ತುಂಬಿದ ಮನೆಯ ಒಡತಿಯಾದ ಭಾವನಾ ತನ್ನ ಹಳೆಯ ಪ್ರೇಮಿ ಹರಿಯನ್ನು ಮರೆಯಲಾಗದೆ, ಅವನು ವಿವಾಹಿತನಾಗಿದ್ದರೂ ಮತ್ತೆ ತನ್ನ ಪ್ರೇಮ ಪ್ರಸಂಗ ಮುಂದುವರಿಸಿದಳು. ಈ ಅತಾರ್ಕಿಕ ಪ್ರಸಂಗಕ್ಕೆ ಭಾವನಾಳ ಆಪ್ತ ಗೆಳತಿಯಾದ ಅಶ್ವಿನಿ ಒತ್ತಾಸೆ ನೀಡಲಿಲ್ಲ. ಹರಿಯ ಪತ್ನಿ ವಾಣಿಯ ನೊಂದ ಮನದ ಮಾತುಗಳು ಅಶ್ವಿನಿಯ ಮೇಲೆ ಪ್ರಭಾವ ಬೀರಿದ್ದು ಹೇಗೆ? ಮುಂದೆ ಭಾವನಾ ಹರಿಯ ಸಂಬಂಧ ಏನಾಯಿತು…..?
ಮಧ್ಯಾಹ್ನದ ಕಿರು ನಿದ್ರೆ ಮುಗಿಸಿದ ಅಶ್ವಿನಿ ಹಾಯಾಗಿ ಕಾಫಿಯನ್ನು ಆಸ್ವಾದಿಸುತ್ತಾ ಮೊಬೈಲ್ ಕೈಗೆತ್ತಿಕೊಂಡಳು. ಅನ್ ನೋನ್ ನಂಬರ್ ನಿಂದ ಮೂರು ಮಿಸ್ಡ್ ಕಾಲ್ ಗಳು…. ಯಾರಿದು….? ಎಂದುಕೊಳ್ಳುತ್ತಾ ಟ್ರೂ ಕಾಲರ್ ನಲ್ಲಿ ಚೆಕ್ ಮಾಡಿದಾಗ ಯಾವ ಮಾಹಿತಿಯೂ ಫೆಚ್ ಆಗಲಿಲ್ಲ. ಕುತೂಹಲಕ್ಕೆ ತೆರೆ ಎಳೆಯುವಂತೆ ಮತ್ತೆ ಫೋನ್ ರಿಂಗಾಯಿತು.
“ಹಲೋ…. ಅಶ್ವಿನಿಯವರಾ…..?” ಯಾವುದೋ ಅಪರಿಚಿತ ಮಹಿಳೆಯ ಧ್ವನಿ.
“ಯಾರು….?” ಎಂದಳು ಕುತೂಹಲದಿಂದ.
“ಮೇಡಂ, ನಾನು ಹರಿಪ್ರಸಾದ್ ರವರ ಮಿಸೆಸ್ ವಾಣಿ ಪ್ರಸಾದ್. ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕಿತ್ತು. ಮೀಟ್ ಮಾಡೋಣ ಅಂದ್ರೆ ಸ್ವಲ್ಪ ತೊಂದರೆ ಇದೆ…. ನೀವು ಫ್ರೀ ಇದೀರಾ….?” ಅವಳ ಧ್ವನಿಯಲ್ಲಿದ್ದ ಆತಂಕವನ್ನು ಸುಲಭವಾಗಿ ಗುರುತಿಸಿದ ಅಶ್ವಿನಿ, “ಹೇಳಿ ವಾಣಿ….. ಹೇಗಿದೀರಾ….? ನಿಮ್ಮ ಫ್ಯಾಮಿಲಿ ಫೋಟೋವನ್ನು ಎಫ್ ಬಿನಲ್ಲಿ ನೋಡಿದೀನಿ. ವೆರಿ ಬ್ಯೂಟಿಫುಲ್ ಫ್ಯಾಮಿಲಿ…… ನಿಮ್ಮ ಪರಿಚಯ ಆದದ್ದು ತುಂಬಾ ಸಂತೋಷ. ಹೇಳಿ….. ಏನು ವಿಷಯ…?” ಕೇಳಿದಳು.
ಅಶ್ವಿನಿಯ ಮಾತಿನಿಂದ ಸಮಾಧಾನಗೊಂಡ ವಾಣಿ, “ನಿಮ್ಮ ಹತ್ರ ಒಂದು ಮುಖ್ಯವಾದ ವಿಷಯ ಹೇಳಬೇಕು….. ಹೇಗೆ ಶುರು ಮಾಡೋದು ತಿಳೀತಿಲ್ಲ….. ತುಂಬಾ ಪರ್ಸನ್, ನಮ್ಮಿಬ್ಬರ ಮಧ್ಯೆಯೇ ಇರಲಿ…..” ಎಂದಳು ಅನುಮಾನಿಸುತ್ತಾ.
“ಓ.ಕೆ. ಹೆಸಿಟೇಟ್ ಮಾಡ್ಕೋಬೇಡಿ…. ಮೂರನೆಯವರಿಗೆ ಈ ವಿಷಯ ರೀಚ್ ಆಗಲ್ಲ. ಬಿಲೀವ್ ಮೀ….. ಧೈರ್ಯವಾಗಿ ಹೇಳಿ….” ಎಂದಳು ಅಶ್ವಿನಿ.
“ನೋಡಿ ಅಶ್ವಿನಿ, ಅದ್ಯಾರೋ ಭಾವನಾ ಅಂತ ನಿಮ್ಮ ಕ್ಲೋಸ್ ಫ್ರೆಂಡ್ ಅಂತೆ…. ಅವ್ರಿಗೂ ಹರಿಗೂ ಸ್ಕೂಲ್ ಡೇಸ್ ನಿಂದ ಏನೋ ಆಕರ್ಷಣೆ ಇತ್ತು ಅಂತ ಕೇಳಿದ್ದೆ….. ಲಾಸ್ಟ್ ಮಂತ್ ನೀವೆಲ್ಲಾ ಓಲ್ಡ್ ಸ್ಟೂಡೆಂಟ್ಸ್ ಮೀಟ್ ಅಂತ ರೆಸಾರ್ಟ್ ನಲ್ಲಿ ಮೀಟ್ ಆದಾಗಿನಿಂದ ಇವರು ತುಂಬಾ ಚೇಂಜ್ ಆಗಿದ್ದಾರೆ…..” ಬಿಕ್ಕಳಿಕೆಯ ಸದ್ದು.
