ಆಕಸ್ಮಿಕ ಹೃದಯಾಘಾತಕ್ಕೆ ತುತ್ತಾಗಿ ಮರಣ ಹೊಂದಿದ ಪತಿ. ಪ್ರೀತಿ ತೊರೆದು ಹೋಗಿದೆ ಹಿಮಳ ಹೃದಯ  ಖಾಲಿಯಾಗಿದೆ. ಭವಿಷ್ಯದ ಕೊಂಡಿ ಕಳಚಿತು ಬದುಕಿನ ಸೇತುವೆ ಮುರಿದಿದೆ ನೊಂದು ಬೆಂದ ಹಿಮ.  ಪತಿ ಇಲ್ಲದ ಬದುಕು ಊಹಿಸಲು ಅಸಾಧ್ಯ ಎನ್ನುವಷ್ಟು ಬದುಕಿನ ಮೇಲೆ ದ್ವೇಷ ಪರಿಸ್ಥಿತಿಗೆ ಹೊಂದುಕೊಳ್ಳದೆ ಬೇರೆ ವಿಧಿಯಿಲ್ಲ. ಕಳೆದುಕೊಂಡಿದ್ದು ಮರಳಿ ಪಡೆಯಲು ಅಸಾಧ್ಯ.  ಆದರೆ ಇರುವ ಮಗನಿಗೆ ಮತ್ತು ತನ್ನ ಬದುಕಿಗಾಗಿ ಬದುಕುವ ಛಲ.   ದೇವರು ಕೊಟ್ಟಿದ್ದನ್ನು ಸ್ವೀಕರಿಸಿ ಮುನ್ನಡೆಯಲೇಬೇಕು  ಎನ್ನುವ ಭಾವ ಹಿಮಳ  ಹೃದಯದಲ್ಲಿ ಮನೆ ಮಾಡಿತು.

ಹನ್ನೊಂದು ದಿನದ ಕಾರ್ಯವು ಆಯ್ತು.

ದೃತಿಗೆಟ್ಟ ಬದುಕಿನ ದಾರಿ ಒಬ್ಬನೇ ಮಗ ಅವನ ಭವಿಷ್ಯ …? ನನ್ನ ಮುಂದಿನ ಸ್ಥಿತಿ ….? ಕಾಡುವ ಪ್ರಶ್ನೆಗಳಿಗೆ ವರ್ತಮಾನವಂತೂ ಉತ್ತರ ಕೊಡುವಂತೆ ಕಾಣದು ಭವಿಷ್ಯವೇ ಉತ್ತರ ಕೊಡುವುದು ಎನ್ನುವ ಸಾಂತ್ವನ.

ಮನೆ – ಆಸ್ತಿಯೆಲ್ಲಾ ನಮ್ಮದು ಎಂದು ಅತ್ತೆ -ಮೈದುನನ ಕಿರುಕುಳ  ಶುರುವಾಗಿದೆ? ಎಷ್ಟು ಎಂದರೆ, ಒಂದು ತುತ್ತು ಅನ್ನವನ್ನು ಕೊಡದೆ ಹಿಂಸೆ ನೀಡುತ್ತಿದ್ದಾರೆ.   ನಾನು ಅಸಹಾಯಕಳಾದೆ.  ಅವರು ಗಳಿಸಿದ ಸಂಪಾದನೆ ಎಲ್ಲ ಅತ್ತೆ ಮೈದುನ  ಮೋಸ ಮಾಡಿ ಕಿತ್ತುಕೊಂಡರು. ಮನೆಯಿಂದ ಹಿಮಳಿಗೂ ಅವಳ ಮಗನಿಗೆ ಹೊರದಬ್ಬಿದರು.

widow 1

ಹಿಮ ಳ ಅತ್ತೆ ಮನೆಯವರು ಹಣವಂತರು ಸೊಸೆ ಮೊಮ್ಮಗನಿಗೆ ತುತ್ತು ಅನ್ನ ಹಾಕುವಷ್ಟು  ದೊಡ್ಡ ಮನಸ್ಸು ಅವರಿಗೆ ಇಲ್ಲ ಪಾಪ ಪ್ರಜ್ಞೆಯಂತೂ ಕಿಂಚಿತ್ತು ಇಲ್ಲ.  ಹಿಮಳಿಗೆ ಅನ್ನಿಸ್ತಿದೆ ಕ್ರೂರ ಜಗತ್ತು ನನ್ನವರು ಎನ್ನುವುದೇ ಭ್ರಮೆ. ಮೈಮೇಲೆ ಇದ್ದ ಚಿನ್ನವೆಲ್ಲ ಕಿತ್ತುಕೊಂಡರು. ಕತ್ತೆಯಂತೆ ದುಡಿದೆ ಈ ಮನೆಗೋಸ್ಕರ ಈ ಮನೆಯೇ ನನ್ನ ಸರ್ವಸ್ವ ಎಂದುಕೊಂಡೆ ಆದರೆ  ಅವರು ಹೋದ ಮೇಲೆ ಇವರುಗಳ ಕರಾಳ ಮುಖ ತೆರೆದಿದ್ದು. ಹೃದಯದಲ್ಲಿ ದ್ವೇಷದ ಬೆಂಕಿ ಕಿಡಿ ಕಾರುತ್ತಿದೆ ಆದರೆ ದ್ವೇಷಿಸುವ ಮನಸ್ಥಿತಿ ಅವಳಲಿಲ್ಲ  “ತೊರೆದಳು ಹೃದಯದಿಂದ ಅವರುಗಳಿಗೆ, ಆಸ್ತಿಯೇ ದೊಡ್ಡದಾ….? ಮನೆ ಹಾಗೂ ವಂಶವನ್ನು ಬೆಳಗಲು ಬಂದ ಸೊಸೆಗೆ ಇಷ್ಟೇನಾ ಬೆಲೆ ಮಗ ಸುತ್ತು ಹೋದರೆ ಸೊಸೆಯ ಪಾಡು ಇದೇನಾ…? ಪ್ರಶ್ನೆಗಳಷ್ಟೇ ಉತ್ತರ ಸಿಗದು.

