ಶೇಖರ್ ಹಾಗೂ ಸುಧಾ ಇವರ ಮದುವೆ ವಾರ್ಷಿಕೋತ್ಸವ ಇತ್ತು. ಒಂದು ಒಳ್ಳೆಯ ವಿಷಯವೆಂದರೆ, ಆ ದಿನ ಶನಿವಾರ. ಎಲ್ಲರೂ ನೆಮ್ಮದಿಯಿಂದ ಸೆಲೆಬ್ರೇಶನ್ ಮಾಡುವ ಮೂಡ್ ನಲ್ಲಿದ್ದರು. ಪಾರ್ಟಿ ತಡವಾಗಿ ಮುಗಿದರೂ ಮರುದಿನದ ಕೆಲಸಕ್ಕೆ ಯಾವುದೇ ತೊಂದರೆ ಆಗುವ ಸಾಧ್ಯತೆ ಇರಲಿಲ್ಲ. ಅದೇ ಭಾನುವಾರ ರಾತ್ರಿ ತಡವಾಗಿ ಬಿಟ್ರೆ ಎಲ್ಲವೂ ಎಡವಟ್ಟಾಗಿ ಬಿಡುತ್ತಿತ್ತಲ್ಲ. ಅವರಿಗೆ ಮಂಡೆ ಬ್ಲೂಸ್ ನ ಭಯ ಇತ್ತು. ಅನಂತ್ ಹಾಗೂ ಪ್ರಿಯಾ ಪಾರ್ಟಿಯ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಅಂಜಲಿ ಹಾಗೂ ಸುಧೀರ್ ಜೊತೆಗೂ ಮಾತುಕತೆ ನಡೆಸಲಾಗಿತ್ತು. ಅವರು ಬೆಳಗ್ಗೆ ಬಂದು ಸೇರುವುದಾಗಿ ಹೇಳಿದ್ದರು.
ಅವರು ಹಾಕಿಕೊಂಡ ಪ್ರೋಗ್ರಾಮ್ ಹೇಗಿತ್ತೆಂದರೆ, ಎಲ್ಲರೂ ಸೇರಿ ಮಧ್ಯಾಹ್ನದ ಊಟವನ್ನು ಮನೆಯಲ್ಲಿಯೇ ಮುಗಿಸುವುದು ಹಾಗೂ ರಾತ್ರಿಯ ಊಟಕ್ಕೆಂದು ಹೊರಗೆ ಹೋಗಿ ಮಾಡುವುದಾಗಿತ್ತು. ಈ ರೀತಿಯಲ್ಲಿ ಎಲ್ಲರೂ ಸೇರಿ ಜೊತೆ ಜೊತೆಯಲ್ಲಿ ಕಾಲ ಕಳೆಯುವವರಿದ್ದರು.
ಶೇಖರ್ ಹಾಗೂ ಸುಧಾ ತಮ್ಮ ಮಕ್ಕಳ ಜೊತೆ ಕಾಲ ಕಳೆಯಲು ಉತ್ಸುಕರಾಗಿದ್ದರು. ಅನಂತ್ ತನ್ನ ಪತ್ನಿ ಪ್ರಿಯಾ ಹಾಗೂ ಮಗಳು ಸ್ನೇಹಾಳೊಂದಿಗೆ ವಾಸಿಸುತ್ತಿದ್ದ. ಮಗಳು ಅಂಜಲಿ ನಾಗರಭಾವಿಯಲ್ಲಿ ತನ್ನ ಗಂಡ ಸುಧೀರ್ ಹಾಗೂ ಮಗ ಅರುಣ್ ಜೊತೆಗೆ ವಾಸಿಸುತ್ತಿದ್ದಳು. ಬೆಂಗಳೂರಿನಲ್ಲಿಯೇ ಇದ್ದರೂ ಮೇಲಿಂದ ಮೇಲೆ ಭೇಟಿ ಮಾಡುವುದು ಕೂಡ ಆಗುತ್ತಿರಲಿಲ್ಲ. ಮಗ ಸೊಸೆ, ಮಗಳು ಅಳಿಯ ಎಲ್ಲರೂ ಉದ್ಯೋಗಿಗಳಾಗಿದ್ದರು.
ಎಲ್ಲರ ಅನ್ಯೋನ್ಯತೆ ಬಹಳ ಚೆನ್ನಾಗಿತ್ತು. ಎಲ್ಲರೂ ಜೊತೆಗೆ ಸೇರಿದರೆ ಅದು ಒಂದು ರೀತಿಯ ಮಹಾಮಿಲನದಂತೆ, ಹಬ್ಬದಂತೆ ಭಾಸವಾಗುತ್ತಿತ್ತು. ಒಬ್ಬರು ಮತ್ತೊಬ್ಬರ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದರಾದರೂ, ಆ ಬಗ್ಗೆ ಯಾರೊಬ್ಬರೂ ಕೆಟ್ಟದ್ದೆಂಬಂತೆ ಭಾವಿಸುತ್ತಿರಲಿಲ್ಲ. ಮಕ್ಕಳ ಜೊತೆ ಶೇಖರ್ ಹಾಗೂ ಸುಧಾ ಖುಷಿಪಡುತ್ತಿದ್ದರು.
12 ಗಂಟೆಗೆ ಅಂಜಲಿ, ಸುಧೀರ್, ಅರುಣ್ ನ ಜೊತೆಗೆ ಬಂದರು. ಎಲ್ಲರೂ ಬರುತ್ತಲೇ ಅಪ್ಪ ಅಮ್ಮನನ್ನು ಪ್ರೀತಿಯಿಂದ ತಬ್ಬಿಕೊಂಡರು. ಅಂಜಲಿ ತನ್ನೊಂದಿಗೆ ಬಹಳಷ್ಟು ತಿಂಡಿ, ಗಿಫ್ಟ್ ಗಳನ್ನು ತೆಗೆದುಕೊಂಡು ಬಂದಿದ್ದಳು. ಸ್ನೇಹಾ, ಅರುಣ್ ಇಬ್ಬರೂ ಮಕ್ಕಳು ಆಟದಲ್ಲಿ ತಲ್ಲೀನರಾದರು.