“ಓಹ್…..! ಕೂಲ್ ವಾಣಿ…. ಕೂಲ್….. ಹೇಳಿ…..” ಸಂತೈಸಿದಳು.
“….. ಯಾವಾಗಲೂ ಫೋನ್ ನಲ್ಲೇ ಇರ್ತಾರೆ. ಮಕ್ಕಳ ಬಗ್ಗೆ, ನನ್ನ ಬಗ್ಗೆ ಇಂಟ್ರೆಸ್ಟ್ ಕಳ್ಕೊಂಡಿದ್ದಾರೆ. ಈಗಾಗಲೇ ಎರಡು ಮೂರು ಬಾರಿ ಎಲ್ಲೆಲ್ಲಿಯೋ ಮೀಟ್ ಆಗಿ ಬಂದಿದ್ದಾರೆ. ಏನ್ ಕೇಳಿದ್ರೂ ರೇಗಾಡ್ತಾರೆ. ಹೀಗಾದರೆ ಮುಂದೆ ನಮ್ಮ ಮಕ್ಕಳ ಭವಿಷ್ಯ
ವೇನು….? ನೀವು ಆ ಭಾವನಾಗೆ ತುಂಬಾ ಕ್ಲೋಸ್ ಅಂತ ಗೊತ್ತಾಯ್ತು….. ಅವ್ರಿಗೆ ಸ್ವಲ್ಪ ಬುದ್ಧಿ ಹೇಳಿ ನನ್ನ ಸಂಸಾರ ಉಳಿಸ್ಕೊಡಿ….” ವಾಣಿ ಗದ್ಗದಿತಳಾದಳು.
ಅವಳ ದನಿಯಲ್ಲಡಗಿದ್ದ ದುಗುಡ ಅವಳ ಆಳವಾದ ನೋವಿಗೆ ಸಾಕ್ಷ್ಯ ನೀಡುವಂತಿತ್ತು. ಆ ಗಾಢ ವಿಷಾದ ಮನಸ್ಸಿಗೆ ನಾಟುವಂತಿತ್ತು.
`ಛೇ! ಭಾವನಾ ನಿಜಕ್ಕೂ ಇಷ್ಟು ಅನ್ ಸೆನ್ಸಿಬಲ್ ಆಗಿ ಬಿಹೇವ್ ಮಾಡಬಹುದೆಂದು ಎಣಿಸಿರಲಿಲ್ಲ. ಈ ಪಾಪ ಕಾರ್ಯದಲ್ಲಿ ನನ್ನದೂ ಪಾಲಿದೆಯಾ….? ಅವಳನ್ನು ಗ್ರೂಪ್ ಗೆ ಜಾಯಿನ್ ಮಾಡಿದ್ದು ದೊಡ್ಡ ತಪ್ಪಾಯಿತು. ಈ ಬೆಳವಣಿಗೆಗೆ ನಾನೇ ಸೇತುವೆಯಾದೆನೇ….?’ ಅಶ್ವಿನಿಯ ಮನ ತಲ್ಲಣಿಸಿತು.
“ಹಲೋ… ಹಲೋ….. ಅಶ್ವಿನಿ ಕೇಳಿಸ್ತಿದೀಯಾ….” ಅವಳ ಮೌನವನ್ನರಿತು ವಾಣಿ ಆತಂಕಗೊಂಡಳು.
“ಹ್ಞಾಂ….! ಕೇಳಿಸ್ತಿದೆ ವಾಣಿ, ನೀವು ನೊಂದ್ಕೋಬೇಡಿ. ನನಗೆ ಈ ವಿಷಯ ತಿಳಿದಿರಲಿಲ್ಲ ನಾನು ಅವಳ ಜೊತೆ ಮಾತಾಡ್ತೀನಿ. ನೀವು ನೆಮ್ಮದಿಯಾಗಿರಿ. ಎಲ್ಲಾ ಸರಿ ಹೋಗುತ್ತೆ……” ಎಂದು ಸಮಾಧಾನಿಸಿ ಫೋನ್ ಇಟ್ಟಳು ಅಶ್ವಿನಿ.
ಇದೆಲ್ಲಾ ಪ್ರಾರಂಭವಾದದ್ದು ಒಂದೆರಡು ತಿಂಗಳ ಕೆಳಗೆ. ಅಂದು ಎಫ್.ಬಿನಲ್ಲಿ ಏನೋ ಸರ್ಚ್ ಮಾಡುವಾಗ ಕಂಡ ಒಂದು ಫೋಟೋ ಅಶ್ವಿನಿಯ ಗಮನ ಸೆಳೆಯಿತು. ಎಲ್ಲೋ ನೋಡಿದ ನೆನಪು. ಹೆಸರು ಭಾವನಾ ಮಹದೇವ್ ಎಂದಿತ್ತು. ವಿವರಗಳಿಗಾಗಿ ಕ್ಲಿಕ್ ಮಾಡಿದಾಗ ಓದಿದ ಶಾಲೆ ಶಾರದಾ ವಿಲಾಸ, ಬೆಂಗಳೂರು. `ಓಹ್…..! ನಮ್ಮ ಭಾವೀ….’ ಎಂದುಕೊಳ್ಳುತ್ತಾ ಫೋನ್ ನಂಬರ್ ಗಾಗಿ ತಡಕಾಡಿದಳು. ಹೆಚ್ಚಿನ ಪರ್ಸನಲ್ ಡೀಟೈಲ್ಸ್ ಇರಲಿಲ್ಲ.
ಮೆಸ್ಸೆಂಜರ್ ನಲ್ಲಿ `ಹಾಯ್ ಭಾವೀ….. ದಿಸ್ ಈಸ್ ಅಶ್ವಿನಿ…. ಡು ಯೂ ರಿಮೆಂಬರ್ ಮೀ…..’ ಎಂದು ಒಂದು ಮೆಸೇಜ್‌ಹರಿಯಬಿಟ್ಟಳು.
