ಮನೆಯಲ್ಲಿ ಎಲ್ಲ ಸಾಮಾನ್ಯವಾಗಿರುವಂತೆ ಗೋಚರಿಸುತ್ತಿತ್ತು. ಆದರೆ ವಾಸ್ತವದಲ್ಲಿ ಹಾಗಿರಲಿಲ್ಲ. ರಮ್ಯಾಳ ಹೃದಯದಲ್ಲಿ ಬಿರುಗಾಳಿಯೇ ಎದ್ದಿತ್ತು. ಇಡೀ ದಿನ ಮನೆಯಲ್ಲಿ ಕುಳಿತು ಕುಳಿತು ಜಡ್ಡು ಹಿಡಿದಂತಾಗಿತ್ತು. ಅದೂ ಕೂಡ ಒನ್ ಬೆಡ್ ರೂಮಿನ ಫ್ಲ್ಯಾಟ್ ನಲ್ಲಿ. ಹೊರಗೆ ಹೋಗುವುದಾದರೂ ಹೇಗೆ ಎಂದು ಅವಳು ಯೋಚನೆ ಮಾಡುತ್ತಿದ್ದಳು. ಸಂಜಯ್ ಜೊತೆ ಅವಳಿಗೆ ಮಾತನಾಡಲು ಯಾವುದೇ ಅವಕಾಶಗಳು ಸಿಗುತ್ತಿರಲಿಲ್ಲ.
ಕೊರೋನಾದ ಕಾರಣದಿಂದ ಗಂಡ ರವಿ ಮನೆಯಲ್ಲಿಯೇ ಇರುತ್ತಿದ್ದ. ಅವನಿಗೆ ವರ್ಕ್ ಫ್ರಂ ಹೋಮ್ ಆಗಿತ್ತು. 2 ವರ್ಷದ ಅಶ್ವಿನಿಗೆ ಅಮ್ಮ ಅಪ್ಪ ಸದಾ ಕಣ್ಮುಂದೆ ಇರುತ್ತಿದ್ದುದು ಖುಷಿಯನ್ನುಂಟು ಮಾಡಿತ್ತು. ಆದರೆ ಅಮ್ಮನ ಹೃದಯದಲ್ಲಿ ಏಳುತ್ತಿದ್ದ ಬಿರುಗಾಳಿಯ ಬಗ್ಗೆ ಮಾತ್ರ ಆ ಕಂದನಿಗೆ ಕಿಂಚಿತ್ತೂ ಅರಿವಿರಲಿಲ್ಲ.
ಆಫೀಸಿನ ಕೆಲಸ ಕಾರ್ಯಗಳಿಂದ ಅಷ್ಟಿಷ್ಟು ಬಿಡುವು ಸಿಕ್ಕಾಗೆಲ್ಲ, ರವಿ ಹೆಂಡತಿಗೆ ಮನೆಗೆಲಸಗಳಲ್ಲಿ ನೆರವಾಗುತ್ತಿದ್ದ. ಆದರೆ ರಮ್ಯಾಳ ಮುಖದಲ್ಲಿ ಸಿಟ್ಟು, ಆಕ್ರೋಶ ಮಾತ್ರ ಕಡಿಮೆಯಾಗುತ್ತಿರಲಿಲ್ಲ.
ಕೊನೆಗೊಂದು ದಿನ ಅವನು ಕೇಳಿಯೇ ಬಿಟ್ಟ, “ರಮ್ಯಾ, ನಿನಗೆ ಯಾವ ಕೆಲಸಗಳು ಕಷ್ಟ ಅನಿಸುತ್ತಲೇ ನನಗೆ ಅದರ ಬಗ್ಗೆ ಹೇಳು ತಿಳಿಸು. ನಿನ್ನ ಮುಖದಲ್ಲಂತೂ ನಗುವೇ ಮಾಯ ಆಗಿಬಿಟ್ಟಿದೆಯಲ್ಲ…..”
ರಮ್ಯಾ ಒಮ್ಮೆಲೆ ಸಿಡಿದಳು,“ನನಗೆ ಇಡೀ ದಿನ ಮನೆಯಲ್ಲಿ ಹೀಗೆ ಬಂಧಿಯಾಗಿರಲು ಸಾಧ್ಯವಿಲ್ಲ.”
“ಆದರೆ ಡಿಯರ್ ನೀನು ಮೊದಲು ಮನೆಯಲ್ಲಿಯೇ ಇರುತ್ತಿದ್ದೆಯಲ್ಲ, ನಾನೊಬ್ಬನೇ ತಾನೇ ಆಫೀಸಿಗೆ ಹೋಗುತ್ತಿದ್ದುದು. ಈಗ ನಾನು ಮನೆಯಲ್ಲಿಯೇ ಮೌನವಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ದೂರು ಕೂಡ ಹೇಳ್ತಿಲ್ಲ. ನಿನ್ನನ್ನು ಹಾಗೂ ಅಶ್ವಿನಿಯನ್ನು ನೋಡಿ ನನಗೆ ಖುಷಿಯಾಗುತ್ತದೆ.”
ರಮ್ಯಾ ಮನಸ್ಸಿನಲ್ಲಿಯೇ ಪಿಸುಗುಟ್ಟತೊಡಗಿದಳು. ತನ್ನ ಮನದ ಮಾತನ್ನು ಅವನಿಗೆ ಹೇಗೆ ಹೇಳಬೇಕೆಂದು ಚಡಪಡಿಸತೊಡಗಿದಳು. ತಾನು ಸಂಜಯ್ ನನ್ನು ಪ್ರೀತಿಸುತ್ತಿರುವುದು ಹಾಗೂ ಅವನು ತನ್ನನ್ನು ದಿನ ಭೇಟಿಯಾಗುತ್ತಿದ್ದ ಎಂದು ಹೇಗೆ ತಾನೇ ತಿಳಿಸುವುದು, ಸಂಜೆ ಅವಳು ಮಗಳನ್ನು ಕರೆದುಕೊಂಡು ಪಾರ್ಕಿಗೆ ಹೋದಾಗ ಅವನೂ ಕೂಡ ಅಲ್ಲಿ ಬಂದಿರುತ್ತಿದ್ದ, ಕಣ್ಣಂಚಿನಲ್ಲಿಯೇ ಅವನ ದಷ್ಟಪುಷ್ಟ ಶರೀರ ನೋಡಿ ಹೊಗಳಿದಾಗ ಅವನಿಗೂ ಅರ್ಥವಾಗುತ್ತಿತ್ತು. ಅವನನ್ನು ನೋಡಿ ಸ್ಮೈಲ್ ಕೊಟ್ಟಾಗ ಅವನು ಹಾಗೆಯೇ ಸಮೀಪದಿಂದ ಹಾದು ಹೋಗುತ್ತಿದ್ದ ಎಂದು ಹೇಗೆ ತಾನೇ ಮನವರಿಕೆ ಮಾಡುವುದು, ಅವನೊಂದಿಗೆ ತನಗೆ ಪ್ರೀತಿಯಾಗಿದೆ ಎಂದು ತಿಳಿಸುವುದಾದರೂ ಹೇಗೆ?
