ನಾಯಿಮರಿ ನಾಯಿಮರಿ ತಿಂಡಿ ಬೇಕೇ,ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು, ನಾಯಿಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು.

ಈ ಪದ್ಯವನ್ನು ನಾವೆಲ್ಲರೂ ನಮ್ಮ ಚಿಕ್ಕಂದಿನಲ್ಲಿ ಕಲಿತಿದ್ದೇವೆ. ಆಗೆಲ್ಲ ಅಲ್ಲೊಂದು ಇಲ್ಲೊಂದು ಅಪರೂಪದ ಮನೆಗಳವರು ನಾಯಿಯನ್ನು ಸಾಕುತ್ತಿದ್ದರು. ನಾಯಿಯನ್ನು ಸಾಕುವುದು ಮನೆಯನ್ನು ಕಾಯಲೆಂದೇ ಎನ್ನುವ ಭಾವನೆ. ಅದು ಮನೆಯ ಹೊರಗಿರುತ್ತಿತ್ತು ಅಥವಾ ಕೆಲವು ಮನೆಗಳಲ್ಲಿ ನಾಯಿಗೆಂದೇ ಒಂದು ಗೂಡನ್ನು ಕಟ್ಟಿಸಿರುತ್ತಿದ್ದರು. ನನ್ನ ತಮ್ಮನಿಗೆ ನಾಯಿಯೆಂದರೆ ಬಹಳ ಆಸೆ. ಹೀಗಾಗಿ ಚಿಕ್ಕಮಗಳೂರಿನಲ್ಲಿ ನಮ್ಮ ಮನೆಯಲ್ಲೊಂದು ನಾಯಿಗೂಡಿತ್ತು. ಆದರೆ ಈಗ ನಾಯಿಯನ್ನು ಸಾಕು ಪರಿಕಲ್ಪನೆಯೇ ಬದಲಾಗಿದೆ.

IMG_4877

ಮನೆಗೆ ನಾಯಿಯ ಆಗಮನ

ಮೊಮ್ಮಗಳು ದಾರಿಯಲ್ಲಿ ಬೀದಿ ನಾಯಿ ಹಾಕಿದ ಪುಟ್ಟ ಮರಿಗಳನ್ನು ನೋಡಿ, ಅದನ್ನು ಮುದ್ದು ಮಾಡುವುದು, ಅದಕ್ಕೆ ಹಾಲು ಹಾಕುವುದನ್ನು ಕಂಡ ಮಗ ಮೊಮ್ಮಗಳ ಹೆಸರು ಹೇಳಿ ನಾಯಿಯೊಂದನ್ನು ತಂದ. ಮುದ್ದಾದ ಲ್ಯಾಬರ್‌ ಡಾ ಜಾತಿಯದು. ನೋಡಲು ಬೆಳ್ಳಗೆ ಮುದ್ದು ಮುದ್ದಾಗಿತ್ತು. ಅದಕ್ಕೆ ಡಸ್ಕಿ ಎಂದು ನಾಮಕರಣವಾಯಿತು. ಅದು ನಮ್ಮ ಮನೆಗೆ ಬಂದಾಗ ಒಂದು ತಿಂಗಳು ವಯಸ್ಸಷ್ಟೇ. ಮನೆಯೆಲ್ಲಾ ಓಡಾಡುತ್ತಿತ್ತು. ಎಲ್ಲೆಂದರಲ್ಲಿ ಉಚ್ಚೆ, ಕಕ್ಕ ಮಾಡುತ್ತಿತ್ತು. ಮನೆಗೆ ಒಂದು ಮೂಟೆ ಮರಳು ಬಂತು. ನಾಯಿ ಗಲೀಜು ಮಾಡಿದರೆ ಅದರ ಮೇಲೆ ಮರಳು ಹಾಕಿ ಅದನ್ನು ತೆಗೆದು ಒಂದು ಬಕೆಟ್‌ ಗೆ ಹಾಕುವುದು ನಡೆದಿತ್ತು.

B8C4A87A-F6CD-4C56-82D7-18EC0B44AA13

ನಾಯಿಯ ಉಪಚಾರಕ್ಕೆ….

