ಶಿಖಾ ಶರ್ಮ ಕ್ರಿಯೇಟಿವ್ ಹೆಡ್ ಪ್ರೊಡ್ಯೂಸರ್
ಮನರಂಜನೆಯ ಪ್ರಪಂಚದಲ್ಲಿ ಕ್ರಿಯೇಟಿವ್ ಹೆಡ್ ಪ್ರೊಡ್ಯೂಸರ್ ಆಗಿರುವ ಶಿಖಾ ಶರ್ಮಾಳಿಗೆ ಸದಾ ಉತ್ತಮ ಹಾಗೂ ಮನರಂಜನೀಯ ಕಥೆಗಳನ್ನು ಹೇಳುವ ಷೋಕಿ ಇದೆ. ಇದಕ್ಕಾಗಿ ಆಕೆ ಮೊದಲು ಹಲವು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದಳು.
ಚಿತ್ರಗಳಿಗೆ ಕಥೆ, ಸಂಭಾಷಣೆ ಬರೆಯುವುದರಿಂದ ಹಿಡಿದು ಬಿಡುಗಡೆ ಆಗುವವರೆಗೂ, ವೀಕ್ಷಕರ ರಿವ್ಯೂ ಅರ್ಥ ಮಾಡಿಕೊಳ್ಳುವವರೆಗೂ ಕೆಲಸ ಮಾಡಿದಳು. ಆಕೆ ಮುಂದೆ ಅಂಥದೇ ಕಥೆಗಳನ್ನು ಬೆಳ್ಳಿ ಪರದೆಗೆ ತರಲು ಪ್ರಯತ್ನಿಸಿದಾಗ ಸಾಕಷ್ಟು ಹೆಣಗಬೇಕಾಯಿತು, ಜೊತೆಗೆ ಅಕ್ಕಪಕ್ಕ ಅಲ್ಲಿ ಇಲ್ಲ ಕಂಡಂಥ, ಕೇಳಿದಂಥ ಸತ್ಯ ಕಥೆಗಳನ್ನೇ ಚಿತ್ರವಾಗಿ ಆರಿಸಿಕೊಳ್ಳತೊಡಗಿದಳು.
ಈ ಸೀರೀಸ್ ನಲ್ಲಿ ಶಿಖಾ ಮೊದಲು `ಮಕ್ಬೂಲ್’ ಚಿತ್ರಕ್ಕಾಗಿ ಪೋಸ್ಟ್ ಪ್ರೊಡಕ್ಷನ್ ಅಸಿಸ್ಟೆಂಟ್, ನಂತರ `ಶೇರ್ ನಿ, ಛೋರಿ, ಶಕುಂತಲಾ ದೇವಿ, ದುರ್ಗಾವತಿ, ಹಶ್ ಹಶ್, ನೂರ್’ ಇತ್ಯಾದಿ ಹಲವು ಚಿತ್ರಗಳಿಗೆ ಲೇಖನ, ಕಥೆ, ಸಂಭಾಷಣೆ ಸಿದ್ಧಪಡಿಸಿದಳು.
ಗೃಹಶೋಭಾ ಪ್ರತಿನಿಧಿಯೊಂದಿಗೆ ಸುದೀರ್ಘ ಸಂದರ್ಶನ ನೀಡಿದ ಶಿಖಾ, ಬಾಲಿವುಡ್ ನ ಕೆಲವು ವಿಶಿಷ್ಟ ಸಂಗತಿಗಳನ್ನು ಹಂಚಿಕೊಂಡಳು. ಯಾವ ರೀತಿ ಒಬ್ಬ ಗಂಡಸನ್ನು ಮುಂದೆ ತರಲು ಹೆಣ್ಣಿನ ಪಾತ್ರ ಪ್ರಮುಖವಾಗುತ್ತದೋ, ಅದೇ ರೀತಿ ನನ್ನ ಯಶಸ್ಸಿನಲ್ಲಿ ನನ್ನ ಪತಿಯ ಬಹು ದೊಡ್ಡ ಪಾತ್ರವಿದೆ ಎಂದು ಹೆಮ್ಮೆಯಿಂದ ಹೇಳುತ್ತಾಳೆ ಶಿಖಾ.