ಹಾಯ್, ಹಲೋದಿಂದ ಶುರುವಾದ ಅವರ ಮಾತುಕತೆ ಈಗ ಅಫೇರ್ ತನಕ ಬಂದು ತಲುಪಿದೆ. ಸಂಜಯ್ ಅವಿವಾಹಿತನಾಗಿದ್ದ. ಸಮೀಪದಲ್ಲಿಯೇ ಇದ್ದ ಒಂದು ಅಪಾರ್ಟ್ ಮೆಂಟ್ ನಲ್ಲಿ ತನ್ನ ತಾಯಿ ತಂದೆ ಹಾಗೂ ತಂಗಿಯ ಜೊತೆಗೆ ವಾಸಿಸುತ್ತಿದ್ದ. ರವಿ ಇಲ್ಲದೇ ಇದ್ದಾಗ ರಮ್ಯಾ 12 ಸಲ ಸಂಜಯ್ ನನ್ನು ಮನೆಗೂ ಕರೆಸಿಕೊಂಡಿದ್ದಳು.
ಹೆಚ್ಚಿನ ಮಾತುಕತೆಗಳು ಭೇಟಿಯಾದಾಗ ಇಲ್ಲವೇ ಫೋನ್ ನಲ್ಲಿಯೇ ಆಗುತ್ತಿದ್ದ. ಪ್ರತಿದಿನ ಭೇಟಿಯಾಗುವುದು ಒಂದು ನಿಯಮವೇ ಆಗಿಬಿಟ್ಟಿತು. ಚೆನ್ನಾಗಿ ಅಲಂಕರಿಸಿಕೊಂಡು ಅಶ್ವಿನಿಯನ್ನು ಕರೆದುಕೊಂಡು ಪಾರ್ಕಿಗೆ ಹೋಗುದು ಸಂಜಯ್ ಜೊತೆಗೆ ಮಾತುಕತೆ ನಡೆಸುವುದು ಅವಳಲ್ಲಿ ಹೊಸ ಉತ್ಸಾಹ ತುಂಬಿಸುತ್ತಿತ್ತು.
ಈಗ ಲಾಕ್ ಡೌನ್ ನಲ್ಲಿ ಎಲ್ಲ ಬಂದ್ ಆಗಿದ್ದ. ಪಾರ್ಕ್ ಗಳನ್ನು ಕೂಡ ಮುಚ್ಚಲಾಗಿತ್ತು. ಮನೆಗೆ ದಿನಸಿ ತರುವ ನೆಪದಲ್ಲೂ ಹೊರಗೆಹೋಗುವ ಹಾಗಿರಲಿಲ್ಲ. ಅಂಗಡಿಗಳು ಮುಚ್ಚಿದ್ದರಿಂದಾಗಿ ದಿನಸಿ ಸಾಮಾನುಗಳನ್ನು ಆನ್ ಲೈನ್ ನಲ್ಲಿಯೇ ತರಿಸಿಕೊಳ್ಳಲಾಗುತ್ತಿತ್ತು. ಸಂಜಯ್ ಕೂಡ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಅವನಿಂದ 1-2 ಮೆಸೇಜ್ ಗಳು ಬರುತ್ತಿದ್ದಾದರೂ, ಅವಳು ಅವನ್ನು ಬಹುಬೇಗ ಡಿಲೀಟ್ ಮಾಡಿಬಿಡುತ್ತಿದ್ದಳು. ರವಿ ಅವನ್ನು ನೋಡದಿರಲಿ ಎಂದು. ರವಿ, ರಮ್ಯಾಳನ್ನು ಸಾಧ್ಯವಿದ್ದಷ್ಟು ಮಟ್ಟಿಗೆ ಖುಷಿಯಿಂದಿಡಲು ಪ್ರಯತ್ನಿಸುತ್ತಿದ್ದ. ಆದರೆ ರಮ್ಯಾಳ ಸಿಡಿಮಿಡಿತನ ಕಡಿಮೆಯಾಗುವ ಲಕ್ಷಣ ಮಾತ್ರ ಕಂಡುಬರುತ್ತಿರಲಿಲ್ಲ. ರಾತ್ರಿಯ ಸಮಾಗಮದ ಸಮಯದಲ್ಲಿ ಅವಳಿಗೆ ಮನಸ್ಸಿದ್ದರೆ ಮಾತ್ರ ಸಹಕಾರ ಕೊಡುತ್ತಿದ್ದಳು. ಅವಳಿಗೆ ಸಂಜಯ್ ಕಡೆ ಮನಸ್ಸು ಓಲಾಡುತ್ತಿದ್ದರೆ, ಅವಳು ಪತಿಯನ್ನು ದೂರ ಸರಿಸುತ್ತಿದ್ದಳು.
