ವಿಭಿನ್ನತೆಯ ಏಕತೆ ಎಂಬುದೇ ನಮ್ಮ ದೇಶದ ವೈಶಿಷ್ಟ್ಯ. ಇಲ್ಲಿ ವಿವಿಧ ಪ್ರಕಾರದ ಜಾತಿ, ಧರ್ಮಗಳ ಜನ ಒಂದಾಗಿ ಬೆರೆತು ಅವರವರ ನಂಬಿಕೆಯ ಪ್ರಕಾರ ಹಬ್ಬಗಳನ್ನು ಆಚರಿಸುತ್ತಾರೆ. `ಪರವಧರ್ಮ ಸಹಿಷ್ಣುತೆ’ಯೇ ಹಿಂದೂ ಧರ್ಮದ ಮೂಲೋದ್ದೇಶ. `ಸುದೈವ ಕುಟುಂಬಕಂ’ ಎಂಬ ಗೀತಾ ನಾಣ್ಣುಡಿಯೊಂದಿಗೆ ಇಡೀ ವಿಶ್ವದ ಎಲ್ಲಾ ಧರ್ಮಗಳೂ ಇಲ್ಲಿ ಮಾನ್ಯ, ಎಲ್ಲರೂ ಒಂದೇ ಎಂಬ ಭಾವ.
ಹೀಗಾಗಿ ಯಾವ ಧರ್ಮ, ಪಂಥದವರೇ ಇರಲಿ, ತಮ್ಮಲ್ಲಿನ ಹಬ್ಬಕ್ಕೆ ಇತರ ಎಲ್ಲಾ ಧರ್ಮೀಯರನ್ನೂ ಕರೆಸಿ ಆದರಿಸಿ, ಸತ್ಕರಿಸುವುದು ನಮ್ಮ ದೇಶದ ದೊಡ್ಡ ಸುಸಂಸ್ಕಾರ ಎಂದೇ ಹೇಳಬೇಕು. ಎಲ್ಲರೂ ಕೂಡಿ ಮೋಜುಮಸ್ತಿಯಿಂದ ಆಹಾರ ವಿಹಾರಗಳಲ್ಲಿ ಪಾಲ್ಗೊಂಡಾಗ ಹೊಟ್ಟೆಯ ಪಥ್ಯದ ಕಡೆ ಯಾರ ಗಮನ ಹರಿದೀತು? ಎಲ್ಲರೂ ಒಟ್ಟಾಗಿ ಒಂದೆಡೆ ತಿಂದುಂಡು, ಮಜಾ ಉಡಾಯಿಸುವುದು ಮಹಾ ಸಂಭ್ರಮವೇ ಸರಿ. ಇದರ ಅತಿ ದೊಡ್ಡ ಪ್ರಯೋಜನ ಎಂದರೆ ಸಾಮಾಜಿಕ ಸಂಘಟನೆ, ಒಗ್ಗಟ್ಟು, ಐಕ್ಯತಾ ಮನೋಭಾವದ ಹೆಚ್ಚಳ. ಇದರಿಂದ ಮಾನಸಿಕ ಸ್ವಾಸ್ಥ್ಯ ವರ್ಧಿಸಿ, ಸಾಮಾಜಿಕ ಕಳಕಳಿ ಮಹತ್ವಪೂರ್ಣ ತಿರುವು ಪಡೆಯುತ್ತದೆ.
