ನಿಮಗೆ ಒಂದು ವಿಷಯ ಗೊತ್ತೆ? ನಮ್ಮ ಇಡೀ ದೇಶದಲ್ಲಿ ಕೇವಲ ಗುಜರಾತ್, ಮೇಘಾಲಯದ 2 ರಾಜ್ಯಗಳಲ್ಲಿ ಮಾತ್ರ 65% ಮಹಿಳೆಯರು ಪೀರಿಯಡ್ಸ್ ಪ್ರಾಡಕ್ಟ್ಸ್ ನ್ನು ಬಳಸುತ್ತಾರೆ. ಅಂದರೆ ಉಳಿದ ರಾಜ್ಯಗಳಲ್ಲಿ ಈ ಅಂಕಿ ಅಂಶಗಳು ಬಹಳ ಕಡಿಮೆ. ಎಷ್ಟೇ ಆಧುನಿಕ ಮಾಹಿತಿ, ಅವಕಾಶಗಳಿದ್ದರೂ ಇಡೀ ದೇಶದ ಮುಕ್ಕಾಲು ಭಾಗ ಸುಮಾರು 82% ಮಹಿಳೆಯರು ಸ್ಯಾನಿಟರಿ ನ್ಯಾಪ್ ಕಿನ್ ಬಳಸುವುದೇ ಇಲ್ಲ. ಇಂದಿಗೂ ಸಹ ಮುಟ್ಟಿನ ದಿನಗಳಲ್ಲಿ ಹಳೆಯ ಕಾಲದ ಪದ್ಧತಿಗಳನ್ನೇ ಅನುಸರಿಸುತ್ತಾರೆ. ಇದಕ್ಕೆ ಪ್ರಮುಖ ಕಾರಣ ಹೆಣ್ಣುಮಕ್ಕಳು ಈ ವಿಷಯದ ಕುರಿತಾಗಿ ಮಾತನಾಡಲು ಬಹಳ ಸಂಕೋಚಪಡುತ್ತಾರೆ. ಹಾಗಾಗಿ ಅವರು ಸೋಂಕು ಮತ್ತಿತರ ತೊಂದರೆಗಳಿಗೆ ಒಳಗಾಗುತ್ತಾರೆ, ಇದು ಮುಂದಕ್ಕೆ ಬಂಜೆತನ ಮತ್ತು ಕ್ಯಾನ್ಸರ್ ನಂಥ ಅಪಾಯಗಳಿಗೂ ದಾರಿ ಮಾಡಿಕೊಡುತ್ತದೆ. ಹೀಗಾಗಿ ಇಂದಿನ ಹೆಣ್ಣುಮಕ್ಕಳು ಈ ವಿಷಯದ ಕುರಿತಾಗಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಅಂತಹ ಸಂದರ್ಭದಲ್ಲಿ ಮಹಿಳೆಯರು ಪೀರಿಯಡ್ ಪ್ರಾಡಕ್ಟ್ಸ್ ಬಳಸಿ ತಮ್ಮ ಆರೋಗ್ಯ ಮತ್ತು ಭವಿಷ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.
ಅಂಕಿಅಂಶಗಳು ಏನು ಹೇಳುತ್ತವೆ?
