ಕಥೆ ಶಾರದಾ ಭಟ್

ಮಾವ ರಾಜಣ್ಣನವರ ಮನಸ್ಸಿನ ನೋವನ್ನು ನಿವಾರಿಸಲು ಅಂಜಲಿ ಅಂಥದ್ದೇನು ಉಪಾಯ ಹೂಡಿದಳು? ಅದರಿಂದ ಮನೆಯವರೆಲ್ಲ ಅವಳನ್ನು ಪ್ರಶಂಸಿಸುವಂತಾಯಿತೇ…….?

ಆ ರಾತ್ರಿ ಅಂಜಲಿ ಹಾಗೂ ಮನೋಜ್‌ ನಡುವೆ ಜೋರು ಜಗಳವಾಯಿತು. ಮನೋಜ್‌ ತನ್ನ ಗೆಳೆಯನ ಮನೆಯಿಂದ ಕುಡಿದು ಬಂದಿದ್ದ. ತನ್ನ ಅತ್ತೆಯ ಜೊತೆ ಮಾತಿನ ಚಕಮಕಿಯ ಬಳಿಕ ಅವಳು ಇನ್ಮುಂದೆ ತಾನು ಅತ್ತೆಯ ಮನೆಯಲ್ಲಿ ಯಾರಿಗೂ ಹೆದರುವುದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದಳು. ಈ ಎರಡು ಕಾರಣಗಳಿಂದಾಗಿ ಅವರ ನಡುವಿನ ಜಗಳ ಹೆಚ್ಚುತ್ತಲೇ ಹೋಯಿತು.

“ನೀನು ಈ ಮನೆಯಲ್ಲಿ ಇರುವ ಹಾಗಿದ್ದರೆ ಮನೆಯ ಕೆಲಸಗಳಲ್ಲಿ ಅಮ್ಮನಿಗೆ ನೆರವಾಗಬೇಕು. ನೀನು ಹರಟೆ ಹೊಡೆಯುತ್ತಾ ತಿರುಗೋದು, ಅಮ್ಮ ಮಾತ್ರ ಮನೆ ಕೆಲಸ ಮಾಡ್ತಿರಬೇಕು ಎನ್ನುವುದನ್ನು ನಾನು ಇನ್ಮುಂದೆ ಖಂಡಿತಾ ಸಹಿಸಿಕೊಳ್ಳುವುದಿಲ್ಲ,” ಮನೋಜ್‌ ನ ಜೋರು ಧ್ವನಿ ಇಡೀ ಮನೆಯಲ್ಲಿ ಪ್ರತಿಧ್ವನಿಸಿತು.

“ಇಂದು ಆಫೀಸಿನಲ್ಲಿ ಹೆಚ್ಚು ಕೆಲಸವಿದ್ದರಿಂದ ತಡವಾಗಿ ಬಂದಿದ್ದೆ. ಆದರೂ ನಾನು ಅವರೊಂದಿಗೆ ಸೇರಿ ಒಂದಿಷ್ಟು ಕೆಲಸ ಮಾಡಿದೆ. ಅಮ್ಮನ ಪ್ರತಿಯೊಂದು ಮಾತನ್ನು ನೀವು ನಿಜವೆಂದು ತಿಳಿದರೆ ಪ್ರತಿದಿನ ನನ್ನೊಂದಿಗೆ ಜಗಳ ಆಡುತ್ತಿರಬೇಕಾಗುತ್ತೆ,” ಎಂದು ಅಂಜಲಿ ಕೂಡ ಜೋರಾಗಿ ಕೂಗಿದಳು.

“ಯಾವ ದಿನ ನೀನು ಬೇಗ ಮನೆಗೆ ಬರುತ್ತೀಯೋ ಆ ದಿನ ಕೂಡ ನೀನು ಮನೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲವಂತೆ ಎಂದು ಅಮ್ಮ ದೂರು ಹೇಳುತ್ತಿರುತ್ತಾರೆ.”

“ಅದು ಸುಳ್ಳು…..”

“ನೀನು ಸುಳ್ಳುಗಾರ್ತಿ, ನನ್ನ ಅಮ್ಮ ಅಲ್ಲ.”

“ಇಲ್ಲ…. ನಿಮ್ಮ ಅಮ್ಮನೇ ಸುಳ್ಳುಗಾರ್ತಿ.”

ಆ ದಿನ ಮನೋಜ್‌ ತನ್ನ ಎರಡನೇ ಹೆಂಡತಿಯ ಮೇಲೆ ಮೊದಲ ಬಾರಿ ಕೈ ಎತ್ತಿದ್ದ. ಅವರ ಮದುವೆಯಾಗಿ ಇನ್ನೂ 2 ತಿಂಗಳು ಕೂಡ ಆಗಿರಲಿಲ್ಲ.

“ನನ್ನ ಮೇಲೆ  ಕೈ ಎತ್ತಲು ನಿಮಗೆ ಧೈರ್ಯವಾದರೂ ಹೇಗೆ ಬಂತು? ಮತ್ತೊಮ್ಮೆ ಕೈ ಎತ್ತಿ ನೋಡಿ. ನಾನು ಪೋಲಿಸ್ ಕಂಪ್ಲೇಂಟ್‌ ಕೊಡ್ತೀನಿ,” ಎಂದಳು ಅಂಜಲಿ.

ಅವಳು ಜೋರಾಗಿ ಕೂಗಿದ್ದಲ್ಲದೆ ಬೆದರಿಕೆ ಹಾಕಿದ್ದನ್ನು ಕೇಳಿಸಿಕೊಂಡು ರಾಜಣ್ಣ ಹಾಗೂ ಗೌರಮ್ಮ ಮಗ-ಸೊಸೆಯನ್ನು ಸಮಾಧಾನಗೊಳಿಸಲು ಅವನ ಕೋಣೆಗೆ ಹೋದರು.

