ಕಥೆ – ವೈ.ಕೆ. ಸಂಧ್ಯಾ ಶರ್ಮ
ಕಾಲನ್ನು ನೆಲಕ್ಕೆ ಅಪ್ಪಳಿಸುತ್ತಾ ಬಾಯಲ್ಲಿ ಏನೋ ವಟಗುಟ್ಟಿಕೊಂಡು ಹೊರಟುಹೋದ. ನೆಲದ ಮೇಲೆ ಕೈಯೂರಿ ಬೋರಲು ಬಿದ್ದಿದ್ದಳು ಗಂಗಾ. ಅವಳ ಕಣ್ಣಿನಿಂದ ನೀರು ಸೆಗಣಿ ನೆಲದ ಮೇಲೆ ತೊಟ್ಟಿಕ್ಕಿ ಇಂಗಿಹೋಯಿತು. ಅವನು ಹೊರಗೆ ಕಾಲು ಹಾಕಿದೊಡನೆ ಗಂಗಾ ಬಿಕ್ಕಳಿಸಿ ಅಳಲು ಪ್ರಾರಂಭಿಸಿದಳು. ಒಂಡು ಕಡೆ ನೋವು, ಇನ್ನೊಂದೆಡೆ ಅಪಮಾನ. ಕೋಪದ ಆವೇಶದಲ್ಲಿ ಅವನು ಕೈಗೆ ಸಿಕ್ಕಿದ ಚೂಪು ಕಂಠದ ತಂಬಿಗೆಯನ್ನು ಇವಳತ್ತ ರಭಸದಿಂದ ಬೀಸಿದ್ದ. ಗಂಗಾ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ ಅದು ನೇರವಾಗಿ ಅವಳ ಮುಖಕ್ಕೆ ಬಡಿದು ಮೂಗಿನ ಏಣಿಗೆ ತಗುಲಿ ರಕ್ತ ಸುರಿಯುತ್ತಿತ್ತು. ಹಣೆ, ಕೆನ್ನೆ ಬುರಬುರನೆ ಊದಿ ಬೋರು ಬಂದಿತ್ತು. ಇನ್ನು ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಅವಳ ಕಣ್ಣೇ ಹೋಗಬೇಕಿತ್ತು. ಮಕ್ಕಳು ಅವರಿಬ್ಬರ ಗದ್ದಲಕ್ಕೆ ಎದ್ದು, ಇಷ್ಟು ಹೊತ್ತು ನಡೆದುದನ್ನು ಪೆಚ್ಚಾಗಿ ನೋಡುತ್ತಾ ಅವನು ತೊಲಗಿ ಹೋದ ಮೇಲೆ ಮೆಲ್ಲನೆ ಅವಳ ಬಳಿ ಸರಿದಿದ್ದ. ನೋವಿನಿಂದ ಮುಲುಗುಟ್ಟುತ್ತಿದ್ದಳು ಗಂಗಾ. ಇದಕ್ಕೆ ಕಾರಣವಾದ ಅವನನ್ನು ಲಟಿಕೆ ತೆಗೆದು ಶಪಿಸಿದಳು.
“ಆಳಾಗೋಗು…. ಇವತ್ ನೀನು ಮನೆಗೆ ಬರಬೇಕಲ್ಲ ಆಗೈತೆ…..” ಎಂದು ಅವನನ್ನು ಮನಸ್ಸಿನಲ್ಲೇ ಬಯ್ದು ತೃಪ್ತಿಪಟ್ಟುಕೊಂಡಳು.
ಅವ್ಯಾಹತವಾಗಿ ಮೂಗಿನಿಂದ ಹರಿಯುತ್ತಿದ್ದ ರಕ್ತವನ್ನು ನಿಲ್ಲಿಸಲು ಸ್ವಲ್ಪ ಅರಿಶಿನ ಹಾಕಿ ಬಟ್ಟೆ ಬಿಗಿದಳು. ಕೊರೆಯುತ್ತಿದ್ದ ಚಳಿ, ಮುಖದ ಮೇಲೆ ಬೀಸಿದಾಗ ಹಾಯ್ ಎಂದು ನೋವಿನಿಂದ ಕಿರುಚಿದಳು. ಅವಳ ಸ್ಥಿತಿಯನ್ನು ಕಂಡು ಮರುಗುವವರಾರೂ ಅಲ್ಲಿರಲಿಲ್ಲ. ಎಳೆ ಕಂದಮ್ಮಗಳು ಮಾತ್ರ ಮೂಕವಾಗಿ ದಿಟ್ಟಿಸುತ್ತಿದ್ದ ಅಷ್ಟೇ.
ಅಕ್ಕಪಕ್ಕದ ಗುಡಿಸಲಿನ ಹೆಂಗಸರೆಲ್ಲ ಆಗಲೇ ತಂತಮ್ಮ ಕೆಲಸದ ಮನೆಗಳಿಗೆ ತೆರಳಿದ್ದರು. ಇಷ್ಟು ಹೊತ್ತಿಗೆ ಗಂಗಾಳೂ ಅಮ್ಮಾವರ ಮನೆಯ ಪಾತ್ರೆಯಲ್ಲಿ ಕೈಯಾಡುತ್ತಿರಬೇಕಿತ್ತು. ಆದರೆ ಎದ್ದ ತಕ್ಷಣ ಅವನು ಜಗಳ ತೆಗೆದು ಅವಳನ್ನು ಗಾಯಗೊಳಿಸಿ ಮನೆಯಿಂದ ಕಾಲು ಕಿತ್ತಿದ್ದ. ಅವನು ಜಗಳ ತೆಗೆಯಲು ಸರಿಯಾದ ಕಾರಣವೇ ಇರಬೇಕು ಎಂದಿರಲಿಲ್ಲ. ವಿನಾಕಾರಣವಾಗಿ ಸಣ್ಣದ್ದನ್ನೇ ದೊಡ್ಡದು ಮಾಡಿ ಆರ್ಭಟಿಸಿ ಗಿಡುಗನಂತೆ ಅವಳ ಮೇಲೆ ಎರಗುವನು. ಗಂಗಾ ಪ್ರಾಣ ಭಯದಿಂದ ಗುಬ್ಬಚ್ಚಿಯಾಗಿ ಅವನ ಹಿಡಿತಕ್ಕೆ ಸಿಗದೇ ಹೊರಗೆ ಓಡುವಳು, ಬೊಬ್ಬೆ ಹಾಕುವಳು, ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆಯುವಳು. ಆಗ ಸುತ್ತಮುತ್ತಲ ಹಟ್ಟಿಯಿಂದ ಜನ ಓಡಿ ಬಂದು ಅವಳನ್ನು ಅವನ ಕಪಿಮುಷ್ಟಿಯಿಂದ ಬಿಡಿಸುವರು. ಗಂಗಾ `ಸದ್ಯ ಬದುಕಿದೆ,’ ಎಂದು ನಿಟ್ಟುಸಿರು ಕಕ್ಕುವಳು. ಅವನು ಸೋಲಿಗಾಗಿ ಹಲ್ಲು ಕಡಿಯುವನು. ಬೇರೇನೂ ಮಾಡಲಾಗದೆ ಗಂಗಾಳನ್ನು ಕೆಂಗಣ್ಣುಗಳಿಂದ ಕ್ರೂರವಾಗಿ ದಿಟ್ಟಿಸಿ ಉರಿ ಕಾರುವನು. ಆಗ ಪಕ್ಕದ ಗುಡಿಸಲಿನ ಬಸ್ಯಾ, “ಯಾಕಲ ಎಂಡ್ರನಾ ಇಂಗ್ ಬಡಿದ್ ಸಾಯಿಸ್ತೀ….. ಅವಳೂ ಮನಿಷಿ ಅಲ್ವಾ….? ಯಾರೂ ತಪ್ಪೇ ಮಾಡಕಿಲ್ಲ ಅಂತ ಏಳಕಾಯ್ತದಾ…. ಒಸಿ ಏನೋ ತೆಪ್ಪು ಮಾಡಿದ್ರೆ ಕ್ಷಮಿಸ್ ಬಿಡಬೇಕ್ಲಾ….. ಇಂಗೆ ಒಡ್ದು ಬಡ್ದು ಸಾಯ್ಸಾಕಿ ಬುಟ್ರೇ ನಾಳೆ ನಿಂರ್ಗ್ಯಾಲಾ ಗಂಜಿ ಕಾಯ್ಸಿ ಆಕೋರು,” ಎಂಬ ಉಪದೇಶಕ್ಕೆ ತೊಡಗುವನು.
