ಕಥೆ ಡಾ. ದೀಪಾ ಹಿರೇಮಠ್

“ಅಮ್ಮ ಹೊರಗಡೆ ಕಟ್ಟೆಯ ಮೇಲೆ ಯಾರೋ ಒಬ್ಬ ವೃದ್ಧರು ಕುಳಿತಿದ್ದಾರೆ. ನೀನು ಹುಷಾರು, ಬಾಗಿಲು ತೆರೆಯಬೇಡ, ಒಳಗಡೆ ಇರು,” ಎಂದು ತಾಯಿಗೆ ಮಗ ಹೇಳಿದ.

“ಆಯಿತು ಅರುಣ್‌, ಈಗಿನ ಕಾಲದಲ್ಲಿ ಯಾರನ್ನೂ ನಂಬುವ ಹಾಗಿಲ್ಲ. ನೀನು ಹುಷಾರಾಗಿ ಕಾಲೇಜಿಗೆ ಹೋಗಿ ಬಾ, ಮಧ್ಯಾಹ್ನ ಲಂಚ್‌ ಬಾಕ್ಸ್ ಇಟ್ಟಿದ್ದೀನಿ, ಊಟ ಮಾಡು,” ಎನ್ನುತ್ತಾ ಮಗನ ಹಿಂದೆ ನಡೆದಳು.

ಹೊರಗಿನ ಬಾಗಿಲು ತೆರೆಯಲು ಪಕ್ಕದ ಕಟ್ಟೆಯ ಮೇಲೆ ಶೂನ್ಯದಲ್ಲಿ ದೃಷ್ಟಿ ನೆಟ್ಟ ಸುಮಾರು 65-70 ವರ್ಷ ವಯಸ್ಸಿನ ವ್ಯಕ್ತಿ ಕುಳಿತಿದ್ದರು.

ತಾಯಿ ಮಗ ಇಬ್ಬರೂ ನೋಡಿದರು. ಬಾಡಿದ ಮುಖ, ಶರೀರದಲ್ಲಿ ಆಯಾಸ ಎದ್ದು ಕಾಣುತ್ತಿತ್ತು. ಸುಸ್ತಾಗಿ ಕುಳಿತಿರಬಹುದು ಎಂದುಕೊಂಡಳು ಸವಿತಾ. ಆದರೆ ಅವಳ ಮನಸ್ಸು ಚುರ್‌ ಎಂದಿತು. ಯಾಕೋ ತನ್ನ ತಂದೆ ಕಣ್ಣು ಮುಂದೆ ಬಂದಂತಾಯಿತು.

“ಅಮ್ಮಾ, ಬಾಗಿಲು ಹಾಕಿಕೋ,” ಎಂದು ಹೊರನಡೆದ. ತಾಯಿ ಬಾಗಿಲು ಹಾಕಿ ಒಳಗೆ ಹೋದ ಮೇಲೆ ಇವನು ರಸ್ತೆಗೆ ಇಳಿದ.

ಒಳಗಡೆ ಬಂದ ಸವಿತಾಳಿಗೆ ಮನೆ ಬಿಕೋ ಎನ್ನುತ್ತಿತ್ತು. ಹೊಸ ಕನಸುಗಳನ್ನು ಕಟ್ಟಿಕೊಂಡು ಆ ಮನೆಗೆ ಕಾಲಿಟ್ಟಾಗ, ತುಂಬಿದ ಸಂಸಾರವಿತ್ತು. ಮನೆಯಲ್ಲಿ ನಗು, ಮಾತಿನ ಕಲರವವಿತ್ತು. ಅತ್ತೆ, ಮಾವ, ನಾದಿನಿ, ಮೈದನರ ಮುನಿಸು, ವಿರಸ, ಸಂತೋಷ, ಚಿಕ್ಕ ಪುಟ್ಟ ಜಗಳ ಎಲ್ಲ ತುಂಬಿ ತುಳುಕುತ್ತಿತ್ತು. ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಸಡಗರದಿಂದ ಆಚರಿಸುತ್ತಿದ್ದರು.

marmik-story2

ಅರುಣ್‌ ಹುಟ್ಟಿ ಐದು ವರ್ಷಕ್ಕೆ ನಾದಿನಿ ವಿನುತಾಳ ಮದುವೆಯಾಗಿ ಅಮೆರಿಕಾಕ್ಕೆ ಹಾರಿದಳು. ಮೈದುನನ ಕೆಲಸದ ನಿಮಿತ್ತ ಅವನ ಸಂಸಾರ ಮುಂಬೈ ಸೇರಿತು.