ಹಬ್ಬಗಳು ಅಂದ ಮೇಲೆ ಕೇಳಬೇಕೇ? ಧಾರಾಳ ತುಪ್ಪ, ಬೆಣ್ಣೆ, ಸಕ್ಕರೆ, ಬೆಲ್ಲ, ಮೈದಾ, ದಾರಾಪೂರ, ಡಾಲ್ಡಾ, ಹಿಟ್ಟುಗಿಟ್ಟು ಎಲ್ಲಾ ಬೆರೆತು ಹುರಿದ, ಕರಿದ, ಮಸಾಲೆಭರಿತ ತಿಂಡಿ ತಿನಿಸುಗಳ ವೈಭೋಗ ಹೇಳತೀರದು. ದಂಡಿಯಾಗಿ ರಜೆ ಇರುವ ಹಬ್ಬಗಳ ಸಂದರ್ಭದಲ್ಲಿ ಹೀಗೆ ಧಾರಾಳ ತಿಂದುಡು, ಆರಾಮವಾಗಿ ಮಲಗಿಬಿಟ್ಟರೆ ಹೊಟ್ಟೆ ಕೆಡದೆ ಇನ್ನೇನಾದೀತು? ಇಂಥ ಸಂದರ್ಭದಲ್ಲಿ ಆರೋಗ್ಯಕರ ಪೌಷ್ಟಿಕ ಆಹಾರದ ಬದಲು ಸಿಕ್ಕಿದ್ದನ್ನು ತಿಂದು ತೇಗುತ್ತೇವೆ. ಹೀಗಾಗಿ ನಮ್ಮ ದೇಹಕ್ಕೆ ಅತ್ಯಧಿಕ ಕ್ಯಾಲೋರಿಗಳ ಸಂಗ್ರಹವಾಗುತ್ತದೆ.
ಅಧಿಕ ಕ್ಯಾಲೋರಿಯುಕ್ತ ಆಹಾರ ಸೇವನೆ ಎಂದರೆ ಅಧಿಕ ಫ್ಯಾಟ್ಸ್, ಶುಗರ್, ಅತ್ಯಧಿಕ ಕಾನ್ ಸನ್ಟ್ರೇಟೆಡ್ ಕೂಲ್ ಡ್ರಿಂಕ್ಸ್, ಅಧಿಕ ಉಪ್ಪಿನ ಅಂದ್ರೆ ಸೋಡಿಯಂ ತುಂಬಿದ ಆಹಾರಗಳಿಂದ ದೇಹ ರೋಗದ ತಯಾರಾಗುತ್ತದೆ. ಹೀಗಾಗಿ ನಮಗೆ ದೇಹ ತೂಕ ಹೆಚ್ಚುದು, ಅಜೀರ್ಣದ ಸಮಸ್ಯೆ, ಅಸಿಡಿಟಿ, ಗ್ಯಾಸ್ಟ್ರಿಕ್ ಟ್ರಬಲ್, ಮಲಬದ್ಧತೆ, ದೇಹದಲ್ಲಿ ನೀರಿನ ಕೊರತೆ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿರುತ್ತವೆ.
ಹಬ್ಬಗಳ ಗಡಿಬಿಡಿ ಮುಗಿದ ನಂತರ ದೇಹ ತೂಕ ಇಳಿಸುವ ಯೋಜನೆಗಳು ಶುರುವಾಗುತ್ತವೆ. ಈ ಟೆನ್ಶನ್ ಕಾರಣ ಹಸಿವಿನ ಅನುಭವ ಹೆಚ್ಚಿಸುವ ಹಾರ್ಮೋನ್ಸ್ ಹೆಚ್ಚು ಸ್ರವಿಸಲ್ಪಡುತ್ತದೆ. ಹೀಗಾಗಿ ಮುಂದಿನ ಹಬ್ಬಗಳಲ್ಲಿ ಇಂಥ ಸಮಸ್ಯೆ ಬಾರದಿರಲು ಈ ಸಲಹೆಗಳನ್ನು ಅನುಸರಿಸಿ :
ಬರಿ ಹೊಟ್ಟೆಯಲ್ಲಿ ಇರಬೇಡಿ
ದಿನದ ಆರಂಭ ಆರೋಗ್ಯಪೂರ್ಣ ಬ್ಯಾಲೆನ್ಸ್ಡ್ ಆಗಿರಲು ನಿಮ್ಮ ಬ್ರೇಕ್ ಫಾಸ್ಟ್ ನಲ್ಲಿ ಇಡಿಯಾದ ಧಾನ್ಯ, ಮೊಳಕೆಕಾಳು, ಲೋ ಫ್ಯಾಟ್, ಪ್ರೋಟೀನ್, ಹಸಿ ತರಕಾರಿ, ಹಣ್ಣು ಹಂಪಲು ಇತ್ಯಾದಿಗಳನ್ನು ಸೇವಿಸಿ. ಯಾರನ್ನೇ ಭೇಟಿ ಆಗಲು ಹೋದರೂ ತೀರ ಖಾಲಿ ಹೊಟ್ಟೆಯಲ್ಲಿ ಹೊರಡಬೇಡಿ. ಫೆಸ್ಟಿವ್ ಟ್ರೀಟ್ ನೆಪದಲ್ಲಿ ಕಂಡದ್ದನ್ನು ತಿಂದು ಹೊಟ್ಟೆ ಗುಡಾಣ ಆಗಿಸಬೇಡಿ.
