ಆರತಿ ರಾತ್ರಿ 8 ಗಂಟೆಗೆ ಆಫೀಸಿನಿಂದ ಹೊರಡುವ ಮುನ್ನ ಜಗದೀಶ್ ಗೆ ಫೋನ್ ಮಾಡಿದ್ದಳು, ``ನಾನು ಈಗ ಹೊರಡ್ತಿರುವೆ. ನೀನು ಮನೆಗೆ ಹೊರಟಾಯ್ತಾ?''
``ಹೌದು ನಾನು ಬೇಗ ಫ್ರೀಯಾದೆ. ನೇರವಾಗಿ ಮನೆಗೆ ಬಂದುಬಿಟ್ಟೆ.''
``ಡಿನ್ನರ್ ಗೆ ಏನು ಮಾಡುವುದು? ಏನಾದ್ರೂ ಮಾಡೋಕೆ ಆಗುತ್ತಾ ಅಥವಾ ಆರ್ಡರ್ ಮಾಡಬೇಕಾ? ನಾನಿನ್ನೂ ಮನೆ ತಲುಪೋಕೆ 1 ಗಂಟೆಯಾದ್ರೂ ಆಗುತ್ತೆ.''
``ಆರ್ಡರ್ ಮಾಡಿಬಿಡು. ನನಗೂ ಏನನ್ನೂ ಮಾಡು ಮೂಡ್ ಇಲ್ಲ. ಮತ್ತು ಐಸ್ ಕ್ರೀಮ್ ಕೂಡ ಮುಗಿದಿದೆ. ಅದನ್ನು ಆರ್ಡರ್ ಮಾಡು.''
ಆರತಿ ಫೋನ್ ಕಟ್ ಮಾಡಿದಳು. ಅವತ್ತಿನ ದಿನ ಬಹಳ ಬಿಜಿಯಾಗಿತ್ತು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ದಣಿದಿದ್ದಳು. ಈಗಲೂ ಅವಳ ಮನಸ್ಸಿನಲ್ಲಿ ಏನೇನೋ ಸಂಚಲನ ನಡೆಯುತ್ತಿತ್ತು.
ಜಗದೀಶ್ ಹಾಗೂ ಆರತಿ ಒಂದೇ ಆಫೀಸಿನಲ್ಲಿ ಬೇರೆ ಬೇರೆ ಡಿವಿಜನ್ ನಲ್ಲಿ ಕೆಲಸ ಮಾಡುತ್ತಿದ್ದರು. ಆರತಿ ಮೈಸೂರಿನವಳು. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಒಂದು ದೊಡ್ಡ ಕಂಪನಿಯಲ್ಲಿ ಜಗದೀಶ್ ಗಿಂತ ಉನ್ನತ ಹುದ್ದೆಯಲ್ಲಿದ್ದಾಳೆ. ಜೊತೆಗೆ ಒಳ್ಳೆಯ ರೀತಿಯಲ್ಲಿ ಜೀವನವನ್ನು ಲೀಡ್ ಮಾಡುತ್ತಿದ್ದಾಳೆ. ಅವಳು ಕಳೆದ ಒಂದು ವರ್ಷದಿಂದ ಜಗದೀಶ್ ನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಾಳೆ. ಇಬ್ಬರೂ ಒಂದು ಮೀಟಿಂಗ್ ನಲ್ಲಿ ಭೇಟಿ ಆಗಿದ್ದರು. ಜಗದೀಶ್ ರಾಯಚೂರು ಕಡೆಯವನು. ಇಬ್ಬರೂ ಮನಸಾರೆ ಫ್ಲಾಟ್ ಶೇರ್ ಮಾಡುತ್ತಿದ್ದಾರೆ ಮತ್ತು ಕೆಲಸಗಳನ್ನು ಹಂಚಿಕೊಂಡು ಮಾಡುತ್ತಾರೆ.
