ಕೇವಲ ಪ್ರೀತಿ ಪ್ರೇಮದಿಂದ ಎಲ್ಲವನ್ನೂ ಗೆಲ್ಲಬಹುದೇ? ಪ್ರೀತಿ ವಾತ್ಸಲ್ಯಗಳಿಂದ ಅತಿ ಕಠಿಣ ಮನಸ್ಕ ವ್ಯಕ್ತಿಯನ್ನೂ ಮುಗುಳ್ನಗುವ ಬೀರಿ ಆತ್ಮೀಯನಾಗಿಸಬಹುದೇ? ಇಂಥದೇ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಿದೆ ಝೀ ಟಿವಿಯ ಹೊಸ ಶೋ `ಪ್ಯಾರ್‌ ಕಾ ಪಹ್ಲಾ ನಾಮ್ ರಾಧಾ ಮೋಹನ್‌.’ ಇದೊಂದು ಕಾಲ್ಪನಿಕ ಕಥೆ ಆಧಾರಿತ ಧಾರಾವಾಹಿ. ಇದರಲ್ಲಿ ನಟಿ ನಿಹಾರಿಕಾ ರಾಯ್‌ ರಾಧಾಳ ಮುಖ್ಯ ಪಾತ್ರದಲ್ಲಿದ್ದಾಳೆ. ಇವಳು ತನ್ನ ಪ್ರೀತಿ ಪ್ರೇಮಗಳಿಂದ ಕಲ್ಲಿನಂತೆ ಕಠೋರ ಮನಸ್ಕನಾದ ಮೋಹನ್‌ನನ್ನು (ಶಬೀರ್‌ ಅಹ್ಲುವಾಲಿಯಾ) ಸ್ವಭಾವತಃ ಬದಲಾಯಿಸಿ ಅವನನ್ನು ಮೃದು ಮನಸ್ಸಿನವನನ್ನಾಗಿ ಬದಲಾಯಿಸುವಲ್ಲಿ ಯಶಸ್ವಿಯಾಗುತ್ತಾಳೆ. ಇಡೀ ಧಾರಾವಾಹಿಯನ್ನು ಪ್ರೀತಿಗೆ ಹೆಸರಾದ ಲಖ್ನೌ ನಗರದಲ್ಲಿ ವೈಭವದಿಂದ ಚಿತ್ರೀಕರಿಸಲಾಗಿದೆ.

ಮೂಲತಃ ಮುಂಬೈನವಳಾದ ನಿಹಾರಿಕಾ ಬಾಲ್ಯದಿಂದಲೇ ನಟನೆಯ ಹುಚ್ಚು ಹಚ್ಚಿಕೊಂಡಳು. ಅವಳು ಕಥಕ್‌ ಕ್ಲಾಸಿಕ್‌ ನೃತ್ಯ ಕಲಿಯಲು ಆರಂಭಿಸಿ, ತನ್ನ ವಿದ್ಯಾಭ್ಯಾಸದೊಂದಿಗೆ ಮಾಡಲಿಂಗ್‌ ನಲ್ಲೂ ಹೆಸರೂ ಗಳಿಸಿದಳು. ಇದಕ್ಕೆ ಇವಳ ಹೆತ್ತವರು ಬಹಳ ಪ್ರೋತ್ಸಾಹ, ಮಾರ್ಗದರ್ಶನ ನೀಡಿದರು. ಒಂದು ಲೀಡ್‌ ರೋಲ್ ‌ಗಾಗಿ ಇವಳು ಅನೇಕ ವರ್ಷ ಆಡಿಶನ್‌ ಎದುರಿಸಬೇಕಾಯಿತು.

ಆಧುನಿಕ, ಸರಸ ಸ್ವಭಾವದ, ಚಿನಕುರಳಿ ನಿಹಾರಿಕಾಳ ಜರ್ನಿ ಬಗ್ಗೆ ಅವಳಿಂದ ಕೇಳಿ ತಿಳಿಯೋಣವೇ? :

ನೀನು ಬಾಲನಟಿಯಾಗಿ ಅನೇಕ ವರ್ಷಗಳ ಹಿಂದೆ ಬಾಲಿವುಡ್ಗೆ ಎಂಟ್ರಿ ಪಡೆದಳು. ಇದು ಹೇಗೆ ಸಾಧ್ಯವಾಯಿತು?