ಭಾವನಾ ಆನ್ ಲೈನ್ ನಲ್ಲಿ ಇರಲಿಲ್ಲ. ಹಾಗೆಯೇ ಅವಳ ಸುಂದರ ಭಾವಚಿತ್ರಗಳನ್ನು ನೋಡುತ್ತಾ ಹೋದಂತೆ ನೆನಪಿನ ಭಾವಕೋಶವನ್ನು ಮೃದುವಾಗಿ ಮೀಟಿದಂತಾಯಿತು. ಶಾಲಾ ದಿನಗಳಲ್ಲಿ ತಾನೂ ಭಾವನಾ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದುದು…. ಪ್ರಕೃತಿ ಸಹಜ ಹದಿಹರೆಯದ ಬಯಕೆಗಳು ಸದ್ದಿಲ್ಲದೆ, ಸಕ್ರಿಯವಾದಾಗ ಕಾಣುತ್ತಿದ್ದ ಯೌವನ ಸಹಜ ಕನಸುಗಳು….. ಕನವರಿಕೆಗಳು… ಹೋಮ್ ವರ್ಕ್ ಮಾಡದಿದ್ದಾಗ…. ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ಶಿಕ್ಷೆಗೊಳಪಟ್ಟಾಗ ಅತ್ತು ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳುತ್ತಿದ್ದುದು. ಅಂದಿನ ಒತ್ತಡದ, ಆತಂಕದ ಆ ದಿನಗಳನ್ನು ನೆನೆದರೆ ಇಂದು ಅವು ಎಂಥ ಮಧುರವಾದ ಮೋಜಿನ ದಿನಗಳೆನಿಸುವುದು. ಹುಡುಗರನ್ನು ಮಾತನಾಡಿಸುವುದೇ ಅಪರಾಧ ಎಂದು ನಂಬಿದ್ದ ದಿನಗಳವು! ಇಂದಿನ ಮಕ್ಕಳು ಲಿಂಗಬೇಧವಿಲ್ಲದೆ ಸ್ನೇಹದಿಂದಿರುವುದನ್ನು ಕಂಡಾಗ ಸಂತೋಷವಾಗುವುದು.
“ಹಾಯ್ ಅಶು…. ಹೌ ಆರ್‌ಯು….? ಹೌ ಕ್ಯಾನ್ ಐ ಫರ್ಗೆಟ್ ಯು ಡಿಯರ್…..?” ಟಣ್ಣನೆ ಮೆಸ್ಸೆಂಜರ್ ನಲ್ಲಿ ಸಂದೇಶ ಬಂದಾಗ ಹಳೆಯ ಸುಮಧುರ ನೆನಪುಗಳ ಸವಿಯಿಂದ ಅಶ್ವಿನಿಯ ತುಟಿಯಂಚಿನಲ್ಲಿ ತೆಳುವಾದ ಮಂದಹಾಸ ಮೂಡಿತು.
“ನಿನ್ನ ಫ್ಯಾಮಿಲಿಯಂತೂ ಆಸಮ್ ಅಶು…. ಎಷ್ಟು ವರ್ಷ ಆಯ್ತೇ ನಿನ್ನ ನೋಡ್ದೇ….. ಹೇಗಿರುವೆ….?’ ಭಾವನಾಳ ಸಂದೇಶದಲ್ಲಿ ಅದೇ ಆತ್ಮೀಯ ಭಾವ.
“ಭಾವೀ…. ನಮ್ಮ ಎಸ್.ವಿ.ಎಸ್ ದೇ ಒಂದು ಗ್ರೂಪ್ ಇದೆ. ನೈಂಟಿ ಫೈವ್ ಪಾಸ್ಡ್ ಔಟ್ ಬ್ಯಾಚ್…. ನಿನ್ನನ್ನೂ ಆ್ಯಡ್ ಮಾಡ್ತೀನಿ ಇರು…. ಎಲ್ಲಾ ಅಲ್ಲೇ ಚಾಟ್ ಮಾಡೋಣ…..” ಅಶ್ವಿನಿ ಭಾವನಾಳ ನಂಬರ್ ನ್ನು ತಮ್ಮ ಬಾಲ್ಯದ ಸಹಪಾಠಿಗಳ ಗ್ರೂಪ್ ಗೆ ಸೇರಿಸಿದಳು.
“ಎಸ್.ವಿ.ಎಸ್ ನೈಂಟಿ ಫೈವ್…..” 99 ಜನರ ಬೃಹತ್ ವಾಟ್ಸ್ ಆ್ಯಪ್ ಗ್ರೂಪ್. ಮೂರು ಸೆಕ್ಷನ್ ನಲ್ಲಿದ್ದ ನೂರಾ ಇಪ್ಪತೈದು ವಿದ್ಯಾರ್ಥಿಗಳಲ್ಲಿ 90 ಜನರನ್ನು ಹುಡುಕಿ ಕಲೆಹಾಕುವಲ್ಲಿ ಅಡ್ಮಿನ್ ಗಳು ಯಶಸ್ವಿಯಾಗಿದ್ದರು. ಕಳೆದ ತಿಂಗಳಷ್ಟೇ ಅಶ್ವಿನಿಯೂ ಆ ಗ್ರೂಪ್ ಗೆ ಜಾಯಿನ್ ಆಗಿದ್ದಳು. ಆ ದಿನ ತನ್ನೆಲ್ಲಾ ಬಾಲ್ಯದ ಸಹಪಾಠಿ ಮಿತ್ರರಿಂದ ದೊರೆತ ಆ ಆತ್ಮೀಯ ಸ್ವಾಗತ ಇಂದಿಗೂ ಅವಳ ಮನದಲ್ಲಿ ಹಸಿಯಾಗಿದೆ.
“ವೆಲ್ ಕಮ್ ಅಶ್ವಿನಿ…..”
“ವೆಲ್ ಕಮ್ ಟು ಅವರ್ ಗ್ರೂಪ್ ಅಶು…..” ಎನ್ನುತ್ತಾ ಬಣ್ಣ ಬಣ್ಣದ ಹೂಗೊಂಚಲುಗಳು, ಹೃದಯದ ಎಮೋಜಿಗಳ ಸುರಿಮಳೆ. ಅವಳ ಸಂಭ್ರಮ ಸಡಗರ ಕಂಡು ಪತಿ ಹಾಗೂ ಮಕ್ಕಳಿಗೆ ಮೋಜು. ಕೆಲವು ಗೆಳತಿಯರು ಅವಳ ಖಾಸಗಿ ಸಂಖ್ಯೆಗೆ ಸಂಪರ್ಕಿಸಿ ಹೃದಯ ಬಿಚ್ಚಿ ಮಾತನಾಡಿದ್ದರು.
