–ಶರತ್ ಚಂದ್ರ
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸ ನಾಯಕಿಯರ ದಂಡು ಹರಿದುಬರುತ್ತಿದೆ. ಆದರೆ ಹೆಚ್ಚಿನ ನಾಯಕಿಯರು ಒಂದೆರಡು ಚಿತ್ರಗಳಲ್ಲಿ ನಟಿಸಿದ ನಂತರ ನೇಪತ್ಯಕ್ಕೆ ಸರಿದು ಬಿಡುತ್ತಾರೆ. ಆದರೆ ಕೆಲವು ಪ್ರತಿಭಾವಂತ ನಟಿಯರು ತಮ್ಮ ನಟನೆಯ ಮೂಲಕ ಸುದೀರ್ಘ ಪಯಣವನ್ನು ಚಿತ್ರರಂಗದಲ್ಲಿ ಪೂರೈಸುತ್ತಿದ್ದಾರೆ. ಅಂತಹ ನಟಿಯರ ಸಾಲಿಗೆ ಪಾವನ ಗೌಡ ಕೂಡ ಸೇರುತ್ತಾರೆ.
ಇದೇ ಏಪ್ರಿಲ್ ತಿಂಗಳ 11 ನೇ ತಾರೀಕಿಗೆ ಬಿಡುಗಡೆಯಾಗುತ್ತಿರುವ ಸಪ್ತ ಸಾಗರದಚೆ ಎಲ್ಲೋ ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಮತ್ತು ಗೆಳೆಯರು ನಿರ್ಮಿಸಿರುವ ರಂಗಾಯಣ ರಘು ಪ್ರಮುಖ ಪಾತ್ರ ದಲ್ಲಿ ನಟಿಸಿರುವ ‘ಅಜ್ಞಾತವಾಸಿ ‘ ಚಿತ್ರದಲ್ಲಿ ಪಾವನ ಗೌಡ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಪಾವನ ಪಾತ್ರ ಚಿಕ್ಕದಾದರೂ ಕಥೆಗೆ ತಿರುವು ಸಿಗುವುದು ಈಕೆಯ ಪಾತ್ರದಿಂದ. ಎಂದಿನಂತೆ ಡೀ ಗ್ಲಾಮರ್ ಪಾತ್ರದಲ್ಲಿ ನಟಿಸಿರುವ ಪಾವನ ಗೌಡ ಅಭಿನಯ ನೋಡುಗರ ಗಮನ ಸೆಳೆಯುತ್ತದೆ.
ನಟಿಸಿದ ಮೊದಲ ಚಿತ್ರ ‘ಗೊಂಬೆಗಳ ಲವ್’ ಚಿತ್ರದಲ್ಲೇ ಚಾಲೆಂಜಿಂಗ್ ರೋಲ್ ನಿಭಾಯಿಸಿದ ಪಾವನ ಮುಂದೆ ಆಯ್ಕೆ ಮಾಡಿರುವ ಹೆಚ್ಚಿನ ಪಾತ್ರಗಳು ಆಕೆಯ ಪ್ರತಿಭೆ ಅನಾವರಣ ಮಾಡಿದೆ. ಗೊಂಬೆಗಳ ಲವ್’ ನಂತರ ಬಂದ ವಿಭಿನ್ನ ಚಿತ್ರ ‘ಜಟ್ಟ’ ಚಿತ್ರದಲ್ಲಿ ಕಿಶೋರ್ ಜೊತೆ ನಟಿಸಿದ್ದ ಪಾವನ, ಸ್ಯಾಂಡಲ್ ವುಡ್ ನ ಕೆಲವು ಸೂಪರ್ ಸ್ಟಾರ್ ನಟರೊಂದಿಗೆ ನಾಯಕಿ ಯಾಗಿ ಸ್ಕ್ರೀನ್ ಶೇರ್ ಮಾಡಿದ್ದೂ, ರವಿಚಂದ್ರನ್ ಜೊತೆ ನಟಿಸಿದ ‘ಕನ್ನಡಿಗ’
ದುನಿಯಾ ವಿಜಯ್ ಜೊತೆ ‘ಜಾಕ್ಸನ್ ‘ ಶ್ರೀನಗರ ಕಿಟ್ಟಿ ಜೊತೆ ನಟಿಸಿದ್ದ ಗೌಳಿ, ವಿನೋದ್ ಪ್ರಭಾಕರ್ ಜೊತೆ ನಟಿಸಿದ ಫೈಟರ್ ಚಿತ್ರಗಳು ಅಂತಹ ಯಶಸ್ವಿ ಯಾಗದಿದ್ದರೂ ಕೂಡ ಆಕೆಯ ಪಾತ್ರ ಗಮನ ಸೆಳೆದಿತ್ತು.
ಪಾವನ ಮಾಡಿರುವ ಹೆಚ್ಚಿನ ಚಿತ್ರಗಳಲ್ಲಿ ಆಕೆ ಕಾಣಿಸಿಕೊಂಡಿದ್ದು ಸಿಂಪಲ್ ಹಳ್ಳಿ ಹುಡುಗಿಯ ಪಾತ್ರಗಳಲ್ಲಿ. ಒ. ಟಿ. ಟಿ. ಯಲ್ಲಿ ಬಿಡುಗಡೆಯಾಗಿ ವಿಮರ್ಶಕರ ಪ್ರಶಂಸೆ ಗೆ ಪಾತ್ರವಾಗಿದ್ದ’ ರುದ್ರಿ ‘ ಚಿತ್ರ ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಕೊಂಡು ಪಾವನ ಗೌಡ ರಿಗೆ ಉತ್ತಮ ನಟಿ ಪ್ರಶಸ್ತಿ ತಂದು ಕೊಟ್ಟಿದೆ.
V3 ಎಂಬ ಮಹಿಳಾ ಪ್ರಧಾನ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕೂಡ ಕಾಲಿಟ್ಟಿರುವ ಪಾವನ ಪ್ರತಿಭೆಯನ್ನು ಕನ್ನಡದ ನಿರ್ದೇಶಕರು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಲಿ.