ಸ್ಯಾಂಡಲ್​ವುಡ್ ಬೆಡಗಿ ಶ್ರೀಲೀಲಾ ಇದೀಗ ಬಾಲಿವುಡ್​ಗೆ ಎಂಟ್ರಿ ನೀಡಿ, ಮೂರು ಚಿತ್ರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಶ್ರೀಲೀಲಾ ಅವರ ಮತ್ತೊಂದು ವಿಚಾರ ಸದ್ಯ ಸದ್ದು ಮಾಡುತ್ತಿದೆ.

ಆಂಧ್ರದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರು, ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಬಾಲಿವುಡ್‌ಗೆ ಕಾಲಿಡಲಿದ್ದಾರೆ ಅನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಲೇ ಇತ್ತು.

Sreeleela (1)

ಇದೀಗ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅಭಿನಯದ ಚೊಚ್ಚಲ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಾತ್ರಿಯಾಗಿದೆ. ಇನ್ನು ಕೆಲವರು ಇಲ್ಲ, ಇಲ್ಲ, ಅವರು ವರುಣ್ ಧವನ್‌ ಗೆ ನಾಯಕಿಯಾಗುವ ಮೂಲಕ ಹಿಂದಿ ಉದ್ಯಮವನ್ನು ಪ್ರವೇಶ ಮಾಡಲಿದ್ದಾರೆ ಎಂದು ಹುಯಿಲೆಬ್ಬಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೂ ಚಿತ್ರತಂಡಗಳಿಂದ ಅಧಿಕೃತವಾಗಿಲ್ಲ. ಚಿತ್ರ ಸೆಟ್ಟೇರಿಲ್ಲ. ಇದರ ನಡುವೆ ಈಗ ಶ್ರೀಲೀಲಾ, ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿದ್ದಾರೆ ಎನ್ನುವ ಸುದ್ದಿ ಕೂಡಾ ಹೊರ ಬಿದ್ದಿದೆ. ಮುಂಬೈನಲ್ಲಿ ಈ ಕುರಿತು ವ್ಯಾಪಕವಾದ ಚರ್ಚೆ ಕೂಡ ನಡೆಯುತ್ತಿದೆ.

Sreeleela (2)

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಬಸು ಸದ್ಯ ಆಶಿಕಿಯ ಮೂರನೇ ಭಾಗದ ತಯಾರಿಯನ್ನು ನಡೆಸಿದ್ದಾರೆ. ಕಾರ್ತಿಕ್ ಆರ್ಯನ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಹಿಂದೆ ಇದೇ ಚಿತ್ರಕ್ಕೆ ಅನಿಮಲ್‌ ಚಿತ್ರದ ನಾಯಕಿ ತೃಪ್ತಿ ದಿಮ್ರಿಯವರನ್ನು ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆ ನಂತರ ಅದೇನಾಯ್ತೋ ? ತೃಪ್ತಿ ದಿಮ್ರಿ ಈ ಚಿತ್ರದಿಂದ ಹೊರ ಬಂದರು. ತೃಪ್ತಿಯ ಜಾಗಕ್ಕೆ ಈಗ ಶ್ರೀಲೀಲಾ ಬಂದಿದ್ದಾರೆ ಎನ್ನುವುದು ಹೊಸ ನ್ಯೂಸ್.

Sreeleela (6)

ಈಗಾಗಲೇ ಚಿತ್ರದ ಕಥೆಯನ್ನು ಕೇಳಿ ಎಕ್ಸಾಯ್ಟ್ ಆಗಿರುವ ಶ್ರೀಲೀಲಾ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇನ್ನು ಆಶಿಕಿ ಬಾಲಿವುಡ್‌ನ ಬ್ರ್ಯಾಂಡ್‌ಗಳಲ್ಲೊಂದು. ಆಶಿಕಿ ಮತ್ತು ಆಶಿಕಿ 2 ಇವೆರಡು ಚಿತ್ರಗಳು ಅನೇಕರಿಗೆ ಬಾಲಿವುಡ್‌ನಲ್ಲಿ ಬದುಕನ್ನು ನೀಡಿವೆ. ಇಂತಹ ಬ್ರ್ಯಾಂಡ್ ತಮ್ಮನ್ನು ಹುಡುಕಿಕೊಂಡು ಬಂದ ಹಿನ್ನೆಲೆ ಶ್ರೀಲೀಲಾ ಸದ್ಯ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ.

