ಕಥೆ – ಸುಮಾ ವೀಣಾ
ಅರುಣಿಮಾ ಗರ್ಭಿಣಿ ಎಂದು ರಿಪೋರ್ಟ್ ಬಂದ ದಿನ ಎಲ್ಲರಿಗೂ ಖುಷಿಯೋ ಖುಷಿ! ಹೊಸದಾಗಿ ಬಂದ `ಶಬ್ದವೇದಿ’ ಚಿತ್ರವನ್ನು ಅರುಣಿಮಾ ದಂಪತಿಗಳು ಥಿಯೇಟರ್ ನಲ್ಲಿ ನೋಡಿದ್ದೆ ಕೊನೆ, ಅವರಿಬ್ಬರ ಖುಷಿಗೆ ತಾತ್ಕಾಲಿಕ ವಿಘ್ನವಾಯಿತು. ಈ ಹೊಸ ಅತಿಥಿಯ ಆಗಮನದ ಸುದ್ದಿ ಗೊತ್ತಾಗುತ್ತಿದ್ದಂತೆ ಆಪ್ತರು, ಬಂಧುಗಳು, ಸ್ನೇಹಿತರು ಅರುಣಿಮಾಳ ಬಗ್ಗೆ ವಿಶೇಷ ಕಾಳಜಿ ಮಾಡಲಾರಂಭಿಸಿದರು.
ಪ್ರಾರಂಭದಲ್ಲಿ ಅವರತ್ತೆ ಪ್ರೀತಿಯಿಂದ ಇದ್ದರೂ ಐದಾರು ತಿಂಗಳಾಗುತ್ತಿದ್ದಂತೆ ಆಧಾರವಿಲ್ಲದ ತಮ್ಮ ಆಲೋಚನೆಗೆ ಬದ್ಧರಾಗಿ ವರಸೆ ಬದಲಿಸಿದರು.
“ಹೆಣ್ಣು ಮಗು ಹುಟ್ಟುತ್ತೆ…. ನೀನು ಮಲಗೊ ರೀತಿ ಕುಳಿತುಕೊಳ್ಳೋ ರೀತಿ ಹಾಗನ್ನಿಸುತ್ತೆ,” ಎಂದು ದರ್ಪ ತೋರುತ್ತಿದ್ದರು. ಕ್ರಮೇಣ ಅದೇ ಮಾತುಗಳು ಅರುಣಿಮಾಗೆ ಮುಳ್ಳುಗಳಾಗಿ ಕಾಡಿ ಕರ್ಕಶ ಅನ್ನಿಸುತ್ತಿದ್ದವು. ಮೊದಮೊದಲು ಅರುಣಿಮಾ ಗಂಡನೂ ಆರಾಮಾಗಿದ್ದ ಅನ್ನಿಸಿತು. ಅಮ್ಮನ ಮಾತುಗಳು ಅವನಿಗೆ, `ಗಂಡು ಮಗು ಹುಟ್ಟುತ್ತಿಲ್ಲ,’ ಅನ್ನೋ ಕೊರಗು ತರಿಸಿದ್ದು ನಿಜ! ಆದರೆ ಅದನ್ನು ತೋರಗೊಡದೆ ಹೆಂಡತಿಗೆ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದ. ಅದರಿಂದ ಅರುಣಿಮಾ ಕೊರತೆ ನೀಗಿತೆ ವಿನಾ ಕೊರಗು ನೀಗಲಿಲ್ಲ.
ಇನ್ನೇನು ಸೀಮಂತ ಕಾರ್ಯ ಆಗಬೇಕು ಅನ್ನುವಾಗಲೇ ಅರುಣಿಮಾಳ ಅತ್ತೆ, “ಹುಟ್ಟೋ ಮಗು ಹೆಣ್ಣೂ ಅಂತ ಗೊತ್ತಾದ ಮೇಲೂ ಆ ಆಡಂಬರ ಬೇಕಾ?” ಎಂದು ಮಗನ ಕೈ ತಡೆದರು. ಸೂಕ್ಷ್ಮ ಮನಸ್ಸಿನ ಅರುಣಿಮಾ ಗಂಡನ ಮನೆಯವರ ತಾತ್ಸಾರವನ್ನು ಗಮನಿಸಿ ತವರು ಮನೆಯವರಿಗೆ ಫೋನ್ ಮಾಡಿ, “ನನಗೆ ಸೀಮಂತ ಬೇಡ…. ಅದೆಲ್ಲಾ ಏಕೆ? ನನಗಿಷ್ಟವಿಲ್ಲ ಯಾರೂ ಏನೂ ತರಬೇಡಿ, ಬರಬೇಡಿ,” ಎಂದು ಹಠ ಹಿಡಿದಳು. ಆದರೆ ಅರುಣಿಮಾಳ ತವರು ಮನೆಯವರು ಬಿಡಬೇಕೇ? ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿ ಕರೆದುಕೊಂಡು ಹೋಗಲು ಹೊಸ ಸೀರೆ, ಹಸಿರು ಹರಳಿನ ಉಂಗುರ ಸಹಿತ ಬಂದು ಸೀಮಂತ ಶಾಸ್ತ್ರಕ್ಕೆಂದು ಕೂರಿಸಿದಾಗ ಅರುಣಿಮಾಳ ಗಂಡನ ಸಂಬಂಧಿಯೊಬ್ಬರು ಸಿಹಿ, ಖಾರ ತಿಂಡಿಗಳಿರುವ ಹರಿವಾಣಗಳನ್ನು ಹಿಡಿದು, “ಯಾವುದು ಬೇಕು?” ಎಂದರು.
ಅರುಣಿಮಾ, “ಚಕ್ಕುಲಿ!” ಎನ್ನುತ್ತಾ ಚಕ್ಕುಲಿ, ಕೋಡುಬಳೆ ಇರುವ ಹರಿವಾಣನ್ನು ಮುಟ್ಟಿದಳು.
ಆ ಹೆಂಗಸು, “ಹುಟ್ಟೋದು ಹೆಣ್ಣೇ ಬಿಡು!” ಎಂದು ಮೆಲ್ಲಗೆ ಯಾರಿಗೂ ಕೇಳಿಸದ ಹಾಗೆ ಅರುಣಿಮಾ ಒಬ್ಬಳಿಗೆ ಮಾತ್ರ ಕೇಳಿಸುವಂತೆ ಅಣಕವಾಡಿದರು.
ಅಲ್ಲಿಂದಸೇ ಅರುಣಿಮಾಗೆ ಇನ್ನಿಲ್ಲದ ಅವ್ಯಕ್ತ ನೋವು ತಲ್ಲಣಗಳು ಪ್ರಾರಂಭವಾದವು. ಈ ಕೆಟ್ಟ ಜನರು ಈಗಲೇ ಹೀಗಾಡುತ್ತಾರಲ್ಲಾ ಮುಂದೇನು? ಎಂದು ನಿಟ್ಟುಸಿರು ಬಿಟ್ಟಳು. ಸೀಮಂತಕ್ಕೆ ಬಂದವರೆಲ್ಲಾ ಸಂಭ್ರಮದಿಂದ ಫೋಟೋ ತೆಗೆಸಿಕೊಂಡರೂ ಗಂಡ ಏನೋ ಕೆಲಸದ ನೆಪ ಹೇಳಿ ದೂರಕ್ಕೆ ದೂರವೇ ಉಳಿದಿದ್ದ. ಇವತ್ತಾದ್ರೂ ಗಂಡನ ಜೊತೆ ಕುಳಿತು ಊಟ ಮಾಡಬೇಕು ಅನ್ನೋ ಆಸೆ ಇರಿಸಿಕೊಂಡಿದ್ದಳು ಅರುಣಿಮಾ. ಆದರೆ ಅವರತ್ತೆ ಏನೋ ಕೆಲಸ ಹೇಳಿ ತಪ್ಪಿಸಿದ್ದರು. ಇನ್ನೇನು ಹೆಂಡತಿಯನ್ನು ಕರೆದುಕೊಂಡು ಹೋಗುತ್ತಾರೆ ಎನ್ನುವಾಗಲೂ ಗಂಡ ಅನ್ನಿಸಿಕೊಂಡವನು, `ಹೋಗಿ ಬಾ ಒಳ್ಳೆಯದಾಗಲಿ,’ ಎಂದೊಂದು ಒಳ್ಳೆಯ ಮಾತು ಹೇಳಬಹುದಿತ್ತು. ಆದರೆ ಹೇಳಲಿಲ್ಲ. ಕಡೆಯದಾಗಿ ಮುಖ ತೋರಿಸಿದ ಹಾಗೆ ಮಾಡಿ ತುಂಬಾ ಕೆಲಸವಿದೆ ಅನ್ನುವ ಹಾಗೆ ಹೋಗಿ ಮರೆಯಾದ.