ರವಿ ಒಬ್ಬ ಸಾದಾಸೀದಾ ವ್ಯಕ್ತಿ ಎನ್ನುವುದನ್ನು ರಮ್ಯಾ ಅರಿತಿದ್ದಳು. ಹೆಂಡತಿ ಮಗುವನ್ನು ಖುಷಿಯಿಂದಿಡುದರಲ್ಲಿ ಅವನಿಗೆ ಖುಷಿ ಇದೆಯೇ ಹೊರತು, ಅವನಲ್ಲಿ ಯಾವುದೇ ಕೆಟ್ಟತನವಾಗಲಿ, ದುಷ್ಟ ಬುದ್ಧಿಯಾಗಲಿ ಇರಲಿಲ್ಲ. ಅವನಲ್ಲಿ ವಿಶಿಷ್ಟ ಎನ್ನುವಂತಹ ಸರಳತೆ ಇತ್ತು. ಆದರೆ ರಮ್ಯಾ ವಿಭಿನ್ನ ಸ್ವಭಾವದ ಹುಡುಗಿಯಾಗಿದ್ದಳು. ಅವಳು ಪೋಷಕರ ಒತ್ತಾಯಕ್ಕೆ ಮಣಿದು, ರವಿ ಜೊತೆಗೆ ಮದುವೆಯಾಗಿದ್ದಳು. ಆದರೆ ಮದುವೆಯ ಬಳಿಕ ಸಂಜಯ್ ಜೊತೆ ಸಂಬಂಧ ಇಟ್ಟುಕೊಳ್ಳಲು ಯಾವುದೇ ಹಿಂಜರಿಕೆ ತೋರಿರಲಿಲ್ಲ. ಅವಳು ಯಾವಾಗಲೂ ರವಿಯ ಮೇಲೆ ಆವರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಳು.
ಅದೊಂದು ದಿನ ರವಿ, ಅವಳನ್ನು ಕೇಳಿದ, “ರಮ್ಯಾ, ನೀನು ನನ್ನನ್ನು ಮದುವೆ ಮಾಡಿಕೊಂಡು ಖುಷಿಯಿಂದಿರುವೆ ತಾನೇ? ಇತ್ತೀಚೆಗೆ ನಾನು ಮನೆಯಲ್ಲಿಯೇ ಇರುವಾಗ ನೀನು ಸದಾ ಕೋಪದಲ್ಲಿಯೇ ಸಿಡಿಮಿಡಿ ಮಾಡ್ತಾ ಇರ್ತೀಯಾ?”
“ಮದುವೆಯಂತೂ ಆಗಿದೆ. ಖುಷಿಯಿಂದಿರಲಿ, ದುಃಖದಲ್ಲಿರಲಿ, ಅದರಲ್ಲೇನು ವ್ಯತ್ಯಾಸ?” ರಮ್ಯಾ ಉದಾಸದ ಧ್ವನಿಯಲ್ಲಿ ಹೇಳಿದಳು. ಆಗ ರವಿ ಅವಳನ್ನು ತನ್ನ ಬಾಹುಗಳಲ್ಲಿ ಬಳಸಿಕೊಳ್ಳುತ್ತಾ, “ಇತ್ತೀಚೆಗೆ ನಿನ್ನ ಮೂಡ್ ಅಷ್ಟೊಂದು ಕೆಟ್ಟದಾಗಿ ಏಕೆ ಇರುತ್ತದೆ ಎಂದು ನೀನು ತಿಳಿಸಿದರೆ ತಾನೇ ನನಗೆ ಗೊತ್ತಾಗೋದು?”
“ನನಗೆ ಮನೆಯಲ್ಲಿ ಉಸಿರುಗಟ್ಟಿದಂತೆ ಆಗ್ತಿದೆ. ನನಗೆ ಹೊರಗೆ ಹೋಗಬೇಕಿದೆ.”
“ಅಂದಹಾಗೆ, ನಿನಗೆ ಎಲ್ಲಿಗೆ ಹೋಗಬೇಕಿದೆ ಹೇಳು. ಆದರೆ ಈಗ ಎಲ್ಲ ಬಂದ್ ಆಗಿದೆಯಲ್ಲ…..”
“ನನಗೆ ನಿಮ್ಮ ಜೊತೆಗೆ ಹೋಗಬೇಕಿಲ್ಲ. ನನಗೆ ಏಕಾಂಗಿಯಾಗಿ ಹೋಗಬೇಕಿದೆ,” ರಮ್ಯಾ ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಹೇಳಿದಾಗ, ಅವನು ಅವಳ ಮುಖ ನೋಡುತ್ತಾ ನಿಂತುಬಿಟ್ಟ. ರಮ್ಯಾ ಅವನು ಚಾಚಿದ ಕೈಯನ್ನು ದೂರ ತಳ್ಳಿ ಏನೂ ಹೇಳದೆ ಅಲ್ಲಿಂದ ಹೊರಟುಹೋದಳು. ರವಿಗೆ ತುರ್ತು ಮೀಟಿಂಗ್ ಇತ್ತು. ಹೀಗಾಗಿ ಅವನು ಲ್ಯಾಪ್ ಟಾಪ್ ಮುಂದೆ ಕುಳಿತುಕೊಂಡ. ಆದರೆ ಇಂದು ಅವನ ಮನಸ್ಸು ಬಹಳ ಉದಾಸಗೊಂಡಿತ್ತು. ತನ್ನ ಪೋಷಕರ ಇಚ್ಛೆಯ ಮೇರೆಗೆ ಮದುವೆಯಾಗಿ, ತನಗೆ ಏನು ತಾನೇ ಸಿಕ್ಕಿತು ಎಂದು ಅವನು ಯೋಚಿಸತೊಡಗಿದ. ರಮ್ಯಾ ತನ್ನನ್ನು ಇಷ್ಟಪಡುತ್ತಿಲ್ಲ ಎಂಬ ಅನುಭವ ಅವನಿಗೆ ಆಗತೊಡಗಿತು.
ಅವನ ಪೋಷಕರು ರಮ್ಯಾಳ ಜೊತೆ ಜಾತಕ ಹೊಂದಾಣಿಕೆಯಾಗಿದ್ದರಿಂದ ಬಹಳ ಖುಷಿಗೊಂಡಿದ್ದರು. ಈ ಜೋಡಿ ಚೆನ್ನಾಗಿ ಬಾಳುತ್ತದೆಂದು ಹೇಳಿದ್ದರು. ಆದರೆ ಇವತ್ತು ಅವನ ಮನದ ಮಾತು ಯಾರಿಗೂ ಹೇಳುವ ಹಾಗಿರಲಿಲ್ಲ.