ಅವರ ಮುಂದೆ ಬದುಕುವ ಸ್ವಾಭಿಮಾನ ಮತ್ತು ಛಲ ದ್ವಿಮುಖವಾಯಿತು ಹಿಮಳಿಗೆ. ದಾರಿಯು ಕಾಣದು ಅವಳಿಗೆ ಎಲ್ಲೂ ಹೋಗಲು, ತವರು ಮನೆಗೆ ಹೋದರೆ ಅವಮಾನವೇ ಕಟ್ಟಿಟ್ಟ ಬುತ್ತಿ ಅದು ತಿಳಿದು ಹೋದರೆ “ಹೆಣ್ಣಿನ ಬಾಳು ನಾಯಿ ಪಾಡು” ಇಲ್ಲ ಹೋಗಬಾರದು ಎಂದು ಗಟ್ಟಿಯಾಗಿ ನಿರ್ಧಾರ ಮಾಡಿದಳು.  ಮಗನ ಕೈಯನ್ನು ಬಿಗಿ ಮುಷ್ಟಿಯಲ್ಲಿ ಹಿಡಿದು ಸ್ವಾಭಿಮಾನವಾಗಿ ಬದುಕುತ್ತೇನೆ. ಆದರೂ, ಆಂತಕ ಹಿಮಳಿಗೆ  ಇಷ್ಟು ವರ್ಷ ಕೆಲಸ ಮಾಡಿಯೇ ಇಲ್ಲ ಹೊರಗಡೆ ಪ್ರಪಂಚದಲ್ಲಿ ಹೇಗೋ ಏನೋ ಎನ್ನುವ ಭಯ ಅತಿಯಾಗಿ ಆವರಿಸಿದೆ.  ಆತ್ಮೀಯ ಗೆಳತಿ ಸಹನಾ ಳ ಸಹಾಯ ಬೇಡುವುದು ಒಂದೇ ದಾರಿ ಎಂದರಿತ ಹಿಮ ಅವಳ ಮನೆಯ ಕಡೆ ಹೆಜ್ಜೆ ಇಟ್ಟಳು. ಗೆಳತಿಯ ಸಹಾಯದಿಂದ ಒಂದು ಮನೆಯಲ್ಲಿ ಅಡುಗೆ ಮಾಡುವ ಕೆಲಸ ಸಿಕ್ಕಿತು  ಜೊತೆಗೆ ಅಲ್ಲೇ ಇರಲು ಚಿಕ್ಕಕೋಣೆಯೊಂದನ್ನು ಕೊಟ್ಟಿದ್ದು ಹಿಮಳಿಗೆ  ನೂರು ಆನೆ ಬಲ ಬಂದಂತೆ ಆಯ್ತು. ಮಗನಿಗೆ ಸರ್ಕಾರಿ ಶಾಲೆಗೆ ಸೇರಿಸಿದಳು. ಸಂಜೆ ಹೂ ಕಟ್ಟುತ್ತಾಳೆ, ಹೊಟ್ಟೆ ಪಾಡು ಹೇಗೋ ನಡೆಯುತ್ತಿದೆ ಸರಾಗವಾಗಿ. ಆದರೆ ಕಾಡುವ ದ್ವೇಷದ ಜ್ವಾಲೆ ಇನ್ನು ತಂಪಾಗಿಲ್ಲ ಹಿಮಳಿಗೆ “ನನ್ನ ಮನೆ ಎಂದು ನಂಬಿ ಹೋಗಿದ್ದಕ್ಕೆ ಅತ್ತೆ ಮನೆಯವರು ಕೊಟ್ಟ ಬಹುಮಾನ ಮರೆಯಲಾಗದ್ದು!

ಕಾನೂನಿನ ಪ್ರಕರ ಹೋರಾಡಬೇಕು ಅಂದುಕೊಂಡ ಹಿಮಳಿಗೆ ಆರ್ಥಿಕವಾಗಿ ದುರ್ಬಲ ಸ್ಥಿತಿ. ಬಲವಂತದಿಂದ ಯಾವುದನ್ನು ಪಡೆಯಲು ಇಷ್ಟವಿಲ್ಲದ ಅವಳ  ಸ್ವಾಭಿಮಾನ.

ಕಷ್ಟಪಟ್ಟು ಬದುಕುವುದನ್ನು ಅವಳಿಗೆ ಸಮಾಜ ಕಲಿಸಿತು. ನೆಮ್ಮದಿಯಿದೆ ಬದುಕಲು ಅತಿಯಾದ ವ್ಯಾಮೋಹ ಯಾಕೆ ಇರುವಷ್ಟರಲ್ಲೇ  ಸಾಕು ಅನ್ನುವ ಹಿಮಳ ಹೃದಯ ಶ್ರೀಮಂತಿಕೆ ದೊಡ್ಡದೇ

ವಾಣಿ… ಮೈಸೂರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