ಇಪ್ಪತ್ತೇಳು ವರ್ಷಗಳ ಬದುಕಿನ ಹೈಲೈಟ್ಸ್ ಕೆಲವೇ ಕ್ಷಣಗಳಲ್ಲಿ ವಿನಿಮಯವಾಗಿದ್ದವು. ಮೊಗೆದಷ್ಟೂ ಮುಗಿಯದ ಸವಿನೆನಪುಗಳು. ಎಲ್ಲರಿಗೂ ನಲತ್ತೆರಡರ ಆಸುಪಾಸು…. ಎಲ್ಲರು ಬದುಕಲ್ಲಿ ಒಂದು ನೆಲೆ ಕಂಡುಕೊಂಡಿದ್ದರು. ಗೆಳತಿಯರಲ್ಲಿ ಹೆಚ್ಚಿನವರು ಅಶ್ವಿನಿಯಂತೆಯೇ ಗೃಹಿಣಿಯರು. ಬೋಲ್ಡ್ ಬೀನಾ ಎಂದೇ ಪ್ರಖ್ಯಾತಳಾಗಿದ್ದ ಬೀನಾ ಸ್ಟಾರ್ಟಪ್ ಕಂಪನಿ, ಎಕನಾಮಿಕ್ ಸೆಕ್ಟರ್ ಗಳಲ್ಲಿ ಇನ್ವೆಸ್ಟರ್ ಆಗಿ ಸಾಕಷ್ಟು ಸಂಪಾದಿಸಿದ್ದಳು. ಉಳಿದಂತೆ ಹಲವರು ಲೆಕ್ಚರರ್ಸ್, ಬ್ಯಾಂಕ್ ಇಲ್ಲವೇ ವಿಮಾ ಉದ್ಯೋಗಿಗಳು. ಬಾಲ್ಯದ ಗೆಳತಿಯನ್ನು ಸಂಪರ್ಕಿಸಿದ ಆ ಸಂತೋಷ ಅಶ್ವಿನಿಯನ್ನು ಪುನಃ ಬಾಲ್ಯಕ್ಕೇ ಕರೆದೊಯ್ದಿತ್ತು. ಇಡೀ ದಿನ ಅದೇ ಕನವರಿಕೆ…..ಅಂದು ರಾತ್ರಿ ಒಂಬತ್ತರ ಸುಮಾರಿಗೆ ಅವಳ ಪರ್ಸನಲ್ ನಂಬರ್ ಗೆ, “ಹಾಯ್ ಅಶ್ವಿನಿ….. ದಿಸ್ ಈಸ್ ಹರಿಪ್ರಸಾದ್…. ಹೌ ಆರ್ ಯೂ…? ಭಾವನಾ ನಿನ್ ಜೊತೆ ಕಾಂಟ್ಯಾಕ್ಟ್ ನಲ್ಲಿದ್ದಾಳಾ….? ಪ್ಲೀಸ್ ಸೆಂಡ್ ಹರ್ ನಂಬರ್. ಆ್ಯಡ್ ಹರ್ ಟು ಅವರ್ ಗ್ರೂಪ್,” ಎಂಬ ಸಂದೇಶ ಬಂದಾಗ ಥಟ್ಟನೆ ಹಿಂದಿನ ಹರಿ ಹಾಗೂ ಭಾವನಾರ ಪ್ರೇಮ ಪ್ರಕರಣ ನೆನೆದು ಅಶ್ವಿನಿಯ ಮನದಲ್ಲಿ ತುಂಟ ನಗು ಅರಳಿತು.
ಕೆಳ ಮಧ್ಯಮ ವರ್ಗದಿಂದ ಬಂದಂಥ ಭಾವನಾ, ಅಶ್ವಿನಿಯ ಆಪ್ತ ಗೆಳತಿ. ಅವಳ ಸ್ನಿಗ್ಧ ಸೌಂದರ್ಯಕ್ಕೆ ಹರಿಪ್ರಸಾದ್ ಮಾರುಹೋಗಿದ್ದ. ಯಾವಾಗಲೂ ಭಾವನಾಳೊಂದಿಗೇ ಇರುತ್ತಿದ್ದ ಅಶ್ವಿನಿಗೂ ಮೊದಮೊದಲು ಇದರ ಅರಿವಾಗಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಭಾವನಾ ಹೆಚ್ಚು ಲವಲವಿಕೆಯಿಂದಿದ್ದು ಆಸ್ಥೆಯಿಂದ ಅಲಂಕರಿಸಿಕೊಳ್ಳುತ್ತಾ ಇದ್ದಳು. ಆಗಾಗ ಒಬ್ಬಳೇ ನಗುತ್ತಿದ್ದುದು ಅಶ್ವಿನಿಯ ಗಮನಕ್ಕೆ ಬಂದಿತ್ತು. ನಂತರ ಗೇಮ್ಸ್ ಪೀರಿಯಡ್ ನಲ್ಲಿ ಅವಳು ತನ್ನ ಪೀರಿಯಡ್ಸ್ ನೆಪ ಹೇಳಿ ಫೀಲ್ಡಿಗೆ ಬಾರದೆ ತರಗತಿಯಲ್ಲೇ ಉಳಿದರೆ ಹರಿಪ್ರಸಾದ್ ಕಾಲು ಉಳುಕಿತು ಎಂದೋ, ಸುಸ್ತು ಎಂದೋ ನೆಪ ಹೇಳಿ ವಾಪಸ್ಸಾಗುತ್ತಿದ್ದ.