ಕೋಪದಿಂದ ಕುದಿಯುತ್ತಿದ್ದ ಅಂಜಲಿ ತನ್ನ ಅತ್ತೆಯನ್ನು ನೋಡಿದ್ದೇ ಎಷ್ಟು ಸಾಧ್ಯವೋ ಅಷ್ಟು ಕಟು ಮಾತುಗಳಿಂದ ನಿಂದಿಸಿದ್ದಳು. ಇದಕ್ಕೆ ಪ್ರತ್ಯುತ್ತರ ಎಂಬಂತೆ ಅತ್ತೆ ಗೌರಮ್ಮ ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಮತ್ತೆ ಏಟಿಗೆ ಏಟು ಎಂಬಂತೆ ಮಾತಿಗೆ ಮಾತು ಪೋಣಿಸತೊಡಗಿದರು.

“ನನಗೆ ಈ ನರಕದಲ್ಲಿ ಇರಬೇಕಾಗಿಲ್ಲ. ನಾನು ನಾಳೆ ಬೆಳಗ್ಗೆಯೇ ನನ್ನ ತವರಿಗೆ ಹೊರಟುಬಿಡ್ತೀನಿ. ನಿಮ್ಮ ಅಪ್ಪ ಅಮ್ಮನ ಹೊರೆ ಹೊತ್ತುಕೊಳ್ಳಲು ನನಗಿಷ್ಟವಿಲ್ಲ,” ಎಂದು ಹೇಳಿ ಅವಳು ಬಾಗಿಲನ್ನು ದಡ್‌ ಎಂದು ಹಾಕಿಕೊಂಡಳು.

`ಇದೆಂಥ ದಿನಗಳನ್ನು ನಾನು ನೋಡಬೇಕಾಗಿ ಬಂದಿದೆ. ಮೊದಲ ಹೆಂಡತಿ ನಡತೆಗೆಟ್ಟವಳಾಗಿದ್ದು, ನನ್ನನ್ನು ಬಿಟ್ಟು ತನ್ನ ಪ್ರಿಯಕರನೊಂದಿಗೆ ಓಡಿಹೋದಳು. ಈಗ ಈ ಎರಡನೆಯವಳು ಬಹಳ ದುಷ್ಟಬುದ್ಧಿಯವಳು,’ ಎಂದು ತನ್ನನ್ನು ತಾನು ಹಳಿದುಕೊಳ್ಳುತ್ತಾ ಮನೋಜ್‌ ಆ ರಾತ್ರಿ ಸೋಫಾ ಮೇಲೆ ಮಲಗಿಕೊಂಡ.

ಮರುದಿನ ಭಾನುವಾರವಾಗಿತ್ತು. ಅಂಜಲಿ ತನ್ನ ಕಣ್ಣುಗಳಲ್ಲಿ ಕೋಪ ತುಂಬಿಕೊಂಡು ಬೆಳಗ್ಗೆ 10 ಗಂಟೆಗೆ ತನ್ನ ರೂಮಿನಿಂದ ಹೊರಗೆ ಬಂದಳು. ಮನೋಜ್‌ ಡ್ರಾಯಿಂಗ್‌ ರೂಮಿನಲ್ಲಿ ಮುಖ ಸೊಟ್ಟಗೆ ಮಾಡಿಕೊಂಡು ಕುಳಿತಿದ್ದ.

ಅವಳು ಕೇಳುವ ಮೊದಲೇ, “ಅಮ್ಮ ಅಪ್ಪ ಬೆಳಗ್ಗೆ ಮೊದಲ ಬಸ್ಸಿಗೆ ಚಿತ್ರದುರ್ಗದಲ್ಲಿರುವ ಮಾಮನ ಮನೆಗೆ ಹೊರಟುಹೋದರು,” ಎಂದು ದುಃಖದಿಂದ ಹೇಳಿದ.

“ಯಾಕೆ?” ಕಾಫಿ ಮಾಡಲು ಅಡುಗೆ ಮನೆಗೆ ಹೋಗುತ್ತಿದ್ದ ಅಂಜಲಿ, ಒಂದು ಕ್ಷಣ ಅಲ್ಲಿಯೇ ನಿಂತಳು.

“ಅವರು ಏಕೆ ಹೋದರೆಂದು ತಿಳಿದುಕೊಳ್ಳುವುದು ಅಷ್ಟು ಕಷ್ಟಕರ ಸಂಗತಿಯೇನು?”

“ಬಲವಂತವಾಗಿ ನನ್ನನ್ನು ತಪ್ಪಿತಸ್ಥಳನ್ನಾಗಿಸಬೇಡಿ ಪ್ಲೀಸ್‌. ನಿಮ್ಮ ಅಮ್ಮ ನನ್ನ ಬಗ್ಗೆ ಒಂದಕ್ಕೆ ನಾಲ್ಕು ಹೇಳುತ್ತಾರೆ,” ಎಂದಳು.

“ಅವರು ಅನಾರೋಗ್ಯ ಪೀಡಿತರು. ಮನೆಯಿಂದ ದೂರ ಇದ್ದು ಅವರ ಸ್ಥಿತಿ ಏನಾದರೂ ಆದರೆ ಅದರಿಂದ ನಿನಗೇನಾಗಬೇಕು? ನೀನು ನಿನ್ನದೇ ಲೋಕದಲ್ಲಿ ಇರುತ್ತೀಯಲ್ಲ…..”

“ನಾನು ಇವತ್ತು ಮನೆ ಬಿಟ್ಟು ಹೋಗುವವಳಿದ್ದೆ. ನೀವು ಅವರನ್ನು ತಡೆಯಲಿಲ್ಲವೇಕೆ?”

“ನಾನು ಅವರಿಗೆ ಹೋಗಬೇಡಿ ಎಂದು ಬಹಳ ತಡೆದೆ. ಆದರೆ ಅಪ್ಪ ಒಪ್ಪಲೇ ಇಲ್ಲ……”

“ಅವರು ಯಾವಾಗ ವಾಪಸ್‌ ಬರುತ್ತಾರೆ….?”

