ಸಿಂಧೂ ನದಿಯ ಒಪ್ಪಂದ: ಬದಲಾಯಿಸುವ ಸಮಯ

ಗಂಗಾ, ಯಮುನ, ಶುತದ್ರಿ (ಸಟ್ಲೆಜ್), ಪರುಷ್ಣಿ (ರಾವಿ), ಅಸಿಕ್ನಿ (ಚೀನಾಬ್), ವಿತಸ್ತೆ (ಜೀಲಮ್), ಮತ್ತು ಸುಷೋಮಾ (ಸಿಂಧೂ) ಈ ಏಳನ್ನು (ಸಪ್ತಸ್ವಸಾ -ಗಂಗಾದಿ ಸಪ್ತನದಿಗಳು) ಪ್ರಮುಖ ನದಿಗಳನ್ನಾಗಿಯೂ, ಮರುದ್ವೃದೆ (ಜೀಲಮ್ ಮತ್ತು ಚೀನಾಬ್ ನದಿಗಳ ಸಂಗಮದಿಂದಾದ ಒಂದು ನದಿ) ಮತ್ತು ಆರ್ಜಿಕಾ (ಬಿಯಾಸ್) ಈ ಎರಡು ಉಪನದಿಗಳು ಎಂದು ಋಗ್ವೇದದಲ್ಲಿ ವಿವರಣೆ ಇದೆ. ಭಾರತೀಯ ಸಂಸ್ಕೃತಿಯಲ್ಲಿ ನದಿಗಳಿಗೆ ವಿಶೇಷವಾದ ಪೂಜನೀಯ ಸ್ಥಾನವಿದೆ. ನದೀ ಕೇಂದ್ರಿತವಾದ ಸಂಸ್ಕೃತಿ ನಮ್ಮದು. ಸಿಂಧೂನದಿ ಪಾತ್ರದ ಜನಗಳನ್ನು “ಹಿಂದೂಗಳು” ಎಂದು, ಸನಾತನ ಧರ್ಮವನ್ನು “ಹಿಂದೂ ಧರ್ಮ” ಎಂದು ಅಪಭ್ರಂಶಗೊಳಿಸಿದ್ದು ಪರ್ಶಿಯನ್ನರು ಮತ್ತು ಗ್ರೀಕರು. ಸಿಂಧೂನದಿ ಯೂರೋಪಿಯನ್ನರ ಬಾಯಲ್ಲಿ “ಇಂಡಸ್” ಆಯಿತು ಮತ್ತು ನಮ್ಮ ದೇಶ, “ಇಂಡಿಯಾ” ಎಂದು ಕರೆಯಲ್ಪಟ್ಟಿತು.

ಕೈಲಾಸ ಪರ್ವತಶ್ರೇಣಿಯಲ್ಲಿ ಮಾನಸ ಸರೋವರದ ಸಮೀಪದಲ್ಲಿ ಉಗಮಿಸಿ, ಲಡಾಖಿನ, ಕಾಶ್ಮೀರದ ಪ್ರದೇಶಗಳಲ್ಲಿ ಹರಿಯುತ್ತಾ ಉಪನದಿಗಳನ್ನು ಜೋಡಿಸಿಕೊಳ್ಳುತ್ತಾ, ನೆಲ, ಜನ, ನಗರ, ಹಳ್ಳಿಗಳನ್ನು ಪೋಷಿಸುತ್ತಾ ಕೊನೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಳಿ ಅರಬ್ಬೀ ಸಮುದ್ರದಲ್ಲಿ ಲೀನವಾಗುವ ಈ ಸಿಂಧೂನದಿ ಕ್ರಮಿಸುವ ದೂರ ಬರೋಬ್ಬರಿ 3200 ಕಿಲೋಮೀಟರುಗಳಷ್ಟು. ಸುಮಾರು 800 ಕಿಮೀಗಳಷ್ಟು ಭಾರತದಲ್ಲಿ ಹರಿಯುತ್ತದೆ ಈ ನದಿ, ಆದರೆ ಈ ನದಿಯ ನೀರನ್ನು  ಅವಶ್ಯಕತೆ ಇರುವ ಜನಗಳಿಗೆ ನೆಲಗಳಿಗೆ ಸಂಪೂರ್ಣ ವಾಗಿ ಒದಗಿಸುವ ಅಧಿಕಾರ ಭಾರತಕ್ಕಿಲ್ಲ.