ಬಂಗಾಳಿ ಸಂಸ್ಕೃತಿಯಲ್ಲಿ ಬಾಲ್ಯದಿಂದಲೇ ಕಲೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಾನು 9 ವರ್ಷದವಳಿದ್ದಾಗಲೇ ನಟನೆ ಶುರು ಮಾಡಿದೆ. ನಾನು ಏನಾದರೂ ವಿಭಿನ್ನ ಕೆರಿಯರ್‌ ಆರಿಸಿಕೊಳ್ಳಲಿ ಎಂದು ನನ್ನ ತಂದೆ ಬಯಸುತ್ತಿದ್ದರು. ನಮ್ಮ ಶಾಲೆ ಅಥವಾ ಮನೆಯ ಬಳಿ ಯಾವುದೇ ಸಾಂಸ್ಕೃತಿಕ ಚಟುವಟಿಕೆ ನಡೆದಾಗಲೂ, ಅಲ್ಲಿ ನಾನು ಅತಿ ಉತ್ಸಾಹದಿಂದ ಅದರಲ್ಲಿ ಪಾಲ್ಗೊಳ್ಳುತ್ತಿದ್ದೆ. ನನಗಂತೂ ಡ್ಯಾನ್ಸ್, ನಾಟಕಗಳಲ್ಲಿ ಭಾಗಹಿಸುವುದು ಅಂದ್ರೆ ಬಲು ಇಷ್ಟ. ಅದೇ ತರಹ ಮುಂದೆ ಕಥಕ್‌ ನೃತ್ಯಾಭ್ಯಾಸ ಕಲಿಯತೊಡಗಿದೆ. ಆದರೆ ನಾನು ಆ ಕೋರ್ಸ್‌ ನ್ನು ಪೂರ್ತಿ ಮಾಡಿಕೊಳ್ಳಲು ಆಗಲಿಲ್ಲ. 2 ವರ್ಷದ ಆ ಕೋರ್ಸ್‌ ಇನ್ನೂ ಹಾಗೇ ಬಾಕಿ ಉಳಿದಿದೆ. ಅದನ್ನು ಪೂರೈಸಿದರೆ ನನಗೆ ಶಾಸ್ತ್ರೀಯ ನೃತ್ಯದಲ್ಲಿ `ವಿಶಾರದಾ’ ಪದವಿ ಸಿಗುತ್ತದೆ.

ನೀನು ಸಿನಿಮಾ ಫೀಲ್ಡ್ ಗೆ ಬಂದ ಮೇಲೆ ನಿನ್ನ ಕುಟುಂಬದವರ ಪ್ರತಿಕ್ರಿಯೆ ಹೇಗಿತ್ತು?

ನನ್ನ ಇಡೀ ಕುಟುಂಬದಲ್ಲಿ ಬಹುತೇಕರು ಕುಹಕ ಮಾಡಿದ್ದೇ ಹೆಚ್ಚು! ನಾನು ನನ್ನ ತಾಯಿ ತಂದೆಯರ ಒಬ್ಬಳೇ ಮಗಳು, ಹೀಗಾಗಿ ನಾನು ಎಲ್ಲರಿಗೂ ಅತಿ ಮುದ್ದು. ನಾನು ಕುಟುಂಬದವರಂತೆ ಬರೀ ಓದಿಗೆ ಅಂಟಿಕೊಳ್ಳದೆ ಏನಾದರೂ ವಿಭಿನ್ನವಾದುದನ್ನು ಮಾಡಬೇಕೆಂದು ನಮ್ಮ ತಂದೆ ಸದಾ ಹೇಳುತ್ತಿದ್ದರು. ನನ್ನ ನಟನೆ, ಡ್ಯಾನ್ಸ್, ಭಾವನೆಗಳನ್ನು ವ್ಯಕ್ತಪಡಿಸುವ ರೀತಿ…. ಎಲ್ಲ ಎಲ್ಲರಿಗೂ ಬಹಳ ಇಷ್ಟವಾಗುತ್ತಿತ್ತು. ಹೀಗಾಗಿ ನಾನು ನಟನೆಯ ಕೆರಿಯರ್‌ ಆರಿಸಿಕೊಳ್ಳಬೇಕೆಂದು ಮನೆಯಲ್ಲಿ ಎಲ್ಲರೂ ಸಲಹೆ ನೀಡುತ್ತಿದ್ದರು. ಆಗ ನೀನು ಸಿನಿಮಾಗಾಗಿ ಆಡಿಶನ್ಸ್ ನೀಡಲು ಆರಂಭಿಸಿದೆ. ಅಂತೂ ಕೊನೆಯಲ್ಲಿ ಈ ದೊಡ್ಡ ಪ್ರಾಜೆಕ್ಟ್ ನನಗೆ ಸಿಕ್ಕಿತು.