ಮೂಲ ಪ್ರೇರಣೆ
ಈ ಕ್ಷೇತ್ರಕ್ಕೆ ಬರಲು ಮುಖ್ಯ ಪ್ರೇರಣೆ ಎಂದರೆ, ಶಿಖಾ ಹೀಗೆ ವಿವರಿಸುತ್ತಾಳೆ, “ಬಾಲ್ಯದಿಂದಲೇ ನನಗೂ ನನ್ನ ಪೇರೆಂಟ್ಸ್ ಗೂ ಸಿನಿಮಾ ನೋಡು ಹವ್ಯಾಸ ಹೆಚ್ಚಾಗಿತ್ತು. ಬಾಲ್ಯದಲ್ಲಿ ನಾನು ಪ್ರತಿ ಶುಕ್ರವಾರ ಸಂಜೆ ಬಿಡುಗಡೆಯಾದ ಬಹುತೇಕ ಚಿತ್ರಗಳನ್ನು ನೋಡುತ್ತಿದ್ದೆ. ಹೀಗಾಗಿಯೇ ಅದನ್ನೇ ನನ್ನ ಓದಿನಲ್ಲಿ ಅಳವಡಿಸಿಕೊಳ್ಳಬೇಕೆಂದು, ಫಿಲ್ಮ್ ಮೇಕಿಂಗ್ ನ್ನೆ ಮುಖ್ಯ ವಿಷಯವಾಗಿಸಿಕೊಂಡು ಡಿಗ್ರಿ ಪಡೆದೆ. ಹೀಗಾಗಿ ಕ್ರಿಯೇಟಿವ್ ಹೆಡ್ ರೂಪದಲ್ಲಿ ಒಂದು ಕಾರ್ಪೊರೇಟ್ ಕಂಪನಿಯಲ್ಲಿ ಹಲವು ವರ್ಷ ಕೆಲಸ ಮಾಡಿದೆ.
ಆದರೆ ಇಂಪ್ಯಾಕ್ಟ್ ಫುಲ್ ಪ್ಯಾಕ್ಟ್ ನ್ನು ವೀಕ್ಷಕರೆದುರು ತರಲು ಆಗಲಿಲ್ಲ. ಅದನ್ನು ಗಮನದಲ್ಲಿರಿಸಿಕೊಂಡೇ ನಾನು `ಮಕ್ಬೂಲ್, ಮಂಗಲ್ ಪಾಂಡೆ’ ಚಿತ್ರಗಳಿಗೆ ಪ್ರೊಡಕ್ಷನ್ ಎಗ್ಸಿಕ್ಯುಟಿವ್ ಆಗುವ ಅವಕಾಶ ಬಂದಾಗ ತಕ್ಷಣ ಕೆಲಸ ಬಿಟ್ಟು ಅದನ್ನು ಒಪ್ಪಿಕೊಂಡೆ.
“ಇದಾದ ನಂತರ ಮತ್ತೊಂದು ಕಂಪನಿಯಲ್ಲಿ ನನಗೆ ಕಂಟೆಂಟ್ ಡೆವಲಪ್ ಮಾಡುವ ಅವಕಾಶ ಸಿಕ್ಕಿತು. ಹೀಗಾಗಿ ನಾನು `ಶೋರ್ ಇನ್ ದಿ ಸಿಟಿ, ದಿ ಡರ್ಟಿ ಪಿಕ್ಚರ್, ಕ್ಯಾ ಸೂಪರ್ ಕೂಲ್ ಹೈ ಹಮ್’ ಇತ್ಯಾದಿ ಚಿತ್ರಗಳಿಗೆ ಇದರ ಕಂಟೆಂಟ್ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡಿದೆ.”