ಅದೊಂದು ದಿನ ರವಿ ಸ್ನಾನಕ್ಕೆ ಹೋಗುವಾಗ ರಮ್ಯಾ ಇದೇ ಅವಕಾಶ ಎಂಬಂತೆ ಸಂಜಯ್ ಗೆ ಫೋನ್ ಮಾಡಿದಳು. ಅವನು ಮೀಟಿಂಗ್ ನಲ್ಲಿದ್ದ. ಅವನೂ ಕೂಡ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಹೀಗಾಗಿ ಅವನು ಫೋನ್ ರಿಸೀವ್ ಮಾಡಲಿಲ್ಲ. ಸಂಜಯ್ ಕಾಲ್ ರಿಸೀವ್ ಮಾಡದೇ ಇರುವುದು ಅವಳಿಗೆ ಬಹಳ ಬೇಸರ ತರಿಸಿತು. ಸಂಜಯ್ ವಾಪಸ್ ಫೋನ್ ಮಾಡಿದಾಗ ರವಿ ಅಲ್ಲಿಯೇ ಹತ್ತಿರದಲ್ಲಿದ್ದ. ಈ ಕಾರಣದಿಂದ ಅವಳಿಗೆ ರವಿಯ ಮೇಲೆ ವಿಪರೀತ ಕೋಪ ಬಂತು. ಅವಳು ರವಿಯ ತಿಂಡಿಯ ಪ್ಲೇಟ್ ನ್ನು ಜೋರಾಗಿ ಕುಕ್ಕಿದಳು. ಆಗ ರವಿಗೆ ಕೋಪ ಬಂತು. ಅವನು ಕೋಪದ ಧ್ವನಿಯಲ್ಲಿಯೇ ಕೇಳಿದ, “ನಿನ್ನ ತಲೆ ಗಿಲೆ ಕೆಟ್ಟಿದೆಯಾ? ತಿಂಡಿ ಬಡಿಸುವ ಸಂಸ್ಕಾರ ಇದೇನಾ?”
ರಮ್ಯಾಳಿಗೆ ಸಂಜಯ್ ನ ಭೂತದ ಸವಾರಿ ಆಯಿತು. ಅವಳು ಅಷ್ಟೇ ಜೋರಾಗಿ ಕೂಗುತ್ತಾ, “ನಿಮಗೆ ತಿಂಡಿ ಕೊಟ್ಟಿದ್ದೇನೆ. ತಿನ್ಕೊಳ್ಳಿ ಬೇಡವಾದ್ರೆ ಬಿಟ್ಟುಬಿಡಿ…..”
ರಮ್ಯಾ ಅಷ್ಟು ಜೋರಾಗಿ ಕೂಗಿದ್ದರಿಂದ ಆ ಧ್ವನಿಗೆ ಹೆದರಿ ಮಗಳು ಎದ್ದು ಕುಳಿತಳು. ರಮ್ಯಾ ಹೀಗೆ ಅರಚಾಡಬಹುದು ಎಂದು ರವಿಗೆ ನಂಬಿಕೆ ಕೂಡ ಬರುತ್ತಿರಲಿಲ್ಲ. ಅವನು ವಿಚಲಿತನಾಗಿದ್ದ. ಆದರೆ ಮೌನದಿಂದಿದ್ದ. ಅದೇ ಮೌನ ಈಗ ಅವನನ್ನು ಒಳಗಿಂದೊಳಗೆ ಸುಡುತ್ತಿತ್ತು. ಅವಳಿಗೆ ಏನಾಗಿದೆ ಎನ್ನುವುದು ಅವನಿಗೆ ಗೊತ್ತಾಗುತ್ತಿರಲಿಲ್ಲ. ರಮ್ಯಾಳ ಫೋನ್ ನ್ನು ರವಿ ಎಂದೂ ಚೆಕ್ ಮಾಡಿ ನೋಡಿರಲಿಲ್ಲ. ಅವಳಿಗೆ ಸದಾ ಪೂರ್ಣ ಸ್ವಾತಂತ್ರ್ಯವಿತ್ತು. ತಪ್ಪು ಎಲ್ಲಾಗುತ್ತಿದೆ? ಅದು ಮನೆಯ ವಾತಾವರಣವನ್ನೇ ಹದಗೆಡಿಸುತ್ತಿತ್ತು. ಯೋಚನೆ ಮಾಡಿ ಮಾಡಿ ರವಿಯ ಮೆದುಳು ಗೊಂದಲದ ಗೂಡಾಗಿತ್ತು.
ಅದೊಂದು ದಿನ ರಮ್ಯಾ ಮಧ್ಯಾಹ್ನ ಊಟ ಮುಗಿಸಿ ಅಶ್ವಿನಿಯನ್ನು ಕರೆದುಕೊಂಡು ಮಲಗಲು ಹೋದಳು. ರವಿ ಲಿವಿಂಗ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ. ರಮ್ಯಾ ಸಂಜಯ್ ಗೆ ಮೆಸೇಜ್ ಮಾಡಿದಳು. ಅತ್ತ ಕಡೆಯಿಂದ ಫೋನ್ ರೊಮ್ಯಾನ್ಸ್ ಶುರುವಾಯಿತು. ಸಂಜಯ್ ನ ಉತ್ಸುಕತೆ, ತನ್ನ ಬಗ್ಗೆ ತೋರುತ್ತಿರುವ ಆಸಕ್ತಿಯ ಬಗ್ಗೆ ಅವಳಿಗೂ ಹಿತ ಎನಿಸುತ್ತಿತ್ತು. ಆದರೆ ಭೇಟಿಯಾಗುವುದೇ ಕಷ್ಟಕರವಾಗಿತ್ತು. ಅವಳಿಗೆ ಪುನಃ ರವಿಯ ಬಗ್ಗೆ ಕೋಪ ಬಂತು. ಅವನು ಇನ್ನು ಎಷ್ಟು ದಿನ ಮನೆಯಲ್ಲಿಯೇ ಕೂತಿರುತ್ತಾನೆ? ಆಫೀಸಿಗೆ ಯಾವಾಗ ಹೋಗ್ತಾನೆ ಎಂದು ಅವಳು ಯೋಚಿಸತೊಡಗಿದಳು.
