ಒಂದು ಗುಡಿ ಮುಂದೆ ಒಂದು ಹಸು, ಆಗ ತಾನೇ ಮದುವೆಯಾಗಿದ್ದ ಒಂದು ಗಂಡು ಹೆಣ್ಣು ಕತ್ತೆಗಳು ನಿಂತಿದ್ದವು.

ಗುಡಿಯಿಂದ ಆಚೆ ಬರುತ್ತಿದ್ದ ಜನರೆಲ್ಲ ಹಸುವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಮುಂದೆ ಸಾಗುತ್ತಿದ್ದರು. ಆದರೆ ಯಾರೂ ಈ ಕತ್ತೆಗಳನ್ನು ಕ್ಯಾರೇ ಅನ್ನುತ್ತಿರಲಿಲ್ಲ.

ಹುಲ್ಲು ಮೇಯುತ್ತಿದ್ದ ಗಂಡನನ್ನು ಹೆಣ್ಣು ಕತ್ತೆ ಕೇಳಿತು, “ಯಾಕ್ರಿ, ಎಲ್ಲರೂ ಆ ಹಸುವನ್ನು ಮಾತ್ರ ಮುಟ್ಟಿ ಮುಟ್ಟಿ ಕಣ್ಣಿಗೊತ್ತಿಕೊಳ್ತಾರೆ. ನನ್ನನ್ನು ಮಾತ್ರ ಯಾರೂ ಮುಟ್ಟೊಲ್ಲ…. ಯಾಕೆ?”

ಆಗ ಗಂಡು ಕತ್ತೆ ಹೆಮ್ಮೆಯಿಂದ ಸ್ಟೈಲಾಗಿ ಹೇಳಿತು, “ಗಂಡ ಅನ್ನಿಸಿಕೊಂಡ ನಾನು ನಿನ್ನ ಪಕ್ಕದಲ್ಲೇ ಇರೋವಾಗ, ಯಾವ ನನ್ನ ಮಗನಿಗೆ ನಿನ್ನನ್ನು ಮುಟ್ಟುವ ಧೈರ್ಯ ಬಂದೀತು?”

ಗುಂಡ : ಈ ಗೂಗಲ್ ಮ್ಯಾಪ್‌ಲೊಕೇಶನ್‌ ಬಗ್ಗೆ ನನಗೊಂದು ಕೆಟ್ಟ ಕೋಪವಿದೆ.

ಸೀನ : ಅದೇನಯ್ಯ ಅಂಥದ್ದು?

ಗುಂಡ : ಎಲ್ಲದಕ್ಕೂ ಲೆಫ್ಟ್ ರೈಟ್‌ ಅಂತ ತೋರಿಸುತ್ತಲ್ಲ, ನಮ್ಮ ಬಳಿ ಲೈಸೆನ್ಸ್ ಇಲ್ಲದಿದ್ದಾಗ, ಮುಂದಿನ ರಸ್ತೇಲಿ ಟ್ರಾಫಿಕ್ ಮಾಮಾ ಇದ್ದಾನೆ, ಇಂತಿಂಥ ಗಲ್ಲಿಗಳಲ್ಲಿ ನುಗ್ಗಿ ಹೋಗಿ ಅಂತ ಯಾಕೆ ಹೇಳಬಾರದು?

ಮಿಟಕಲಾಡಿ ಮೋನಾ ಗಿಫ್ಟ್ ಕಾರ್ನರ್‌ ಗೆ ಹೋಗಿ 3 ಗಂಟೆ ಕಾಲ ತಡಕಾಡಿದರೂ ಫ್ರೆಂಡ್‌ ಮದುವೆಗಾಗಿ ಒಳ್ಳೆಯ ಗಿಫ್ಟ್ ಆರಿಸಲು ಆಗಲೇ ಇಲ್ಲ. ಅವಳಿಗೆ ಬೇರೆ ಬೇರೆ ಗಿಫ್ಟ್ ಐಟಂ ತೋರಿಸಿ ಅಲ್ಲಿದ್ದ ಸೇಲ್ಸ್ ನವರೆಲ್ಲ ರೋಸಿಹೋದರು.

