ಟ್ರೋಲ್ ಆದ ಅನುಷ್ಕಾ
ಅನುಷ್ಕಾ ಇತ್ತೀಚೆಗೆ ಬಾಲಿವುಡ್ ನಲ್ಲಿ `ಚಕ್ದಾ ಎಕ್ಸ್ ಪ್ರೆಸ್’ ಚಿತ್ರದ ಶೂಟಿಂಗ್ ನಲ್ಲಿ ಬಿಝಿ. ಸಿಕ್ಕಿದ ಅಲ್ಪಸ್ವಲ್ಪ ಕಾಲಾವಕಾಶದಲ್ಲೇ, ಆಕೆ ಬಿಸ್ಕತ್ತಿನ ರಿವ್ಯೂ ಆರಂಭಿಸಿದಳು. ಆಕೆಯ ಈ ಬಿಸ್ಕೆಟ್ ಪೋಸ್ಟ್ ಪ್ರಕರಣದಲ್ಲಿ ಟ್ರೋಲಿಗರು ಇವಳನ್ನು ಹಿಗ್ಗಾಮುಗ್ಗಾ ಜಗ್ಗಾಡಿದ್ದಾರೆ. ಅಸಲಿಗೆ ಈಕೆ ಆಯತಾಕಾರದ ಬಿಸ್ಕತ್ತಿನ ರಿವ್ಯೂ ಮಾಡುತ್ತಾ, ಬಿಸ್ಕತ್ತಿನ ಸ್ಪೆಲ್ಲಿಂಗ್ ತಪ್ಪು ಹಾಕಿದ್ದಳು. ಜನ ಬಿಟ್ಟಾರೆಯೇ? ಟ್ರೋಲಿಂಗ್ ಮಾಡಿದ್ದೂ ಮಾಡಿದ್ದೇ! ಸ್ಪೆಲ್ಲಿಂಗ್ ಮಿಸ್ಟೇಕ್ ಅಂತೂ ಆಗಿಹೋಗಿತ್ತು, ನಂತರ ಅವಳು ಕ್ಷಮೆ ಕೇಳಿದರೇನು ಬಂತು ಭಾಗ್ಯ?
ಯಾರಿಗಾಗಿ ಗಿಲ್ ಬೆವರು ಹರಿಸಿದ್ದಾಳೆ?
ಶೆಹನಾಜ್ ಗಿಲ್ ತನ್ನ ಅಭಿಮಾನಿಗಳ ಮನದಲ್ಲಿ ಭದ್ರವಾಗಿ ನೆಲೆಯೂರಿದ್ದಾಳೆ. ಆದರೆ ಇತ್ತೀಚೆಗೆ ಆಕೆ ಯಾರಿಗೋ ಮನಸ್ಸು ಕೊಟ್ಟುಬಿಟ್ಟಿದ್ದಾಳೆ. ಹೀಗಾಗಿ ಸ್ಲಿಂ ಟ್ರಿಂ ಕರ್ವಿ ಫಿಗರ್ ಗಾಗಿ, ಜಿಮ್ ಗೆ ದೌಡಾಯಿಸಿದ ಗಿಲ್ ಬೆವರು ಹರಿಸಿದ್ದೂ ಹರಿಸಿದ್ದೇ! ಮೇಡಂ, ನೀವು ಇದನ್ನೆಲ್ಲ ಮಾಡ್ತಿರೋದು ನಿಮಗಾಗಿ ಅಲ್ಲ, ಬದಲಿಗೆ ಹೇಮ್ಸ್ ಬರ್ಥ್ ನ್ನು ಇಂಪ್ರೆಸ್ ಮಾಡಲು ಅಂತ ನಮಗೆ ಗೊತ್ತು, ಅಂತಾರೆ ಅಭಿಮಾನಿಗಳು. ಈಕೆ ಮುಕ್ತವಾಗಿ ಒಂದು ವಿಡಿಯೋದಲ್ಲಿ `ಥಾರ್‌ಣಿ ಲವ್ ಥಂಡರ್’ ಚಿತ್ರದ ನತಾಲಿ ಪೋರ್ಟ್ ಮ್ಯಾನ್ ಳಂತೆ ತಾನೂ ಆಗಬೇಕೆಂದು ಹೇಳಿಕೊಂಡಿದ್ದಾಳೆ. ಗಿಲ್ ಳ ಈ ಹುಚ್ಚು ಸಾಹಸಕ್ಕೆ ಏನು ಹೇಳೋಣ?