ಹೊರಗಿನಿಂದ ಊಟಕ್ಕೆ ಆರ್ಡರ್ ಮಾಡಲಾಗಿತ್ತು. ಸೊಸೆ ಪ್ರಿಯಾ ತನ್ನ ಅತ್ತೆ ಮಾವನ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಖೀರು ಹಾಗೂ ಮೊಸರುವಡೆ ತಯಾರಿಸಿದ್ದಳು. ಅವನ್ನು ಎಲ್ಲರೂ ಹೊಗಳುತ್ತಲೇ ಹೊಟ್ಟೆಗಿಳಿಸಿದರು.
ಊಟ ಮಾಡುತ್ತಲೇ ಅಳಿಯ ಸುಧೀರ್ ಅತ್ಯಂತ ಗೌರವಯುತವಾಗಿ ಹೇಳಿದ, “ಮಾವ, ನಿಮ್ಮ ವೈವಾಹಿಕ ಜೀವನ ನಮಗೊಂದು ಆದರ್ಶವಾಗಿದೆ. ನಿಮ್ಮನ್ನು ನಾವು ಎಂದೂ ವಾದ ವಿವಾದ ಮಾಡಿದ್ದನ್ನು ಕಂಡಿಲ್ಲ. ನಿಮ್ಮಿಬ್ಬರ ಅನ್ಯೋನ್ಯತೆ ಅಷ್ಟು ಗಟ್ಟಿಯಾಗಿದೆ. ನನ್ನ ಅಪ್ಪ ಅಮ್ಮ ಬಹಳ ಜಗಳ ಆಡುತ್ತಿರುತ್ತಾರೆ. ಅವರು ನಿಮ್ಮಿಂದ ಬಹಳಷ್ಟು ಕಲಿಯಬೇಕು.”
ಬಳಿಕ ಸುಧೀರ್ ಅಂಜಲಿಯನ್ನು ಛೇಡಿಸುತ್ತಾ ಹೇಳಿದ, “ಇವಳಿಗೂ ಒಂದಿಷ್ಟು ಹೇಳಿ ಕೊಟ್ಟಿದ್ದರೆ ಸರಿ ಇರುತ್ತಿತ್ತು. ಇವಳು ನನ್ನ ಜೊತೆಗೆ ಬಹಳ ಜಗಳ ಮಾಡುತ್ತಾಳೆ. ಮೊದ ಮೊದಲು ಇವಳೊಂದಿಗೆ ಹೇಗೆ ಏಗೋದು ಅನಿಸುತ್ತಿತ್ತು.”
ಅಂಜಲಿ ಪ್ರೀತಿಯಿಂದಲೇ ಅವನತ್ತ ದಿಟ್ಟಿಸಿ ನೋಡುತ್ತಾ ಹೇಳಿದಳು, “ಹೀಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ. ನಾನು ಎಂದಾದರೂ ನಿಮ್ಮ ಜೊತೆಗೆ ಜಗಳ ಆಡಿದ್ನಾ….. ಇಲ್ಲವಲ್ಲ, ಸುಳ್ಳು ಹೇಳ್ತಿದ್ದಾರೆ.”
ಪ್ರಿಯಾ ಕೂಡ ಹೇಳಿದಳು, “ಹೌದು, ನೀನು ಸರಿಯಾಗಿಯೇ ಹೇಳ್ತಿರುವೆ. ಅತ್ತೆ ಮಾವನದು ಬಹಳ ಅಪರೂಪದ ಅನ್ಯೋನ್ಯತೆ. ಪರಸ್ಪರರ ಬಗ್ಗೆ ಬಹಳ ಗಮನ ಕೊಡುತ್ತಾರೆ. ಏನೂ ಹೇಳದೆಯೇ ಒಬ್ಬರು ಮತ್ತೊಬ್ಬರ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅನಂತ್ ಗೆ ನನ್ನ ಯಾವುದೇ ಮಾತು ನೆನಪಿನಲ್ಲಿ ಇರುವುದಿಲ್ಲ. ಅವರೂ ಕೂಡ ಮಾವನ ಹಾಗೆ ಕೇರಿಂಗ್ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?” ಎಂದು ತನ್ನ ಗಂಡನ ಕಾಲೆಳೆಯಲು ಪ್ರಯತ್ನಿಸಿದಳು.
ಅನಂತ್ ಕೂಡ ಸುಮ್ಮನೆ ಇರಲಿಲ್ಲ. ಸುಳ್ಳು ಸುಳ್ಳೇ ಹೇಳುತ್ತಿರುವುದನ್ನು ಕಂಡು ತನ್ನ ಗೋಳು ತೋಡಿಕೊಳ್ಳುವ ನಾಟಕ ಮಾಡುತ್ತಾ, “ಏನಮ್ಮ ಪ್ರಿಯಾ, ನಾವು ಅಣ್ಣ ತಂಗಿ ಇದೇನು ಕೇಳಿಸಿಕೊಳ್ಳುತ್ತಿದ್ದೇವೆ? ನಾವೇಕೆ ಇಂದು ಅಪ್ಪ ಅಮ್ಮನ ಅನ್ಯೋನ್ಯತೆಯ ವಾಸ್ತವನ್ನೇಕೆ ತಿಳಿಸಬಾರದು? ಎಲ್ಲಿಯವರೆಗೆ ನಾವು ಇವರ ಟೀಕೆಗಳನ್ನು ಕೇಳಿಸಿಕೊಳ್ಳುತ್ತಾ ಇರಬೇಕು?” ಎಂದು ಹೇಳುತ್ತಾ ಅಂಜಲಿಯನ್ನು ನೋಡಿ ತುಂಟತನದಿಂದ ನಕ್ಕ.