ಗಂಗಾಳ ಗಂಡನ ಕೋಪ ಇನ್ನೂ ಸಿಡಿಯುವುದು. ಆದರೆ ಗಂಗಾಳ ನಿಸ್ತೇಜ ಕಣ್ಣುಗಳು ಬಸ್ಯನತ್ತ ಕೃತಜ್ಞತೆಯಿಂದ ನೋಡುವವು. ಇದನ್ನು ಕಂಡು ಅವನ ಕೋಪ ಬಸ್ಯನ ಮೇಲಿಂದ ಅವಳತ್ತ ತಿರುಗಿ, ಅವಳನ್ನು ತಿಂದು ಹಾಕುವವನಂತೆ ದುರದುರನೆ ನೋಡಿ, ಸುತ್ತಲಿದ್ದ ಜನ ಅವನ ಗಮನಕ್ಕೆ ಬಂದಂತಾಗಿ ಕೈ ಕೈ ಹಿಸುಕಿಕೊಂಡು ಕಾಲಪ್ಪಳಿಸುತ್ತಾ ಜನರ ಮಧ್ಯೆ ನುಗ್ಗಿಕೊಂಡು ಎತ್ತಲೋ ಹೊರಟುಬಿಡುವನು.
ಆಮೇಲೆ ಗಂಗಾಳನ್ನು ಎಲ್ಲರೂ ಸಮಾಧಾನಗೊಳಿಸುವರು. ಎದುರು ಹಟ್ಟಿ ತಿಮ್ಮಕ್ಕ ಅವಳಿಗೆ ಶುಶ್ರೂಷೆ ಮಾಡುವಳು. ಅವನನ್ನು ಬಾಯಿ ತುಂಬ ಬಯ್ದು ಅಡಿಕೆಯ ತಂಬೂಲವನ್ನು `ಥೂ’ ಎಂದು ಅವನ ಮುಖಕ್ಕೆ ಎನ್ನುವಂತೆ ಉಗಿಯುವಳು.
ಇವರಲ್ಲಿ ಜಗಳವಾದ ದಿನ ಗಂಗಾಳ ಮೇಲೆ ಕರುಣೆಯಿಟ್ಟು ಬೇರೆ ಹಟ್ಟಿಯಿಂದ ಹಿಟ್ಟು, ಬಸ್ಸಾರು ಬರುತ್ತಿತ್ತು. ಗಂಗಾ ನೋವನ್ನು ನುಂಗುತ್ತಾ ಹಿಟ್ಟನ್ನು ನುಂಗಿ ನೀರು ಕುಡಿಯುವಳು. ಮಕ್ಕಳಿಗೂ ಕೊಟ್ಟು ಸ್ವಲ್ಪ ಸುಧಾರಿಸಿಕೊಂಡು ಆನಂತರ ಕೆಲಸದ ಮನೆಗೆ ನಡೆಯುವಳು. ಅಲ್ಲಿ ಅಮ್ಮಾವರು ಅವಳ ಸ್ಥಿತಿಯನ್ನು ನೋಡಿ ಸಿಟ್ಟಿನಿಂದ ಅವನಿಗೆ ಹಿಡಿ ಶಾಪ ಹಾಕುವರು.
“ಇವತ್ ನೀನು ಕೆಲ್ಸ ಮಾಡೋದು ಬೇಡ, ಮನೆಗೋಗು ಗಂಗಾ,” ಎಂದವಳಿಗೆ ರಜಾ ಕೊಟ್ಟು ಕಳುಹಿಸುವರು ಮರುಕದಿಂದ.
ಗಂಗಾ ಸೀದಾ ಹಟ್ಟಿಗೆ ಬಂದು ಅಂಗಾತವಾಗಿ ಮಲಗಿ ಸೂರು ನೋಡುತ್ತಾ, ನಡೆದ ಘಟನೆಯನ್ನು ನೆನೆಸಿಕೊಂಡು ಏನೇನೋ ಯೋಚಿಸುವಳು. ಇವತ್ತು ಏನೇ ಆಗಲಿ ಆ ಹಾಳಾದವನನ್ನು ಇಲ್ಲಿಗೆ ಬಿಟ್ಕೊಳ್ಳಲೇಬಾರದು….. ಆಚೆಗಟ್ಟಬೇಕು ಆ ದರಿದ್ರದೋನ್ನ…… ಅವನದೂ ಅಂತ ಒಂದು ಪೈಸೆ ಸಂಪಾದನೆಯಿಲ್ಲ. ತಾನು ಬೇಯಿಸಿದ ಹಿಟ್ಟಿನಾಗೆ ನಾಯಿ ಥರ ತಿಂದೋಗ್ತಾನೆ. ಇವನಿಂದ ತನಗೇನು ಉಪಯೋಗ? ಇನ್ನೂ ಕಷ್ಟ ಅಷ್ಟೆ. ಆಗಾಗ ಬಡಿದು ತನ್ನ ಹತ್ತಿರ ಇರುವ ಪುಡಿಗಾಸುಗಳನ್ನು ಕಿತ್ತುಕೊಂಡು ಹೋಗ್ತಾನೆ. ತಾನೇನಾದರೂ ಕೊಡಲ್ಲ ಎಂದು ಪ್ರತಿಭಟಿಸಿದರೆ ತನ್ನ ಉಡೀಗೆ ಕೈ ಹಚ್ಚುವನು…. `ಥೂ ಆಳಾದ ಮುಂಡೇ ಮಗ’ ಎಂದು ಕ್ಯಾಕರಿಸಿ ಉಗುಳುವಳು. ಅವನ ಜನ್ಮಕ್ಕೆ ನಾಚಿಕೆ ಎನ್ನುವುದೇ ಇಲ್ಲ. ತಾನು ಬೆವರು ಹರಿಸಿ ದುಡಿದು ತಂದದ್ದನ್ನು ತಗೊಂಡೋಗಿ ಅವಳ್ಯಾವೋಳ್ದೋ ಕೈಗಿಟ್ಟು ಬಾಯಿಗಷ್ಟು ನೊರೆ ಸುರಿಸ್ಕೊಂಡು ಬತ್ತಾನೆ. ರಾತ್ರಿ ತೂರಾಡುತ್ತಾ ಬಂದು ಬಾಗಿಲು ಬಡೀತಾನೆ. ಅವನ ಲುಚ್ಚ ಸಹವಾಸಕ್ಕೆ ಬೇಸತ್ತು ಗಂಗಾ, ನಿದ್ದೆ ಬಂದವಳಂತೆ ಬಿದ್ದುಕೊಂಡೇ ಇರುತ್ತಾಳೆ. ಹಾಗೇ ಇನ್ನು ಸ್ವಲ್ಪ ಹೊತ್ತು ಇದ್ದರೆ ಅವನು