ಕತ್ರಿನಾಳ ತಮ್ಮನ ಡೇಟಿಂಗ್
ಕತ್ರೀನಾ ಇತ್ತೀಚೆಗೆ `ಕಾಫಿ ವಿತ್ ಕರಣ್’ ಶೋನಲ್ಲಿ ಮಾತನಾಡಿ, ಸಾಕಷ್ಟು ಲೈಮ್ ಲೈಟ್ ಗಿಟ್ಟಿಸಿದ್ದಾಳೆ. ಇದರಲ್ಲಿ ಈಕೆ ತನ್ನ ಜೀವನದ ಅನೇಕ ರಹಸ್ಯಗಳನ್ನು ಬಿಟ್ಟುಕೊಟ್ಟಿದ್ದಾಳೆ, ಇದರಿಂದ ಇವಳ ಫ್ಯಾನ್ಸ್ ಅಂತೂ ದಂಗಾಗಿದ್ದಾರೆ. ಖ್ಯಾತ ನಟಿ ಇಲಿಯಾನಾ ಇವಳ ತಮ್ಮ ಸೆಬಾಸ್ಟಿಯನ್ ಮೈಕೆಲ್ ಜೊತೆ ಡೇಟಿಂಗ್ ನಡೆಸಿದ್ದಾಳೆ, ಎಂದು ಇದರಲ್ಲಿ ಹೇಳಿಕೊಂಡಿದ್ದಾಳೆ. ಪ್ರೀತಿ, ಕೆಮ್ಮು….. ಇತ್ಯಾದಿಗಳನ್ನು ಎಷ್ಟು ಪ್ರಯತ್ನಿಸಿದರೂ ಮುಚ್ಚಿಡಲಾಗದಂತೆ! ಅವರಿಬ್ಬರೂ ಪ್ರೇಮದಲ್ಲಿ ಮುಳುಗಿ ಹಾವಭಾವ ಪ್ರದರ್ಶಿಸುತ್ತಾ, ಕತ್ರೀನಾ ವಿಕ್ಕಿ ಕೌಶ್ ದಂಪತಿಗಳ ಜೊತೆ ಮಾಲ್ಡೀವ್ ಪ್ರವಾಸದ ಫೋಟೋಗಳಲ್ಲೂ ಕಂಡಬಂದರು. ಅಲ್ಲಿಗೆ ಇದು ಕೇವಲ ದೋಸ್ತಿ ಅಲ್ಲ…. ಇನ್ನೂ ಜಾಸ್ತಿ ಅಂತ ಖಾತ್ರಿಯಾಯ್ತು.
ಕ್ವೀನ್ ಎಲಿಝಬೆಥ್ ರ ನಿಧನಕ್ಕೆ ಶೋಕ
ಇಂಗ್ಲೆಂಡ್ ನ ಮಹಾರಾಣಿ, ಕ್ವೀನ್ ಎಲಿಝಬೆಥ್ ರ ನಿಧನದಿಂದ ಹಾಲಿವುಡ್, ಬಾಲಿವುಡ್ ನೆಲ್ಲೆಡೆ ಶೋಕದ ವಾತಾವರಣ ಹರಡಿದೆ. ಈಕೆ ಸತ್ತಾಗ 96 ವರ್ಷ, ಬಹಳ ದಿನಗಳಿಂದ ಕಾಯಿಲೆಗೆ ತುತ್ತಾಗಿದ್ದರು. ಬಹಳ ಬಹಳ ವರ್ಷ ಈಕೆ ಇಂಗ್ಲೆಂಡ್ ನ ಮಹಾರಾಣಿ ಆಗಿದ್ದರು. ಈಗ ಈಕೆಯ ನಿಧನದ ನಂತರ ಇವರ 73 ದಾಟಿರುವ ಮಗ ಚಾರ್ಲ್ಸ್ ಇದೀಗ ಪಟ್ಟ ಅಲಂಕರಿಸಿದ್ದಾರೆ. ಈ ಮಧ್ಯೆ FB ನಲ್ಲಿ ಇವರ ಮುಗುಳ್ನಗುವಿನ ಫೋಟೋ ಹಾಕಿದ ಸುಶ್ಮಿತಾ ಸೇನ್, `ಈಕೆ ತಮ್ಮ ಜೀವನವನ್ನು ಬಹಳ ಸುಂದರವಾಗಿ ಕಳೆದಿದ್ದಾರೆ. ಜೀವನದ ಪ್ರತಿ ಹಂತದಲ್ಲೂ ಮಹಾರಾಣಿಯಾಗಿ ಮೆರೆದಿದ್ದಾರೆ. ಇವರ ನಿಧನ ನಮ್ಮೆಲ್ಲರ ಪಾಲಿಗೆ ನಿಜಕ್ಕೂ ತುಂಬಲಾರದ ನಷ್ಟ!’ ಎಂದಿದ್ದಾಳೆ.
