ಭದ್ರಕಾಳಿಯಾಗಿ ನಿಂತು ರಕ್ಕಸನ ಸಂಹಾರ ಮಾಡಿದ್ದ ಪಿಎಸ್‌ಐ ಅನ್ನಪೂರ್ಣ ಅವರ ಕೆಲಸಕ್ಕೆ ಖುದ್ದು ಸಚಿವರೇ ಸಲ್ಯೂಟ್ ಹೊಡೆದಿದ್ದಾರೆ. ಕೀಚಕನ ವಧೆ ಮಾಡಿದ ಈ ಲೇಡಿ ಸಿಂಗಂ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಗಟ್ಟಿಗಿತ್ತಿ ಅನ್ನಪೂರ್ಣೇಶ್ವರಿ ಚೆನ್ನಮ್ಮನ ನಾಡಿನ ಸಾಹಸಿ, ದಿಟ್ಟತನಕ್ಕೇ ಹೆಸರಾಗಿರೋ ಮಣ್ಣಿನ ಮಗಳು ಎಂದು ಜನ ಕೊಂಡಾಡುತ್ತಿದ್ದಾರೆ.
ತನ್ನ ಮಕ್ಕಳಿಗೆ, ತಾಯಿಗೆ, ತಾಯ್ನಾಡಿಗೆ ಅನ್ಯಾಯವಾದಾಗ ಹೆಣ್ಣೇನೇದಾರೂ ಸಿಡಿದೆದ್ದು ನಿಂತರೆ ಏನು ಬೇಕಾದರೂ ಮಾಡಬಲ್ಲಳು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದೀಗ ಕೀಚಕನೊಬ್ಬನ ಸಂಹಾರ ನಡೆದಿರೋದು ಮತ್ತೆ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ಲಕ್ಷ್ಮಿ ರಾಣಿಬಾಯಿ ಯಂಥ ಸಾಹಸಿಮಣಿಗಳ ಶೌರ್ಯ್ರವನ್ನು ಮತ್ತೆ ನೆನಪಿಸುತ್ತಿದೆ. ಅಷ್ಟಕ್ಕೂ ಕೂಸಿನ ಉಸಿರು ನಿಲ್ಲಿಸಿದ್ದ ಪಾಪಿಯ ಸಂಹಾರ ಮಾಡಿದ ವೀರನಾರಿ ಅನ್ನಪೂರ್ಣ ಯಾರು ಎಂಬ ಪ್ನಶ್ನೆ ಎಲ್ಲರಲ್ಲೂ ಮೂಡಿದೆ.
ಚೆನ್ನಮ್ಮನ ನಾಡಿನ ಸಾಹಸಿ
ಕಿತ್ತೂರು ರಾಣಿ ಚೆನ್ನಮ್ಮ.. ಕೆಂಪುಮೂತಿಗಳ ವಿರುದ್ಧ ಕಂದಾಯದ ಕದನ ಸಾರಿದ ದಿಟ್ಟ ಹೆಣ್ಣು. ಬ್ರಿಟೀಷರ ವಿರುದ್ದ ಸೆಣಸಾಡಿ ಸ್ವಂತಂತ್ರ ನಾಡಿಗಾಗಿ ಪ್ರಾಣ ತೆತ್ತ ವೀರವನಿತೆ.. ಇಂಥಾ ಕಿಚ್ಚಿನ ಮಣ್ಣಲ್ಲೇ ಹುಟ್ಟಿದ ಸಾಹಸಿ, ಕೊಲೆಗಡುಕ ರಿತೇಶ್ ಬೆನ್ನಿಗೆ ಗುಂಡಿಟ್ಟ, ಹುಬ್ಬಳ್ಳಿಯ ಅಶೋಕ ನಗರದ ಪಿಎಸ್‌ಐ ಅನ್ನಪೂರ್ಣ.
ಲೇಡಿ ಸಿಂಗಂ ಅನ್ನಪೂರ್ಣ!
