ದೆಹಲಿಯ ಘಟನೆ. ಚಹಾ ಮಾಡೇ ಎಂದು ಗಂಡ ಹೇಳಿದ್ದಕ್ಕೆ ಹಾಲಿಲ್ಲ ಮಾಡಲಾಗದು ಎಂದಳು ಪತ್ನಿ. ಪಿತ್ತ ನೆತ್ತಿಗೇರಿದ ಮಹರಾಯ ಅವಳನ್ನು ಹೊಡೆದು ಕೊಂದೇಬಿಡುದೇ?

“ಹೋಗಿ ಹಾಲು ತಾ,” ಎಂದು ಅವಳು ಹೇಳಿದ್ದಕ್ಕೆ ಕೋಪದಿಂದ ಬುಸುಗುಡುತ್ತಾ ಕಿಟಕಿ ಮುರಿದು, ಅದೇ ಗಾಜಿನಿಂದ ಅವಳನ್ನು ಇರಿದೇಬಿಟ್ಟ. ತಾಯಿಯನ್ನು ರಕ್ಷಿಸಲು ಧಾವಿಸಿದ ಮಗಳಿಗೂ ಎಗ್ಗಾಮುಗ್ಗಾ ಗಾಯಗಳಾಗಿ ರಕ್ತ ಹರಿಯಿತು, ಅವಳೂ ಸತ್ತಳು. ಈ ಮಹರಾಯ 3 ಹೆಣ್ಣುಮಕ್ಕಳ ತಂದೆ, ದೊಡ್ಡ ಮಗಳು ಕೂಲಿ ಮಾಡಿ ಸಂಪಾದಿಸಿದ್ದರಿಂದ ಬೇರೆಯವರು ಅನ್ನ ಕಾಣುತ್ತಿದ್ದರು. ಕೊನೆಯವಳು 12ನೇ ಕ್ಲಾಸ್‌. ಪತ್ನಿಯ ಮೇಲೆ ಹಲ್ಲೇ ಮಾಡುವುದು ತನ್ನ ಹಕ್ಕು ಎಂದು ತಿಳಿದಿದ್ದ ಈ ಭೂಪತಿ!

ಪತ್ನಿಯರ ಮೇಲೆ ಇಂಥ ಹಿಂಸೆ ವಿಶ್ವವ್ಯಾಪಿ. ಸಮಾಜ ಇದನ್ನೇ ಗಂಡಸ್ತನ ಎನ್ನುತ್ತದೆ. ಇತ್ತೀಚಿನ `ಪಂಜಾಬ್‌ ಕೇಸರಿ’ ದೈನಿಕದಲ್ಲಿ ಪ್ರಕಟಿತ ಒಂದು ವಿಶೇಷ ಲೇಖನದಲ್ಲಿ ತಿಳಿಸಿರುವುದೆಂದರೆ, ವೇದವ್ಯಾಸರು ಹಣ್ಣಿಗೆ ಸದಾ ತನು, ಮನ, ಚನ, ಕರ್ಮಗಳಿಂದ ಪತಿ ಸೇವೆಯೇ ಪಾರಮ್ಯ ಅಂತ. ದೇಶವಿಡೀ ಸಮರ್ಥಕರಿರು ಗಾಯತ್ರಿ ಪರಿವಾರದಲ್ಲಿ ಒಂದೆಡ ಹೀಗೆ ಉಲ್ಲೇಖವಿದೆ : ಪತಿವ್ರತಾ ಧರ್ಮದ ಅರ್ಥ ಪತ್ನಿಯು ಪತಿಗೆ ಸದಾ ಸಂಪೂರ್ಣ ಆತ್ಮ ಸಮರ್ಪಣೆ ಮಾಡಿಕೊಳ್ಳಬೇಕು. ಪತಿವ್ರತಾ ಧರ್ಮದಲ್ಲಿ ನಿಷ್ಠೆಯುಳ್ಳ ಪತ್ನಿಯು ಯೋಗಿಯ ಹಾಗೆ ಜೀವನ್ಮುಕ್ತಳಾಗುತ್ತಾಳೆ. ಪತಿ ಸೇವೆಯೇ ಪರಮೇಶ್ವರ ಸಾಕ್ಷಾತ್ಕಾರ ಎಂದು ಭಾವಿಸುತ್ತಾಳೆ. ತನ್ನ ಆರಾಧ್ಯ ದೈವದ ಆತ್ಮೋತ್ಸರ್ಗ ಮಾಡಿಕೊಳ್ಳುವುದರಲ್ಲಿ ಅನಿವಾರ್ಯ ಆನಂದ ಕಾಣುತ್ತಾಳೆ. ಪತಿವ್ರತೆಯ ವಿಶೇಷ ಲಕ್ಷಣವೆದರೆ, ಸ್ವತಂತ್ರಳಾಗಿ ಬಾಳುವ ಆಸೆ ತ್ಯಜಿಸುವುದು, ಭಾವನೆ ಇರಿಸಿಕೊಳ್ಳದಿರುವುದು. ಮಹಾ ಪತಿವ್ರತಾ ನಾರಿ ತನ್ನ ಸೇವಾ ಮನೋಭಾವದಿಂದ ಎಂಥ ಕುಡುಕ, ವಿಷಯಲಂಪಟ ಪತಿಯನ್ನೂ ಬದಲಿಸುತ್ತಾಳಂತೆ. ಹೆಣ್ಣು ಎಂದೂ ಗಂಡಿನ ಮನದಲ್ಲಿ ಚಿಂತೆಗೆ ಕಾರಣಳಾಗಬಾರದು…. ಇತ್ಯಾದಿ ಅಖಂಡ ಗುಣಗಳಿವೆ.

