ಮಹೇಶ : ಬಾಲ್ಯದಿಂದಲೂ ನಮಗೆ ಕಲಿಸುತ್ತಿದ್ದ ಒಂದು ಪಾಠವನ್ನು ನಾವು ನಿರ್ಲಕ್ಷಿಸಿದ್ದರೆ ಚೆನ್ನಾಗಿತ್ತು ಅನಿಸುತ್ತಿದೆ….
ಸುರೇಶ : ಅದೇನಪ್ಪ ಅಂಥ ಪಾಠ…..?
ಮಹೇಶ : ಯಾವತ್ತೂ ಕಪ್ಪೆಗೆ ಕಲ್ಲು ಹೊಡೆಯಬೇಡಿ, ಮುಂದೆ ಮೂಗಿ ಹೆಂಡತಿ ಸಿಗ್ತಾಳೆ ಅಂತ ಯಾವಾಗಲೂ ಹೆದರಿಸೋರು.
ಸುರೇಶ : ಅದಕ್ಕೇನಿಗ?
ಮಹೇಶ : ಕೆಲವು ಕಪ್ಪೆಗಳಿಗಾದರೂ ಕಲ್ಲು ಹೊಡೆದಿದ್ದರೆ, ಮದುವೆ ಆದಮೇಲೆ ನೆಮ್ಮದಿ ಕಾಣಬಹುದಿತ್ತೇನೋ….
ಗಿರೀಶ : ನಮ್ಮಂಥ ವಿವಾಹಿತರ ಕಷ್ಟ ನಿಮ್ಮಂಥ ಬ್ಯಾಚುಲರ್ಸ್ ಗೆ ಹೇಗಪ್ಪ ಗೊತ್ತಾಗಬೇಕು?
ಸತೀಶ : ಏನಪ್ಪ ನಿನ್ನ ಕಷ್ಟಕೋಟಲೆಗಳು…..?
ಗಿರೀಶ : ಏನೇನು ಅಂತ ಹೇಳುವುದು….? ಒಂದೇ ಎರಡೇ…..? ಗಂಡಸರಿಗೆ ಈ ಮದುವೆಯನ್ನು ನಿಭಾಯಿಸೋದು ಅಂದ್ರೆ ಖಂಡಿತಾ ಸುಲಭವಲ್ಲ, 7 ಕೆರೆ ನೀರು ಕುಡಿದಂತೆ ಅಂದುಕೋ. ಹಸಿ ಮೆಣಸಿನ ಒಂದು ಟಾಫಿ, ಇದನ್ನು ಚೀಪುತ್ತಲೇ ಸವಿಯಬೇಕೇ ಹೊರತು, ಒಂದೇ ಸಲ ತಿಂದು ಅಗಿಯುವಂಥದ್ದಲ್ಲ…….
ರವಿ : ಯಾಕೋ ರಾಜು ಬಹಳ ಬೇಸರಗೊಂಡಿರುವ ಹಾಗೆ ಕಾಣ್ತೀಯಾ?
ರಾಜು : ನೋಡೋ ಮತ್ತೆ…. ನಮ್ಮ ಹಿಂದಿನ ರಸ್ತೆಯ ಹೊಸ ಮನೆಗೆ ಬಂದ ಹುಡುಗಿ ರೀನಾ ಬಹಳ ಕನ್ ಫ್ಯೂಸ್ ಮಾಡ್ತಾಳೆ. ಅವಳು ನನ್ನನ್ನು ನೋಡಿದಾಗೆಲ್ಲ ನಗ್ತಾಳೆ….