ಏನೂ ಬೇಡ ಅಂತ ಮೋನಾ ಅಲ್ಲಿಂದ ಹೊರಡಲು ಸಿದ್ಧಳಾದಳು. ಇನ್ನೇನು ಹೊರ ಬರಬೇಕು ಅನ್ನುವಾಗ ಮೂಲೆಯೊಂದರಲ್ಲಿ ನಿಂತಿದ್ದ ಜೀವಂತ ಬೊಂಬೆ ಅವಳ ಗಮನ ಸೆಳೆಯಿತು.

“ರೀ, ಈ ಸ್ಮೈಲ್ ‌ಕೊಡ್ತಾ ಇರೋ ದೆವ್ವದ ರೇಟ್‌ ಎಷ್ಟು?” ಎಂದು ಆ ಬೊಂಬೆ ಕಡೆ ಕೈ ತೋರಿಸಿದಳು.

“ಸರಿಯಾಗಿ ನೋಡಿ ಮೇಡಂ, ನೀವು ಕೇಳ್ತಿರೋದು ಎದುರಿಗಿರುವ ಮೇಕಪ್‌ ಮಿರರ್‌ ನ ತಾನೇ?” ಎನ್ನುವುದೇ ಆ ಸೇಲ್ಸ್ ಮ್ಯಾನ್‌?!

ಅಂದು ಬೆಳಗಿನ ಹೊತ್ತಿಗೇ ಗಡಬಡಿಸುತ್ತಾ ವಿಶಾಲು ವಿಶ್ವನ ಬಳಿ ಬಂದು ಕೇಳಿದಳು, “ಬೇಗ…. ನನಗೆ ಇವತ್ತಿನ ಪೇಪರ್‌ಕೊಡಿ!”

“ಅಯ್ಯೋ! ಇಷ್ಟೆಲ್ಲ ಕಲಿತವಳು ನೀನು, ಇನ್ನೂ ಪೇಪರ್‌ ಗೆ ಏಕೆ ಅಂಟಿಕೊಳ್ಳಬೇಕು? ನನ್ನ ಲ್ಯಾಪ್‌ ಟಾಪ್‌ ಅಲ್ಲೇ ಟೇಬಲ್ ಮೇಲಿದೆ ನೋಡು, ಅದನ್ನು ತಗೊಂಡು ಇಪೇಪರ್‌ ನೋಡಬಾರದೇ?” ಎಂದ ವಿಶ್ವ ಬೋಧಿಸಿದ.

ವಾದ ಬೇಡವೆಂದು ವಿಶಾಲೂ ಅವನ ಲ್ಯಾಪ್‌ ಟಾಪ್‌ ತೆಗೆದುಕೊಂಡು ಹೋಗಿ ಅಡುಗೆಮನೆ ಮೂಲೆಯಲ್ಲಿದ್ದ ಜಿರಲೆ ಮೇಲೆ ರಪ್ಪೆಂದು ಬಾರಿಸಿದಳು. ಜಿರಲೆಗೆ ಏನಾಯ್ತೋ ಇಲ್ಲವೋ ಗೊತ್ತಿಲ್ಲ…. ವಿಶ್ವನ ಲ್ಯಾಪ್‌ ಟಾಪ್‌ ಅಂತೂ…. ಗೋವಿಂದ!

ಟಿಪ್ಪಣಿ : ಹೆಂಡತಿ ಆದವಳು ಏನಾದರೂ ಕೇಳಿದರೆ, ತೆಪ್ಪಗೆ ಅವಳು ಕೇಳಿದ್ದನ್ನು ತಕ್ಷಣ ಕೊಟ್ಟುಬಿಡಿ, ಜ್ಞಾನ ಹಂಚಲು ಹೊರಟರೆ ಗಂಡನಿಗೆ ಜ್ಞಾನ ಹೋದೀತು!