ಅರುಣ್‌ 10 ವರ್ಷದವನಿದ್ದಾಗ, ಅತ್ತೆ ಮಾವ ಒಂದು ಕಾರು ಅಪಘಾತದಲ್ಲಿ ಇವರನ್ನೆಲ್ಲ ಬಿಟ್ಟು ಹೋದರು. ಸವಿತಾ, ಗಂಡ ಹರೀಶ್, ಮಗ ಅರುಣ್‌ ಜೊತೆ ಜೀವನ ನಡೆದಿತ್ತು. ವರ್ಷಕ್ಕೊಮ್ಮೆಯೋ, ಎರಡು ವರ್ಷಕ್ಕೊಮ್ಮೆಯೋ ಎಲ್ಲರೂ ಕೂಡುತ್ತಿದ್ದರು. ಈ ನಾಲ್ಕು ವರ್ಷದಲ್ಲಿ ಎಲ್ಲ ಸಂಬಂಧಗಳು ಕಳಿಚಿದವು. ಗಂಡನ ಅಕಾಲಿಕ ಮರಣದಿಂದ ಕಂಗೆಟ್ಟ ಸವಿತಾ ಮಗನಿಗಾಗಿ ಜೀವಿಸುತ್ತಿದ್ದೇನೆ ಎನ್ನುತ್ತಾ, ಕಣ್ಣೀರು ಒರೆಸಿಕೊಂಡು ಅಡುಗೆಮನೆ ಕಡೆ ನಡೆದಳು.

ಮಧ್ಯಾಹ್ನ ಊಟದ ಸಮಯ, ಮಗ ಊಟ ಮಾಡುತ್ತಿರಬಹುದು ಎನ್ನುತ್ತಾ  ತಾನೂ ತಟ್ಟೆಗೆ ಅನ್ನ ಹಾಕಿಕೊಂಡಳು. ಹೊರಗೆ ಕುಳಿತ ವ್ಯಕ್ತಿ ನೆನಪಾಗಲು ಇಷ್ಟೊತ್ತು ಇರಲಿಕ್ಕಿಲ್ಲ ಹೋಗಿರಬೇಕು. ಏನೋ ಆಯಾಸ ಆಗಿರಬೇಕು, ಅದಕ್ಕೆ ಕುಳಿತಿದ್ದರೊ ಏನೋ ಎಂದುಕೊಳ್ಳುತ್ತಾ ಊಟ ಮಾಡಿ ಸ್ವಲ್ಪ ಹೊತ್ತು ಮಲಗಿ ಎದ್ದರಾಯಿತು ಎನ್ನುತ್ತಾ ಮಲಗಿದ ಸವಿತಾಳಿಗೆ, ಕಾಲಿಂಗ್‌ ಬೆಲ್ ‌ಶಬ್ದಕ್ಕೆ ಎಚ್ಚರವಾಯಿತು.

`ಅಯ್ಯೋ ದೇವರೇ, ಈ ಹಾಳಾದ ನಿದ್ದೆ ರಾತ್ರಿ ಬಾ ಅಂದರೆ ಬರಲ್ಲ. ಇವತ್ತೇನೂ ಸಂಜೆಯವರೆಗೆ ಮಲಗಿದ್ದೇನೆ,’ ಎನ್ನುತ್ತಾ ಓಡಿ ಬಂದು ಬಾಗಿಲು ತೆರೆಯಲು ಅರುಣ್‌ ನಿಂತಿದ್ದ.

“ಬಾ ಅರುಣ್‌,” ಎಂದಳು.

“ಅಮ್ಮಾ, ಇಲ್ಲಿ ನೋಡು,” ಎಂದಾಗ ಸವಿತಾ ಹೊರಗೆ ಗೋಣು ಹಾಕಿ ನೋಡಲು ಆಶ್ಚರ್ಯವಾಯಿತು ಅದೇ ವ್ಯಕ್ತಿ ಗೂಡು ಕಾಲು ಹಾಕಿ ಮಲಗಿಕೊಂಡು ನರಳುತ್ತಿದ್ದಾನೆ.