ರವಿ : ಇದರಲ್ಲಿ ತಲೆ ಕೆಡಿಸಿಕೊಳ್ಳೋಕೆ ಏನಿದೆ? ನಿನ್ನ ಲವ್ವಿಗೆ ಆಕಿ ಗ್ರೀನ್ ಸಿಗ್ನಲ್ ಕೊಟ್ಟಾಳ……
ರಾಜು : ಬಡ್ಕೊಂಡ್ರು! ಅವಳು ನಸುನಗುತ್ತಾ ನನ್ನನ್ನು ನೋಡ್ತಿದ್ದಾಳೋ ಅಥವಾ ಇವನ ಹುಟ್ಟಿರುವುದು ನೋಡು ಅಂತ ವ್ಯಂಗ್ಯವಾಗಿ ನನ್ನನ್ನು ನೋಡಿ ನಗ್ತಿದ್ದಾಳೋ, ಅರ್ಥ ಆಗ್ತಿಲ್ಲ ಮಾರಾಯ!
ರೇವತಿ : ಅಲ್ಲಾ ರೀ, ಈ ಹೊಸ ಮನೆಗೆ ಬಂದು 6 ತಿಂಗಳಾಯ್ತು. ಆವತ್ತಿನಿಂದ ಪಕ್ಕದ ಮನೆ ಪಂಕಜಾಳನ್ನು ಗಮನಿಸುತ್ತಿದ್ದೇನೆ. ಸಂಜೆ ಆಗುವುದೇ ತಡ, ಅವರ ಯಜಮಾನರು ಆಫೀಸಿನಿಂದ ಬಂದವರೇ ಓಡೋಡಿ ಬಂದು ಹೆಂಡತಿಯನ್ನು ತಬ್ಬಿ, ಮುದ್ದಿಸುತ್ತಾರೆ. ನೀವು ಇದ್ದೀರಿ…… ಶುದ್ಧ ಅರಸಿಕರು! ಅವರು ಮಾಡಿದ್ದನ್ನೇ ನೀವು ಮಾಡಬಾರದೇ?
ಪ್ರಕಾಶ್ : ಅಲ್ಲ ಕಣೆ, ನನಗೆ ಈ ಐಡಿಯಾ ಬರಲಿಲ್ಲ ಅಂದುಕೊಂಡಿದ್ದೀಯಾ? ಒಂದು ದಿನ ಪಂಕಜಾಳ ಗಂಡ ಬರೋದು 10 ನಿಮಿಷ ತಡ ಆಯ್ತು ಅಂತ, ಆಫೀಸಿನಿಂದ ಬಂದ ನಾನೇ ಅವಸರ ಅವಸರದಲ್ಲಿ ಹೋಗಿ ಆಕೆಯನ್ನು ತಬ್ಬಿಕೊಂಡರೆ, ನನ್ನ ಹಿಂದೆ ಬಂದ ಆತ…. ಸಿಟ್ಟಿಗೇಳುವುದೇ?
ಕಮಲಾ ಅಂಗಡಿ ಬೀದಿಯಿಂದ ಮನೆಗೆ ಹಿಂದಿರುಗುತ್ತಿದ್ದಳು. ತರಕಾರಿ ಅಂಗಡಿಯವನು 15 ನಿಮಿಷದಿಂದ ಸತತ ತರಕಾರಿ ಮೇಲೆ ನೀರು ಚಿಮುಕಿಸುತ್ತಿರುವುದನ್ನು ನೋಡಿ ಆಶ್ಚರ್ಯಗೊಂಡಳು.
ಕೊನೆಗೂ ತಡೆಯಲಾರದೆ ಕೇಳಿಯೇಬಿಟ್ಟಳು, “ಏನಪ್ಪ, ನಿನ್ನ ತರಕಾರಿಗಳೆಲ್ಲ ನಿನ್ನೆಯಿಂದ ನಿದ್ರಿಸುತ್ತಿವೆ ಅನಿಸುತ್ತೆ. ನೀನೂ ಆಗಿನಿಂದ ನೀರು ಚಿಮುಕಿಸುತ್ತಲೇ ಇರುವೆ. ಬೆಂಡೆಕಾಯಿ, ತೊಂಡೆಕಾಯಿಗಳು ಎಚ್ಚರಗೊಂಡಿದ್ದರೆ ಅರ್ಧರ್ಧ ಕಿಲೋ ತೂಗಿ ಕೊಡ್ತೀಯಾ?” ಅನ್ನುವುದೇ?