ಕಥೆ ಹೇಳುವ ಕಿಶಿಖಾ ಮುಂದುವರಿಸುತ್ತಾ ಹೇಳುತ್ತಾಳೆ, “ನಾನು ಮೂಲತಃ ದೆಹಲಿಯಲ್ಲಿ ಹುಟ್ಟಿ ಬೆಳೆದಳು. ನನ್ನ ತಂದೆ ಸದಾ ವರ್ಗಾವಣೆಯ ನೌಕರಿಯಲ್ಲಿದ್ದರು. ಹೀಗೆ ಉತ್ತರ ಭಾರತದ ಅನೇಕ ರಾಜ್ಯಗಳ ರಾಜಧಾನಿಗಳಲ್ಲಿ ಕಲಿತು ಕೊನೆಗೆ ಮುಂಬೈಗೆ ಬರುವಂತಾಯಿತು. ಅಲ್ಲೇ ಸೆಟಲ್ ಆದ ನಾನು ಕಳೆದ 18 ವರ್ಷಗಳಿಂದ ಮುಂಬೈನಲ್ಲೇ ಕೆಲಸ ಮಾಡುತ್ತಿದ್ದೇನೆ. ಈ ಕ್ಷೇತ್ರಕ್ಕೆ ಬರುವ ಮೊದಲು ನಾನು ಒಂದು ಶಾರ್ಟ್ ಫಿಲ್ಮ್ ತಯಾರಿಸಿದ್ದೆ. ಕ್ಯಾಂಪಸ್ ಪ್ಲೇಸ್ಮೆಂಟ್ ನಿಂದಲೇ ನನಗೆ ಈ ಕೆಲಸ ಸಿಕ್ಕಿತು. ಹೀಗೆ ನಾನು ಮುಂದುವರಿಯುತ್ತಾ ಹೋದೆ. ನಾನು ಸದಾ ಅರ್ಥಬದ್ಧ, ಪ್ರೇರಣಾದಾಯಕ ಕಥೆಗಳನ್ನೇ ಹೇಳಬಯಸುತ್ತೇನೆ. ಇದರಲ್ಲಿ ಮನರಂಜನೆ ಜೊತೆ ಜೊತೆಗೆ ಸಮಾಜಕ್ಕೆ ಏನಾದರೂ ಒಂದು ಸಂದೇಶ ಇರಬೇಕೆಂದು ನಾನು ಬಯಸುತ್ತೇನೆ.”
OTT ಒಂದು ವರದಾನ
ತಾನು ಹೆಣ್ಣಾದರೂ ಈ ರಂಗದಲ್ಲಿ ಹೋರಾಡಿ, ಪೈಪೋಟಿಗಿಳಿದು ಮುಂದುವರಿಯಲು ಶಿಖಾ ಸದಾ ಸಿದ್ಧ. ಏಕೆಂದರೆ ಈಕೆ ಇಷ್ಟು ವರ್ಷಗಳಿಂದ ಬಾಲಿವುಡ್ ಗಾಗಿ ದುಡಿದು, ಇದರ ಒಳಹೊರಗನ್ನು ಚೆನ್ನಾಗಿ ಅರೆದು ಕುಡಿದಿದ್ದಾಳೆ. ಫಿಲ್ಮ್ ಮೇಕಿಂಗ್ ನ್ನು ಒಂದು ವೃತ್ತಿಯನ್ನಾಗಿ ನೋಡದೆ ಅದನ್ನು ತನ್ನ ಪ್ರವೃತ್ತಿ ಸಹ ಆಗಿಸಿಕೊಂಡಿದ್ದಾಳೆ. ಈ ಚಿತ್ರೋದ್ಯಮಕ್ಕೆ ಈಗಾಗಲೇ ಹಲವಾರು ಮಹಿಳಾ ನಿರ್ಮಾಪಕರು ಬಂದಾಗಿದೆ. ಈ ಕುರಿತಾಗಿ ಶಿಖಾ ಹೇಳುತ್ತಾಳೆ, “ಸ್ಟೋರಿ ಟೆಲ್ಲರ್ಸ್ ಗೆ ಇಂದಿನ ಪ್ರಸ್ತುತ ಕಾಲ ಬಹಳ ಎಗ್ಸೈಟಿಂಗ್ ಅಂತಾನೇ ಹೇಳಬೇಕು. ಇಲ್ಲಿ ನಿರ್ದೇಶಕರು ಹಾಗೂ ಪೂರ್ತಿ ತಾಂತ್ರಿಕ ವರ್ಗ ಚಿತ್ರದ ಯಶಸ್ಸಿಗಾಗಿ ತಂತಮ್ಮ ಕ್ಷೇತ್ರಗಳಲ್ಲಿ ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಾರೆ. ಹಾಗಾಗಿಯೇ ಪ್ರೊಡಕ್ಷನ್ನಿನ ಎಲ್ಲಾ ಕೆಲಸಗಳೂ ಬೇಗ ಬೇಗ ಆಗುತ್ತಿವೆ. ಕೆಲಸಕ್ಕೆ ತಕ್ಕ ಸಮಾಧಾನ, ಸಂತೃಪ್ತಿ ಎರಡೂ ಇದೆ.
