ದೀಪಕ್ ಗೆ ಮೊದಲಿನಿಂದಲೂ ತನ್ನನ್ನು ಮದುವೆಯಾಗುವ ಹುಡುಗಿ ಸುಂದರವಾಗಿರಬೇಕೆಂಬ ಅಪೇಕ್ಷೆ ಇತ್ತು. ಅದರ ಹೊರತಾಗಿ ಉಳಿದೆಲ್ಲ ಗುಣಗಳು ಅವನಿಗೆ ಗೌಣ ಎನಿಸುತ್ತಿದ್ದವು. ಅದೊಂದು ದಿನ ಉದಯೋನ್ಮುಖ ಮಾಡೆಲ್ ಸ್ನೇಹಾ ಜೊತೆಗೆ ಅವನ ಮದುವೆಯಾಯಿತು. ಸುಮಾರು 1 ವರ್ಷದ ತನಕ ಅವನು ತನ್ನ ಹೆಂಡತಿಯ ಜೊತೆಗೆ ಹೇಗೊ ಸಂಸಾರ ನಡೆಸಿದ. ಆದರೆ ಅವನ ಕುಟುಂಬದ ಗಾಡಿ ಮಾತ್ರ ಸರಾಗವಾಗಿ ಸಾಗುತ್ತಿರಲಿಲ್ಲ. ಈಗ ದೀಪಕ್ ಗೆ ತನ್ನ ಹೆಂಡತಿ ಸ್ನೇಹಾಳ ಸೌಂದರ್ಯ ಮತ್ತು ಸ್ಮಾರ್ಟ್ನೆಸ್ ಎರಡರ ಬಗೆಗೂ ಕೋಪ ಬರಲು ಶುರುವಾಯಿತು. ಅವನ ಸಂಬಳದ ಶೇ.40ರಷ್ಟು ಭಾಗ ಅವಳ ಅಲಂಕಾರದ ವಸ್ತುಗಳಿಗೆ ಖರ್ಚಾಗುತ್ತಿತ್ತು. ಮನೆಯ ಯಾವ ಕೆಲಸ ಕಾರ್ಯಗಳಲ್ಲೂ ಅವಳು ಕೈ ಜೋಡಿಸುತ್ತಿರಲಿಲ್ಲ. ಈ ಕಾರಣದಿಂದ ಅವನ ಸಂಬಳದ ಶೇ.30ರಷ್ಟು ಭಾಗ ಮನೆ ಕೆಲಸದವರಿಗೆ ಹೋಗುತ್ತಿತ್ತು. ದೀಪಕ್ ಬಹಳ ಕಷ್ಟಪಟ್ಟು ತನ್ನ ಕುಟುಂಬವೆಂಬ ಗಾಡಿಯನ್ನು ಎಳೆದುಕೊಂಡು ಹೊರಟಿದ್ದ.
ಸ್ನೇಹಾಳಿಗೂ ಮಾಡೆಲಿಂಗ್ ಅಸೈನ್‌ಮೆಂಟ್ ಸಿಗುತ್ತಿದ್ದವು. ಅದರಿಂದ ಬಂದ ಹಣವನ್ನು ಅವಳು ಪಾರ್ಟಿಗಾಗಿ ಖರ್ಚು ಮಾಡುತ್ತಿದ್ದಳು. ತನ್ನ ಸ್ಮಾರ್ಟ್ ಪತ್ನಿ ಇಷ್ಟು ದುಬಾರಿಯಾಗಿ ಪರಿಣಮಿಸಬಹುದೆಂದು ಅವನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ.
ಇತ್ತ ಸಾಧಾರಣ ರೂಪದ ಸಿದ್ಧಾರ್ಥ್ ಗೆ ಅತ್ಯಂತ ಸುಂದರ ಪತ್ನಿ ಪೂಜಾ ದೊರೆತಾಗ ಅವನಿಗೆ ಬಹುದೊಡ್ಡ ಖಜಾನೆಯೇ ದೊರೆತಂತಹ ಖುಷಿ ಸಿಕ್ಕಿತ್ತು. ಆರಂಭದಲ್ಲಿ ಅವನಿಗೆ ಸಂಬಂಧಿಕರು, ಸ್ನೇಹಿತರು ಮಂಗನ ಕೈಗೆ ಮಾಣಿಕ್ಯ ಸಿಕ್ಕಿದೆ ಎಂದು ಟೀಕಿಸುತ್ತಿದ್ದರು. ಆದರೆ ನಕ್ಕು ಅವನು ಅವರ ಮಾತನ್ನು ತಳ್ಳಿಹಾಕುತ್ತಿದ್ದ. ಇದೇ ಕಾರಣದಿಂದ ಅವನಲ್ಲಿ ಕ್ರಮೇಣ ಕೀಳರಿಮೆ ಬೆಳೆಯತೊಡಗಿತು. ಚೆನ್ನಾಗಿ ಹೋಗಬಹುದಾಗಿದ್ದ ಕುಟುಂಬದ ಗಾಡಿಯನ್ನು ಅವನೇ ತಡೆದು ನಿಲ್ಲಿಸಿದಂತಾಯಿತು.
ಎಲ್ಲಿದೆ ಕೊರತೆ?