“ಅಯ್ಯೋ ದೇವರೇ, ನಾನು ಹೋಗಿರಬಹುದು ಅಂದುಕೊಂಡೆ ಅರುಣ್‌. ಅವರ ಬಟ್ಟೆ, ಬರೆ ನೋಡಿದರೆ ಒಳ್ಳೆ ಮನೆಯವರು ಅನಿಸುತ್ತದೆ, ಊರಿಗೆ ಹೊಸಬರಿರಬಹುದು. ದಾರಿ ತಪ್ಪಿದ್ದಾರೆ ಅನಿಸುತ್ತೆ. ಬಾರೋ, ಒಳಗೆ ಕರೆದುಕೊಂಡು ಹೋಗೋಣ.”

“ಅಮ್ಮಾ, ಬುದ್ಧಿ ಇದೆಯಾ ನಿನಗೆ? ಇದು ಬೆಂಗಳೂರು. ಇಲ್ಲಿ ಯಾರು ಹೇಗೋ ಹೇಳಲಾಗದು. ಸುಮ್ಮನೆ ಒಳಗೆ ನಡಿ.”

“ಇಲ್ಲ ಅರುಣ್‌, ಇಲ್ಲಿಯೇ ಆ ವ್ಯಕ್ತಿಗೆ ಊಟ ತಂದುಕೊಡಲಾ?” ಅಂಗಲಾಚಿದಳು.

“ಅಮ್ಮಾ, ನಿನಗೆ ಹೇಗೆ ಹೇಳಲಿ? ಮನೆಯಲ್ಲಿ ಒಬ್ಬಳೇ ಇರುತ್ತೀಯಾ,” ಆತಂಕ ವ್ಯಕ್ತಪಡಿಸಿದ.

“ಬೆಳಗ್ಗೆಯಿಂದ ಕೂತಿದ್ದಾರೆ ಕಣೋ. ಪಾಪ ಊಟ, ನೀರು ಏನು ಇಲ್ಲ. ಮೊದಲೇ ವಯಸ್ಸಾಗಿದೆ ಪ್ಲೀಸ್‌ ಕಣೋ, ಇಲ್ಲಿಯೇ ಊಟ ಕೊಡುವೆ,” ಎನ್ನುತ್ತಾ ಮಗನ ಉತ್ತರಕ್ಕೂ ಕಾಯದೆ ಅಡುಗೆಮನೆಗೆ ಓಡಿದಳು.

ತಟ್ಟೆಯಲ್ಲಿ ಅನ್ನ, ಸಾರು ಕಲಸಿಕೊಂಡು, ಕೈಯಲ್ಲಿ ನೀರಿನ ಗ್ಲಾಸ್‌ ಹಿಡಿದು ಬಂದಳು. ಮಗನ ಮುಖ ನೋಡಲು ನಿರುತ್ಸಾಹದಿಂದ ಆ ವೃದ್ಧನನ್ನು ಎಬ್ಬಿಸಿದ. ಎದ್ದು ಕುಳಿತ ವ್ಯಕ್ತಿ ಸವಿತಾಳ ಮುಖ ನೋಡಿದ್ದೇ, “ಮಗಳೇ….” ಎಂದರು.

ಸವಿತಾಳಿಗೆ ಆನಂದ ಆಶ್ಚರ್ಯದಿಂದ ಕಣ್ಣಲ್ಲಿ ನೀರು ತುಂಬಿದವು.

“ಊಟ ಮಾಡಿ,”  ಎಂದು ತಟ್ಟೆ ಮುಂದೆ ಹಿಡಿದಳು.

ಬಾಯಿ ತೆರೆಯಲು ಸವಿತಾ ಆಶ್ಚರ್ಯದಿಂದ ಮಗನ ಮುಖ ನೋಡಿದಳು. ಅವಳಿಗೆ ಅರಿಯದೆ ಅವಳ ಕೈ ಊಟ ಉಣಿಸಲು ಅಣಿಯಾಯಿತು. ತುಂಬಾ ಹಸಿದಿದ್ದರಿಂದ ಹೊಟ್ಟೆ ತುಂಬಾ ಊಟ ಮಾಡಿದರು.

