ದೀಪಕ್ ಗೆ ಮೊದಲಿನಿಂದಲೂ ತನ್ನನ್ನು ಮದುವೆಯಾಗುವ ಹುಡುಗಿ ಸುಂದರವಾಗಿರಬೇಕೆಂಬ ಅಪೇಕ್ಷೆ ಇತ್ತು. ಅದರ ಹೊರತಾಗಿ ಉಳಿದೆಲ್ಲ ಗುಣಗಳು ಅವನಿಗೆ ಗೌಣ ಎನಿಸುತ್ತಿದ್ದವು. ಅದೊಂದು ದಿನ ಉದಯೋನ್ಮುಖ ಮಾಡೆಲ್ ಸ್ನೇಹಾ ಜೊತೆಗೆ ಅವನ ಮದುವೆಯಾಯಿತು. ಸುಮಾರು 1 ವರ್ಷದ ತನಕ ಅವನು ತನ್ನ ಹೆಂಡತಿಯ ಜೊತೆಗೆ ಹೇಗೊ ಸಂಸಾರ ನಡೆಸಿದ. ಆದರೆ ಅವನ ಕುಟುಂಬದ ಗಾಡಿ ಮಾತ್ರ ಸರಾಗವಾಗಿ ಸಾಗುತ್ತಿರಲಿಲ್ಲ. ಈಗ ದೀಪಕ್ ಗೆ ತನ್ನ ಹೆಂಡತಿ ಸ್ನೇಹಾಳ ಸೌಂದರ್ಯ ಮತ್ತು ಸ್ಮಾರ್ಟ್ನೆಸ್ ಎರಡರ ಬಗೆಗೂ ಕೋಪ ಬರಲು ಶುರುವಾಯಿತು. ಅವನ ಸಂಬಳದ ಶೇ.40ರಷ್ಟು ಭಾಗ ಅವಳ ಅಲಂಕಾರದ ವಸ್ತುಗಳಿಗೆ ಖರ್ಚಾಗುತ್ತಿತ್ತು. ಮನೆಯ ಯಾವ ಕೆಲಸ ಕಾರ್ಯಗಳಲ್ಲೂ ಅವಳು ಕೈ ಜೋಡಿಸುತ್ತಿರಲಿಲ್ಲ. ಈ ಕಾರಣದಿಂದ ಅವನ ಸಂಬಳದ ಶೇ.30ರಷ್ಟು ಭಾಗ ಮನೆ ಕೆಲಸದವರಿಗೆ ಹೋಗುತ್ತಿತ್ತು. ದೀಪಕ್ ಬಹಳ ಕಷ್ಟಪಟ್ಟು ತನ್ನ ಕುಟುಂಬವೆಂಬ ಗಾಡಿಯನ್ನು ಎಳೆದುಕೊಂಡು ಹೊರಟಿದ್ದ.
ಸ್ನೇಹಾಳಿಗೂ ಮಾಡೆಲಿಂಗ್ ಅಸೈನ್‌ಮೆಂಟ್ ಸಿಗುತ್ತಿದ್ದವು. ಅದರಿಂದ ಬಂದ ಹಣವನ್ನು ಅವಳು ಪಾರ್ಟಿಗಾಗಿ ಖರ್ಚು ಮಾಡುತ್ತಿದ್ದಳು. ತನ್ನ ಸ್ಮಾರ್ಟ್ ಪತ್ನಿ ಇಷ್ಟು ದುಬಾರಿಯಾಗಿ ಪರಿಣಮಿಸಬಹುದೆಂದು ಅವನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ.