ಆಚೀಚೆ ಹಟ್ಟಿಗಳಿಗೆ ಕೇಳಿಸೋ ಹಾಗೆ ಅಲ್ಲಿಂದಾನೇ ಕೆಟ್ಟಾಕೊಳಕ ಮಾತುಗಳನ್ನು ಪ್ರಾರಂಭಿಸುತ್ತಾನೆ. ಇದನ್ನರಿತುಕೊಂಡ ಅವಳು ನಿರುಪಾಯಳಾಗಿ ಉರಿಯುತ್ತಿರುವ ಗಾಯಗಳು ತನ್ನ ನಿರ್ಧಾರವನ್ನು ನೆನಪಿಸುತ್ತಿದ್ದರೂ ಗತ್ಯಂತರವಿಲ್ಲದೆ ಮೇಲೇಳುತ್ತಾಳೆ. ಯಾಂತ್ರಿಕವಾಗಿ ಅವಳ ಕೈಗಳು ತಡಿಕೆಯನ್ನು ಸರಿಸುತ್ತವೆ. ಹಾಳಾಗ್ಹೋಗಲಿ ಅಂತ ಮರುಕದಿಂದ ಅವನನ್ನು ಒಳಗೆ ಸೇರಿಸಿಕೊಳ್ಳುತ್ತಾಳೆ.
ನಾಯಿಬಾಲ ಡೊಂಕು ಅನ್ನೋ ಹಾಗೆ ಅವು ನಾಲ್ಕು ದಿನ ಚೆನ್ನಾಗಿದ್ದೋನು ಮತ್ತೆ ತನ್ನ ವಕ್ರಬುದ್ಧಿಯನ್ನು ತೋರಿಸುತ್ತಾನೆ. ಹಿಂದಿನ ರಾತ್ರಿ ಕುಡಿದು ಬಂದು ಮಲಗಿದವನು ಹೇಗೇಗೋ ಆಡ್ತಾ ಇದ್ದ. ಅವಳಿಗೆ ಕೆಲಸದ ಆಯಾಸದಲ್ಲಿ ಬೇಗ ನಿದ್ದೆ ಬಂದುಬಿಡ್ತು. ಬೆಳಗ್ಗೆ ಅಷ್ಟು ಹೊತ್ತಿಗೆ ಕಣ್ಣುಬಿಟ್ಟಾಗ ಅವನು ಪಕ್ಕದಲ್ಲಿರಲಿಲ್ಲ. ಸುತ್ತಲೂ ನೋಡಿದಳು. ಒಲೆಗೂಡಿನ ಹತ್ತಿರದಲ್ಲಿದ್ದ ಡಬ್ಬಿಯಲ್ಲಿ ಅವನು ಕೈಯ್ಯಾಡುತ್ತಿರುವುದು ಕಾಣಿಸಿ ಬುಡಕ್ಕನೆ ಎದ್ದು ಒಂದೇ ನೆಗೆತಕ್ಕೆ ಅವನ ಬಳಿ ಜಿಗಿದು ಅವನ ಶರಟು ಹಿಡಿದು ಜಗ್ಗಿದಳು.
“ಕೊಡಿಲ್ಲಿ…… ಒಳ್ಳೆ ಮಾತ್ನಾಗೆ ಕೊಟ್ಬಿಡು…… ಇಲ್ಲ ನಾನು ಸುಮ್ನೆ ಇರಾಕಿಲ್ಲ,” ಎಂದು ಅವನ ಮುಷ್ಟಿಯಲ್ಲಿದ್ದುದನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಳು. ಹಾಳಾದವನು ತಾನು ಅಲ್ಲಿ ಸಂಬಳದ ಹಣವನ್ನು ಮುಚ್ಚಿಟ್ಟದ್ದನ್ನು ಕಂಡು ಬುಟ್ಟನೇ. ತನಗೆ ಗೊತ್ತಾಗದಂತೆ ಅದನ್ನು ಮೆಲ್ಲಗೆ ಹಾರಿಸಿಕೊಂಡು ಹೋಗೋದಕ್ಕೆ ನೋಡಿದ್ದಾನೆ. ಅದನ್ನು ಕಂಡ ಅವಳ ಪ್ರಯತ್ನ ವಿಫಲವಾಗಲಿಲ್ಲ. ಅವನಿಂದ ಹಣವನ್ನು ಕಸಿದುಕೊಂಡಳು. ರೋಷದಿಂದ ಅವನು ಅವಳ ಮೈ ಮೇಲೇರಿ ಬಂದ. ಅವಳು ನೆಲಕ್ಕೆ ಬಿದ್ದಳು….. ಉರುಳಾಡಿದಳು. ಆದರೆ ಕೂಗಾಡಲಿಲ್ಲ. ಹೆದರಿ ಹೊರಗೆ ಓಡಲಿಲ್ಲ. ಬೆಳಗ್ಗೆದ್ದು ಜಗಳ ಎಂದರೆ ಸುತ್ತಮುತ್ತಲಿನವರಿಗೂ ಬೇಸರವಾಗದೆ ಅಂತ ಒಳಗೇ ಹೋರಾಡಿದಳು. ಅವನ ಕೈ ಕಬ್ಬಿಣ ಇದ್ದ ಹಾಗೆ. ಅವಳನ್ನು ಜೋರಾಗಿ ಗುದ್ದಿ, ಮೈ ನೆಗ್ಗುವಂತೆ ತದುಕಿ, ದುಡ್ಡನ್ನು ಕಸ್ಕೊಂಡು, “ಎಲಾ ಸೊಕ್ಕಿದ ಹೆಣ್ಣೇ…..! ನನ್ನ ಕಾಸನ್ನೇ ಹಾರಿಸಕ್ಕೆ ನೋಡ್ತಿಯಾ?” ಅಂದಾಗ ಅವಳ ಮೈ ಉರಿದುಹೋಯಿತು.
“ಥೂ ನಿನ್ನ ಬಾಳಿಗೆ ಬೆಂಕಿ ಆಕಾ, ನಾಚಿಕೆ ಆಗಕಿಲ್ವಾ ನಿನ್ನ ಜನ್ಮಕ್ಕೆ. ನೀನಂತೂ ದುಡ್ಡು ತರಾಕಿಲ್ಲ. ನಾನು ಬೆವರರಿಸಿ ಸಂಪಾದಿಸಿದ್ದನ್ನೂ ತೊಗೊಂಡೋಗಿ ಆ ರಂಡೆಗೆ ಕೊಟ್ಟು ಕುಡಿದು ಆಳ್ಮಾಡ್ತೀಯಾ!” ಅಂದಳು ಹಲ್ಲು ಕಟಕರಿಸಿ.