gharelu-hinsa-2

ಈ ವಿಷಯವನ್ನು ಸೋಶಿಯಲ್ ಮೀಡಿಯಾದಿಂದ ತೆಗೆದುಕೊಳ್ಳಲಾಗಿದೆ. ಅಂದ್ರೆ ಇಂದಿನ ಕಾಲದಲ್ಲೂ ಇದು ಪ್ರಚಲಿತ ಮಾತ್ರವಲ್ಲ, ಭಾರಿ ಪ್ರಚಾರ ನಡೆಯುತ್ತಿದೆ. ಹೀಗಿರುವಲ್ಲಿ ಕುಡುಕ ಗಂಡ ಪತ್ನಿಗೆ ಟೀ ಮಾಡಲು ಹೇಳಿ, ಹಾಲು ತಾ ಎಂದರೆ ಅವಳನ್ನೇ ಕೊಂದು ಹಾಕಿದರೆ, ಈ ಮಹರಾಯನನ್ನು ದೋಷಿ ಎನ್ನಲಾದೀತೇ? ಇಂಥ ಜ್ಞಾನ ಬೋಧಿಸುವ, ಲಕ್ಷಾಂತರ ವಾಟ್ಸ್ ಆ್ಯಪ್‌ ಮೆಸೇಜ್‌ ಗಳು, FB ‌ಪೋಸ್ಟುಗಳು, ಆನ್‌ ಲೈನ್‌ ಬ್ಲಾಗುಗಳು, ಸೈಟುಗಳಲ್ಲಿ ಹಗಲೂ ರಾತ್ರಿ ಪತಿವ್ರತಾ ಧರ್ಮ ಬೋಧಿಸುತ್ತಿದ್ದರೆ, ಹೀಗಾಗದೆ ಇನ್ನೇನಾದೀತು?

ಧರ್ಮದ ಹಿನ್ನೆಲೆಯಲ್ಲಿ ಇಂಥ ಅಗಾಧ ನಿಷ್ಠೆ ಮೆರೆಯುವಲ್ಲಿ ಹೆಣ್ಣಿನ ನಿರಂತರ ಶೋಷಣೆ ಇದೆ. ಧರ್ಮ ತಾನೇ ಮುಂದಾಗಿ ಹೆಣ್ಣನ್ನು ಹಿಂದುಳಿದವರು, ದಲಿತರು ಎಂಬಂತೆ ಶೋಷಿಸಲು ಲೈಸೆನ್ಸ್ ನೀಡುತ್ತದೆ. ಸಾಲದು ಎಂಬಂತೆ ಹಿಂದುತ್ವದ ಕಹಳೆ ಮೊಳಗಿಸಲಾಗುತ್ತಿದೆ. ಯಾರು ಇಂಥ ಧರ್ಮದ ಗುಟ್ಟು ರಟ್ಟು ಮಾಡುವರೋ ಅಂಥವರ ಬಾಯಿ ಬಡಿಯಲಾಗುತ್ತದೆ, ಧಾರ್ಮಿಕ ಭಾವನೆಗಳು ಅಪಾಯಕ್ಕೆ ದಾರಿ ಮಾಡುತ್ತಿವೆ. ಇದೇ ತತ್ವವನ್ನು ಕ್ರೈಸ್ತ, ಮುಸ್ಲಿಂ ಧರ್ಮಗಳಲ್ಲಿಯೂ ಪಾಲಿಸಲಾಗುತ್ತಿದೆ.