ಕಂಬೈನ್ಡ್ ಸ್ಟಡಿ ಎಂದು ಭಾವನಾ ಅಶ್ವಿನಿಯ ಮನೆಗೆ ಬಂದಾಗ ಅವನೂ ಅದೇ ರೋಡಿನಲ್ಲಿ ಗಸ್ತು ತಿರುಗುತ್ತಿದ್ದುದು…. ಮುಂದಿನ ದಿನಗಳಲ್ಲಿ ಗುಟ್ಟಾಗಿ ಉಳಿಯಲಿಲ್ಲ. ಇವರಿಬ್ಬರ ಪ್ರೇಮ ಪ್ರಕರಣದ ಗುಸುಗುಸು ಹರಿದಾಡುತ್ತಾ ಸ್ಟಾಫ್ ರೂಮಿಗೂ ಮುಟ್ಟಿದಾಗ ಪ್ರಿನ್ಸಿಪಾಲ್ ಕರೆಸಿ ವಾರ್ನ್ ಮಾಡಿದ್ದರು. ನಂತರ ಸ್ಟಡಿ ಹಾಲಿಡೇಸ್, ಆ ನಂತರ ಎಗ್ಸಾಮ್ಸ್ ಎಲ್ಲಾ ಮುಗಿದು ಕಾಲೇಜು ವಿದ್ಯಾಭ್ಯಾಸ, ವೃತ್ತಿ ಎನ್ನುತ್ತಾ ಎಲ್ಲರ ಬದುಕೂ ಹಲವು ಕವಲುಗಳಾಗಿ ರಾಜ್ಯದ, ದೇಶ, ವಿದೇಶದ ವಿವಿಧ ಭಾಗಗಳಲ್ಲಿ ಹಂಚಿಹೋಗಿತ್ತು. ಪಿಯುಸಿಗೆ ಭಾವನಾ ವಿದ್ಯಾಭ್ಯಾಸ ಮೊಟುಕುಗೊಳಿಸಿದ್ದಳು. ಸಕಲೇಶಪುರದ ಅನುಕೂಲಸ್ಥ ಕಾಫಿ ತೋಟದ ಮನೆತನದವರು ಅವಳನ್ನು ಮೆಚ್ಚಿ ಮನೆತುಂಬಿಸಿಕೊಂಡರು. ಅಶ್ವಿನಿ ಪದವಿ ಮುಗಿಸಿ ಸರ್ಕಾರಿ ಅಧಿಕಾರಿಯನ್ನು ಮದುವೆಯಾಗಿ ಗೃಹಿಣಿಯಾದಳು. ಮದುವೆಯ ನಂತರ ಎಲ್ಲರೊಂದಿಗೂ ಸಂಪರ್ಕ ಕಡಿದುಹೋಗಿತ್ತು.
ಭಾವನಾಳನ್ನೂ ಗ್ರೂಪ್ ಗೆ ಆ್ಯಡ್ ಮಾಡಿದ ನಂತರ ಅವಳಿಗೂ ಎಲ್ಲರಿಂದ ಆದರದ ಸ್ವಾಗತ ದೊರೆಯಿತು. ಅದಾದ ನಾಲ್ಕು ವಾರಗಳಲ್ಲಿ ಬೀನಾ ತನ್ನ ಪೀಸ್ ಲವರ್ ರೆಸಾರ್ಟ್ ನಲ್ಲಿ ಸ್ಮಾಲ್ ಗ್ಯಾದರಿಂಗ್ ಅರೇಂಜ್ ಮಾಡಿದ್ದಳು. ಅದೊಂದು ಮರೆಯಲಾಗದ ದಿನ. ಇಪ್ಪತ್ತೇಳು ವರ್ಷಗಳ ನಂತರ ಬಾಲ್ಯದ ಸಹಪಾಠಿಗಳನ್ನು ಸಂಧಿಸಿದ ಸಂತೋಷದ ಕ್ಷಣ. ಎಲ್ಲರೂ ಪರಸ್ಪರ ಕೈ ಕುಲುಕುತ್ತಾ, ಆಲಿಂಗಿಸುತ್ತಾ ಸೆಲ್ಛಿ, ವಿಡಿಯೋ ಎನ್ನುತ್ತಾ ಎಗ್ಸೈಟ್ ಆಗಿದ್ದರು. ಕೆಲವರು ವಿಪರೀತ ಸ್ಥೂಲಕಾಯರಾಗಿದ್ದರೆ, ಹಲವರು ಇನ್ನೂ ಹಾಗೆಯೇ ಸ್ಲಿಮ್ ಆಗಿದ್ದರು. ಮಾಗಿದ ಮನಸ್ಸು ಎಲ್ಲರ ಮೊಗದಲ್ಲೂ ಪ್ರಬುದ್ಧತೆಯನ್ನು ಮೂಡಿಸಿತ್ತು. ಕೆಲವರು ವೇದಿಕೆಯಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡರು ನೃತ್ಯ, ಗೀತಗಾಯನದೊಂದಿಗೆ ವೇದಿಕೆ ಕಳೆಗಟ್ಟಿತು. ಸಂಜೆಯವರೆಗೂ ಗೇಮ್ಸ್, ಚಾಟ್ಸ್, ಬಗೆಬಗೆಯ ಭೋಜನ, ಡೆಸರ್ಟ್ಸ್, ಸವಿಯುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ. ಸಂಜೆ ಆರು ಗಂಟೆಗೆ ವಿದಾಯ ಹೇಳಿ ಎಲ್ಲರೂ ಮಧುರ ನೆನಪುಗಳೊಂದಿಗೆ ಅವರವರ ಗೂಡು ಸೇರಿದರು. ತಡರಾತ್ರಿಯವರೆಗೂ ಗ್ಯಾದರಿಂಗ್ ಅನುಭವಗಳ ಬಗ್ಗೆ, ತಮ್ಮ ತಮ್ಮ ಗೂಡು ಸೇರಿದ ಬಗ್ಗೆ… ಮಸೇಜ್ ಗಳ ಬಗ್ಗೆ ವಿನಿಮಯವಾಯಿತು. ಫೋಟೋಗಳನ್ನು ಶೇರ್ ಮಾಡುತ್ತಾ, ಆಯೋಜಕರನ್ನು ಅಭಿನಂದಿಸುತ್ತಾ ಎರಡು ದಿನ ಎಲ್ಲರೂ ಅದೇ ಹ್ಯಾಂಗೋವರ್ ನಲ್ಲಿದ್ದರು.