ಬಾಲಕಿ ಕೊಲೆ ಆರೋಪಿಗೆ ಗುಂಡಿಕ್ಕಿರೋ ಪಿಎಸ್‌ಐ ಅನ್ನಪೂರ್ಣ ಚೆನ್ನಮ್ಮನ ನಾಡು ಬೆಳಗಾವಿಯ ಗುಜನಹಟ್ಟಿ ಗ್ರಾಮದಲ್ಲಿ ಹುಟ್ಟಿದವರು. ಧಾರವಾಡದ ಕೃಷಿ ವಿವಿಯಲ್ಲಿ MSC ಮುಗಿಸಿದ್ದ ಅನ್ನಪೂರ್ಣ ರೈತಾಪಿ ಕುಟುಂಬದ ಮಗಳಾಗಿ ಪಿಎಸ್ಐಯಾಗಿ ಆಯ್ಕೆಯಾಗಿದ್ರು. 2018 ರಲ್ಲಿ ಅನ್ನಪೂರ್ಣ ಪಿಎಸ್‌ಐ ಸೇವೆಗೆ ಸೇರ್ಪಡೆಯಾಗಿದ್ರು. ಹುಬ್ಬಳ್ಳಿಯ ಅಶೋಕ ನಗರದಲ್ಲಿ ಕಾರ್ಯ ನಿರ್ವಹಿಸ್ತಿರೋ ಅನ್ನಪೂರ್ಣ 2024 UPSC ಪರೀಕ್ಷೆ ಬರೆದು ಪ್ರಿಲಿಮ್ಸ್ ಕೂಡ ಕ್ಲಿಯರ್ ಮಾಡಿದ್ದಾರೆ.
ಇದೇ ಪಿಎಸ್‌ಐ ಅನ್ನಪೂರ್ಣ ಅವರ ಬಗ್ಗೆ ಇದೀಗ ರಾಜ್ಯದ ಮನೆ ಮನೆಗಳಲ್ಲಿ ಚರ್ಚೆಯಾಗುತ್ತಿದೆ. ಈ ದಿಟ್ಟ ಮಹಿಳಾ ಅಧಿಕಾರಿಣಿಯನ್ನ ಜನರು ತಮ್ಮ ಮನೆ ಮಗಳಂತೆ ನೋಡುತ್ತಿದ್ದಾರೆ. ಅನ್ನಪೂರ್ಣ ಅವರಿಗೆ ಮುಂದಿನ ತಿಂಗಳು ಮದುವೆ ಕೂಡ ಫಿಕ್ಸ್ ಆಗಿದೆಯಂತೆ. ಹೀಗಿರುವಾಗ್ಲೂ ಅನ್ನಪೂರ್ಣ ತಮ್ಮ ಪ್ರಾಣ ಪಣಕ್ಕಿಟ್ಟು ಜೀವ ಬಿಟ್ಟ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿದ್ದಾರೆ.
ಮುಂದಿನ ತಿಂಗಳಲ್ಲೇ ಮದುವೆ
ಚೆನ್ನಮ್ಮನ ನೆಲದವರಾಗಿರುವ ಅನ್ನಪೂರ್ಣ ಅವರಿಗೆ ಶೌರ್ಯ ಎನ್ನುವುದು ರಕ್ತದಲ್ಲಿಯೇ ಬಂದಿದೆ. ಮುಂದಿನ ತಿಂಗಳು ಅವರ ಮದುವೆ ನಿಗದಿಯಾಗಿದ್ದು, ವೈಯಕ್ತಿಕ ಜೀವನವನ್ನೂ ಲೆಕ್ಕಿಸದೇ ಆಕೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಹಂತಕನ ಸಂಹಾರ ಮಾಡಿದ್ದಾರೆ. ಬಾಲಕಿ ಕೊಲೆಯಾದಾಗ ಆಸ್ಪತ್ರೆಯಲ್ಲಿ ಮಗು ಮುಖವನ್ನು ನೋಡಿ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕಿದ್ದರು. ಅಣ್ಣಪೂರ್ಣ ಅವರ ಕರುಳು ಕಿವುಚಿದಂತಾಗಿತ್ತು. ಅಲ್ಲದೇ ಮಗುವನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿ, ತಕ್ಕ ಕ್ರಮ ಕೈಗೊಳ್ಳುವುದಾಗಿ ಶಪಥ ಮಾಡಿದ್ದರು. ಕಾಕಾತಾಳಿಯವೆಂಬಂತೆ ಅನ್ನಪೂರ್ಣ ಹಾರಿಸಿದ ಗುಂಡಿಗೆ ರಿತೇಶ್ ಬಲಿಯಾಗಿದ್ದಾನೆ. ಆದ್ರೆ, ಪಿಎಸ್‌ಐ ಹಾರಿಸಿದ ಗುಂಡು ಆತನ ಜೀವ ತೆಗೆಯುವ ಉದ್ದೇಶವಿರಲಿಲ್ಲ, ಬದಲಾಗಿ ಶರಣಾಗಲಿ ಅನ್ನೋ ಉದ್ದೇಶವಷ್ಟೇ ಇತ್ತು.