`ಇಂಥ ಸೊಬಗಿಗೆ ಇವರಿಗೆ ಮದುವೆ ಬೇಕಿತ್ತೇ?’ ಎಂಬ ಪ್ರಶ್ನೆ ಅರುಣಿಮಾಳನ್ನು ಬಹುವಾಗಿ ಕಾಡಿತು.
ನಿಜವಾಗಿಯೂ ಅರುಣಿಮಾಳ ವನವಾಸ ಆ ಕ್ಷಣದಿಂದ ಪ್ರಾರಂಭವಾಯಿತು. ಆದರೆ ಅವಳ ತಂದೆ ಮನೆಯಲ್ಲಿ ಆಕೆಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಗಳ ಮನಸ್ಸಿನ ತಾಕಲಾಟಗಳು ಅವರಮ್ಮನಿಗೆ ಅರ್ಥವಾದರೂ ಅದನ್ನು ನೇರ ಹೇಳಿಕೊಳ್ಳದೆ ಒಬ್ಬರೇ ಕೊರಗುತ್ತಿದ್ದರು. ಹೆರಿಗೆಗೆ ಅನುಕೂಲವಾಗಲಿ ಎಂದು ಅರುಣಿಮಾಳನ್ನು ಪೇಟೆಯ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅವರ ಹಳ್ಳಿಯ ಮನೆಯಲ್ಲಿ ಫೋನ್ ಇದ್ದಂತೆ ಪೇಟೆ ಮನೆಯಲ್ಲಿ ಫೋನ್ ಇರಲಿಲ್ಲ. ಫೋನ್ ಏನಾದರೂ ಬಂದರೆ ಪಕ್ಕದ ಮನೆಗೆ ಹೋಗಿ ಮಾತನಾಡಬೇಕಿತ್ತು. ಅರುಣಿಮಾ ಗಂಡ ಫೋನ್ ಮಾಡುತ್ತಾನೆ ಎಂದೇ ಯಾವಾಗಲೂ ಪಕ್ಕದ ಮನೆ ಗೋಡೆಗೆ ಕಿವಿಯಾನಿಸಿ ಕುಳಿತುಕೊಳ್ಳುತ್ತಿದ್ದಳು. ಅವರೇನಾದರೂ ಕರೆದರೆ ಬೇಗ ಹೋಗೋಣ ಎಂದು. ಆದರೆ ನಿತ್ಯ ಫೋನ್ ಮಾಡಿ ವಿಚಾರಿಸಿಕೊಳ್ಳಬೇಕಾದ ಗಂಡ ವಾರಕ್ಕೆ ಒಂದು ದಿನ ಫೋನ್ ಮಾಡಿ `ಹೇಗಿದ್ದೀಯಾ? ಹುಷಾರು!’ ಇಷ್ಟೇ ಹೇಳಿ ಫೋನ್ ಇಟ್ಟಿದ್ದ. ಅಲ್ಲಿಯೂ ಅರುಣಿಮಾಗೆ ಮುಜುಗರವಾಗಿತ್ತು.
ಪಕ್ಕದ ಮನೆಯವರು, “ನಾವೇನೂ ಕೇಳಿಸಿಕೊಳ್ಳಲ್ಲ ಮಾತಾಡೇ….. ಪಾಪ…..” ಎನ್ನುತ್ತಿದ್ದರು.
ಅರುಣಿಮಾಗೆ ಏನು ಹೇಳಬೇಕು ತಿಳಿಯುತ್ತಿರಲಿಲ್ಲ, `ಅವರು ಫೋನ್ ಇಟ್ಟರು ಅನ್ನಬೇಕು…..?’ ಹಾಗಂತ ಹೇಳೋಣ ಅನ್ನಿಸುತ್ತಿತ್ತು.
ಛೇ! ಹಾಗೆ ಹೇಳಿದರೆ ಮರ್ಯಾದೆ ಪ್ರಶ್ನೆ ಅಂತ “ಸಿಟಿಗೆ ಹೋದಾಗ ಮಾತಾಡುತ್ತೇನೆ,” ಎನ್ನುತ್ತಾ ಬೇಗ ಬಂದಳು. ಆದರೆ ಮಗನನ್ನು ಮಾತಿನ ಹಿಡಿತದಲ್ಲಿಟ್ಟುಕೊಂಡಿದ್ದ ಅತ್ತೆಯ ಮೇಲೆ ಅರುಣಿಮಾಗೆ ದಿನೇ ದಿನೇ ಅಸಹನೆ ಹೆಚ್ಚಾಗತೊಡಗಿತು. ಇರಲಿ! ಎಂದು ಡಾಕ್ಟರ್ ಬಳಿ ಹೋದಾಗ ಅವರು, “ನಿಮ್ಮ ಹಸ್ಬೆಂಡ್ ನ್ನು ಕರೆಯಿರಿ. ಕೆಲವು ಮೆಡಿಸಿನ್ ಹಾಕಿದ್ದೀನಿ ತರಲಿ,” ಎಂದರು.
“ಅವರು ಬಂದಿಲ್ಲ ಊರಲ್ಲಿದ್ದಾರೆ,” ಎಂದು ಸಂಕೋಚದಿಂದ ಉತ್ತರಿಸಿದಳು.
ಡಾಕ್ಟರ್ ಕೂಡ ಹುಬ್ಬೇರಿಸೋದನ್ನು ಕಂಡು ಅರುಣಿಮಾಗೆ ಮತ್ತಷ್ಟು ಚಿಂತೆ ಆಗಿತ್ತು. ಆದ ಬೇಸರವನ್ನು ಬದಿಗಿರಿಸಿ ಆದಷ್ಟು ಲವಲವಿಕೆಯಿಂದ ಇರಲು ಪ್ರಯತ್ನಪಡುತ್ತಿದ್ಜಳು. `ಗಂಡ ಒಂದೇ ಒಂದು ಬಾರಿ ಬಂದು ನೋಡಿ ಹೋಗಿದ್ದರೆ…. ಮಾತನಾಡಿಸಿದ್ದರೆ…..’ ಎಂದು ಆಸೆ ಕಂಗಳಲ್ಲಿ ಕಾಯುತ್ತಿದ್ದಳು. ಆದರೆ ಅವನು ಅವರಮ್ಮನ ಅಪ್ಪಣೆಯ ವಿನಾ ತುಂಬು ಗರ್ಭಿಣಿ ಹೆಂಡತಿಯನ್ನು ಮಾತನಾಡಿಸಲು ಬರಲೇ ಇಲ್ಲ. `ತುಂಬು ಗರ್ಭಿಣಿಯಾಗಿ ಗಂಡನ ಪ್ರೀತಿ ಬಯಸುವುದು ತಪ್ಪೇ? ನನಗೇ ಏಕೆ? ಹೀಗೆ?’ ಎಂಬ ನಿರಂತರ ಪ್ರಶ್ನಾವಳಿಗಳ ತೊಡರಿಕೆಯಲ್ಲಿ ಅರುಣಿಮಾ ತನಗೆ ತಾನೇ ಸಿಕ್ಕಿ ಒದ್ದಾಡುತ್ತಿದ್ದಳು.
ಆದರೆ ಅವನು ಒಂದು ದಿನ ಇದಕ್ಕಿದ್ದಂತ ಕರೆ ಮಾಡಿ, “ಸರಿಯಾಗಿ ಲೆಕ್ಕ ಇಟ್ಕೊಂಡಿಲ್ಲವಂತೆ ನಿನಗೆ ಗೊತ್ತಾಗಬಾರದಾ? ಎಜುಕೇಟೆಡ್ ಅಂತೆ,” ಎಂದು ಸಿಡುಕುತ್ತಾ ಹೆಂಡತಿಗೆ ಮಾತನಾಡಲೂ ಅವಕಾಶ ಕೊಡದಂತೆ ಏನೋ ಹೇಳ ಹೊರಟ ಹೆಂಡತಿಯನ್ನು ಗದರಿ ಫೋನ್ ಕಟ್ ಮಾಡಿದ.