ಅಸಲಿಗೆ ಆಪತ್ತಿನ ವಿಷಯವೆಂದರೆ, ಗಂಡು ಹೆಣ್ಣಿನ ಮೇಲೆ ಬೇಕಾದಂತೆ ಶೋಷಣೆ ಮಾಡಬಹುದು ಎಂಬುದು. ಮೇಲಿನ  ಮಹರಾಯನ ವಿಷಯದಲ್ಲಂತೂ, ಸಂಪಾದನೆ ಬಿಡಿ, ಕೊಟ್ಟ ಕಾಸು ಕೊಂಡು ಹೋಗಿ ಅಂಗಡಿಯಿಂದ ಹಾಲೂ ತರಲಾಗದ ಮೈಗಳ್ಳ. ಇಂಥ ಮಾನಸಿಕತೆ ಏಕೆ? ಧರ್ಮ ತನಗಾಗಿ ಮಾಡಿಟ್ಟಿರುವ ಈ ಕ್ರೂರ ವ್ಯವಸ್ಥೆಯಿಂದ ಹೆಣ್ಣನ್ನು ಏನು ಮಾಡಿದರೂ ಸರಿ ಎಂದೇ ಭಾವಿಸುತ್ತಾನೆ. ಒಬ್ಬಂಟಿ, ಅಸಹಾಯಕಿ, ಅಬಲೆ, ವಿಚ್ಛೇದಿತೆ, ಅವಿವಾಹಿತೆ, ವಿಧವೆ, ಪರಿತ್ಯಕ್ತೆಯರು ಈ ಸಮಾಜದಲ್ಲಿ ಕಾಲ ಕಸ. ಹೆಣ್ಣು ಗಂಡನನ್ನು ಹೊಂದಿದ್ದರೆ ಮಾತ್ರ ಪೂಜೆ, ವ್ರತ, ಹಬ್ಬಗಳಲ್ಲಿ ಭಾಗಹಿಸಬಹುದೆಂದು ಬೋಧಿಸಲಾಗಿದೆ, ಒಬ್ಬಳೇ ಆದರೆ ಹೀಗಳೆಯಲಾಗುತ್ತದೆ. ಈ ಮಹರಾಯ ಮಾಡಿದ ಕೊಲೆಯೂ ಇದಕ್ಕೆ ಪೂರಕ.

ಕೋಪದಲ್ಲಿ ಕೊಲೆಗಳಾಗುವುದು ಅಸಹಜವಲ್ಲ, ಹಾಗೇಂತ ಪತ್ನಿ, ಪುತ್ರಿಯರನ್ನೇ ಕೊಂದುಬಿಡುವುದೇ? ಯೋಚಿಸಿ, ಸಂಚು ಮಾಡಿ ಕೊಲೆಗೈಯುವಿಕೆ ಬೇರೆ ವಿಷಯ. ದುರ್ಘಟನಾಶ ಹತ್ಯೆ ಆದರೂ ತಪ್ಪು ತಪ್ಪೇ. ಮೊದಲು ಕಿಟಕಿ ಒಡಿ, ಅದರಿಂದ ಪತ್ನಿ, ರಕ್ಷಿಸಲು ಬಂದ ಯಾರೇ ಆಗಲಿ ಇರಿದು ಸಾಯಿಸು ಎನ್ನುವುದು ಒಂದು ಮಾನಸಿಕ ಕಾಯಿಲೆ ಅಲ್ಲದೆ ಮತ್ತೇನು? ಇದನ್ನು ಕೇವಲ ಧರ್ಮ ಬೋಧಿಸುತ್ತದೆ, ಸಮಾಜ ಅದನ್ನು ಪುರಸ್ಕರಿಸುತ್ತದೆ, ಕಾನೂನು ರಕ್ಷಿಸುತ್ತದೆ. ಇದು 21ನೇ ಶತಮಾನದ ವಿಶ್ವಗುರು ಭಾರತದ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ಸಣ್ಣ ಅವಘಡ ಅಷ್ಟೆ.