ಸುಧೀರ್ ಆಶ್ಚರ್ಯದಿಂದ, “ಅದೇನು ವಾಸ್ತವ? ನೀವಿಬ್ಬರೂ ನಿಮ್ಮ ಪೇರೆಂಟ್ಸ್ ನ ಪ್ರಶಂಸೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲವೇ?” ಎಂದ.
ಅನಂತ್ ನಕ್ಕು ಹೇಳಿದ, “ಅಪ್ಪ ಅಮ್ಮ ನೀವು ಸಿದ್ಧರಾಗಿ. ನಿಮ್ಮ ಸೊಸೆ ಹಾಗೂ ಅಳಿಯನಿಗೆ ನಿಮ್ಮ ಅನ್ಯೋನ್ಯತೆಯ ರಹಸ್ಯವನ್ನು ತಿಳಿಸಲು ಹೊರಟಿದ್ದೇವೆ,” ಎಂದು ನಾಟಕೀಯ ಸ್ವರದಲ್ಲಿ ಹೇಳುತ್ತಾ ಅಂಜಲಿಗೆ ಹೇಳಿದ, “ಆಯ್ತು. ನೀನು ಶುರು ಹಚ್ಚಿಕೋ.”
“ನಾವು ಆಗ ಚಿಕ್ಕವರು. ಆಗ ಅಪ್ಪ ಅಮ್ಮನಿಗೆ ನಾನು ಒಂದಿನ ನಿನ್ನೊಂದಿಗೆ ಇರಲಾಗದು. ನನ್ನ ಅಪ್ಪ ಅಮ್ಮ ಬಹಳ ಕೆಟ್ಟ ಕೆಲಸ ಮಾಡಿದರು. ನಿನ್ನೊಂದಿಗೆ ಮದುವೆ ಮಾಡಿಸಿದರು. ನನ್ನಂತಹ ಸ್ಮಾರ್ಟ್ ಹುಡುಗನಿಗೆ ಅದೆಂಥ ಹಳ್ಳಿ ಹುಡುಗಿಯನ್ನು ಗಂಟು ಹಾಕಿದರೊ ಏನೋ ಎಂದು ಗೊಣಗಿಕೊಳ್ಳುತ್ತಿದ್ದರು,” ಎಂದು ಅಂಜಲಿ ಜೋರಾಗಿ ನಗುತ್ತಾ ಹೇಳಿದಳು.
ಅಂಜಲಿ ಹೇಳಿದ್ದನ್ನು ಕೇಳಿಸಿಕೊಂಡ ಪ್ರಿಯಾ ಹಾಗೂ ಸುಧೀರ್ ಚಕಿತರಾಗಿ ಶೇಖರ್ ಮತ್ತು ಸುಧಾರತ್ತ ನೋಡಿದರು. ಶೇಖರ್ ತಮಗೆ ತಾವೇ ಬಹಳ ಸಂಕೋಚಗೊಂಡವರಂತೆ ಕಾಣುತ್ತಿದ್ದರು. ಸುಧಾರ ಕಣ್ಣುಗಳು ತೇವಗೊಂಡವು. ಅದನ್ನು ಕಂಡು ಶೇಖರ್ ಗೆ ಇನ್ನಷ್ಟು ಸಂಕೋಚವಾಯಿತು.
ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, “ಅಮ್ಮ ಅಪ್ಪ ಬೇರೆ ಆಗಿಯೇ ಬಿಡುತ್ತಾರೆ ಎಂದು ನಮಗೆ ಪ್ರತಿದಿನ ಅನಿಸುತ್ತಿತ್ತು. ಆದರೆ ಸಂಜೆ ಹೊತ್ತಿಗೆ ಅವರು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ ಬಿಡುತ್ತಿದ್ದರು. ಅಜ್ಜಿ ತಾತಾ ಅಪ್ಪನಿಗೆ ಇಷ್ಟವಾಗದ ಹುಡುಗಿಯನ್ನು ಆಯ್ಕೆ ಮಾಡಿದ್ದಾರೆ. ಅಪ್ಪನಿಗೆ ಅಮ್ಮ ಇಷ್ಟ ಇಲ್ಲವೇ ಇಲ್ಲ ಎನ್ನುವುದು ಎಲ್ಲ ಸಂಬಂಧಿಕರಿಗೂ ಗೊತ್ತಾಗಿ ಹೋಗಿತ್ತು,” ಎಂದು ಅನಂತ್ ಹೇಳಿದ.
“ನಾವು ಯಾರನ್ನಾದರೂ ಭೇಟಿಯಾಗಲು ಹೋದರೆ ಸಾಕು, ಅವರು ನಮ್ಮನ್ನು ಕೇಳುತ್ತಿದ್ದರು, `ನಿಮ್ಮ ಅಪ್ಪನಿಗೆ ಈಗಲೂ ನಿಮ್ಮ ಅಮ್ಮ ಇಷ್ಟ ಆಗಿಲ್ಲವೇ? ಈ ಬಗ್ಗೆ ಏನು ಹೇಳಬೇಕೊ ನಮಗಂತೂ ಗೊತ್ತಾಗುವುದಿಲ್ಲ,’ ಎಂದು ಹೇಳಿ ಅವರು ಅಮ್ಮನ ಸ್ವಭಾವದ ಬಗ್ಗೆಯೇ ಹೊಗಳುತ್ತಿದ್ದರು. ನಿಮ್ಮ ಅಮ್ಮನಂತಹ ಹುಡುಗಿ ಬಹಳ ಕಡಿಮೆ ಜನರಿಗೆ ಸಿಗುತ್ತಾರೆ. ಆದರೆ ಅಪ್ಪ ಮಾತ್ರ ಮನೆಯಲ್ಲಿ ಮಾತು ಮಾತಿಗೆ ನೀನು ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟೆ ಎಂದು ಅಮ್ಮನ ವಿರುದ್ಧ ಕೋಪ ವ್ಯಕ್ತಪಡಿಸುತ್ತಿದ್ದರು. ಅಪ್ಪನಿಗೆ ನಗರದ ಮಾಡರ್ನ್ ಹುಡುಗಿ ಜೊತೆ ಮದುವೆ ಮಾಡಿಕೊಳ್ಳಬೇಕಿತ್ತು.