“ಇದೇನಿದು ಲೈಟ್ ಹಾಕದೇ ಕುಳಿತಿರುವೆ….?” ಇಹಲೋಕದ ಪರಿವೆಯೇ ಇಲ್ಲದೆ ಕುಳಿತಿದ್ದ ಅಶ್ವಿನಿ, ಪತಿ ಬಂದು ಎಚ್ಚರಿಸಿದಾಗ ಧಡಕ್ಕನೆದ್ದಳು. ಮನದಲ್ಲಿನ್ನೂ ವಾಣಿಯ ನುಡಿಗಳು ಮಾರ್ದನಿಸುತ್ತಿದ್ದವು. ಹಾಗೇ ಕಾಫಿ ಬೆರೆಸಿ ಪತಿ ಹಾಗೂ ಮಗಳಿಗೆ ಶ್ಯಾವಿಗೆ ಉಪ್ಪಿಟ್ಟಿನೊಂದಿಗೆ ನೀಡಿ ರಾತ್ರಿಯ ಅಡುಗೆಯ ಸಿದ್ಧತೆಯಲ್ಲಿ ತೊಡಗಿದಳು. ಮನ ಭಾವನಾಳ ಬಗ್ಗೆಯೇ ಯೋಚಿಸುತ್ತಿತ್ತು. ಎರಡು ಸಂಸಾರಗಳ ಭವಿಷ್ಯ ಅವಳ ಕೈಯಲ್ಲಿತ್ತು. ಅವಳಿಗೆ ತಿಳಿಹೇಳುವ ಬಗ್ಗೆಯೇ ಚಿಂತಿಸುತ್ತಿದ್ದಳು. ಕೊನೆಗೆ ತಡರಾತ್ರಿ ಭಾವನಾಳಿಗೆ, `ನಿನ್ನೊಡನೆ ನಾಳೆ ಸ್ವಲ್ಪ ಮಾತನಾಡುವುದಿದೆ…. ಬೆಳಗ್ಗೆ ಫ್ರೀ ಆದಾಗ ಕಾಲ್ ಮಾಡು,’ ಎಂಬ ಮೆಸೇಜ್ ಕಳುಹಿಸಿ ಮಲಗಿದಳು.
ಮರುದಿನ ಹನ್ನೊಂದರ ಸುಮಾರಿಗೆ ಭಾವನಾಳ ಕರೆ ಬಂದಿತು. ಆತಂಕದಿಂದಲೇ ಕರೆ ಸ್ವೀಕರಿಸಿದ ಅಶ್ವಿನಿ ಒಂದೆರಡು ಕ್ಯಾಶುಯಲ್ ಟಾಕ್ ನಂತರ ನಿಧಾನವಾಗಿ, “ಭಾವೀ…. ನಿನ್ನ ಮತ್ತು ಹರಿಯ ಸಂಬಂಧದ ಬಗ್ಗೆ ತಿಳಿಸು…. ಯಾವ ಅಳುಕೂ ಇಲ್ಲದೆ ಹೇಳು, ನನ್ನ ಗಮನಕ್ಕೆ ಕೆಲವು ವಿಷಯಗಳು ಬಂದಿವೆ. ಐ ವಾಂಟ್ ಯುವರ್ ಪ್ರಾಮ್ಟ್ ಆ್ಯನ್ಸರ್…..” ಗೆಳತಿಯ ನೇರ ಪ್ರಶ್ನೆಗೆ ಭಾವನಾ ತತ್ತರಿಸಿದಳು. ಒಂದರ್ಧ ನಿಮಿಷದ ಮೌನದ ನಂತರ….
“ಹೌದು ಅಶು…. ನಾನು ಹೇಗೆ ಹೇಳ್ಲಿ….. ಅಂತಾನೇ ತಿಳೀತಿಲ್ಲ…. ಐ ಸ್ಟಿಲ್ ಲವ್ ಹಿಮ್….. ನನ್ನ ಕೈಲಿ ಅವನನ್ನ ಬಿಟ್ಟಿರೋಕೆ ಆಗ್ತಿಲ್ಲ….” ಎಂದಳು.
ಅಶ್ವಿನಿಯ ಮುಖ ಗಂಭೀರವಾಯಿತು, “ಆರ್ ಯೂ ಸೀರಿಯಸ್….? ನೀನು ಏನ್ ಮಾಡ್ತಾ ಇದೀಯಾ ಅಂತ ನಿನಗೆ ಗೊತ್ತಾ…..? ಯೂ ಆರ್ ಮ್ಯಾರೀಡ್…. ವಿತ್ ಟೂ ಗ್ರೋನ್ ಅಪ್ ಚಿಲ್ಡ್ರನ್. ಟೀನ್ ಏಜರ್ ಅಲ್ಲಾ….. ಹೀಗೆಲ್ಲಾ ಯೋಚಿಸೋಕೆ….” ಎಂದಳು ಅಶ್ವಿನಿ.
“ಪ್ಲೀಸ್ ಅಶು…. ಟ್ರೈ ಟು ಅಂಡರ್ ಸ್ಟಾಂಡ್ ಮೀ….. ನಾನು ಅವನನ್ನ ಮರ್ತೇ ಇಲ್ಲ ಕಣೇ…. ಪ್ರತಿದಿನ ಒಂದ್ಸಲವಾದ್ರೂ ಅವನನ್ನ ನೆನಪಿಸಿಕೊಳ್ತಾ ಇದ್ದೆ. ಈಗ ಮತ್ತೆ ಮೀಟ್ ಆದ್ಮೇಲೆ ನನ್ನ ನೆನಪಿಗೆ ಜೀವ ಬಂದ ಹಾಗಾಯ್ತು. ಸೇಮ್ ಫ್ರಂ ಹಿಸ್ ಸೈಡ್ ಅಂತೆ. ಅವನಿಗೂ ಹಾಗೇ ಅನ್ನಿಸುತ್ತಿತ್ತಂತೆ. ಅಮ್ಮ ಅಪ್ಪನ ಬಲವಂತಕ್ಕೆ ಮದ್ವೆ ಆಗಿ ಈ ಕಾಫಿ ತೋಟಕ್ಕೆ ಬಂದೆ. ಗಂಡ ಏನೋ ಒಳ್ಳೆಯವ್ರೆ….. ಆದ್ರೆ ನನ್ನಿಂದ ಹರೀನಾ ಬಿಟ್ಟಿರೋಕಾಗಲ್ಲ. ಅವನ ಜೊತೆ ಇರೋವಾಗ ಸಿಗೋ ಸಂತೋಷ ಎಲ್ಲೂ ಸಿಗಲ್ಲ. ಅದಕ್ಕೇ ಫಸ್ಟ್ ಲವ್ ಅಂತ ಹೇಳೋದು. ವೀ ಆಲ್ವೇಸ್ ಕಮ್ ಬ್ಯಾಕ್ ಟು ಅವರ್ ಫಸ್ಟ್ ಲವ್…..”