ಇತ್ತ ಸಾಧಾರಣ ರೂಪದ ಸಿದ್ಧಾರ್ಥ್ ಗೆ ಅತ್ಯಂತ ಸುಂದರ ಪತ್ನಿ ಪೂಜಾ ದೊರೆತಾಗ ಅವನಿಗೆ ಬಹುದೊಡ್ಡ ಖಜಾನೆಯೇ ದೊರೆತಂತಹ ಖುಷಿ ಸಿಕ್ಕಿತ್ತು. ಆರಂಭದಲ್ಲಿ ಅವನಿಗೆ ಸಂಬಂಧಿಕರು, ಸ್ನೇಹಿತರು ಮಂಗನ ಕೈಗೆ ಮಾಣಿಕ್ಯ ಸಿಕ್ಕಿದೆ ಎಂದು ಟೀಕಿಸುತ್ತಿದ್ದರು. ಆದರೆ ನಕ್ಕು ಅವನು ಅವರ ಮಾತನ್ನು ತಳ್ಳಿಹಾಕುತ್ತಿದ್ದ. ಇದೇ ಕಾರಣದಿಂದ ಅವನಲ್ಲಿ ಕ್ರಮೇಣ ಕೀಳರಿಮೆ ಬೆಳೆಯತೊಡಗಿತು. ಚೆನ್ನಾಗಿ ಹೋಗಬಹುದಾಗಿದ್ದ ಕುಟುಂಬದ ಗಾಡಿಯನ್ನು ಅವನೇ ತಡೆದು ನಿಲ್ಲಿಸಿದಂತಾಯಿತು.
ಎಲ್ಲಿದೆ ಕೊರತೆ?
ಎರಡೂ ಉದಾಹರಣೆಗಳನ್ನು ಗಮನಿಸುವುದಾದರೆ, ಎರಡೂ ಪ್ರಕರಣಗಳಲ್ಲಿ ಪರಸ್ಪರ ತಿಳಿವಳಿಕೆಯ ಕೊರತೆ ಪ್ರಮುಖವಾಗಿ ಎದ್ದು ಕಾಣುತ್ತದೆ. ಸಮಯ ಬದಲಾಯಿತು, ಯುಗ ಬದಲಾಗಿದೆ. ಆದರೆ ಜನರ ಯೋಚನೆಯ ದೃಷ್ಟಿಕೋನ ಮಾತ್ರ ಸ್ವಲ್ಪ ಮಟ್ಟಿಗೂ ಬದಲಾಗಿಲ್ಲ. ಆದರೆ ವಿವಾಹಕ್ಕೆ ಅರ್ಹರಾದ ಯುವಕರು ಸೌಂದರ್ಯದ ಬಗೆಗಷ್ಟೇ ಮಹತ್ವ ಕೊಡುತ್ತಾರೆ. ಪತ್ರಿಕೆಗಳ ಮ್ಯಾಟ್ರಿಮೋನಿಯಲ್ ಸೈಟ್ ಗಳ ಮೇಲೆ ಗಮನಹರಿಸಿದಾಗ, ವಿವಾಹಯೋಗ್ಯ ಹುಡುಗಿಯನ್ನು ಹುಡುಕುವುದು ಬಹಳಷ್ಟು ಕಷ್ಟವಾಗಿ ಪರಿಣಮಿಸಿದೆ. ಮೊದಲಾಗಿದ್ದರೆ ಶ್ವೇತವರ್ಣ, ಎತ್ತರದ ಕಾಯ, ಆಕರ್ಷಕ ಮುಖ ಮತ್ತು ಮನೆ ಹುಡುಗಿಯ ಬೇಡಿಕೆ ಇರುತ್ತಿತ್ತು. ಆದರೆ ಈಗ ಇದರ ಜೊತೆಗೆ ಸ್ಮಾರ್ಟ್ ಹಾಗೂ ಎಲ್ಲ ಬಗೆಯಿಂದ ಇಂಡಿಪೆಂಡೆಂಟ್ ಆಗಿರುವ ಕನ್ಯೆಯ ಬಗ್ಗೆ ಬೇಡಿಕೆ ಹೆಚ್ಚುತ್ತಿದೆ.
ಈ ಸ್ಮಾರ್ಟ್ ನೆಸ್ ಮೊದಲು ಗಂಡನಿಗೆ ನಂತರ ಮನೆಯವರಿಗೆ ಬಹಳ ಇಷ್ಟವಾಗುತ್ತದೆ. ಆದರೆ ಈ ಸ್ಮಾರ್ಟ್ ಪತ್ನಿ ಪ್ರತಿಯೊಂದು ಚಿಕ್ಕಪುಟ್ಟ ಸಲಹೆಗಳನ್ನು ಕೊಡತೊಡಗಿದಾಗ ಅವಳು ಬಡಾಯಿಗಾರ್ತಿ ಎನಿಸಿಕೊಳ್ಳುತ್ತಾಳೆ.
