ಇತ್ತೀಚಿನ ವರದಿಗಳ ಪ್ರಕಾರ ಯುವತಿಯರೇ ಈ ಭೀಕರ ರೋಗಕ್ಕೆ ಈಡಾಗುತ್ತಿರುವುದು ನಿಜಕ್ಕೂ ಶಾಕ್ ತರಿಸುನ ವಿಚಾರವಾಗಿದೆ. 27 ವರ್ಷದ ಚಂದ್ರಿಕಾ ರಾವ್ ಗೆ ತನಗೆ ಬ್ರೆಸ್ಟ್ ಕ್ಯಾನ್ಸರ್ ಇದೆ ಎಂದು ಖಾತ್ರಿಯಾದಾಗ ಅವಳ ಜಂಘಾಬಲವೇ ಉಡುಗಿಹೋಯಿತು. ದೊಡ್ಡ ಕಂಪನಿಯಲ್ಲಿ ಉನ್ನತ ಪದವಿಯಲ್ಲಿದ್ದ ಅವಳಿಗೆ ಕಳೆದ ತಿಂಗಳಷ್ಟೇ ಮದುವೆ ಖಾತ್ರಿಯಾಗಿತ್ತು. ಮೊದ ಮೊದಲು ಅವಳಿಗೆ ಇದರ ಬಗ್ಗೆ ಗೊತ್ತಾಗಲೇ ಇಲ್ಲ. ಆದರೆ ನಿಯಮಿತವಾಗಿ ಮುಟ್ಟಾಗದೆ ಅದು ಮುಂದೂಡಲ್ಪಟ್ಟಾಗ ತುಸು ಗಾಬರಿಗೊಂಡಳು. ತನ್ನ ಫ್ಯಾಮಿಲಿ ಡಾಕ್ಟರ್ ಬಳಿ ಪರೀಕ್ಷಿಸಿಕೊಂಡು, ಔಷಧಿ ಪಡೆದಳು. ಅದೇನೋ ಸರಿ ಹೋಯಿತು, ಆದರೆ ಊಟತಿಂಡಿಯಲ್ಲಿ ಅವಳಿಗೆ ಯಾವುದೇ ರುಚಿ ಕಾಣಿಸದೆ, ಆಹಾರ ಕಂಡೊಡನೆ ವಾಕರಿಗೆ ಬರುವಂತಾಗುತ್ತಿತ್ತು.
ಒಂದು ಸಲ ಸ್ನಾನ ಮಾಡುವಾಗ ಅವಳಿಗೆ ತನ್ನ ಬಲ ಸ್ತನದಲ್ಲಿ ಸಣ್ಣ ಗಂಟು ಇರುವಂತೆ ಭಾಸವಾಯಿತು. ತಕ್ಷಣ ಅವಳು ವೈದ್ಯರ ಬಳಿ ಹೋದಳು. ಇದನ್ನು ಮಸಲ್ಸ್ ಮಧ್ಯೆ ಮೂಡುವ ಗಡ್ಡೆ ಎಂದು ಅವರು ಔಷಧಿ ಕೊಟ್ಟರು. ಹೀಗೇ ಹಲವು ತಿಂಗಳು ಕಳೆದವು.
ಏನೂ ವ್ಯತ್ಯಾಸ ಆಗಲಿಲ್ಲ. ಆಗ ಕ್ಯಾನ್ಸರ್ ತಜ್ಞರ ಬಳಿ ಹೋಗಿ ಅದರ ಪರೀಕ್ಷೆ ಮಾಡಿಸಿ, ಮೆಮೊಗ್ರಫಿ ಸಹ ಮಾಡಿಸಿದಳು. ಅವಳ ಎರಡೂ ಸ್ತನಗಳಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆಯುತ್ತಿರುವುದು ಖಾತ್ರಿಯಾಯಿತು. ಅಂತೂ ಸಕಾಲಕ್ಕೆ ಚಿಕಿತ್ಸೆ ಪಡೆದದ್ದರಿಂದ ಅವಳು ಅಪಾಯದಿಂದ ಪಾರಾದಳು. ಮುಂದೂಡಲ್ಪಟ್ಟಿದ್ದ ಅವಳ ಮದುವೆ 6 ತಿಂಗಳ ನಂತರ ಸುಸೂತ್ರ ನಡೆದು, ಅವಳಿಂದು ಸುಖೀ ಗೃಹಿಣಿ ಎನಿಸಿದ್ದಾಳೆ.
