ಝೈದ್ ಖಾನ್
ರಾಜಕೀಯ ಕುಟುಂಬದಲ್ಲಿ ಜನಿಸಿದ್ದರೂ ಸಿನಿಮಾದತ್ತ ಒಲವು ತೋರಿದ ಝೈದ್ ಖಾನ್ ರಾಜಕಾರಣಿ, ಶಾಸಕ, ಜಮೀರ್ ಅಹಮದ್ ರ ಪುತ್ರ. `ನನಗೆ ಚಿಕ್ಕಂದಿನಿಂದಲೂ ಸಿನಿಮಾ ನಟನಾಗಬೇಕೆಂಬ ಆಸೆ. ಒಂಥರಾ ಪ್ಯಾಷನ್. ಎಲ್ಲಾ ನಟರೂ ನಂಗಿಷ್ಟ ಆಗ್ತಿದ್ರು. ಅಣ್ಣಾವ್ರ ಸಿನಿಮಾ, ಶಿವಣ್ಣ, ಅಪ್ಪುರ ಚಿತ್ರಗಳನ್ನು ನೋಡಿದ್ದೇನೆ. ಅಪ್ಪು ನನ್ನ ಒಳ್ಳೆಯ ಗೆಳೆಯ. ನಾನು ಅವರ ಮನೆಯಲ್ಲಿ ಸಾಕಷ್ಟು ಕಾಲ ಕಳೆದಿದ್ದೇನೆ. ಅಪ್ಪು ಕೂಡ ನಮ್ಮನೆಗೆ ಬರೋರು. ಚಿಕ್ಕಂದಿನಿಂದಲೂ ನಾವು ಫ್ರೆಂಡ್ಸ್. ಹೆಚ್ಚಾಗಿ ಸಲ್ಮಾನ್ ಖಾನ್ ಸಿನಿಮಾ ನೋಡ್ತಿದ್ದೆ. ನನ್ನ ಫೇವರಿಟ್ ನಟ ಸಲ್ಮಾನ್ ಭಾಯ್.’
ಹೊಸಬರಾದರೂ ಝೈದ್ ಖಾನ್ ಮೊದಲ ನೋಟಕ್ಕೆ ಹಾಗೆ ಕಾಣುತ್ತಿಲ್ಲ. ಪತ್ರಿಕಾಗೋಷ್ಠಿಗಳಲ್ಲಿ ತುಂಬಾನೇ ಕಾನ್ಛಿಡೆನ್ಸ್ ನಿಂದ ಮಾತನಾಡಿ ಗಮನ ಸಳೆದ ಹುಡುಗ.
ಸಿನಿಮಾಗೆ ಜಾತಿ ಧರ್ಮ ಅಂತಿಲ್ಲ. ಅಲ್ಲಿ ಟ್ಯಾಲೆಂಟ್ ಇರೋರು ಮಾತ್ರ ಗೆಲ್ಲಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದೇನೆ. ಒಂದು ಸಿನಿಮಾಗೆ ಕಥೆಯೇ ಹೀರೋ ಎನ್ನುವವನು ನಾನು. ನಮ್ಮ `ಬನಾರಸ್’ ಸಿನಿಮಾದಲ್ಲಿ ಕಥೆಯೇ ಹೀರೋ.
ಸಿನಿಮಾ ರಂಗಕ್ಕೆ ಎಂಟ್ರಿ ಹೇಗಾಯ್ತು…..?
ನಮ್ಮ ಮನೆಯಲ್ಲಿ ಅಮ್ಮ ಅಪ್ಪ ಯಾರಿಗೂ ನಾನು ನಟನಾಗುವುದು ಮೊದಲಿನಿಂದಲೂ ಇಷ್ಟವಿರಲಿಲ್ಲ. ಆದರೆ ನನಗೆ ನಟನಾಗೋದು ಬಿಟ್ಟು ಬೇರೇನೂ ಇಷ್ಟವಿರಲಿಲ್ಲ. ಕ್ರೇಜ್ ಎನ್ನುವುದಕ್ಕಿಂತ ಒಂದು ರೀತಿ ಪ್ಯಾಷನ್ ಇತ್ತು. ಅದಕ್ಕಾಗಿ ಅನುಪಮ್ ಖೇರ್ ನಟನಾ ಸ್ಕೂಲ್ ಸೇರಿಕೊಂಡು ಸಾಕಷ್ಟು ಕಲಿತೆ. ಮನೆಯಲ್ಲಿ ಯಾರೊಬ್ಬರೂ ನನ್ನ ಸಿನಿಮಾ ಬಗ್ಗೆ ಚರ್ಚೆ ಮಾಡೋದಿಲ್ಲ. ಬಹುಶಃ ಸಿನಿಮಾ ರಿಲೀಸ್ ಆದ ಮೇಲೆ ಬದಲಾಗಬಹುದೇನೋ…..
`ಬನಾರಸ್’ ಹೇಗೆ ಶುರುವಾಯಿತು?