ಆಗಂತೂ ಪಾಪ ಗರ್ಭಿಣಿ ಅರುಣಿಮಾಗೆ ಬಿಕ್ಕಿ ಬಿಕ್ಕಿ ಜೋರಾಗಿ ಅಳಬೇಕು ಅನ್ನಿಸಿತು. ಅತ್ತರೆ ಪಕ್ಕದವರು ಏನು ತಿಳಿಯುತ್ತಾರೆ ಎಂದು ಸುಮ್ಮನೆ ಬಂದಳು.
ಮನೆಯವರು, “ಏನೇ….ಏನಂತೆ!” ಎಂದು ಕೇಳಿದರು.
“ಆರೋಗ್ಯ ವಿಚಾರಿಸಲು ಫೋನ್ ಮಾಡಿದ್ದರು,” ಎಂದು ಸುಳ್ಳು ಹೇಳಿದಳು.
ಮನೆಯವರೆಲ್ಲಾ ಅಳಿಯ ಈಗ ಬಂದಿಲ್ಲ ಅಂದರೆ ಹೆರಿಗೆ ಸಮಯಕ್ಕೆ ಬರಬಹುದು ಅದಕ್ಕೇ ಈಗ ಬರುತ್ತಿಲ್ಲ ಅಂದುಕೊಂಡು ಸುಮ್ಮನಾದರು. ಅರುಣಿಮಾಗೆ ದಿನ ತುಂಬಿತು. ಆದರೆ ನೋವಿರಲಿಲ್ಲ. ಮೊದಲ ಬಾಣಂತನ ಮಾಡ ಹೊರಟಿದ್ದ ಅರುಣಿಮಾಳ ತವರು ಮನೆಯವರಿಗೆ ದಿಗಿಲಾಗುತ್ತಿತ್ತು. ಆಸ್ಪತ್ರೆಗೆ ಹೋದರೆ ಅಲ್ಲಿ ಎಲ್ಲಾ ದಾಖಲಾತಿಗಳನ್ನು ಪೂರೈಸಿಕೊಂಡು ಇನ್ ಪೇಶೆಂಟ್ ಎಂದು ಆಸ್ಪತ್ರೆಯವರು ಕರೆದಾಗಲಂತೂ ಭಯ ಆತಂಕಗಳು ಇನ್ನೂ ಹೆಚ್ಚಾದವು.
ಅರುಣಿಮಾ ಕಾಲೇಜು ದಿನಗಳಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಳು. ಹಾಗಾಗಿ ಅಲ್ಲಿದ್ದ ಕೆಲವು ನರ್ಸ್ ಗಳಿಗೆ ಅರುಣಿಮಾಳ ಪರಿಚಯ ಸಹಜವಾಗಿತ್ತು. ಆ ಸಲುಗೆಯಿಂದಲೇ ಪದೇ ಪದೇ ಬಂದು ಮಾತನಾಡಿಸೋರು. ಅವರೆಲ್ಲರದು ಒಂದೇ ಪ್ರಶ್ನೆ “ನಿನ್ ಗಂಡ ಎಲ್ಲೇ…..?” ಎಂದು, ಅದಕ್ಕೆ ಉತ್ತರಿಸಲಾಗದ ಅರುಣಿಮಾ ಅವ್ಯಕ್ತ ನೋವನ್ನು ಅನುಭವಿಸುತ್ತಿದ್ದಳು.
ಡಾಕ್ಟರ್ ಮತ್ತೆ, “ಎಲ್ಲಮ್ಮಾ ನಿನ್ನ ಹಸ್ಬೆಂಡ್ ನೋಡೋಣ ಅಂದರೆ ಪತ್ತೆ ಇಲ್ಲ,” ಎಂದಾಗಲಂತೂ ಅರುಣಿಮಾ ತಲೆ ಕೆಳಗೆ ಮಾಡಿದಳು.
ಅದನ್ನು ಕಂಡ ಡಾಕ್ಟರ್ ಬೇಸರವಾಗದಂತೆ ಅರುಣಿಮಾಳ ತಲೆ ನೇವರಿಸಿ, “ಬರ್ತಾರೆ ಬಿಡು. ಮಗು ಹುಟ್ಟುತ್ತ್ಲಾ ಖುಷಿಯಿಂದ ಪಾರ್ಟಿ ಮಾಡೋಣ,” ಎಂದು ತಮಾಷೆ ಮಾಡಿದರು.
ಅರುಣಿಮಾಗೆ ದಿನ ತುಂಬಿದರೂ ಹೆರಿಗೆ ಅಗಿಲ್ಲವಲ್ಲ ಎಂಬ ದಿಗಿಲು. ಜೊತೆಗೆ ಗಂಡ ಬಂದಿಲ್ಲ ಅನ್ನೋ ಕೊರಗು ಕ್ಷಣ ಕ್ಷಣಕ್ಕೂ ಹೆಚ್ಚಾಗತೊಡಗಿತು. ಅವಳದೇ ವಾರ್ಡಿನ ಬೇರೆ ಗರ್ಭಿಣಿ ಹೆಂಗಸರು, ಅವರವರ ಗಂಡಂದಿರು ಕಾಫಿ ಪ್ಲಾಸ್ಕ್ ಹಿಡಿದು ಊಟದ ಕ್ಯಾರಿಯರ್ ಹಿಡಿದು ಬರುತ್ತಿದ್ದದ್ದನ್ನು ನೋಡಿದರೆ ಈಕೆಯ ಮನಸ್ಸಿನಲ್ಲಿ ಮ್ಯಾಜಿಕ್ ಆದಂತೆ `ನನ್ನ ಗಂಡನೂ ಬಂದು ನನ್ನೆದಿರು ನಿಂತರೆ ಎಷ್ಟು ಚೆನ್ನಾಗಿರುತ್ತೆ,’ ಅಂದುಕೊಳ್ಳುತ್ತಿದ್ದಳು. ಆದರೆ ಅವಳ ಆಸೆ ನೆರವೇರಲಿಲ್ಲ.
“ಈ ರಾತ್ರಿ ಇಲ್ಲೇ ಹೇಗೂ ಕಳೆಯೋಣ, ನಾಳೆ ಬೇರೆ ಆಸ್ಪತ್ರೆಗೆ ಹೋಗೋಣ ಇಲ್ಲಿ ಬೇಡ,” ಎಂದು ಅವರಮ್ಮ ಹೇಳಿದರು.
“ಸರಿ!” ಎಂದು ತಲೆಯಾಡಿಸಿ ಚಿಂತೆಯಲ್ಲೇ ಮುಳುಗಿದ ಅರುಣಿಮಾಗೆ ಆ ವಾರ್ಡಿನ ಬೇರೆ ಹೆಂಗಸರ ಸದ್ದಿನಿಂದ ನಿದ್ರೆ ಬರಲಿಲ್ಲ. ಒಂದೊಂದು ಮಗು ಒಂದೊಂದು ರೀತಿ ಅಳುತ್ತಿತ್ತು. `ತನ್ನ ಮಗುವಿನ ಧ್ವನಿ ಹೇಗೋ?’ ಎಂದು ಮಗುವಿನ ಧ್ವನಿಯ ನಿರೀಕ್ಷೆಯಲ್ಲಿಯೇ ಆ ರಾತ್ರಿ ಕಳೆದಳು. ಬೆಳಗಾಗುವ ಹೊತ್ತಿಗೆ ಅರುಣಿಮಾಗೆ ಗಾಢ ನಿದ್ರೆ ಆವರಿಸಿತು. ಒಂಬತ್ತು ಗಂಟೆ ಆದರೂ ಎಚ್ಚರವಾಗಲಿಲ್ಲ. ಬೆಳಗಿನ ರೌಂಡ್ಸ್ ಗೆ ಬಂದ ಡಾಕ್ಟರ್ ಎಲ್ಲಾ ಬಾಣಂತಿಯರನ್ನು ಲವಲವಿಕೆಯಿಂದ ಮಾತನಾಡಿಸುತ್ತಿದ್ದಾಗ ಅಲ್ಲಿದ್ದವರೆಲ್ಲಾ ನಗುತ್ತಿದ್ದರು. ಅದರಲ್ಲೂ ಅರುಣಿಮಾ ಮಲಗಿದ್ದ ಪಕ್ಕ ಅಲ್ಲ ಪಕ್ಕದ ಬೆಡ್ ನಲ್ಲಿದ್ದ ಬಾಣಂತಿಯ ಮಗು ಜೋರಾಗಿ ಅಳುತ್ತಿತ್ತು. ಅದರ ತೂಕ ನಾಲ್ಕು ಕೆಜಿಯಿತ್ತು. ಹಾಗಾಗಿ ಡಾಕ್ಟರ್, “ಭೀಮ, ಬಲ ಭೀಮ, ಬಾಲ ಬೀಮ,’ ಎಂದೇ ಕರೆಯುತ್ತಿದ್ದರು.