ಅವನು ತತ್ ಕ್ಷಣ ಕೈಗೆ ಸಿಕ್ಕ ತಂಬಿಗೆಯನ್ನು ಅವಳ ಮುಖದ ಕಡೆಗೆ ರಾಚಿದ. ಅವಳು ತಪ್ಪಿಸ್ಕೊಂಡು ಹೊರಗೋಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಬದಲಾಗಿ ಕುಸಿದಳು. ಕೈಬಳೆಗಳು ಪುಡಿಪುಡಿಯಾದವು.
“ಇನ್ನೊಂದು ಕಿತ ಇಷ್ಟು ಬಾಯಿ ಮಾಡು ನೋಡು,” ಎಂದು ಅವನು ಅವಳ ಕೂದಲು ಜಗ್ಗಿ ಅಲ್ಲಿಂದ ಜಾಗ ಖಾಲಿ ಮಾಡಿದ.
ಇಂದು ಇವರ ಜಗಳ ಅಕ್ಕಪಕ್ಕದವರಾರಿಗೂ ತಿಳಿಯಲಿಲ್ಲ. ಗಂಗಾ ನೆಲಕ್ಕೆ ಕಂಬಳಿ ಹಾಸಿ ಅಂಗತಾವಾಗಿ ಮಲಗಿ ನೋವು ತಿನ್ನುತ್ತ ಮುಲುಗುಟ್ಟುತ್ತಿದ್ದಳು. ಗರಿಗಳ ಸಂದಿಯಿಂದ ತೂರಿ ಬಂದ ಸೂರ್ಯ ಕಿರಣಗಳು ನೇರವಾಗಿ ಅವಳ ಕಣ್ಣನ್ನು ಚುಚ್ಚುತ್ತಿದ್ದವು. ಕಣ್ಣು ಮುಚ್ಚಿ ಪಕ್ಕಕ್ಕೆ ಹೊರಳಿಕೊಂಡಳು. ಮೈಯೆಲ್ಲ ಚುಮುಚುಮುಗುಟ್ಟುತ್ತಿತ್ತು. ನೋವಿನಿಂದ ಜ್ವರ ಬಂದಂತಾಗಿತ್ತು. ಮುಖ ಬಾತಿತ್ತು. ಅವನ ಸಹವಾಸ ಅವಳಿಗೆ ಸಾಕು ಸಾಕಾಗಿತ್ತು. ಒಂದು ತಿಂಗಳಿನಿಂದ ಕಷ್ಟಪಟ್ಟು ದುಡಿದು ತಂದಿದ್ದ ಹಣ ಇಲ್ಲವಾಗಿತ್ತು. ಇನ್ನು ಒಂದು ತಿಂಗಳು ಸಂಸಾರ ಸಾಗಿಸುವ ಬಗೆ….? ಈ ಚಿಂತೆ ಅವಳನ್ನು ಒಂದೇ ಸಮನೆ ಕಿತ್ತು ತಿನ್ನುತ್ತಿತ್ತು. ಅವನು ಇನ್ನು ಹಣ ಕರಗಿದ ಮೇಲೆಯೇ ಮನೆಯತ್ತ ಬರುವುದು. ಆಮೇಲೆ ಅವನ ಹೊಟ್ಟೆಗೂ ಹಾಕಬೇಕು. ಬರಿಗೈಯಲ್ಲಿ ಮಾಡುವುದಾದರೂ ಏನು? ಅವಳ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಅಂಥ ಮನೆಹಾಳನನ್ನು ಗಂಡ ಎಂದು ಭಾವಿಸುವುದಾದರೆ ಹೇಗೆ? ಇವನನ್ನು ಕಟ್ಟಿಕೊಂಡಾಗಿನಿಂದ ನೆಮ್ಮದಿ ಎನ್ನುವುದು ಅವಳಿಗೆ ಮರೀಚಿಕೆಯಾಗಿತ್ತು. ಯೋಚಿಸುತ್ತಿದ್ದಂತೆ ನೆನಪುಗಳು ಹಿಂಡು ಹಿಂಡಾಗಿ ಧುಮುಕಿದವು.
ಗಂಗಾ ತುಂಬಾ ಅನುಕೂಲವಂತರ ಮನೆಯಲ್ಲಲ್ಲದಿದ್ದರೂ ಸಮಾಧಾನ ಸಂತೃಪ್ತಿಗಳ ಕುಟುಂಬದಲ್ಲಿ ಜನಿಸಿದ್ದಳು. ಅವಳ ತಂದೆ ಹೊಲದಲ್ಲಿ ಗೆಯ್ಮೆ ಗೈಯುತ್ತಿದ್ದರೆ, ಇವಳು ಮನೆಯಲ್ಲಿ ಎಲ್ಲರಿಗೂ ಹಿಟ್ಟು ಕಾಣಿಸುತ್ತಿದ್ದಳು. ತಮ್ಮ ತಂಗಿಯರೂ ಸಾಹುಕಾರರ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿದ್ದರು. ಮನೆಯಲ್ಲಿ ಗಂಗಾಳೊಬ್ಬಳೇ. ಇವರ ಮನೆ ಹತ್ತಿರವೇ ವಿಧವೆ ನಾಗಮ್ಮನ ವಾಸ. ಅವಳು ಹರಟೆಯ ಸಂಗಾತಿ. ಗಂಗಾ ಸುಲಕ್ಷಣವಾಗಿದ್ದ ದೃಢಕಾಯ ಯುವತಿ. ಗಂಗಾಳ ರೂಪವನ್ನು ಕಂಡು ನಾಗಮ್ಮನಿಗೆ ಏನನ್ನಿಸಿತೋ ಏನೋ….. ತಮ್ಮನನ್ನು ಎಲ್ಲಿಂದಲೋ ಕರೆಸಿಕೊಂಡಳು. ಅವನನ್ನು ಈ ಸಂಸಾರಕ್ಕೆ ಪರಿಚಯ ಮಾಡಿಕೊಟ್ಟಳು. ಅವನೂ ಇವರ ಮನೆಗೆ ಬಂದು ಹೋಗಿ ಮಾಡಲಾರಂಭಿಸಿದ್ದ. ಪ್ರತಿ ಬಾರಿ ಬಂದಾಗಲೂ ಮಕ್ಕಳಿಗೆ ರೊಟ್ಟಿ, ಬಿಸ್ಕತ್ತುಗಳನ್ನು ತಂದುಕೊಡುತ್ತಿದ್ದ. ಅವಳ ಅಪ್ಪ ಅಮ್ಮನ ಕ್ಷೇಮವನ್ನು ಬಹಳ ಆಸ್ಥೆಯಿಂದ ವಿಚಾರಿಸಿಕೊಳ್ಳುತ್ತಿದ್ದ. ಹೆಚ್ಚು ಮಾತಿಲ್ಲದೆ, ಗಂಗಾಳ ಕಡೆಗೊಂದು ಕುಡಿನೋಟ ಎಸೆದು ಹೊರಟುಬಿಡುತ್ತಿದ್ದ. ಸ್ವಲ್ಪ ಕಾಲದಲ್ಲಿಯೇ ಅವನು ಆ ಸಂಸಾರದ ಬಂಧುವಂತಾದ. ಮೊದಮೊದಲು ಅವಳ ಅಮ್ಮ ಇರುವಾಗ ಬರುತ್ತಿದ್ದನು ಕ್ರಮೇಣ ಅವಳು ಒಂಟಿಯಾಗಿದ್ದಾಗ ಬಂದು ಮಾತಿಗೆ ಕೂರುವನು.