“ಅವರು ಅದರ ಬಗ್ಗೆ ಏನು ಹೇಳಿ ಹೋಗಿಲ್ಲ,” ಮನೋಜ್‌ ದಣಿದು ಸುಸ್ತಾದವನ ರೀತಿಯಲ್ಲಿ ಹೇಳಿದ. ಅವನ ಮಾತು ಕೇಳಿ ಅಂಜಲಿ ಕೂಡ ಉದಾಸಳಾದಳು.

ಇಬ್ಬರೂ ದಿನವಿಡೀ ಬೇಸರದಲ್ಲಿಯೇ ಇದ್ದರು. ಆದರೆ ಸಂಜೆಗೆ ಇಬ್ಬರೂ ಹೊರಗೆ ಸುತ್ತಾಡಿ ಬರುವ ಕಾರ್ಯಕ್ರಮ ಹಾಕಿಕೊಂಡು ಹೊರಟರು, ಅವರು ಅಲ್ಲಿ ಒಂದಿಷ್ಟು ಖರೀದಿ ಮಾಡಿದರು.

ಆ ದಿನ ರಾತ್ರಿ ಅಂಜಲಿಯನ್ನು ಮನಸಾರೆ ಪ್ರೀತಿಸಿದ ಮನೋಜ್‌ ಗೆ ಒಂದೇ ಒಂದು ಸಲವಾದರೂ ಅಮ್ಮ ಅಪ್ಪನ ಬಗ್ಗೆ ನೆನಪೇ ಬರಲಿಲ್ಲ.

ಮುಂದಿನ 2-3 ದಿನಗಳ ಕಾಲ ಅವರಿಬ್ಬರ ನಡುವೆ ಯಾವುದೇ ಜಗಳಗಳೇ ಆಗಲಿಲ್ಲ. ಅದೊಂದು ದಿನ ಅಂಜಲಿ ಆಫೀಸ್‌ ನಿಂದ ತಡವಾಗಿ ಮನೆಗೆ ಬಂದಾಗ ಮನೋಜ್‌ ಅವಳ ವಿರುದ್ಧ ಹರಿಹಾಯ್ದ. ಅವಳೂ ಕೂಡ ಸಾಕಷ್ಟು ಮಾತನಾಡಿದಳು. ಆದರೆ ಅದು ಅಷ್ಟೇ ಬೇಗನೆ ತಣ್ಣಗಾಯಿತು. ಮನೆಯಲ್ಲಿ ಗೌರಮ್ಮ ಇದ್ದಿದ್ದರೆ ಜಗಳ ಇನ್ನಷ್ಟು ಹೆಚ್ಚು ಹೊತ್ತು ಎಳೆಯುತ್ತಿತ್ತು ಎಂದು ಇಬ್ಬರಿಗೂ ಅನಿಸಿತು.

ಮನೋಜ್‌ ಪ್ರತಿದಿನ ತನ್ನ ತಾಯಿ ತಂದೆ ಜೊತೆ ಫೋನ್‌ ನಲ್ಲಿ ಮಾತಾಡುತ್ತಿದ್ದ. ಅಂಜಲಿ ಒಂದು ವಾರದ ಬಳಿಕ ಅವರೊಂದಿಗೆ ಮಾತನಾಡಿದ್ದಳು. ಅವಳು ಅವರ ಆರೋಗ್ಯದ ಬಗ್ಗೆ ಕೇಳಿದಳಾದರೂ, ವಾಪಸ್‌ ಯಾವಾಗ ಬರುತ್ತಾರ ಎನ್ನುವುದರ ಬಗ್ಗೆ ಮಾತ್ರ ಕೇಳಲಿಲ್ಲ.

“ಯಾವಾಗ ವಾಪಸ್‌ ಬರ್ತೀರಾ?” ಎಂದು ಮನೋಜ್‌ತಂದೆಯನ್ನು ಕೇಳಿದ.

“ಬಹುಶಃ ಮುಂದಿನ ವಾರ ಬರುತ್ತೇವೆ,” ಎಂದು ಅವರು ಉತ್ತರ ಕೊಟ್ಟರು.

ಅವರು ಚಿತ್ರದುರ್ಗಕ್ಕೆ ಹೋಗಿ ಒಂದು ತಿಂಗಳಾಗುತ್ತಾ ಬಂದಾಗ ಅಂಜಲಿ ಹಾಗೂ ಮನೋಜ್‌ ರ ಮನಸ್ಸು ಚಡಪಡಿಸತೊಡಗಿತು. ಅಕ್ಕಪಕ್ಕದವರು, ಸಂಬಂಧಿಕರು ಹೀಗೆ ಯಾರೇ ಭೇಟಿಯಾದರೂ ಗೌರಮ್ಮ ಹಾಗೂ ರಾಜಣ್ಣ ಯಾವಾಗ ವಾಪಸ್‌ ಬರುತ್ತಾರೆ ಎಂದು ಕೇಳುತ್ತಿದ್ದರು. ಆಗ ಅಂಜಲಿ ಹಾಗೂ ಮನೋಜ್‌ ತೋಚಿದ ಉತ್ತರ ಕೊಡಬೇಕಾಗಿ ಬರುತ್ತಿತ್ತು. ಹೀಗೆ ಸುಳ್ಳು ಕಾರಣ ಕೊಟ್ಟಾಗೆಲ್ಲ ಅವರ ಮನಸ್ಸು ಅಪರಾಧಿಪ್ರಜ್ಞೆಯಿಂದ ನರಳುತ್ತಿತ್ತು.

ಜನರ ಪ್ರಶ್ನೆಗಳಿಂದ ಗಲಿಬಿಲಿಗೊಳಗಾದ ಮನೋಜ್‌ ಹಾಗೂ ಅಂಜಲಿ ತಾವೇ ಚಿತ್ರದುರ್ಗಕ್ಕೆ ಹೋಗಿ ಅವರನ್ನು ಕರೆದುಕೊಂಡು ಬರಬೇಕೆಂಬ ನಿರ್ಧಾರಕ್ಕೆ ಬಂದರು.