ತೃಪ್ತಿಯಂತಹ ಸ್ಮಾರ್ಟ್ ಮತ್ತು ಸುಂದರ ಹುಡುಗಿಯ ಜೊತೆ ಮದುವೆಯಾಗಿ ರಾಜಶೇಖರ್ ಬಹಳ ಖುಷಿಯಿಂದಿದ್ದ. ಆದರೆ ಬಹು ಬೇಗನೇ ಅವನಿಗೆ ತನ್ನ ಸ್ಮಾರ್ಟ್ ಪತ್ನಿಯ ಮೌಲ್ಯ ತಿಳಿದುಹೋಯಿತು. ಆಕೆ ಸ್ಮಾರ್ಟ್ ಹಾಗೂ ಫಿಟ್ ಆಗಿರಲು ಪ್ರತಿವಾರ 3 ದಿನ ಜಿಮ್ ಗೆ ಹೋಗುತ್ತಿದ್ದಳು. ಜಿಮ್ ಗೆ ಹೋಗುತ್ತಿದ್ದುದರಿಂದ ರಾಜಶೇಖರ್ ಗೆ ಬೆಳಗ್ಗೆಯ ತಿಂಡಿ ಹಾಗೂ ಇತರೆ ಕೆಲಸಗಳನ್ನು ತಾನೇ ಮಾಡಿಕೊಳ್ಳಬೇಕಾಗಿ ಬರುತ್ತಿತ್ತು. ತೃಪ್ತಿ ತನ್ನ ಸಂಬಳವನ್ನು ಪೂರ್ತಿಯಾಗಿ ತನ್ನ ಅವಶ್ಯಕತೆಗಳಿಗಷ್ಟೇ ಖರ್ಚು ಮಾಡಿಕೊಳ್ಳುತ್ತಿದ್ದಳು. ಅವನೇನಾದರೂ ಹಣದ ಬಗ್ಗೆ ಕೇಳಿದರೆ ಆಕೆ ಏನೇನೊ ನೆಪ ಹೇಳುತ್ತಿದ್ದಳು. ಅವಳು ತನಗೆ ಇಷ್ಟವಾಗುವ ಊಟ ತಿಂಡಿಯನ್ನಷ್ಟೇ ಮಾಡುತ್ತಿದ್ದಳು. ರಾಜಶೇಖರ್ ಗೆ ಅದು ಬಹಳ ಕಸಿವಿಸಿಯನ್ನುಂಟು ಮಾಡುತ್ತಿತ್ತು. ತನಗೆ ಬೇಕಾದ ಡೀಪ್‌ಫ್ರೈಡ್ ಆಹಾರಗಳನ್ನು ಹೊರಗಿನಿಂದ ತರಿಸಿಕೊಳ್ಳಬೇಕಾಗುತ್ತಿತ್ತು.
ತೃಪ್ತಿ ಅವಶ್ಯವಾಗಿ ಈ ಯುಗದ ಸ್ಮಾರ್ಟ್ ಪತ್ನಿ. ಆದರೆ ಅವಳಲ್ಲಿ ಒಂದಿಷ್ಟು ಫ್ಲೆಕ್ಸಿಬಿಲಿಟಿ ಇದ್ದರೆ ಅವರ ಕುಟುಂಬ ಸುಗಮವಾಗಿ ಸಾಗಬಹುದಿತ್ತು. ಸ್ಮಾರ್ಟ್ ಪತ್ನಿಯರು ಮೊದಲು ತಮ್ಮ ಸ್ಮಾರ್ಟ್ ನೆಸ್ ಕಾರಣದಿಂದ ಆಕರ್ಷಿಸಲ್ಪಡುತ್ತಾರೆ. ಕೆಲವು ವರ್ಷಗಳ ಬಳಿಕ ತಮ್ಮ ವಿಚಿತ್ರ ಧೋರಣೆ ಹಾಗೂ ವಿಚಿತ್ರ ಬೇಡಿಕೆಗಳ ಕಾರಣದಿಂದ ಮನೆಯಲ್ಲಿ ಅಪರಿಚಿತರಂತೆ ವರ್ತಿಸುತ್ತಾರೆ. ಈ ಕಾರಣದಿಂದ ಅವರಿಬ್ಬರ ನಡುವೆ ಮಹಿಳಾವಾದ ಹಾಗೂ ಪುರುಷರ ನಡುವಿನ ಪಾರಂಪರಿಕ ಯೋಚನೆಯ ಹಗ್ಗಜಗ್ಗಾಟ ಶುರುವಾಗುತ್ತದೆ.