ಎಂತಹ ವಿಪರ್ಯಾಸ ನೋಡೀ..ಯಾವ ನದೀ ಪಾತ್ರದ ಹೆಸರಿನಲ್ಲಿ ಸಿಂಧೂಸ್ಥಾನ..ಹಿಂದೂಸ್ಥಾನವೆಂದು ಈ ದೇಶವನ್ನು ಸಂಭೋದಿಸಲಾಗುತ್ತದೋ ಆ ದೇಶಕ್ಕೆ ಸಿಂಧೂ ನದಿಯ ನೀರಿನ್ನು ಬಾಯಾರಿದ ಬಾಯಿಗಳ ತೃಷೆ ನೀಗಿಸುವ ಅಧಿಕಾರವಿಲ್ಲ, ಏಕೆಂದರೆ ಈ ನದಿಯ ಮೇಲೆ ಪಾಕಿಸ್ತಾನಕ್ಕೆ ಅನಿರ್ಬಂಧ ಅಧಿಕಾರವಿದೆ. ಇಂತಹದೊಂದು ದುರಂತಕ್ಕೆ ಸಹಿ ಹಾಕಿದವರು ಬೇರಾರೂ ಅಲ್ಲ, ದೇಶದ ಪ್ರಜೆಗಳ ಹಿತರಕ್ಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದ್ದ ಪ್ರಧಾನಮಂತ್ರಿ ಜವಹರಲಾಲ್ ನೆಹರು.19 ಸೆಪ್ಟೆಂಬರ್ 1960 ರಂದು ಲಾಹೋರಿನಲ್ಲಿ ವಿಶ್ವ ಬ್ಯಾಂಕನ ಮಧ್ಯಸ್ತಿಕೆಯಲ್ಲಿ ಅಧಿಕೃತಗೊಂಡ ಈ ಅವಘಡದ ಹೆಸರು Indus Water Treaty (IWT) ಸಿಂಧೂ ನದಿಯ ಒಪ್ಪಂದ. ಇದೊಂದು ಅಸಮತೋಲನ ಸಂಧಾನ, ಆದರೂ ಈ 64 ವರ್ಷಗಳಲ್ಲಿ ಪಾಕೀಸ್ತಾನದ ದುರ್ನಡತೆ, ಎರಡು ದೇಶಗಳ ನಡುವೆ ನಡೆದ ಮೂರು ಯುದ್ಧಗಳು, ಅಸಂಖ್ಯಾತ ಪಾಕಿಸ್ತಾನ ನಿಯೋಜಿತ ಭಯೋತ್ಪಾದಕರ ದಾಳಿ ಎಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡು ಈ ಸಂಧಾನಕ್ಕೆ ಚ್ಯುತಿ ಬಾರದಂತೆ ಸಿಂಧೂನದಿಯನ್ನು ಪಾಕಿಸ್ತಾನಕ್ಕೆ ಹರಿಯ ಬಿಡಲಾಗುತ್ತಿದೆ.

border 1

ಯಾಕೆ ಬೇಕಿತ್ತು ಇಂತಹದೊಂದು ಒಪ್ಪಂದ, ಏನಿದರ ಹಿನ್ನಲೆ, ಏನಿದೆ ಈ ಒಪ್ಪಂದದಲ್ಲಿ?

