇವತ್ತು ಇಂಟರ್ ವ್ಯೂ ತೆಗೆದುಕೊಳ್ಳುವ ಮೂಡ್ ನಲ್ಲಿದ್ದೀರಿ.”
“ಇಲ್ಲ. ಹಾಗೇನೂ ಇಲ್ಲ. ಹಾಗೆ ಸುಮ್ಮನೇ ಕೇಳಿದೆ.”
“ಅನೂಪ್, ನಾನು ಮದುವೆ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ಕೆಲವು ಹುಡುಗರನ್ನು ಕೂಡ ಭೇಟಿ ಆದೆ. ಆದರೆ ಅವರಿಗೆ ನನ್ನ ಜಾಬ್ ಬಗೆಗೆ ಸಮಸ್ಯೆ ಇತ್ತು. ಹೀಗಾಗಿ ಮಾತು ಮುಂದುವರಿಯಲಿಲ್ಲ.
“ಅನೂಪ್, ನಾನು ಯಾವ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದೇನೊ, ಅಲ್ಲಿ ಕೆಲಸ ಮಾಡುಲು ಯಾವುದೇ ನಿರ್ದಿಷ್ಟ ಸಮಯವಿಲ್ಲ. ರಾತ್ರಿ ಬಹಳ ಹೊತ್ತಿನ ತನಕ ಕ್ಲೈಂಟ್ ಜೊತೆಗೆ ಆಫೀಸ್ ನಲ್ಲಿ ಇರಬೇಕಾಗುತ್ತದೆ. ಕೆಲವೊಮ್ಮೆ ಒಂದು ವಾರ ಬೆಂಗಳೂರಿನಿಂದ ಹೊರಗಡೆ ಇರಬೇಕಾಗುತ್ತದೆ. ಕ್ಲೈಂಟ್ ಜೊತೆಗೆ ಲಂಚ್ ಅಥವಾ ಡಿನ್ನರ್ ಕೂಡ ಮಾಡಬೇಕಿರುತ್ತದೆ. ಪ್ರತಿಯೊಬ್ಬ ಹುಡುಗರಿಗೆ ಇಂತಹ ಹುಡುಗಿ ಇಷ್ಟವಾಗುವುದಿಲ್ಲ. ಹುಡುಗರಿಗೆ ನಮ್ಮ ಕ್ಯಾರೆಕ್ಟರ್ ಮೇಲೆ ಸಂದೇಹ ಬಂದಾಗ, ಮದುವೆಯ ಔಚಿತ್ಯವಾದರೂ ಎಲ್ಲಿ ಉಳಿಯುತ್ತದೆ? ಅದಕ್ಕೂ ಉತ್ತಮವೆಂದರೆ ಅಂತಹ ವ್ಯಕ್ತಿಗಳ ಜೊತೆ ಮಾತನ್ನೇ ಮುಂದುವರಿಸಬಾರದು. ನನಗೆ ನನ್ನ ಜಾಬ್ ಬಹಳ ಇಷ್ಟ. ನಾನು ಇದನ್ನು ಬಿಡುವುದಿಲ್ಲ ಹಾಗೂ ಬದಲಿಸಲು ಇಷ್ಟವಾಗುವುದಿಲ್ಲ.”
“ಕೋಮಲಾ, ನನಗೆ ನಿಮ್ಮ ಈ ಜಾಬ್ ಬಗ್ಗೆ ಯಾವುದೇ ಸಮಸ್ಯೆ ಇಲ್ಲವೆಂದರೆ ನೀವು ನನ್ನೊಂದಿಗೆ ಮದುವೆಯಾಗಲು ಇಷ್ಟಪಡುವಿರಾ? ನಾನು ಈ ಮಾತನ್ನು ಗಂಭೀರವಾಗಿ ಹೇಳ್ತಿರುವೆ. ಆದರೆ ಇದೆಲ್ಲವನ್ನು ಹೇಗೆ ಮಾತಾಡಿದೆ ಅಂತ ಗೊತ್ತಿಲ್ಲ.”
ಅಳು ಕ್ಷಣ ಕಾಲ ತಿನ್ನುವುದನ್ನು ನಿಲ್ಲಿಸಿ ಅನೂಪ್ ನ ಕಣ್ಣುಗಳಲ್ಲಿ ನೋಡಿದಳು. ಬಹುಶಃ ಅವಳಿಗೆ ಈ ಪ್ರಶ್ನೆಯ ನಿರೀಕ್ಷೆ ಇರಲಿಲ್ಲವೇನೋ ಅಥವಾ ಆ ಪ್ರಶ್ನೆಗೆ ಅವಳು ಸಿದ್ಧಳಿರಲಿಲ್ಲವೇನೋ?