ಒಂದು ಎಮ್ಮೆ ಬಹಳ ಗಾಬರಿಯಿಂದ ಕಾಡಿನಲ್ಲಿ ಸತತ ಓಡುತ್ತಿತ್ತು. ದಾರಿಯಲ್ಲಿ ಅದಕ್ಕೆ ಒಂದು ಇಲಿ ಎದುರಾಗಿ ಅಡ್ಡಗಟ್ಟಿತು.
ಇಲಿ : ಏನಾಯ್ತು? ಯಾಕೆ ಹೀಗೆ ಗಾಬರಿಯಿಂದ ಓಡ್ತಾನೇ ಇದ್ದೀಯಾ?
ಎಮ್ಮೆ : ಕಾಡಿನಲ್ಲಿ ಆನೆಗಳನ್ನು ಹಿಡಿಯಲು ಪೊಲೀಸರು ಬಂದುಬಿಟ್ಟಿದ್ದಾರಂತೆ!
ಇಲಿ : ಅದಕ್ಕೆ ನೀವೇಕೆ ಹೀಗೆ ಭಯಪಟ್ಟು ಓಡಬೇಕು ಅಂತೀನಿ?
ಎಮ್ಮೆ : ಅರೆ…. ಇದು ಎಂತ ದೇಶ ಅಂದುಕೊಂಡಿದ್ದೀಯಾ? ಪೊಲೀಸರು ಅಪ್ಪಿತಪ್ಪಿ ನನ್ನನ್ನು ಅರೆಸ್ಟ್ ಮಾಡಿಬಿಟ್ಟರೆ, ನಾನು ಆನೆ ಅಲ್ಲ ಎಮ್ಮೆ ಅಂತ ಪ್ರೂವ್ ಮಾಡಲಿಕ್ಕೇ 10 ವರ್ಷ ಕೋರ್ಟಿನ ಕಟಕಟೆ ಹತ್ತಬೇಕಾದೀತು.
ಇಲಿ : ಹೌದಲ್ವಾ? ಯಾವುದಕ್ಕೂ ಸೇಫ್ಟಿಗಿರಲಿ ಅಂತ ನಾನೂ ನಿನ್ನ ಜೊತೆ ಓಡಿ ಬರ್ತೀನಪ್ಪ….!
ಡಾಕ್ಟರ್ : ನೋಡ್ರಿ, ನಿಮ್ಮ ದೇಹ ತೂಕ ಜಾಸ್ತಿ ಆಯ್ತು. ಪ್ರತಿ ದಿನ ಕನಿಷ್ಠ 10 ಕಿ.ಮೀ. ವಾಕಿಂಗ್ ಹೊರಡಲೇಬೇಕು.
ರೋಗಿ : ಹಾಗೇ ಆಗಲಿ ಸಾರ್.
ಅದಾಗಿ ಒಂದು ವಾರ ಕಳೆಯಿತು. ಆಗ ರಾತ್ರಿ 11 ಗಂಟೆ ದಾಟಲಿತ್ತು. ಡಾಕ್ಟರ್ ಗೆ ಇದ್ದಕ್ಕಿದ್ದಂತೆ ಅದೇ ರೋಗಿ ಕಡೆಯಿಂದ ಕರೆ ಬಂತು.
ರೋಗಿ : ನೀವು ಹೇಳಿದಂತೆ ನಾನು ನಡೆದೂ ನಡೆದೂ ಅಂತೂ ಹಿಮಾಲಯ ತಲುಪಿರುವೆ. ಈಗ ಇಲ್ಲೇ ನಿಲ್ಲಲೇ ಅಥವಾ ಚೀನಾ ಕಡೆ ಹೊರಟುಬಿಡಲೇ?