ನಾಯಿಗೆ ಮಲಗಲು ಹಾಸಿಗೆ ಬೇಡವೇ? ಒಂದು ಮಕಮಲ್ ಹಾಸಿಗೆ ಬಂತು ಅಷ್ಟೇ. ಆದರೆ ಅದಂತೂ ಒಂದು ದಿನ ಅದರ ಮೇಲೆ ಮಲಗಿದ್ದನ್ನು ನಾ ಕಾಣೆ. ನಂತರ ಅದಕ್ಕೆ ಕೊಡು ಆಹಾರ ಬಂತು. ಅಡುಗೆ ಮನೆಯಲ್ಲಿ ಒಂದು ಡ್ರಾನಲ್ಲಿ ಅದರ ಆಹಾರ. ಅದಕ್ಕೆ ಕೊಡುವ ಬಿಸ್ಕೆಟ್‌, ಉಗುರು ಕತ್ತರಿಸಲು ಅದಕ್ಕೊಂದು ನೇಲ್ ‌ಕಟರ್‌, ಅದರ ಔಷಧಿಗಳು ಎಲ್ಲವೂ ತುಂಬಿತು. ಅದನ್ನು ಕರೆದುಕೊಂಡು ಹೋಗಿ ವ್ಯಾಕ್ಸಿನ್‌ ಕೊಡಿಸಲಾಯಿತು. ಅದಕ್ಕೆ ಯಾವ ರೀತಿಯ ಆಹಾರ ನೀಡಬೇಕು. ಎಷ್ಚು ಹೊತ್ತು ಕೊಡಬೇಕು ಎಂದು ತಿಳಿದುಕೊಂಡು ಬಂದದ್ದಲ್ಲದೆ, ಅಂತರ್ಜಾಲದಲ್ಲೂ ಅದರ ಬಗ್ಗೆಯೇ ಹುಡುಕಾಟ, ಈ ನಾಯಿ ಬಹಳ ಸ್ನೇಹ ಜೀವಿಯಂತೆ. ಅದನ್ನು ಕಟ್ಟಿ ಹಾಕಿದರೆ ಅದಕ್ಕೆ ಬೇಸರವಾಗುತ್ತಂತೆ. ಹೀಗಾಗಿ ಇದು ಮನೆಯಲ್ಲಿ ಸರ್ವ ಸ್ವತಂತ್ರವಾಗಿ ಓಡಾಡುತ್ತಿತ್ತು.

20220908_203007

ಅದಕ್ಕೆ ಹಲ್ಲು ಬಂದಾಗ

ಅದು ಚಿಕ್ಕದಿರುವಾಗ, ಅದಕ್ಕೆ ಹಲ್ಲು ಬರುವ ಸಮಯದಲ್ಲಿ ಎಲ್ಲವನ್ನೂ ಕಚ್ಚಿ ಹಾಕುವುದು ಅದರ ಅಭ್ಯಾಸವಾಗಿತ್ತು. ಹೀಗಾಗಿ ಮನೆಯಲ್ಲಿನ ಉಡನ್‌ ಫ್ಲೋರಿಂಗ್‌, ಮ್ಯಾಟ್‌ ಗಳು ಏನು ಸಿಕ್ಕರೂ ಅದನ್ನು ಕಚ್ಚುತ್ತಿತ್ತು. ಸ್ವಲ್ಪ ದಿನ ಅಷ್ಟೇ, ನಂತರ ಸರಿ ಹೋಗುತ್ತೆ ಎನ್ನುವುದು ನಮ್ಮ ಸಮಾಧಾನ. ಈಗ ಅದು ಒಂದು ವರ್ಷದ್ದಾಗಿದೆ. ಪ್ರತಿ ದಿನ ಅದನ್ನು ಎರಡು ಬಾರಿ ಹೊರಗೆ ಕರೆದುಕೊಂಡು ಹೋಗಲು ಜನರನ್ನು ನೇಮಿಸಲಾಯಿತು. ಅವರ ಕರ್ತವ್ಯ ನಿರ್ವಹಣೆಯಿಂದ ಸ್ವಲ್ಪ ಮಟ್ಟಿಗೆ ಮನೆಯವರಿಗೆ ಕೆಲಸ ಕಡಿಮೆಯಾಯಿತು.