IWT  ಸಿಂಧೂನದಿಯ ಪಾತ್ರಗಳಲ್ಲಿರುವ ಆರು ನದಿಗಳನ್ನು ಮೂರು ಪೂರ್ವದ ನದಿಗಳು ಮತ್ತು ಮೂರು ಪಶ್ಚಿಮದ ನದಿಗಳಾಗಿ ವಿಂಗಡಿಸಿದೆ. ಬಿಯಾಸ್, ಸಟ್ಲೆಜ್ ಮತ್ತು ರಾವಿ ಈ ಮೂರು ಪೂರ್ವದ ನದಿಗಳನ್ನು ಭಾರತಕ್ಕೆ ಬಿಟ್ಟುಕೊಟ್ಟರೆ, ಸಿಂಧೂನದಿಯೂ ಸೇರಿದಂತೆ ಝೇಲಮ್ ಮತ್ತು ಚೆನಾಬ್ ಈ ಮೂರು ಪಶ್ಚಿಮದ ನದಿಗಳನ್ನು ಪಾಕಿಸ್ತಾನದ ಅಧಿಪತ್ಯಕ್ಕೆ ಬಿಟ್ಟುಕೊಡಲಾಗಿದೆ. ಅವರಿಗೆ ಮೂರು ನಮಗೆ ಮೂರು ಸಮಾ ಆಯ್ತಲ್ಲಾ! ಇಲ್ಲ..ಅದು ಹಾಗಾಗಲಿಲ್ಲ ಭಾರತಕ್ಕೆ ಬಿಟ್ಟುಕೊಟ್ಟ  ಪೂರ್ವನದಿಗಳ 34 ಮಿಲಿಯನ್ ಎಕರೆ-ಅಡಿ ನೀರನ್ನು ಭಾರತ ಉಪಯೋಗಿಸತಕ್ಕದ್ದು ಆದರೆ ಭಾರತ ಕೇವಲ 31 ಮಿಲಿಯನ್ ಎಕರೆ-ಅಡಿ ಮಾತ್ರ ಉಪಯೋಗಿಸಿಕೊಳ್ಳುತ್ತಿದೆ ಉಳಿದದ್ದೆಲ್ಲಾ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದೆ, ಇದು ಭಾರತದ ತಪ್ಪಲ್ಲವೇ? ಪಶ್ಚಿಮ ನದಿಗಳಿಂದ ಪಾಕಿಸ್ತಾನಕ್ಕೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗದಂತೆ ಭಾರತ ಈ ನದಿಗಳಿಗೆ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಅವಕಾಶವಿದೆ ಆದರೆ ಇದಕ್ಕೂ ಪಾಕೀಸ್ತಾನ ಲಬಾ ಲಬಾ ಅಂತಾ ಹೊಡೆದುಕೊಳ್ಳುತ್ತಿದೆ. ಯಾಕೆ ಇಂತಹ ಅಸಮಾನತೆ ನೀರು ಹಂಚಿಕೆಯಲ್ಲಿ? ಇಂತಹದೊಂದು ದುರಂತಕ್ಕೆ ಸಹಿ ಹಾಕಿ ಬಂದ ನೆಹರು, ಸಂಸತ್ತಿನಲ್ಲಿ ಇದರ ಬಗ್ಗೆ ಅಪಸ್ವರವೆತ್ತಿದವರಿಗೆ ಕೊಟ್ಟ ವಿವರಣೆಯಂತೂ ಇನ್ನೂ ಹಾಸ್ಯಸ್ಪದವೆನಿಸುವಷ್ಟು ಅಸಹನೀಯವಾದ ಸಮಜಾಯಿಷಿ. ನೆಹರೂ ಹೇಳಿಕೆಯ ಪ್ರಕಾರ ಇಂತಹದೊಂದು ಸಂಧಾನದಿಂದ ಪಾಕೀಸ್ತಾನದ ಜೊತೆ ಶಾಂತಿಯ ಹೊಂದಾಣಿಕೆ ಖಚಿತವಂತೆ! ಹೌದೇ ಮುಂದೆ ಹಾಗಾಯಿತೇ? ಖಂಡಿತಾ ಇಲ್ಲ.