ತನ್ನ ಆಸ್ತಿ, ಘನತೆ, ಗೌರವಗಳನ್ನು ಕುರಿತ ವಿಚಾರಗಳನ್ನು ಅವಳ ಮುಗ್ಧ ತಲೆಯಲ್ಲಿ ತುಂಬಿದ್ದ. ಬರುಬರುತ್ತ ಅವರ ಪರಿಚಯ, ಸ್ನೇಹ ಪ್ರೇಮವಾಗಿ ಮಾರ್ಪಟ್ಟಿತು. ನಾಗಮ್ಮನೇ ಅವರ ಮದುವೆಯ ಪ್ರಸ್ತಾಪ ಅವಳ ತಾಯಿ ತಂದೆಯರ ಬಳಿ ಎತ್ತಿದಳು. ಅವರಿಗೂ ಏನನ್ನಿಸಿತೋ ಏನೋ? ಯೋಗ್ಯ ಅನಿಸಿರಬೇಕು. ಮಗಳಿಗೆ ಬೆಂಡೋಲೆ ಸೀರೆಗಳನ್ನು ತೆಗೆದು ಅವನಿಗೆ ಧಾರೆ ಎರೆದುಕೊಟ್ಟರು. ಅವನು ಗಂಗಾಳನ್ನು ಕರೆದುಕೊಂಡು ತನ್ನ ಊರಿನ ದಾರಿ ಹಿಡಿದ.
ಒಂದು ದಿಬ್ಬದ ಮೇಲೆ ಗರಿಗಳನ್ನು ಹೊದಿಸಿದ ಕೆಲವು ಗುಡಿಸಲುಗಳು ಕಂಡುಬಂದವು. ಅವುಗಳ ಮಧ್ಯೆ ನಡೆದು ಕೊನೆಯಲ್ಲಿದ್ದ ಪುಟ್ಟ ಹಟ್ಟಿಯ ಮುಂದೆ ನಿಂತ. ಅದಕ್ಕೆ ಹಾಕಿದ್ದ ತುಕ್ಕು ಹಿಡಿದಿದ್ದ ಬೀಗನ್ನು ತೆಗೆದ. ಗಂಗಾ ಅಚ್ಚರಿಗೊಂಡರೂ ಮೌನವಾಗಿ ಗಂಡನನ್ನು ಹಿಂಬಾಲಿಸಿದಳು. ಹಟ್ಟಿಯೊಳಗೆ ಕತ್ತಲು…. ಬಾಗಿಲು ತೆಗೆದ ಮೇಲೆ ಬೆಳಕು ನಿಧಾನವಾಗಿ ಒಳಗೆ ತೆವಳಿತು. ಸುತ್ತಲೂ ಕಣ್ಣು ಹರಿಸಿದಳು ಗಂಗಾ. ಒಡೆದ ಮಡಕೆ ಕುಡಿಕೆ, ಒಂದು ಹರುಪು ಚಾಪೆ, ಲಾಂದ್ರ ಬಿಟ್ಟರೆ ಮತ್ತೇನೂ ಕಾಣಲಿಲ್ಲ.
ಅವಳು ಬಾಯಿ ತೆಗೆಯುವ ಮುಂಚೆಯೇ ಅವನು, “ನೋಡು ಗಂಗಾ, ಇರೋನು ನಾನೊಬ್ಬ…. ನನಗ್ಯಾಕೆ ಪಾತ್ರೆ ಪಗಡಿಗಳು…..? ನಾನೇನು ಬೇಯಿಸ್ಕೊಬೇಕಾಗಿದ್ಯಾ….? ಓಟ್ಲಾಗೆ ಊಟ ಮಾಡ್ತೀನಿ. ಅದೂ ನಾನು ವತಾರೆ ಮನೆ ಬಿಟ್ರೆ ಚಂಜಿಗೇ ಮನೆಗೆ ಬರೋದು. ನಾನು ಒಂಟೋದ್ರೇ ಇಲ್ಲಿ ಬೆಲೆಬಾಳೋ ಪಾತ್ರೆ ಬಟ್ಟೆಗಳನ್ನು ಮಡಗಿದ್ದರೆ ಯಾರು ನೋಡ್ಕೋಳ್ಳೋರು….? ಅದಕ್ಕೆ ನಾ ಯಾವುದೂ ಮಡಗಿಲ್ಲ. ಇನ್ನು ನೀನು ಬಂದೆ…. ಎಲ್ಲ ತಂದಾಕ್ತೀನಿ,” ಎಂದಾಗ ಅವಳು ತುಟಿ ಎರಡು ಮಾಡಲಿಲ್ಲ.
ಎಂಟು ಹತ್ತು ದಿನಗಳು ಕಳೆದಿದ್ದರೂ ಯಾವ ಹೊಸ ಪಾತ್ರೆಯಾಗಲೀ, ಬಟ್ಟೆ ಬರೆಯಾಗಲಿ ಬರಲಿಲ್ಲ. ಗಂಗಾ ತಾನು ತವರುಮನೆಯಿಂದ ತಂದಿದ್ದ ಪಾತ್ರೆ ಪದಾರ್ಥಗಳ ಸಹಾಯದಿಂದ ಒಲೆ ಹೂಡಿ ಅಡುಗೆ ಮಾಡಿದ್ದಳು. ಒಂದೆರಡು ತಿಂಗಳಲ್ಲೇ ಅವಳು ತಂದಿದ್ದ ಪದಾರ್ಥಗಳೆಲ್ಲ ಮುಗಿದು ಹೋದವು. ಅವನು ಹಾಗೂ ಹೀಗೂ ಒಂದು ತಿಂಗಳು ಸಾಮಾನು ತಂದು ಹಾಕಿದ. ಅವಳು ಬಂದ ಮೇಲೆ ಆ ಮನೆ ಬದಲಾದದ್ದು ಎಂದರೆ ಅವನು ತಂದು ಹೊದಿಸಿದ ಒಂದು ಹೊಸ ಗರಿಯಿಂದ ಮಾತ್ರ.ನಿಧಾನವಾಗಿ ಅವನ ಬಣ್ಣ ಬಯಲಾಗಿತ್ತು. ಸಂಪಾದನೆ ಸರಿಯಾಗಿಲ್ಲ. ಏನೋ ಗ್ರಹಚಾರ ಎಂದು ಮೆಲ್ಲಗೆ ಅವಳ ಒಡವೆಗಳನ್ನು ಅಡವಿಟ್ಟು ಹಣ ತರುವೆನೆಂದು ಅವುಗಳನ್ನು ಮಾರಿ ನುಂಗಿ ನೀರು ಕುಡಿದಿದ್ದ.