ರಾಷ್ಟ್ರೀಯ ಕುಟುಂಬ ಸ್ವಾಸ್ಥ್ಯ ಸಂರಕ್ಷಣೆಯ ಕುರಿತು ಹೇಳುವುದಾದರೆ, ಹೈಜೀನ್ ಕಡೆ ಗಮನಹರಿಸದ ಅತಿ ಹಿಂದುಳಿದ ರಾಜ್ಯವೆಂದರೆ ಬಿಹಾರ್. ಇಲ್ಲಿ ಕೇವಲ 59% ಮಹಿಳೆಯರು ಮಾತ್ರ ಮುಟ್ಟಿನ ದಿನಗಳಲ್ಲಿ ಸುರಕ್ಷತೆ ವಹಿಸುತ್ತಾರೆ. ಇಂದಿಗೂ ಸಹ ಇಡೀ ದೇಶದಲ್ಲಿ 15-24 ವರ್ಷದ ಸುಮಾರು 50% ಮಹಿಳೆಯರು ಈ ದಿನಗಳಲ್ಲಿ ಬಟ್ಟೆಯನ್ನೇ ಬಳಸುತ್ತಾರೆ. ಪ್ರತಿ ವರ್ಷ ವಿಶ್ವವಿಡೀ ಲಕ್ಷಾಂತರ ಮಹಿಳೆಯರು ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸದ ಕಾರಣ, ಸೋಂಕಿಗೆ ಸಿಲುಕಿಗೆ ಸಾವಿಗೀಡಾಗುತ್ತಾರೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು, ಆದರೂ ಇದು ನಿಜ.
ಸರ್ವೈಕಲ್ ಕ್ಯಾನ್ಸರ್ ಗೆ ಕಾರಣ
ಈ ಸಂದರ್ಭದಲ್ಲಿ ಹೆಂಗಸರು ಕೇವಲ ಬಟ್ಟೆಯನ್ನಷ್ಟೇ ಅತಿ ಹೆಚ್ಚಾಗಿ ಬಳಸುವುದರಿಂದ ಅವರ ಯೋನಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಇದರ ನೇರ ಪರಿಣಾಮ ಸರ್ವೈಕಲ್ ಕ್ಯಾನ್ಸರ್ ಗೆ ಸಂಬಂಧಿಸಿದೆ. ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಮಹಿಳೆಯರು ಗರ್ಭಕೋಶ ಮತ್ತು ಸರ್ವೈಕಲ್ ಕ್ಯಾನ್ಸರ್ ಗೆ ತುತ್ತಾಗಿ ಸಾಯುತ್ತಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆ ಹಳ್ಳಿಗಾಡಿನ ಪ್ರದೇಶಗಳಿಗೆ ಸೇರಿವೆ. ಈ ಹೆಂಗಸರು ಈ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಆರೋಗ್ಯದ ಕಡೆ ಸ್ವಲ್ಪ ಗಮನಹರಿಸುವುದಿಲ್ಲ. ಈ ಕ್ಯಾನ್ಸರ್ ನೇರವಾಗಿ ಹೆಂಗಸರ ಜನನಾಂಗಗಳಿಗೆ ಸಂಬಂಧಿಸಿದ್ದು, ಇಂಥ ಕ್ಯಾನ್ಸರ್ ಗೆ ದಾರಿ ಮಾಡುತ್ತದೆ. ಅದು ಸರ್ವಿಕಲ್ಸ್ ನ ಜೀವಕೋಶಗಳಿಗೆ ಪ್ರಭಾವ ಬೀರಿ ಕ್ಯಾನ್ಸರ್ ಗೆ ತಿರುಗುತ್ತದೆ. ಹೀಗಾಗಿ ಹೆಂಗಸರು ಈ ದಿನಗಳಲ್ಲಿ ತಮ್ಮ ಆರೋಗ್ಯದ ಕಡೆ ಎಷ್ಟು ಕಾಳಜಿ ವಹಿಸಿದರೂ ಸಾಲದು, ಇನ್ನೂ ಹೆಚ್ಚು ಜಾಗೃತರಾಗಬೇಕು.