ಹೈಸ್ಕೂಲ್ ಟೀಚರ್‌ : ರಾಜು ನಮ್ಮ ದೇಶದಲ್ಲಿ ಅತಿ ಅಪಾಯಕಾರಿ ನದಿ ಯಾವುದು?

ರಾಜು : ಓ ಅದಾ…. ಭಾವನಾ ಇರಬೇಕು… ಅವಳ ಭಾವನೆಗಳ ಪ್ರವಾಹದಲ್ಲಿ ಇಡೀ ಸ್ಕೂಲಿನ ಪಡ್ಡೆಗಳ ದಂಡೇ ಕೊಚ್ಚಿಹೋಗುತ್ತಿದೆ!

1 ವಾರ ರಾಜು ಶಾಲೆಯಿಂದ ಸಸ್ಪೆಂಡ್‌ ಆಗಿಹೋದ.

ಉಮೇಶ : ನಿನಗೆ ಗೊತ್ತೇ? ಮದುವೆಯಾದ ಗಂಡಸಿನ ಕೊನೆಯ ಗುರು ಅಂದ್ರೆ ಅವನ ಹೆಂಡತಿಯೇ!

ಸುರೇಶ : ನನಗಂತೂ ಮದುವೆ ಆಗಿಲ್ಲ, ಈ ಕುರಿತಾಗಿ ನೀನೇ ವಿವರಿಸುವವನಾಗು.

ಉಮೇಶ : ಯಾಕಂದ್ರೆ…. ಮದುವೆ ಆದ ಮೇಲೆ ಅವನಿಗೆ ಬೇರೆ ಯಾವುದೇ ಜ್ಞಾನದ ಅಗತ್ಯ ಇಲ್ಲ, ಅದುವರೆಗೂ ಅವನು ಕಲಿತಿರುವ ಜ್ಞಾನ ಕೆಲಸಕ್ಕೂ ಬರಲ್ಲ!

ಮಹೇಶ : ಏನಯ್ಯ ಗಿರೀಶ, ನಿನ್ನ ಮಗ ಸರಿಯಾಗಿ ಶಾಲೆಗೆ ಹೋಗದೆ ಪೋಲಿ ಅಲೀತಿರ್ತಾನೆ ಅಂತ ಎಲ್ಲರೂ ಹೇಳ್ತಾರೆ. ಸ್ವಲ್ಪ ಖಂಡಿಸಿ ಬೆಳೆಸಬಾರದೇ?

ಗಿರೀಶ : ಇರು, ಇವತ್ತೇ ಈ ವಿಷಯ ಇತ್ಯರ್ಥ ಆಗಿಹೋಗಲಿ.

ಎಲ್ಲೋ ಆಡುತ್ತಿದ್ದ ಮಗನನ್ನು ಗಿರೀಶ ಅಂತೂ ಹುಡುಕಿ ಮನೆಗೆ ಎಳೆತಂದ. ಮಹೇಶ ಏನಾಗುತ್ತದೋ ನೋಡೇಬಿಡೋಣ ಎಂದು ಕಾಯತೊಡಗಿದ.

ಗಿರೀಶ : ಲೋ ಮಂಜ, ಎಲ್ಲಿ ಲೆಕ್ಕ ಹೇಳು ನೋಡೋಣ…. 5ರ ನಂತರ ಏನು ಬರುತ್ತದೆ?

ಮಂಜ : 6 ಮತ್ತು 7

ಗಿರೀಶ : ನೋಡಿದ್ಯಾ…. ಸುಮ್ ಸುಮ್ನೆ ನನ್ನ ಮಗನ ಬಗ್ಗೆ ದೂರು ಹೇಳಲು ಬಂದಿರುವೆ.

ಮಹೇಶ : ಇರಲಿ, ಇರಲಿ…. ಪೂರ್ತಿ ವಿಚಾರಿಸಿ ತಿಳಿದುಕೋ.

ಗಿರೀಶ : ಶಭಾಷ್‌ ಮಂಜ, ಜಾಣ ಅಂದ್ರೆ ನೀನೇ ಅದಿರಲಿ, 6-7ರ ನಂತರ ಏನು ಬರುತ್ತದೆ?