OTT ಮಾಧ್ಯಮದಿಂದ ಬೋಲ್ಡ್, ರಿಯಲ್ ಮತ್ತು ಆ್ಯಕ್ಷನ್ ಆಧಾರಿತ ಚಿತ್ರಗಳು (ಗಟ್ಟಿ ಕಥೆಯುಳ್ಳ) ತಯಾರಾಗುತ್ತಿವೆ ಎನ್ನಬಹುದು. ಇಂದು ಒಬ್ಬ ಮಹಿಳಾ ರೈಟರ್ ಹಿಂದಿನಂತೆ ಸಂಕೋಚದಿಂದ ಹಿಂಜರಿಯಬೇಕಿಲ್ಲ. ತನ್ನ ನಿಲುವನ್ನು ನೇರವಾಗಿ ಸ್ಪಷ್ಟ ಪ್ರಸ್ತುತಪಡಿಸಬಲ್ಲಳು. ಏಕೆಂದರೆ ಇಂಥ ಬೋಲ್ಡ್, ಬ್ಯೂಟಿಫ್ಲ್, ಉತ್ತಮ ಕಥೆಗಳಿಗಾಗಿ OTT ಪ್ರೇಕ್ಷಕರು ಸದಾ ತುದಿಗಾಲಲ್ಲಿ ಕಾದಿರುತ್ತಾರೆ.
“ಈ ಸಮಯದಲ್ಲಿ ಲೇಖಕ, ನಿರ್ದೇಶಕ, ನಿರ್ಮಾಪಕರೆಲ್ಲರೂ ಬಾಲಿವುಡ್ ನಿಂದ ಗರಿಷ್ಠ ಏನು ಲಾಭ ಮಾಡಿಕೊಳ್ಳುವುದು ಎಂದು ಲೆಕ್ಕ ಹಾಕುತ್ತಿದ್ದಾರೆ. `ಛೋರಿ, ಶೇರ್ ನಿ’ಯಂಥ ಉತ್ತಮ ಚಿತ್ರಗಳು OTTಯಲ್ಲಿ ಹೆಚ್ಚಿನ ಪ್ರೋತ್ಸಾಹ ಪಡೆದು ಯಶಸ್ವಿ ಎನಿಸಿವೆ. ವೀಕ್ಷಕರಂತೂ ಇಂಥಕ್ಕೆ ಸದಾ ಫಿದಾ ಆಗುತ್ತಾರೆ.
“ಇಲ್ಲಿನ ಮತ್ತೊಂದು ಸಂತಸದ ವಿಚಾರ ಎಂದರೆ ಈ ಚಿತ್ರಗಳಲ್ಲಿ ಲೇಖಕರು ತಮ್ಮ ಕಥೆಗಳನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ (ಹಳೆ ಕಾಲದ ಸೂತ್ರಬದ್ಧ ಶೈಲಿಯಲ್ಲ) ಪ್ರಸ್ತುತಪಡಿಸುತ್ತಿದ್ದಾರೆ. ಸಾಮಾನ್ಯ ಜನರಿಗಂತೂ ಇಂಥ ಚಿತ್ರಗಳಿಂದ ಮನರಂಜನೆಯೂ ಸಿಗುತ್ತದೆ, ಜೊತೆಗೆ ಅವರು ತಂತಮ್ಮ ಮನೆಗಳಲ್ಲೇ ಕುಳಿತು ಆರಾಮವಾಗಿ ಟಿವಿಗಳಲ್ಲಿ ಈ ಚಿತ್ರಗಳನ್ನು ನೋಡಬಹುದು.