“ನಾವು ಅಲ್ಲಿಗೆ ಹೋದ ಬಳಿಕ ಅವರೊಂದಿಗೆ ವಾದವಿವಾದ ಮಾಡಿ ಅವರಿಗೆ ಬೇಸರ ತರಿಸುವುದು ಬೇಡ. ಅವರನ್ನು ವಾಪಸ್ ಕರೆತರಲು ಕ್ಷಮೆ ಕೇಳುವ ಪ್ರಸಂಗ ಬಂದರೂ ನಾವು ಕ್ಷಮೆ ಕೇಳೋಣ. ಅವರನ್ನು ನಮ್ಮ ಜೊತೆಗೆ ಇಟ್ಟುಕೊಂಡು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಮಾವ ಅಥವಾ ಬೇರೆಯವರದ್ದಲ್ಲ,” ಮನೋಜ್‌ ಅಂಜಲಿಗೆ ದಾರಿಯುದ್ದಕ್ಕೂ ಹೀಗೆ ತಿಳಿಸಿ ಹೇಳುತ್ತಿದ್ದ.

ಮಾವನ ಮನೆಯಲ್ಲಿ ಎರಡು ದಿನ ಕಳೆಯಲೆಂದು ಮನೋಜ್‌ ಅಂಜಲಿ ಶುಕ್ರವಾರ ರಾತ್ರಿಯೇ ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಿದ್ದರು.

ಮಾವ ಅತ್ತೆ ಇವರಿಬ್ಬರನ್ನು ಬಹಳ ಪ್ರೀತಿಯಿಂದ ಬರಮಾಡಿಕೊಂಡರು. ತಮ್ಮಿಬ್ಬರ ಬಗ್ಗೆ ಅವರು ಬೇಸರ ತೋರದೆ ಇರುವುದು ಅಂಜಲಿಗೆ ಆಶ್ಚರ್ಯವನ್ನುಂಟು ಮಾಡಿತು.

“ನಿಮ್ಮ ಅಮ್ಮ ಅಪ್ಪ ತಿಂಡಿ ತಿಂದು, ಸುತ್ತಾಡಲು ಪಾರ್ಕಿಗೆ ಹೋಗಿದ್ದಾರೆ,” ಎಂದು ಮಾಮ ಹೇಳಿದಾಗ ಮನೋಜ್‌ ಚಕಿತನಾದ.

`ಅಮ್ಮ ಅಪ್ಪ ಸುತ್ತಾಡಲು ಹೋಗಿದ್ದಾರಾ? ಅವರಿಗೆ ಈ ಹೊಸ ಅಭ್ಯಾಸ ಯಾವಾಗಿನಿಂದ ಆರಂಭವಾಯಿತು?’ ಮನೋಜ್‌ ನ ಮನಸ್ಸಿನಲ್ಲಿ ಅವಿಶ್ವಾಸಭಾವನೆ ಮೂಡಿತು.

“ಅವರಿಬ್ಬರೂ ಪ್ರತಿದಿನ ಮುಂಜಾನೆಯೇ ಸುತ್ತಾಡಲು ಹೋಗುತ್ತಾರೆ. ಅವರ ಫಿಟ್‌ ನೆಸ್‌ ನಲ್ಲಿ ಆದ ಬದಲಾವಣೆಯನ್ನು ಕೇಳಿದರೆ ನಿಜಕ್ಕೂ ಚಕಿತರಾಗುತ್ತೀರಿ,” ಎಂದರು ಮಾಮ.

“ಅಮ್ಮನ ಸೊಂಟನೋವು ಅವರನ್ನು ಹೀಗೆ ಸುತ್ತಾಡಲು ಅವಕಾಶ ಕೊಡುತ್ತಾ?” ಎಂದು ಕೇಳಿದ ಮನೋಜ್‌.

“ಅವರ ಸೊಂಟದ ನೋವು ಈಗ ಮೊದಲಿಗಿಂತ ಸಾಕಷ್ಟು ಕಡಿಮೆಯಾಗಿದೆ. ನಿಮ್ಮ ಅಪ್ಪ ಹೇಗಿದ್ದಾರೆಂದರೆ, ಅವರು ನಿಮ್ಮ ಅಮ್ಮ ಸುಸ್ತಾಗಿ ಕುಳಿತುಕೊಳ್ಳುವುದನ್ನು ಇಷ್ಟಪಡುವುದಿಲ್ಲ,” ಎಂದರು ಮಾವ.

“ಅಮ್ಮನಿಗೆ ಬೇರೆ ಡಾಕ್ಟರ್‌ ಬಳಿ ಚಿಕಿತ್ಸೆ ಏನಾದರೂ ಕೊಡಿಸುತ್ತಿದ್ದೀರಾ?” ಎಂದು ಸಂದೇಹದಿಂದ ಕೇಳಿದ ಮನೋಜ್.

“ಹೌದು, ಅವರು ಡಾಕ್ಟರ್‌ ರಾಜಣ್ಣರವರ ಚಿಕಿತ್ಸೆ ಪಾಲಿಸುತ್ತಿದ್ದಾರೆ,” ಎಂದು ತಮ್ಮದೇ ತಮಾಷೆಯ ಮಾತಿಗೆ ಮಾಮ ಜೋರಾಗಿ ನಕ್ಕರು.

ಅವರು ನಗುವುದನ್ನು ಕಂಡು ಮನೋಜ್‌ ಮತ್ತು ಅಂಜಲಿ ಇನ್ನಷ್ಟು ಚಿಂತೆಗೊಳಗಾದರು.

ಅಂಜಲಿ ಹಾಗೂ ಮನೋಜ್‌ ಕಾಫಿ ಕುಡಿಯುತ್ತಾ ಕುಳಿತಿದ್ದಾಗ ರಾಜಣ್ಣ ಹಾಗೂ ಗೌರಮ್ಮ ಮನೆಯೊಳಗೆ ಬಂದರು. ಅವರನ್ನು ನೋಡುತ್ತಿದ್ದಂತೆ ಮನೋಜ್‌ ಒಮ್ಮಲೆ ಗಡಬಡಿಸಿ ಎದ್ದುನಿಂತು, “ಅಮ್ಮ ಅಪ್ಪ ನೀವು ಸ್ಪೋರ್ಟ್‌ ಶೂಗಳಲ್ಲಿ ಬಹಳ ಚೆನ್ನಾಗಿ ಕಾಣುತ್ತಿರುವಿರಿ,” ಎಂದು ಸಂತೋಷದಿಂದ ಹೇಳಿದ.