ಫಸ್ಟ್ ಬ್ರೇಕ್ಸಿಕ್ಕಿದ್ದು ಹೇಗೆ?

ನಾನು 9 ವರ್ಷದವಳಿದ್ದಾಗಲೇ ನನಗೆ `ಬಾಲ್ ವೀರ್‌’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಕ್ಕಿತು. ಅದರಲ್ಲಿ ಒಂದು ದಿನವಿಡೀ ಡ್ಯಾನ್ಸ್ ಪ್ರಾಕ್ಟೀಸ್‌ ಮಾಡಬೇಕಿತ್ತು. ಅದಾದ ಮೇಲೂ ನಾನು ಸಾಕಷ್ಟು ಆಡಿಶನ್ಸ್ ನೀಡಿದೆ. ನನಗೆ ಮುಂದಿನ ಪಾತ್ರ  `ತೇರಾ ಯಾರ್‌ ಹ್ಞೂಂ ಮೈ’ ಧಾರಾವಾಹಿಯಲ್ಲಿ ಸಿಕ್ಕಿತು. ಇದಾದ ಮೇಲೆ ನಾನು ಪ್ರಧಾನ ಪಾತ್ರವನ್ನೇ ನಿರ್ವಹಿಸಬೇಕೆಂದು ನಿರ್ಧರಿಸಿದೆ. ಅದಾದ ನಂತರ ನಾನು ಸಣ್ಣಪುಟ್ಟ ಪೋಷಕ ಪಾತ್ರಗಳನ್ನು ಸಂಪೂರ್ಣ ನಿರಾಕರಿಸಿದೆ. ಈಗ ಈ ನಿಟ್ಟಿನಲ್ಲಿ ನಾನು ಯಶಸ್ವಿ ಎನಿಸಿದ್ದೇನೆ.

ಈ ದಾರಿಯಲ್ಲಿ ಹೀಗೆ ಸಾಗಿ ಬರುವಾಗ ಬಹಳ ಟೆನ್ಶನ್ಸ್ ಎದುರಿಸಬೇಕಾಗುತ್ತದೆ ಎಂಬುದು ನಿಜ. ಎಷ್ಟೋ ಸಲ ಕೆಲಸ ಕೈಗೆ ಸಿಕ್ಕಿತೆಂದು ತೃಪ್ತಿ ಪಡುವಷ್ಟರಲ್ಲಿ ಅದು ಕೈಜಾರಿ ಹೋಗುತ್ತಿತ್ತು. ಏಕೆಂದರೆ ಆ ಚಾನೆಲ್ ನವರಿಗೆ ಇನ್ನಾರೋ ಜನಪ್ರಿಯತೆ ಪಡೆದವರು ಸಿಕ್ಕಿಬಿಟ್ಟಿರುತ್ತಿದ್ದರು, ಅದು ನಾನಾಗಿರದ ಕಾರಣ ಹಲವು ಅವಕಾಶ ತಪ್ಪಿತು.

ಮೊದಲ ಸಲ ನೀನು ಪೂರ್ಣ ಪ್ರಮಾಣದ ನಾಯಕಿಯ ಪಾತ್ರ ನಿರ್ವಸುತ್ತಿರುವೆ. ಇದರಲ್ಲಿ ಬಹಳ ಒತ್ತಡಕ್ಕೆ ಸಿಲುಕಿದ ಹಾಗೆ ಅನಿಸುತ್ತಾ?