ಸಾಹಸಕ್ಕೆ ಸಚಿವ ಲಾಡ್ ಸಲ್ಯೂಟ್!
ಕೀಚಕನ ಕ್ರೌರ್ಯದ ಕಥೆ ಘಟಾನುಘಟಿ ರಾಜಕಾರಣಿಗಳ ಕಣ್ಣಲ್ಲೂ ನೀರು ತಂದಿತ್ತು. ಅವರಲ್ಲೂ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿತ್ತು. ಈ ಮಗುವಿನ ಕಥೆ ಕೇಳಿ ಸಾಕಷ್ಟು ಹಿರಿಯರು ನೊಂದುಹೋಗಿದ್ದರು.
ಬಿಹಾರದ ಪಾಪಿ ಮಗುವನ್ನ ಕೊಂದಿದ್ದು, ಪೊಲೀಸರ ಗುಂಡೇಟಿಗೆ ಅವನು ಬಲಿಯಾದ ಸುದ್ದಿ ಕೇಳಿ ರಾಜಕಾರಣಿಗಳೂ ರಾಜಕೀಯದ ಮಾತುಗಳನ್ನ ಆಡಲು ಹೋಗಲಿಲ್ಲ. ಪ್ರಕರಣದ ತೀವ್ರತೆ ಅರಿತ ಸಚಿವ ಸಂತೋಷ್ ಲಾಡ್ ಕೂಡ ಮೃತ ಮಗುವನ್ನ ನೋಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ರು. ಇದಾದ ಮೇಲೆ ಗಾಯಗೊಂಡಿದ್ದ ಅನ್ನಪೂರ್ಣರನ್ನ ಭೇಟಿ ಮಾಡಿದ್ರು..ಲೇಡಿ ಪಿಎಸ್‌ಐ ಶೌರ್ಯಕ್ಕೆ ಸೆಲ್ಯೂಟ್ ಹೊಡೆದ್ರು. ಇದರ ಜೊತೆಗೆ ಇಂತಹ ಘಟನೆ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದ್ರು.
ಇವತ್ತು ಹುಬ್ಬಳ್ಳಿಯಲ್ಲಿ ಬಾಲಕಿ ಆತ್ಮಕ್ಕೆ ಶಾಂತಿ ಸಿಗೋದ್ರ ಹಿಂದೆ ಪೊಲೀಸ್ ಆಯುಕ್ತ ಶಶಿಕುಮಾರ್ ಪಾತ್ರ ಇದೆ. ಕಳೆದ ಒಂಬತ್ತು ತಿಂಗಳ ಹಿಂದೆ ಹುಬ್ಬಳಿಗೆ ಕಾಲಿಟ್ಟಿದ್ಟ ಖಡಕ್ ಕಮಿಷನರ್ ಶಶಿಕುಮಾರ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅನೇಕ ಕ್ರಮ ಕೈಗೊಂಡಿದ್ದಾರೆ. ನಗರಕ್ಕೆ ಎಂಟ್ರಿ ಕೊಡ್ತಿದ್ತಂತೆ ಮಾದಕ ವಸ್ತುಗಳ ಸೇವನೆಗೆ ಮಟ್ಟ ಹಾಕೋದಕ್ಕೆ ಆಪರೇಷನ್ಗಳನ್ನ ಮಾಡಿದ್ದಾರೆ. ಇದಷ್ಟೇ ಅಲ್ಲ ರೌಡಿಶೀಟರ್ಗಳ ಹೆಡೆಮುರಿ ಕಟ್ಟೋದ್ರಲ್ಲೂ ಡೇರಿಂಗ್ ಅನಿಸಿಕೊಂಡಿರೋ ಶಶಿಕುಮಾರ್ರವರ ಸಾರಥ್ಯದಲ್ಲೇ, ಬಿಹಾರಿ ಕೀಚಕನ ಸೆರೆ ಹಿಡಿಯೋದಕ್ಕೆ ಬಲೆ ಬೀಸಲಾಗಿತ್ತ. ಇವತ್ತು ಇವರ ಕಾರ್ಯವೈಖರಿಗೆ ಸಾಕ್ಷಿ ಎಂಬಂತೆ ಪಾಪಿಯೊಬ್ಬನ ಸಂಹಾರ ಕೂಡ ನಡೆದಿದೆ.