ಎರಡೂ ಉದಾಹರಣೆಗಳನ್ನು ಗಮನಿಸುವುದಾದರೆ, ಎರಡೂ ಪ್ರಕರಣಗಳಲ್ಲಿ ಪರಸ್ಪರ ತಿಳಿವಳಿಕೆಯ ಕೊರತೆ ಪ್ರಮುಖವಾಗಿ ಎದ್ದು ಕಾಣುತ್ತದೆ. ಸಮಯ ಬದಲಾಯಿತು, ಯುಗ ಬದಲಾಗಿದೆ. ಆದರೆ ಜನರ ಯೋಚನೆಯ ದೃಷ್ಟಿಕೋನ ಮಾತ್ರ ಸ್ವಲ್ಪ ಮಟ್ಟಿಗೂ ಬದಲಾಗಿಲ್ಲ. ಆದರೆ ವಿವಾಹಕ್ಕೆ ಅರ್ಹರಾದ ಯುವಕರು ಸೌಂದರ್ಯದ ಬಗೆಗಷ್ಟೇ ಮಹತ್ವ ಕೊಡುತ್ತಾರೆ. ಪತ್ರಿಕೆಗಳ ಮ್ಯಾಟ್ರಿಮೋನಿಯಲ್ ಸೈಟ್ ಗಳ ಮೇಲೆ ಗಮನಹರಿಸಿದಾಗ, ವಿವಾಹಯೋಗ್ಯ ಹುಡುಗಿಯನ್ನು ಹುಡುಕುವುದು ಬಹಳಷ್ಟು ಕಷ್ಟವಾಗಿ ಪರಿಣಮಿಸಿದೆ. ಮೊದಲಾಗಿದ್ದರೆ ಶ್ವೇತವರ್ಣ, ಎತ್ತರದ ಕಾಯ, ಆಕರ್ಷಕ ಮುಖ ಮತ್ತು ಮನೆ ಹುಡುಗಿಯ ಬೇಡಿಕೆ ಇರುತ್ತಿತ್ತು. ಆದರೆ ಈಗ ಇದರ ಜೊತೆಗೆ ಸ್ಮಾರ್ಟ್ ಹಾಗೂ ಎಲ್ಲ ಬಗೆಯಿಂದ ಇಂಡಿಪೆಂಡೆಂಟ್ ಆಗಿರುವ ಕನ್ಯೆಯ ಬಗ್ಗೆ ಬೇಡಿಕೆ ಹೆಚ್ಚುತ್ತಿದೆ.
ಈ ಸ್ಮಾರ್ಟ್ ನೆಸ್ ಮೊದಲು ಗಂಡನಿಗೆ ನಂತರ ಮನೆಯವರಿಗೆ ಬಹಳ ಇಷ್ಟವಾಗುತ್ತದೆ. ಆದರೆ ಈ ಸ್ಮಾರ್ಟ್ ಪತ್ನಿ ಪ್ರತಿಯೊಂದು ಚಿಕ್ಕಪುಟ್ಟ ಸಲಹೆಗಳನ್ನು ಕೊಡತೊಡಗಿದಾಗ ಅವಳು ಬಡಾಯಿಗಾರ್ತಿ ಎನಿಸಿಕೊಳ್ಳುತ್ತಾಳೆ.
ತೃಪ್ತಿಯಂತಹ ಸ್ಮಾರ್ಟ್ ಮತ್ತು ಸುಂದರ ಹುಡುಗಿಯ ಜೊತೆ ಮದುವೆಯಾಗಿ ರಾಜಶೇಖರ್ ಬಹಳ ಖುಷಿಯಿಂದಿದ್ದ. ಆದರೆ ಬಹು ಬೇಗನೇ ಅವನಿಗೆ ತನ್ನ ಸ್ಮಾರ್ಟ್ ಪತ್ನಿಯ ಮೌಲ್ಯ ತಿಳಿದುಹೋಯಿತು. ಆಕೆ ಸ್ಮಾರ್ಟ್ ಹಾಗೂ ಫಿಟ್ ಆಗಿರಲು ಪ್ರತಿವಾರ 3 ದಿನ ಜಿಮ್ ಗೆ ಹೋಗುತ್ತಿದ್ದಳು. ಜಿಮ್ ಗೆ ಹೋಗುತ್ತಿದ್ದುದರಿಂದ ರಾಜಶೇಖರ್ ಗೆ ಬೆಳಗ್ಗೆಯ ತಿಂಡಿ ಹಾಗೂ ಇತರೆ ಕೆಲಸಗಳನ್ನು ತಾನೇ ಮಾಡಿಕೊಳ್ಳಬೇಕಾಗಿ ಬರುತ್ತಿತ್ತು. ತೃಪ್ತಿ ತನ್ನ ಸಂಬಳವನ್ನು ಪೂರ್ತಿಯಾಗಿ ತನ್ನ ಅವಶ್ಯಕತೆಗಳಿಗಷ್ಟೇ ಖರ್ಚು ಮಾಡಿಕೊಳ್ಳುತ್ತಿದ್ದಳು. ಅವನೇನಾದರೂ ಹಣದ ಬಗ್ಗೆ ಕೇಳಿದರೆ ಆಕೆ ಏನೇನೊ ನೆಪ ಹೇಳುತ್ತಿದ್ದಳು. ಅವಳು ತನಗೆ ಇಷ್ಟವಾಗುವ ಊಟ ತಿಂಡಿಯನ್ನಷ್ಟೇ ಮಾಡುತ್ತಿದ್ದಳು. ರಾಜಶೇಖರ್ ಗೆ ಅದು ಬಹಳ ಕಸಿವಿಸಿಯನ್ನುಂಟು ಮಾಡುತ್ತಿತ್ತು. ತನಗೆ ಬೇಕಾದ ಡೀಪ್‌ಫ್ರೈಡ್ ಆಹಾರಗಳನ್ನು ಹೊರಗಿನಿಂದ ತರಿಸಿಕೊಳ್ಳಬೇಕಾಗುತ್ತಿತ್ತು.