ಬೆಳ್ಳಿಪರದೆಯಿಂದ ಇವರುಗಳು ಮಾಯವಾಗಿದ್ದೇಕೆ?
ಬಾಲಿವುಡ್ ನ 90ರ ದಶಕದ ಹಲವು ನಟಿಯರು ತಮ್ಮ ನಟನೆಯಿಂದ ಬಹಳ ಹೆಸರು ಗಳಿಸಿದ್ದರು. ಅದೇ ಕಾಲದ ಹಲವು ನಟಿಯರು ಬೆಳ್ಳಿ ಪರದೆಯಿಂದ ಸಂಪೂರ್ಣ ಮಾಯ ಆಗಿದ್ದಾರೆ ಕೂಡ. ಇವರಲ್ಲಿ ಅವನು ಅಗ್ರವಾಲ್ ಸಹ ಒಬ್ಬಳು. 90ರ `ಆಶಿಕಿ’ ಚಿತ್ರ ಇವಳ ಬ್ಲಾಕ್ ಬಸ್ಟರ್ ಆಗಿತ್ತು. ನಮ್ಮಲ್ಲಿ ಶಶಿಕುಮಾರ್ ಗೆ ಕಾರ್ ಆ್ಯಕ್ಸಿಡೆಂಟ್ ಆದಂತೆ, ಈಕೆಗೆ ಆ ಅಪಘಾತ ಜೀವನವನ್ನೇ ಬದಲಿಸಿಬಿಟ್ಟಿತು. ಅದರಿಂದಾಗಿ ಈಕೆ ನಟನೆಗೆ ಬೈ ಬೈ ಹೇಳಿದಳು. ಅದೇ ತರಹ ನಮ್ರತಾ ಶಿರೋಡ್ಕರ್ `ಜಬ್ ಪ್ಯಾರ್ ಕಿಸೀ ಸೇ ಹೋತಾ ಹೈ’ ಚಿತ್ರದಿಂದ ಬಾಲಿವುಡ್ ಗೆ ಎಂಟ್ರಿ ಪಡೆದಳು, 2004ರ ನಂತರ ನಟನೆ ಬಿಟ್ಟೇಬಿಟ್ಟಳು. ಇದೇ ತರಹ ನಗ್ಮಾ (ತಮಿಳಿನ ಖ್ಯಾತ ನಟಿ ಜ್ಯೋತಿಕಾಳ ಅಕ್ಕಾ) ಸಹ ಹಿಂದಿ ತಮಿಳಿನಲ್ಲಿ ಉತ್ತಮ ಚಿತ್ರ ನೀಡಿ ಸಿನಿಮಾ ಬಿಟ್ಟಳು. ಇದೇ ತರಹ ಇನ್ನೂ ಅನೇಕ ನಟಿಯರು ಸಾಕಷ್ಟು ಹೆಸರು ಗಳಿಸಿದ ನಂತರ ಚಿತ್ರರಂಗ ತೊರೆದಿದ್ದಾರೆ.