ಡೈರೆಕ್ಟರ್ ಜಯತೀರ್ಥಣ್ಣ ನಮಗೆ ತುಂಬಾ ಆಪ್ತರು. ಅವರ ಬಳಿ ನನಗೆ ನಟನೆಯಲ್ಲಿ ಆಸಕ್ತಿ ಇರುವುದರ ಬಗ್ಗೆ ಹೇಳಿಕೊಂಡಾಗ ಅವರೊಂದು ಕಥೆ ಹೇಳಿದ್ರು, ನನಗದು ತುಂಬಾ ಇಷ್ಟ ಆಯ್ತು. ನಿರ್ಮಾಪಕರೂ ತಯಾರಾದರು.
ನಾನು ಆ್ಯಕ್ಟಿಂಗ್ ಸ್ಕೂಲ್ ನಲ್ಲಿ ಏನೇ ಕಲಿತಿದ್ದರೂ ಮೊದಲ ಶಾಟ್ ಎದುರಿಸಿದಾಗ ನರ್ಸ್ ಆಗಿದ್ದಂತೂ ಸತ್ಯ. ನಮ್ಮ ಡೈರೆಕ್ಟರ್ ನನ್ನನ್ನು ನಟನಾಗಿ ರೂಪಿಸಿದರು. ಕಾಲೇಜಿನಲ್ಲಿ ಶೂಟಿಂಗ್. ನಾನು ಬೈಕಲ್ಲಿ ಎಂಟ್ರಿ ಕೊಡುವ ಸೀನ್…. ಮೊದಲ ಶಾಟ್ ಆಗಿತ್ತು.
ಬನಾರಸ್ ಮಾಮೂಲಿ ಲವ್ ಸ್ಟೋರಿ ಆಗಿರದೆ ಮೆಚೂರ್ಡ್ ಲವ್ ಸ್ಟೋರಿ ಎನ್ನಬಹುದು. ಬನಾರಸ್ ನಲ್ಲಿ ರಿಚ್ ಶೂಟಿಂಗ್ ಗೆ ಹೆಚ್ಚು ಒತ್ತು ಕೊಡಲಾಗಿದೆ. ಅದೊಂದು ಒಳ್ಳೆಯ ಎಕ್ಸ್ ಪೀರಿಯನ್ಸ್. ಹಾಡುಗಳು ಈಗಾಗಲೇ ಹಿಟ್ ಆಗಿವೆ. ನವೆಂಬರ್ ನಲ್ಲಿ ಬಿಡುಗಡೆ. ಜನ ನನ್ನನ್ನು ಒಬ್ಬ ನಟನಾಗಿ ಜನಪ್ರಿಯಗೊಳಿಸಬೇಕು ಎನ್ನುವುದಕ್ಕಿಂತ ಚಿತ್ರ ನೋಡಿ ಹೊರಬಂದ ಮೇಲೂ ನಾನು ಅವರ ನೆನಪಿನಲ್ಲಿ ಉಳಿಯಬೇಕು, ಆಗಲೇ ಗೆಲುವು ಸಿಗೋದು.
ಪ್ಯಾನ್ ಇಂಡಿಯಾ ಫಿಲಂ ಆಗಿರೋದ್ರಿಂದ ಸಾಕಷ್ಟು ಪ್ರಮೋಷನ್ ಮಾಡಲಾಗಿದೆ ಎಂದು ಹೇಳುತ್ತಾ ಮುಂಬೈಗೆ ಹೊರಟರು.
ಗಣಪತಿಯ ಹಬ್ಬ ಹೇಗೆ ಆಚರಿಸಿದ್ರಿ….?
ಗಣಪತಿ ಬಪ್ಪ ಮೋರೆಯಾ ಅಂದ್ರು ಬನಾರಸ್ ಹೀರೋ ಝೈದ್!
ಝೈದ್ ಖಾನ್ ಬನಾರಸ್ ಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಇದೀಗ ಅಷ್ಟ ದಿಕ್ಕುಗಳಲ್ಲಿಯೂ ಬನಾರಸ್‌ನ ಪ್ರಭೆ ನಾನಾ ರೀತಿಯಲ್ಲಿ ಪ್ರಜ್ವಲಿಸುತ್ತಿದೆ. ಇದೇ ಹೊತ್ತಿನಲ್ಲಿ ಝೈದ್ ಖಾನ್ ಭಕ್ತಿ ಭಾವಗಳಿಂದ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ , ಈ ಹಬ್ಬವನ್ನು ಮನಸಾರೆ ಸಂಭ್ರಮಿಸುವ ಮೂಲಕ ಮೆಚ್ಟುಗೆಗೂ ಪಾತ್ರರಾಗಿದ್ದಾರೆ.