“ಹೊಟ್ಟೆ ಹಸಿದಿತ್ತು ಮಗಳೇ, ಇಲ್ಲೇ ಮಲಗಿಬಿಟ್ಟೆ ನೋಡು. ಬಾ, ಒಳಗೆ ಹೋಗೋಣ!” ಏನೋ, ವರ್ಷದಿಂದ ಪರಿಚಯ, ಸ್ವಂತ ಮಗಳೇ, ಅನ್ನುವ ಹಾಗೆ ಮಾತನಾಡಿದ್ದು ಸವಿತಾಳ ಹೃದಯಕ್ಕೆ ತಾಗಿತು. ಕೈಹಿಡಿದು ಎಬ್ಬಿಸಿ ಒಳಗೆ ಕರೆದುಕೊಂಡು ಹೋದಳು.

ಅರುಣನ ಭಯ ಹೆಚ್ಚಾಯಿತು. ಅಮ್ಮ, ಈ ವೃದ್ಧರಲ್ಲಿ ತನ್ನ ತಂದೆಯನ್ನು ಕಾಣುತ್ತಿದ್ದಾಳೆ. ಅದರೆ ಮುಂಬರುವ ಸಮಸ್ಯೆಗಳ ಬಗ್ಗೆ ಇವಳಿಗೆ ತಿಳಿದಿಲ್ಲ. ಹೇಗೆ ಹೇಳಲಿ ಎಂದು ಯೋಚಿಸುತ್ತಾ ನಿಂತುಬಿಟ್ಟ.

ಸವಿತಾ, ಆ ವ್ಯಕ್ತಿಯನ್ನು ಕುರ್ಚಿಯ ಮೇಲೆ ಕೂರಿಸಿದಳು. ಅರುಣ್‌ ಕರೆದನೆಂದು ಹಿಂದೆ ತಿರುಗಿದಳು. ಮಗ ತಾಯಿಯ ಕೈ ಹಿಡಿದು ರೂಮಿಗೆ ಕರೆದುಕೊಂಡು ಬಂದು, “ಅಮ್ಮಾ, ಏನು ಮಾಡುತ್ತಿದ್ದೀ ನೀನು? ಅವರು ಯಾರು? ಎಲ್ಲಿಂದ ಬಂದವರು? ಏನು ಅಂತ ಗೊತ್ತಿಲ್ಲ. ಅಂಥವರನ್ನು ಮನೆ ಒಳಗೆ ಇಟ್ಟುಕೊಂಡರೆ ಹೇಗಮ್ಮಾ? ನನ್ನ ಫ್ರೆಂಡ್‌ ವಿನೋದನ ತಂದೆ ಪೊಲೀಸ್‌. ಅವರಿಗೆ ಫೋನ್ ಮಾಡಿ ಸಹಾಯ ಕೇಳಿ ಸ್ಟೇಷನ್‌ ನಲ್ಲಿ ಬಿಟ್ಟು ಬರೋಣ,” ಎಂದ ಆತಂಕದಿಂದ.

“ಅಯ್ಯೋ ಬೇಡ ಅರುಣ್‌, ಬಾಯಿ ತುಂಬಾ ಮಗಳೇ ಅಂದಿದ್ದಾರೆ. ದೇವರು ನನಗೆ ಎರಡನೇ ಸಲ ತಂದೆಯ ಪ್ರೀತಿ ಹಾಗೂ ಸೇವೆ ಮಾಡುವ ಭಾಗ್ಯ ಕರುಣಿಸಿದ್ದಾನೆ. ಇದನ್ನು ನನ್ನಿಂದ ಕಸಿಯಬೇಡ,” ಎಂದಳು ಸವಿತಾ.

“ಅಮ್ಮಾ. ಏನಿದು ಹುಚ್ಚುತನ,” ತಲೆ ಚೆಚ್ಚಿಕೊಂಡು ರೂಮಿಗೆ ಹೋದ.

ಸಾಯಂಕಾಲ ಟೀ ಮಾಡಿ ಕೊಟ್ಟಳು. ಆ ಮನುಷ್ಯ ಏನೇನೋ ಹೇಳುತ್ತಿದ್ದರು. ಮಧ್ಯೆ ಮಧ್ಯೆ ಮಗಳೇ ಎನ್ನುತ್ತಿದ್ದ ವ್ಯಕ್ತಿಯನ್ನೇ ನೋಡುತ್ತಾ ಕುಳಿತುಬಿಟ್ಟಳು ಸವಿತಾ.

