– ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್‌ವುಡ್‌ನ ʼಗಾಳಿಪಟ 2ʼ, ‘ಮಾರ್ಟಿನ್’ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ವೈಭವಿ ಶಾಂಡಿಲ್ಯ (Vaibhavi Shandilya) ಇದೀಗ ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೊವಚನ್ನು ಅವರು ಏಕಾಏಕಿ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಫೆ. 21ರಂದು ಕೊಲ್ಲಾಪುರದಲ್ಲಿ ಸ್ನೇಹಿತರು ಮತ್ತು ಕುಟುಂಬದವರ ಭಾಗಿತ್ವದಲ್ಲಿ ನಟಿ ವೈಭವಿ ಮದುವೆಯಾಗಿದ್ದಾರೆ. ಮೂಲತಃ ಮುಂಬೈ ಮೂಲದ ಸಿನಿಮಾಟೋಗ್ರಾಫರ್ ಹಾಗೂ ನಿರ್ದೇಶಕ ಹರ್ಷವರ್ಧನ್ ಜೆ. ಪಾಟೀಲ್ ಜತೆ ಅವರು ಸಪ್ತಪದಿ ತುಳಿದಿದ್ದಾರೆ.
ವೈಭವಿ ತಮ್ಮ ಮದುವೆಯ ಫೋಟೊವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ”ಸ್ನೇಹಿತರು, ಕುಟುಂಬಸ್ಥರ ಸಾಕ್ಷಿಯಾಗಿ ನಾನು ಹಾಗೂ ಹರ್ಷವರ್ಧನ್ ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ. ಹರ್ಷವರ್ಧನ್ ಮತ್ತು ನನ್ನ ಈ ಪ್ರೀತಿ, ಒಗ್ಗಟ್ಟಿನ ಈ ಸುಂದರ ಪ್ರಯಾಣಕ್ಕಾಗಿ ಸಹಕರಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ದನ್ಯವಾದʼʼ ಎಂದು ಅವರು ಬರೆದುಕೊಂಡಿದ್ದಾರೆ.
ವೈಭವಿ ಶಾಂಡಿಲ್ಯ ಮಹಾರಾಷ್ಟ್ರದವರಾಗಿದ್ದು, ಅಪ್ಪಟ ಮರಾಠಿ ಹುಡುಗಿ. ವೈಭವಿ ಮತ್ತು ಹರ್ಷವರ್ಧನ ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದಾರೆ. ಕೆಲವೇ ಕೆಲ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ ಅವರ ಫೋಟೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.
2015ರಲ್ಲಿ ಮರಾಠಿ ಸಿನಿಮಾ ʼಜನಿವಾʼದಲ್ಲಿ ನಟಿಸುವ ಮೂಲಕ ವೈಭವಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ʼಸಕ್ಕ ಪೊಡು ಪೊಡು ರಾಜʼ ಚಿತ್ರದಲ್ಲಿ ನಟಿಸಿ ಆ ಬಳಿಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಇವರ ಮೊದಲ ಕನ್ನಡ ಚಿತ್ರ ʼರಾಜ್ ವಿಷ್ಣುʼ. ನಂತರ ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‌ನ ʼಗಾಳಿಪಟ 2ʼ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನೆ ಮಾತಾದರು. ಕಳೆದ ವರ್ಷ ತೆರೆಕಂಡ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.