ಸ್ವಲ್ಪ ಹೊತ್ತಿನಲ್ಲಿಯೇ ಅವಳು ಫೋನ್ ಬದಿಗಿಟ್ಟು ಅಡುಗೆಮನೆಗೆ ಹೋಗಿ ಪಾತ್ರೆಗಳ ಸದ್ದು ಮಾಡತೊಡಗಿದಳು. ತಾನು ಮೀಟಿಂಗ್ ನಲ್ಲಿ ಇದ್ದೇನೆ, ಸದ್ದು ಮಾಡಬೇಡ ಎಂದು ರವಿ ಸನ್ನೆಯ ಮೂಲಕ ತಿಳಿಸಿದ. ಅವಳು ಉದ್ದೇಶಪೂರ್ವಕವಾಗಿಯೇ ಅಡುಗೆಮನೆಯಲ್ಲಿ ಪಾತ್ರೆಗಳ ಕುಕ್ಕುವಿಕೆಯ ಮೂಲಕ ಸದ್ದು ಮಾಡತೊಡಗಿದಳು. ಬಳಿಕ ಟಿವಿ ಆನ್ ಮಾಡಿದಳು.
ಮೀಟಿಂಗ್ ನಿಂದ ಏಳುತ್ತಾ ರವಿ, ರಮ್ಯಾಳನ್ನು ಗದರಿದ, “ಇದೇನು ದುರ್ವತನೆ ನಿನ್ನದು? ಈಗ ಟಿ.ವಿ. ನೋಡುವ ಅವಶ್ಯಕತೆ ಇದೆಯಾ?”
“ಮತ್ತೆ ಯಾವಾಗ ನೋಡಲಿ, ಇಡೀ ದಿನ ನೀವು ಮನೆಯಲ್ಲಿರುತ್ತೀರಾ, ಸ್ವಲ್ಪ ಹೊತ್ತು ಕೂಡ ಎಲ್ಲೂ ಹೋಗಲ್ಲ. ನಾನು ನನ್ನದೇ ರೀತಿಯಲ್ಲಿ ಇರಬೇಕು ಅಂತೀನಿ. ಆದರೆ ಇರೋಕೆ ಆಗ್ತಿಲ್ಲ. ನನ್ನ ಪ್ರೈವೆಸಿ ಎನ್ನುವುದೇ ಹೊರಟುಹೋಗಿದೆ,” ಎಂದು ಹೇಳುತ್ತಾ ಅವಳು ರಿಮೋಟ್ ನ್ನು ಸೋಫಾದ ಮೇಲೆ ಜೋರಾಗಿ ಎಸೆದಳು.
ತಾನೂ ಜೋರಾಗಿ ಕೂಗಿದರೆ ಮಗಳು ಅಶ್ವಿನಿ ಪುನಃ ಎದ್ದು ಅಳತೊಡಗುತ್ತಾಳೆ, ಎಂದು ಯೋಚಿಸಿ ಅವನು ಅವಳಿಗೆ ತಿಳಿಸಿ ಹೇಳತೊಡಗಿದ, “ನೀನು ಅಷ್ಟೊಂದು ತೊಂದರೆ ಮಾಡ್ಕೊಬೇಡ. ನೀನು ಟಿ.ವಿ. ನೋಡ್ತಾ ಇರು. ನಾನು ಒಳಗಡೆ ಕುಳಿತು ಕೆಲಸ ಮಾಡ್ತಾ ಇರ್ತೀನಿ,” ಎಂದು ಹೇಳುತ್ತಾ ಅವನು ತನ್ನ ಲ್ಯಾಪ್ ಟಾಪ್ ಎತ್ತಿಕೊಂಡು ಒಳಗೆ ಹೋಗತೊಡಗಿದ.
ರಮ್ಯಾ ಕೂಡ ಒಳಗೆ ಹೋಗುತ್ತಾ, “ಇಲ್ಲ ನಾನೀಗ ವಿಶ್ರಾಂತಿ ಪಡೆಯಲು ಹೊರಟಿರುವೆ,” ಎಂದಳು.
ಆಶ್ಚರ್ಯಚಕಿತನಾಗಿ ರವಿ ತನ್ನ ತಲೆ ಹಿಡಿದುಕೊಂಡು ಕುಳಿತು, `ರಮ್ಯಾಗೆ ಇದೇನಾಗುತ್ತಿದೆ? ಇದೆಲ್ಲ ಹೇಗೆ ನಡೆಯುತ್ತೆ? ಮನೆಯಲ್ಲಿದ್ದು ಇದ್ದೂ ಅವಳಿಗೆ ಹೀಗಾಗುತ್ತಿದೆ. ಬಹುಶಃ ಎಲ್ಲರಿಗೂ ಹೀಗೆಯೇ ಆಗುತ್ತಿರಬಹುದು. ತಾನು ಅದಕ್ಕೆಲ್ಲ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧನಿದ್ದೇನೆ. ಆದರೆ, ಇದರಿಂದ ಬೇರೆ ಯಾರಿಗೂ ಸಮಸ್ಯೆಯಾಗಬಾರದು. ಮಗು ಚಿಕ್ಕದು, ಹೀಗಾಗಿ ಅವಳು ದಣಿದು ಹೋಗುತ್ತಿರಬಹುದು. ಮನೆಗೆಲಸದವಳು ಕೂಡ ಬಂದಿಲ್ಲ. ಬೆಂಗಳೂರಲ್ಲೂ ಇತ್ತೀಚೆಗೆ ಕೊರೋನಾ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಅವಳು ಇದಕ್ಕೆ ಮೊದಲು ಅದೆಷ್ಟು ಖುಷಿಯಿಂದ ಇರುತ್ತಿದ್ದಳು. ಎಲ್ಲ ಬಂದ್ ಆದಾಗ ತನ್ನ ಕೋಪವನ್ನು ತೀರಿಸಿಕೊಳ್ಳುವುದು ನನ್ನ ಮೇಲೆಯೇ, ಸಂಬಂಧಿಕರು ಫೋನ್ ಮಾಡಿದರು. ಅವರು ಹೇಳುವುದು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ಆದರೆ ಅದೇ ಈಗ ನನಗೆ ಮುಳುವಾಗುತ್ತಿದೆ ಎಂದು ಅವನಿಗೆ ಅನಿಸತೊಡಗಿತು.