ಭಾರೀ ವ್ಯಂಜನಗಳ ರುಚಿಗೆ ಮನಸೋತು ನಾವು 1 ತಿನ್ನುವ ಕಡೆ 2-3 ತಿಂದುಬಿಡುತ್ತೇವೆ. ಈ ಹುರಿದ ಕರಿದ ತಿಂಡಿಗಳ ಸೇವನೆಯಿಂದ ನಾವು ಸಮಯಕ್ಕೆ ಸರಿಯಾಗಿ ಊಟ ಮಾಡದೆ ಅದನ್ನು ತಪ್ಪಿಸುತ್ತೇವೆ. ಊಟ ಮಾಡಲಿಲ್ಲವಲ್ಲ ಅನ್ನುವ ನೆಪ ಮಾಡಿಕೊಂಡು, ಈ ಹಾಳುಮೂಳನ್ನೇ ಅತ್ಯಧಿಕ ತಿಂದುಬಿಡುತ್ತೇವೆ. ಅಂದರೆ ಓವರ್ ಈಟಿಂಗ್ ಆಗುತ್ತದೆ. ಖಾಲಿ ಹೊಟ್ಟೆಯ ಕಾರಣ ಸ್ಯಾರೋಟ್ಯಾನಿನ್ ಲೆವೆಲ್ ಬಿದ್ದುಹೋಗುತ್ತದೆ. ಹೀಗಾಗಿ ನಾವು ಏನನ್ನೂ ತಿನ್ನದೆ ಬಹಳ ಹೊತ್ತು ಹಾಗೇ ಇದ್ದುಬಿಟ್ಟರೆ, ಸಹಜವಾಗಿ ಸ್ಟ್ರೆಸ್ ಹೆಚ್ಚುತ್ತದೆ. ಹೀಗಾಗಿ ಏನಾದರೂ ಸಿಹಿ, ಕುರುಕಲು, ಸಮೋಸಾ, ಬಜ್ಜಿ ಇತ್ಯಾದಿ ತಿನ್ನುತ್ತಾ ಟೈಂಪಾಸ್ ಮಾಡಿಬಿಡುತ್ತೇವೆ. ಈ ರೀತಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸಾಮಗ್ರಿ ಹೊಟ್ಟೆಗೆ ಇಳಿದಿರುತ್ತದೆ.
ಈ ಓವರ್ ಈಟಿಂಗ್ ತಪ್ಪಿಸಬೇಕು. ದೇಹ ತೂಕ ನಿಯಂತ್ರಣದಲ್ಲಿಡಲು, ನಿಯಮಿತ ರೂಪದಲ್ಲಿ (1 ದೊಡ್ಡ ಮೀಲ್ + 2 ಸ್ನಾಕ್ಸ್ ಮೀಲ್) ಸೇವಿಸಬೇಕು.