ಬಿಪಾಶಾಳ ಹೊಸ ಅನುಭವ
`ಜಿಸ್ಮ್, ಹಂ ಶಕ್ಸ್, ರಾಸ್, ರೇಸ್’ನಂಥ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಬಿಪಾಶಾ, ಅಭಿಮಾನಿಗಳಿಗೆ ನಿರಾಶೆಗೊಳಿಸಿ ಮದುವೆಯಾಗಿ, ಇದೀಗ ತಾಯ್ತನದ ಹೊಸ ಅನುಭವದಲ್ಲಿ ತಲ್ಲೀನಳಾಗಿದ್ದಾಳೆ. ಗರ್ಭಿಣಿ ಆಗಿರುವ ಈಕೆ, ಈ ಸ್ಥಿತಿ ಬಹಳ ವಿಶೇಷಕರ ಎನ್ನುತ್ತಾಳೆ. ಈ ಕ್ಷಣಗಳನ್ನು ನೆನಪಿಡಲು, ಈಕೆ ಬೇಬಿ ಬಂಪ್ ಫೋಟೋ ಶೂಟ್ ಸಹ ಮಾಡಿಸಿದ್ದಳು. ತನ್ನ ಸೀಮಂತದ ಫೋಟೋಗಳನ್ನು ವೈರಲ್ ಮಾಡಿಕೊಂಡು ಬೀಗುತ್ತಿರುವ ಈಕೆ, ಯಾವಾಗ ಹೆರಿಗೆ ಆಗುವುದೋ ಎಂದು ಗಂಡನ ಜೊತೆ ಕಾಯುತ್ತಿದ್ದಾಳೆ.
ಬಾಯ್ ಕಾಟ್ ಕಲ್ಚರ್ ಗೆ ಈತ ಹೇಳಿದ್ದೇನು?
ಇತ್ತೀಚೆಗೆ ಬಾಲಿವುಡ್ ಬಾಯ್ ಕಾಟ್ ಕಲ್ಚರ್ ನ ಕಪಿಮುಷ್ಟಿಗೆ ಸಿಲುಕಿದೆ. ಚಿತ್ರ ತಯಾರಿಯ ಘೋಷಣೆ ಆಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ಅದರ ಬಾಯ್ ಕಾಟ್ ನ ಘೋಷಣೆ ಆಗಿಹೋಗುತ್ತದೆ. ಇದನ್ನು ನೋಡಿ ಬಾಲಿವುಡ್ ಗೆ ಇದೇನು ಕೇಡುಗಾಲ ಬಂತಪ್ಪ ಎಂದೆನಿಸದೆ ಇರದು. ಒಮ್ಮೆ ಕೊರೋನಾದ ಕಾಟ ಆದರೆ, ಇದೀಗ ಬಾಯ್ ಕಾಟ್ ಕಲ್ಚರ್. ಇದನ್ನು `ಬ್ರಹ್ಮಾಸ್ತ್ರ’ ನಿರ್ದೇಶಿಸಿದ ಆರ್ಯನ್ ಮುಖರ್ಜಿ ಸಹ ಎದುರಿಸಬೇಕಾಯಿತು. ಇದರ ಕುರಿತಾಗಿ ಈ ಚಿತ್ರದ ನಾಯಕ ರಣಬೀರ್ ಕಪೂರ್ ಮೌನ ಮುರಿಯುತ್ತಾ ಹೇಳಿದ್ದೆಂದರೆ, `ನೀವು ಉತ್ತಮ ಚಿತ್ರ ನೀಡಿ, ಉತ್ತಮ ಕಂಟೆಂಟ್ ಕೊಡಿ, ಜನ ಖಂಡಿತಾ ಮನರಂಜನೆ ಅರಸುತ್ತಾ ಬರುತ್ತಾರೆ!’ ಇದರಿಂದ ಅಲ್ಲಿನ ವಾತಾವರಣ ಇನ್ನಷ್ಟು ಗರಂ ಆಗಿದೆ. ಮಾರಾಯ….. ಇದೇನು ಹೇಳಿಬಿಟ್ಟೆ ನೀನು?