ಕೊಲೆ ಆರೋಪಿಯೇನು ಎನ್‌ಕೌಂಟರ್‌ನಲ್ಲಿ ಜೀವ ಬಿಟ್ಟಿದ್ದಾನೆ. ಆದರೆ ಮಗಳ ಕಳೆದುಕೊಂಡಿರುವ ಆ ಕುಟುಂಬದ ನೋವು ಯಾವತ್ತಿಗೂ ಮಾಸುವುದಿಲ್ಲ. ಇನ್ನುಮುಂದೆಯಾದರೂ ರಾಜ್ಯದಲ್ಲಿ ಇಂಥಾ ಕೃತ್ಯಗಳು ಮರುಕಳಿಸದೇ ಇರಲಿ ಅನ್ನೋದೆ ಎಲ್ಲರ ಆಶಯ.
ಸರಿಯಾದ ಕ್ರಮ:
ಐದು ವರ್ಷದ ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿಯ ಎನ್‌ಕೌಂಟರ್ ಮತ್ತು ಈ ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹುಬ್ಬಳ್ಳಿ ಪೊಲೀಸ್ ಮಹಿಳಾ ಪಿಎಸ್‌ಐ ಅನ್ನಪೂರ್ಣ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಪಿಎಸ್‌ಐ ಅನ್ನಪೂರ್ಣ ಅವರ ದಿಟ್ಟತನವನ್ನು ಕೊಂಡಾಡುತ್ತಿರುವ ರಾಜ್ಯದ ಜನತೆ, ಆರೋಪಿ ರಿತೇಶ್ ಕುಮಾರ್ ಎನ್‌ಕೌಂಟರ್ ಸರಿಯಾದ ಕ್ರಮ ಎಂದು ಹೇಳುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿಯ ಎನ್‌ಕೌಂಟರ್, ಇದೀಗ ಇಡೀ ದೇಶಾದ್ಯಂತ ಚರ್ಚೆಯಾಗುತ್ತಿದೆ. ರಿತೇಶ್ ಕುಮಾರ್ ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರವಹಿಸಿದ ಹುಬ್ಬಳ್ಳಿಯ ಮಹಿಳಾ ಪೊಲೀಸ್ ಅಧಿಕಾರಿ ಅನ್ನಪೂರ್ಣ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಹೌದು, ಹುಬ್ಬಳ್ಳಿ ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿಯ ಎನ್‌ಕೌಂಟರ್‌ನಲ್ಲಿ ಪಿಎಸ್‌ಐ ಅನ್ನಪೂರ್ಣ ನಿರ್ವಹಿಸಿದ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪಿಎಸ್‌ಐ ಅನ್ನಪೂರ್ಣ ಅವರ ಬಗ್ಗೆ ಇದೀಗ ರಾಜ್ಯದ ಮನೆ ಮನೆಗಳಲ್ಲಿ ಚರ್ಚೆಯಾಗುತ್ತಿದ್ದು, ಈ ದಿಟ್ಟ ಅಧಿಕಾರಿಣಿಯನ್ನು ಜನರು ತಮ್ಮ ಮನೆ ಮಗಳಂತೆ ನೋಡುತ್ತಿದ್ದಾರೆ.