“ಚಿತ್ರಮಂದಿರಕ್ಕೆ ಹೋಗಿ ಕ್ಯೂ ನಿಲ್ಲಬೇಕು, ಬ್ಲಾಕ್ ನಲ್ಲಿ ಟಿಕೆಟ್ ಕೊಳ್ಳಬೇಕು, ಮೊದಲೇ ಅಡ್ವಾನ್ಸ್ ಬುಕ್ಕಿಂಗ್ ಮಾಡಿಸಿಡಬೇಕು….. ಇತ್ಯಾದಿ ಯಾವುದೇ ರಗಳೆ ಇಲ್ಲ. ಜೊತೆಗೆ ಹೋಗಿ ಬರುವುದಕ್ಕೆ ಜನ ಆಟೋ, ಟ್ಯಾಕ್ಸಿ ಖರ್ಚು….. ಅಷ್ಟು ದೂರ ಹೋದ ಮೇಲೆ ಹೋಟೆಲ್ ಗೆ ಹೋಗದೆ ಇರಲಾದೀತೇ? ಈ ಎಲ್ಲಾ ಖರ್ಚುಗಳೂ ಉಳಿದು ಮನೆಯಲ್ಲೇ ಬೋಂಡ ಬಜ್ಜಿ, ಪಾಪ್ ಕಾರ್ನ್ ಸವಿಯುತ್ತಾ ಅಲ್ಪ ಬಜೆಟ್ ನಲ್ಲೇ ಬೇಕಾದ ಚಿತ್ರದ ಮಜಾ ಪಡೆಯಬಹುದು. ಎಲ್ಲಕ್ಕೂ ಮಜದ ವಿಚಾರ ಎಂದರೆ, ಯಾರಿಗೆ ಯಾವಾಗ ಬೇಕೋ ಮಧ್ಯದಲ್ಲಿ ನಿಲ್ಲಿಸಿ, 10-15 ನಿಮಿಷಗಳ ನಂತರ ತಮ್ಮಿಷ್ಟದಂತೆ ಚಿತ್ರ ಮುಂದುವರಿಸಿ ನೋಡಬಹುದು. ಚಿತ್ರಮಂದಿರದಲ್ಲಿ ಇದೆಲ್ಲಾ ಸಾಧ್ಯವಾಗುತ್ತದೆಯೇ? ಖಂಡಿತಾ ಇಲ್ಲ!
“ಇಷ್ಟು ಮಾತ್ರವಲ್ಲ, ಇವೆಲ್ಲಕ್ಕಿಂತ ಭಿನ್ನವಾದ `ರಾಮಸೇತು’ವಿನಂಥ ದೊಡ್ಡ ಬಜೆಟ್ ಚಿತ್ರಗಳೂ ಥಿಯೇಟರ್, OTT ಎರಡೂ ಕಡೆ ಬಿಡುಗಡೆ ಆಗುತ್ತಾ ಆಯ್ಕೆಯನ್ನು ಪ್ರೇಕ್ಷಕರಿಗೇ ಬಿಡುತ್ತಿದ್ದಾರೆ.”
ಮನಸ್ಸಿಗೆ ಬಲು ಹತ್ತಿರ
ಶಿಖಾ ಪ್ರತಿಯೊಂದು ತರಹದ ಕಥೆಯನ್ನೂ ತನ್ನ ಚಿತ್ರಗಳ ಮೂಲಕ ಹೇಳಿಕೊಳ್ಳ ಬಯಸುತ್ತಾಳೆ. ಆದರೆ `ಹಶ್ ಹಶ್’ ಶೋನ ಕಥೆ ಆಕೆಯ ಮನಸ್ಸಿಗೆ ಬಲು ಹತ್ತಿರವಾದುದು ಎಂದೇ ಹೇಳಬಹುದು. ಇದನ್ನು ಇನ್ ಹೌಸ್ ನಲ್ಲೇ ಡೆವಲಪ್ ಮಾಡಲಾಗಿದೆ. ಈ ಚಿತ್ರ ಬಹು ಮಂದಿ ಹೆಂಗಸರ ಪಾತ್ರಗಳಿಂದ ತುಂಬಿಹೋಗಿದೆ, ಅವರ ಜೀವನದ ಸತ್ಯ ಕಥೆಗಳನ್ನಾಧರಿಸಿದೆ. ಇದು ಬೇರೆ ಬೇರೆ ರೀತಿಯ ನಾನಾ ಪಾತ್ರಗಳನ್ನು ಒಳಗೊಂಡಿದ್ದು, ಬಲು ಅರ್ಥಬದ್ಧ ಹಾಗೂ ಬ್ಯೂಟಿಫುಲ್ ಚಿತ್ರ ಎನಿಸಿದೆ.