ಶ್ರೀಜಾಳ ಸಂಘರ್ಷ ಹಾಗೂ ವಿಶ್ವಾಸಕ್ಕೊಂದು ಸಲಾಂ

ತಾಯಿಯ ಸಾವಿನ ನಂತರ ತಂದೆಯೂ ದೂರವಾದರೆ, ಮಕ್ಕಳ ವರ್ತಮಾನ, ಭವಿಷ್ಯ ಕುಲಗೆಡುವುದು ನಿಶ್ಚಿತ. ಆದರೆ ಬಿಹಾರದ ಶ್ರೀಜಾ 10ನೇ ಕ್ಲಾಸಿನಲ್ಲಿ 99.4% ಅಂಕ ಗಳಿಸಿ, ತಾಯಿ ತಂದೆ ಇಲ್ಲದಿದ್ದಾಗ್ಯೂ, ಮಾಮನ ಮನೆಯಲ್ಲೇ ಉಳಿದುಕೊಂಡು ಬದುಕಲು ಕಲಿತಳು, ಅದನ್ನು ಸವಾಲಾಗಿಯೂ ಸ್ವೀಕರಿಸಿದಳು.

ಸಾಮಾನ್ಯವಾಗಿ ತಾಯಿ ತಂದೆಯರನ್ನು ಕಳೆದುಕೊಂಡು ಅನಾಥರಾದ ಮಕ್ಕಳು, ಕಂಡವರ ಮನೆಯಲ್ಲಿ ಬೆಳೆದು, ಆ ಮನೆಯ ಸಂಬಳ ರಹಿತ ಆಳುಗಳೇ ಆಗಿಹೋಗುತ್ತಾರೆ. ಆದರೆ ರೈತ ಮಾವನ ಆಶ್ರಯದಲ್ಲಿ ಬೆಳೆದ ಶ್ರೀಜಾ ಬಿಹಾರ್‌ ನ ಟಾಪರ್ ಎನಿಸಿದ್ದಾಳೆ.

ತಾಯಿ ಸತ್ತಾಗ ಶ್ರೀಜಾಳ ವಯಸ್ಸು ಕೇವಲ 4. ಸ್ವಲ್ಪ ಕಾಲದ ನಂತರ ತಂದೆ ಬೇರೆ ಮದುವೆಯಾದ. ಶ್ರೀಜಾ ಮತ್ತು ಅವಳ ತಂಗಿಯನ್ನು ಮಾವನ ಮನೆಗೆ ಓಡಿಸಿ ಆತ, ಮತ್ತೆ ತಿರುಗಿಯೂ ನೋಡಲಿಲ್ಲ. ತನ್ನ ತಾಯಿಯ ತವರು ಸೇರಿದ ಶ್ರೀಜಾ, ಮಾಮನ ಆಸರೆಯಲ್ಲೇ ಬೆಳೆದು, ಓದು ಕಲಿತಳು.