ಎರಡೂ ಕುಟುಂಬದವರಿಗೆ ಇವರಿಬ್ಬರು ಲಿನ್ ಇನ್ ನಲ್ಲಿರುವ ಸಂಗತಿ ತಿಳಿದಿಲ್ಲ. ಆರತಿಗೆ ಜಗದೀಶನ ಮುಕ್ತ ಸ್ವಭಾವ ಇಷ್ಟವಾಗುತ್ತಿತ್ತು. ಜಗದೀಶ್ ಗೆ ಆರತಿಯ ಹೊಣೆಗಾರಿಕೆಯ ಸ್ವಭಾವ ಬಹಳ ಇಷ್ಟವಾಗುತ್ತಿತ್ತು. ಇಬ್ಬರೂ ಭಿನ್ನ ಸ್ವಭಾವದವರು. ಆದರೆ ಒಬ್ಬರು ಇನ್ನೊಬ್ಬರನ್ನು ಇಷ್ಟಪಡುತ್ತಾರೆ. ಆದರೆ ಇತ್ತಿಚೆಗೆ ಅವಳು ಜಗದೀಶ್ ನ ಬಗ್ಗೆ ಎಷ್ಟು ಆಳವಾಗಿ ಯೋಚಿಸಲು ಶುರು ಮಾಡಿದ್ದಾಳೆಂದರೆ, ಅದರ ಬಗ್ಗೆ ಅವಳಿಗೆ ಬಹಳ ಖೇದವಾಗುತ್ತಿತ್ತು. ಈ ಮುಂಚೆ ಅವಳಿಗೆ ಇದರ ಬಗ್ಗೆ ಗಮನವೇ ಇರಲಿಲ್ಲ.
ಅಷ್ಟರಲ್ಲಿಯೇ ಆಕೆಗೆ ತಾಯಿ ವಿಶಾಲಮ್ಮನ ಫೋನ್ ಬಂತು. ದಿನಕ್ಕೆ ಒಂದು ಸಲವಾದರೂ ಅಮ್ಮನ ಫೋನ್ ಬರುತ್ತಿತ್ತು. ಮಾತು ಮುಗಿಸಿ ಆರತಿ ಡಿನ್ನರ್ ಗೆ ಆರ್ಡರ್ ಮಾಡಿದಳು. ಅವಳು ಮನೆ ತಲುಪಿದಾಗ ಜಗದೀಶ್ ಯಾವುದೋ ಸಿನಿಮಾ ನೋಡುವುದರಲ್ಲಿ ಮಗ್ನನಾಗಿದ್ದ. ಅವಳು ಫ್ರೆಶ್ ಆಗಿ ಹಾಸಿಗೆಯ ಮೇಲೆ ಹಾಗೆಯೇ ಒರಗಿದಳು. ಅಷ್ಟರಲ್ಲಿ ಆರ್ಡರ್ ಮಾಡಿದ ಊಟ ಬಂದಿತು.
``ಜಗದೀಶ್, ನೀನೇ ಊಟ ಬಡಿಸು. ತಟ್ಟೆ, ಚಮಚ ತೆಗೆದುಕೊಂಡು ಬಾ,'' ಎಂದಳು ಆರತಿ.
``ಪ್ಲೀಸ್ ಇವತ್ತು ನೀನೇ ಊಟ ಬಡಿಸು. ಸಿನಿಮಾ ಬಿಟ್ಟು ಬರುವ ಮನಸ್ಸಾಗುತ್ತಿಲ್ಲ,'' ಎಂದು ಹೇಳುತ್ತಾ ಆರತಿಯತ್ತ ಒಂದು ಫ್ಲೈಯಿಂಗ್ ಕಿಸ್ ಕಳಿಸಿದ.
ಅರತಿ ಮುಗುಳ್ನಕ್ಕಳು. ಇಬ್ಬರೂ ಸೇರಿ ಡಿನ್ನರ್ ಮುಗಿಸಿದರು. ಸಿನಿಮಾ ಮುಗಿಯುತ್ತಿದ್ದಂತೆ ಜಗದೀಶ್ ಮಲಗಲು ಬಂದ. ಆರತಿ ಮಲಗಿಕೊಂಡೇ ಮೊಬೈಲ್ ನಲ್ಲಿ ಏನನ್ನೋ ನೋಡುತ್ತಿದ್ದಳು. ಜಗದೀಶ್ ಅವಳ ಸಮೀಪವೇ ಮಲಗಿಕೊಂಡು ಅವಳನ್ನು ತನ್ನ ಬಾಹುಗಳಲ್ಲಿ ಬಳಸಿದ.