ಜಾಗೀರ್ದಾರ್*
ಐರ್ಲೆಂಡ್ ದೇಶದಲ್ಲಿ ಮೊದಲ ಬಾರಿಗೆ “ಐರ್ಲೆಂಡ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ”, (IE SRS Brundavana) ಸಂಘಟನೆಯಿಂದ ಆಯೋಜಿಸಿದ್ದ ಶ್ರೀ ರಾಮನ ಪುಣ್ಯ ಜನ್ಮೋತ್ಸವವನ್ನು ಏಪ್ರಿಲ್ 6ನೇ ತಾರೀಖಿನಂದು ವಿಜೃಂಭಣೆಯಿಂದ ಆಚಾರಿಸಲಾಯಿತು. ಐರ್ಲೆಂಡ್ ದೇಶದ ಲಿಮೆರಿಕ್ (Limerick) ನಗರದಲ್ಲಿರುವ ಅಹನೆ ಜಿ ಎ ಎ (Ahane GAA club) ಸಮುದಾಯ ಭವನದಲ್ಲಿ ನಡೆದ ಈ ಪವಿತ್ರ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ತಮ್ಮ ಭಾವನಾತ್ಮಕ ನಂಬಿಕೆ ಹಾಗು ಶ್ರದ್ಧೆಯನ್ನು ತೋರಿದರು. ಆಯೋಜಕರದ IE SRS Brundavana-ಇವರ ವತಿಯಿಂದ ಮೋಹನ್‌ಕುಮಾರ್ ಕೃಷ್ಣಪ್ಪ, ಮಹೇಶ್ ದೇಶಪಾಂಡೆ, ಸಚಿನ್ ಕಡಾಡಿ, ಕೃಷ್ಣಮೂರ್ತಿ, ರಮ್ಯಾ ದ್ವಾರಕಾನಾಥ್, ಪವನ್ ಗುರುರಾಜ್ ರಾವ್, ಹಾಗು ಐರ್ಲೆಂಡ್ ನಾಡಿನ ಸಮಸ್ತ ಸನಾತನ ಧರ್ಮದ, ಶ್ರೀ ಗುರು ರಾಘವೇಂದ್ರ ಸ್ವಾಮೀಗಳ ಹಾಗು ಶ್ರೀ ರಾಮನ ಭಕ್ತರು ಕೂಡಿ ಪ್ರಭು ಶ್ರೀ ರಾಮನ ಜನ್ಮದಿನವಾದ ಶ್ರೀ ರಾಮ ನವಮಿಯಂದು ಅತ್ಯಂತ ಭಕ್ತಿ ಭಾವದಿಂದ ನಡೆಸಿದರು.
ಶ್ರೀ ರಾಮನವಮಿಯ ಹಿಂದಿನ ದಿನ "IE SRS Brundavana"ದ ಮಹಿಳಾ ಸದಸ್ಯರಾದ ಶ್ರೀಮತಿ ಪ್ರಿಯಾಂಕ, ಶ್ರೀಮತಿ ಸವಿತಾ, ಶ್ರೀಮತಿ ಅನು, ಶ್ರೀಮತಿ ಅರ್ಚನಾ, ಶ್ರೀಮತಿ ರಮ್ಯಾ, ಶ್ರೀಮತಿ ಚಂದನ, ಶ್ರೀಮತಿ ಶಾಲಿನಿ, ಶ್ರೀಮತಿ ಶ್ರೀವಿದ್ಯಾ, ಶ್ರೀಮತಿ ಪ್ರವೀಣಾ, ಇನ್ನಿತರೆಲ್ಲರೂ ಒಟ್ಟಾಗಿ ಸೇರಿ ಮಂದಿರವನ್ನು(ಸಮುದಾಯ ಭವನ) ಸ್ವಚ್ಛ ಮಾಡಲು, ಹೂವು, ಹಾರ ಮಾಡುವುದರಲ್ಲಿ, ತರಕಾರಿ ಹೆಚ್ಚುವುದು, ಮುಂದಿನ ದಿನದ ಆಚರಣೆಗೆ ಬೇಕಾದ ಎಲ್ಲಾ ರೀತಿಯಲ್ಲಿ ಅಣಿ ಮಾಡಿದರು. ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಹಾಸ್ಯ ಮಾತುಗಳಿಂದ ವಾತಾವರಣವನ್ನು ಹಿಗ್ಗಿಸುತ್ತಾ ಹಬ್ಬದ ಪೂರ್ವಸಿದ್ಧತೆ ಗಳನ್ನ ಪೂರ್ಣಗೊಳಿಸಿದರು.