ಡಸ್ಕಿಯ ಜೊತೆ ಆತ್ಮೀಯತೆ

ಎಷ್ಟೇ ಗಲಾಟೆ ಮಾಡಿದರೂ ಅದು ಹತ್ತಿರ ಬಂದು ಮೆಲ್ಲನೆ ಪಕ್ಕ ಕುಳಿತರೆ ಒಂದು ರೀತಿಯ ಹಿತವಾಗುತ್ತದೆ. ಮೊದ ಮೊದಲು ಅದನ್ನು ಕಂಡರೆ ಹೆದರುತ್ತಿದ್ದ ನನ್ನ ಸೊಸೆ ಈಗ ಅದನ್ನು ಮುದ್ದು ಮಾಡುತ್ತಾಳೆ. ಯಾವ ಅಪರಿಚಿತ ಬಂದರೂ ಬೊಗಳಲು ಆರಂಭಿಸುತ್ತಾನೆ ಡಸ್ಕಿ. ಒಟ್ಟಿನಲ್ಲಿ ಎಲ್ಲರ ಮುದ್ದು ಮರಿಯಾಗಿದ್ದಾನೆ. ನನಗೆ ಅದನ್ನು ಕಂಡರೆ ಬೇಸರವೇನಿಲ್ಲ. ಆದರೆ ಅದು ನೆಕ್ಕಿದರೆ ನನಗೆ ಕಷ್ಟವಾಗುತ್ತಿತ್ತು. ಈಗ ಅದೂ ಅಭ್ಯಾಸವಾಗಿ ಹೋಗಿದೆ. ನಾನು ತಿಂಡಿಗೆ ಕುಳಿತರೆ ಮೆಲ್ಲಗೆ ಬಂದು ನನ್ನ ಕಾಲ ಹತ್ತಿರ ಕುಳಿತುಕೊಳ್ಳುತ್ತಾನೆ. ನಾನು ರೂಮಿನಲ್ಲಿದ್ದರೆ ನನ್ನ ರೂಮಿನ ಬಾಗಿಲ ಬಳಿ ಬಂದು ಕೂರುತ್ತಾನೆ. ಮೆಲ್ಲಗೆ ನನ್ನ ಮತ್ತು ಅವನ ನಡುವೆ ಸಣ್ಣ ಬಂಧ ಶುರುವಾಯಿತು. ನಾನು ರೂಮಿನಿಂದ ಹೊರಗೆ ಹೋದರೆ ನನ್ನ ಹಿಂದೆಯೇ ಬರುತ್ತಿದ್ದ. ಅವನನ್ನು ನೋಡಿದರೆ ನನಗೂ ಸ್ವಲ್ಪ ಮಟ್ಟಿನ ಪ್ರೀತಿ ಬಂದಿತು.

ಸ್ನೇಹ ಸಂಬಂಧ ಬೋರ್ಡಿಂಗ್

ಭಾನುವಾರ ಮಗನಿಗೆ ರಜಾ ಇರುವುದರಿಂದ ಅವನ ಜೊತೆ ಮನೆಯವರೆಲ್ಲರೂ ವಾಕ್‌ ಹೋಗುವಾಗ ಡಸ್ಕಿಯನ್ನೂ ಕರೆದುಕೊಂಡು ಹೋಗುತ್ತಾನೆ. ನಾಯಿಯನ್ನು ಸಾಕಿರುವವರೆಲ್ಲರೂ ಅವನಿಗೆ ಪರಿಚಯವಾಗಿದ್ದಾರೆ. ಅವರುಗಳ ಮಧ್ಯೆ ಉಭಯ ಕುಶಲೋಪರಿಯಾಗುತ್ತದೆ. ಅವರ ನಾಯಿ ಮಾಡುವ ತುಂಟಾಟ, ಅವರು ನೀಡುವ ಆಹಾರ ಎಲ್ಲದರ ವಿನಿಮಯವಾಗುತ್ತದೆ. ಒಟ್ಟಾರೆ ಅದಕ್ಕೆ ರಾಜೋಪಚಾವರಂತೂ ನಡೆಯುತ್ತಿರುತ್ತದೆ. ಎಲ್ಲವೂ ಸರಿ, ಆದರೆ ಮನೆಯವರೆಲ್ಲರೂ ಹೊರಗೆ ಹೋಗಬೇಕೆಂದಾಗ ಅದನ್ನು ಎಲ್ಲಿ ಬಿಡುವುದು? ಅದಕ್ಕೂ ಒಂದು ಪರಿಹಾರ, ನಾಯಿಯ ಬೋರ್ಡಿಂಗ್‌ ದಿನಕ್ಕೆ ಇಷ್ಟು ಅಂತಾ ಹಣ ಕೊಟ್ಟರೆ ಅದನ್ನು ನೋಡಿಕೊಳ್ಳುತ್ತಾರೆ.