ಮನುಷ್ಯ ಖುಷಿಗೊಳ್ಳುವುದು ಯಾವ ವಿಷಯದ ಬಗ್ಗೆ? ರಮ್ಯಾ ಈ ರೀತಿಯಲ್ಲಿ ತನ್ನ ಕೋಪ ಪ್ರದರ್ಶಿತಗೊಳಿಸುತ್ತಿರಬಹುದೆ? ಇದು ಅವಳಿಂದ ಆಗುತ್ತಿರುವ ತಪ್ಪಲ್ಲ. ಅವಳು ಪರಿಸ್ಥಿತಿಯ ಕೈಗೊಂಬೆ ಆಗಿದ್ದಾಳೆ. ಹೀಗಾಗಿ ಈ ರೀತಿ ವರ್ತಿಸುತ್ತಿದ್ದಾಳೆ ಎಂದು ಅವಳ ಪರವಾಗಿಯೇ ಯೋಚಿಸುತ್ತಾ ಬಳಿಕ ಅವಳ ಹತ್ತಿರ ಕುಳಿತು ಅವಳ ತಲೆ ನೇವರಿಸತೊಡಗಿದ. ಮಗಳು ಮಲಗಿದ್ದಳು. ಆಗಷ್ಟೇ ಸಂಜಯ್ ಚಾಟ್ ಶುರು ಮಾಡಿದ್ದ. ರವಿ ತನ್ನ ನಿಕಟ ಬಂದಿದ್ದರಿಂದ ಅವಳಿಗೆ ವಿಪರೀತ ಕೋಪ ಬಂದಿತು. ಅವಳು ಜೋರು ಧ್ವನಿಯಲ್ಲಿ, “ನೀವು ನನಗೆ ನೆಮ್ಮದಿಯಿಂದ ಇರಲು ಕೂಡ ಬಿಡುವುದಿಲ್ಲ ಅನಿಸುತ್ತೆ,” ಎಂದಳು.
ರವಿಯ ಮುಖ ಅವಮಾನದಿಂದ ಕಪ್ಪಗಾಗಿ ಹೋಯಿತು. ಅವನು ಏನೇನೋ ಯೋಚಿಸಿ ಅಲ್ಲಿಗೆ ಬಂದಿದ್ದ. ಅವಳ ಕೋಪದ ಮಾತುಗಳಿಂದ ವಿಚಲಿತನಾಗಿ ಅವನು ಒದ್ದೆಗಣ್ಣಿಂದ ಸೋಫಾ ಮೇಲೆ ಮಲಗಿದ.
ಅಪಾರ್ಟ್ ಮೆಂಟ್ ನ ಪ್ರತಿಯೊಂದು ಬಿಲ್ಡಿಂಗ್ ನ ಪಾರ್ಕಿಂಗ್ ಏರಿಯಾದಲ್ಲಿ ಅಷ್ಟಿಷ್ಟು ಖಾಲಿ ಜಾಗ ಇತ್ತು. ಅಲ್ಲಿ ರಾತ್ರಿ ಹೊತ್ತು ಕೆಲವರು ಸುತ್ತಾಡಲು ಬರುತ್ತಿದ್ದರು. ಸಂಜಯ್ ಕೂಡ ಪ್ರೋಗ್ರಾಂ ಹಾಕಿದ, ರಾತ್ರಿ 9 ಗಂಟೆಗೆ ಡಿನ್ನರ್ ಬಳಿಕ ಅಲ್ಲಿ ಸುತ್ತಾಡುತ್ತಾ ದೂರದಿಂದಾದರೂ ಸರಿ, ಒಬ್ಬರನ್ನೊಬ್ಬರು ನೋಡಬಹುದು. ಯಾರೂ ಇರದೇ ಇದ್ದರೆ ಮಾತೂ ಕೂಡ ಆಡಬಹುದು. ರಮ್ಯಾಳಿಗೂ ಅದೇ ಬೇಕಿತ್ತು.
ಸಂಜಯ್ ನ ಪ್ರಸ್ತಾಪ ಕೇಳಿ ಅವಳಿಗೆ ಬಹಳ ಖುಷಿಯಾಗಿತ್ತು. ಆ ದಿನ ರವಿ ಯಾವುದೇ ವಾದವಿವಾದ ಮಾಡಲಿಲ್ಲ. ಅವನೀಗ ಮೌನದ ಹೊದಿಕೆ ಹೊದ್ದುಕೊಂಡಿದ್ದ. ಪ್ರತಿ ಸಲ ರಮ್ಯಾಳ ಮೂಡ್ ನೋಡಿ ಮಾತನಾಡುವುದು ಕಷ್ಟಕರವಾಗಿತ್ತು. ಅವನೀಗ ಕೇವಲ ಅವಶ್ಯಕ ಇರುವಷ್ಟೇ, ಕೆಲಸಕ್ಕೆ ಬೇಕಾಗುವಷ್ಟು ಮಾತಾಡುತ್ತಿದ್ದ. ಮಗಳು ಅಶ್ವಿನಿ ಜೊತೆ ಆಟವಾಡುತ್ತಿದ್ದ. ಅಷ್ಟೇ ಅಲ್ಲ, ಮನೆಯ ಹಲವು ಕೆಲಸಗಳನ್ನು ಮೌನವಾಗಿಯೇ ಮಾಡಿ ಮುಗಿಸುತ್ತಿದ್ದ.
ರಮ್ಯಾ ರಾತ್ರಿ ಊಟದ ಬಳಿಕ ಏಕಾಂಗಿಯಾಗಿ ವಾಕಿಂಗ್ ಮಾಡಲು ಹೋಗುತ್ತಿದ್ದಳು. ರವಿ ಮತ್ತು ಅಶ್ವಿನಿ ಹೊರಗೆ ಹೋಗಿ ಅದೆಷ್ಟೋ ದಿನಗಳಾಗಿಹೋಗಿದ್ದವು. ರಮ್ಯಾ ಮಾತ್ರ ಊಟದ ಬಳಿಕ ಸುತ್ತಾಡಲು ಹೊರಟಾಗ, ಇದರಿಂದಾದರೂ ರಮ್ಯಾ ಖುಷಿಯಾಗಿದ್ದಾಳಲ್ಲ, ಒಳ್ಳೆಯದಾಯ್ತು ಎಂದು ಅವನು ಖುಷಿಯಾಗುತ್ತಿದ್ದ.
