ಕಪ್ಪು ಅರಿಶಿನವು ಹಲವಾರು ಔಷಧೀಯ ಗುಣಗಳಿಂದ ಕೂಡಿದೆ. ಇದರ ಔಷಧೀಯ ಗುಣಗಳಿಂದಾಗಿ ಇದರ ಬೆಲೆ ತುಂಬಾ ಹೆಚ್ಚಾಗಿದೆ.
ಮಾಹಿತಿಯ ಪ್ರಕಾರ, ಕಪ್ಪು ಅರಿಶಿನವು ಅತ್ಯಂತ ದುಬಾರಿ ಮಾರಾಟವಾದ ಉತ್ಪನ್ನಗಳಲ್ಲಿ ಒಂದಾಗಿದೆ. ಕಪ್ಪು ಅರಿಶಿಣ ಕೃಷಿ ಮಾಡಿ ಅಪಾರ ಲಾಭ ಗಳಿಸುತ್ತಿದ್ದಾರೆ. ಕಪ್ಪು ಅರಿಶಿನ ಸಸ್ಯದ ಎಲೆಗಳು ಅವುಗಳ ನಡುವೆ ಕಪ್ಪು ಪಟ್ಟಿಯನ್ನು ಹೊಂದಿರುತ್ತವೆ

ಬಾಗಲಕೋಟೆ ಜಿಲ್ಲೆಯ ತೇರದಾಳ ಸಮೀಪದಲ್ಲಿ ಧರೆಯಪ್ಪ ಕಿತ್ತೂರ ಎಂಬ ರೈತರೊಬ್ಬರು ತಮ್ಮ ಜಮೀನಿನಲ್ಲಿ ಸಾವಯವ ಗೊಬ್ಬರ ಬಳಸಿ ಹೆಚ್ಚಿನ ಇಳುವರಿ ಪಡೆದು ಕೈ ತುಂಬಾ ಆದಾಯ ಗಳಿಸುತ್ತಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕಪ್ಪು ಅರಿಶಿಣ ಬೆಳೆದಿರುವ ರೈತ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಸಾಮಾನ್ಯವಾಗಿ ಅರಿಶಿಣ ಹಳದಿ ಬಣ್ಣದಲ್ಲಿರುತ್ತದೆ. ಆದರೆ, ಇವರು ಹಿಮಾಚಲ ಪ್ರದೇಶದಲ್ಲಿ ಬೆಳೆಯುತ್ತಿರುವ ಕಪ್ಪು ಅರಿಶಿಣ ಬೀಜಗಳನ್ನು ಖರೀದಿಸಿ ತಂದು, ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ.

ಕಪ್ಪು ಅರಿಶಿಣವನ್ನು ರಾಜ್ಯದಲ್ಲಿ ಎಲ್ಲಿಯೂ ಬೆಳೆಯುವುದಿಲ್ಲ. ಆದರೆ ಇವರು ತಮ್ಮ ಜಮೀನಿನಲ್ಲಿ ಬೆಳೆದು ಪ್ರತಿ ಕೆ.ಜಿಗೆ 4 ರಿಂದ‌ 5 ಸಾವಿರ ರೂ ಹಣ ಪಡೆಯುತ್ತಿದ್ದಾರೆ. ಅರಿಶಿಣ ಆರು ತಿಂಗಳ ಬೆಳೆಯಾಗಿದ್ದು, ತಮ್ಮ ಎರಡು ಎಕರೆ ಜಮೀನಿನಲ್ಲಿ ಈ ಬೆಳೆ ಬೆಳೆದು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಸಾವಯವ ಕೃಷಿ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಕೃಷಿ ಹೊಂಡ ಮಾಡಿಕೊಂಡಿದ್ದು, ಈ ಕೃಷಿ ಹೊಂಡದಲ್ಲಿ ಆಕಳು, ಆಡು, ಎಮ್ಮೆಯ ಮೂತ್ರ ಹಾಗೂ ಸಗಣಿಯನ್ನು ಮಿಶ್ರಣ ಮಾಡಿ ಬೆಳೆಗೆ ಔಷಧಿ ರೂಪದಲ್ಲಿ ಬಳಕೆ ಮಾಡುತ್ತಿದ್ದಾರೆ. ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಿ, ಅವುಗಳನ್ನೂ ಸಹ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.

ಅಷ್ಟೇ ಅಲ್ಲ, ನನ್ನ ಇಡೀ ಜಮೀನಿನಲ್ಲಿ ಬೆಳೆಗಳಿಗೆ ಸಂಗೀತ ಕೇಳಿಸುವ ವ್ಯವಸ್ಥೆ ಮಾಡಿದ್ದೇನೆ. ಈ ಮೂಲಕ ಬೆಳೆಗಳನ್ನು ಪ್ರಚೋದಿಸಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದೇನೆ. ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರ ಮಾತಿನಂತೆ ಬೆಳೆಗಳಿಗೆ ಸಂಗೀತ ಕೇಳಿಸುತ್ತಿದ್ದೇನೆ. ಇದರಿಂದಾಗಿ ರೋಗಗಳ ಸಂಖ್ಯೆಯೂ ಕಡಿಮೆಯಾಗಿದೆ. ಶೇ.5ರಿಂದ 10ರಷ್ಟು ಇಳುವರಿಯನ್ನೂ ಪಡೆಯುತ್ತಿದ್ದೇನೆ ಎನ್ನುತ್ತಾರೆ ಧರೆಯಪ್ಪ ಕಿತ್ತೂರ.

*ಬಿಪಿ, ಶುಗರ್‌, ಕ್ಯಾನ್ಸರ್‌ಗೆ ಮದ್ದು:*

ಕರಿ ಅರಿಶಿಣದಿಂದ ಬಿಪಿ, ಶುಗರ್, ಕ್ಯಾನ್ಸರ್ಗಳನ್ನು ತಡೆಗಟ್ಟಬಹುದು. ರಾಸಾಯನಿಕಗಳ ಬಳಕೆಯಿಂದಾಗಿ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಇದನ್ನು ಹೆಚ್ಚಿಸಿಕೊಳ್ಳಬೇಕಾದ್ರೆ ಕರಿ ಅರಿಶಿಣವನ್ನು ಬಳಕೆ ಮಾಡಬೇಕು. ರಾತ್ರಿ ಬಿಸಿನೀರಿನಲ್ಲಿ ಕರಿ ಅರಿಶಿಣವನ್ನು ಹಾಕಿ ಬೆಳಗ್ಗೆ ಕುಡಿಯುವುದರಿಂದ ನಮ್ಮ ದೇಹದಲ್ಲಿನ ತ್ಯಾಜ್ಯ ಹೊರಹೋಗಿ ದೇಹ ಶುದ್ಧೀಕರಣವಾಗುತ್ತದೆ. ಅಲ್ಲದೇ, ಬರುವಂತಹ ರೋಗವನ್ನು ತಡೆಗಟ್ಟುವ ಶಕ್ತಿ ಇದಕ್ಕಿದೆ ಎನ್ನುತ್ತಾರೆ ಧರೆಯಪ್ಪ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