ಮೆಲ್ಲಗೆ, “ನೀನು ಎಲ್ಲಾದರೂ ಮನೆ ಕೆಲಸಕ್ಕೆ ಸೇರಿಕೋ,” ಎಂದಾಗ ಅವಳು ಮೊದಲು ಗಾಬರಿಯಾದರೂ ಕೊನೆಗೆ ನಿರ್ವಾಹವಿಲ್ಲದೆ ಅಮ್ಮಾವರ ಮನೆ ಕೆಲಸ ಹಿಡಿದಿದ್ದಳು. ಮುಂದೆ ಅವಳ ಸಂಪಾದನೆಯಿಂದಲೇ ಹೊಟ್ಟೆಗೆ ಹಿಟ್ಟಾಯಿತು. ಇದರ ಮಧ್ಯೆ ಒಂದು, ಎರಡು, ಮೂರು ಮಕ್ಕಳು ಬೇರೆ ಹುಟ್ಟಿದವು.
ಒಂದು ಕಡೆ ಮಕ್ಕಳ ಕಾಟ, ಇನ್ನೊಂದೆಡೆ ಗಂಡನ ಸಿಡುಕು, ಬಯ್ಗಳು, ಹೊಡೆತ. ಇದರ ಜೊತೆಗೆ ಮನೆಗೆಲಸ, ಅಮ್ಮಾವರ ಮನೆ ಕೆಲಸ ಎಲ್ಲ ಮಾಡಿಕೊಂಡು ಹೋಗಬೇಕಿತ್ತು ಗಂಗಾ. ಆದರೂ ಅವಳು ತನ್ನ ಅಗಾಧ ನೋವನ್ನು ಹೊಟ್ಟೆಯಲ್ಲೇ ಅದುಮಿಕೊಂಡು ಮುಖದ ಮೇಲೆ ನಗೆಯ ಮುಖವಾಡವನ್ನು ಎಳೆದುಕೊಂಡಿರುತ್ತಿದ್ದಳು. ಇಷ್ಟಾದರೂ ಅವಳ ತವರಿನವರಿಗೆ ಇದರ ಸುಳಿವು ಕೊಟ್ಟಿರಲಿಲ್ಲ.
“ಅವ್ವಾ ನಂಗೆ ಒಟ್ಟೆ ಅಸೀತದೆ, ಏನಾದ್ರೂ ಇಕ್ಕ್ವಾ?”
ಗಂಗಾ ನೆನಪನ್ನು ದೂರತಳ್ಳಿ ಮಗಳ ಮಾತಿಗೆ ಕಿವಿಗೊಟ್ಟಾಗ ಅವಳಿಗೆ ಹೃದಯವೇ ಬಾಯಿಗೆ ಬಂದಂತಾಗಿತ್ತು. ಹಿಂದಿನ ರಾತ್ರಿ ಉಂಡಿದ್ದ ಒಂದು ಮುದ್ದೆ ಯಾವಾಗಲೋ ಕರಗಿಹೋಗಿತ್ತು. ಮುಂಜಾನೆಯಿಂದ ಏನೂ ಹೊಟ್ಟೆಗಿಲ್ಲ. ಮಗಳು ಹಸಿವು ಎಂದಾಗ ಗಂಗಾಳಿಗೂ ತನಗೆ ಹಸಿವಾಗುತ್ತಿದೆ ಎನಿಸಿತು. ತನ್ನ ಹೊಟ್ಟೆಯಟಲ್ಲೇ ದೊಂಬರಾಟ ಎಂದರೆ ಇನ್ನು ಮಗಳ ಗತಿ….? ತುಟಿ ಕಚ್ಚಿ ನೋವನ್ನು ನುಂಗಿಕೊಂಡು ಮೇಲೆದ್ದಳು.
ಮೆಲ್ಲನೆ ಒಲೆಯ ಬಳಿ ಸಾರಿದಾಗ ಮಡಿಕೆ, ತಾಟುಗಳೆಲ್ಲ ವಿಲವಿಲನೆ ಒದ್ದಾಡುತ್ತ ಹಸಿವೆಯಿಂದ ಬೋರಲು ಬಿದ್ದಿವೆ. ಒಲೆಯೇ ಹಚ್ಚಿರಲಿಲ್ಲ….. ಉಮ್ಮಳಿಸಿ ಬರುತ್ತಿರುವ ದುಃಖವನ್ನು ತಡೆದುಕೊಳ್ಳುತ್ತಾ ಗಂಗಾ ಅಟ್ಟದ ಮೇಲಿಟ್ಟಿದ್ದ ಹಿಟ್ಟಿನ ಡಬ್ಬಕ್ಕೆ ಕೈ ಹಾಕಿದಳು. ಡಬ್ಬ ಅವಳ ಕೈಗೆ ಬಂದಾಗ ಅದು ಹಗುರವಾಗಿರುವಂತೆ ಕಂಡಿತು. ಖಾಲಿ ಡಬ್ಬ… ಅಲ್ಲಲ್ಲಿ ಒಂದಿಷ್ಟು ಹಿಟ್ಟಿನ ಕಣಗಳು ಮಾತ್ರ ಅಂಟಿಕೊಂಡಿದ್ದವು. ಗಂಗಾಳ ಕಣ್ಣಿಂದ ಬುಡಕ್ಕನೆ ನೀರು ಚಿಮ್ಮಿತು. ಬಿಕ್ಕುತ್ತ ಮಕ್ಕಳನ್ನು ತಬ್ಬಿಕೊಂಡವಳೇ, ತಲೆ ನೇವರಿಸಿ, “ಇರಿ, ಅಮ್ಮಾವ್ರ ಮನೆಗೋಗಿ ಏನಾರ ತತ್ತೀನಿ,” ಎಂದು ಉರಿಬಿಸಿಲಿನಲ್ಲಿ ಬಿರಬಿರನೆ ನಡೆದಳು. ದಾರಿಗುಂಟ, `ತಾನು ಇಲ್ಲದ್ದರಿಂದ ಅಮ್ಮಾವ್ರು ತಾವೇ ಕೆಲಸಗಳೆಲ್ಲ ಮಾಡಿಕೊಂಡಿರಬೇಕು…. ತಾನು ನೆಟ್ಟಗಿದ್ದಿದ್ದರೆ, ಅವರನ್ನು ಬಿಟ್ಟುಬಿಡ್ತಿದ್ನಾ?’ ಎಂದುಕೊಳ್ಳುತ್ತಾ ಅವಳು ಅಳುಕುತ್ತಾ, ಅವರ ಮನೆಯ ಹಿತ್ತಲಿಗೆ ಬಂದಳು. ಸ್ವತಃ ಅಮ್ಮಾವ್ರೇ ಪಾತ್ರೆಗಳಿಗೆ ಹುಣಸೇಹಣ್ಣು ಹಚ್ಚಿ ನಲ್ಲಿಯ ಬಾಯಿಗೆ ಹಿಡಿದಿದ್ದರು.
ಗಂಗಾ ಅದನ್ನು ಕಂಡು ಸಂಕೊಚದಿಂದ, “ಬಿಡಿ ಅಮ್ಮಾವ್ರೇ…. ನಾ ತೊಳ್ಕೊಡ್ತೀನಿ,” ಅಂದಳು.
