ಆ ನಗುನೇ ಹಾಗೆ. ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕಿನ್ನೋ ಆಸೆ. ಆ ಮಾತು ಅಷ್ಟೇನೇ. ಒಮ್ಮೆ ಕೇಳಿದ್ರೆ ಮತ್ತೆ ಮತ್ತೆ ಮಾತನಾಡಿಸಬೇಕೆಂಬ ಆಸೆ. ಕೋಟಿ ಕೋಟಿ ಅಭಿಮಾನಿಗಳ ಪಾಲಿಕೆ ಆಕೆ ಆರಾಧ್ಯ ದೇವತೆ. ಕೋಟಿ ಕೋಟಿ ಜನರ ಪಾಲಿಗೆ ಆಕೆ ನಗುವಿನ ಒಡತಿ. ಅಂತಹ ಸದ್ಗುಣ ಹೊಂದಿರುವ.. ನಗುವಿನ ಸೌಂದರ್ಯದ ಖನಿ ಅಂತಾನೇ ಕರೆಸಿಕೊಳ್ಳೋ ಎವರ್ಗ್ರೀನ್ ಸುಂದರಿ ಅಂದ್ರೆ ನಮ್ಮ ‘ಬಂಧನ’ದ ‘ನಂದಿನಿ’ ಅರ್ಥಾತ್ ಸುಹಾಸಿನಿ.
90ರ ದಶಕದಲ್ಲಿ ಸೂಪರ್ ಡೂಪರ್ ಹಿಟ್ ಆದ ‘ಬಂಧನ’ ಸಿನಿಮಾದಲ್ಲಿ ನಂದಿನಿ ಪಾತ್ರದಲ್ಲಿ ಮಿಂಚಿದ್ದ.. ‘ಮುತ್ತಿನಹಾರ’ದಲ್ಲಿ ಒಬ್ಬ ಯೋಧನ ಪತ್ನಿಯಾಗಿ ಮನೋಜ್ಞವಾಗಿ ಅಭಿನಯಿಸಿದ್ದ.. ‘ಅಮೃತವರ್ಷಿಣಿ’ಯಲ್ಲಿ ಇಡೀ ಕರುನಾಡನ್ನೇ ತನ್ನತ್ತ ಸೆಳೆದಿದ್ದ.. ಕನ್ನಡದಲ್ಲಿ ಅಭಿನಯಿಸಿದ ಅಷ್ಟೂ ಸಿನಿಮಾಗಳಲ್ಲಿನ ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರೋ.. ಕನ್ನಡವಷ್ಟೇ ಅಲ್ಲದೇ ಇತರೆ ಭಾಷೆಗಳಲ್ಲೂ ಈಗಲೂ ಮಿಂಚುತ್ತಿರುವ ನಟಿ ಸುಹಾಸಿನಿ ಈ ಕ್ಷಣಕ್ಕೂ ಎಲ್ಲರ ಫೇವರೇಟ್ ಹೀರೋಯಿನ್. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಬ್ಲಾಕ್ ಬಸ್ಟರ್ ಹಿಟ್ ‘ಬಂಧನ’ ಸಿನಿಮಾದಿಂದ ನಂದಿನಿ ಎಂದೇ ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದ 90ರ ದಶಕದ ಸ್ಟಾರ್ ನಟಿ ಸುಹಾಸಿನಿ ಕನ್ನಡಿಗರಿಗೆ ಬಹಳ ಚಿರಪರಿಚಿತ. ದಶಕಗಳ ಹಿಂದೆ ನೋಡಿದ ಆ ನಗುವಿನಲ್ಲಿ ಕೊಂಚವೂ ಬದಲಾವಣೆ ಇಲ್ಲದಂತೆ ಸದಾ ನಗುತ್ತಿರೋ ನಟಿ ಸುಹಾಸಿನಿಯ ನಗುವಿನ ಹಿಂದೆ ಒಂದು ನೋವಿನ ಸಂಗತಿ ಇದೆ. ಆ ನೋವಿನ ಸಂಗತಿಯೇ ನಟಿ ಸುಹಾಸಿನಿಗೆ ಇದ್ದ ಟಿಬಿ ಕಾಯಿಲೆ.
ತಮಿಳಿನ ಸ್ಟಾರ್ ಡೆರೆಕ್ಟರ್ ಪತ್ನಿಯಾಗಿರೋ ನಟಿ ಸುಹಾಸಿನಿ ಸಂದರ್ಶನವೊಂದರಲ್ಲಿ ತಮಗೆ ಇರೋ ಟಿಬಿ ಕಾಯಿಲೆ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಅವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಬಹಿರಂಗಪಡಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ನನಗೆ ಟಿಬಿ ಸಮಸ್ಯೆ ಇದೆ ಎಂದು ಹೇಳುವ ಮೂಲಕ ಬಹುಭಾಷಾ ನಟಿ ಸುಹಾಸಿನಿ ತಮ್ಮ ವೈಯಕ್ತಿಕ ಜೀವನದ ಶಾಕಿಂಗ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
‘ನನಗೆ ಟಿಬಿ ಸಮಸ್ಯೆ ಇದೆ.’ ಆದರೆ ನನಗೆ ವಿಷಯ ತಿಳಿದ ನಂತರವೂ, ಭಯದಿಂದ ನಾನು ಅದನ್ನು ಎಲ್ಲರಿಂದ ಮರೆಮಾಡಿದೆ. ನನ್ನ ಘನತೆಯನ್ನು ಕಳೆದುಕೊಳ್ಳುವ ಭಯ ನನಗಿತ್ತು. ಯಾರಿಗೂ ತಿಳಿಯದಂತೆ ಆರು ತಿಂಗಳು ಚಿಕಿತ್ಸೆ ಪಡೆದೆ. “ಕೆಲವು ವರ್ಷಗಳ ನಂತರ, ನಾನು ಸಮುದಾಯಕ್ಕೆ ಇದರ ಬಗ್ಗೆ ತಿಳಿಸಲು ಮತ್ತು ಎಲ್ಲರಲ್ಲೂ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ಬಯಸಿದ್ದೆ ಅಂತಾ ಸುಹಾಸಿನಿ ಹೇಳಿದ್ದಾರೆ.
6 ವರ್ಷವಿದ್ದಾಗ ಬಂದಿದ್ದ ಕ್ಷಯರೋಗ ಕೆಲ ವರ್ಷ ಕಡಿಮೆಯಾಗಿದ್ರೂ ಮತ್ತೆ 36ನೇ ವರ್ಷದಲ್ಲಿ ಕಾಣಿಸಿಕೊಂಡಿತ್ತಂತೆ. ಅದರಿಂದ ಕಿವಿ ಕೇಳಿಸದ ರೀತಿ ಆಗಿತ್ತಂತೆ. ಅದೆಲ್ಲವನ್ನೂ ಪಕ್ಕಕ್ಕಿಟ್ಟು ಕಷ್ಟವನ್ನು ದಿಟ್ಟವಾಗಿ ಎದುರಿಸಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಿದರಂತೆ. 2020ರಲ್ಲಿ REACH ಇಂಡಿಯಾ ಸಂಸ್ಥೆ ಸೇರಿ ಕ್ಷಯರೋಗಕ್ಕೊಳಗಾಗಿರುವ ಮಂದಿಗೆ ಜಾಗೃತಿ ಮೂಡಿಸಿದ್ದರಂತೆ.