border 2

ಈ ಸಂಧಾನದ ಇನ್ನೊಂದು ಅವಮಾನಕರ, ಗಾಯಕ್ಕೆ ಬರೆ ಎಳೆದಂತಹ ಅಂಶ ದೇಶಕ್ಕೆ ಅರ್ಥವಾಗಿದ್ದು ಎಷ್ಟೋ ದಿನಗಳ ನಂತರ, ಅದೇನಪ್ಪಾ ಅಂದರೆ, ಪಾಕಿಸ್ತಾನದಲ್ಲಿ ಈ ನದಿಗಳ ನೀರು ಹರಿಸಲು ಬೇಕಾಗಿರುವ ಕಾಲುವೆಗಳನ್ನು ಕಟ್ಟಲು, ಹಳೆಯವನ್ನು ನವೀಕರಿಸಲು ತಗಲುವ ವೆಚ್ಚವನ್ನು ಭಾರತ ಕೊಡಬೇಕು. ಅದೆಷ್ಟು ಅಂತೀರಾ ಬರೋಬ್ಬರಿ 62,060,000 ಪೌಂಡುಗಳು..ಅಂದರೆ ಸುಮಾರು 12,000 ಕೋಟಿಗಳಷ್ಟು! ಸುಮಾರು 125 ಟನ್ ಚಿನ್ನದ ಬೆಲೆ. ಈಗಿನ ಬೆಲೆಯಲ್ಲಿ ಎಷ್ಟಾಗಬಹುದು ಲೆಕ್ಕ ಹಾಕಿ…ಬರೋಬ್ಬರಿ 70,000 ಕೋಟಿ ರುಪಾಯಿಳಷ್ಟು. ಇದನ್ನು 1960 ರಿಂದ 1970 ರವರೆಗೆ ಹತ್ತು ಕಂತುಗಳಲ್ಲಿ ಕೊಡಲಾಯಿತು. ಈ ಮಧ್ಯೆ 1965 ರಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧವೂ ನಡೆಯಿತು ಎನ್ನುವುದು ನೆನಪಿರಲಿ. ಇಲ್ಲಿ ನಮ್ಮ ಸೈನಿಕರ ರಕ್ತ ಹರಿಯುತ್ತಿದ್ದರೆ ಅಲ್ಲಿ ಝೇಲಮ್ , ಚೆನಾಬ್ ಮತ್ತು ಸಿಂಧೂನದಿ ಸರಾಗವಾಗಿ ಪಾಕಿಸ್ತಾನಕ್ಕೆ ಹರಿದು ಸಾಗುತ್ತಿತ್ತು..ನನಗೂ ಯುದ್ಧದಲ್ಲಿ ಹರಿಯುತ್ತಿರುವ ರಕ್ತಕ್ಕೂ ಸಂಬಂಧವಿಲ್ಲಾ…ಎನ್ನುವಂತೆ.

ಇಡೀ ಪ್ರಪಂಚದಲ್ಲಿ ಯಾವ ಒಂದು ದೇಶ ತನ್ನ ಬದ್ದವೈರಿ ದೇಶದೊಂದಿಗೆ ಈ ರೀತಿಯ ಸಂಧಾನವನ್ನು ಮಾಡಿಕೊಂಡ ಉದಾಹರಣೆಗಳಿವೆಯೇ…ಗೊತ್ತಿಲ್ಲ. ಆಗಿದ್ದೆಲ್ಲಾ ಆಗಿ ಹೋಯಿತು, ಈ ಸಂಧಾನ ನಡೆದು 64 ವರ್ಷಗಳೇ ಆಗಿಹೋಯಿತು. ಪಾಕಿಸ್ತಾನ ಆ ವಿಶ್ವಾಸಕ್ಕೆ ಪಾತ್ರವಾಗುವಂತೆ ನಡೆದು ಕೊಂಡಿದೆಯೇ? ಇಲ್ಲ , ಮತ್ತೇಕೆ ನಾವು ಇಷ್ಟು ಅನುಚಿತವಾದ ಉದಾರತೆಯಿಂದ ಮೆರೆಯಬೇಕು. ಸುಮಾರು ಆರು ದಶಕಗಳಲ್ಲಿ ಸಿಂಧೂನದಿ ಪಾತ್ರದಲ್ಲಿ ವೃದ್ಧಿಸಿರುವ ಜನಸಂಖ್ಯೆಯನ್ನು ಪರಿಗಣಿಸಿ ಈ ಅವೈಜ್ಞಾನಿಕ ಒಪ್ಪಂದಕ್ಕೆ ಇತಿ ಹೇಳುವುದು ಸಮಂಜಸವಲ್ಲವೇ?