ಅಗ್ಗದ ನ್ಯಾಪ್ ಕಿನ್ ಸಮಸ್ಯೆಗೆ ಮೂಲ
ಎಲ್ಲಾ ಹೆಂಗಸರು ಚೆನ್ನಾಗಿ ತಿಳಿದಿರಬೇಕಾದ ವಿಷಯವೆಂದರೆ ತಮ್ಮ ಕುಟುಂಬದ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕಾದುದು ಮುಖ್ಯ. ಕುಟುಂಬದವರ ಊಟ ತಿಂಡಿ ವಿಚಾರ ಸಹ. ಈ ಸುಳಿಗೆ ಸಿಲುಕಿ ಹೆಂಗಸರು ತಮ್ಮ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ. ಹಾಗಾಗಿ ಅವರಲ್ಲಿ ಹೆಚ್ಚಿನ ಕುಂದುಕೊರತೆಗಳು ಮೈಗೂಡುತ್ತವೆ. ಜೊತೆಗೆ ಹಣ ಉಳಿಸುವ ವಿಷಯದಲ್ಲಿ ಸಿಲುಕಿ ಅತಿ ಅಗ್ಗದ ನ್ಯಾಪ್ ಕಿನ್ ಅಥವಾ ಮನೆಯಲ್ಲೇ ಇರುವ ಹಳೆ ಬಟ್ಟೆಗಳನ್ನು ಬಳಸುತ್ತಾರೆ. ಅಗ್ಗದ ನ್ಯಾಪ್ ಕಿನ್ ಆ ಕ್ಷಣಕ್ಕೆ ಕಡಿಮೆ ಬೆಲೆಯಾಗಿ ಹಿತಕರ ಎನಿಸಿದರೂ ಇದರಲ್ಲಿ ಬ್ಲೀಚಿಂಗ್ ಸಹಿತ ಅನೇಕ ಅಪಾಯಕಾರಿ ಕೆಮಿಕಲ್ಸ್ ಬಳಸಲ್ಪಟ್ಟಿರುತ್ತದೆ. ಹೀಗಾಗಿ ಇದು ಓವೇರಿಯನ್ ಕ್ಯಾನ್ಸರ್ ಮತ್ತು ಬಂಜೆತನಕ್ಕೂ ದಾರಿ ಆಗುತ್ತದೆ. ಹೆಚ್ಚಿನ ಪ್ರಮಾಣದ ಹೆಂಗಸರು ನಾನ್ ಆರ್ಗ್ಯಾನಿಕ್‌ಸ್ಯಾನಿಟರಿ ಪ್ಯಾಡ್ಸ್ ಬಳಸುತ್ತಾರೆ, ಇದರ ಒಂದು ಪ್ಯಾಡ್ ನಮಗೆ 4 ಪ್ಲಾಸ್ಟಿಕ್ ಬ್ಯಾಗಿಗಾಗುವಷ್ಟು ತುಂಬಿರುತ್ತದೆ. ಹೀಗಿರುವಾಗ ಇದು ಹೆಂಗಸರ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ಊಹಿಸಬಹುದು.
ಹೈಜೀನ್ ಗೆ ಸದಾ ಪ್ರಾಶಸ್ತ್ಯ ನೀಡಿ