ಹಿಂದಿನ ಕಾಲದ ಮಾತು. ಆಗೆಲ್ಲ ಮಲಮಕ್ಕಳಾಗಿ ತಮ್ಮ ಮನೆಯಲ್ಲೇ ಬೆಳೆಯುತ್ತಿದ್ದ ಇಂಥ ಮಕ್ಕಳು ಪಡಬಾರದ ಪಾಡು ಪಡುತ್ತಿದ್ದರು. ಆಗೆಲ್ಲ ಮನೆ ತುಂಬಾ ಮಕ್ಕಳಿದ್ದರು, ಇಂಥ ಅನಾಥ ಮಕ್ಕಳು ಹೇಗೋ ಬೆಳೆದು ದೊಡ್ಡವರಾಗುತ್ತಿದ್ದರು. ಆದರೆ  ಇಂದಿನ ಕಾಲದಲ್ಲಿ ಅಗತ್ಯಗಳು ಹೆಚ್ಚುತ್ತಲೇ ಇವೆ. ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರತಿ ಮಗು ಹೆಚ್ಚಿನ ಅಟೆನ್ಶನ್ ಬೇಡುತ್ತದೆ. ಇಂದಿನ ತಾಯಿ ತಂದೆಯರ ಗಮನವೆಲ್ಲ ಮಕ್ಕಳ ಬೇಡಿಕೆ ಪೂರೈಸುವುದರಲ್ಲಿ ಆಗಿಹೋಗುತ್ತದೆ. ಹಾಗಿರುವಾಗ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಮಾನಸಿಕ ಸ್ಥಿತಿ ದಯನೀಯ ಆಗುತ್ತದೆ.

ಇಂದು ಮಕ್ಕಳ ಅಗತ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಹ್ಯಾಂಡ್‌ ಮೀ ಡೌನ್‌ ಅಂದ್ರೆ ಬೇರೆಯವರು ಬಿಸಾಡಿದ ಬಟ್ಟೆಗಳನ್ನು ತೊಡಲು ಯಾರೂ ಸಿದ್ಧರಿಲ್ಲ. ಮೊಬೈಲ್‌, ಆಧುನಿಕ ಪುಸ್ತಕಗಳು, ಕೋಚಿಂಗ್‌, ಟ್ಯೂಟರ್‌, ಪಿಕ್ನಿಕ್ಸ್, ಸಿನಿಮಾ, ಹೋಟೆಲ್ ಇತ್ಯಾದಿಗಳ ಆಕರ್ಷಣೆಗೆ ಸಿಲುಕುತ್ತಾರೆ. ಇಂಥದ್ದರ ಮಧ್ಯೆ ಈ ಅನಾಥ ಮಕ್ಕಳಿಗೆ ಎರಡು ಹೊತ್ತು ಅನ್ನ ಕಾಣುವುದೇ ಕಷ್ಟ. ಇನ್ನೆಲ್ಲ ಕೊಡಿಸಬೇಕು ಯಾರು?

ಹೀಗಿರುವಾಗ ಶ್ರೀಜಾಳ ಮಾವಂದಿರು ಅವಳನ್ನು ತಂಗಿ ಜೊತೆ ಸಾಕಿ ಸಲಹಿ ವಿದ್ಯೆ ನೀಡಿ, ಇಂದಿನ ಸಮಾಜದಲ್ಲಿ ಒಂದು ಐಡೆಂಟಿಟಿ ಕೊಡಿಸಿದ್ದಾರೆ.

ಅಸಲಿಗೆ ಇಂಥ ಅನಾಥ ಮಕ್ಕಳಿಗೆ ಪ್ರೀತಿ ವಾತ್ಸಲ್ಯ ತೋರಿಸಿ ಪೋಷಿಸುವುದು, ಲಕ್ಷಾಂತರ ರೂ. ದಾನ ಮಾಡುವುದಕ್ಕಿಂತಲೂ ಶ್ರೇಷ್ಠಕರ. ಇಂಥ ದಾನದ ಪುಣ್ಯಕ್ಕೆ ಮೊರೆ ಹೋಗುವುದನ್ನು ಕಲಿತ ಜನ, ಬಂಧು ಬಾಂಧವರ ಮಕ್ಕಳನ್ನು ಸಾಕಲು ಮಾತ್ರ ಮುಂದಾಗುವುದಿಲ್ಲ. ಹೀಗೆ ಅನಾಥರಾಗುವುದು ಆ ಮಕ್ಕಳ ದೌರ್ಭಾಗ್ಯ, ಹಣೆಬರಹ, ಪೂರ್ವ ಜನ್ಮದ ಕರ್ಮ….. ಅಂಥವರನ್ನು ತಾವೇಕೆ ಸಾಕಬೇಕು ಎನ್ನುತ್ತಾರೆ.