“ಅಂದಹಾಗೆ ಅಮ್ಮ ಕೂಡ ಬಹಳ ಓದಿದವರು. ಆದರೆ ಪ್ರೊಫೆಸರ್ ಅಪ್ಪ ಮಾತ್ರ ತಮ್ಮದೇ ಆದ ಲೋಕದಲ್ಲಿ ಜೀವಿಸುತ್ತಿದ್ದರು. ನಾವು ಅಮ್ಮ ಅಪ್ಪನ ವಿಚ್ಛೇದನದ ಹೆದರಿಕೆಯ ನೆರಳಿನಲ್ಲಿಯೇ ಜೀವಿಸಿದೆ. ಅನಂತ್ ಎಂದಾದರೊಮ್ಮೆ ನನಗೆ ತಿಳಿಸಿ ಹೇಳುತ್ತಿದ್ದ. `ಏನೂ ಆಗುವುದಿಲ್ಲ ನೋಡ್ತಾ ಇರು,’ ಕೆಲಿವೊಮ್ಮೆ ನಾನು ಅವನಿಗೆ ಹೇಳುತ್ತಿದ್ದೆ. ನಾಳೆಯೇ ಎಲ್ಲ ಸರಿ ಹೋಗುತ್ತೆ ನೀನು ಚಿಂತೆ ಮಾಡಬೇಡ,” ನಾವು ಅಂದುಕೊಂಡಂತೆಯೇ ಒಂದಿನ ಹಾಗೆ, ಇನ್ನೊಂದಿನ ಹೀಗೆ ಕಳೆಯುತ್ತಿದ್ದೆ. ಒಟ್ಟಾರೆ ನಮ್ಮ ಬಾಲ್ಯ ಹಾಗೂ ತಾರುಣ್ಯ ಅಪ್ಪನ ಬೆದರಿಕೆಯಲ್ಲಿಯೇ ಕಳೆದುಹೋಯಿತು.”
ಒಮ್ಮೆಲೆ ಅನಂತ್ ಜೋರು ಜೋರಾಗಿ ನಗತೊಡಗಿದ, “ಕ್ರಮೇಣ ನಾವು ದೊಡ್ಡವರಾಗುತ್ತಾ ಹೋದೆವು. ಆಗ ನಮಗೆ ಗೊತ್ತಾದ ವಿಷಯವೆಂದರೆ, ಅಪ್ಪ ಅಮ್ಮನಿಗೆ ಕೇವಲ ವಿಚ್ಛೇದನದ ಬೆದರಿಕೆಯನ್ನಷ್ಟೇ ಹಾಕುತ್ತಾರೆಯೇ ಹೊರತು ಅವರಿಗೆ ಅಮ್ಮನನ್ನು ಬಿಟ್ಟುಬಿಡುವ ಧೈರ್ಯ ಇಲ್ಲ ಎಂದು ಅನಿಸತೊಡಗಿತು.”
ಪ್ರಿಯಾ ಹಾಗೂ ಸುಧೀರ್ ಶೇಖರ್ ಕಡೆ ಹುಸಿಕೋಪದಿಂದ ನೋಡುತ್ತಾ, “ಅಪ್ಪಾ, ವೆರಿ ಬ್ಯಾಡ್. ನಾವು ನಿಮ್ಮನ್ನು ಏನೂಂತ ತಿಳಿದಿದ್ದೆ. ನೀವು ಏನೂಂತ ತೋರಿಸಿಬಿಟ್ಟಿರಿ. ಪಾಪ ಮಕ್ಕಳು ನಿಮ್ಮ ಹೆದರಿಕೆಯಲ್ಲಿಯೇ ಕಾಲ ಕಳೆದರು. ನಿಮ್ಮ ಅನ್ಯೋನ್ಯತೆಯ ಅಭಿಮಾನಿಗಳಾಗುತ್ತಾ ಹೋದೆ. ಅಂದಹಾಗೆ ಅಪ್ಪ ನೀವೇಕೆ ಬೆದರಿಕೆ ಹಾಕುತ್ತಿದ್ದಿರಿ?” ಎಂದು ಕೇಳಿದರು.
ಶೇಖರ್ ಸುಧಾಳ ಕಡೆ ನೋಡುತ್ತಾ, “ಅಂದಹಾಗೆ ನೀವು ಇವತ್ತು ಈ ವಿಷಯ ಪ್ರಸ್ತಾಪಿಸಿದ್ದು ಒಳ್ಳೆಯದೇ ಆಯಿತು. ಇವತ್ತಿನ ದಿನ ಬಹಳ ಒಳ್ಳೆಯದು,” ಎಂದು ಹೇಳಿದರು.
ಅವರು ಇಷ್ಟು ಹೇಳುತ್ತಿದ್ದಂತೆಯೇ, “ಹೌದಾ, ನಿಮಗೆ ಮ್ಯಾರೇಜ್ ಆ್ಯನಿವರ್ಸರಿ ಸಂಭ್ರಮ ಮಕ್ಕಳಿಗೆ ಅಷ್ಟು ಕಷ್ಟ ಕೊಟ್ಟ ಈ ಸಂಭ್ರಮ,” ಅಂಜಲಿ ಹೇಳಿದಳು.
“ಹೌದಮ್ಮ, ಇವತ್ತಿನ ದಿನ ಏಕೆ ಒಳ್ಳೆಯದೆಂದು ಹೇಳಿದೆನೆಂದರೆ, ಇವತ್ತು ನನಗೆ ನನ್ನ ಸುಧಾ ಸಿಕ್ಕಳು.”