ಆ ಕಿಚಪಿಚ, ಕುಲುಕುಲು ಸದ್ದಿಗೆ ಅರುಣಿಮಾಗೆ ಎಚ್ಚರವಾಗಿ ಮೆಲ್ಲನೆ ಹೊದಿಕೆ ತೆಗೆದರೆ ಡಾಕ್ಟರ್, “ಬೆಳ್ಳನೆ ಬೆಳಗಾಯಿತೆ?’ ಎಂದರು. ಆಗಂತೂ ಎಲ್ಲರೂ ಮತ್ತೊಮ್ಮೆ ನಕ್ಕರು. ಆದರೆ ಡಾಕ್ಟರ್ ಮುಖದಲ್ಲಿ ಅರುಣಿಮಾಳ ಹೆರಿಗೆ ಕುರಿತ ಚಿಂತೆಯಿತ್ತು. ಅಲ್ಲಿದ್ದ ನರ್ಸ್ ಗಳಿಗೆ, “ಮಧ್ಯಾಹ್ನದವರೆಗೆ ನೋಡಿ ನಂತರ ಡ್ರಿಪ್ಸ್ ಹಾಕಿ ನಾನು ಬರ್ತೇನೆ,” ಎಂದು ಹೇಳಿ ಹೊರಟರು. ಅರುಣಿಮಾಗೆ ಇನ್ನೇನು ಆಗುತ್ತೋ ಅನ್ನೋ ದಿಗಿಲು ಮೈಮನಸ್ಸನ್ನು ತೀವ್ರವಾಗಿ ಆವರಿಸಿತು.
ನರ್ಸ್ ಅರುಣಿಮಾಗೆ “ವಾಕ್ ಮಾಡಮ್ಮ ನೋವು ಬಂದ್ರೂ ಬರಬಹುದು. ಇಲ್ಲ ಅಂದ್ರೆ ಸಿಸೇರಿಯನ್ ಆಗುತ್ತೆ. ಯಾವಾಗಲೂ ಸಿಸೇರಿಯನ್ ಕಡೆ ಆಪ್ಶನ್ ಆಗಿರಬೇಕು,” ಅಂದರು. ದಿನ ತುಂಬಿದರೂ ನೋವಿಲ್ಲದ ಅರುಣಿಮಾಳ ಮೇಲೆ ಎಲ್ಲರ ಕಣ್ಣು. ಅಲ್ಲಿದ್ದರೆವರೆಲ್ಲಾ, “ಏನಾದರೂ ಆಸೆ ಇದ್ದರೆ ಹೇಳ್ಕೋ…. ಏನಾದರೂ ತಿನ್ನಬೇಕು ಅನ್ನಿಸುತ್ತಾ ಕೇಳು. ಅದಲ್ಲದೆ ಮಗು ಹುಟ್ಟಿದ ಮೇಲೆ ಹಸಿ ಮೈ ಆಗುತ್ತೆ. ಪಥ್ಯದಲ್ಲಿ ಇರಬೇಕು,” ಎಂದರು.
ಕೈ ಹಿಡಿದ ಗಂಡನೇ ಸನಿಹದಲ್ಲಿರದೆ ದೂರ ಸರಿದಿರುವ ಬೇಸರದಲ್ಲಿದ್ದ ಅರುಣಿಮಾ ಯಾರಿಗೂ ಉತ್ತರ ಕೊಡಲಾರದೆ ತಲೆ ತುಂಬ ಹೊದ್ದು ಮಲಗಿಬಿಟ್ಟಳು.
ಆದರೆ ನರ್ಸ್ ಅನಸೂಯಾ ಬಂದು ಅವಳನ್ನು ಎಬ್ಬಿಸಿ, “ಇನ್ನೊಮ್ಮೆ ಪರೀಕ್ಷೆ ಮಾಡೋಣ ಬಾ. ಇಲ್ಲಿ ಆಗಲ್ಲ ಅಂದರೆ ನಾನೇ ಹೇಳ್ತೇನೆ,” ಎಂದು ಎಬ್ಬಿಸಿದರು.
ಬೆದರಿದಂತಿದ್ದ ಅರುಣಿಮಾಳನ್ನು ಕಂಡು, “ಸಂಜೆಯೊಳಗೆ ಖಂಡಿತಾ ಹೆರಿಗೆ ಆಗುತ್ತೆ ಬಾ,” ಎಂದು ಕರೆದೊಯ್ದರು.
ಅಷ್ಟರಲ್ಲಿ ಅರುಣಿಮಾಳ ಪರಿಚಯದವರೆಲ್ಲಾ ಆಸ್ಪತ್ರೆಗೆ ಬಂದು, “ಇಲ್ಲಿ ಬೇಡ! ಬೇರೆ ಆಪ್ಶನ್ ನೋಡೋಣ,” ಎಂದರು.
ಅಲ್ಲಿದ್ದವರೊಬ್ಬರು, “ಇಲ್ಲೇ ಆಗಲಿ ಬಿಡಿ ಇಲ್ಲಿಯೂ ಸ್ಟಾಫ್ ಚೆನ್ನಾಗಿದೆ,” ಎಂದರು.
ನರ್ಸ್ ಅನುಸೂಯಾ ಹೊರಗಿಂದ ಹೆರಿಗೆ ನೋವು ತರಿಸುವ ಇಂಜೆಕ್ಷನ್ ತರಿಸಿ ಹಾಕಿದಾಗಲೂ ನೋವು ಸರಿಯಾಗಿ ಬರಲೇ ಇಲ್ಲ. ಆಸ್ಪತ್ರೆ ಆಯಾಗಳೂ ಹೆರಿಗೆ ಟೇಬಲ್ ಮೇಲೆ ಮಲಗಿದ್ದ ಅರುಣಿಮಾ ಹೊಟ್ಟೆಯ ಮೇಲೆ ಕೈ ಆಡಿಸಲು ಮುಂದಾದರು. ಅಲ್ಲಿದ್ದವರೆಲ್ಲಾ, “ನೀನು ಕೂಡ ಸಪೋರ್ಟ್ ಮಾಡ್ಬೇಕು. ಇಲ್ಲ ಅಂದರೆ ಆಗಲ್ಲ,” ಎಂದರು.
ಇನ್ಯಾರೋ, “ಮಗು ಬೇಡ್ವಾ ನಿನಗೆ,” ಎಂದರು.
ಅಂತೂ ಐದು ಗಂಟೆ ಹೊತ್ತಿಗೆ ಪ್ರಯಾಸದ ಹೆರಿಗೆ ಆಯಿತು. ಅರುಣಿಮಾಳ ತಾಯಿ, “ಮಗು ಹೋದ್ರೂ ಪರವಾಗಿಲ್ಲ, ಮಗಳು ಉಳಿದ್ರೆ ಸಾಕು,” ಎಂದರು. ಅಷ್ಟರಲ್ಲಿ ಹೆರಿಗೆಯಾಗಿ ಹೆಣ್ಣು ಮಗು ಎಂದಾಗ ಅಲ್ಲಿದ್ದವರಿಗೆಲ್ಲಾ ಸಮಾಧಾನವಾಯಿತು. ಮೊಮ್ಮಗಳು ಹುಟ್ಟಿದ್ದರಿಂದ ಅರುಣಿಮಾಳ ತಾಯಿಗೆ ಸಮಾಧಾನವಾಯಿತು.