ಶ್ರೀ ರಾಮನವಮಿ ದಿನದಂದು ಶ್ರೀರಾಮ, ಮಾತೆ ಸೀತೆ, ಲಕ್ಷ್ಮಣ ಮತ್ತು ಹನುಮಂತರಿಗೆ ವಿಶೇಷ ಪೂಜೆ ನಡೆಯಿತು. ಸಂಕಲ್ಪ, ಪಂಚಾಮೃತ ಸೇವೆ, ಅಲಂಕಾರ ಸೇವೆ, ವೇದ ಸೂಕ್ತಗಳು, ವಿಷ್ಣು ಸಹಸ್ರನಾಮ ಪಠಣ, ಅನ್ನದಾನ ಸೇವೆ, ಪ್ರಸಾದ ವಿತರಣೆ ಹಾಗು ಹಲವಾರು ಸೇವಾಕಾರ್ಯಗಳು ನಡೆದವು. ಶ್ರೀ ಕೃಷ್ಣಮೂರ್ತಿ ಮತ್ತೆ ಶ್ರೀ ಸಂದೀಪ ಪುರೋಹಿತ, ಇವರ ನೇತೃತ್ವದಲ್ಲಿ ಎಲ್ಲಾ ಪೂಜಾಕಾರ್ಯಗಳು ಮಂಗಳಕರವಾಗಿ ನೆರವೇರಿತು.
ಮಕ್ಕಳ ರಾಮಲೀಲಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, Dublin ನಗರ ಮೂಲದ, 4 ರಿಂದ 11 ವರ್ಷ ವಯಸ್ಸಿನ ಮಕ್ಕಳು ರಾಮಾಯಣದ ಪ್ರಸಂಗಗಳನ್ನು ನಾಟಕ ರೂಪದಲ್ಲಿ ಪ್ರದರ್ಶಿಸಿದರು. ರಾಮನ ಜನ್ಮ, ಸೀತಾ ಸ್ವಯಂವರ ಮಹೋತ್ಸವ, ಕೈಕೇಯಿಯ ಎರಡು ವರಗಳು, ರಾಮನ ಹದಿನಾಕು ವರ್ಷ ವನವಾಸ, ಭರತನ ಪಟ್ಟಾಭಿಷೇಕ, ಶೂರ್ಪಣಖಿಯ ಪ್ರಸಂಗ, ಸೀತಾಪಹರಣದ ಹೃದಯವಿದ್ರಾವಕ ದೃಶ್ಯ, ಹನುಮಂತ ಮತ್ತು ಸುಗ್ರೀವರ ಭೇಟಿ, ಹನುಮಂತನ ಲಂಕಾ ಪ್ರವೇಶ, ಅಶೋಕವನದಲ್ಲಿ ಸೀತೆಗೆ ರಾಮನ ಉಂಗುರ ಕೊಡುವ ಸನ್ನಿವೇಶ , ಲಂಕಾದಹನ, ವಾನರ ಸಹಾಯದಿಂದ ರಾಮಸೇತುವೆ , ರಾಮ-ರಾವಣರ ಯುದ್ಧ, ಅಂತಿಮವಾಗಿ, ರಾವಣ ವಧೆಯ ದೃಶ್ಯ ಹಾಗು ಶ್ರೀರಾಮರ ಪಟ್ಟಾಭಿಷೇಕ ಕಥೆಗಳನ್ನು ಅವರು ಮನಸ್ಸೆಳೆಯುವಂತೆ ನಟಿಸಿದರು.ಪ್ರತಿ ಮಗುವಿನ ವೇಷಭೂಷಣಗಳು ಅತ್ಯುತಮವಾಗಿ ಆಯೋಜಿಸಲ್ಪಟ್ಟಿತ್ತು. ರಾವಣನ ದಶಮುಖ ಮತ್ತೆ ರಾಮನ ಬಿಲ್ಲು ವಿಶೇಷ ಆಕರ್ಷಣೆಗಳಾಗಿದ್ದವು. ಹನುಮಂತನ ಪಾತ್ರದಲ್ಲಿ ಚಿಕ್ಕ ಹನುಮ, ಭಕ್ತರನ್ನು ರಂಜಿಸಿದರು. ಮಕ್ಕಳ ತುಂಟ ತಮಾಷೆಗಳ ನಡುವೆಯು, ರಾಮಾಯಣದ ಪಾವಿತ್ರ್ಯತೆಯನ್ನು ಉಳಿಸಿದರು ಎಂಬುದು ಗಮನಾರ್ಹ.