ಇದರರ್ಥ ಅವಳು ಮನೆಯಲ್ಲಷ್ಟೇ ದುಃಖಿತಳಂತೆ ಇರುತ್ತಾಳೆ. ಮನೆಯಲ್ಲಿ ಇದ್ದೂ, ಇದ್ದೂ ಅವಳಿಗೆ ಉಸಿರುಗಟ್ಟಿದಂತಾಗಿ ಹೋಗಿತ್ತೇನೊ, ಕೊರೋನಾ ಕಾಲದಲ್ಲಿ ಬಹಳಷ್ಟು ಜನರಿಗೆ ಹೀಗೆಯೇ ಆಗಿದೆ. ಈಗಾದರೂ ಅವಳಿಗೆ ಮನಸ್ಸಿಗೆ ಖುಷಿಯಾಯಿತಲ್ಲ ಸಾಕು, ಎಂದು ಅವನು ಯೋಚಿಸಿದ.
ಸಂಜಯ್ ನ ತಾಯಿ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವನು ರಮ್ಯಾಳಿಗೆ ಮೆಸೇಜ್ ಕಳಿಸಿದ, “ನಾವು ಇನ್ನು ಕೆಲವು ದಿನಗಳ ಕಾಲ ಭೇಟಿಯಾಗಲು ಆಗುವುದಿಲ್ಲ. ಅಮ್ಮ ಅಪ್ಪನ ಬಗ್ಗೆ ಗಮನ ಕೊಡಬೇಕಿದೆ. ಈಗ ಕೆಳಗೆ ಸಾಕಷ್ಟು ಜನ ಸುತ್ತಾಡಲು ಬರುತ್ತಿದ್ದಾರೆ. ನನಗೆಲ್ಲಿಯಾದರೂ ಇನ್ ಫೆಕ್ಷನ್ ಆದರೆ ಏನು ಗತಿ? ಅಮ್ಮನಿಗೆ ಅಪ್ಪನಿಗೆ ಏನೂ ಸಮಸ್ಯೆ ಆಗಬಾರದು. ಹೀಗಾಗಿ ನಾನು ಮನೆಯಲ್ಲಿಯೇ ಇರ್ತೀನಿ. ಮತ್ತೆ ಯಾವಾಗಲಾದರೂ ಭೇಟಿ ಆಗೋಣ.”
ರಮ್ಯಾಳಿಗೆ ಈಗ ಮತ್ತೊಮ್ಮೆ ಆಘಾತವಾಗಿತ್ತು. ಅವಳ ಮೂಡ್ ಕೆಟ್ಟು ಹೋಗಿತ್ತು. ಜೀವನದಲ್ಲಿ ಏನೇ ಉತ್ಸಾಹ ಇದ್ರೂ ಅದು ಸಂಜಯ್ ನಿಂದ ಎಂದು ಅವಳಿಗೆ ಮನವರಿಕೆ ಆಗಿತ್ತು. ರವಿ ಮನೆಯಲ್ಲಿದ್ದು ಇದ್ದೂ ತನ್ನ ಪ್ರೈವೆಸಿಯನ್ನೇ ಹಾಳುಗೆಡಹಿದ್ದಾನೆ. ರವಿಯಿಂದಾಗಿಯೇ ತಾನು ಫೋನ್ ನಲ್ಲಿ ಕೂಡ ಸಂಜಯ್ ಜೊತೆಗೆ ಮಾತನಾಡಲು ಆಗುತ್ತಿಲ್ಲ. ಈಗ ಪುನಃ ಅವಳು ರವಿಯ ಮೇಲೆ ತನ್ನ ಕೋಪದ ಮಳೆ ಸುರಿಸತೊಡಗಿದಳು. ರವಿಗೆ ಗೊಂದಲವಿತ್ತು. ತಾನೆಷ್ಟು ಮೌನವಾಗಿರಬೇಕು? ಏನು ಮಾಡಬೇಕು? ಜಗಳ ಮಾಡುವುದು ಅವನ ತರ್ಕಕ್ಕೆ ಮೀರಿದ ಸಂಗತಿಯಾಗಿತ್ತು. ಅತ್ಯಂತ ಶಾಂತ ಸ್ವಭಾವದ ವ್ಯಕ್ತಿ ಇಂತಹ ಸ್ಥಿತಿಯಲ್ಲಿ ವೌನದಿಂದಿರುವುದೇ ಸಮಸ್ಯೆಗೆ ಪರಿಹಾರ ಎಂದು ಭಾವಿಸತೊಡಗುತ್ತಾನೆ. ಅದನ್ನೇ ರವಿ ಕೂಡ ಮಾಡುತ್ತಿದ್ದ.
ಕೆಲವು ದಿನ ಹೀಗೆಯೇ ಅತ್ಯಂತ ಕೆಟ್ಟದಾಗಿ ಕಳೆದವು. ಅದೊಂದು ದಿನ ಸಂಜಯ್ ನ ಸಂದೇಶ ಬಂತು. ರಮ್ಯಾ ಬಹಳ ಒಳ್ಳೆಯ ಅವಕಾಶ ಬಂದಿದೆ. ಇಲ್ಲಿಗೆ ಸಮೀಪದಲ್ಲಿಯೇ ಇರುವ ಅಪಾರ್ಟ್ ಮೆಂಟ್ ನಲ್ಲಿ ನಮ್ಮ ಒಂದು ಫ್ಲಾಟ್ ಬಾಡಿಗೆ ಕೊಟ್ಟಿದ್ದೆ. ಆ ಬಾಡಿಗೆದಾರ ಖಾಲಿ ಮಾಡಿಕೊಂಡು ತನ್ನೂರಿಗೆ ಹೊರಟು ಹೋಗಿದ್ದಾನೆ. ಈಗ ಆ ಫ್ಲಾಟ್ ಖಾಲಿ ಇದೆ. ಅದು ಫುಲ್ ಫರ್ನೀಶ್ಡ್, ನಾವು ಅಲ್ಲಿಯೇ ಭೇಟಿಯಾಗಬಹುದು. ನಾವು ಭೇಟಿಯಾಗಿ ಅದೆಷ್ಟು ದಿನಗಳಾದವು. ನಿನ್ನನ್ನು ಕಣ್ತುಂಬ ನೋಡಲು ಅವಕಾಶವೇ ಸಿಕ್ಕಿರಲಿಲ್ಲ. ಈಗ ಬರ್ತಿಯಲ್ವಾ?”
“ಬರುವುದು ಬಹಳ ಕಷ್ಟಕರ. ಆದರೆ ಪ್ರಯತ್ನ ಮಾತ್ರ ಮಾಡ್ತೀನಿ,” ಎಂದು ರಮ್ಯಾ ಟೈಪ್ ಮಾಡಿದಳು.