ಮಾನಸಿಕ ಆರೋಗ್ಯದ ಕಾಳಜಿ
ಜನರ ಮಾನಸಿಕ ಆರೋಗ್ಯದ ಬಗ್ಗೆ ಮಾತಾಡುತ್ತಾ ಶಿಖಾ ಹೇಳುತ್ತಾಳೆ, “ನಿಜಕ್ಕೂ ಇಂದು ಇದು ನಮ್ಮ ಸಮಾಜದಲ್ಲಿ ಅತಿ ದೊಡ್ಡ ಸಮಸ್ಯೆಯಾಗಿ ನಿಂತಿದೆ. ಇದರಿಂದ ಮಕ್ಕಳು, ಟೀನ್ ಏಜರ್ಸ್ ಮಾತ್ರವಲ್ಲದೆ, ದೊಡ್ಡರು, ವೃದ್ಧರು ಸಹ ಪ್ರಭಾವಿತರಾಗುತ್ತಾರೆ. ವೀಕ್ಷಕರ ಮಧ್ಯೆ ಈ ಕುರಿತು ಜಾಗೃತಿ ಮೂಡಿಸುವ ಅತ್ಯಗತ್ಯವಿದೆ.
“ಏಕೆಂದರೆ ಕೇವಲ ನಮ್ಮ ದೇಹಕ್ಕೆ ಮಾತ್ರ ರೋಗ ಬರುತ್ತದೆ ಅಂತ ಅಲ್ಲ, ಬದಲಿಗೆ ಮಾನಸಿಕ ಆರೋಗ್ಯ ಕೂಡ ಏರುಪೇರಾಗುವ ಸಂಭವ ಇದ್ದೇ ಇದೆ. ಎಷ್ಟೋ ಜನ ಇದನ್ನು ನಾಲ್ವರೊಡನೆ ಹಂಚಿಕೊಳ್ಳ ಬಯಸದೆ ತಮ್ಮಲ್ಲೇ ಅಡಗಿಸಿ ಇಟ್ಟುಕೊಳ್ಳುತ್ತಾರೆ. ಇದರಿಂದ ಬಹಳ ಸಂಕೋಚಕ್ಕೆ ಒಳಗಾಗುತ್ತಾರೆ. `ಸಂಸಾರದ ಗುಟ್ಟು….. ವ್ಯಾಧಿ ರಟ್ಟು’ ಎಂಬುದನ್ನು ಮರೆತೇ ಬಿಡುತ್ತಾರೆ. ಜನ ಇದನ್ನು ಒಂದು ಟ್ಯಾಟೂ ಅಂತಲೇ ಭಾವಿಸುತ್ತಾರೆ.
“ಮನಸ್ಸಿನ ಆರೋಗ್ಯಕ್ಕೆ ಚಿಕಿತ್ಸೆ ಎಂದ ತಕ್ಷಣ ಹುಚ್ಚಾಸ್ಪತ್ರೆ ಸಹವಾಸ ಎಂದು ಅಂಜುತ್ತಾರೆ. ಎಲ್ಲಿ ತಮ್ಮ ಮಗ, ಮಗಳಿಗೆ ಜನ ಶಾಶ್ವತವಾಗಿ `ಹುಚ್ಚು’ ಎಂದು ಲೇಬಲ್ ಅಂಟಿಸಿ ಬಿಡುತ್ತಾರೋ ಎಂದು ಬಹಳ ಭಯಪಡುತ್ತಾರೆ. ಹಾಗಾಗಿ ಈ ಬಗ್ಗೆ ಅವರು ಮಾತನಾಡಲು ಬಯಸುವುದೇ ಇಲ್ಲ, ಜನ ವ್ಯಂಗ್ಯವಾಗಿ ಆಡಿಕೊಳ್ಳುತ್ತಾರೆ ಎಂಬುದೇ ಅವರ ಭೀತಿ.