ಏನು ಮಾಡಬೇಕು?
ಇಂತಹದರಲ್ಲಿ ನಾವು ನಮ್ಮ ವೈವಾಹಿಕ ಸಂಬಂಧದ ಆರಂಭವನ್ನು ಹೀಗೆ ಶುರು ಮಾಡಿದರೆ ಹೆಂಡತಿಯ ಸ್ಮಾರ್ಟ್ ನೆಸ್ ನಿಂದ ಯಾವುದೇ ತೊಂದರೆಯಾಗದು.
ನೀವು ಹಾಗೂ ನಿಮ್ಮ ಹೆಂಡತಿ ಪರಸ್ಪರರಿಗೆ ಪೂರಕ. ಹೆಂಡತಿ ಪ್ರತಿಯೊಂದು ಕೆಲಸವನ್ನೂ ತನ್ನ ಸ್ಮಾರ್ಟ್ ನೆಸ್‌ತೋರಿಸಿಕೊಳ್ಳಲು ಮಾಡುತ್ತಾಳೆಂದು ಭಾವಿಸಬೇಡಿ. ಒಂದು ವೇಳೆ ನಿಮಗೆ ಹೀಗೆನಿಸಿದರೆ ನೀವು ಅವಳ ಜೊತೆ ಶಾಂತ ಮನಸ್ಸಿನಿಂದ ಚರ್ಚೆ ಮಾಡಿ.
ಯಾವ ಗೆಳೆಯರು ಸ್ಮಾರ್ಟ್ ಪತ್ನಿಯ ಕಾರಣದಿಂದ ನಿಮ್ಮನ್ನು ತುಚ್ಛವಾಗಿ ಕಾಣುತ್ತಾರೊ, ಅವರು ನಿಮ್ಮ ನಿಜವಾದ ಗೆಳೆಯರಾಗಿರಲಿಕ್ಕಿಲ್ಲ. ಹೀಗಾಗಿ ಅವರ ಸಲಹೆಯ ಬಗ್ಗೆ ಹೃದಯದಿಂದಲ್ಲ, ಮೆದುಳಿನಿಂದ ಯೋಚಿಸಿ. ನಿಮ್ಮ ಹೆಂಡತಿಯೇ ನಿಮ್ಮ ಸುಖದುಃಖಕ್ಕೆ ಸಮಾನ ಪಾಲುಗಾರ್ತಿ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದಂತಹ ಸ್ವಭಾವವಿರುತ್ತದೆ. ಅವಳು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದು ನಿಮಗೆ ಹೆಮ್ಮೆಯ ವಿಷಯವಾಗಬೇಕೇ ಹೊರತು ಟೀಕೆಯ ವಿಷಯವಾಗಬಾರದು.
ನಿಮಗೆ ಸ್ಮಾರ್ಟ್ ಪತ್ನಿ ಬೇಕಿದ್ದರೆ ಒಂದಿಷ್ಟು ಹೊಂದಾಣಿಕೆಯನ್ನು ಮಾಡಿಕೊಳ್ಳಲೇಬೇಕು. ಅವಳು ಸ್ಮಾರ್ಟ್ ಆಗಿ ಕಂಡುಬರಲು, ಅದಕ್ಕಾಗಿ ಒಂದಷ್ಟು ಖರ್ಚು ಮಾಡಲೇಬೇಕಾಗತ್ತದೆ. ಅದಕ್ಕಾಗಿ ಇಬ್ಬರೂ ಸೇರಿ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬುದನ್ನು ನಿರ್ಧರಿಸಬಹುದು. ನೀವು ಕೂಡ ನಿಮ್ಮ ಸ್ಮಾರ್ಟ್ ವೈಫ್ ಜೊತೆಗೆ ಜಿಮ್ ಜಾಯಿನ್ ಆಗಬಹುದು. ಇದರಿಂದ ನಿಮಗೂ ಒಂದಿಷ್ಟು ರಿಯಾಯಿತಿ ದೊರಕುತ್ತದೆ ಹಾಗೂ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ಇಬ್ಬರೂ ಜೊತೆ ಜೊತೆಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ.