ತಾನು ಮದುವೆಯಾಗಿ ಗಂಡನ ಮನೆಗೆ ಬರಬೇಕಾದರೆ ಅಮ್ಮನಿಗಿಂತ ಅಪ್ಪನೇ ಬಹಳ ಅತ್ತಿದ್ದರು. `ನನ್ನ ಶರೀರದ ಒಂದು ಭಾಗವೇ ಇಲ್ಲದಂತಾಯಿತು,’ ಎನ್ನುತ್ತಿದ್ದರು ಅಪ್ಪ. ತಾನು ಗಂಡನ ಮನೆಗೆ ಹೋದ ಮೇಲೆ ಒಂದು ದಿನ ಬೆಳಗ್ಗೆ 6 ಗಂಟೆಗೆ ಬಾಗಿಲು ತೆರೆದರೆ ತಂದೆ ನಿಂತಿದ್ದರು.

“ಅಪ್ಪ ಹುಷಾರಾಗಿದ್ದೀರಾ? ಅಮ್ಮ ಹೇಗಿದ್ದಾರೆ?” ಯಾಕೆ ಬೆಳಗೆ ಬೆಳಗ್ಗೆ ಬಂದಿದ್ದಾರೆ ಎಂಬ ಆತಂಕದಿಂದ ಮನೆ ಒಳಗೆ ಕರೆತಂದಿದ್ದಳು.

“ನಿನ್ನ ಬಗ್ಗೆ, ಕೆಟ್ಟ ಕನಸು ಬಿದ್ದಿತ್ತು. ಮಗಳೇ, ಅದಕ್ಕೆ ನಿನ್ನ ನೋಡಲು ಬಂದುಬಿಟ್ಟೆ. ಈಗ ಸಮಾಧಾನವಾಯಿತು,” ಎಂದಿದ್ದರು.

ದೀಪಾವಳಿ ಹಬ್ಬಕ್ಕೆ ತಾನು ಹೋಗಲಿಲ್ಲವೆಂದರೆ, ಸಪ್ಪೆ ಮುಖ ಮಾಡಿ ಕುಳಿತುಬಿಡುತ್ತಿದ್ದರು. ಆ ವರ್ಷ ಅಮ್ಮನಿಗೆ ಹಬ್ಬವೇ ಇಲ್ಲ.  ಸವಿತಾಳ ಕಣ್ಣಿಂದ ನೀರು ಸುರಿಯುತ್ತಿತ್ತು.

“ಮಗಳೇ,” ಎನ್ನುವ ಧ್ವನಿಗೆ ವಾಸ್ತಕ್ಕೆ ಬಂದಳು.

ರಾತ್ರಿ, ಊದಿರುವ ಕಾಲನ್ನು ನೋಡಿ ಎಣ್ಣೆ ಕಾಯಿಸಿ ಹಚ್ಚಿ ಮಸಾಜ್‌ ಮಾಡಿದಳು. ಮಲಗಲು ವ್ಯವಸ್ಥೆ ಮಾಡಿ, ಮಗನ ರೂಮಿಗೆ ಹೋದಳು. ಸಿಟ್ಟಿನಲ್ಲಿದ್ದ ಮಗನನ್ನು ನೋಡಿದಳು. “ಅಮ್ಮಾ, ಇದು ಯಾಕೋ ಅತಿಯಾಯಿತು. ನಿನಗೆ ನಾಳೆ ಒಂದು ದಿನ ಅಷ್ಟೇ. ನಾಡಿದ್ದು ಪೊಲೀಸರನ್ನು ಕರೆಸಿ ಇವರನ್ನು ಕಳಿಸುವೆ,” ಎಂದ.

“ಆಯಿತು ಅರುಣ್‌, ಹಾಗೆ ಮಾಡು. ನಾಳೆ ಒಂದು ದಿನವಾದರೂ ನನ್ನ ಜೊತೆ ಇರುತ್ತಾರಲ್ಲ, ಅಷ್ಟು ಖುಷಿ ಸಾಕು ನನಗೆ,” ಎಂದು ಹೇಳಿದಳು.