ಹನೀ ಸಿಂಗ್ ಮತ್ತು ಶಾಲಿನಿಯ ಡೈವೋರ್ಸ್
ತನ್ನ ಪಂಜಾಬಿ ರಾಂಪ್ ಗಳಿಂದ ಜನರ ಹೃದಯ ಆಳುತ್ತಿರುವ ಹನೀ ಸಿಂಗ್, ಬಹಳ ದಿನಗಳಿಂದ ತನ್ನ ಖಾಸಗಿ ಬದುಕಿನ ಕಾರಣ ಚರ್ಚೆಯಲ್ಲಿದ್ದಾನೆ. ಕಳೆದ ವರ್ಷ ಈತನ ಪತ್ನಿ ಶಾಲಿನಿ ತಲ್ವಾರ್, ಈತ ಮನೆಯಲ್ಲಿ ತನ್ನನ್ನು ಹೊಡೆದು ಬಡಿದು ಮಾಡುವುದಲ್ಲದೆ, ಹಲವು ಹೆಂಗಸರ ಜೊತೆ ಅಫೇರ್ ಹೊಂದಿದ್ದಾನೆ ಎಂದು ಖುಲ್ಲಂಖುಲ್ಲ ಆರೋಪಿಸಿದ್ದಳು. ಇದಕ್ಕಾಗಿ ಈತನ ವಿರುದ್ಧ ಮೊಕದ್ದಮೆ ನಡೆಯುತ್ತಿದೆ. ಜೀವನಾಂಶಕ್ಕಾಗಿ ಶಾಲಿನಿ ಈತನಿಂದ 10 ಕೋಟಿ ಹಣ ಕೇಳಿದ್ದಳು. ಬಹಳ ದಿನಗಳಿಂದ ನಡೆಯುತ್ತಿದ್ದ ಮೊಕದ್ದಮೆ, ವಿಚ್ಛೇದನದೊಂದಿಗೆ ಕೊನೆಗೊಂಡಿತು. ಜೀವನಾಂಶವಾಗಿ ಈತ ಆಕೆಗೆ 1 ಕೋಟಿ ರೂ. ಹಣ ಸಹ ನೀಡಿದ. 10 ವರ್ಷಗಳ ಇವರ ದಾಂಪತ್ಯಕ್ಕೆ ಇದೀಗ ಶಾಶ್ವತ ಇತಿಶ್ರೀ ಹಾಡಲಾಗಿದೆ.
ಪೋರ್ನ್ ಕೇಸ್ ನಲ್ಲಿ ನೊಂದವ
ಎಲ್ಲರಿಗೂ ಗೊತ್ತಿರುವ ವಿಷಯವೆಂದರೆ, ಪ್ರಸಿದ್ಧ ನಟಿ ಶಿಲ್ಪಾ ಶೆಟ್ಟಿಯ ಪತಿ ವಾಣಿಜ್ಯೋದ್ಯಮಿ ರಾಜ್ ಕುಂದ್ರಾ ವಿರುದ್ಧ ಪೋರ್ನ್ ಚಿತ್ರ ತಯಾರಿಸುವ, ಅದನ್ನು ಆನ್ ಲೈನ್ ಮಾರುವ ಆರೋಪ ಎದುರಿಸುತ್ತಿದ್ದಾನೆ ಎಂಬುದು. ಇದಕ್ಕಾಗಿ ಆತ ಶಿಕ್ಷೆ ಅನುಭವಿಸಿದ್ದೂ ಆಯ್ತು. ಆದರೆ ಈತ ಈಗ ಇದೆಲ್ಲದರಿಂದ ಸಾಕಾಗಿ ಹೋಗಿ, ಕೋರ್ಟ್ ಕಟಕಟೆ ಹತ್ತಿ, ತಾನೆಂದೂ ಮಾಡಿರದ ಈ ಅಪರಾಧದಿಂದ ತನ್ನನ್ನು ಮುಕ್ತಗೊಳಿಸಬೇಕೆಂದು ಮೊಕದ್ದಮೆ ಹೂಡಿದ್ದಾನೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕಲ್ಲವೇ? ಇದೆಲ್ಲ ಇಷ್ಟು ಬೇಗ ಮುಗಿಯುವ ರಗಳೆಯೇ…..?