ಮೊದಲಿನಿಂದ ನಾನು ನಟಿಸುತ್ತಾ ಬಂದ ಪಾತ್ರಗಳೆಲ್ಲ ಸಣ್ಣಪುಟ್ಟವು. ನಾನು ಅವುಗಳಲ್ಲೂ ಸಹ ನನ್ನ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದೇನೆ. `ಪ್ಯಾರ್‌ ಕಾ ಪಹ್ಲಾ ನಾಮ್…..’ ಧಾರಾವಾಹಿಯಲ್ಲಿ ನಾನು ನಾಯಕಿಯ ಪ್ರಧಾನ ಪಾತ್ರ ವಹಿಸುತ್ತಿದ್ದೇನೆ. ನಿರ್ದೇಶಕರ ಕಲ್ಪನೆಯ `ರಾಧಾ’ ಆಗಿ ನಾನಿಲ್ಲಿ ಮಿಂಚಬೇಕಿದೆ. ಆ ಪಾತ್ರದಲ್ಲಿ ಪರಕಾಯ ಪ್ರವೇಶ ಪಡೆಯಲು ನಾನು ಬಹಳ ಪರಿಶ್ರಮ ಪಡಬೇಕಾಗಿದೆ.

ಭಕ್ತಿಯಲ್ಲಿ ಎಷ್ಟೋ ಸಲ ಮೂಢನಂಬಿಕೆ ಬೆರೆತು ಹೋಗುತ್ತದೆ, ಇದಕ್ಕೆ ನಿನ್ನ ಅಭಿಪ್ರಾಯವೇನು?

ನಿಮ್ಮ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ನೀವು ದೇವರನ್ನು ಮಧ್ಯೆ ಎಳೆತರಬಾರದು, ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ನಿಮ್ಮ ಕನಸನ್ನು ನನಸಾಗಿಸಲು ಬಹಳ ಕಷ್ಟಪಡಬೇಕಾದರು ನೀವೇ! ಗುಡಿ, ಚರ್ಚು, ಮಸೀದಿಗಳನ್ನು ನಂಬಿ ಕೂರುವುದರಿಂದ ಮೂಢನಂಬಿಕೆ ಹೆಚ್ಚುತ್ತದೆ ಎಂದೇ ನಾನು ಭಾವಿಸುತ್ತೇನೆ.

ಇಂದಿನ ಯುವಜನತೆ ಪ್ರೀತಿ, ಪ್ರೇಮ, ರೊಮಾನ್ಸ್ ಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದಿಲ್ಲ. ಕಂಪನಿಗಾಗಿ ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಾರೆ, ಸಾಕಾದಾಗ ನಿರ್ದಾಕ್ಷಿಣ್ಯವಾಗಿ ಬ್ರೇಕ್ಅಪ್ಪಡೆದು ದೂರವಾಗುತ್ತಾರೆ. ಕುರಿತಾಗಿ ನೀನೇನು ಹೇಳುತ್ತೀಯಾ?

ಈ ಕುರಿತಾಗಿ ನಾನು ಗಂಭೀರವಾಗಿ ಗಮನ ನೀಡಿಲ್ಲ ಎಂದೇ ಹೇಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಕೆರಿಯರ್‌, ಕೆಲಸ…. ಇದೇ ನನ್ನ ಪ್ರೀತಿ, ಪ್ರೇಮ! ಅಮ್ಮ, ಅಪ್ಪ, ಅಜ್ಜಿಯರ ಪ್ರೀತಿ ವಾತ್ಯಲ್ಯ ಉಂಡು ಬೆಳೆದವಳು. ಅದು ಮಾತ್ರ ನನಗೆ ಗೊತ್ತು.

ಹಿಂದೆಲ್ಲ ನನಗೆ ಬಹಳ ಕಡಿಮೆ ಸಹನೆ ಇರುತ್ತಿತ್ತು. ಆದರೆ ನನ್ನ ಹೆತ್ತವರು ಮೊದಲಿನಿಂದಲೂ ನನಗೆ ನಾನು ಈ ಸಿನಿಮಾ ಕ್ಷೇತ್ರಕ್ಕೆ ಬರುವುದಾದರೆ ಅತಿ ಹೆಚ್ಚಿನ ಸಹನೆ, ಬಹಳಷ್ಟು ಧೈರ್ಯ ಇರಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಿದ್ದರು. ಹೀಗಾಗಿ ನಾನು ಸಹಜವಾಗಿಯೇ ಸಹನಶೀಲೆಯಾದೆ, ಧೈರ್ಯ ಬೆಳೆಸಿಕೊಂಡು, ಕಷ್ಟುಸಹಿಷ್ಣುತೆ ರೂಢಿಸಿಕೊಂಡೆ.