ಈಗ ಪಾಕಿಸ್ತಾನ ಏನು ಮಾಡುತ್ತಿದೆ ಎಂದರೆ ಈ ಸಿಂಧೂ ನದಿಗೆ ಅಡ್ಡಲಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದೈಮರ್ ಭಾಷಾ ಎನ್ನುವ ಪ್ರದೇಶದಲ್ಲಿ ಒಂದು ಅಣೆಕಟ್ಟು ನಿರ್ಮಿಸುತ್ತಿದೆ. ಅಸಲಿಗೆ ಈ ಡ್ಯಾಮ್ ನಿರ್ಮಿಸುತ್ತಿರುವುದು ಚೀನಾ. ಇದಕ್ಕಾಗಿ ಸುಮಾರು ಆರು ಬಿಲಿಯನ್ ಡಾಲರುಗಳಷ್ಟು ಹೂಡಿಕೆ ಮಾಡಲು ಹೊರಟಿದೆ ಚೀನಾ. ಮುಂದೇನಾಗುತ್ತದೆ ಎಂದರೆ ಪಾಕಿಸ್ತಾನ ಈ ಸಾಲ ತೀರಿಸಲಾಗದೆ ಈ ಡ್ಯಾಮಿನ ವಹಿವಾಟು, ಜೊತೆಗೆ ಆಸುಪಾಸಿನ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಡಬಹುದು. ಪರಿಣಾಮ ಊಹಿಸಿ. ನೆಹರೂ ಮತ್ತು ನಂತರ ಬಂದ ಇಂದಿರಾಗಾಂಧಿ ಯಾಕೆ ಹೀಗೆ ಭಾರತದ ಹಿತಾಸಕ್ತಿಯನ್ನು ಕಡೆಗಣಿಸಿದರು? ಯಾಕೆ ವಿಶ್ವಮಟ್ಟದಲ್ಲಿ ತಾವು ದೊಡ್ಡ ಲೀಡರುಗಳು..ಎನಿಸಿಕೊಳ್ಳುವ ಹಪಾಹಪಿಯಲ್ಲಿ ತಮ್ಮ ದೇಶವನ್ನು, ದೇಶದ ಸೈನಿಕರನ್ನು, ಪ್ರಜೆಗಳ ಹಿತಾಸಕ್ತಿಯನ್ನು ಬಲಿಕೊಟ್ಟರು?

2016 ರಲ್ಲಿ ನಡೆದ ಊರಿ ಭೂಸೈನ್ಯದ ಕ್ಯಾಂಪಿನ ಮೇಲೆ ದಾಳಿ ನಡೆದ ನಂತರ ಭಾರತ ಇನ್ನೇನು ಈ ನದಿಗಳ ಒಪ್ಪಂದವನ್ನು ರದ್ದು ಮಾಡಿ ಬಿಡುತ್ತದೇನೋ ಎನ್ನುವ ಮಟ್ಟಕ್ಕೆ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. ಮೋದಿಯವರ “ ರಕ್ತ ಮತ್ತು ನೀರು ಜೊತೆ ಜೊತೆಗೆ ಹರಿಯಲು ಸಾಧ್ಯವಿಲ್ಲಾ” ಎನ್ನುವ ಹೇಳಿಕೆಗೆ ದೇಶಕ್ಕೆ ದೇಶವೇ ಸಮ್ಮತಿಸಿತು ಆದರೆ ಪರಿಸ್ಥಿತಿ ತಣ್ಣಗಾದ ಮೇಲೆ ಮತ್ತು ಮಾನವೀಯತೆಯ ದೃಷ್ಟಿಯಿಂದ ಹಾಗೆ ಮಾಡಲಿಲ್ಲ. ಈ ಎಲ್ಲಾ ಆರು ನದಿಗಳ ಮೇಲೆ ಭಾರತ ಸಂಪೂರ್ಣ ನಿಯಂತ್ರಣ ಸಾಧಿಸಬಹುದು ಆದರೆ ಒಪ್ಪಂದಕ್ಕೆ ಬದ್ದವಾಗಿ ನಡೆದುಕೊಳ್ಳುತ್ತಿದೆ. ಅಕಸ್ಮಾತ್ ಪಾಕಿಸ್ತಾನಕ್ಕೆ ಈ ನದಿಗಳ ಮೇಲೆ ನಿಯಂತ್ರಣವಿದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ನೀವೇ ಊಹಿಸಿ.