“ನಿಮ್ಮ ಮಾಮ ನಮಗೆ ಕೊಡಿಸಿದ್ದಾರೆ. ಚೆನ್ನಾಗಿವೆ ಅಲ್ವೇ?” ರಾಜಣ್ಣ ಮಗುವಿನಂತೆ ಖುಷಿಯಿಂದ ಹೇಳುತ್ತಾ ಮಗನನ್ನು ತಮ್ಮ ಬಾಹುಗಳಲ್ಲಿ ಬಂಧಿಸಿದರು.

ಅಮ್ಮನ ಪಾದ ಮುಟ್ಟಿ ನಮಸ್ಕರಿಸುತ್ತಾ ಮನೋಜ್‌ ಅವರನ್ನು ಹೊಗಳುತ್ತಾ, “ನಿಮ್ಮ ಸೊಂಟನೋವು ಕಡಿಮೆಯಾಗಿ ನೀವು ನಡೆದಾಡಲು ತೊಂದರೆಯಾಗುತ್ತಿಲ್ಲ ಎನ್ನುವುದನ್ನು ಕೇಳಿ ನನಗೆ ಬಹಳ ಖುಷಿಯಾಯಿತು. ನಿಮ್ಮ ಮುಖದಲ್ಲೂ ಅದ್ಭುತ ಕಳೆ ಕಾಣುತ್ತಿದೆ. ಮಾಮನ ಮನೆಯಲ್ಲಿ ಒಳ್ಳೆಯ ಸಿಹಿತಿಂಡಿ ಸಿಗುತ್ತಿವೆ ಅನಿಸುತ್ತೆ,” ಎಂದ.

“ನನ್ನ ಮಧುಮೇಹದ ಸಮಸ್ಯೆ ನನಗೆ ಸಿಹಿ ತಿಂಡಿ ತಿನ್ನಲು ಎಲ್ಲಿ ಅವಕಾಶ ಕೊಡುತ್ತದೆ ಹೇಳು? ಅಂದಹಾಗೆ ನೀವಿಬ್ಬರೂ ಹೇಗಿದ್ದೀರಿ? ನೀವು ಬರುವ ಸುದ್ದಿಯನ್ನು ನಮಗೇಕೆ ತಿಳಿಸಲಿಲ್ಲ?” ಮಗ ಸೊಸೆಗೆ ಆಶೀರ್ವಾದ ನೀಡುತ್ತಾ ಅವರ ಕಣ್ಣಾಲಿಗಳು ತುಂಬಿ ಬಂದವು.

“ನಿಮ್ಮಿಬ್ಬರಿಗೂ ಹಸಿವಾಗಿರಬಹುದು. ಏನು ತಿಂತೀರಾ ಹೇಳಿ?” ಬಹಳ ಉತ್ಸಾಹದ ಧ್ವನಿಯಲ್ಲಿ ರಾಜಣ್ಣ ಕೇಳಿದರು.

“ಅಷ್ಟೇನೂ ಹಸಿವಿಲ್ಲ. ಹೊರಗಿನಿಂದ ಏನಾದರೂ ತಗೊಂಡು ಬರೋಣ,” ಎಂದು ಹೇಳುತ್ತಾ ಮನೋಜ್‌ ಅಪ್ಪನ ಜೊತೆ ಹೊರಟು ನಿಂತ.

“ಮಾರ್ಕೆಟ್‌ ನಿಂದ ಏನಾದರೂ ತರುವುದಿದೆಯೇ? ನಿನ್ನೆಯೇ ಆಲೂಬಟಾಣಿ ಪಲ್ಯ ಮಾಡಿಟ್ಟಿದ್ದೆ. ಈಗ ಚಪಾತಿ ಮಾಡಿಕೊಡ್ತೀನಿ,” ಎಂದು ಹೇಳುತ್ತಾ ಅತ್ತೆ ಅಡುಗೆಮನೆಯ ಕಡೆ ಹೊರಟರು.

“ನನಗೆ ಇವತ್ತು ಕೆಲಸ ಮಾಡಲು ಅವಕಾಶ ಕೊಡಿ,” ಎಂದು ಹೇಳುತ್ತಾ ರಾಜಣ್ಣ ವಿಶಿಷ್ಟವಾಗಿ ನಕ್ಕರು.

“ಅಪ್ಪಾಜಿ, ನೀವು ಚಪಾತಿ ಮಾಡ್ತೀರಾ?” ಮನೋಜ್‌ ಆಶ್ಚರ್ಯಚಕಿತನಾಗಿ ಕೇಳಿದ.

“ಹೌದು. ಕೆಲವು ದಿನಗಳ ಹಿಂದೆ ನಾನು ನಿನ್ನ ಅತ್ತೆಯ ಕಡೆಯಿಂದ ಕೆಲವು ಅಡುಗೆ ಪದಾರ್ಥಗಳ ಸಿದ್ಧತೆಯ ಬಗ್ಗೆ ತಿಳಿದುಕೊಂಡೆ. ನೀವಿಬ್ಬರೂ ಫ್ರೆಶ್‌ ಆಗಿ 15 ನಿಮಿಷಗಳಲ್ಲಿ ಚಪಾತಿ ಮಾಡಿಕೊಡ್ತೀನಿ,” ಎಂದು ಹೇಳುತ್ತಾ ರಾಜಣ್ಣ ಮಗನ ಕೆನ್ನೆ ತಟ್ಟಿದರು.