ಪ್ಯಾಡಸ್ ಬಳಸುವುದರಲ್ಲಿ ಜಿಪುಣತನ ಬೇಡ : ನೀವು ಪ್ರತಿ ತಿಂಗಳೂ ಪೀರಿಯಡ್ಸ್ ಸಂದರ್ಭದಲ್ಲಿ ಹಳೇ ಬಟ್ಟೆ ಬಳಸುತ್ತಿರುವಿರಾದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಇದರಲ್ಲಿ ಲಕ್ಷಾಂತರ ಸೂಕ್ಷ್ಮಾಣುಗಳಿದ್ದು ನಿಮ್ಮ ಗರ್ಭಧಾರಣೆಯ ಆರೋಗ್ಯಕ್ಕೆ ಮಹಾಮಾರಿ ಆದೀತು. ಆದ್ದರಿಂದ ಈ ಸಂದರ್ಭದಲ್ಲಿ ಸದಾ ಉತ್ತಮ ಗುಣಮಟ್ಟದ ಆರ್ಗ್ಯಾನಿಕ್ ಪ್ಯಾಡ್ಸ್ ನ್ನೇ ಬಳಸಬೇಕು. ಏಕೆಂದರೆ ಇವು ನೈಸರ್ಗಿಕವಾಗಿದ್ದು, ದ್ರವ ಹೀರುವ ಹೆಚ್ಚಿನ ಸಾಮರ್ಥ್ಯ ಹೊಂದಿರುತ್ತವೆ. ಜೊತೆಗೆ ಇವು ಅಪ್ಪಟ ನೈಸರ್ಗಿಕ ಘಟಕಗಳಿಂದಲೇ ತಯಾರಾಗಿರುತ್ತವೆ. ಇದರಿಂದ ಮೂತ್ರದ ಸೋಂಕು, ಕ್ಯಾನ್ಸರ್ ನಂಥ ಅಪಾಯಕಾರಿ ರೋಗಗಳ ಸಂಭವ ಬಹಳ ಕಡಿಮೆ. ಇವು ಹೆಚ್ಚು ಅನುಕೂಲಕರ, ಜೊತೆಗೆ ವಜೈನಾದ ಆರೋಗ್ಯದ ಕಡೆಗೂ ಹೆಚ್ಚಿನ ರಕ್ಷಣೆ ನೀಡುತ್ತದೆ. ನೀವು ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ನಿಮ್ಮ ಪೀರಿಯಡ್ಸ್ ಸ್ರಾವ ಹೆಚ್ಚಾಗಿರದಿದ್ದರೂ, ಆಗಲೂ ಸಹ 2-3 ಗಂಟೆಗಳಿಗೊಮ್ಮೆ ಪ್ಯಾಡ್ಸ್ ಬದಲಿಸುತ್ತಿರಬೇಕು. ಇದರಿಂದ ಯಾವುದೇ ತರಹದ ಇನ್ ಫೆಕ್ಷನ್ ಆಗುವ ಸಂಭವವಿಲ್ಲ.
ಪ್ರತಿ ದಿನ ಸ್ನಾನ ಮಾಡಿ : ಪೀರಿಯಡ್ಸ್ ಸಂದರ್ಭದಲ್ಲಿ ಹೆಂಗಸರ ದೇಹದಲ್ಲಿ ಬಗಬಗೆಯ ಬದಲಾವಣೆ ಆಗುತ್ತಿರುತ್ತದೆ. ಒಮ್ಮೆ ಹೊಟ್ಟೆ ನೋವು, ಮತ್ತೊಮ್ಮೆ ಸೊಂಟದ ನೋವು ಕಾಡಬಹುದು. ಹೀಗಾಗಿ ಹೆಂಗಸರು ಈ ಸಮಸ್ಯೆಗಳ ಸುಳಿಯ ನಡುವೆ ಸ್ನಾನದ ಗೊಡವೆ ಬೇಡ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಅದು ಮುಂದೆ ಯೋನಿಯ ಸೋಂಕಿಗೆ ಕಾರಣವಾದೀತು. ಹೀಗಾಗಿ ಹೈಜೀನ್ ಗೆ ಪ್ರಾಥಮಿಕತೆ ನೀಡಿ ಪ್ರತಿ ದಿನ ತಪ್ಪದೆ ಸ್ನಾನ ಮಾಡಿ. ಆಗ ನೀವು ಸೋಂಕಿನಿಂದ ಸಂಪೂರ್ಣ ದೂರವಾಗುವಿರಿ.