ಸ್ತನ ಕ್ಯಾನ್ಸರ್ ಇದು ಅಸಾಮಾನ್ಯ ಜೀವಕೋಶಗಳ ಒಂದು ಕಡೆ ಒತ್ತಾಗಿ ಅನಿಯಮಿತವಾಗಿ ವೃದ್ಧಿಗೊಳ್ಳುವಿಕೆ. ಇದು ಸ್ತನದ ಯಾವುದೇ ಭಾಗದಲ್ಲಿ ಮೂಡಬಹುದು. ಇದು ಮೊಲೆ ತೊಟ್ಟಿಗೆ ಹಾಲು ಒದಗಿಸುವ ನಾಳಗಳಿಂದ ಹಿಡಿದು, ಹಾಲು ಉತ್ಪಾದಿಸುವ ಸಣ್ಣ ಜೀವಕೋಶಗಳು ಹಾಗೂ ಗ್ರಂಥಿರಹಿತ ಟಿಶ್ಯುಗಳಲ್ಲೂ ಕಾಣಿಸಬಹುದು. ಹಳ್ಳಿ ಹೆಂಗಸರಿಗಿಂತ ನಗರದ ಹೆಂಗಸರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.
ಮಹಾರಾಷ್ಟ್ರದಲ್ಲಿ ಇದು ಅತಿ ಹೆಚ್ಚು. 1 ಲಕ್ಷ ಹೆಂಗಸರಲ್ಲಿ ಸರಾಸರಿ 27 ಮಂದಿ ಇದರಿಂದ ಪೀಡಿತರು. ಅದೇ ಹಳ್ಳಿಗಳಲ್ಲಿ 1 ಲಕ್ಷಕ್ಕೆ 78 ಮಂದಿ ಮಾತ್ರ ಕಂಡು ಬರುತ್ತಾರೆ. ಇತ್ತೀಚೆಗೆ ಇದು ನಡು ವಯಸ್ಸು, ಅಧಿಕ ವಯಸ್ಸಾದವರಿಗಿಂತ ತಾರುಣ್ಯದಲ್ಲಿರುವವರನ್ನು ಕಾಡುವುದೇ ಹೆಚ್ಚು. ಹಿಂದೆಲ್ಲ 40+ ನವರಿಗೆ ಮಾತ್ರ ಈ ಕಾಟವಿತ್ತು. ಈಗೆಲ್ಲ 30+ ಅಥವಾ 20+ನವರಲ್ಲಿಯೂ ಇದು ಮಾಮೂಲಿ ಆಗಿದೆ. ಎಲ್ಲರೂ ನೌಕರಿ ಹುಡುಕಿ ಹೊರಗೆ ಹೊರಡುವುದರಿಂದ, ಹೊರಗಡೆ ಅವರು ಅನೇಕ ರಿಸ್ಕ್ ಪ್ಯಾಕ್ಟರ್ಸ್ ಎದುರಿಸಬೇಕಾಗುತ್ತದೆ.