ಈಗ ಎಲ್ಲರೂ ಸೇರಿ ಕೀಟಲೆ ಮಾಡತೊಡಗಿದರು, “ಇರಲಿ ಅಪ್ಪ ನಾವು ನಿಮ್ಮ ಬೆದರಿಕೆಗಳನ್ನು ಮರೆಯುವುದಿಲ್ಲ.”
“ನಿಜ ಹೇಳಬೇಕೆಂದರೆ, ನಾನು ಆಗ ತಪ್ಪು ಮಾಡ್ತಿದ್ದೆ. ಸುಧಾಳಿಗೆ ವಿಚ್ಛೇದನದ ಬೆದರಿಕೆ ಹಾಕಿ ಅವಳಿಗೆ ತೊಂದರೆ ಕೊಡ್ತಿದ್ದೆ. ಮಾಡರ್ನ್ ಹುಡುಗಿಯ ಜೊತೆ ಮದುವೆಯಾಗಬೇಕೆನ್ನುವುದು ನನ್ನ ಅಪೇಕ್ಷೆಯಾಗಿತ್ತು. ಸದಾ ಸಿಟಿಯಲ್ಲಿಯೇ ಇದ್ದುದರಿಂದ ನನಗೆ ನಗರದ ಹುಡುಗಿಯರೇ ಇಷ್ಟವಾಗುತ್ತಿದ್ದರು. ಅಪ್ಪ ಅಮ್ಮ ಸುಧಾಳ ಬಗ್ಗೆ ಪ್ರಸ್ತಾಪಿಸಿದಾಗ ನಾನು ಸ್ಪಷ್ಟವಾಗಿ ನಿರಾಕರಿಸಿದ್ದೆ. ಸುಧಾಳ ಅಪ್ಪ ಅಮ್ಮ ತೀರಿಹೋಗಿದ್ದರು. ಅವಳ ಅಣ್ಣ ಅವಳ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು.
“ಅಮ್ಮನಿಗೆ ಸುಧಾ ಬಹಳ ಇಷ್ಟವಾಗಿಬಿಟ್ಟಿದ್ದಳು. ನಾನು ಅಮ್ಮನಿಗೆ ಮದುವೆ ಮಂಟಪದಿಂದಲೇ ಓಡಿ ಹೋಗುತ್ತೇನೆ ಎಂದು ಹೇಳ್ತಿದ್ದೆ. ಆದರೆ ಅಪ್ಪನ ಮುಂದೆ ನನ್ನ ಆಟ ನಡೆಯುತ್ತಿರಲಿಲ್ಲ. ಸುಧಾಳ ಕೈಹಿಡಿದ ಮೇಲೆ ನಾನು ಅವಳ ಮೇಲೆಯೇ ನನ್ನ ಕೋಪ ತೀರಿಸಿಕೊಳ್ತಿದ್ದೆ. ನಮ್ಮ 7 ಜನರ ಕುಟುಂಬವನ್ನು ಅವಳು ಹೇಗೆ ನಿಭಾಯಿಸಿದಳೆಂದರೆ, ಎಲ್ಲರೂ ನನ್ನನ್ನೇ ಮರೆಯುವ ಹಾಗಾಯ್ತು. ಎಲ್ಲರೂ ಸುಧಾಳನ್ನೇ ಹೊಗಳುತ್ತಿದ್ದರು. ಅವಳ ಗುಣವನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದರು. ಆದರೆ ನನ್ನ ಕೋಪ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಕ್ರಮೇಣ ಅವಳು ತನ್ನ ಹೃದಯದಲ್ಲಿ ಹೇಗೆ ಆವರಿಸಿಕೊಳ್ಳುತ್ತಾ ಹೋದಳೆಂದರೆ, ನಾನೇ ಅವಳ ಅಭಿಮಾನಿಯಾಗುವಂತಾಯಿತು.
“ಅನಂತ್ ಹುಟ್ಟಿದಾಗ ಎಲ್ಲ ಸರಿಹೋಗುತ್ತದೆಂದು ಭಾವಿಸಿದ್ದೆ. ಆದರೆ ನಾನು ಮಾತ್ರ ಬದಲಾಗಿರಲಿಲ್ಲ. ಆಗ ನಾನು ಸುಧಾಳಿಗೆ `ಇವರೆಲ್ಲ ಸ್ವಲ್ಪ ದೊಡ್ಡವರಾಗಲಿ, ಆಮೇಲೆ ನಾನು ನಿನಗೆ ಡೈವೋರ್ಸ್ ಕೊಡ್ತೀನಿ,’ ಎಂದು ಹೇಳ್ತಿದ್ದೆ, ಅಂಜು ಹುಟ್ಟಿದಾಗಲೂ ನಾನು ಅದೇ ಮಾತುಗಳನ್ನು ಹೇಳ್ತಿದ್ದೆ. ಊರಲ್ಲಿ ನೀನು ಅಮ್ಮನ ಜೊತೆ ಉಳಿದುಕೊಳ್ಳಬಹುದು ಎಂಬ ಮಾತುಗಳನ್ನು ಆಡುತ್ತಿದ್ದೆ. ಒಂದೆಡೆ ನನ್ನ ಮಕ್ಕಳು ದೊಡ್ಡವರಾಗುತ್ತಿದ್ದರು. ಇನ್ನೊಂದೆಡೆ ತಂಗಿಯರು ಮದುವೆ ವಯಸ್ಸಿಗೆ ಬಂದರು.