“ನೋಡು ಭಾವಿ….. ನೀನು ಚಿಕ್ಕ ಹುಡುಗಿ ಅಲ್ಲ…. ಪ್ರಾಯಕ್ಕೆ ಬಂದ ಮಗ ಇದಾನೆ. ಬೇಳೀತಾ ಇರೋ ಮಗಳಿದ್ದಾಳೆ. ಸುಂದರವಾದ ಸಂಸಾರ ಇದೆ. ಬಿಸಿಲ್ಗುದುರೆ ಬೆನ್ನೇರಿ ಸಂಸಾರ ಹಾಳು ಮಾಡ್ಕೋಬೇಡ. ಇದು ಎರಡು ಕುಟುಂಬಗಳ ಅಳಿವು ಉಳಿವಿನ ಪ್ರಶ್ನೆ. ನೀವಿಬ್ಬರೂ ಮದುವೆ ಆಗೋಕಾಗುತ್ತಾ….? ಮದುವೆ ಆದ್ರೂ ಎಷ್ಟು ದಿನ ಒಟ್ಟಿಗಿರ್ತೀರಾ….? ಆ ನಂತ್ರ ಆ ಬದುಕೂ ಬೇಸರ ಅನ್ಸುತ್ತೆ. ಹಿಂದಿರುಗಿ ಬರೋಕೆ ನಿಮ್ಮ ಹಳೇ ಬದುಕನ್ನೂ ಕಳ್ಕೊಂಡಿರ್ತೀರಾ….. ನಿಮ್ಮ ಮನೆಯಲ್ಲಾಗಲೀ….. ಸಮಾಜದಲ್ಲಾಗಲೀ….. ಮರ್ಯಾದೆ ಇರುತ್ತಾ…..” ಎಂದಳು ಕಟುವಾಗಿ.
ಭಾವನಾ ಬಿಕ್ಕಳಿಸುವ ಸದ್ದು ಕೇಳಿಸಿತು.
“ನೋಡು ಭಾವೀ….. ಈ ಫಸ್ಟ್ ಲವ್ ಅನ್ನೋ ಫಿಲಾಸಫಿನ ಬಿಟ್ಟುಬಿಡು. ಈಗ ಒಂದು ಸುಂದರ ಘನತೆಯ ಬಾಳು ನಿನಗಿದೆ. ನಿನ್ನ ಬಾಳಿಗೆ ನೀನೇ ಕಲ್ಲು ಹಾಕ್ಕೋಬೇಡ. ಈ ವಿಷಯ ನಿನ್ನ ಹಸ್ಬೆಂಡ್ ಗೆ ತಿಳಿಯುವಷ್ಟರಲ್ಲಿ ಎಚ್ಚೆತ್ಕೋ…. ಇನ್ನೂ ಸಮಯ ಇದೆ. ನಿನ್ನ ಸಂಸ್ಕೃತಿಯ ಬೇರುಗಳು ಆಳವಾಗಿದ್ದರೆ ಯಾವ ಲವ್ ವನ್ನಾದ್ರೂ ಬುಡಸಮೇತ ಕಿತ್ತು ಒಗೀಬಹುದು. ಎರಡು ದಿನ ಕುಳಿತು ಸಮಾಧಾನದಿಂದ ಯೋಚ್ಸು. ನಿನ್ನ ಸೂರಿಗೆ ನೀನೇ ತೂತು ಕೊರ್ಕೋಬೇಡ. ಮಳೆಬಿಲ್ಲ ಬೆನ್ನೇರಿ ಜೀಕುವ ಭರದಲ್ಲಿ ಬಯಲಲ್ಲಿ ಬೆತ್ತಲಾಗಬೇಡ!
“ನಾಳೆ ನಿನ್ನ ಮಗ ನಿನ್ನನ್ನ ಗೌರವದಿಂದ ಕಾಣ್ಬೇಕು ಅಲ್ವಾ…. ಸರ್ವನಾಶದ ಹೊಸ್ತಿಲಲ್ಲಿದ್ದೀಯ. ಒಂದು ಹೆಜ್ಜೆ ಹಿಂತೆಗೆಯುವುದರಿಂದ ನಿನ್ನ ಬಾಳು, ಹರಿಯ ಹೆಂಡತಿ ವಾಣಿಯ ಬಾಳು ಎರಡೂ ಹಸನಾಗುವುದು. ಯೋಚಿಸಿ ಒಳ್ಳೆಯ ತೀರ್ಮಾನ ತಗೊಂಡ್ರೆ ನನ್ನ ಗೆಳತಿಯಾಗಿ ಉಳೀತೀಯ….. ಬಾಸ್ ಈಸ್ ಇನ್ ಯುವರ್ ಕೋರ್ಟ್……” ಎಂದವಳೇ ಅವಳ ಉತ್ತರಕ್ಕೂ ಕಾಯದೆ ಥಟ್ಟನೆ ಫೋನಿರಿಸಿದಳು ಅಶ್ವಿನಿ.
ಗೆಳತಿಯ ಬದುಕನ್ನು ಒಪ್ಪಾಗಿಸುವ ಭರದಲ್ಲಿ ಆಡಿದ ಕಟು ನುಡಿಗಳು ಅವಳ ಮೇಲೆ ಎಂತಹ ಪರಿಣಾಮ ಬೀರಬಹುದೆಂಬ ಆತಂಕದಲ್ಲಿ ಅಶ್ವಿನಿ ಮೂರು ದಿನ ಸರಿಯಾಗಿ ನಿದ್ರೆಯಿಲ್ಲದೆ ನರಳಿದಳು. ಹಳೇ ಸಲುಗೆಯ ಎಳೆ ಸ್ವಲ್ಪ ಹೆಚ್ಚೇ ಮಾತಾಡಲು ಪ್ರೇರೇಪಿಸಿತ್ತು. ವಾಣಿಯ ದೈನ್ಯತೆ, ಭಾವನಾಳ ಇಬ್ಬಂದಿತನ, ತನ್ನ ಅಸಹಾಯಕತೆ ಬಹಳವಾಗಿ ಬಾಧಿಸಿತು. `ಈ ಸಮಸ್ಯೆಗೆ ಅಂತ್ಯ ಹೇಗೆ……? ಯಾರು ಯಾರನ್ನು ಕಳೆದುಕೊಳ್ಳುವರು…..? ಕಾಲನ್ನು ಹಿಂದಕ್ಕೆ ತಳ್ಳಿ ಘಟನೆಗಳನ್ನು ಬದಲಾಯಿಸುವುದು ಅಸಾಧ್ಯ. ಇದಕ್ಕೊಂದು ಉತ್ತಮವಾದ ಅಂತ್ಯ ದೊರೆಯುವುದೇ…..?’ ಎಂಬ ತೀವ್ರ ಯೋಚನೆಯ ತೊಳಲಾಟದಲ್ಲಿ ನರಳಿದಳು ಅಶ್ವಿನಿ.