ರಾತ್ರಿ ಎರಡು ಮೂರು ಬಾರಿ ಎದ್ದು ಹೋಗಿ ಆ ವೃದ್ಧರನ್ನು ನೋಡಿ ಬಂದಳು. ತಂದೆಯ ನೆನಪುಗಳು ನಾ ಮುಂದೆ ತಾ ಮುಂದೆ ಎಂದು ಬರುತ್ತಿದ್ದವು. ಆ ನೆನಪುಗಳಲ್ಲಿಯೇ ರಾತ್ರಿಯನ್ನು ಕಳೆದಳು.

ಸವಿತಾಳ ಸಂಭ್ರಮ ನೋಡಿ ಅರುಣ್‌ ಕೂಡ ಆಶ್ಚರ್ಯಪಡುತ್ತಿದ್ದ. ಹೊಸ ಬಟ್ಟೆ ಕೊಟ್ಟಳು. ಅವು ಅವಳ ಮಾವನ ಬಟ್ಟೆಗಳಾಗಿದ್ದವು. ಅವರು ಅರುಣ್‌ ಇದ್ದಾನೆ ಎನ್ನುವುದೇ ಗೊತ್ತಿಲ್ಲದ ಹಾಗೆ ಅಮ್ಮನ ಹಿಂದೆ `ಮಗಳೇ ಮಗಳೇ….’ ಎನ್ನುತ್ತಾ ಓಡಾಡುತ್ತಿದ್ದರು.

ಅರುಣ್‌ ಆ ದಿನ ಕಾಲೇಜಿಗೂ ಹೋಗಲಿಲ್ಲ. ಮಧ್ಯಾಹ್ನ ಹಾಸಿಗೆ ಮೇಲೆ ಬುಕ್‌ ಹಿಡಿದು ಮಲಗಿದ್ದ. ಒಳಗಡೆ ತಾಯಿ ಬಾಯಿ ತುಂಬಾ ಅಪ್ಪಾಜಿ ಎನ್ನುತ್ತಾ ಮಾತನಾಡುತ್ತಿದ್ದಳು.

ಆದರೂ ಅವಳ ಮನಸ್ಸಲ್ಲಿ,  `ಯಾರ ತಂದೆಯೋ… ಅವರ ಮಕ್ಕಳು ಎಷ್ಟು ಹುಡುಕುತ್ತಿದ್ದಾರೋ, ಎಷ್ಟು ಆತಂಕಪಡುತ್ತಿದ್ದಾರೋ ನನ್ನ ಸ್ವಾರ್ಥಕ್ಕಾಗಿ ಪೊಲೀಸರಿಗೆ ಹೇಳದೆ ಇರಿಸಿಕೊಂಡೆ. ಪಾಪ ಆ ಮಕ್ಕಳ ಪರಿಸ್ಥಿತಿ ಏನಾಗಿರಬಹುದು…..?’ ಎನ್ನುತ್ತಾ ಮರುಗುತ್ತಿದ್ದಳು.

“ಅಮ್ಮಾ…. ಅಮ್ಮ….. ಬೇಗ ಬಾ ಇಲ್ಲಿ……!” ಆ ಶಬ್ದಕ್ಕೆ ಆತಂಕದಿಂದ ಮಗನ ರೂಮಿಗೆ ಓಡಿದಳು.

“ನೋಡಿಲ್ಲಿ….,” ಎನ್ನುತ್ತಾ ಅರುಣ್‌ ಮೊಬೈಲ್ ‌ಮುಂದೆ ಹಿಡಿದ.

“ಅರೇ, ಇದು ಇವರೇ……,  ಈ ವೃದ್ಧರ ಫೋಟೋ ಯಾರು ಹಾಕಿದ್ದು……?”

“ನನ್ನ ಗೆಳೆಯ ವಿನಯನ ದೊಡ್ಡಪ್ಪ ಅಂತೆ. ಅವರಿಗೆ `ಅಲ್ಝಿಮರ್‌’ ಅಂದರೆ ಮರೆವು ರೋಗ ಇದೆಯಂತೆ.  ಯಾರಿಗಾದರೂ ಸಿಕ್ಕರೆ ನಮಗೆ ತಿಳಿಸಿ. ಮಕ್ಕಳು, ಬಂಧು ಮಿತ್ರರು ಹುಡುಕುತ್ತಿದ್ದೇವೆ,” ಎಂದು ಬರೆದಿದ್ದಾರೆ ಎಂದ ಮಗ.