ರಾಜಣ್ಣ ಅವರಿಗೆ ಏನೇನು ಅಡುಗೆ ಮಾಡಲು ಬರುತ್ತದೆ ಎನ್ನುವುದರ ಬಗ್ಗೆ ಹೇಳುತ್ತಾ ಗೌರಮ್ಮ ಹಾಗೂ ಅತ್ತೆ ಮಾವನ ಕಣ್ಣುಗಳಲ್ಲಿ ಅದೇನೊ ಮಿಂಚು ಕಾಣಿಸುತ್ತಿತ್ತು.

“ಅವರಿಗೀಗ ಬಿಸಿಬೇಳೆ ಭಾತ್‌, ಪೊಂಗಲ್, ಬೆಂಡೆಕಾಯಿ ಪಲ್ಯ, ಬಜ್ಜಿ ಬೋಂಡಾ, ಪಲಾವ್‌….. ಹೀಗೆ ಬಹಳಷ್ಟು ಮಾಡಲು ಕಲಿತಿದ್ದಾರೆ.”

“ಅಪ್ಪನಿಗೆ ಇಷ್ಟೆಲ್ಲ ಅಡುಗೆ ಮಾಡಲು ಬರುತ್ತಾ? ಇಷ್ಟೆಲ್ಲ ಚಮತ್ಕಾರ ಹೇಗೆ ಸಾಧ್ಯವಾಯಿತು?” ಎಂದು ಮನೋಜ್‌ ಬೆರಗಿನ ಧ್ವನಿಯಲ್ಲಿ ಕೇಳಿದ. ಏಕೆಂದರೆ ರಾಜಣ್ಣ ಅವರಿಗೆ ಮೊದಲು ಒಂದು ಕಪ್‌ ಚಹಾ ಕೂಡ ಮಾಡಲು ಬರತ್ತಿರಲಿಲ್ಲ.

“ನಿಮ್ಮಪ್ಪ ಇತ್ತೀಚೆಗೆ ಬಹಳ ಮಾಡರ್ನ್‌ ಆಗಿದ್ದಾರೆ. ಪ್ರತಿಯೊಬ್ಬರಿಗೂ ಹೊರಗಿನ ಹಾಗೂ ಮನೆಯ ಕೆಲಸಗಳು ಮಾಡುವುದು ಗೊತ್ತಿರಬೇಕು. ಒಬ್ಬರ ಮೇಲೆ ಅವಲಂಬಿತರಾಗುವುದು ನರಕಕ್ಕೆ ಸಮಾನ ಎಂದು ಅವರೇ ಹೇಳುತ್ತಿರುತ್ತಾರೆ. ಈ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ಇಷ್ಟು ಬದಲಾಗಬಹುದು ಎನ್ನುವುದರ ಬಗ್ಗೆ ಕೇಳಿದರೆ ಆಶ್ಚರ್ಯವಾಗುತ್ತದೆ,” ಎಂದು ಮಾವ ಹೇಳಿದರು.

ರಾಜಣ್ಣ ಆ ರಾತ್ರಿ ಮಗ ಸೊಸೆಗೆ ಪೂರಿ ಪಲ್ಯ ಮಾಡಿಕೊಟ್ಟರು. ಬಳಿಕ ಮರಳು ಬಿಸಿ ಮಾಡಿ ಅದನ್ನು ಬಟ್ಟೆಯಲ್ಲಿ ಗಂಟು ಕಟ್ಟಿ  ಗೌರಮ್ಮನಿಗೆ ಕೊಟ್ಟರು. ಅವರು ಅದನ್ನು ತಮ್ಮ ಸೊಂಟದ ಭಾಗಕ್ಕೆ ಕಾವು ಕೊಟ್ಟುಕೊಳ್ಳುತ್ತಾರೆ. ಮೊದಲು ರಾಜಣ್ಣ ಬಹಳ ಕಡಿಮೆ ಮಾತನಾಡುತ್ತಿದ್ದರು. ಈಗ ಅವರ ಮಾತಿನ ವೈಖರಿ ಕೋಣೆಯಲ್ಲಿ ಪ್ರತಿಧ್ವನಿಸುತ್ತಿರುತ್ತದೆ.

ಮರುದಿನ ರಾಜಣ್ಣ ಎಲ್ಲರಿಗೂ ಬೆಡ್‌ ಕಾಫಿ ತಯಾರಿಸಿಕೊಟ್ಟರು. ಅದಕ್ಕೂ ಮೊದಲು ಅವರು ಗೌರಮ್ಮನನ್ನು ಪಾರ್ಕಿಗೆ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ಬಂದಿದ್ದರು. ಅವತ್ತಿನ ತಿಂಡಿಗಾಗಿ ಅತ್ತೆ ಬಿಸಿಬಿಸಿ ಇಡ್ಲಿ ಮಾಡಿದ್ದರು. ಎಲ್ಲರಿಗೂ ತಂದು ಕೊಡುವ ಕೆಲಸನ್ನು ರಾಜಣ್ಣ ಮಾಡಿದರು.

ಗೌರಮ್ಮ ಇಡೀ ಮನೆಯ ಕಸ ಗುಡಿಸಿದರು. ಬಳಿಕ ರಾಜಣ್ಣ ಹಿಂದಿನಿಂದ ಮಾಪ್‌ ಹಿಡಿದುಕೊಂಡು ಬಂದು ಮಾಪ್‌ ಮಾಡಿದರು. ಅದಾದ ಬಳಿಕ ರಾಜಣ್ಣ ಓದಲೆಂದು ಲೈಬ್ರೆರಿಗೆ ಹೋದರು.

ಅವರಿಬ್ಬರ ಚುರುಕಿನ ದಿನಚರಿ ಕಂಡು ಅಂಜಲಿ ಮತ್ತು ಮನೋಜ್‌ ಅಚ್ಚರಿಗೊಳಗಾಗಿದ್ದರು. ಅವರ ಮೈ ಮನಸ್ಸಿನಲ್ಲಿ ಜೀವನೋತ್ಸಾಹ ತುಂಬಿರುವಂತೆ ಕಂಡುಬರುತ್ತಿತ್ತು.