ಚಾಮರಾಜಪೇಟೆಯ ಶಾಸಕರಾದ ಜಮೀರ್ ಅಹಮದ್ ಖಾನ್ ತಮ್ಮ ಕಛೇರಿಯಲ್ಲಿ ಗಣೇಶನನ್ನು ಕೂರಿಸಿದ್ದಾಗ ಪೂಜೆ ಸಲ್ಲಿಸಿದ್ದರು. ಇದರಲ್ಲಿ ಅವರ ಪುತ್ರ ಝೈದ್ ಖಾನ್ ಕೂಡಾ ಉತ್ಸುಕತೆಯಿಂದ ಭಾಗಿಯಾಗಿದ್ದರು. ಮತ, ಧರ್ಮಗಳಾಚೆಗೆ ಗಣೇಶನಿಗೆ ಪೂಜೆ ಸಲ್ಲಿಸಿ, ನೆರೆದಿದ್ದ ನಾಗರಿಕರೊಂದಿಗೆ ಸೇರಿ ಕುಣಿದು ಸಂಭ್ರಮಿಸಿದ್ದರು. ಈ ಮೂಲಕ ಬನಾರಸ್ ಚಿತ್ರದ ನವನಾಯಕ ಝೈದ್ ಖಾನ್ ಜನರೆಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಹೀಗೆ ಗಣೇಶನ ಪೂಜೆಯೊಂದಿಗೆ ಮೆಚ್ಚುಗೆಗೆ ಪಾತ್ರರಾಗಿರುವ ಝೈದ್ ಖಾನ್ ಬನಾರಸ್ ಚಿತ್ರದ ನಾಯಕನಾಗಿ ಈಗಾಗಲೇ ಒಂದಿಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ, ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿರುವ ಬನರಾಸ್, ಇದೇ ನವೆಂಬರ್ ಮೊದಲ ವಾರದಲ್ಲೇ ತೆರೆ ಕಾಣಲಿದೆ. ಈಗಾಗಲೇ `ಮಾಯಗಂಗೆ…..’ ಎಂಬ ಒಂದು ಹಾಡಿನ ಮೂಲಕ ಅಗಾಧ ನಿರೀಕ್ಷೆ ಮೂಡಿಸಿರುವ ಬನಾರಸ್ ಐದು ಭಾಷೆಗಳಲ್ಲಿ ಏಕಕಾಲಕ್ಕೆ ರೂಪುಗೊಂಡಿರುವ ಪ್ಯಾನ್ ಇಂಡಿಯಾ ಚಿತ್ರ. ಈ ಮೂಲಕ ಝೈದ್ ಖಾನ್ ನಾಯಕನಾಗಿ ನೆಲೆ ಕಂಡುಕೊಳ್ಳಲಿದ್ದಾರೆಂಬ ಭರವಸೆ ಗಟ್ಟಿಗೊಂಡಿದೆ.
`ಎಲ್ಲ ಟ್ರೋಲು…. ಎಲ್ಲಾ ಟ್ರೋಲು…. ಸಿಕ್ಕಾಪಟ್ಟೆ ಕೊಲೆಸ್ಟ್ರಾಲು….’ ಅಂತ ಶುರುವಾಗೋ ಈ ಹಾಡಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಸಂಗೀತ ಸಂಯೋಜನೆ ಮಾಡಿರುವ ಅಜನೀಶ್ ಲೋಕನಾಥ್ ಅವರೇ ಈ ಹಾಡನ್ನು ಹಾಡಿದ್ದಾರೆ. ಸಾಮಾನ್ಯವಾಗಿ ಮೋಡಿ ಹಾಡುಗಳ ಮೂಲಕ ಗಮನ ಸೆಳೆಯುವ, ಅದಕ್ಕೆ ಪ್ರಸಿದ್ಧಿ ಪಡೆದುಕೊಂಡಿರುವವರು ನಾಗೇಂದ್ರ ಪ್ರಸಾದ್. ಅವರು ಆಗಾಗ ಟಪ್ಪಾಂಗುಚ್ಚಿ ಸಾಂಗಿಗೂ ಸೈ ಎಂಬುದನ್ನು ಸಾಬೀತುಪಡಿಸುತ್ತಿರುತ್ತಾರೆ. ಈ ಟ್ರೋಲ್ ಹಾಡಿನ ಮೂಲಕ ಅದು ಮತ್ತೊಮ್ಮೆ ರುಜುವಾತಾಗಿದೆ.
ವಿಶೇಷವಾಗಿ, ಈ ಹಾಡಿನಲ್ಲಿ ಝೈದ್‌ಖಾನ್ ಮತ್ತೆ ಮಿಂಚಿದ್ದಾರೆ. ಆ ಮೂಲಕ ಮತ್ತಷ್ಟು ಭರವಸೆ ಮೂಡಿಸಿದ್ದಾರೆ. ಈ ಹಿಂದೆ ಮಾಯಾಗಂಗೆ ಹಾಡು ನೋಡಿದವರೆಲ್ಲರೂ ಝೈದ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಬನಾರಸ್ ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಪ್ಯಾನ್ ಇಂಡಿಯಾ ಚಿತ್ರ. ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಕರಾವಳಿಯ ಹುಡುಗಿ ಸೋನ್ ಮಂತೇರೋ ನಾಯಕಿಯಾಗಿ ಝೈದ್ ಖಾನ್ ಗೆ ಸಾಥ್ ಕೊಟ್ಟಿದ್ದಾರೆ.
– ಸರಸ್ವತಿ ಜಾಗೀರ್ ದಾರ್