ಆಹಾರ ಪ್ರಮಾಣ ನಿಯಂತ್ರಿಸಿ
ಹಬ್ಬ ಎಂದ ಮೇಲೆ ಏನನ್ನೂ ತಿನ್ನಬೇಡಿ ಎನ್ನುವುದು ಯಾವ ನ್ಯಾಯ? ಹೀಗಾಗಿ ಏನೇ ಸೇವಿಸಿದರೂ ಅದು ಬಲು ಲಿಮಿಟ್ ನಲ್ಲಿರಲಿ. ಅಂದ್ರೆ 1 ದೊಡ್ಡ ಲಡ್ಡುವಿನಲ್ಲಿ ಸ್ವಲ್ಪ ಭಾಗ, (ಇದೇ ಪೋರ್ಶನ್ ಕಂಟ್ರೋಲ್) ಚಕ್ಕುಲಿ ಉಂಡೆ ಏನೇ ಇರಲಿ, ತುಸು ಮಾತ್ರ ರುಚಿಗೆ ಸೇವಿಸಿ. ಏಕೆಂದರೆ ಇಂಥವನ್ನು `ಗುಳುಂ’ ಮಾಡುತ್ತಿದ್ದರೆ, ಹೊಟ್ಟೆ ಸಾಕು ಎನ್ನುವ ಸೂಚನೆ ಕೊಡುವುದೇ ಇಲ್ಲ! ಇನ್ನೂ ಬೇಕು ಎನ್ನುವ ಫೀಲಿಂಗ್ಸ್ ನಲ್ಲೇ ನಾವು ಇನ್ನಷ್ಟು, ಮತ್ತಷ್ಟು ಇಳಿಸುತ್ತಾ ಇರುತ್ತೇವೆ.
ಹೀಗಾಗಿ ಏನೇ ಆದರೂ ಕಡಿಮೆ ಪ್ರಮಾಣ ಮಾತ್ರ ಸೇವಿಸಬೇಕು ಎಂಬುದನ್ನು ಮರೆಯದಿರಿ. ಸ್ವಲ್ಪ ಸ್ವಲ್ಪವೇ ಸೇವಿಸುವುದರಿಂದ ನಿಮ್ಮ ದೇಹಕ್ಕೆ ನೀವು ಸಾಕಷ್ಚು ಆಹಾರ ಸೇವಿಸಿದ್ದೀರಿ ಎಂದು ಗೊತ್ತಾಗುತ್ತದೆ, ಹೀಗಾಗಿ ಓವರ್ ಈಟಿಂಗ್ ಬಾಧೆ ತಪ್ಪುತ್ತದೆ.
ಸೂಕ್ತ ಆಹಾರ ಸೇವಿಸಿ
ಇದು ಎಲ್ಲಕ್ಕಿಂತ ಮಹತ್ವಪೂರ್ಣವಾದುದು. ಸೂಕ್ತ ಆಹಾರದ ಆಯ್ಕೆ ಮಾಡಿಕೊಳ್ಳುವುದರಿಂದ ನೀವು ಹಬ್ಬದ ಹೆಚ್ಚಿನ ಸಡಗರ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು. ನೀವು ರೋಗ ತರಿಸುವ ವ್ಯಂಜನಗಳಿಂದ ದೂರವಿದ್ದು, ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.
ಅಧಿಕ ಫೈಬರ್ ಯುಕ್ತ ಆಹಾರ : ನಿಮ್ಮ ಆಹಾರದಲ್ಲಿ ಧಾರಾಳ ಫೈಬರ್ ಇರಲಿ. ಏಕೆಂದರೆ ಇಂಥ ಆಹಾರ ನಿಮಗೆ ಬೇಗ ಹೆಚ್ಚಿನ ಸಂತೃಪ್ತಿ ತಂದುಕೊಡುತ್ತದೆ. ನಿಮಗೆ ಬಹಳ ಹೊತ್ತು ಹೊಟ್ಟೆ ತುಂಬಿರುವ ಅನುಭವ ಆಗುತ್ತದೆ. ಹೀಗಾಗಿ ಓವರ್ ಈಟಿಂಗ್ ನಿಂದ ಪಾರಾಗಿ, ನಿಮ್ಮ ಆಹಾರದ ಪ್ರಮಾಣವನ್ನು ಸುಲಭವಾಗಿ ನಿಯಂತ್ರಿಸಬಹುದು.