ಹೆರಿಗೆಯಾಗಿ ಮಗುವಿನ ಆ ಅಳುವನ್ನು ಕೇಳಿಸಿಕೊಂಡ ಅರುಣಿಮಾಗೆ ಜನ್ಮವಿದ್ದರೆ ಇನ್ನೊಂದು ಹೆರಿಗೆ ಖಂಡಿತಾ ಬೇಡ ಎನಿಸಿತು. ನರ್ಸ್ ಗಳೆಲ್ಲಾ, “ಹೊಸ ಅಮ್ಮಾ, ನೋಡೇ….. ನಿನ್ನ ಮಗೂನಾ,” ಎನ್ನುತ್ತಾ ಮಗು ತೋರಿಸಿದರು.
ಅರುಣಿಮಾ ಮಗುವನ್ನು ನೋಡುತ್ತಾ, “ಎಲ್ಲಿ ನಿನ್ನ ಅಪ್ಪ….?” ಎಂದು ಕೇಳಿದಳು.
ಹಿಂದಿನಿಂದ ಯಾರೋ, “ಈ ಹೆಂಗಸರ ಮನಸ್ಸು ನೋಡಿದ್ಯಾ ಹೇಗೇಂತಾ…..” ಎನ್ನುತ್ತಾ ಬಾರದೆ ಇರುವ ಗಂಡನನ್ನು ಅಣಕಿಸಿದರು.
ಹುಟ್ಟಿದ ಮಗು ಬಹಳ ಮುದ್ದಾಗಿತ್ತು. ಹುಟ್ಟುವಾಗಲೇ ದಟ್ಟವಾದ ಕೂದಲು ವಿಗ್ ತೊಡಿಸಿದ ಹಾಗೆ ಕುತ್ತಿಗೆಯವರೆಗೂ ಹರಡಿಕೊಂಡಿತ್ತು. ಉಗುರುಗಳೆಲ್ಲಾ ಬೆಳೆದು ಅಮ್ಮನ ಹೊಟ್ಟೆಯಿಂದ ಬರುವಾಗಲೇ ಮುಖ ಪರಚಿಕೊಂಡು ಬಂದಿತ್ತು. ಅದನ್ನು ನೋಡಿದ ಎಲ್ಲರಿಗೂ ಖುಷಿ. ಅರುಣಿಮಾಳ ಗಂಡನಿಗೂ ವಿಷಯ ಮುಟ್ಟಿಸಿದರು. ಆತ ಸ್ಪಂದಿಸಿದ್ದು ಅಷ್ಟಕ್ಕಷ್ಟೆ.
“ಮಗು ಚೆನ್ನಾಗಿದೆಯಾ? ಕಲರ್ ಆಗಿದೆಯಾ? ಕೈ ಬೆರಳುಗಳೆಲ್ಲಾ ಸರಿ ಇವೆ ತಾನೇ?” ಎಂದು ಗಂಡ ಹೇಳಿದ್ದನ್ನು ಕೇಳಿದ ಅರುಣಿಮಾಗೆ ಇನ್ನಷ್ಟು ನೋವಾಯಿತು. ಪ್ರಾರಬ್ಧ ಎಂದು ಅವರ ಅಪ್ಪ ಅಮ್ಮನ ಮೇಲೆ ಬೇಜಾರು ಮಾಡಿಕೊಂಡು ಸುಮ್ಮನಾದಳು.
ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗುವ ದಿನ ಅರುಣಿಮಾಳ ಗಂಡ ಮತ್ತವಳ ಅತ್ತೆ ಎರಡು ಫ್ರಾಕ್ ಹಿಡಿದುಕೊಂಡು ಬಂದರು. ಕಾಟಾಚಾರಕ್ಕೆ ಅನ್ನುವುದನ್ನು ಸಾಬೀತು ಮಾಡಿತ್ತು. ಹೆಣ್ಣು ಹುಟ್ಟಿದೆ ಅನ್ನುವ ಭಾವ ತಾಯಿ ಮಗನಲ್ಲಿ ಇದೆ ಅನ್ನುವುದು ಅಲ್ಲಿದ್ದ ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಸೂಕ್ಷ್ಮಾಗಿ ಗಮನಿಸಿದ ಅರುಣಿಮಾಳ ಮುಖ ಚಿಂತೆಯ ಭಾರದಿಂದ ತತ್ತರಿಸಿದಂತಿತ್ತು.
ಆದರೆ ಅರುಣಿಮಾ ತವರಲ್ಲಿ ಮಗುವನ್ನು ಮನೆ ತುಂಬಿಸಿಕೊಳ್ಳುವ ಸಂಭ್ರಮಕ್ಕೆ ಕೊರತೆಯಿರಲಿಲ್ಲ. ಮಗು ಬಾಣಂತಿ ಮನೆಗೆ ಬರುತ್ತಿದ್ದಂತೆ ಪಕ್ಕದ ಮನೆ ಅಜ್ಜಿ ಬಂದು ಆರತಿ ಮಾಡಿ ದೃಷ್ಟಿ ನಿವಾಳಿಸಿ ಮಗುವನ್ನು ಮನೆಗೆ ಬರಮಾಡಿಕೊಂಡರು. ಮನೆಗೆ ಬಂದ ಹೊಸ ಸದಸ್ಯೆಗೆ ಸೋದರ ಮಾವಂದಿರು ಜಾನ್ಸನ್ ಬೇಬಿ ಕಿಟ್, ರಬ್ಬರ್ ಶೀಟ್ ಮೊದಲಾದವುಗಳನ್ನು ತಂದು ಜೋಡಿಸಿದರು. ಅಷ್ಟರಲ್ಲಿ ಅರುಣಿಮಾಳ ಗಂಡ ಹಾಗೂ ಅತ್ತೆಗೆ ಊರಿಗೆ ಹೊರಡಲು ಅವಸರವಾಯಿತು.
ಗಂಡ ಈಗಲಾದರೂ ಮಾತನಾಡಿಸುತ್ತಾನೆ ಅನ್ನುವ ಆಸೆ ಅರುಣಿಮಾಳ ಪಾಲಿಗೆ ಕಡೆಗೂ ಸುಳ್ಳಾಯಿತು. ಅವನು ಬಂದನೇ 2000 ರೂ/ನ ನೋಟೊಂದನ್ನು ಹೆಂಡತಿಯ ತಲೆ ಹತ್ತಿರ ಇಟ್ಟು, “ಹುಷಾರ್,” ಎಂದಷ್ಟೇ ಹೇಳಿ ಹೊರಟ.
ಗಂಡ ಹೇಳಿದ `ಹುಷಾರು,’ ಎನ್ನುವ ಪದ ಅರುಣಿಮಾಳಿಗೆ, `ಹೆಣ್ಣು ಹುಟ್ಟಿದೆ ಹುಷಾರು!,’ ಅಂದನೋ ಇಲ್ಲ, `ನನಗೆ ನನ್ನಮ್ಮ ಇನ್ನೊಂದು ಮದುವೆ ಮಾಡುತ್ತಾಳೆ ಹುಷಾರು,’ ಎಂದನೋ `ಇನ್ನು ನೀನು ಮಾತನಾಡು ಹಾಗಿಲ್ಲ ಹುಷಾರು,’ ಅಂದನೋ, `ಈಗ ಸರಿ! ಇನ್ನೊಂದು ಮಗು ಗಂಡಾಗಬೇಕು ಹುಷಾರು!’ ಎಂದನೋ ಎಂಬ ನಾನಾ ಯೋಚನೆಗಳು ಸುಳಿದಾಡುವಂತೆ ಮಾಡಿದವು.
ತಾಯಿಗೆ ಮಗಳ ಸಂಸಾರದ ವಿಚಾರದಲ್ಲಿ ಬಹಳ ಬೇಸರಾಯಿತು. ಏನೇ ಆದರೂ ಹೊರಗೆ ತೋರಿಸಿಕೊಳ್ಳುವಂತಿಲ್ಲ ಎಂದು ಅರುಣಿಮಾಳ ತಂದೆ ದುಃಖದಿಂದಲೇ ಅಳಿಯ ಮತ್ತು ಅವನ ತಾಯಿ ಇಬ್ಬರನ್ನೂ ಬಸ್ ಸ್ಟಾಂಡ್ ವರೆಗೆ ಬಿಡಲು ಹೋದರು.