ಗಂಗಾಳ ದನಿ ಕೇಳಿ ತಲೆಯೆತ್ತಿದರು ಆಕೆ. ಅವಳ ಮುಖ ನೋಡಿ ಹೌಹಾರಿದರು.
“ಲೇ ಗಂಗೀ, ಇದೇನೆ ನಿನ್ನ ಮುಖ ಹೀಗ್ ಬಾತಿದೆ. ರಾಮ ರಾಮ….! ಅವನಿಗೇನು ಬಂತೇ ಕೇಡುಗಾಲ….. ನಿನ್ನನ್ನು ಹೀಗೆ ದನ ಬಡಿದ ಹಾಗೆ ಬಡಿದು ಹಾಗ್ತಾನೆ. ಅವನೇನು ಮನುಷ್ಯನೋ ಪಶುವೋ…. ಹಾಳಾದವನು,” ಎಂದು ಅವಳ ಬಳಿಗೆ ಬಂದರು.
ಗಂಗಾ ತಲೆತಗ್ಗಿಸಿ ಕಣ್ಣಿನಲ್ಲಿ ನೀರು ಹಾಕಿದಳು.
“ಅಳಬೇಡ ಗಂಗೀ, ತಡಿ ಮುಲಾಮು ತಂದುಕೊಡ್ತೇನೆ. ಹಚ್ಕೋ,” ಎಂದು ಆಕೆ ಒಳನಡೆದು ಕೂಡಲೇ ಮುಲಾಮು ತಂದಿತ್ತರು. ಆಕೆಯ ಗೊಣಗಾಟ ನಡೆದೇ ಇತ್ತು.
“ನೀನೊಂದು ಪೆದ್ದು ಮುಂಡೇದು…. ನಾನು ಹೇಳೋ ಮಾತು ಕೇಳ್ತೀಯಾ…. ಅವತ್ನಿಂದ ಹೇಳ್ತಾನೆ ಇದ್ದೀನಿ. ಆ ಕೇಡಿಗನನ್ನು ದೂರ ಅಟ್ಟಿ, ಇಲ್ಲೇ ಬಂದು ಈ ಷೆಡ್ಡಿನಲ್ಲೇ ಹಾಯಾಗಿರೆ, ಅವನಿಂದ ನಿನಗಾಗೋದು ಅಷ್ಟರಲ್ಲೇ ಇದೆ. ಸಂಪಾದಿಸದೆ ಇರೋ ಗಂಡಸು ಯಾತಕ್ಕೆ ದಂಡಕ್ಕೆ….. ಈ ಸಲವಾದರೂ ನಾನು ಹೇಳೋ ಮಾತು ಕೇಳ್ತೀ ತಾನೇ…..? ಇಲ್ಲದಿದ್ದರೆ ಹಾಳಾಗಿ ಹೋಗು. ನನಗೆ ಮಾತ್ರ ಮುಖ ತೋರಿಸಬೇಡ,” ಎಂದು ಆಕೆ ಕೂಗಾಡಿದರು. ಗಂಗಾ ಸಣ್ಣ ದನಿಯಲ್ಲಿ ಹ್ಞೂಂಗುಟ್ಟಿದಳು.
ಆಮೇಲೆ “ಇಲ್ಲಾ ಅಮ್ಮಾವ್ರೇ….. ಅವನು ಇವತ್ತು ಬಂದರೆ ನಾಯಿ ಅಟ್ಟದಂಗೆ ಅಟ್ಟಿಬಿಡ್ತೀನಿ….. ಸೇರಿಸಿಕೊಳ್ಳಾಕಿಲ್ಲ….. ತಿನ್ನಾಕೆ ಮಾತ್ರ ಬತ್ತಾನೆ…. ನೆನ್ನೆ ನೀವ್ ಕೊಟ್ಟ ಸಂಬಳಾನ ಕಿತ್ಕೊಂಡು ಓಗ್ಬುಟ್ಟ ಬಡ್ಡಿ ಹೈದ,” ಎಂದು ಗಂಗಾ ಬಿಕ್ಕಳಿಸಿದಳು.
“ಅಯ್ಯೋ ಹಾಳಾದವನೇ….. ಅವನಿಗ್ಯಾಕೆ ಬಂತು ಇಂಥ ದುರ್ಬುದ್ಧಿ….. ಇನ್ನೂ ಒಂದು ತಿಂಗಳು ನಿನ್ನ ಜೀವನ…..?! ಹಾಳಾಗಿ ಹೋಗೋ, ಹೆಂಡತಿ ಮಕ್ಕಳ ಹೊಟ್ಟೆಯುರಿಸಿ ನೀನೇನೂ ಸುಖಪಡಲಾರೆ. ನಾರಾಯಣ, ಕೃಷ್ಣ,” ಎಂದು ಆಕೆ ಅವನನ್ನು ಶಪಿಸಿ ಮುಲುಕಿದರು.
“ಬಿಡಿ ತಾಯಿ, ಇವತ್ತಿನಿಂದ ನಾ ಅವನನ್ನು ಸೇರಿಸ್ತೀನಾ….? ಅಟ್ಟೀತವಾ ಎಲ್ಲರನ್ನೂ ಸೇರಿಸ್ಕೊಂಡು ಅವರೆದುರಿಗೆ ಛೀಮಾರಿ ಆಕ್ತೀನಿ. ನಾಳೇನೇ ಇಲ್ಲಿಗೆ ಬಂದು ಬುಡ್ತೀನಿ ಅಮ್ಮಾವ್ರೇ….. ಅವನು ಇಲ್ಲಿಗುಂಟ ಬರಲಾರ,” ಎಂದಳು ಗಂಗಾ ತುಸು ಸಮಾಧಾನದ ದನಿಯಲ್ಲಿ.
“ಅಷ್ಟು ಮಾಡು….. ಇವತ್ತೇನೂ ನೀನು ಕೆಲಸ ಮಾಡೋದು ಬೇಡ…. ನಾ ಮಾಡ್ಕೋತೀನಿ…. ಬಾ ಒಂದಿಷ್ಟು ಅನ್ನಹುಳಿ ಕೊಡ್ತೀನಿ. ಮಕ್ಕಳಿಗೆ ಕೊಡು,” ಎಂದು ಒಳ ನಡೆದರು ಆಕೆ. ಬಿಸಿ ಬಿಸಿ ಅನ್ನ ಹುಳಿ ತುಂಬಿದ ಪಾತ್ರೆ ತಂದು ಅವಳ ಕೈಗಿತ್ತರು.
“ನಿಮ್ಮ ಹೊಟ್ಟೆ ತಣ್ಣಗಿರಲ್ವಾ……” ಎಂದು ಗಂಗಾ ಅದನ್ನು ಸೆರಗಿನಲ್ಲಿ ಮರೆಸಿಕೊಂಡು ಅಲ್ಲಿಂದ ನಡೆದಳು.