ರಮ್ಯಾಳ ಗಮನ ಮನೆಯಿಂದ ಹೇಗೆ ಹೊರಗೆ ಹೋಗುವುದು ಎನ್ನುವುದರ ಮೇಲೆಯೇ ಇತ್ತು. ಯಾವುದೇ ನೆಪ ಕೆಲಸ ಮಾಡುವುದಿಲ್ಲ ಎನ್ನುವುದು ಅವಳಿಗೆ ಗೊತ್ತಾಗುತ್ತಿತ್ತು. ತನ್ನದೇನೂ ನಡೆಯುವುದಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ರವಿಯನ್ನು ತನ್ನ ಕೋಪದ ಬಲೆಯಲ್ಲಿ ಸಿಲುಕಿಸಲು ಪ್ರಯತ್ನಿಸತೊಡಗಿದಳು.
ಆ ದಿನ ರವಿ ಅಡುಗೆ ಬಡಿಸಲು ನೆರವಾಗಬೇಕೆಂದು ಯೋಚಿಸಿದ. ಆಗ ರಮ್ಯಾ, “ಇರಲಿ ಬಿಡಿ, ನಾನೇ ಮಾಡ್ತೀನಿ ಬಿಡಿ,” ಎಂದು ಹೇಳಿದಳು.
ರವಿ ಅವಳ ಪ್ರಶ್ನೆಗೆ ಏನೂ ಮಾತಾಡಲಿಲ್ಲ. ಮೌನವಾಗಿಯೇ ಪ್ಲೇಟುಗಳನ್ನು ಇಡುತ್ತಿದ್ದ. ಇತ್ತೀಚೆಗೆ ಅವನು ಹೆಚ್ಚೆಚ್ಚು ಮೌನವಾಗುತ್ತಾ ಹೊರಟಿದ್ದೆ. ಕುಕ್ಕರ್ ಬಿಸಿಯಾಗಿತ್ತು. ಅವನು ರೈಸ್ ಕುಕ್ಕರ್ ಎತ್ತಿಕೊಂಡು ಬರುತ್ತಿದ್ದ. ರಮ್ಯಾಳ ಹೃದಯದಲ್ಲಿ ಭೇಟಿ ಆಗದೇ ಇರುವ ನೋವು ಅದೆಷ್ಟು ಆಳವಾಗಿ ಬೇರೂರಿತ್ತೆಂದರೆ, ಅವಳು ಕೋಪಗೊಂಡು ಅವನಿಗೆ ಜೋರಾಗಿ ಡಿಕ್ಕಿ ಹೊಡೆದಳು. ಬಿಸಿ ಕುಕ್ಕರ್ ಅವನ ಕೈಯಿಂದ ಜಾರಿ ಕಾಲ ಮೇಲೆ ಬಿತ್ತು. ನೋವಿನಿಂದ ಅವನು ವಿಲಿವಿಲಿ ಒದ್ದಾಡಿದ.
ರಮ್ಯಾ ಅವನತ್ತ ಕೆಂಗಣ್ಣು ಬೀರಿ ಬಿಸಿ ಕುಕ್ಕರ್ ಎತ್ತಿ ಟೇಬಲ್ ಮೇಲೆ ಇಟ್ಟಳು. ತಟ್ಟೆಗೆ ಬಡಿಸಿಕೊಂಡು ಅಶ್ವಿನಿಯನ್ನು ಪಕ್ಕದ ಚೇರ್ ಮೇಲೆ ಕೂರಿಸಿ, ಮಗುವಿಗೂ ತಿನ್ನಿಸುತ್ತ, ತಾನೂ ತಿನ್ನತೊಡಗಿದಳು. ರವಿ ರಮ್ಯಾಳ ಕಡೆ ದೃಷ್ಟಿ ಹರಿಸಿದಾಗ, ಅವಳು ಯಾವುದೇ ಚಿಂತೆ ಇಲ್ಲದೆ, ರವಿಯ ನೋವನ್ನು ಲೆಕ್ಕಿಸದೆ ಊಟ ಮಾಡುವುದರಲ್ಲಿ ಮಗ್ನಳಾಗಿದ್ದಳು. ರವಿಗೆ ನೋವು ವಿಪರೀತವಾಗಿ ಅವನು ಮೌನವಾಗಿಯೇ ನೋವನ್ನು ಅನುಭವಿಸುತ್ತಿದ್ದ. ಹೊರಗೆ ಬರಲು ಸನ್ನದ್ಧವಾಗಿ ನಿಂತಿದ್ದ ಕಣ್ಣೀರನ್ನು ಅವನು ಕಷ್ಟಪಟ್ಟು ತಡೆದು ನಿಲ್ಲಿಸಿದ್ದ. ಪುರುಷನಿಗೆ ಅಳಲು ಬರುವುದಿಲ್ಲ ಎಂದು ಯಾರು ತಾನೇ ಹೇಳಲು ಸಾಧ್ಯ? ಖಂಡಿತ ಅವರೂ ಅಳಲು ಸಾಧ್ಯ.
ಪುರುಷನ ಹೃದಯದಲ್ಲಿ ಎಂತಹ ಮೌನ ಸಾಗರ ಅಲ್ಲೋಲ ಕಲ್ಲೋಲ ಸೃಷ್ಟಿಸಿರುತ್ತದೆ ಎಂದರೆ ಅದರ ಸದ್ದು ಆ ವ್ಯಕ್ತಿಯ ಹೊರತಾಗಿ ಬೇರಾರ ಅನುಭವಕ್ಕೂ ಬರುವುದಿಲ್ಲ. ಈ ಮೌನದ ಸದ್ದು ಬಹಳ ಅಪಾಯಕಾರಿಯಾಗಿರುತ್ತದೆ. ಅವನು ನಿಶ್ಚಿಂತೆಯಿಂದ ಊಟ ಮಾಡುತ್ತಿದ್ದ ರಮ್ಯಾಳನ್ನು ನೋಡುತ್ತಾ ಕುಳಿತುಬಿಟ್ಟ. ತನಗೆ ಯಾವುದಕ್ಕಾಗಿ ಈ ಶಿಕ್ಷೆ ದೊರಕುತ್ತಿದೆ ಎನ್ನುವುದು ಅವನಿಗೆ ಗೊತ್ತಾಗುತ್ತಿರಲಿಲ್ಲ.