ಆರೋಪಿ ರಿತೇಶ್ ಕುಮಾರ್ ಎನ್‌ಕೌಂಟರ್ ಘಟನೆಯಲ್ಲಿ ಪಿಎಸ್‌ಐ ಅನ್ನಪೂರ್ಣ ಅವರೂ ಕೂಡ ಗಾಯಗೊಂಡಿದ್ದು, ಅವರಿಗೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಿಎಸ್‌ಐ ಅನ್ನಪೂರ್ಣ ಅವರ ಚೇತರಿಕೆಗೆ ಇಡೀ ರಾಜ್ಯದ ಜನ ಪ್ರಾರ್ಥಿಸುತ್ತಿದ್ದಾರೆ. ಇದೇ ವೇಳೆ ಆಕೆಯ ದಿಟ್ಟತನವನ್ನು ಜನರು ಕೊಂಡಾಡುತ್ತಿದ್ದಾರೆ.
ಪಿಎಸ್‌ಐ ಅನ್ನಪೂರ್ಣ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳಾಗುತ್ತಿದ್ದು, ನೆಟ್ಟಿಗರು ಈ ಅಧಿಕಾರಿಯನ್ನು “ಭದ್ರಕಾಳಿ” ಎಂದು ಕೊಂಡಾಡಿದ್ದಾರೆ. ಅನೇಕರು ಆಕೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆ ನೀಡಿದ “ಪಿಎಸ್‌ಐ ಅನ್ನಪೂರ್ಣ ಅವರಿಗೆ ಧನ್ಯವಾದ” ಎಂದು ಹೇಳಿದ್ದಾರೆ.
ಘಟನೆಯ ವಿವರ
ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊಲೆ ಆರೋಪಿ ರಿತೇಶ್ ಕುಮಾರ್ ಎನ್‌ಕೌಂಟರ್ ಹೇಗಾಯಿತು ಎಂಬುದನ್ನು ವಿವರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಕಾಣೆ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಆಕೆಯ ಶವ ಇಲ್ಲಿನ ವಿಜಯನಗರದ ಶೆಡ್‌ವೊಂದರಲ್ಲಿ ಸಿಕ್ಕಿತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಸಿಸಿಟಿವಿ ಕ್ಯಾಮರಾ ಮತ್ತು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ, ಆರೋಪಿ ಬಿಹಾರ ಮೂಲದ ರಿತೇಶ್ ಕುಮಾರ್ ಎಂಬಾತನನ್ನು ಬಂಧಿಸಿದರು.
ಆದರೆ ಆರೋಪಿ ರಿತೇಶ್ ಕುಮಾರ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಮತ್ತು ಆತನ ದಾಖಲೆಗಳನ್ನು ಪರಿಶೀಲಿಸಲು, ಪೊಲೀಸರು ಆತನನ್ನು ತಾರಿಹಾಳ ಸೇತುವೆ ಬಳಿ ಇರುವ ಪಾಳು ಬಿದ್ದ ಮನೆಯೊಂದಕ್ಕೆ ಕರೆದೊಯ್ದಾಗ, ಆರೋಪಿಯು ಪೊಲೀಸರತ್ತ ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಮಹಿಳಾ ಪೊಲೀಸ್ ಅಧಿಕಾರಿ ಅನ್ನಪೂರ್ಣ, ಮೊದಲು ಏರ್‌ಫೈರ್ ಮಾಡಿ ಆರೋಪಿಯನ್ನು ತಡೆಯಲೆತ್ನಿಸಿದ್ದಾರೆ. ಆದರೆ ಆತ ಅನ್ನಪೂರ್ಣ ಅವರ ಮೇಲೂ ಹಲ್ಲೆ ನಡೆಸಿ ಓಡಿ ಹೋಗುತ್ತಿದ್ದಾಗ, ಪಿಎಸ್‌ಐ ಅನ್ನಪೂರ್ಣ ಅವರು ಆತನ ಕಾಲು ಮತ್ತು ಬೆನ್ನಿನ ಭಾಗಕ್ಕೆ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಆರೋಪಿಯನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ರಿತೇಶ್ ಕುಮಾರ್ ಮಾರ್ಗ ಮಧ್ಯೆಯೇ ಅಸುನೀಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆರೋಪಿ ರಿತೇಶ್ ಕುಮಾರ್ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಪಿಎಸ್‌ಐ ಅನ್ನಪೂರ್ಣ ಮತ್ತು ಇತರ ಇಬ್ಬರು ಪೊಲೀಸ್ ಸಿಬ್ಬಂದಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.