ಪರರ ಮಕ್ಕಳನ್ನು ಸಾಕಿ ಸಲಹುವುದರಲ್ಲೂ ಒಂದು ಅಪೂರ್ವ ಸುಖವಿದೆ. ತಮ್ಮದೇ ಮಕ್ಕಳ ಜೊತೆ ಇಂಥವರೂ ಬೆಳೆದು ಯಶಸ್ಸು ಕಂಡರೆ, ಅದೆಂಥ ಪರಿಪೂರ್ಣತೆ ಅಲ್ಲವೇ? ಹೀಗಾಗಿಯೇ ಇಂದು ವಿಶ್ವದಲ್ಲಿ ಎಲ್ಲೆಡೆ ದತ್ತು ಸ್ವೀಕಾರಕ್ಕೆ ಜನ ಹಾತೊರೆಯುತ್ತಾರೆ. ಅಂಥ ಮಕ್ಕಳ ಬಣ್ಣ, ಅಂದಚೆಂದ, ಹಿನ್ನೆಲೆ ಗಮನಿಸಲು ಯಾರೂ ಹೋಗುವುದಿಲ್ಲ.

ಈ ಮಕ್ಕಳು ತಮ್ಮನ್ನು ಸಾಕಿದವರ ಬಗ್ಗೆ ಬಹಳ ವಿಶ್ವಾಸ ಬೆಳೆಸಿಕೊಳ್ಳುತ್ತಾರೆ. ಇದರಿಂದ ಪಾದ್ರಿ, ಮಠಾಧೀಶರು, ಮೌಲ್ವಿಗಳು ತೀವ್ರ ಕೋಪಗೊಳ್ಳುತ್ತಾರೆ. ಇಂಥ ಅನಾಥ ಮಕ್ಕಳ ಮೇಲೆ ತಮಗೆ ಮಾತ್ರ ಹಕ್ಕಿರುವುದು, ಅದನ್ನು ಬಿಟ್ಟು ಇತರ ಮಕ್ಕಳಂತೆ ಅವರು ಕಾನ್ವೆಂಟ್‌ ಗಳಲ್ಲಿ ಕಲಿತು ಉದ್ಧಾರವಾದರೆ ತಂತಮ್ಮ ಧರ್ಮದ ಬೀಡುಗಳಲ್ಲಿ ಉಚಿತ ಊಳಿಗ ತಪ್ಪಿ ಹೋಗುತ್ತದೆ ಎಂಬುದು ಅವರ ವ್ಯಥೆ. ಇವರ ಹೆಸರು ಹೇಳಿ ಅಲ್ಲಿಗೆ ಬರುವ ಭಕ್ತರಿಂದ ಧಾರಾಳ ಹಣ ಕೇಳಬಹುದೆಂಬುದು ಅವರ ಹುನ್ನಾರ. ಅನಾಥಾಲಯಗಳು ಪ್ರಾಚೀನ ಕಾಲದಿಂದಲೂ ತಮ್ಮ ಕ್ರೂರತನಕ್ಕೆ ಹೆಸರಾಗಿವೆ. ಸರ್ಕಾರ ನಡೆಸುವ ಬಾಲಗೃಹಗಳಂತೂ ನಿರ್ಲಕ್ಷ್ಯದ ಪರಮಾವಧಿ, ಲೈಂಗಿಕ ಶೋಷಣೆಗೆ ಗುರಿಯಾಗುತ್ತವೆ. ಹೀಗಾಗಿ ಮಾಮನ ಬಳಿ ಬೆಳೆದ ಶ್ರೀಜಾರಂಥ ಹೆಣ್ಣುಮಕ್ಕಳು ಹೆಚ್ಚು ಸುರಕ್ಷಿತ ಹಾಗೂ ಟೆನ್ಶನ್‌ ನಲ್ಲೂ ಪ್ರತಿಭೆಗೆ ಪುರಸ್ಕಾರವಿದೆ ಎಂದು ಸಾಬೀತಾಗಿದೆ.