ಮಂಜ : 8, 9 ಮತ್ತು 10.

ಗಿರೀಶ : ನನಗಾಗದವರು ನನ್ನ ಹೊಟ್ಟೆ ಉರಿಸಲೆಂದೇ ದೂರು ತಂದಿದ್ದಾರೆ, ಇರಲಿ ವಿಚಾರಣೆ ಮುಗಿಸಿಯೇ ಬಿಡ್ತೀನಿ….

ಗಿರೀಶ : ಮಗ, ನೀನು ಹೇಳೋ… ಅದಾದ ಮೇಲೆ ಏನು ಬರುತ್ತೆ?

ಮಂಜ : ಅದಾದ ಮೇಲೆ…. ಹ್ಞಾಂ ನೆನಪಾಯ್ತು! ಗುಲಾಮ, ರಾಣಿ, ರಾಜ….. ಅದೂ ಬಂದುಬಿಟ್ರೆ ಶೋ ಮಾಡೋದೆ ಅಪ್ಪ!

ಗಿರೀಶ : ಅಯ್ಯೋ ಬಡ್ಡೀ ಮಗನೇ….

ಗಿರೀಶನಿಂದ ಮಂಜನನ್ನು ಬಿಡಿಸಲು ಮಹೇಶನೇ ಧಾವಿಸಬೇಕಾಯ್ತು.

ಗರ್ಲ್ ಫ್ರೆಂಡ್‌ : ಹಾಯ್‌ ಡಾರ್ಲಿಂಗ್‌…. ಎಲ್ಲಿದ್ದೀಯಾ?

ಬಾಯ್ಫ್ರೆಂಡ್‌ : ನಾನೀಗ ಬ್ಯಾಂಕ್‌ ನಲ್ಲಿದ್ದೀನಿ, ಆಮೇಲೆ ಫೋನ್‌ ಮಾಡ್ತೀನಿ ಇರು.

ಗರ್ಲ್ ಫ್ರೆಂಡ್‌ : ಡಿಯರ್‌, ನನಗಾಗಿ ಒಂದು ಹೆಲ್ಪ್ ಮಾಡ್ತೀಯಾ? ಹಾಗೇ ನನಗಾಗಿ ತುಸು ಜಾಸ್ತಿ ಡ್ರಾ ಮಾಡಿಕೊಂಡು ಕೇವಲ 8 ಸಾವಿರದ ಒಂದು ಹೊಸ ಮೊಬೈಲ್‌, 5 ಸಾವಿರದ ಒಂದು ಹೊಸ ಡ್ರೆಸ್‌ ತೆಗೆದುಕೊಂಡು ಬಂದುಬಿಡು…. ಆಯ್ತಾ… ಲವ್ ಯೂ ಡಾ!

ಬಾಯ್ಫ್ರೆಂಡ್‌ : ಅಯ್ಯೋ ಹಾಳಾದವಳೆ…. ನಾನೀಗ ನಿಂತಿರೋದು ಬ್ಲಡ್‌ ಬ್ಯಾಂಕಿನಲ್ಲಿ….. 1 ಎಕ್ಸ್ ಟ್ರಾ ಬಾಟಲ್ ತಂದುಬಿಡ್ತೀನಿ, ಕುಡೀತಿಯಂತೆ ಬಿಡು!

ವೀಣಾ : ನಿನಗೆ ಗೊತ್ತೇ? ಪ್ರೇಮಿಗಳು ಒಂದು ವಿಷಯದಲ್ಲಿ ಬಹಳ ಹುಷಾರಾಗಿರಬೇಕಂತೆ.

ವಾಣಿ : ಯಾವ ವಿಷಯದ ಬಗ್ಗೆ ಹೇಳ್ತಿದ್ದೀಯಾ?