21 ವರ್ಷ ಪೂರೈಸಿದ ನಾಯಕ್
ಒಂದೇ ಒಂದು ದಿನ ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಏನೆಲ್ಲ ಸಂಚಲನ ಉಂಟು ಮಾಡಬಹುದು….? ಎಂಬ ಕುತೂಹಲಕಾರಿ ಅಂಶವನ್ನು ಒಳಗೊಂಡ ದಶಕಗಳಾಚೆಗಿನ ಚಿತ್ರ `ನಾಯಕ್’ (ಮೂಲ 1999ರ ತಮಿಳಿನ ಚಿತ್ರ ಮುದಲ್ವನ್) ಇದರಲ್ಲಿ ನಾಯಕ ಅನಿಲ್ ಕಪೂರ್, ಖಳ ಅಮರೀಶ್ ಪುರಿ ತಮ್ಮ ಅದ್ಭುತ ನಟನೆಯಿಂದ ಖ್ಯಾತರಾದರು. ಈ ಚಿತ್ರವನ್ನು ಎಷ್ಟು ಸಲ ನೋಡಿದರೂ ಬೋರ್ ಎನಿಸದು. ಮೂಲ ಶಂಕರ್ ನಿರ್ದೇಶನದ ಈ ಚಿತ್ರ, ತನ್ನ ರಾಜಕೀಯ ಹಿನ್ನೆವೆಯಿಂದ ತಮಿಳು, ತೆಲುಗು, ಹಿಂದಿಯಲ್ಲೂ ಸೈ ಎನಿಸಿತ್ತು. ರಾಣಿ ಮುಖರ್ಜಿ ಹಳ್ಳಿ ಹೆಣ್ಣಾಗಿ ಇಲ್ಲಿ ಮಿಂಚಿದ್ದಳು. ಈ ಚಿತ್ರದ ಹಾಡು, ಸಂಭಾಷಣೆ, ನಟನೆ ಅಭಿಮಾನಿಗಳ ಹುಚ್ಚೆಬ್ಬಿಸಿತ್ತು. 2011ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ, ಇದೀಗ ಯಶಸ್ವೀ 21 ವರ್ಷಗಳನ್ನು ಪೂರೈಸಿದೆ! ನಿಜಕ್ಕೂ ಇದು ಎಲ್ಲರಿಗೂ ಹೆಮ್ಮೆಯ ಘಳಿಗೆ!
ಜಸ್ಟಿನ್ ಬೀಬರ್ ನ ಕೋಟ್ಯಂತರ ಗಳಿಕೆ
ಸಣ್ಣ ಪ್ರಾಯದಲ್ಲೇ ಅತಿ ಹೆಚ್ಚಿನ ಯಶಸ್ಸು ಗಳಿಸಿದ ಕೆನೆಡಿಯನ್ ಸಿಂಗರ್ ಜಸ್ಟಿನ್ ಬೀಬರ್, ಇದೀಗ ಪ್ಯಾರಲೈಸ್ (ಲಕ್ವಾ) ಆಗಿ ತನ್ನ ಅಭಿಮಾನಿಗಳಿಗೆ ದೊಡ್ಡ ನಿರಾಸೆ ತಂದಿದ್ದಾನೆ. ಅವರೀಗ ಆತನ ಬಗ್ಗೆ ಸಣ್ಣಪುಟ್ಟ ವಿಚಾರಗಳನ್ನೂ ತಡಕಾಡುತ್ತಿದ್ದಾರೆ. ಈತ ಚಿತ್ರರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಗಳಿಸಿದ ಮೊತ್ತದ ಬಗ್ಗೆ ತಿಳಿದರೆ ನೀವು ದಂಗಾಗುವಿರಿ! ಬೀಬರ್ ಪ್ರತಿ ವರ್ಷ 80 ಮಿಲಿಯನ್ ಡಾಲರ್ ಗೂ ಅಧಿಕ ಗಳಿಸುತ್ತಿದ್ದ ಎಂದು ನಂಬಲರ್ಹ ಮೂಲ ತಿಳಿಸುತ್ತದೆ. ಈತನಿಗೆ ದೇವರು ಹಣದೊಂದಿಗೆ ಬೇಗ ಆರೋಗ್ಯವನ್ನೂ ಕರುಣಿಸಲಿ!