ಸ್ವಲ್ಪ ಹೊತ್ತು ಇಬ್ಬರೂ ಪರಸ್ಪರರನ್ನು ನೋಡುವುದರಲ್ಲಿ ಮಗ್ನರಾಗಿದ್ದರು. ಬಳಿಕ ಕೋಮಲಾಳೇ, ಮೌನ ಮುರಿದು, “ಅನೂಪ್, ನಾನು ಇಷ್ಟು ದಿನ ನಿಮ್ಮನ್ನು ಕಂಡುಕೊಂಡ ಪ್ರಕಾರ, ನೀವೇನೋ ಒಳ್ಳೆಯ ವ್ಯಕ್ತಿ ಎಂದು ತಿಳಿದುಕೊಂಡೆ. ಅದೇ ಕಾರಣದಿಂದ ನಾನು ನಿಮಗೆ ಅಷ್ಟು ಹತ್ತಿರಾದೆವು. ಆದರೆ ನನಗೆ ಸ್ವಲ್ಪ ಸಮಯ ಕೊಡಿ. ನಾನು ಈಗಲೇ ಈ ಪ್ರಶ್ನೆಗೆ ಉತ್ತರ ಕೊಡಲು ಆಗುವುದಿಲ್ಲ,” ಎಂದಳು.
“ಕೋಮಲಾ, ನೀವು ನನಗೆ ಬಹಳ ಇಷ್ಟವಾದಿರಿ. ಹೀಗಾಗಿ ನಾನು ನನ್ನ ಮನಸ್ಸಿನ ಮಾತನ್ನು ನಿಮಗೆ ಹೇಳಬೇಕಾಯಿತು. ಒಂದು ವೇಳೆ ನೀವು ಇಲ್ಲ ಅಂತ ಹೇಳಿದರೂ, ನಮ್ಮ ಸ್ನೇಹ ಹೀಗೇ ಇರುತ್ತದೆ. ನಿಮಗೆ ಗೊತ್ತಿರುವ ಪ್ರಕಾರ, ನನಗೆ ಚಿಕ್ಕಮ್ಮನ ಹೊರತಾಗಿ ಬೇರಾರೂ ಇಲ್ಲ.”
“ಹೌದು ನೀವು ಹೇಳಿರುವಿರಿ.”
ಅಲ್ಲಿಯವರೆಗೆ ಡಿನ್ನರ್ ಮುಗಿದಿತ್ತು. ಕೋಮಲಾ ಮೊದಲೇ ಮಾತು ಕೊಟ್ಟಂತೆ, ಡಿನ್ನರ್ ಬಿಲ್ ಚುಕ್ತಾ ಮಾಡಿದಳು. ಬಳಿಕ ಇಬ್ಬರೂ ಹೊರಬಂದು ಆಟೋದಲ್ಲಿ ಮನೆಗೆ ತೆರಳಿದರು.
ಮನೆ ತಲುಪಿ ಅನೂಪ್ ಆ ಕ್ಷಣಗಳ ಬಗ್ಗೆಯೇ ಯೋಚಿಸುತ್ತಿದ್ದ. ತಾನು ಅದನ್ನೆಲ್ಲ ಹೇಗೆ ಮಾತಾಡಿಬಿಟ್ಟೆ ಎಂದು ಅವನಿಗೆ ಅಚ್ಚರಿಯಾಗುತ್ತಿತ್ತು. ಏಕೆಂದರೆ ಅವನು ಅದಕ್ಕಾಗಿ ಸಿದ್ಧನಾಗಿ ಹೋಗಿರಲಿಲ್ಲ. ಅವನಿಗೆ ಕೋಮಲಾ ಇಷ್ಟವಾಗಿದ್ದಳು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ. ಆದರೆ ತಾನು ಇಷ್ಟು ಬೇಗ ಪ್ರಪೋಸ್ ಮಾಡಿ ಬಿಡುತ್ತೇನೆ ಎಂದು ಅವನು ಯೋಚನೆ ಕೂಡ ಮಾಡಿರಲಿಲ್ಲ. ತನಗೆ ಇಷ್ಟು ಧೈರ್ಯ ಬಂದದ್ದಾರೂ ಹೇಗೆ ಎಂದು ಅವನಿಗೆ ತಿಳಿಯುತ್ತಿರಲಿಲ್ಲ. ಅದೇ ವೈಚಾರಿಕ ಹೊಯ್ದಾಟದಲ್ಲಿ ಅವನಿಗೆ ಯಾವಾಗ ನಿದ್ದೆ ಆವರಿಸಿತೋ ಗೊತ್ತೇ ಆಗಲಿಲ್ಲ.