ವಿದೇಶದಲ್ಲಿ ನಾಯಿ ಸಾಕುವಿಕೆ

ವಿದೇಶದಲ್ಲಿರುವ ಚಿಕ್ಕ ಮಗ, ಅವನೊಂದು ನಾಯಿಯನ್ನು ಸಾಕುತ್ತಿದ್ದಾನೆ. ಅದು ಗೋಲ್ಡನ್‌ ಡೂಡ್‌ ಜಾತಿಯಂತೆ. ಅದರ ಹೆಸರು ಚಾರ್ಲಿ. ಮನೆಯಲ್ಲಿ ಅದಕ್ಕಾಗಿ ಒಂದು ಚಿಕ್ಕ ಜಾಗವನ್ನು ಮೀಸಲಿರಿಸಿದ್ದಾನೆ. ಅದನ್ನು ಪೆನ್‌ ಎನ್ನುತ್ತಾರೆ. ಅದನ್ನು ಅಲ್ಲಿಂದ ಹೊರಗೆ ಬರಲು ಬಿಡುವುದಿಲ್ಲ. ಆದರೆ ಪ್ರತಿ ದಿನ ಎರಡು ಮೂರು ಬಾರಿ ಹೊರಗೆ ಕರೆದುಕೊಂಡು ಹೋಗುತ್ತಾನೆ. ಅದಿನ್ನೂ ಚಿಕ್ಕದು. ಅದಕ್ಕೂ ವ್ಯಾಕ್ಸಿನ್‌ ಆಯಿತು. ಅಮೆರಿಕಾದಲ್ಲಿ ಎಲ್ಲೆಂದರಲ್ಲಿ ನಾಯಿ ಗಲೀಜು ಮಾಡಿದರೆ ಬಿಟ್ಟು ಬರುವಂತಿಲ್ಲ. ಅದನ್ನು ಅವರೇ ಕವರ್‌ ನಲ್ಲಿ ಎತ್ತಿ ತೆಗೆದು ಡಸ್ಟ್ ಬಿನ್‌ ಗೆ ಹಾಕಬೇಕು. ಅಲ್ಲಿ ನಾಯಿಯ ಗಲೀಜನ್ನು ತೆಗೆಯದೆ ಬಿಟ್ಟರೆ ಹತ್ತರಿಂದ ಐವತ್ತು  ಡಾಲರ್‌ ಗಳ ತನಕ ದಂಡವನ್ನು ಹಾಕುತ್ತಾರೆ. ನಮ್ಮ ದೇಶದಲ್ಲಾದರೆ ಮೂಲೆಯಲ್ಲಿ ಮಾಡಿಸದೆ ನಡು ಬೀದಿಯಲ್ಲೂ ಮಾಡಿಸಿ ಬಿಡುತ್ತಾರೆ, ಹಾಗಾಗಿಯೇ ಬೀದಿಯಲ್ಲಿ ಅದರ ವಾಕಿಂಗ್‌. ಆದರೆ ವಿದೇಶಗಳಲ್ಲಿ ಹಾಗಲ್ಲ, ಶಿಸ್ತು ಜಾಸ್ತಿ. ಜನರೂ ಸಹ ಅದನ್ನು ಪಾಲಿಸುತ್ತಾರೆ.

ಬೇಷರತ್ತಾಗಿ ಪ್ರೀತಿಸುವ ಜೀವಿ

ನಿಯತ್ತಿಗೆ ಮತ್ತೊಂದು ಹೆಸರೆಂದರೆ ನಾಯಿ. ಯಾವುದೇ ಷರತ್ತುಗಳಿಲ್ಲದೆ ಅದು ನಿಮ್ಮನ್ನು ಪ್ರೀತಿಸುತ್ತದೆ. ಅದರ ಕೊನೆಯ ತನಕ ನಿಮ್ಮನ್ನು ಕಾಯುತ್ತದೆ. ನಾಯಿಯನ್ನು ಸಾಕಿದರು ಅದನ್ನು ಮನುಷ್ಯನಂತೆಯೇ ಭಾವಿಸುತ್ತಾರೆ. ಅದೂ ಇದೂ ಎಂದು ಹೇಳುವುದಿಲ್ಲ. ನಮ್ಮ ಡಸ್ಕಿ ಊಟಾನೇ ಮಾಡೋಲ್ಲ. ಮೊಟ್ಟೆ ತಿಂತಾನೆ. ತುಂಬಾ ತುಂಟ. ಚಾರ್ಲಿ ಮಲಗಿದ್ದಾನೆ. ಊಟ ಮಾಡುತ್ತಿದ್ದಾನೆ. ಈ ರೀತಿಯ ಮಾತುಗಳು, ಅದು ತೋರಿಸುವ ಪ್ರೀತಿ ನಮ್ಮನ್ನು ಅದರ ಕಡೆಗೆ ಸೆಳೆದುಬಿಡುತ್ತದೆ.