Sreeleela (4)

ಅನುರಾಗ್ ಬಸು ತಮ್ಮ ಈ ಚಿತ್ರಕ್ಕೆ ಮೊದಲು ಆಶಿಕಿ 3 ಎಂದು ಹೆಸರಿಟ್ಟಿದ್ದರು. ಆದರೆ ಈಗ ಚಿತ್ರದ ಶೀರ್ಷಿಕೆಯನ್ನು ಬದಲಿಸುವ ಆಲೋಚನೆಯನ್ನು ಅನುರಾಗ್ ಬಸು ಮಾಡುತ್ತಿದ್ದಾರೆ. ನಿಜಕ್ಕೂ ಚಿತ್ರಕ್ಕೆ ಅನುರಾಗ್ ಬಸು ಬೇರೆ ಟೈಟಲ್ ಇಡ್ತಾರಾ ಅಥವಾ ಆಶಿಕಿ 3 ಟೈಟಲ್‌ ಜೊತೆಯಲ್ಲಿಯೇ ಮುಂದುವರೆಯುತ್ತಾರಾ ಎನ್ನುವುದಕ್ಕೆ ಉತ್ತರ ಸ್ವಲ್ಪ ದಿನಗಳಲ್ಲಿ ಸಿಗಲಿದೆ. ಮಿಕ್ಕಂತೆ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಜೊತೆ ಈ ಚಿತ್ರದಲ್ಲಿರುವ ಸ್ಟಾರ್ ಕಾಸ್ಟ್ ಬಗ್ಗೆ ಕೂಡ ಅನುರಾಗ್ ಬಸು ಮಾಹಿತಿಯನ್ನು ಹಂಚಿಕೊಂಡಿಲ್ಲ.

Sreeleela (3)

ಮಾರ್ಚ್‌ನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎನ್ನುವ ವಿಚಾರವನ್ನು ಮಾತ್ರ ಅನುರಾಗ್ ಬಸು ಹೇಳಿದ್ದಾರೆ. ಇನ್ನುಳಿದಂತೆ ಸದ್ಯ ಬಾಲಿವುಡ್‌ ಕಡೆ ಮುಖ ಮಾಡಿರುವ ಶ್ರೀಲೀಲಾ ತೆಲುಗಿನ ಮಾಸ್ ಮಾಹಾರಾಜ ರವಿತೇಜಾ ಅಭಿನಯದ ‘ಮಾಸ್ ಜಾತರ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಿತಿನ್ ಜೊತೆ ‘ರಾಬಿನ್ ಹುಡ್’ ಚಿತ್ರಕ್ಕೆ ಕೂಡ ಶ್ರೀಲೀಲಾ ನಾಯಕಿ. ಈ ಚಿತ್ರಗಳನ್ನು ಹೊರತು ಪಡಿಸಿದರೆ ಶಿವಕಾರ್ತಿಕೇಯನ್ ಅಭಿನಯದ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನು ಕೂಡ ಶ್ರೀಲೀಲಾ ಪ್ರವೇಶಿಸುತ್ತಿದ್ದಾರೆ.. ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಕೂಡ ಶ್ರೀಲೀಲಾ ನಟಿಸುತ್ತಿದ್ದಾರೆ. ಏನೇ ಆಗಲಿ ಬಾಲಿವುಡ್​ನಲ್ಲಿ ಶ್ರೀಲೀಲಾಗೆ ಉಜ್ವಲ ಭವಿಷ್ಯವಿದೆ ಎನ್ನಲಾಗುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