“ಅದರಲ್ಲೂ ಮುಖ್ಯವಾಗಿ ಮಕ್ಕಳ ವಿಚಾರ. ನಾವು ಮಕ್ಕಳಿಗೆ ಮುಖ್ಯವಾಗಿ ಈ ಮಾನಸಿಕ ಆರೋಗ್ಯದ ಬಗ್ಗೆ ಸ್ಪಷ್ಟ ಅರಿವು ನೀಡಬೇಕಾಗುತ್ತದೆ. ಈ ಸಮಸ್ಯೆ ಜನ ಆಡಿಕೊಳ್ಳುವಷ್ಟು ದೊಡ್ಡ ವಿಕಾರವಲ್ಲ ಅಂತ.
“ಇಷ್ಟು ಮಾತ್ರವಲ್ಲದೆ, ಕ್ರಿಯೇಟರ್ಸ್ ನ ಇನ್ನೊಂದು ಜವಾಬ್ದಾರಿ ಎಂದರೆ ಈ ವಿಷಯವನ್ನು ವಿವರವಾಗಿ ಸಿನಿಮಾದ ಕಥೆ, ಮನರಂಜನೆ ಮೂಲಕ ವೀಕ್ಷಕರಿಗೆ ತಲುಪಿಸಬೇಕು. ಈ ಕುರಿತಾಗಿ ಹೆಚ್ಚಿನ ಕೆಲಸಗಳು ನಡೆಯುತ್ತಿವೆ. ಮುಂದೆ `ರಾಮಸೇತು, ಜಲ್ಸಾ, ಛೋರಿ-2′ ಇತ್ಯಾದಿ ಚಿತ್ರಗಳಿಗಾಗಿ ಹೊಸ ಯೋಜನೆಗಳೊಂದಿಗೆ ಕೆಲಸ ಮುಂದುವರಿದಿದೆ. ಜೊತೆಗೆ ಬರವಣಿಗೆಯ ಕೆಲಸ ಎಂದಿನಂತೆ ನಡೆದಿದೆ.”
ಕುಟುಂಬದ ಸಹಕಾರ
ಈ ಕುರಿತಾಗಿ ಶಿಖಾ ಹೇಳುತ್ತಾಳೆ, “ಕುಟುಂಬದ ಸಹಕಾರ ಇಲ್ಲದಿದ್ದರೆ, ನಮ್ಮಂಥ ಕಲಾವಿದರು ಕೆಲಸ ಮಾಡುವುದು ಕಷ್ಟವಾಗುತ್ತದೆ. ಕುಟುಂಬದ ಸಹಕಾರದಿಂದಲೇ ದಿನೇ ದಿನೇ ಹೊಸತೇನಾದರೂ ಮಾಡಲು ಪ್ರೇರಣೆ ಸಿಗುತ್ತದೆ. ಇದರಲ್ಲಿ ನನ್ನ ತಾಯಿ ತಂದೆ, ಅತ್ತೆ ಮಾವ, ಪತಿ, ಮಗನ ಸಹಕಾರ ತುಂಬಿದೆ.
“ನನ್ನ 11 ವರ್ಷದ ಮಗನಿಗೂ ಸಿನಿಮಾದ ಹುಚ್ಚು ಇದೆ. ಬಾಲನಟನಾಗಿ ಕೆಲವಲ್ಲಿ ನಟಿಸಿದ್ದಾನೆ. ಇದಕ್ಕಿಂತಲೂ ಹೆಚ್ಚಾಗಿ ಅವನಿಗೆ ಕ್ರಿಕೆಟ್ ಅಂದ್ರೆ ಬಹಳ ಹುಚ್ಚು. ಕೊರೋನಾ ಕಾಟದಿಂದಾಗಿ ಜೀವನದಲ್ಲಿ ಹೊಸ ಹೊಸ ಪಾಠ ಕಲಿಯುವಂತಾಯಿತು. ಅದನ್ನು ಅರ್ಥ ಮಾಡಿಕೊಂಡು, ಕುಟುಂಬದ ಮಹತ್ವ ಗುರುತಿಸಿಕೊಂಡು, ಈ ಬಾಲಿವುಡ್ ನಲ್ಲಿ ದೃಢವಾಗಿ ಮುಂದುವರಿಯಬೇಕಾಗಿದೆ. ಜೊತೆಗೆ ನಮ್ಮೆಲ್ಲರ ಆರೋಗ್ಯ ಅಷ್ಟೇ ಮುಖ್ಯ.”
– ಜಿ. ಸುಮಾ