ಇಡಿಯಾದ ದವಸ ಧಾನ್ಯಗಳ ಆಹಾರ ಹೆಚ್ಚು ಪೌಷ್ಟಿಕ ಆಗಿರುತ್ತದೆ. ಅದರಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇರುತ್ತದೆ. ಪ್ಯಾಕೇಜ್ಡ್ ಪ್ರೋಸೆಸ್ಡ್ ಫುಡ್ಸ್ ಗೆ ಹೋಲಿಸಿದಾಗ, ಇದರ ಸೇವನೆಯಿಂದ ಹೊಟ್ಟೆ ಬೇಗ ತುಂಬಿದಂತೆ ಅನಿಸುತ್ತದೆ. ಜೊತೆಗೆ ಕ್ಯಾಲೋರಿಯುಕ್ತ ಮೇನ್ ಕೋರ್ಸ್ ಮೀಲ್ ಆರಂಭಿಸುವ ಮುನ್ನ ಯಾವುದಾದರೂ ಹೆಲ್ದಿ ಡಿಶ್ ಸೇವಿಸಿ ಹಾಗೂ ಕಡಿಮೆ ಎನರ್ಜಿಯ ಆಹಾರ ಪದಾರ್ಥಗಳನ್ನಷ್ಟೇ ಸೇವಿಸಿ. ಉದಾ.: ಸಲಾಡ್, ವೆಜಿಟೆಬಲ್ ಸೂಪ್ ಇತ್ಯಾದಿ.
ತಾಜಾ ಹಸಿ ತರಕಾರಿಯಲ್ಲಿ ವಿಟಮಿನ್ಸ್, ಮಿನರಲ್ಸ್. ಫೈಬರ್, ನೀರಿನ ಪ್ರಮಾಣ ಅಧಿಕ ಇರುತ್ತದೆ. ಅಂದ್ರೆ ಇದರ ಸೇವನೆಯಿಂದ ನಿಮಗೆ ಬೇಗ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ಈ ರೀತಿ ನೀವೇ ನಿಮ್ಮ ಪ್ಲೇಟಿನಲ್ಲಿ ಆಹಾರದ ಪ್ರಮಾಣವನ್ನು ನಿಯಂತ್ರಿಸಬಹುದು.
ಪ್ರತಿ ಮೀಲ್ ನಲ್ಲೂ ಪ್ರೋಟೀನ್ ತುಂಬಿರಲಿ. ಇದು ದೇಹದ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಜೊತೆಗೆ ಲೀನ್ ಬಾಡಿ ಮಾಸ್ ಗೂ ಇದು ಪೂರಕ.
ಇತ್ತೀಚಿನ ಅಧ್ಯಯನಗಳ ಪ್ರಕಾರ, 2 ಮೀಲ್ಸ್ ನಡುವಣ ಫಿಲರ್ಸ್ ಆಗಿ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ನ್ನು ಧಾರಾಳ ಸೇವಿಸುವುದರಿಂದ ನಿಮ್ಮ ಬ್ಲಡ್ ಶುಗರ್, ಬಿ.ಪಿ, ಲೆವೆಲ್ಸ್ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಡ್ರೈ ಫ್ರೂಟ್ಸ್, ವಿವಿಧ ಬೀಜಗಳನ್ನು ಸೇವಿಸಿ, ಹೆಲ್ಡಿ ಆಹಾರ ನಿಮ್ಮದಾಗಿಸಿಕೊಳ್ಳಿ.
ಫ್ರೂಟಿ ಡೆಸರ್ಟ್ : ಊಟದ ನಂತರ ಸಿಹಿ (ಡೆಸರ್ಟ್) ಸೇವನೆ ಯಾರಿಗೆ ತಾನೇ ಬೇಡ? ಇದು ಫೆಸ್ಟಿವ್ ಮೀಲ್ ಪರಿಪೂರ್ಣ ಎನ್ನುವ ಸಂಕೇತ. ಆದರೆ ಮೈದಾ ಸಕ್ಕರೆ ಬೆರೆತ ಸಿಹಿ ಒಳ್ಳೆಯದಲ್ಲ. ಹೀಗಾಗಿ ಇಡೀ ಧಾನ್ಯದ ಆಹಾರ ಅಂದ್ರೆ ಗೋಧಿಹಿಟ್ಟು, ಅಕ್ಕಿ, ಬೇಳೆಕಾಳು, ಬೆಲ್ಲ, ಕೊಬ್ಬರಿ, ತೆಂಗು ಇತ್ಯಾದಿ ಸೇವಿಸಿ. ಅದೇ ತರಹ ಫ್ರೂಟ್ ಬೇಸ್ಡ್ ಡೆಸರ್ಟ್ ಅಂದ್ರೆ ಫ್ರೂಟ್ ಯೋಗರ್ಟ್, ಶರಬತ್ತು ಹೊಟ್ಟೆಗೆ ವೈಟ್ ಎನಿಸುತ್ತದೆ. ಜಾಮೂನು, ಜಿಲೇಬಿ, ರಸಗುಲ್ಲ ಬದಲು ಇವನ್ನು ಸೇವಿಸಿ.