ಮಕ್ಕಳು ತಾಯಿಯ ಆಗಮನವನ್ನು ಕಂಡು ಸಂತಸದಿಂದ ಕೂಗಿ ತಾಟುಗಳನ್ನು ಮುಂದಿಟ್ಟುಕೊಂಡು ಕುಳಿತವು. ಗಂಗಾ ಅವರಿಗೆ ಊಟ ಬಡಿಸಿ ತಾನೂ ಊಟಕ್ಕೆ ಕುಳಿತಳು. ಒಂದು ತುತ್ತು ತಿನ್ನುವುದರೊಳಗಾಗಿ ಅವಳಿಗೆ ತುತ್ತು ಗಂಟಲಿಗೆ ಬಂದು, ನೆತ್ತಿಗೇರಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ನೀರು ಕುಡಿದು ಮೇಲೆ ನೋಡಿದಳು. ಅವಳಿಂದ ಮುಂದೆ ಊಟ ಮಾಡಲಾಗಲಿಲ್ಲ. ಮಿಕ್ಕದ್ದನ್ನು ಮುಚ್ಚಿಟ್ಟು ಮಲಗಿದಳು.
ಕತ್ತಲಾಗಲೇ ಸೆರಗು ಹಾಸಿತ್ತು. ಈಗಾಗಲೇ ಗಂಗಾ ಒಂದು ಖಚಿತವಾದ ನಿರ್ಧಾರಕ್ಕೆ ಬಂದಿದ್ದಳು. ಎಂದಿನಂತೆ ತಾನು ಹೆದರಿ ಗುಬ್ಬಿಯಾಗುವುದು ಬೇಡ. ಮಾರಿಯಂತೆ ಅವನ ಮೇಲೆರಗಬೇಕು. ಖಡಾ ಖಂಡಿತವಾಗಿ ಅವನ ಸಂಬಂಧ ತೊರೆದು ಇಲ್ಲಿಂದ ದೂರ ಹೋಗಿಬಿಡಬೇಕು. ಗಲಾಟೆ ಮಾಡಿದರೆ ಇರಲಿ ಸಹಾಯಕ್ಕೆ ಎಂದು ಸೌದೆಯ ತುಂಡೊಂದನ್ನು ತೆಗೆದು ಮೂಲೆಯಲ್ಲಿಟ್ಟುಕೊಂಡಳು. ಈ ದಿನ ಅವನನ್ನೆದುರಿಸಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಳು.
ರಾತ್ರಿ ಗಂಟೆ ಹನ್ನೊಂದು ಇರಬಹುದು. ಮಕ್ಕಳೆಲ್ಲ ನಿದ್ದೆ ಮಾಡುತ್ತಿವೆ. ಎಲ್ಲ ಕಡೆ ನಿಶ್ಶಬ್ದತೆ…. ಗಂಗಾ ಇನ್ನೂ ರೆಪ್ಪೆಗೆ ರೆಪ್ಪೆ ಕೂಡಿಸಿಲ್ಲ. ಇತ್ಯರ್ಥ ಮಾಡಿಕೊಳ್ಳಲು ಅವನ ದಾರಿಯನ್ನೇ ಕಾಯ್ತಿದ್ದಾಳೆ. ಅವನು ಇವತ್ತೆಲ್ಲಿ ಬರುತ್ತಾನೆ ಎಂದು ಜೋಂಪು ಶುರುವಾಗುತ್ತಿದ್ದಂತೆ ಹೊರಗಿನಿಂದ ಮೆಲ್ಲನೆ `ಲೇ’ ಎಂಬ ಮೆದು ದನಿ. ಗಂಗಾ ಮೈಯೆಲ್ಲ ಕಣ್ಣಾಗಿಸಿಕೊಂಡಿದ್ದಳು, ಬೆಚ್ಚಿ ಬಿದ್ದು ಧಡಕ್ಕನೆ ಮೇಲೆದ್ದು, ಬಾಗಿಲ ಮರೆಯಲ್ಲಿ ಬಚ್ಚಿಟ್ಟಿದ್ದ ಸೌದೆಯನ್ನು ಕೈಯಲ್ಲಿ ಹಿಡಿದು ನಿಂತಳು.
ಗಲಾಟೆ ಮಾಡಿದರೆ ಪ್ರಯೋಜನವಿಲ್ಲವೆಂದು ಅವನು ಒಲಿಸುವ ದನಿಯಲ್ಲಿ, “ಲೇ ಗಂಗೀ….” ಎಂದು ಸಣ್ಣ ದನಿಯಲ್ಲಿ ಕರೆದ. ಗಂಗಾ ತಡಮಾಡದೆ ಬಾಗಿಲ ಬಳಿ ಸರಿದು ಎದುರಿಗೆ ನಿಂತಳು. ಎಂದಿನಂತೆ ಬಾಗಿಲು ತೆರೆಯಲು ತಕರಾರು ಮಾಡದೆ ದಢಾರನೆ ತಡಿಕೆ ಸರಿಸಿದಳು. ಉರಿಗಣ್ಣು ಬಿಟ್ಟು ಕಿಡಿ ಕಾರುತ್ತ ಅವನನ್ನು ನುಂಗುವಂತೆ ನೋಡಿ, ಸೊಂಟಕ್ಕೆ ಸೆರಗು ಸಿಕ್ಕಿಸಿದಳು. ಅವನು ಮೆಲ್ಲನೆ ಒಳ ಅಡಿಯಿರಿಸಿದ. ಹೆಂಡತಿಯ ಅವತಾರವನ್ನು ಕಂಡು ಅವನೆದೆ ಝಗ್ ಎಂದರೂ ಕಣ್ಣು ಕ್ಷಮೆ ಬೇಡುತ್ತಿತ್ತು.
ಗಂಗಾ ಅವನನ್ನೇ ಪ್ರತಿಮೆಯಂತೆ ನಿಂತು ದಿಟ್ಟಿಸಿದಳು. ಅವನು ಹಣವನ್ನು ಜೂಜಿನಲ್ಲಿ ಕಳೆದುಕೊಂಡು ಹೆಂಡತಿಯಲ್ಲಿಗೆ ಮತ್ತೆ ಮರಳಿ ಬಂದಿದ್ದ. ಕಳೆಗುಂದಿದ ಮುಖ, ಹಸಿವೆಯಿಂದ ಕಂಗೆಟ್ಟಿದ್ದಾನೆ. ಅವನ ಸೊರಗಿದ ಮುಖವನ್ನು ದಿಟ್ಟಿಸಿದ ಗಂಗಾ, ಸದ್ದಾಗದಂತೆ ಕೈಲಿದ್ದ ಸೌದೆಯನ್ನು ಮೆಲ್ಲನೆ ಗೋಡೆಯತ್ತ ಒತ್ತರಿಸಿದಳು. ಅವಳ ರೌದ್ರಾವತಾರ ಕಂಡು ಅವನ ಮನ ಅಂಜಿದರೂ ಮೆಲ್ಲನೆಯ ದನಿಯಲ್ಲಿ, `ಗಂಗೀ….’ ಎನ್ನುತ್ತ ಎರಡು ಹೆಜ್ಜೆ ಮುಂದಿಟ್ಟ.
ಗಂಗಾ ಅವನಿಂದ ಮುಖ ತಿರುಗಿಸಿ, “ಉಣ್ಣು ಬಾ,” ಎಂದು ಸೀದಾ ಒಲೆಯ ಬಳಿ ನಡೆದಳು.