ಅಲ್ಲಿಯೂ ಅರುಣಿಮಾಳ ಗಂಡ, `ಅವಳ ತಲೆಯ ಹತ್ತಿರ 2000 ರೂ/ ಇಟ್ಟಿದ್ದೇನೆ. ಅವಳಿಗೇನು ಬೇಕೋ ತರಿಸಿ ಕೊಡಿ,” ಎಂದ.
ಆಗ ಅಳಿಯನ ಮೇಲೆ ಸಹಿಸದಷ್ಟು ಕೋಪ ಬಂದರೂ ಸಿಟ್ಟನ್ನು ಅದುಮಿಟ್ಟುಕೊಂಡು ಮಾತನಾಡದೆ ಬಾಣಂತಿ ಆರೈಕೆಗೆ ಏನು ಬೇಕೋ ಎಲ್ಲವನ್ನೂ ತೆಗೆದುಕೊಂಡು ಬಂದರು.
ಅರುಣಿಮಾ ತಾಯಿಗೆ ಈಗ ಕೈ ತುಂಬಾ ಕೆಲಸ. ಬಹಳ ಮುದ್ದಾಗಿದ್ದ ಮೊಮ್ಮಗಳನ್ನು ಬಿಟ್ಟು ಇರುತ್ತಿರಲಿಲ್ಲ. ಅದು ಬಹಳ ಚುರುಕಾದ ಮಗು. ಟಿ.ವಿ. ಆನ್ ಮಾಡಿದ್ರೆ ಸುಮ್ಮನಿರುತ್ತಿತ್ತು, ಆಫ್ ಮಾಡಿದ್ರೆ ಅಳುತ್ತಿತ್ತು. ಹುಟ್ಟಿದ ಕೆಲವೇ ದಿನಗಳಲ್ಲಿ ಆ ಮಗು ಸೋದರಮಾವಂದಿರು ಹಾಗೂ ಅಜ್ಜಿ ತಾತರ ಅಚ್ಚುಮೆಚ್ಚಿನ ಕೂಸಾಯಿತು.
ಹೆರಿಗೆಯ ಸಮಯದಲ್ಲಿ ಗಂಡ ಬಂದಿಲ್ಲ ಅನ್ನುವ ನೋವು ಕ್ರಮೇಣ ಅರುಣಿಮಾಳಿಗೆ ಕಡಿಮೆಯಾದರೂ ಮತ್ತೆ, `ತನಗೋಸ್ಕರ ಅಲ್ಲದೇ ಇದ್ದರೂ ಮಗು ನೋಡಲಿಕ್ಕಾದರೂ ಬರಬಹುದಲ್ಲ….. ಬರಬಹುದು,’ ಎಂದೇ ಗಂಡನ ನಿರೀಕ್ಷೆಯಲ್ಲಿದ್ದಳು. ಅಕ್ಕ ಪಕ್ಕದ ಮನೆಯವರಂತೂ ಅವರ ಮನೆ ಮಗಳಿಗೆ ಹೆರಿಗೆ ಆಗಿದೆಯೇನೋ ಎನ್ನುವಂತೆ ಬಾಣಂತಿ ಅಡುಗೆಗಳನ್ನು ಮಾಡಿ ತಂದು ಕೊಡುತ್ತಿದ್ದರು. ಮಗುವಿಗೆ ಬಾಣಂತಿಗೆ ಸ್ನಾನ ಮಾಡಿಸಲು ಬರುತ್ತಿದ್ದರು. ಬಾಣಂತಿ ಆರೈಕೆಗೆ ನಾಟಿ ಔಷಧಿ ತರಿಸುವುದು ಮಾಡುತ್ತಿದ್ದರು. ಇನ್ನು ಅವರ ಮನೆ ಮಕ್ಕಳಂತೂ, “ಮಗು ಕೊಡ್ತೀರಾ…. ಸ್ವಲ್ಪ ಹೊತ್ತು ಆಟ ಆಡಿಸಿ ಕರ್ಕೊಂಡು ಬರ್ತೀವಿ,” ಎನ್ನುತ್ತಿದ್ದರು. ಅರುಣಿಮಾಳ ಗೆಳತಿಯರು ಮಗುವನ್ನು ನೋಡಲು ಆಟಿಕೆ, ಸ್ವೆಟರ್, ಟೋಪಿಗಳ ರಾಶಿ ಹಿಡಿದು ಬರುತ್ತಿದ್ದರು. ಮಗುವಿಗೆ ಬಂದ ಆಟಿಕೆಗಳನ್ನು ಮಗುವಿಗೆ ಕೊಡುವುದರ ಬದಲು ದೊಡ್ಡವರೆ ಮೊದಲು ಆಟವಾಡುತ್ತಿದ್ದರು. ಮಗುವಿನ ಪ್ಯಾಡ್ ಚೇಂಜ್ ಮಾಡಲೂ ಮನೆಯವರೆಲ್ಲಾ ಪೈಪೋಟಿ ಮಾಡೋರು. ಇವೆಲ್ಲಾ ಅರುಣಿಮಾಗೆ ಖುಷಿ ಕೊಟ್ಟರೂ ಮನಸ್ಸಿನಲ್ಲಿ ಅವ್ಯಕ್ತ ನೋವೊಂದು ಇದ್ದೇ ಇತ್ತು.
ಅರುಣಿಮಾಳ ಮನೆ ಮೇನ್ ರೋಡ್ ಪಕ್ಕದಲ್ಲಿಯೇ ಇದ್ದುದರಿಂದ ಹೋಗುವ ಬರುವ ಬಸ್ ಗಳ ಸದ್ದು ಚೆನ್ನಾಗೇ ಕೇಳಿಸುತ್ತಿತ್ತು. ಕಡೆಯ ಬಸ್ಸು ಬಂದಾಗೆಲ್ಲಾ, `ಈ ದಿನ ನನ್ನ ಗಂಡ ಡ್ಯೂಟಿ ಮುಗಿಸಿ ಬರುತ್ತಾನೆ,’ ಎಂದು ಯೋಚನೆ ಮಾಡಿಕೊಂಡು, ತನ್ನ ಮನಸ್ಸಿನಲ್ಲಿಯೇ ಹಾಗೊಂದು ವೇಳೆ ಅವರು ಬಂದಿದ್ದರೆ, `ಈಗ ಬಸ್ಸಿಂದ ಇಳಿಯುತ್ತಾರೆ, ಇಳಿದು ಒಂದೊಂದೆ ಹೆಜ್ಜೆ ಇಟ್ಟು…. ಬರುತ್ತಾರೆ. ಈಗ ಅಂಗಡಿ ದಾಟಿರಬಹುದು. ಈಗ ಮೆಡಿಕಲ್ ಶಾಪ್ ಬಳಿ ಬಂದಿರಬಹುದು, ಈ ರಸ್ತೆಯ ತಿರುವು,’ ಹೀಗೆ ಬಸ್ಸಿನಿಂದ ಇಳಿದು ತಾನೇ ನಡೆದುಕೊಂಡು ಬರುತ್ತಿದ್ದೇನೆ ಅನ್ನುವಷ್ಟು ಆ ನಡಿಗೆಯನ್ನು ಸ್ವತಃ ತಾನೇ ಅನುಭವಿಸುತ್ತಿದ್ದಳು. `ಅವರು ಬಂದೇ ಬರುತ್ತಾರೆ, ಐನೂರು ಎಣಿಸುವುದರೊಳಗೆ ಬರಬಹುದು, ಇಲ್ಲವೋ ಎಣಿಸಿದ್ದು ಸರಿಹೋಗಲಿಲ್ಲ’ ಮತ್ತೆ ಇನ್ನೊಮ್ಮೆ ಸರಿಯಾಗಿ ಎಣಿಸುತ್ತೇನೆ, ಇಲ್ಲ ಮತ್ತೆ ಎಣಿಸುತ್ತೇನೆ,’ ಎಂದು ಒಂದರಿಂದ ಐನೂರು, ಒಂದರಿಂದ ಇನ್ನೂರು, ನೂರುಗಳನ್ನು ಎಣಿಸುತ್ತಲೇ ನಿದ್ರೆಗೆ ಜಾರಿಬಿಡುತ್ತಿದ್ದಳು.