ಆದಷ್ಟೂ ಬೆಳ್ಳಿ ರೇಕಿನ (ಸಿಲ್ವರ್ ಫಾಯಿಲ್) ಸಿಹಿ ತಿನಿಸುಗಳಿಂದ ದೂರವಿರಿ. ಇದರಲ್ಲಿ ಅಲ್ಯೂಮಿನಿಯಂ ಮಿಶ್ರಣ ಇದ್ದೇ ಇರುತ್ತದೆ. ಇದು ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ. ಇದೇ ತರಹ ಕೃತಕ ಬಣ್ಣಗಳ ಮಿಠಾಯಿಗಳಿಂದಲೂ ದೂರವಿರಿ. ಇದರ ಬದಲು ವಿವಿಧ ಹಣ್ಣುಗಳ, ಸ್ವಸ್ಥ ಬಣ್ಣಗಳ ಮಿಠಾಯಿ (ಅದೂ ಅಲ್ಪ ಪ್ರಮಾಣದಲ್ಲಿ) ಸೇವಿಸಿ.
ಇಂಥ ತಪ್ಪು ಮಾಡಬೇಡಿ : ನಾವೆಲ್ಲರೂ ಮಾಡುವ ಒಂದು ಕಾಮನ್ ತಪ್ಪು ಎಂದರೆ, ವಡೆ ಪೂರಿ ಇತ್ಯಾದಿ ಕರಿದ ನಂತರ ಆ ಎಣ್ಣೆಯನ್ನು ಹಾಳು ಮಾಡಬಾರದೆಂದು ಮತ್ತೆ ಮತ್ತೆ ಕರಿಯಲು ಬಳಸುತ್ತೇವೆ. ಈ ರೀತಿ ಮಾಡುವುದರಿಂದ ಇದರಲ್ಲಿ ಫ್ರೀ ರಾಡಿಕಲ್ಸ್ ಹೆಚ್ಚುತ್ತದೆ. ಇದು ರಕ್ತ ಸಂಚಾರಕ್ಕೆ ಅಡ್ಡಿ ಮಾಡಿ, ಬಿ.ಪಿ ಏರುಪೇರಾಗಿಸುತ್ತದೆ. ಅಸಿಡಿಟಿ ಹೆಚ್ಚಲು ಮೂಲವಾಗುತ್ತದೆ.
ಆದಷ್ಟು ಇಂಥ ಡೀಪ್ ಫ್ರೈ ವ್ಯಂಜನಗಳ ತಂಟೆಗೇ ಹೋಗಬೇಡಿ. ಇದರ ಬದಲು ಹಬೆಯಲ್ಲಿ ಬೇಯಿಸುವ, ಗ್ರಿಲ್ಲಿಂಗ್, ರೋಸ್ಟಿಂಗ್ ಇತ್ಯಾದಿ ಅನುಸರಿಸಿ.
ದೇಹದಲ್ಲಿ ನೀರಿನ ಪ್ರಮಾಣ
ಕ್ಯಾಲೋರಿ ನಿಯಂತ್ರಣಕ್ಕೆ ಒಂದು ಸರಳ ಉಪಾಯ ಎಂದರೆ ಹೆಚ್ಚು ಕ್ಯಾಲೋರಿಯುಕ್ತ ಪೇಯಗಳನ್ನು ಸೇವಿಸದಿರಿ. ಅಂದ್ರೆ ಸಾಫ್ಟ್ ಡ್ರಿಂಕ್ಸ್, ಏರೋಟೆಡ್ ಕಾರ್ಬೊನೇಟೆಡ್ ಡ್ರಿಂಕ್ಸ್ ಬೇಡ. ಆಗ ದೇಹಕ್ಕೆ ಅನಗತ್ಯ ಕ್ಯಾಲೋರಿ ಸೇರದು. ಇಂಥ ಪಾನೀಯ, ಆಲ್ಕೋಹಾಲ್ ಬದಲು ಎಳನೀರು, ತಿಳಿನೀರು, ನೀರುಮಜ್ಜಿಗೆ, ನಿಂಬೆಪಾನಕ, ಲಸ್ಸಿ ಇತ್ಯಾದಿ ಸೇವಿಸಿ. ಇದು ದೇಹವನ್ನು ನೈಸರ್ಗಿಕವಾಗಿ ಹೈಡ್ರೇಟೆಡ್ ಆಗಿರಿಸುತ್ತದೆ. ಇದರಿಂದ ಹಸಿವಿನ ನಿಯಂತ್ರಣ ಸುಲಭ.