ಎಷ್ಟೋ ಸಲ ಬಹಳ ಟೆನ್ಶನ್‌ ಗೆ ಗುರಿಯಾಗಿ ಚಿತ್ರವಿಚಿತ್ರವಾಗಿ ವ್ಯವಹರಿಸುತ್ತಿದ್ದೆ. ನನ್ನ ಫ್ರಸ್ಟ್ರೇಶನ್‌ ಮಿತಿ ಮೀರತೊಡಗಿತು. ನನ್ನ ಗುರಿ ಧಾರಾವಾಹಿ, ಸಿನಿಮಾಗಳಲ್ಲಿ ಪ್ರಧಾನ ಹೀರೋಯಿನ್‌ ಆಗುವುದಾಗಿತ್ತು. ಎಷ್ಟೋ ಸಲ ನಾನು ಆ ಗುರಿ ತಲುಪುವಲ್ಲಿ ಬಹಳ ಹತ್ತಿರ ಹೋಗಿದ್ದರೂ, ಆ ಅವಕಾಶ ನನ್ನದಾಗದೆ ಸೋತದ್ದಿದೆ. ಅದರಿಂದ ಬಹಳ ದುಃಖಿತಳಾಗುತ್ತಿದ್ದೆ.

ಟೆನ್ಶನ್ಹೆಚ್ಚಿದಾಗ ಅದನ್ನು ಹೇಗೆ ಕಡಿಮೆ ಮಾಡಿಕೊಳ್ಳುವೆ?

ಟೆನ್ಶನ್‌ ಹೆಚ್ಚಿದಾಗೆಲ್ಲ ನಾನೇ ಅದಕ್ಕೆ ಜವಾಬ್ದಾರಳು ಎಂದುಕೊಳ್ಳುತ್ತೇನೆ, ಏಕೆಂದರೆ ನನ್ನಿಂದಲೇ ತಪ್ಪಾಗಿರುವುದು ಖಚಿತವಾಗಿ ಗೊತ್ತಾಗುತ್ತಿತ್ತು. ಹೀಗಾಗಿ ನಾನೇ ಜೋಪಾನವಾಗಿ ಅದರಿಂದ ಹೊರಬರಲು ಕಾದಂಬರಿ ಓದುವುದು, ಸಂಗೀತ ಕೇಳುವುದು, ಕ್ಲಾಸಿಕ್‌ ಸಿನಿಮಾ ನೋಡುವುದು….. ಇತ್ಯಾದಿ ಮಾಡುತ್ತಿದ್ದೆ.

ಇಂದಿನ ಹೆಂಗಸರು ಆಧುನಿಕರಾಗಿ ಪ್ರಗತಿಯ ಪಥದತ್ತ ಹೆಜ್ಜೆ ಹಾಕುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದರೂ ಕೌಟುಂಬಿಕ ದೌರ್ಜನ್ಯ, ರೇಪ್‌, ಮಾಲೆಸ್ಟೇಶನ್ಇತ್ಯಾದಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಯಾರು ಹೊಣೆ…… ಸಮಾಜ, ಕುಟುಂಬ, ಧರ್ಮ……?

ಇವೆಲ್ಲ ಧುತ್ತೆಂದು ಆಕಸ್ಮಿಕವಾಗಿ ಎದುರಾಗುವ ಅವಘಡಗಳು, ಪ್ರತಿಯೊಬ್ಬರೂ ಇದರ ಕುರಿತಾಗಿ ಅತಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಇಂಥ ಕುಕೃತ್ಯಗಳನ್ನು ತಡೆಗಟ್ಟಲೇ ಬೇಕು!

ನಿನ್ನ ಮುಂದಿನ ಕನಸು?

ಕನಸುಗಳೇನೋ ಬಹಳಷ್ಟಿವೆ. ಇದರಲ್ಲಿ ಕರಣ್‌ ಜೋಹರ್‌, ಸಂಜಯ್‌ ಲೀಲಾ ಭನ್ಸಾಲಿ, ರೋಹಿತ್‌ ಶೆಟ್ಟಿ ಮುಂತಾದ ಘಟಾನುಘಟಿ ನಿರ್ದೇಶಕರ ಬಳಿ ಕೆಲಸ ಮಾಡಬೇಕೆಂದಿದೆ.

ಜಿ. ಸುಮಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