ಮದುವೆಯಾದ ಹೊಸತು. ಹೊಸ ಸೊಸೆ ಅಡುಗೆಮನೆಗೆ ಬಂದು, ಮೊದಲ ಸಲವಾದ್ದರಿಂದ ಏನಾದರೂ ಸಿಹಿ ಮಾಡೋಣ ಅಂದುಕೊಂಡಳು. ಒಂದೊಂದೇ ಡಬ್ಬಾ ತಡಕಾಡಿದಾಗ ಅದರಲ್ಲಿ ಜಾವಿತ್ರಿ (ಜಾಪತ್ರೆಗೆ ಕೆಲವು ಕಡೆ ಹೀಗೂ ಹೇಳುತ್ತಾರೆ) ಖಾಲಿ ಆಗಿರುವುದು ತಿಳಿಯಿತು. ಹೀಗಾಗಿ ಹೊರಗೆ ಪೇಪರ್ ಓದುತ್ತಾ ಕುಳಿತಿದ್ದ ಮಾವನವರಿಗೆ ಕೇಳಿಸುವಂತೆ ಒಳಗಿನಿಂದಲೇ ಕೂಗಿ ಹೇಳಿದಳು….
ಸೊಸೆ : ಮಾವ, ಜಾವಿತ್ರಿ ಖಾಲಿ ಆಗಿದೆ. ಮಾರ್ಕೆಟ್ ಕಡೆ ಹೋದಾಗ ಮರೆಯದೆ ತನ್ನಿ.
ಮಂದ ಕಿವಿಯ ಮಾನಿಗೆ ಜಾವಿತ್ರಿ ಸಾವಿತ್ರಿಯಾಗಿ ಕೇಳಿಸಬೇಕೇ? ತಕ್ಷಣ ಅವರಿಗೆ ಸಿಟ್ಟು ಬಂತು.
ಮಾವ : ಅಲ್ಲಮ್ಮ…. ಸಾವಿತ್ರಿ ಅನ್ನೋದು ನಿಮ್ಮತ್ತೆ ಹೆಸರು. ಅದು ನೆನಪಿರಲಿ, ಮುಂದೆ ಮಾತು ಗೌರವಯುತವಾಗಿ ಬರಲಿ!
ಸೊಸೆ : ಆಯ್ತು ಮಾ, ಮುಂದೆ ಹಾಗೆ ಮಾಡ್ತೀನಿ. ಅದಾಗಿ 2 ವಾರ ಕಳೆದಿತ್ತು. ಮತ್ತೆ ಸೊಸೆ ಮುದ್ದು ಒಳಗಿನಿಂದ ಗೌರಯುತವಾಗಿ ಮಾವನಿಗೆ ಹೀಗೇ ಹೇಳುವುದೇ?
“ಮಾವ, ಅತ್ತೆಮ್ಮ ಖಾಲಿ…. ಮಾರ್ಕೆಟ್ ನಿಂದ ಅಗತ್ಯ ತರುವುದು!”
ಆಶಾ : ನೋಡಮ್ಮ… ಯಾಕೋ ಎಡಗೈ ತುರಿಸ್ತಾನೇ ಇದೆ. ಏನಾಗುತ್ತೋ ಏನೋ?
ಉಷಾ : ಬಿಡೆ, ಇದು ಶುಭ ಶಕುನ! ನಿನ್ನ ಕೈಗೆ ಹಣ ಬರುತ್ತೆ ಅಂತ ಅರ್ಥ.
ಆಶಾ : ಎಡ ಪಾದದಲ್ಲೂ ಯಾಕೋ ನವೆ ನವೆ ಆಗ್ತಿದೆ ಕಣೆ.
ಉಷಾ : ಓಹೋ…. ಒಳ್ಳೇದೇ ಆಯ್ತು. ಬಹುಶಃ ನಿನ್ನ ಯಜಮಾನರು ಸೆಕೆಂಡ್ ಹನೀಮೂನ್ ಪ್ಲಾನ್ ಮಾಡ್ತಿರಬೇಕು. ಯಾವುದಕ್ಕೂ ಪ್ರಯಾಣಕ್ಕೆ ಸಿದ್ಧಳಾಗಿರು.
ಆಶಾ : ಯಾಕೋ ಹೊಟ್ಟೆಯಲ್ಲೂ ನಿನ್ನೆಯಿಂದ ಎಡ ಭಾಗದಲ್ಲಿ ನವೆ ಆಗ್ತಾನೇ ಇದೆ.