ರಾವಿ ನದಿಯ ನೀರು ಪಾಕಿಸ್ತಾನಕ್ಕೆ ಇಲ್ಲ

ಭಾರತಕ್ಕೆ ಬಿಟ್ಟುಕೊಟ್ಟ  ಪೂರ್ವನದಿಗಳ 34 ಮಿಲಿಯನ್ ಎಕರೆ-ಅಡಿ (MAF) ನೀರನ್ನು ಭಾರತ ಉಪಯೋಗಿಸತಕ್ಕದ್ದು ಆದರೆ ಭಾರತ ಕೇವಲ 31 ಮಿಲಿಯನ್ ಎಕರೆ-ಅಡಿ ಮಾತ್ರ ಉಪಯೋಗಿಸಿಕೊಳ್ಳುತ್ತಿದೆ ಉಳಿದದ್ದೆಲ್ಲಾ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿತ್ತು. ಈಗ ಆ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲು ಭಾರತ ಮುಂದಾಗಿದೆ. ಸಿಂಧೂ ನದಿಸಮೂಹದ ಉಪನದಿಯಾದ ರಾವಿ ನದಿ ಜಮ್ಮು ಮತ್ತು ಪಂಜಾಬಿನ ನಡುವೆ ಹರಿಯುತ್ತಾ ಮುಂದೆ ಪಾಕಿಸ್ತಾನದ ಪಂಜಾಬ್ ಮೂಲಕ ಹರಿದು ಮುಂದೆ ಚೆನಾಬ್ ನದಿಯನ್ನು ಸೇರಿಕೊಳ್ಳುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಈ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ಜಮ್ಮು ಮತ್ತು ಪಂಜಾಬಿಗೆ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಲಾಗಿತ್ತು. ಈ ವಿಷಯದಲ್ಲಿ ಎರಡೂ ರಾಜ್ಯಗಳ ನಡುವೆ ವಿವಾದ ಉಂಟಾಗಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ ಆ ವಿವಾದಕ್ಕೆ ತೆರೆ ಬಿದ್ದು ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

border 3

ರಾವಿನದಿಗೆ ಅಡ್ಡಲಾಗಿ ಜಮ್ಮು ಮತ್ತು ಪಂಜಾಬಿನ ಗಡಿ ಪ್ರದೇಶವಾದ ಶಾಪುರ ಕಂಡಿ ಎಂಬಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಸುಮಾರು 3300 ಕೋಟಿ ರೂಪಾಯಿ ವೆಚ್ಚದಲ್ಲಿ  ನಿರ್ಮಿಸಿದ ಈ ಅಣೆಕಟ್ಟಿನಿಂದ ಜಮ್ಮು ಕಾಶ್ಮೀರ ಕ್ಕೆ ಸುಮಾರು 1150 ಕ್ಯೂಸೆಕ್ಸ್ ಮತ್ತು ಪಂಜಾಬಿಗೆ 5000 ಕ್ಯೂಸೆಕ್ಸ್ ನೀರನ್ನು ಬಿಡಲಾಗುವುದು. ಇದರಿಂದ ಸುಮಾರು 79,000 ಎಕರೆಗೆ ನೀರಾವರಿ ಸೌಲಭ್ಯ ದೊರಕುತ್ತದೆ. ಜೊತೆಗೆ 206 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಹಾ ಮಾಡಲಾಗುತ್ತದೆ. ಅಲ್ಲಿಗೆ ಇಲ್ಲೀವರೆಗೂ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದ್ದ ರಾವಿ ನದಿಯ ನೀರು ಸಂಪೂರ್ಣವಾಗಿ ನಿಂತು ಹೋಗುತ್ತದೆ.