ಆಟೋಟ, ವ್ಯಾಯಾಮಗಳಿಂದ ನಿಮ್ಮ ದೇಹವನ್ನು ಸದಾ ಫಿಟ್‌ಫೈನ್ ಆಗಿರಿಸಿಕೊಳ್ಳಿ. ಇದರಿಂದ ಗ್ಯಾಸ್ ಟ್ರಬಲ್, ಮಲಬದ್ಧತೆ ದೂರವಾಗುತ್ತವೆ. ಹೀಗಾಗಿ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಲವಲವಿಕೆ ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ.
ದೈಹಿಕ ಚಟುವಟಿಕೆ
ದೇಹ ತೂಕ ನಿಯಂತ್ರಿಸಲು ಡಯೆಟ್ ಕಂಟ್ರೋಲ್ ಜೊತೆಗೆ, ದೈಹಿಕ ವ್ಯಾಯಾಮ ಅತ್ಯಗತ್ಯ. ಇದರಿಂದ ಟೆನ್ಶನ್ ಎಷ್ಟೋ ತಗ್ಗುತ್ತದೆ. ಇದರ ಪರಿಣಾಮ ನಿಮ್ಮ ಆಹಾರದ ಅಭ್ಯಾಸದ ಮೇಲೂ ಆಗುತ್ತದೆ. ಅದು ನಿಮ್ಮನ್ನು ಹೆಚ್ಚು ಎನೆರ್ಜೆಟಿಕ್ ಆಗಿಸುತ್ತದೆ.
ಜೊತೆಗೆ ನಿಮ್ಮ ಹೆಚ್ಚಿನ ದೈಹಿಕ ಚಟುವಟಿಕೆಗಳು ನಿಮ್ಮ ಮಸಲ್ಸ್ ಎನಬಾಲಿಸಮ್ ಗೂ ಮಹತ್ವಪೂರ್ಣ ಎನಿಸುತ್ತದೆ. ಇದರಿಂದ ಮಸಲ್ಸ್ ಲಾಸ್ ತಪ್ಪುತ್ತದೆ. ಉತ್ತಮ ಆರೋಗ್ಯಕ್ಕಾಗಿ ವಾರದಲ್ಲಿ 5-6 ದಿನ 30-45 ನಿಮಿಷಗಳ ಕಾಲ ದೈಹಿಕ ವ್ಯಾಯಾಮ, ಯೋಗಾಭ್ಯಾಸ, ಜಾಗಿಂಗ್, ವಾಕಿಂಗ್ ಗಳಲ್ಲಿ ತೊಡಗಿಕೊಳ್ಳಿ.
ನಮ್ಮೆಲ್ಲರಿಗೂ ಹಬ್ಬಗಳಲ್ಲಿ ಉಲ್ಲಾಸ, ಉತ್ಸಾಹದಿಂದ ಪಾಲ್ಗೊಳ್ಳಬೇಕೆಂಬ ಮನಸ್ಸಿರುತ್ತದೆ. ಇದರಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುವುದರಿಂದ, ಎಚ್ಚರಿಕೆಯಿಂದ ನಿಮ್ಮ ಆಹಾರದ ಆಯ್ಕೆಯತ್ತ ಗಮನ ಕೊಡಿ, ಸಂತಸದಿಂದ ಹಬ್ಬಗಳಲ್ಲಿ ಪಾಲ್ಗೊಂಡು, ಆನಂದಿಸಿ.
– ಡಾ. ದೀಪಾ