ಬೆಳಗಾದಾಗ ಮತ್ತೆ ಮಗುವಿಗೆ ಸ್ನಾನಾದಿ ಆರೈಕೆಯಲ್ಲಿಯೇ ಸಮಯ ಸರಿಯುತ್ತಿತ್ತು. ಮಗು ನೋಡಲು ಬಂದವರು, “ಇವರಪ್ಪ ಬಂದ್ದಿದರೆ?” ಎಂದು ಕೇಳುತ್ತಿದ್ದರು.“ಹೌದು! ರಾತ್ರಿ ಬಂದು ಬೆಳಗ್ಗೆ ಹೋದರು,” ಎಂದು ಹಸಿ ಸುಳ್ಳನ್ನು ಮನೆ ಮಂದಿಯೆಲ್ಲಾ ಹೇಳುತ್ತಿದ್ದರು.
ಹೆಣ್ಣು ಹುಟ್ಟಿದ ಖುಷಿ ಆ ಮನೆಯಲ್ಲಿ ಎಲ್ಲರಿಗೂ ಇತ್ತು. ಮಗುವಿಗೆ ಎರಡು ತಿಂಗಳಾಗುವ ಹೊತ್ತಿಗೆ ಅರುಣಿಮಾಳ ಅಮ್ಮ ಸುಮ್ಮನಿರದೆ, ಕೈಗೆ ಬಳೆ, ಕಾಲಿಗೆ ಗೆಜ್ಜೆ, ಕಾಲಂದುಗೆ, ಉಡುದಾರ ತಂದು ತೊಡಿಸಿಬಿಟ್ಟರು. ಮಗು ಆ ಹೊಸ ಗೆಜ್ಜೆ ಸದ್ದಿಗೆ ಆಡಿದ್ದೇ ಆಡಿದ್ದು. ಆ ಮುದ್ದು ಮಗುವಿಗೆ ದೃಷ್ಟಿ ತೆಗೆಯಲು ತಾ ಮುಂದು ನಾ ಮುಂದು ಎಂದು ಮಗು ನೋಡಲು ಬಂದವರೆಲ್ಲಾ ಹೇಳುತ್ತಿದ್ದರು.
ಒಂದು ಮಧ್ಯಾಹ್ನ ಮಗಳು ಅರುಣಿಮಾ ಮಲಗಿದ್ದಾಳೆ ಎಂದು ತಿಳಿದ ಅವರಪ್ಪ, ಅಮ್ಮ, “ಇಂತಹ ಮಗುವನ್ನು ನೋಡದ ಅವನು ಎಂಥವನಿರಬೇಕು,” ಎಂದು ಕೊರಗುತ್ತಿದ್ದರು. ಇದನ್ನು ಕೇಳಿಸಿಕೊಂಡು ಮತ್ತೆ ತನ್ನ ನೋವನ್ನು ಯಾರ ಬಳಿ ಹೇಳಲಿ ಎಂದು ಸುಮ್ಮನಾದಳು. ಮತ್ತೆ ರಾತ್ರಿಯಾಗುತ್ತಲೇ ಈ ದಿನ ಬರುತ್ತಾನೆ ಎಂದು ಮತ್ತದೆ ಎಣಿಕೆ ಮಾಡತೊಡಗುತ್ತಿದ್ದಳು. ಯಾರೇ ಬಂದರೂ ಗಂಡನೇ ಬಂದ ಎಂದು ಬಾರದ ಗಂಡನಿಗಾಗಿ ಕಾತರಿಸುತ್ತಿದ್ದಳು. ತಿಂಗಳಿಗೊಮ್ಮೆ, ಹದಿನೈದು ದಿನಕ್ಕೊಮ್ಮೆ ಬಂದರೂ ಗಂಡನನ್ನು ಕಾಣಲು ತುದಿಗಾಲಲ್ಲಿ ನಿಲ್ಲುತ್ತಿದ್ದಳು. `ಅವನನ್ನು ಬಯ್ಯಬೇಕೋ? ಇಲ್ಲ ಪ್ರೀತಿಯಿಂದ ಇನ್ಮುಂದೆ ಹೀಗೆ ಮಾಡಬೇಡ ಎನ್ನಬೇಕೋ, ಇಲ್ಲ ಗದರಿ ಬರ್ತಿಯೋ ಇಲ್ಲವೋ ಎಂದು ಕೇಳಬೇಕೋ,’ ಎಂದು ಅವಳು ಯೋಚಿಸುತ್ತಿದ್ದಳು. ಮಗು ದಿನೇ ದಿನೇ ಬಹಳ ಮುದ್ದು ಮುದ್ದಾಗಿ ಬೆಳೆಯುತ್ತಿತ್ತು.
ಒಂದು ದಿನ ಮಧ್ಯಾಹ್ನದ ಹೊತ್ತಿಗೆ ಅರುಣಿಮಾಳ ಗಂಡ ದಿಢೀರ್ ಅಂತ ಬಂದುಬಿಟ್ಟ! ಮಗುವನ್ನು ನೋಡಲು ಬಂದ ಅರುಣಿಮಾಳ ಗಂಡನನ್ನು ಕಂಡು ಮನೆಯವರಿಗೆಲ್ಲಾ “ಆತ ದಾರಿ ತಪ್ಪಿರಬಹುದು,” ಅನ್ನಿಸಿದರೂ ಅತಿ ಸಂತೋಷವಾಯಿತು.
ಆಗ ತಾನೇ ಸ್ನಾನ ಮಾಡಿಸಿ, ಧೂಪ ಹಾಕಿ ಮಲಗಿಸಿ ಎದ್ದ ಮಗುವಿಗೆ ಕಾಡಿಗೆ ಹಚ್ಚಿ ಚೆಂದದ ಫ್ರಾಕ್ ಹಾಕಿ ಬಿಟ್ಟರೆ, ಆ ಮಗು ಕಾಲುಗೆಜ್ಜೆ ಸದ್ದು ಮಾಡಿಕೊಂಡು ಅಂಬೆಗಾಲು ಹಾಕುತ್ತಾ ಅಪ್ಪನ ಬಳಿ ಹೋಯಿತು. ಕುಳಿತಿದ್ದ ಆತ ಮಗಳನ್ನು ಒಂದೇ ಬಾರಿಗೆ ಬಾಚಿ ತಬ್ಬಿಕೊಂಡ. ಅದನ್ನು ಕಂಡ ಅರುಣಿಮಾಳ ಕಣ್ಣಲ್ಲಿ ಆನಂದಭಾಷ್ಪ ತುಳುಕಿತು.
ಗಂಡ ಊರಿಗೆ ತೆರಳಿದ ನಂತರ, `ಮಗು ಹೇಗೋ ಅಂಬೆಗಾಲು ಹಾಕಲು ಶುರು ಮಾಡಿದೆ. ಇನ್ನು ಸುಮ್ಮನಿದ್ದರೆ ಆಗುವುದಿಲ್ಲ. ಆರಾಮವಾಗಿ ಆರೈಕೆ ಮಾಡಿಕೊಳ್ಳುವ ಅದೃಷ್ಟ ನನ್ನ ಹಣೆಯಲ್ಲಿ ಬರೆದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ಗಂಡ ಇದ್ದಲ್ಲಿಗೆ ಹೋಗುವುದು ಉತ್ತಮವೆನಿಸಿತು,’ ತಾಯಿಯ ಬಳಿಯಲ್ಲಿ, ಕಳುಹಿಸಿಕೊಡಿ ಎಂದಳು.
“ಮಗು ಚಿಕ್ಕದಿದೆ, ನಾವು ಕಳಿಸಲ್ಲ. ಹೆಜ್ಜೆ ಹಾಕಲಿ. ಮನೆ ತುಂಬಾ ಓಡಾಡಲಿ,” ಎಂದರು.
ಮತ್ತೆ ಮತ್ತೆ ಕೇಳಿದ್ದಕ್ಕೆ, “ಹೋಗು ನೀನು! ಆದರೆ ಮಗುವನ್ನು ಕಳಿಸಲ್ಲ,” ಎಂದರು.
ಆದರೂ ಅಮ್ಮನಿಗೆ ಮಗಳ ಸೂಕ್ಷ್ಮ ಮನಸ್ಸು ಅರ್ಥವಾಗಿ ಮಗು ಬಾಣಂತಿಯನ್ನು ಕಳುಹಿಸಲು ಆಲೋಚಿಸುತ್ತಿದ್ದರು.