ಸಂಜೆ ಹೊತ್ತು ಎಲ್ಲರೂ ಸುತ್ತಾಡಲೆಂದು ಹೊರಗೆ ಹೊರಟರು. ಚಾಟ್‌ ತಿನ್ನುವ ಅಭ್ಯಾಸವಿದ್ದ ಅಂಜಲಿಯನ್ನು ಮಾವ ಮತ್ತು ರಾಜಣ್ಣ ಒಂದು ಪ್ರಸಿದ್ಧ ಅಂಗಡಿಗೆ ಕರೆದುಕೊಂಡು ಹೋಗಿ ಪಾನಿಪೂರಿ ಕೊಡಿಸಿದರು. ಆ ಬಳಿಕ ಐಸ್‌ ಕ್ರೀಮ್ ಆರ್ಡರ್ ಮಾಡಿದರು.

ವಾಪಸ್‌ ಮನೆಗೆ ಬಂದಾಗ ಯಾರಿಗೂ ವಿಶೇಷ ಹಸಿವು ಇರಲಿಲ್ಲ. ಹೀಗಾಗಿ ಪಲಾವ್ ‌ಮಾಡುವುದಾಗಿ ನಿರ್ಧರಿಸಲಾಯಿತು. ಗೌರಮ್ಮ ಹಾಗೂ ಅತ್ತೆ ಆ ಕೆಲಸ ಮಾಡಲು ಇಚ್ಛಿಸಿದ್ದರು. ಆದರೆ ರಾಜಣ್ಣ ಅವರಾರಿಗೂ ಅವಕಾಶ ಕೊಡದೇ, ತಾವೇ ಅಡುಗೆಮನೆಗೆ ಹೋದರು.

ರಾಜಣ್ಣ ಮಾಡಿದ ಪಲಾವ್ ಬಹಳ ರುಚಿಯಾಗಿತ್ತು. ಎಲ್ಲರಿಂದಲೂ ಪ್ರಶಂಸೆ ಕೇಳಿ ಅವರ ಖುಷಿಗೆ ಮೇರೆಯೇ ಇರಲಿಲ್ಲ.

ಸಾಕಷ್ಟು ದಣಿದಿರುವುದರ ಹೊರತಾಗಿಯೂ ರಾಜಣ್ಣ ಮಲಗುವ ಮುನ್ನ ಹೆಂಡತಿಯ ಸೊಂಟನೋವಿಗೆ ಬಿಸಿ ಕಾವು ಕೊಟ್ಟು ಬಳಿಕ ಮೂವ್ ಹಚ್ಚಲು ಮರೆಯಲಿಲ್ಲ.

ಎಲ್ಲರೂ ಎಷ್ಟೊಂದು ತಿಂದಿದ್ದರೆಂದರೆ ರಾತ್ರಿ ಊಟದ ಅವಶ್ಯಕತೆಯೇ ಉಂಟಾಗಲಿಲ್ಲ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ಬಳಿಕ ಮನೋಜ್‌ ಬೆಂಗಳೂರಿಗೆ ವಾಪಸಾಗಲು ಸಿದ್ಧತೆ ಮಾಡತೊಡಗಿದ.

“ಅಮ್ಮ ಅಪ್ಪ…. ನೀವು ಕೂಡ ನಿಮ್ಮ ಸಾಮಾನುಗಳನ್ನು ಪ್ಯಾಕ್‌ ಮಾಡಿಕೊಳ್ಳಿ. ರಾತ್ರಿ 10 ಗಂಟೆಗೆ ಹೊರಟರೆ ಬೆಳಗಿನ 5 ಗಂಟೆಗೆ ನಾವು ಬೆಂಗಳೂರು ಸೇರುತ್ತೇವೆ,” ಎಂದು ಹೇಳಿದ್ದನ್ನು ಕೇಳಿ, ರಾಜಣ್ಣ ಗಂಭೀರರಾದರು. ಗೌರಮ್ಮ ಕೂಡ ಯಾವುದೋ ಚಿಂತೆ ಹೊತ್ತುಕೊಂಡರಂತೆ ಅವರತ್ತ ನೋಡಿದರು.

“ಅವರಿಗೆ ಇನ್ನಷ್ಟು ದಿನ ಇಲ್ಲಿರಲು ಅವಕಾಶ ಕೊಡಿ,” ಎಂದು ಹೇಳಿದ ಮಾಮ ಕೂಡ ಸಹಜವಾಗಿಲ್ಲ ಎನ್ನುವುದು ಮನೋಜ್‌ ಗೆ ಗೊತ್ತಾಯಿತು.

“ಮಾಮ, ಅಮ್ಮ ಅಪ್ಪ ಇಲ್ಲಿಗೆ ಬಂದು ತಿಂಗಳೇ ಆಗಿದೆ. ಮುಂದಿನ ತಿಂಗಳು ಮತ್ತೆ ಬೇಕಾದರೆ ಬರಲಿ,” ಎಂದು ಹೇಳುತ್ತಾ ಮನೋಜ್‌ ನಕ್ಕ.

ರಾಜಣ್ಣ ತಮ್ಮ ಗಂಟಲು ಸರಿಪಡಿಸಿಕೊಂಡು, “ನಾವಿಬ್ಬರೂ ಈಗ ನಿಮ್ಮ ಜೊತೆಗೆ ಬರುತ್ತಿಲ್ಲ,” ಎಂದು ಮನೋಜ್‌ ಗೆ ಹೇಳಿದರು.

“ಏಕೆ? ನೀವು ಈಗಲೂ ನಮ್ಮ ಬಗ್ಗೆ ಬೇಜಾರು ಮಾಡಿಕೊಂಡಿದ್ದೀರಾ?” ಮನೋಜ್‌ ತುಸು ಅಸಮಾಧಾನದಿಂದಲೇ ಕೇಳಿದ.

“ನನ್ನ ಮಾತನ್ನು ಕೇಳಿಸಿಕೊಳ್ಳಿ. ನಮ್ಮಿಂದಾಗಿ ನಿಮ್ಮ ಸಂಸಾರದಲ್ಲಿ ಜಗಳಗಳಾಗುವುದು ನಮಗೆ ಖಂಡಿತ ಇಷ್ಟವಾಗುವುದಿಲ್ಲ,” ರಾಜಣ್ಣ ಸ್ವಲ್ಪ ಅಸಹಜ ಧ್ವನಿಯಲ್ಲಿ ಹೇಳಿದರು.