ಟ್ಯಾಂಪೂನ್ಸ್ ಸಹ ಬೆಸ್ಟ್ ಆಯ್ಕೆ : ನಿಮಗೆ ಅಧಿಕ ಸ್ರಾವವಿದ್ದರೆ ಅಥವಾ ಮತ್ತೆ ಮತ್ತೆ ಪ್ಯಾಡ್ ಬದಲಿಸಬೇಕಾದ ಅನಿವಾರ್ಯತೆ ಇದ್ದರೆ, ಅದರ ಬದಲಿಗೆ ಟ್ಯಾಂಪೂನ್ಸ್ ಹೆಚ್ಚು ಸೇಫ್‌ಬೆಸ್ಟ್ ಆಯ್ಕೆಯಾಗಿದೆ. ಇದನ್ನು ಆರಾಮವಾಗಿ ಧರಿಸಿ ವಜೈನಾದೊಳಗೆ ಇನ್ ಸರ್ಟ್ ಮಾಡಬಹುದು. ಇದು ಈಝಿ ಟು ಯೂಸ್ ಜೊತೆಗೆ ಹೆಚ್ಚು ಆರಾಮದಾಯಕ. ಗಮನಿಸಬೇಕಾದ ಒಂದು ವಿಷಯವೆಂದರೆ 8 ಗಂಟೆಗಳಿಗೂ ಹೆಚ್ಚು ಹೊತ್ತು ಇದನ್ನು ಬಳಸಬಾರದು, ಇಲ್ಲದಿದ್ದರೆ ಸೋಂಕಿಗೆ ದಾರಿ ಆದೀತು.
ಯೋನಿಯನ್ನು ಸದಾ ಶುಚಿಯಾಗಿಡಿ : ಸೋಂಕಿನಿಂದ ಪಾರಾಗಲು ನಿಮ್ಮ ಯೋನಿಯನ್ನು ಸದಾ ಬೆಚ್ಚಗಿನ ಸ್ವಚ್ಛ ನೀರಿನಿಂದ ತೊಳೆಯುತ್ತಿರಿ. ಏಕೆಂದರೆ ಈ ಸಂದರ್ಭದಲ್ಲಿ ಯೋನಿಯಿಂದ ಒಸರುವ ರಕ್ತದ ಕಾರಣವೇ ಸೋಂಕಿಗೆ ಮೂಲವಾಗುತ್ತದೆ, ಅದನ್ನು ಸದಾ ಶುಚಿಯಾಗಿ ಇಡದಿದ್ದರೆ, ಸೋಂಕಿನ ಭಯ ತಪ್ಪಿದ್ದಲ್ಲ. ಸ್ವಚ್ಛತೆ ಶುಭ್ರತೆಯ ಅಭಾವದಲ್ಲಿ ಯೋನಿಯಿಂದ ದುರ್ವಾಸನೆಯೂ ಬರುತ್ತದೆ. ಇದನ್ನು ತಪ್ಪಿಸಲು ಯೋೕನಿಗೆ ಬಳಸುವ ಹೆಲ್ತ್ ವಾಶ್ ಸಹ ಉಪಯೋಗಿಸಿ.
ಕಾಟನ್ ಪ್ಯಾಂಟಿ ಧರಿಸಿರಿ : ಈ ದಿನಗಳಲ್ಲಿ ನಿಮ್ಮ ಪ್ಯಾಂಟಿಯ ಆಯ್ಕೆ ಸದಾ ಸ್ವಚ್ಛ ಶುಭ್ರ ಕಾಟನ್ ನದೇ ಆಗಿರಲಿ. ಏಕೆಂದರೆ ಒಂದೇ ಕೊಳಕು ಪ್ಯಾಂಟಿಯನ್ನು ಇಡೀ ದಿನ ಧರಿಸಿದ್ದರೆ ಇದರಿಂದ ಸೋಂಕಿನ ಹಿಂಸೆ ತಪ್ಪಿದ್ದಲ್ಲ. ಜೊತೆಗೆ ಕಾಟನ್ ಬದಲಿಗೆ ಬೇರಿ ಫ್ಯಾಬ್ರಿಕ್ ಬಳಸಿದರೂ ಲಾಭವಿಲ್ಲ. ಆದ್ದರಿಂದ ಆರಾಮಕ್ಕಾಗಿ ಸದಾ ಸ್ಕಿನ್ ಫ್ರೆಂಡ್ಲಿ ಆಗಿರುವ ಕಾಟನ್ ಪ್ಯಾಂಟಿಯೇ ಸರಿ.
– ಪಾರ್ವತಿ ಭಟ್