ಮಗು ಹುಟ್ಟಿ ಅಷ್ಟು ದಿನವಾದರೂ ಹೆಣ್ಣು ಹುಟ್ಟಿದೆ ಎನ್ನುವ ಸಿಟ್ಟು ಅರುಣಿಮಾಳ ಅತ್ತೆಯಲ್ಲಿ ಕೊಂಚವೂ ತಗ್ಗಿರಲಿಲ್ಲ. ಆದರೆ ಗಂಡನಿಗೆ ಮಗುವಿನ ಮುಗ್ಧ ನಗುವಿನ ಸಿಂಚನ ಉಲ್ಲಾಸ ತರುತ್ತಿತ್ತು. ಆ ಮಗುವಿನ ಕೇಕೆ ಅವಳ ಗಂಡನನ್ನು ಅಣಕಿಸುತ್ತಿತ್ತು. ಮಗು ಒಮ್ಮೊಮ್ಮೆ ನಕ್ಕಾಗಲೂ ಅವನಿಗೆ ತಾನು ಹೆಂಡತಿಯ ವಿಷಯದಲ್ಲಿ ತೋರಿದ ಅಸಡ್ಡೆ ನೆನಪಾಗುತ್ತಿತ್ತು. `ತಪ್ಪು ಮಾಡಿದ್ದೀಯಾ,’ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸುತ್ತಿತ್ತು. ಭಾವೋದ್ವೇಗದಿಂದ ಈಗಲೇ, `ಕ್ಷಮೆ ಕೇಳಲೇ?’ ಎನ್ನಿಸುತ್ತಿತ್ತು.
ಅದೇ ಸಮಯಕ್ಕೆ ಮಗು ಏಕೋ ಜೋರಾಗಿ ಅಳಲು ಪ್ರಾರಂಭಿಸಿತು. ಅಲ್ಲಿದ್ದವರಲ್ಲಿ ಯಾರಿಗೂ ಆ ಮಗುವನ್ನು ಸಮಾಧಾನ ಮಾಡಲಾಗಲಿಲ್ಲ. ಮನೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮವಿದ್ದರಿಂದ ಬಂದವರಿಗೆಲ್ಲಾ ತಾಂಬೂಲ ಕೊಡುವಲ್ಲಿ ಅರುಣಿಮಾ ಬ್ಯುಸಿಯಾಗಿದ್ದಳು. ಗಂಡನನ್ನು ಕರೆದು, “ಮಗುವನ್ನು ಸ್ವಲ್ಪ ಎತ್ತಿಕೊಂಡು ಆಚೆ ಹೋಗಿ. ಇಲ್ಲಿ ಇರೋಕಾಗ್ತಿಲ್ಲ,” ಎಂದಳು.
ಅವನು ಮಗಳನ್ನು ಎತ್ತಿಕೊಂಡು ಟೆರೇಸ್ ಮೇಲೆ ಹೋಗಿ ಬಸ್ಸು, ಗಿಡ, ಮರ ಮನೆ ಮೇಲೆ ಹಬ್ಬಿಸಿದ್ದ ಎಲೆ, ಬಳ್ಳಿ, ಮರ್ಲೆ ಮಲ್ಲಿಗೆ ಬಳ್ಳಿ ತೋರಿಸುತ್ತಿದ್ದ. ಹೋಗಿ ಬರುವ ಜನರನ್ನು ತೋರಿಸುತ್ತಿದ್ದ. ಆದರೆ ಮಗು ತಂದೆಯ ಅಪ್ಪುಗೆಯಲ್ಲಿ ಬಂದಾಗಲೇ ಅಳು ನಿಲ್ಲಿಸಿ ಅಪ್ಪನ ಜೇಬಿನಿಂದ ಪೆನ್ ತೆಗೆದು ಅಪ್ಪನ ಮೂತಿಗೆ ತಿವಿಯುತ್ತಿತ್ತು. ಆ ಹಿತ ಸ್ಪರ್ಷವನ್ನು ಅನುಭವಿದ ಅವನಿಗೆ ದುಃಖ ಉಮ್ಮಳಿಸಿ ಬಂದು ಮಗಳನ್ನು ತಬ್ಬಿಕೊಂಡು ಬಿಕ್ಕಿ ಅಳಲಾರಂಭಿಸಿದ.
`ತಂದೆ ಮಗಳು ಎಲ್ಲಿ ಹೋದರು ಸದ್ದೇ ಇಲ್ಲ!’ ಎಂದು ಟೆರೇಸ್ ಹತ್ತಿದ ಅರುಣಿಮಾಗೆ ಪ್ರಾಯಶ್ಚಿತ್ತ ತಪ್ತ ಗಂಡನನ್ನು ನೋಡಿ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ.
`ಪ್ರಾಯಶ್ಟಿತ್ತಕ್ಕಿಂತ ದೊಡ್ಡದು ಇಲ್ಲ,’ ಎನ್ನುವಂತೆ ಜಡವಾಗಿ ನಿಂತುಬಿಟ್ಟಳು.
ಆಕಸ್ಮಿಕವಾಗಿ ಹೆಂಡತಿಯನ್ನು ನೋಡಿ ದಯನೀಯವಾಗಿ ಮಗುವನ್ನು ಕೊಡಲು ಬಂದವನನ್ನು ತಡೆದ ಅರುಣಿಮಾ, “ನನಗೆ ಇನ್ನೂ ಸ್ವಲ್ಪ ಕೆಲಸವಿದೆ. ಇನ್ನು ಸ್ವಲ್ಪ ಹೊತ್ತು ಆಟ ಆಡಿಸಿ,” ಎಂದಳು.
`ಅಪ್ಪನ ಆಷಾಢಭೂತಿತನವನ್ನು ಮಗಳು ತಿದ್ದಿದಳು,’ ಎಂದುಕೊಳ್ಳುತ್ತಾ ಇನ್ನಿಲ್ಲದ ಖುಷಿಯಿಂದ ಕೆಳಗಿಳಿದು ಇನ್ನೂ ಉತ್ಸಾಹದಿಂದ ಉಳಿಕೆ ಕೆಲಸದಲ್ಲಿ ತೊಡಗಿದಳು.
ನಂತರದ ದಿನಗಳಲ್ಲಿ ಅರುಣಿಮಾಳ ಗಂಡನಿಗೆ ಹೆಂಡತಿ ಮಗುವನ್ನು ತುಂಬಾ ಮಿಸ್ ಮಾಡಿಕೊಂಡೆ ಅನ್ನುವ ಪಾಪಪ್ರಜ್ಞೆ ಬಹುವಾಗಿ ಕಾಡಿತು. ಒಂದು ಶುಭ ದಿನ ನೋಡಿ ಹೆಂಡತಿ ಮಗುವನ್ನು ಬೇಗ ತನ್ನ ಮನೆ ತುಂಬಿಸಿಕೊಂಡ. ಆಗಷ್ಟೇ ಹೆಜ್ಜೆ ಹಾಕಲಾರಂಭಿಸಿದ ಮಗಳಿಗೆ ಹೊಸ ವಾಕರ್, ಆಟಿಕೆಗಳನ್ನು ತಂದ. ಅರುಣಿಮಾಗೆ ಗಂಡನಲ್ಲಿ ಆದ ಬದಲಾವಣೆ ಕಂಡು ಸ್ವರ್ಗಕ್ಕೇ ಮೂರೇ ಗೇಣು ಅನ್ನುವ ಭಾವ ಮೂಡಿಸಿತು. ಹೊಸ ವಾಕರ್ ನಲ್ಲಿ ಮಗಳು ಹೆಜ್ಜೆ ಹಾಕುತ್ತಿದ್ದ ಆ ಸಪ್ಪಳ ಮನೆಯಲ್ಲಿ ಆರಿಸಿ ಹೊಸ ಉಲ್ಲಾಸ ಮೂಡಿಸಿತು. ಹೆಣ್ಣಿನ ಕುರಿತಾದ ತಿರಸ್ಕಾರ ಹೆಣ್ಣಿನಿಂದಲೇ ನಾಮಾವಶೇಷವಾಗಿತ್ತು. ಕಡೆಗೂ ಅರುಣಿಮಾಳ ಅವ್ಯಕ್ತ ವನವಾಸ ಮುದ್ದು ಮಗಳ ಗೆಜ್ಜೆ ಸದ್ದಿನಿಂದ ಕೊನೆಗೊಂಡಿತ್ತು.