ಕಾಲ ತನ್ನಷ್ಟಕ್ಕೆ ಪುಟ ಮಗುಚುತ್ತಿತ್ತು. ಭಾವನಾಳ ಕರೆಗಾಗಿ ಅಶ್ವಿನಿ ಕಾದು ಕಾದು ಸೋತಳು. ತಾನೇ ಮಾಡಿದರೆ ಏನೂ ಪ್ರಯೋಜನವಿಲ್ಲವೆಂದು ತಿಳಿದಿತ್ತು. ಹೇಳುವುದನ್ನೆಲ್ಲಾ ಹೇಳಿ ಆಗಿದೆ. ಅದನ್ನೇ ಮತ್ತೆ ಮತ್ತೆ ಹೇಳಿದರೆ ಪದಗಳು ತೂಕ ಕಳೆದುಕೊಳ್ಳುತ್ತವೆ. ವಾಣಿಯ ಅಸಹಾಯಕತೆ, ನೋವಿನ ನುಡಿಗಳು…. ಗೆಳತಿಯ ಮಾತಿನ ಅಳಲು…. ಕಡಲಿನ ಅಲೆಗಳಂತೆ ಮತ್ತೆ ಮತ್ತೆ ಮಾರ್ದನಿಸುತ್ತಿದ್ದವು. ಅಂದಿನ ಆ ಅಬೋಧ ಪ್ರೇಮ ಹೀಗೆ ಗೆಳತಿಯ ಮನದಲ್ಲಿ ವರ್ಷಾನುಗಟ್ಟಲೇ ಘನೀಕರಿಸಿರುವ ಒಂದು ಸುಳಿ ಇಲ್ಲದೆ, ಅದು ಚಿಗುರೊಡೆಯಲು ಆಸ್ಪದ ನೀಡಿದಂತಾಯಿತೆಂಬ ಬೇಗುದಿಯಲ್ಲಿ ಅಶ್ವಿನಿ ನರಳಿದಳು. ಗತಿಸಿದ ಪಾತ್ರಗಳು ಪುನಃ ಜೀವ ತಳೆದು ನಿಂತಿದ್ದವು.
ಅಂದು ಬೆಳಗ್ಗೆ ಸೆಲ್ ಫೋನ್ ಕೈಗೆತ್ತಿಕೊಂಡಾಗ ಭಾವನಾಳ ಮೆಸೇಜ್ ಬಂದಿರುವ ಬಗ್ಗೆ ನೋಟಿಫಿಕೇಶನ್ ನಲ್ಲಿ ಸೂಚನೆ ಇತ್ತು. ಅದನ್ನು ನೋಡಿದ ಕೂಡಲೇ ಅಶ್ವಿನಿಯ ಹೃದಯ ಬಡಿತ ಏರಿತು. ನಡುಗುವ ಕೈಗಳಿಂದಲೇ ವಾಟ್ಸ್ ಆ್ಯಪ್ ತೆರೆದು ಆತಂಕದಿಂದ ಕಣ್ಣಾಡಿಸಿದಳು.
`ಪ್ರಿಯ ಗೆಳತಿ ಅಶು….. ಹದಿನೈದು ದಿನಗಳ ಮನದ ತಾಕಾಟಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಂಡಿರುವೆ. ನಿನ್ನ ಮಾತು ನನ್ನ ಮಂಕು ಹಿಡಿದಿದ್ದ ಮನವನ್ನು, ಹೃದಯವನ್ನೂ ತಟ್ಟಿದವು. ನಿನ್ನ ಹಿತನುಡಿಗಳು ಕೈಹಿಡಿದು ನನ್ನ ಬದುಕನ್ನು ಹಸನಾಗಿಸಿವೆ. ನಾನು ಕೊಯನೆದಾಗಿ ಹರಿಗೆ ನನ್ನ ನಿರ್ಧಾರನ್ನು ತಿಳಿಸಿ ಅವನನ್ನು ಎಲ್ಲಾ ಕಡೆಯೂ ಬ್ಲಾಕ್ ಮಾಡಿರುವೆ. ಇನ್ನು ಈ ಜನ್ಮದಲ್ಲಿ ಅವನನ್ನು ಸಂಧಿಸಲಾರೆ. ಗ್ರೂಪ್ ನಿಂದಲೂ ಎಗ್ಸಿಟ್ ಆಗಿರುವೆ. ನಿನ್ನ ಋಣ ತೀರಿಸಲಾರೆ…….’ ಮುಂದಿನ ಅಕ್ಷರಗಳು ಮಸುಕಾದವು.
ಕಣ್ಣಂಚಿನಲ್ಲಿ ತುಳುಕಿದ ಕಂಬನಿಯನ್ನು ಒರೆಸುವ ಗೋಜಿಗೂ ಹೋಗದೆ ಹೃದಯದ ಎಮೋಜಿಯನ್ನು ಕಳುಹಿಸಿ ಗೆಳತಿಯೊಂದಿಗೆ ತನ್ನ ಸಂತಸವನ್ನು ಹಂಚಿಕೊಂಡಳು ಅಶ್ವಿನಿ.
ನಿಸರ್ಗದ ನೇಯ್ಗೆಯಲ್ಲಿ ಏನೆಲ್ಲಾ ಅವಘಡಗಳು ಉಂಟಾದರೂ ಅವನ್ನಲ್ಲಾ ಅರಗಿಸಿಕೊಂಡು ಪ್ರಕೃತಿ ಮತ್ತೆ ಅರಳುವಂತೆ ಗೆಳತಿಯ ಬಾಳೂ ಹಸನಾಗುವುದೆಂಬ ಭರವಸೆಯಿಂದ ಅಶ್ವಿನಿಯ ಮನ ಸಮಾಧಾನದ ಸ್ಥಾಯಿಗೆ ಬಂದಿತು.