ಸಾಮಾನ್ಯವಾಗಿ 5% ಹೆಂಗಸರಿಗೆ ಆನುವಂಶಿಕವಾಗಿ ಈ ರೋಗ ಬಂದಿರುತ್ತದೆ. ಬೆಚ್ಚಿ ಬೀಳಿಸುವ ವಿಷಯ ಎಂದರೆ, ವಯಸ್ಸಾದವರ ತರಹ ಅಲ್ಲದೆ, ಯುವತಿಯರನ್ನು ಕಾಡುವ ಈ ಸಮಸ್ಯೆ, ಎರಡೂ ಸ್ತನಗಳಲ್ಲಿ ಒಮ್ಮೆಲೆ ಕಾಣಿಸಿಕೊಂಡು ಗೆಡ್ಡೆಗಳಾಗಿ ಬೆಳೆಯಲಾರಂಭಿಸುತ್ತವೆ. ಇದಕ್ಕೆ ಮೂಲಕಾರಣ ನಮ್ಮ ಆಧುನಿಕ ಜೀವನಶೈಲಿ. ಪಾಶ್ಚಿಮಾತ್ಯರ ಅಂಧಾನುಕರಣೆ ಇದನ್ನು ಹೆಚ್ಚಿಸಿದೆ. ಅಧಿಕ ಸ್ಯಾಚುರೇಟೆಡ್ ಆಯಿಲ್ ಸೇವನೆಯೇ ಇದರ ಮೂಲ. ವ್ಯಾಯಾಮದ ಕಾಳಜಿಯೇ ಇಲ್ಲ. ಸದಾ ಟೆನ್ಶನ್‌ನಲ್ಲೇ ಕೆಲಸ ಮಾಡುತ್ತಾರೆ. 30+ ನಂತರದ ಲೇಟ್ ಮದುವೆಯೂ ಮತ್ತೊಂದು ಕಾರಣ. ಮಗುವಿಗೆ ಸ್ತನ್ಯಪಾನ ಮಾಡಿಸದಿರುವುದೂ ಒಂದು ನೆಪ ಆಗಬಹುದು. ಹೀಗಾಗಿ ಸಕಾಲಕ್ಕೆ ಬೇಗ ಚಿಕಿತ್ಸೆ ಪಡೆಯುವುದೊಂದೇ ಇದಕ್ಕೆ ಇವರು ಪರಿಹಾರ.
ಜಾಗೃತರಾಗಿರಿ
ತನಗೆ ಸ್ತನ ಕ್ಯಾನ್ಸರ್ ಆಗಿದೆ ಎಂದು ತಿಳಿಯಲು ರೋಗಿಗೆ ತುಸು ಅಧಿಕ ಕಾಲ ಬೇಕಾಗುತ್ತದೆ. ಹೀಗಾಗಿ ಆರಂಭಿಕ ಲಕ್ಷಣಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಜೊತೆಗೆ ಮನೆಯವರು, ಸಮಾಜ ಸಹ ಇದನ್ನು ಸ್ವೀಕರಿಸದೆ ಇರುವುದರಿಂದ, ಒಳಗೊಳಗೇ ರೋಗ ಹೆಚ್ಚುತ್ತಾ, ಮುಂದೆ ಅಪಾಯಕಾರಿ ಮಟ್ಟ ತಲುಪಬಹುದು.
ಸ್ತನ ಕ್ಯಾನ್ಸರ್ ನ ಪ್ರಾರಂಭಿಕ ಲಕ್ಷಣ ತಿಳಿಸುವ ಉತ್ತಮ ಉಪಾಯವೇ ಮೆಮೊಗ್ರಫಿ. ಇದರ ಮೂಲಕ ಕಡಿಮೆ ಪ್ರಮಾಣದಲ್ಲಿ ರೇಡಿಯೇಶನ್ ಪ್ರಯೋಗಿಸಿ, ಸ್ತನದ ಎಕ್ಸ್-ರೇ ಮಾಡುತ್ತಾರೆ. ಇದರಿಂದ ಒಳಗಿನ ಗೆಡ್ಡೆ ಎಷ್ಟು ಗಾತ್ರ ಬೆಳೆದಿದೆ ಎಂಬುದರ ಅರಿವಾಗುತ್ತದೆ. ಈ ಸೌಲಭ್ಯ ಇದೀಗ ಸಣ್ಣಪುಟ್ಟ ನಗರಗಳಲ್ಲೂ ಲಭ್ಯ. ಸ್ವತಃ ಮನೆಯಲ್ಲೇ ಸ್ತನ ಪರೀಕ್ಷೆ ಮಾಡಿ ನೋಡಿಕೊಂಡು, ಒಳಗೆ ಗಂಟುಗಳಿವೆ ಎಂಬ ಸ್ವಲ್ಪ ಸಂದೇಹ ಮೂಡಿದರೂ ತಕ್ಷಣ ವೈದ್ಯರಿಗೆ ಹೇಳಿ ಮೆಮೊಗ್ರಪಿ ಮಾಡಿಸುವುದರಿಂದ ಅದು ಖಚಿತವಾಗುತ್ತದೆ. 40+ ಹೆಂಗಸರು ಪ್ರತಿ 2 ವರ್ಷಗಳಿಗೊಮ್ಮೆ, 50+ನವರು ಪ್ರತಿ ವರ್ಷ ಈ ಪರೀಕ್ಷೆ ಮಾಡಿಸುವುದು ಲೇಸು. ಗೆಡ್ಡೆ ಇದೆ ಎಂದು ಖಾತ್ರಿಯಾದಾಗ ಸೋನೋಗ್ರಫಿ ಮಾಡಿಸಬೇಕು. ಇದರಿಂದ ಕ್ಯಾನ್ಸರ್ ನ ಆಕಾರ, ಸ್ವರೂಪ ಸ್ಪಷ್ಟವಾಗುತ್ತದೆ.