“ಸುಧಾ ತನ್ನ ಜವಾಬ್ದಾರಿಯನ್ನು ಹೃದಯಪೂರ್ವಕವಾಗಿ ಮಾಡುತ್ತಿದ್ದಳು. ನನ್ನ ಹೃದಯದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಾ ಹೋದಳು. ಆದರೆ ನಾನು ಎಷ್ಟು ಕೆಟ್ಟವನಾಗಿದ್ದೆ ಎಂದರೆ, ನಾನು ಸುಧಾಳಿಗೆ ಬೆದರಿಕೆ ಹಾಕುವುದನ್ನು ನಿಲ್ಲಿಸಿರಲಿಲ್ಲ. ಅವಳು ಮಾತ್ರ ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ಅಭ್ಯಾಸದಲ್ಲಿ ತನ್ನ ಮನಸ್ಸನ್ನು ಕೇಂದ್ರೀಕರಿಸಿದ್ದಳು. ಹೀಗೆ ಅವಳು ತನ್ನ ಪಿಎಚ್‌ಡಿಯನ್ನು ಮುಗಿಸಿದಳು. ಕೆಲವೇ ತಿಂಗಳಲ್ಲಿ ಅವಳು ಕಾಲೇಜೊಂದರಲ್ಲಿ ಜಾಬ್ ಕೂಡ ಮಾಡತೊಡಗಿದಳು. ಆಗ ನನ್ನ ಮನಸ್ಸು ಎಷ್ಟೊಂದು ಸಂಕೋಚಕ್ಕೊಳಗಾಯಿತೆಂದರೆ, ನನಗೆ ಅವಳ ಕ್ಷಮೆ ಕೇಳಲು ಕೂಡ ಧೈರ್ಯ ಬರಲಿಲ್ಲ.
`’ಈವರೆಗೂ ಮನಸ್ಸಿನಲ್ಲಿ ಅದೆಷ್ಟು ನಾಚಿಕೆ ತುಂಬಿಕೊಂಡಿತ್ತೆಂದರೆ, ಹಾಗಾಗಿಯೇ ಈ ದಿನವನ್ನು ನಾನು ಒಳ್ಳೆಯ ದಿನವೆಂದು ಹೇಳಿದ್ದು, ಇಂದು ನಾನು ನಿಮ್ಮೆಲ್ಲರ ಎದುರು ಸುಧಾಳ ಕ್ಷಮೆ ಯಾಚಿಸಲು ಧೈರ್ಯ ತೋರಿಸುತ್ತಿರುವೆ. ಮಕ್ಕಳೇ, ನಿಮ್ಮ ಬಗ್ಗೆಯೂ ನಾನು ಬಹಳ ಕೆಟ್ಟದಾಗಿ ನಡೆದುಕೊಂಡೆ, ನಾನು ವಿಚ್ಛೇದನದ ಬೆದರಿಕೆ ಹಾಕುತ್ತಾ ನಿಮ್ಮ ಬಾಲ ಮನಸ್ಸಿನ ಮೇಲೆ ಪೆಟ್ಟು ಕೊಟ್ಟೆ. ಅದಕ್ಕಾಗಿ ಸುಧಾ, ಅನಂತ್ ಮತ್ತು ಅಂಜೂ ನೀವೆಲ್ಲ ನನ್ನನ್ನು ಕ್ಷಮಿಸಿ.”
ಪ್ರಿಯಾ ಅತ್ತೆ ಸುಧಾಳ ಕಡೆ ನೋಡುತ್ತಾ, “ಅತ್ತೆ ಏನಾದರೂ ಹೇಳಿ,” ಎಂದಳು.
ಸುಧಾ ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ ಹೇಳಲಾರಂಭಿಸಿದರು, “ಆರಂಭದಲ್ಲಿ `ನೀನು ನನಗೆ ಇಷ್ಟವಿಲ್ಲ,’ ಎಂದು ಇವರು ನನಗೆ ಹೇಳಿದ್ದನ್ನು ಕೇಳಿ ನಾನು ಬಹಳ ಆಘಾತಕ್ಕೊಳಗಾಗಿದ್ದೆ. ಆಗ ನನಗೆ ಅಮ್ಮ ಅಪ್ಪ ಯಾರೂ ಇರಲಿಲ್ಲ, ಅಣ್ಣ ಬಹಳ ಇಷ್ಟಪಟ್ಟು ನನ್ನನ್ನು ಇವರಿಗೆ ಮದುವೆ ಮಾಡಿಕೊಟ್ಟಿದ್ದರು. ನಾನು ನನ್ನ ಕಷ್ಟವನ್ನು ಅಣ್ಣನ ಮುಂದೆ ಹೇಳಿದ್ದರೆ ಅವನಿಗೆ ಬಹಳ ದುಃಖ ಆಗುತ್ತಿತ್ತು. ಹೀಗಾಗಿ ನಾನು ನನ್ನ ದುಃಖವನ್ನು ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಕಾಲಕ್ರಮೇಣ ಎಲ್ಲ ಸರಿ ಹೋಗುತ್ತದೆ ಎಂದು ಭಾವಿಸಿದ್ದೆ, ಹಾಗೆಯೇ ಅದು ಸರಿ ಹೋಯಿತು ಕೂಡ.
“ನೀವಿಬ್ಬರೂ ಹುಟ್ಟಿದ ಬಳಿಕ ನಾನು ಇವರ ವಿಭಿನ್ನ ರೂಪವನ್ನೇ ಕಂಡೆ. ನಿಮ್ಮಿಬ್ಬರಿಗೂ ಇವರು ಬಹಳ ಪ್ರೀತಿ ಕೊಡುತ್ತಿದ್ದರು. ಕಾಲೇಜಿನಿಂದ ಬರುತ್ತಿದ್ದಂತೆ ನಿಮ್ಮಿಬ್ಬರ ಜೊತೆ ಸಾಕಷ್ಟು ಹೊತ್ತು ಆಟವಾಡುತ್ತಿದ್ದರು. ನಾನು ಗಮನಿಸಿದ ಪ್ರಕಾರ, ತಮ್ಮ ತಂದೆ ತಾಯಿ ಎದುರಿಗಿದ್ದಾಗ ಅಥವಾ ಮನೆಗೆ ಬಂದಾಗೆಲ್ಲ ಇವರು ವಿಚ್ಛೇದನದ ಬೆದರಿಕೆಗಳನ್ನು ಹೆಚ್ಚಾಗಿ ಹಾಕುತ್ತಿದ್ದರು.