ಪತ್ನಿ ಯಾರ ಗುಲಾಮಳೂ ಅಲ್ಲ

ವೈವಾಹಿಕ ವಿವಾದಗಳಲ್ಲಿ ಪತಿ ತನ್ನ ಪತ್ನಿ ನಡತೆಗೆಟ್ಟಳು ಎಂದು ಸಾರಲು ಎಂತೆಂಥ ಪುರಾವೆ ತರಬಲ್ಲ ಎಂಬುದಕ್ಕೆ ಅಹಮದಾಬಾದಿನ ಈ ಪ್ರಕರಣವೇ ಸಾಕ್ಷಿ. 2008ರಲ್ಲಿ ಇವರ ಮದುವೆ ಆಯ್ತು. 2010ಕ್ಕೆ ಪತ್ನಿ ತವರಿಗೆ ವಾಪಸ್‌. ನಂತರ ಪತಿ ದುಬೈಗೆ ಹಾರಿದ.

ಪತ್ನಿ ಡೊಮೆಸ್ಟಿಕ್‌ ವೈಲೆನ್ಸ್ ಹಾಗೂ ಮೇಂಟೆನೆನ್ಸ್ ಗಾಗಿ ಮೊಕದ್ದಮೆ ಹೂಡಿದಾಗ, ಅವಳು ಶೀಲಗೆಟ್ಟವಳು ಎನ್ನಲು ಈ ಮಹರಾಯ ಅವಳಿಗೆ ರಾಜಕೀಯ ಮುಖಂಡರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಸಾರಿದ!

ಪುರಾವೆಗಾಗಿ ಅವನು FBನಲ್ಲಿ ಬೇಕೆಂದೇ ತಮ್ಮ ಪತ್ನಿ ಶಾಸಕರೊಡನೆ ಇದ್ದಾಳೆ ಎಂದು ತೋರಿಸಿಕೊಂಡ.

ಕೋರ್ಟ್‌ ಪತಿಯ ಈ ಆಕ್ಷೇಪಗಳನ್ನು ತಿರಸ್ಕರಿಸಿತು ಹಾಗೂ ಮಾಸಿಕ 10 ಸಾವಿರ ಖರ್ಚಿಗೆ ಕೊಡುವಂತೆ ಆದೇಶಿಸಿತು. ಈ ಪ್ರಕರಣ, ತನ್ನಿಂದ ತ್ಯಜಿಸಲ್ಪಟ್ಟ ಪತ್ನಿ ಮೇಲೂ ಪತಿ ಎಂಥ ಅಂಕುಶ ಬಯಸುತ್ತಾನೆ ಎಂಬುದನ್ನು ಸಾರುತ್ತದೆ. ತಾನು ಕೈ  ಹಿಡಿದವಳನ್ನೇ ಕಂಡವರ ಜೊತೆ ಫೋಟೋದಲ್ಲಿ ತೋರಿಸುವ ಹುನ್ನಾರಕ್ಕೂ ಮುಂದಾಗಲಿಲ್ಲ.

ಪತ್ನಿ ಯಾವ ಕ್ಷೇತ್ರದಲ್ಲೇ ಯಶಸ್ವಿ ಎನಿಸಿದರೂ ಪತಿರಾಯ ಸಹಿಸಲಾರ. ಅನಾದಿ ಕಾಲದಿಂದಲೂ ಧರ್ಮ ಅವನಿಗೆ ಪತ್ನಿ ಕಾಲ ಕಸ ಎಂದೇ ಬೋಧಿಸುತ್ತಿದೆ. ಎಷ್ಟೋ ಮನೆಗಳಲ್ಲಿ ಇಂದೂ ಸಹ, ಗಳಿಸುವ ಪತ್ನಿ, ಪತಿಯಿಂದ ಹೊಡೆತ ತಿನ್ನುತ್ತಾಳೆ.

ಪತ್ನಿ ಆದವಳು ತನ್ನನ್ನು ಬಿಟ್ಟು ಎಲ್ಲಿಗೆ ಹೋದಾಳು ಎಂದೇ ಭಾವಿಸುವ ಪತಿಯರಿಗೆ ಏನೂ ಕೊರತೆ ಇಲ್ಲ. ಹಾಗಾಗಿ ಅವಳನ್ನು ಗುಲಾಮಳನ್ನಾಗಿ ನಡೆಸುವುದೇ ಸರಿ ಅಂತಾರೆ. ಪತ್ನಿ ಕೆಲಸ ಮಾಡಿ ಸಂಪಾದಿಸಲಿ, ಆದರೆ ಅದನ್ನೆಲ್ಲ ತನ್ನ ವಶಕ್ಕೆ ಕೊಡಲಿ ಎಂಬ ಸ್ವಾರ್ಥಿಗಳಿವರು.