ಸೂಕ್ತ ಚಿಕಿತ್ಸೆ
ಸಾಮಾನ್ಯವಾಗಿ ಇದಕ್ಕೆ ಸರ್ಜರಿ ಮೂಲಕ ಚಿಕಿತ್ಸೆ ಒದಗಿಸಲಾಗುತ್ತದೆ. ಗೆಡ್ಡೆ ಇರುವ ಸ್ತನದ ಅನಾರೋಗ್ಯದ ಭಾಗ ಅಥವಾ ಇಡೀ ಸ್ತನವನ್ನೇ ಸರ್ಜರಿಯಿಂದ ತೆಗೆದು ಹಾಕಲಾಗುತ್ತದೆ. ಇದನ್ನು ಮಾಡಲು 2 ವಿಧಾನಗಳಿವೆ. ಸರ್ಜರಿ ನಂತರ ಡಾಕ್ಟರ್ ರೇಡಿಯೇಶನ್ ಥೆರಪಿ, ಕೀಮೊಥೆರಪಿ, ಹಾರ್ಮೋನ್ ಥೆರಪಿ ಅಥವಾ ಇವೆಲ್ಲ ಬೆರೆಸಿಯೇ ಚಿಕಿತ್ಸೆ ನೀಡುತ್ತಾರೆ.
ಬಹುತೇಕ ಸರ್ಜರಿಗಳಲ್ಲಿ ಗೆಡ್ಡೆ ತೆಗೆದ ನಂತರ, ಒಂದು ವಿಶೇಷ ಮೆಶೀನ್ ಬಳಸಿ, ಫಿನಿಶಿಂಗ್ ಪೂರೈಸುತ್ತಾರೆ. ಇದು ಹಳ್ಳಿಗಳ ಕಡೆ ದೊರಕದಿರಬಹುದು. ಅಂಥವರು ಸರ್ಜರಿ ಮುಗಿದ 5-6 ವಾರಗಳ ನಂತರ ಇದನ್ನು ಮಾಡಿಸಲು ಮಹಾನಗರದ ಕ್ಯಾನ್ಸರ್ ಆಸ್ಪತ್ರೆಗೆ (ಬೆಂಗಳೂರಿನ ಕಿದ್ವಾಯಿ ಹಾಸ್ಪಿಟಲ್) ಹೋಗುವುದೇ ಸರಿ. ಇದು ತುಸು ದುಬಾರಿಯೂ ಹೌದು. ಈ ನಿಟ್ಟಿನಲ್ಲಿ ಒಂದು ಹೊಸ ಪದ್ಧತಿ ಬಂದಿದೆ, ಇಂಟ್ರಾ ಆಪರೇಟಿವ್ ರೇಡಿಯೇಶನ್ ಥೆರಪಿ. ಇದರಲ್ಲಿ ಸರ್ಜರಿ ಆದ ತಕ್ಷಣ ಟೇಬಲ್ ಮೇಲೆಯೇ, ದೇಹದ ಅಗತ್ಯದ ಕಡೆ ಸೂಕ್ತ ಪ್ರಮಾಣದಲ್ಲಿ ರೇಡಿಯೇಶನ್ ಮಾಡಲಾಗುತ್ತದೆ. ಇದಕ್ಕಾಗಿ 5-6 ವಾರಗಳ ಕಾಲ 25-30 ಸೆಶೆನ್ಸ್ ನಡೆಯುತ್ತದೆ. ಗೆಡ್ಡೆ ಬೇಗ ಕರಗಲು ಇದು ಸಹಕಾರಿ, ಖರ್ಚೂ ಕಡಿಮೆ. ಇದಕ್ಕೆ ಸೈಡ್ ಎಫೆಕ್ಟ್ಸ್ ಇಲ್ಲ.