“ಏಕಾಂಗಿಯಾಗಿದ್ದಾಗ ಇವರ ವರ್ತನೆ ಎಂದೂ ಕೆಟ್ಟದಾಗಿರಲಿಲ್ಲ. ನನ್ನ ಅಗತ್ಯಗಳಿಗೆಲ್ಲ ತಕ್ಷಣಕ್ಕೇ ಸ್ಪಂದಿಸುತ್ತಿದ್ದರು. ಇವರು ಒಳಗೊಳಗೆ ನಮ್ಮನ್ನೆಲ್ಲ ಪ್ರೀತಿಸುತ್ತಾರೆ. ನಾವಿಲ್ಲದೆ ಇವರು ಬದುಕಲು ಸಾಧ್ಯವಿಲ್ಲ ಎನಿಸುತ್ತಿತ್ತು. ಅವರ ಬೆದರಿಕೆಗಳೆಲ್ಲ ಕಟ್ಟುಕತೆ. ತಮ್ಮ ತಾಯಿ ತಂದೆಯರಿಗೆ ತಮ್ಮ ಕೋಪ ತೋರಿಸಿಕೊಳ್ಳಲು ಹೀಗೆ ಮಾಡುತ್ತಿದ್ದರು.
“ತಮ್ಮ ಮನಸ್ಸಿಗೆ ವಿರುದ್ಧವಾಗಿ ನನ್ನೊಂದಿಗೆ ವಿವಾಹ ಮಾಡಿದರು, ಅವರ ಅಭಿಪ್ರಾಯ ಕೇಳಲಿಲ್ಲ, ನೇರವಾಗಿ ತಮ್ಮ ನಿರ್ಧಾರವನ್ನು ಹೇರಿದರು ಎಂಬ ಕೋಪವಷ್ಟೇ ಇವರ ಮನಸ್ಸಿನಲ್ಲಿತ್ತು.
“ಜೀವನ ಅಷ್ಟೊಂದು ಕಷ್ಟಕರವಲ್ಲ ಎನ್ನುವುದು ನನ್ನ ಅರಿವಿಗೆ ಬಂತು. ನನಗೆ ಓದುವ ಹವ್ಯಾಸವಿತ್ತು. ಪುಸ್ತಕಗಳನ್ನು ಇವರೇ ತಂದು ಕೊಡುತ್ತಿದ್ದರು. ಇವರು ನನಗೆ ಸಾಕಷ್ಟು ಸಹಕಾರ ನೀಡಿದರು. ಹಾಗಾಗಿಯೇ ನಾನು ಪಿಎಚ್‌ಡಿ ಮಾಡಲು ಸಾಧ್ಯವಾಯಿತು. ನಾನು ತಡರಾತ್ರಿಯವರೆಗೆ ಕುಳಿತು ಓದುತ್ತಿದ್ದೆ. ಒಮ್ಮೊಮ್ಮೆ ಇವರೇ ನನಗೆ ಚಹಾ, ಬಾದಾಮಿ ಹಾಲು ಮಾಡಿಕೊಡುತ್ತಿದ್ದರು.
“ಮರುದಿನ ಅಮ್ಮ ಅಪ್ಪ ಭೇಟಿಗೆಂದು ಬಂದರೆ, ಅವರ ಮುಂದೆ ಪುನಃ ವಿಚ್ಛೇದನದ ಪುರಾಣ ಆರಂಭಿಸುತ್ತಿದ್ದರು. ಆದರೆ ನಾನು ಇವರ ಮೌನ ಪ್ರೇಮದ ಸ್ವಾದ ಸವಿದಿದ್ದೆ. ಹಾಗಾಗಿ ಇವರ ವಿಚ್ಛೇದನದ ಬೆದರಿಕೆ ನನ್ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ,” ಎಂದು ಹೇಳುತ್ತಾ ಸುಧಾ ನಕ್ಕರು.
ಶೇಖರ್ ಪತ್ನಿಯ ಕಡೆ ಅಚ್ಚರಿಯಿಂದ ನೋಡುತ್ತಾ, “ನಿನಗೆ ಎಂದೂ ಈ ಬಗ್ಗೆ ಚಿಂತೆ ಆಗಿರಲಿಲ್ಲವೇ?” ಎಂದು ಕೇಳಿದರು.
“ಇಲ್ಲ ಖಂಡಿತ ಆಗಿರಲಿಲ್ಲ,” ಎಂದು ಹೇಳುತ್ತಾ ಸುಧಾ ಮುಗುಳ್ನಗು ಬೀರಿದರು.
ಅನಂತ್ ಹಾಗೂ ಅಂಜಲಿ ಪರಸ್ಪರ ಮುಖ ನೋಡಿಕೊಂಡರು. ಬಳಿಕ ಅನಂತ್ ಹೇಳಿದ, “ನೋಡಿದೆಯಾ ಅಂಜೂ, ಇವರ ಕಥೆ ಕೇಳಿಸಿಕೊಂಡೆಯಲ್ಲ, ನಮ್ಮ ಬಾಲ್ಯವನ್ನು ಹೆದರಿಕೆಯಲ್ಲಿ ಕಳೆಯಬೇಕಾಗಿ ಬಂತು. ಬಹುಶಃ ನಾವೇ ಮೂರ್ಖರು ಅನಿಸುತ್ತೆ. ಅಮ್ಮ ಅಪ್ಪನ ವಿಚ್ಛೇದನ ಆದರೆ ನಮ್ಮ ಗತಿ ಏನು ಎಂಬ ಹೆದರಿಕೆಯ ತೂಗುಗತ್ತಿ ಸದಾ ನಮ್ಮ ತಲೆಯ ಮೇಲೆ ನಿಂತಿರುತ್ತಿತ್ತು.
“ಎಷ್ಟೋ ಸಲ ನಾವಿಬ್ಬರೂ ಚರ್ಚಿಸಿದ್ದೂ ಇದೆ, ಹಾಗೊಮ್ಮೆ ವಿಚ್ಛೇದನ ಆದರೆ, ಅಮ್ಮನ ಬಳಿ ಯಾರಿರಬೇಕು, ಅಪ್ಪನ ಬಳಿ ಯಾರು ಇರಬೇಕು ಎಂದು. ಸಿನಿಮಾನಗಳ ಕೋರ್ಟ್ ಸೀನ್ ಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೆ. ಅಮ್ಮ ಅಪ್ಪ, ನೀವು ದೊಡ್ಡ ಅಪರಾಧ ಮಾಡಿದಿರಿ. ನಿಮ್ಮ ಬೆದರಿಕೆಗಳು ನಮ್ಮ ಬಾಲ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದವು.”
ಶೇಖರ್ ಈಗ ಗಂಭೀರ ಸ್ವರದಲ್ಲಿ ಹೇಳಿದರು, “ಹೌದು ಮಕ್ಕಳೇ, ನಾನು ಇದನ್ನು ಒಪ್ಪುತ್ತೇನೆ. ನಿಮ್ಮೊಂದಿಗೆ ನಾನು ಬಹಳ ಕೆಟ್ಟದಾಗಿ ನಡೆದುಕೊಂಡೆ. ನಾನು ಹಾಕುತ್ತಿದ್ದ ಬೆದರಿಕೆಗಳು ನಿಮ್ಮ ಎಳೆಯ ಮನಸ್ಸಿನ ಮೇಲೆ ಏನು ಪರಿಣಾಮ ಬೀರಬಹುದು ಎಂಬ ಕಲ್ಪನೆ ಕೂಡ ನನಗಿರಲಿಲ್ಲ, ಸಾರಿ ಮಕ್ಕಳೆ…..”
ಅಂಜೂ ನಗುತ್ತಲೇ ತುಂಟತನದಿಂದ ಹೇಳಿದಳು, “ನಿಮ್ಮ ಈ ಬೆದರಿಕೆಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ ಎಂಬುದನ್ನು ಕಂಡುಕೊಂಡ ಅಮ್ಮ ಒಂದು ದಿನ ನಮ್ಮನ್ನು ಕೂರಿಸಿಕೊಂಡು ಹೇಳಿಯೇ ಬಿಟ್ಟರು, ನಿಮ್ಮ ಈ ಕೋಪ ಅಜ್ಜಿ ತಾತಾನಿಗೆ ತೋರಿಸುವ ನಾಟಕವೆಂದು. ವಿಚ್ಛೇದನದ ಪ್ರಸಂಗವೇ ಉದ್ಭವಿಸುವುದಿಲ್ಲ ಎಂದು ನಮಗೆ ತಿಳಿ ಹೇಳಿದರು. ಆಗ ನಾವು ಒಂದಿಷ್ಟು ರಿಲ್ಯಾಕ್ಸ್ ಆದೆವು.”
ಶೇಖರ್ ಕೂಡ ಮುಗುಳ್ನಗುತ್ತಾ ನಾಟಕೀಯ ಸ್ವರದಲ್ಲಿ, “ಅಂದರೆ ನನ್ನ ಪೊಳ್ಳು ಬೆದರಿಕೆಗಳು ಯಾರ ಮೇಲೂ ಪರಿಣಾಮ ಬೀರುತ್ತಿರಲಿಲ್ಲ ಮತ್ತು ನನ್ನನ್ನು ನಾನು ಬಹುದೊಡ್ಡ ಪರಾಕ್ರಮಿ ಎಂದು ಭಾವಿಸುತ್ತಿದ್ದೆ,” ಎಂದರು.
ಸುಧೀರ್ ಪ್ರಿಯಾಳನ್ನು ನೋಡುತ್ತಾ, “ಪ್ರಿಯಾ, ಅನಂತ್ ಮತ್ತು ಅಂಜೂ ಯಾರಾದರೂ ಬೆದರಿಕೆ ಹಾಕುತ್ತಿದ್ದರೆ. ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬಾರದು. ನಮಗಂತೂ ಬಹು ದೊಡ್ಡ ಬೆದರಿಕೆ ಹಾಕುವ ವೀರ ಮಾವ ಸಿಕ್ಕಿದ್ದಾರೆ. ಆದರೆ ಮತ್ತೊಂದು ವಿಷಯ ಕೂಡ ಸತ್ಯ. ನಿಮ್ಮಿಬ್ಬರ ನಡುವಿನ ಅನ್ಯೋನ್ಯತೆ ಬಹಳ ಅದ್ಭುತ. ಒಬ್ಬರು ಇಡೀ ಜೀವನ ಬೆದರಿಕೆ ಹಾಕುತ್ತಾ ಹೋದರು. ಇನ್ನೊಬ್ಬರು ಒಂದು ಕಿವಿಯಿಂದ ಕೇಳಿಸಿಕೊಂಡು ಇನ್ನೊಂದು ಕಿವಿಯಿಂದ ಬಿಡುತ್ತಾ ಹೋದರು. ಪಾಪ, ಮಕ್ಕಳಿಬ್ಬರು ಬೆದರಿಕೆಯಲ್ಲೇ ಬಾಲ್ಯ ಕಳೆದರು.”
ಇಡೀ ಮನೆ ಈಗ ನಗುವಿನ ಅಲೆಯಲ್ಲಿ ತೇಲಿಹೋಯಿತು. ಶೇಖರ್ ಸುಧಾರತ್ತ ಮುಗ್ಧ ನೋಟ ಬೀರಿದರು.