ಅಪಾರ ಶ್ರೀಮಂತ ಮನೆತನಗಳ ಪತ್ನಿಯರ ಖರ್ಚಿಗೆ ಇಂದಿನ ಕಾಲದಲ್ಲಿ ಏನೂ ಕಷ್ಟವಿಲ್ಲ ಎಂಬುದೇನೋ ನಿಜ. ಅವರು ಹೊಸ ಹೊಸ ಡ್ರೆಸ್‌, ರೇಷ್ಮೆ ಸೀರೆ, ಒಡವ ವಸ್ತ್ರಗಳಿಗೆ ಹಣ ಸುರಿಯುತ್ತಾರೆ, ಕಿಟಿ ಪಾರ್ಟಿಗಳಲ್ಲಿ ಹಣ ಉಡಾಯಿಸುತ್ತಾರೆ. ಆದರೆ ಇವನ್ನೆಲ್ಲ ಪತಿ ತನ್ನ ಮೋಜಿಗಾಗಿ ಖರ್ಚು ಮಾಡಲು ಬಿಡುತ್ತಾನೆ, ಆಗ ಅವಳು ತನ್ನ ಗುಲಾಮಳಾಗಿ ಇರುತ್ತಾಳೆ ಅಂತ. ಇಂಥ ದುಬಾರಿ ಖರ್ಚಿನ ಚಟ ಬೆಳೆಸಿಕೊಂಡರು ಪತಿಯ ಜಬರ್ದಸ್ತಿ ಸಹಿಸಲೇಬೇಕು.

ವಿಡಂಬನೆ ಎಂದರೆ, ಇಂದಿನ ಹೆಣ್ಣು ಹೆತ್ತವರು, ಮಗಳನ್ನು ಮದುವೆ ಮಾಡಿಕೊಟ್ಟ ನಂತರ ಅವಳ ಮೇಲೊಂದು ಕಣ್ಣಿಟ್ಟಿರುತ್ತಾರೆ, ಅವಳಿಗೆ ಸಪೋರ್ಟ್‌ ಮಾಡ್ತಾರೆ, ಪತಿಯ ಅತಿಯಾದ ವ್ಯವಹಾರಗಳಿಂದ ರಕ್ಷಿಸುತ್ತಾರೆ. ತಾಯಿಗಿಂತಲೂ ತಂದೆ ಇಲ್ಲಿ ಹೆಚ್ಚು ಜವಾಬ್ದಾರಿ ವಹಿಸುತ್ತಾನೆ. ಸಾಮಾನ್ಯವಾಗಿ ತಾಯಿ, ಶ್ರೀಮಂತರ ಮನೆಯ ಸೊಸೆಯಾದ ಮಗಳನ್ನು ಹೇಗೋ ಅಲ್ಲೇ ಅಡ್ಜಸ್ಟ್ ಮಾಡಿಕೊಂಡಿರು ಎಂದೇ ಸಲಹೆ ನೀಡುತ್ತಾಳೆ.

ತನ್ನ ಪತ್ನಿಯ ಶೀಲದ ಬಗ್ಗೆ ಸಂದೇಹಿಸಲು, ಹೀಗೆಲ್ಲ ಮನ ಬಂದಂತೆ ಫೋಟೋ ಪ್ರದರ್ಶಿಸಲು ಯಾವ ಪತಿಗೂ ಹಕ್ಕಿಲ್ಲ. ಅದರಲ್ಲೂ ಏನೋ ಸಂದರ್ಭವಶಾತ್‌ ಅವಳು ಮನೆ ಬಿಟ್ಟು ಹೋಗಿರುವಾಗ, ಪತಿ ವಿದೇಶದಲ್ಲಿ ಇರುವಂತಾದಾಗ. ತಾನು ಅವಳಿಗೆ 10 ಸಾವಿರದ ಮಾಸಿಕ ಜೀವನಾಂಶ ನೀಡಿಬಿಟ್ಟರೆ ದೊಡ್ಡ  ಮಹಾನ್‌ ತ್ಯಾಗ ಮಾಡಿದಂತೇನೂ ಆಗುವುದಿಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