ವೀಣಾ : ಪರಸ್ಪರ ಫೋನಿನಲ್ಲೇ ಮಾತನಾಡುತ್ತಿದ್ದರೂ ಸರಿ, ಅಕ್ಕಪಕ್ಕದವರು ತಮ್ಮನ್ನು ಗಮನಿಸುತ್ತಿಲ್ಲ ತಾನೇ ಅಂತ ನೋಡ್ತಾನೇ ಇರಬೇಕು.

ವಾಣಿ : ಹಾಗೂ ಒಂದು ವೇಳೆ ಯಾರೋ ನೋಡಿಬಿಟ್ರಪ್ಪಾ…..

ವೀಣಾ : ಯಾವ ಜಾಗಲೇ ಇರಲಿ, ಉಸಿರು ಬಿಗಿಹಿಡಿದು ಸತ್ತಂತೆ ಅಲ್ಲೇ ಬಿದ್ದುಕೊಳ್ಳಬೇಕು. ಎಂಥ ಕ್ರೈಂ ಬ್ರ್ಯಾಂಚಿನವರು ಬಂದರೂ ಹೆಣ ಅಂದುಕೊಳ್ಳಬೇಕಂತೆ!

ಗಿರೀಶ : ನಮ್ಮ ಭಾರತೀಯ ಗಂಡಂದಿರಿಗೂ ವಿದೇಶಿ ಗಂಡಂದಿರಿಗೂ ಒಂದು ವಿಷಯದಲ್ಲಂತೂ ಖಂಡಿತಾ ವ್ಯತ್ಯಾಸವಿದೆ.

ಸುರೇಶ : ಅದೇನಪ್ಪ ಅಂಥಾದ್ದು?

ಗಿರೀಶ : ಮದುವೆ ಆದ ಮೇವೆ ಯಾರೂ ಹೇಳದಿದ್ದರೂ ಒಂದು ವಿಷಯದ ಬಗ್ಗೆ ಅವರಿಗೆ ತಂತಾನೇ ಅರಿವು ಮೂಡಿಬಿಡುತ್ತದೆ.

ಸುರೇಶ : ಅದೇನಪ್ಪ ಅಂಥಾದ್ದು?

ಗಿರೀಶ : ಕುಕ್ಕರ್‌ 3 ಸೀಟಿ ಕೂಗಿದ ನಂತರ ಎದ್ದು ಹೋಗಿ ಸ್ಟವ್ ಆರಿಸಬೇಕು ಅಂತ!

ಗುಂಡ ಹೆಣ್ಣು ನೋಡಲು ಒಬ್ಬನೇ ಹೊರಟ.

ಗುಂಡ : ನನಗೆ ವರದಕ್ಷಿಣೆ ಬೇಡ, ನಿಮ್ಮ ಮಗಳನ್ನು ಮದುವೆ ಆಗಲು ರೆಡಿ!

ಕನ್ಯಾಪಿತೃ : ಆದರೆ…. ನಮ್ಮ ಮಗಳು ಇನ್ನೂ ಓದುತ್ತಿದ್ದಾಳೆ.

ಗುಂಡ : ಹೌದಾ? ಹಾಗಾದರೆ ಇನ್ನೂ 1 ಗಂಟೆ ಕಾಲ ಬಿಟ್ಟುಕೊಂಡೇ ಬರ್ತೀನಿ.

ಹೊಸ ಸೊಸೆ : ಅತ್ತೆ, ನಿನ್ನಿ ರಾತ್ರಿ ಅವರ ಜೊತೆ ನನ್ನ ಘನಘೋರ ಜಗಳ ಆಗಿಹೋಯಿತು.

ಹಳೆ ಅತ್ತೆ : ಇದೆಲ್ಲ ಮಾಮೂಲಿ ಬಿಡಮ್ಮ, ಇದು ಎಲ್ಲಾ ಗಂಡಹೆಂಡಿರ ಮಧ್ಯೆ ಇದ್ದದ್ದೇ….

ಸೊಸೆ : ಅದು ನನಗೂ ಗೊತ್ತಿದೆ ಬಿಡಿ, ಈಗ ಅವರ ಹೆಣವನ್ನು ಎಲ್ಲಿಡಲಿ ಅಂತ ……?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