ಉಷಾ : ಬಹುಶಃ ಯಾರೋ ಔತಣಕ್ಕೆ ನಿನ್ನನ್ನು ಕರೆಯಬಹುದು ಅನ್ಸುತ್ತೆ.
ಆಶಾ : ಯಾಕೋ ನನ್ನ ಕುತ್ತಿಗೆಯ ಎಡ ಭಾಗದಲ್ಲೂ ನವೆ ಆಗ್ತಾನೇ ಇದೆ ಕಣೆ……
ಉಷಾ : ಕರ್ಮ! ನಿನಗೆ ಯಾವ ಶಕುನಾನೂ ಸೂಟ್ ಆಗಲ್ಲ. ನಿನ್ನ ಇಡೀ ದೇಹಕ್ಕೆ ಚರ್ಮದ ವ್ಯಾಧಿ ಬಂದಿರಬೇಕು!
ಪತ್ನಿ : ಏನ್ರಿ ಇದು ನಿಮ್ಮ ಅವತಾರ? ಇದೇಕೆ ಹಣೆಯಿಂದ ಈ ಪಾಟಿ ರಕ್ತ ಹರೀತಿದೆ?
ಪತಿ : ಅದೇನಿಲ್ಲ ಬಿಡು, ನನ್ನ ಫ್ರೆಂಡ್ ಕೈನಲ್ಲಿದ್ದ ಇಟ್ಟಿಗೆಯನ್ನು ನನ್ನತ್ತ ಬೀಸಿದ್ದ.
ಪತ್ನಿ : ನೀವೇಕೆ ತೆಪ್ಪಗೆ ಬಂದ್ರಿ? ಕೈಗೆ ಸಿಕ್ಕದ್ದನ್ನು ತೆಗೆದು ಅವನ ಕಡೆ ಬೀಸಬಾರದೇ? ಆಗ ನಿಮ್ಮ ಕೈಯಲ್ಲಿ ಏನಿತ್ತು ಅಂತೀನಿ…..?
ಪತಿ : ಅದೇನಿಲ್ಲ ಬಿಡು, ಅವನ ಹೆಂಡತಿಯ ಕೈ ಇತ್ತು!
ಮುಂದಿನ ಕೆಲವು ಕ್ಷಣಗಳಲ್ಲಿ ಪತಿರಾಯನ ತಲೆಯಲ್ಲಿ ಹಲವಾರು ಬೋರೆ ಕಾಣಿಸಿಕೊಂಡಿತಂತೆ.
ಪತ್ನಿ : ಯಾಕೋ ನನಗೆ ಅರ್ಧ ತಲೆ ನೋವು ತುಂಬಾ ಕಾಡುತ್ತಿದೆ, ಏನು ಮಾಡಲಿ?
ಪತಿ : ಏನು ಮಾಡೋಕ್ಕಾಗುತ್ತೆ? ಯಾರಿಗೆ ಎಷ್ಟು ಇದೆಯೋ ಅಷ್ಟೇ ತಾನೇ ನೋಯೋದು?
ಅದಾದ ಸ್ವಲ್ಪ ಹೊತ್ತಿಗೆ ಪತಿರಾಯನಿಗೆ ಮೈಕೈ ಪೂರ್ತಿ ನೋಯ ತೊಡಗಿತಂತೆ!
ಜೈಲರ್ : ಏನಪ್ಪ, ಇಷ್ಟು ದಿನ ಆದ್ರೂ ನಿಮ್ಮ ಮನೆಯವರು ಅಂತ ಒಬ್ಬರಾದರೂ ನಿನ್ನ ನೋಡೋಕ್ಕೆ ಬರೋದು ಬೇಡವೇ?
ಖೈದಿ : ಎಲ್ಲಿಂದ ಬರ್ತಾರೆ? ಎಲ್ಲರೂ ಇಲ್ಲೇ ಇದ್ದಾರಲ್ಲ!