ಸವಿತಾಳಿಗೆ ದಿಗ್ಭ್ರಮೆ ಆಯ್ತು. ಕಣ್ಣಲ್ಲಿ ನೀರು ಸುರಿಯಿತು. ಹೊರಗಡೆ ಓಡಿ ಬಂದ ಸವಿತಾಳನ್ನು ನೋಡಿ, “ನೀವು ಯಾರು? ನಾನು ಇಲ್ಲಿಗೆ ಹೇಗೆ ಬಂದೆ? ನನ್ನ ಮಗ ಸೊಸೆ ಎಲ್ಲಿ?” ಎಂದು ಕೇಳಿದರು ಆ ವೃದ್ಧ ವ್ಯಕ್ತಿ.

“ಒಮ್ಮೊಮ್ಮೆ ಮರೆವು ಎಷ್ಟೊಂದು ಖುಷಿ ಕೊಡುತ್ತದೆ ಅಲ್ಲವೇ…..?” ಎನ್ನುತ್ತಾ ಕಣ್ಣೊರೆಸಿಕೊಂಡಳು.

“ಅಪ್ಪಾ…..ಜಿ…..” ಎನ್ನುವುದನ್ನು ಅರ್ಧಕ್ಕೆ ನಿಲ್ಲಿಸಿ, “ಕುಳಿತುಕೊಳ್ಳಿ ನಿಮ್ಮ ಮಗ ಸೊಸೆ ಬರುತ್ತಿದ್ದಾರೆ,” ಎಂದಳು.

ರೂಮಿನಿಂದ ಹೊರಬಂದ ಅರುಣ್‌ ತಾಯಿಯ ಮುಖ ನೋಡಿ ಬರುತ್ತಿದ್ದಾರೆ ಅಂತ ಕಣ್ಣಲ್ಲೇ ಹೇಳಿದ.

ಸವಿತಾಳ ಹೃದಯ ಮತ್ತೊಮ್ಮೆ ತಂದೆಯನ್ನು ಕಳೆದುಕೊಂಡು ರೋದಿಸುತ್ತಿತ್ತು. ಬಾಗಿಲು ತಟ್ಟಿದ ಶಬ್ದಕ್ಕೆ ಅರುಣ್‌ ಬಾಗಿಲು ತೆರೆಯುತ್ತಿದ್ದಂತೆ ನವದಂಪತಿಗಳ ಹಾಗೆ ಕಾಣುವ ಜೋಡಿ ಒಳಗೆ ಬಂದರು. ತಂದೆಯನ್ನು ನೋಡಿ, ಎದೆಗಪ್ಪಿಗೊಂಡು, “ಎಲ್ಲಿ ಹೋಗಿದ್ರಿ ಅಪ್ಪ ನೀವು? ಎಷ್ಟು ಗಾಬರಿಯಾಗಿತ್ತು,” ಎಂದ ಮಗ.

“ಮಾವ ಹುಷಾರಾಗಿದ್ದೀರಾ,” ಎನ್ನುತ್ತಾ ಅಕ್ಕರೆಯಿಂದ ಮಾತನಾಡಿಸಿದಳು ಆ ಹುಡುಗಿ.

“ನಿಮಗೆ ತುಂಬಾ ಧನ್ಯವಾದಗಳು. ನಮ್ಮ ತಂದೆಯನ್ನು ಮನೆಯಲ್ಲಿ ಇಟ್ಟುಕೊಂಡು ಜೋಪಾನ ಮಾಡಿದ್ದಕ್ಕೆ,” ಎಂದು ಸವಿತಾಳಿಗೆ ನಮಸ್ಕರಿಸುತ್ತಾ, “ಬನ್ನಿ ಅಪ್ಪಾ….” ಎನ್ನುತ್ತಾ ಅಪ್ಪನ ಭುಜ ಹಿಡಿದು ಅವರ ಮಗ ಕರೆದುಕೊಂಡು ಹೊರಟ.

ಸವಿತಾಳ ಭುಜನ್ನು ಮಗ ಅರುಣ್‌ ಗಟ್ಟಿಯಾಗಿ ಹಿಡಿದಿದ್ದ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