ಆತ್ಮವಿಶ್ವಾಸ ಉಳಿಸಿಕೊಳ್ಳಿ
ಸ್ತನದ ಸರ್ಜರಿ ನಂತರ ಅದನ್ನು ಮತ್ತೆ ಸುವ್ಯವಸ್ಥಿತಗೊಳಿಸುವುದು ಸುಲಭವಲ್ಲ. ಆದರೆ ಇತ್ತೀಚೆಗೆ ಹೆಂಗಸರು ಇದನ್ನು ಮಾಡಿಸಿಕೊಳ್ಳಲು ಹಿಂಜರಿಯುವುದಿಲ್ಲ. ಹೆಣ್ಣಿನ ಹೆಗ್ಗುರುತಾದ ಸ್ತನ ಕಳೆದುಕೊಳ್ಳಲು ಯಾರೂ 100% ಸಿದ್ಧರಿರುವುದಿಲ್ಲ. ಅವರು ತಮ್ಮ ದೇಹ ಸಿರಿಯ ಕೊರತೆಯಿಂದ ಆತ್ಮವಿಶ್ವಾಸ ಎಷ್ಟೋ ತಗ್ಗುತ್ತದೆ. ಸ್ತನವಿಲ್ಲದೆ ತಾನು ಅಪೂರ್ಣ ಎಂದು ಭಾವಿಸುತ್ತಾಳೆ. ಹೀಗಾಗಿ ಬ್ರೆಸ್ಟ್ ರೀಕನ್ ಸ್ಟ್ರಕ್ಷನ್ ದುಬಾರಿಯಾದರೂ ಈಗೀಗ ಜನಪ್ರಿಯವಾಗುತ್ತಿದೆ. ಇದು ಕಾಸ್ಮೆಟಿಕ್ ಸರ್ಜರಿ ಎಂದೆನಿಸಿದೆ.
ಸ್ತನಗಳನ್ನು ಪೂರ್ತಿ ತೆಗೆದ ನಂತರ, ಇದನ್ನು ತಕ್ಷಣ ಬೇಕೆಂದರೂ ಮಾಡಬಹುದು ಅಥವಾ ನಂತರ, ಅದು ರೋಗಿಯ ಆಯ್ಕೆಗೆ ಬಿಟ್ಟದ್ದು. ಯಾವ ವಿಧದಲ್ಲಿ ಸರ್ಜರಿ ನಡೆಯಿತು ಎಂಬುದೇ ಇದಕ್ಕೆ ಮೂಲ.
ಮಸ್ಟಾರೆಕ್ಟಮಿ ಎಂಬ ಈ ಸರ್ಜರಿ ಮೂಲಕ ಬ್ರೆಸ್ಟ್ ಸ್ಕಿನ್ ಮತ್ತು ನಿಪ್ಪಲ್ ಸಹಿತ ಅದನ್ನು ತೆಗೆಯಲಾಗುತ್ತದೆ. ರೀಕನ್ ಸ್ಟ್ರಕ್ಷನ್ ಗಾಗಿ ದೇಹದ ಇತರ ಭಾಗದಿಂದ ಚರ್ಮ, ಕೊಬ್ಬು, ಮಾಂಸ, ರಕ್ತನಾಳ ಇತ್ಯಾದಿ ತೆಗೆದು ಇಲ್ಲಿಗೆ ಜೋಡಿಸಿ ಇದನ್ನು ಪೂರೈಸುತ್ತಾರೆ. ಇದನ್ನು ಮುಖ್ಯವಾಗಿ ಹೊಟ್ಟೆ, ಪೃಷ್ಠ, ಸೊಂಟದ ಭಾಗದಿಂದ ಇವನ್ನು ತೆಗೆದುಕೊಳ್ಳುತ್ತಾರೆ.
– ಪ್ರತಿನಿಧಿ