ಈ ಮಧ್ಯ ನದಿ ಒಪ್ಪಂದದ ಬಗ್ಗೆ ಎರಡೂ ದೇಶಗಳ ನಡುವೆ ಬರುವ ಅಡ್ಡಿ ಆತಂಕಗಳನ್ನು ಬಗೆಹರಿಸಿಕೊಳ್ಳಲು ಒಂದು ಆಯೋಗವನ್ನು ಸ್ಥಾಪಿಸಲಾಯಿತು ಮತ್ತು ಉಭಯ ದೇಶಗಳಿಂದ ಒಬ್ಬ ಆಯುಕ್ತರನ್ನು ನಿಯಮಿಸಲಾಯಿತು. ಭಾರತದ ಭಾಗದಲ್ಲಿ ಹರಿಯುತ್ತಿರುವ ಝೀಲಮ್ ಮತ್ತು ಅದರ ಉಪನದಿ ಕಿಶನ್ ಗಂಗಾ ನದಿಗಳಿಂದ ಜಲ ವಿದ್ಯುತ್ ಶಕ್ತಿ ಉತ್ಪಾದನೆಗೆ ಪಾಕಿಸ್ತಾನ ವಿರೋಧ ವ್ಯಕ್ತ ಪಡಿಸಿ ಮತ್ತೊಮ್ಮೆ ಅಂತರಾಷ್ಟ್ರೀಯ ನ್ಯಾಯಾಲಯ ಮತ್ತು ವಿಶ್ವ ಬ್ಯಾಂಕಿಗೆ ಮೊರೆ ಹೋಯಿತು. ಉಭಯ ದೇಶಗಳ ನಡುವೆ ತೀರ್ಮಾನವಾಗಬೇಕಿದ್ದ ವಿಷಯಕ್ಕೆ ಬೇರೆ ಹೊರಗಿನವರು ಏಕೆ ಬರಬೇಕು ಎನ್ನುವುದು ಭಾರತದ ವಾದ..ಸರಿ ಅಲ್ಲವೇ?

ಪಾಕಿಸ್ತಾನದ ಈ ನಿರಂತರ ಮೊಂಡುತನಕ್ಕೆ, ನಿಷ್ಠುರ ನಿಲುವಿಗೆ ಬೇಸತ್ತ ಭಾರತ ಈಗ 25 ಜನವರಿ 2023 ಯಂದು ಪಾಕಿಸ್ತಾನಕ್ಕೆ ಎಚ್ಚರಿಕೆಯ ನೋಟೀಸ್ ನೀಡಿದೆ. ಈ ನೋಟಿಸಿನಲ್ಲಿ ಏನಿದೆ ಎಂದರೆ 64 ವರ್ಷಗಳ ಅನುಭವದ ಮತ್ತು ಈ ಅವಧಿಯಲ್ಲಿ ಕಲಿತ ಪಾಠಗಳ ಆಧಾರದ ಮೇಲೆ ಸಿಂಧೂ ನದಿ ಸಂಧಾನವನ್ನು ಮರುಪರಿಶೀಲಿಸಿ ಬದಲಾಯಿಸಲಾಗುವುದು ಎನ್ನುವ ಖಡಕ್‌ ಸಂದೇಶವನ್ನು ರವಾನಿಸಲಾಗಿದೆ. ಪಾಕಿಸ್ತಾನಕ್ಕೆ ಈ ವಿಷಯದ ಬಗ್ಗೆ ಚರ್ಚೆಗೆ ಬರಲು 90 ದಿನಗಳ ಗಡವು ಕೊಡಲಾಗಿದೆ. ಪಾಕಿಸ್ತಾನ ತನ್ನ ಮೊಂಡುತನವನ್ನು ಮುಂದುವರೆಸಿ ಚರ್ಚೆಗೆ ಬರಲಿಲ್ಲವೆಂದರೆ ಭಾರತ ಏಕಮುಖವಾಗಿ ನದಿ ಒಪ್ಪಂದವನ್ನು ಬದಲಿಸುತ್ತಾ? ನೋಡಬೇಕು.

…ವಿಂಗ್ ಕಮಾಂಡರ್ ಸುದರ್ಶನ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