ಪ್ರತಿಯೊಂದು ಸಂಗತಿಗೂ ಎರಡು ಮುಖಗಳಿರುವಂತೆ, ನಿಮ್ಮ ಹೆಂಡತಿ ಸ್ಮಾರ್ಟ್ ಆಗಿದ್ದರೆ ಅವಳು ನಿಮ್ಮ ಜೀವನದ ಏರಿಳಿತಗಳಲ್ಲಿ ನಿಮಗೆ ಆಸರೆಯಾಗಿರಬಲ್ಲಳು. ಅವಳು ಕೆಲವೊಮ್ಮೆ ತನ್ನದೇ ಆದ ರೀತಿಯಲ್ಲಿ ಹೆಜ್ಜೆ ಹಾಕತೊಡಗಿದಾಗ ಅದಕ್ಕೆ ಆಕ್ಷೇಪ ಎತ್ತದೇ ಅವಳ ನಿರ್ಧಾರವನ್ನು ಸ್ವಾಗತಿಸಿ.
ನಿಮ್ಮ ಸ್ಮಾರ್ಟ್ ಹೆಂಡತಿ ಮನೆಯ ಕೆಲಸ ಕಾರ್ಯಗಳಲ್ಲಿ ಕೆಲಸಗಾರರ ಮೇಲೆ ಅವಲಂಬಿಸಿದ್ದರೆ, ಅವಳು ತನ್ನ ಸ್ಮಾರ್ಟ್ ನೆಸ್ ನಿಂದ ಅವರಿಂದ ಚೆನ್ನಾಗಿ ಕೆಲಸ ಮಾಡಿಸಿರಬಹುದು. ಪ್ರತಿಯೊಂದು ಅವಶ್ಯಕತೆಗಳಿಗೂ ಅವಳೂ ನಿಮ್ಮತ್ತ ನೋಡಲು ಇಷ್ಟಪಡುವುದಿಲ್ಲ.
ನಿಮ್ಮ ಸ್ಮಾರ್ಟ್ ವೈಫ್ ಪ್ರತಿಯೊಂದು ನಿರ್ಧಾರವನ್ನು ತಾನೇ ಏಕೆ ತೆಗೆದುಕೊಳ್ಳಲು ಇಷ್ಟಪಡುತ್ತಾಳೆಂದರೆ, ನಿಮ್ಮ ಮತ್ತು ಅವಳ ದೃಷ್ಟಿಕೋನದಲ್ಲಿ ವ್ಯತ್ಯಾಸ ಇರಬೇಕು. ಇಂತಹ ಪ್ರತಿಯೊಂದು ಮಾತನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಾಳೆಂದು ಖಂಡಿತ ಭಾವಿಸಬೇಡಿ. ನಿಮ್ಮ ಮಾತು ಇಷ್ಟವಾಗದಿದ್ದರೆ ಅವಳು ಅವಶ್ಯವಾಗಿ ಪ್ರಶ್ನೆ ಮಾಡುತ್ತಾಳೆ. ಅದನ್ನು ನೀವು ಪ್ರತಿಷ್ಠೆಯಾಗಿ ಭಾವಿಸಬೇಡಿ.
ಸ್ಮಾರ್ಟ್ ಹೆಂಡತಿ ಒಂದಿಷ್ಟು ದುಬಾರಿ ಸರಿ, ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಳು ನಿಮ್ಮ ನಿಜವಾದ ಮಾರ್ಗದರ್ಶಕಿಯಾಗಬಲ್ಲಳು. ಹೀಗಾಗಿ ನಿಮ್ಮ ದೃಷ್ಟಿಕೋನ ಅದಕ್ಕೆ ತಕ್ಕಂತೆ ಬದಲಾಗಬೇಕಿದೆ.
– ಶೃತಿ ಶರ್ಮ