ಇತ್ತೀಚಿನ ಸಿನಿಮಾ ಚಾರ್ಲಿ ಎಲ್ಲ ಶ್ವಾನ ಪ್ರಿಯರನ್ನು ಆಕರ್ಷಿಸಿ. ಜೊತೆಗೆ ಅಳಿಸಿರುವುದೂ ಉಂಟು. ನನ್ನ ಅತ್ತೆ ನಾಯಿ ಎಂದರೆ ನಾರಾಯಣ ಎನ್ನುತ್ತಿದ್ದರು. ಧರ್ಮರಾಯ ಸ್ವರ್ಗಕ್ಕೆ ಹೋಗುವಾಗ ಕೊನೆಯವರೆಗೂ ಅವನ ಜೊತೆಯಲ್ಲಿದ್ದದ್ದು ಅವನ ನಾಯಿಯೇ! ಪ್ರಾಣಾಪಾಯದ ಸಮಯದಲ್ಲಿ ತನ್ನ ಒಡೆಯನನ್ನು ನಾಯಿ ಕಾಪಾಡಿದ ಪ್ರಸಂಗಗಳು ಬಹಳಷ್ಟಿವೆ. ನಾಯಿ ಎನ್ನುವುದು ಬರಿಯ ಪ್ರಾಣಿಯಲ್ಲ. ಅದು ನನ್ನ ಜೀವದ ಜೀ ಎನ್ನುತ್ತಾಳೆ ನನ್ನ ಮೊಮ್ಮಗಳು. ನನ್ನ ಒತ್ತಡಗಳನ್ನೆಲ್ಲಾ ದೂರ ಮಾಡಿರುವುದು ನಮ್ಮ ನಾಯಿ ಎನ್ನುತ್ತಾಳೆ ನನ್ನ ಗೆಳತಿ. ಆದರೂ ನಾಯಿ ಸಾಕುವುದು ಸ್ವಲ್ಪ ದುಬಾರಿಯೇ. ಮನೆಯಲ್ಲೊಂದು ನಾಯಿ ಇದ್ದರೆ ಮತ್ತೊಬ್ಬ ಹೆಚ್ಚಿನ ಸದಸ್ಯರಿದ್ದಂತೆ, ಖರ್ಚು, ಕೆಲಸ ಎಲ್ಲ ಜಾಸ್ತಿ. ಆಗಾಗ ಅತಿಯಾಗಿ ಬೊಗಳಿದಾಗ ಅಕ್ಕಪಕ್ಕದವರಿಂದ ಆಕ್ಷೇಪಣೆಗಳನ್ನೂ ಕೇಳಬೇಕಾಗುವುದು. ಒಟ್ಟಾರೆ ನಾಯಿಯನ್ನು ಸಾಕುವುದು ಜೀವನದಲ್ಲಿ ಒಂದು ವಿಭಿನ್ನ ಅನುಭವ. ಅದು ಬಂದಾಗ ಅದರ ನಿರ್ವಹಣೆ ಕಷ್ಟವೆನಿಸಿದರೂ, ಅದು ನಮ್ಮನ್ನು ಬಿಟ್ಟು ಹೋದಾಗ ದುಃಖ ಇನ್ನೂ ಜಾಸ್ತಿ. ಮಾನವೀಯ ಸಂಬಂಧಗಳು ಶಿಥಿಲವಾದಾಗ ಮನಸ್ಸು ಮತ್ತೊಂದನ್ನು ಹುಡುಕುತ್ತದೆ. ವೇಗ ಯುಗದ, ಒತ್ತಡದ ಜೀವನದಲ್ಲಿ ನಾಯಿಯ ಸಾಂಗತ್ಯ ಸ್ವಲ್ಪ ಮಟ್ಟಿಗೆ ಇದಕ್ಕೆ ಉತ್ತರವಾಗಬಹುದೇನೋ?

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