“ಈ ರೀತಿಯ ಜಗಳಗಳು ಮನೆಯಲ್ಲಿ ಆಗುತ್ತಲೇ ಇರುತ್ತವೆ. ಈ ಕಾರಣದಿಂದ ನೀವಿಬ್ಬರೂ ಮನೆ ಬಿಟ್ಟು ಹೋಗುವುದು ತಿಳಿವಳಿಕೆಯ ಲಕ್ಷಣವಲ್ಲ,” ಮನೋಜ್‌ ತಿಳಿಸಲು ಪ್ರಯತ್ನಿಸಿದ.

“ನಿನ್ನ ಅಮ್ಮನಿಗೂ ನಿನ್ನ ಹೆಂಡತಿಗೂ ಹೊಂದಾಣಿಕೆ ಆಗುತ್ತಿಲ್ಲ. ಜಗಳ ಮಾಡಿ ನಿನ್ನ ಹೆಂಡತಿ ಮನೆ ಬಿಟ್ಟುಹೋದರೆ ಅದು ನಿನ್ನ ಅಮ್ಮನಿಗೆ ಕೆಟ್ಟ ಹೆಸರು. ಅದರ ಬದಲು ನಾವು ಇಲ್ಲಿಯೇ ಇರುವುದು ಸೂಕ್ತ ಎನಿಸುತ್ತದೆ,” ತಂದೆ ಹೇಳಿದರು.

“ನಾವಿಬ್ಬರೇ ಇರುವುದಕ್ಕಿಂತ ನಿಮ್ಮಿಬ್ಬರ ಜೊತೆ ಇರಬೇಕಿದೆ. ಈಗ ನೀವು ಹಳೆಯ ವಿಷಯಗಳನ್ನು ಮರೆತು ಪ್ಯಾಕಿಂಗ್‌ಮಾಡಿಕೊಳ್ಳಿ. ಅಂಜಲಿ ನೀನೇಕೆ ಮಾತಾಡುತ್ತಿಲ್ಲ?” ಮನೋಜ್‌ ಅಮ್ಮ ಅಪ್ಪನ ಮೇಲೆ ಒತ್ತಡ ಹೇರಲು ತನ್ನ ಹೆಂಡತಿಯ ಸಹಾಯ ಕೇಳಿದ.

“ನೀವಿಬ್ಬರೂ ನಮ್ಮ ಜೊತೆ ಹೊರಡಿ, ಪ್ಲೀಸ್‌,” ಅಂಜಲಿ ಮೆಲ್ಲನೆಯ ಧ್ವನಿಯಲ್ಲಿ ತನ್ನ ಮಾವನ ಬಳಿ ಕೇಳಿಕೊಂಡಳು.

ರಾಜಣ್ಣ ಸ್ವಲ್ಪ ಹೊತ್ತು ಮೌನವಾಗಿದ್ದು ನಂತರ, “ನೀವಿಬ್ಬರೂ ಬಹಳ ಒತ್ತಾಯಿಸಿದರೆ, ನಾವು ನಿಮ್ಮ ಜೊತೆ ಬರುತ್ತೇವೆ. ಆದರೆ ಅದಕ್ಕೂ ಮೊದಲು ನಾನು ನಿಮಗೆ ಏನನ್ನೋ ಹೇಳಲು ಇಚ್ಛಿಸ್ತೀನಿ,” ಎಂದರು.

“ಅಪ್ಪಾ, ಈ ಹೇಳುವುದು…. ಕೇಳುವುದು…. ಮನೆಗೆ ಹೋದಮೇಲೆ ಮಾಡಬಹುದಲ್ಲ?” ಮನೋಜ್‌ ಹೇಳಿದ.

“ಈಗಲೇ ನಾವು ನಿಮ್ಮೊಂದಿಗೆ ವಾಪಸ್‌ ಬರಲು ನಿರ್ಧಾರ ಮಾಡಿಲ್ಲ ಮನೋಜ್‌.”

“ನಾವು ನಿಮ್ಮನ್ನು ವಾಪಸ್‌ ಕರೆದುಕೊಂಡೇ ಹೋಗುತ್ತೇವೆ. ನೀವು ನಮಗೆ ಏನು ಹೇಳಬೇಕು ಅಂತಿದ್ದೀರಾ?”

ಆಗ ರಾಜಣ್ಣ ಭಾವುಕರಾಗಿ ಹೇಳಲಾರಂಭಿಸಿದರು, “ಅಂಜಲಿ, ನೀನೂ ಕೂಡ ನನ್ನ ಮಾತನ್ನು ಸರಿಯಾಗಿ ಕೇಳಿಸಿಕೋ. ಅಂದು ರಾತ್ರಿ ನೀನು ಮನೋಜ್‌ ಜೊತೆ ಜಗಳವಾಡುತ್ತಾ ಕೋಪದಲ್ಲಿನ ನಮ್ಮನ್ನು `ಹೊರೆ’ ಎಂದು ಹೇಳಿದೆ. ನಿನ್ನ ಆ ದೂರನ್ನು ನಿವಾರಿಸಿಕೊಳ್ಳಲು ನಾನು ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು, ವಾಶಿಂಗ್‌ ಮೆಷಿನ್‌ ನಲ್ಲಿ ಬಟ್ಟೆ ಕ್ಲೀನ್‌ ಮಾಡುವುದನ್ನೆಲ್ಲ ಕಲಿತೆ. ನಿನ್ನ ಅತ್ತೆಗೆ ಹೆಚ್ಚು ಕೆಲಸ ಮಾಡಲು ಆಗುವುದಿಲ್ಲ. ಆದರೆ ನಾನು ನಿನ್ನ ಕೆಲಸಗಳಿಗೆ ಸಹಾಯ ಮಾಡಲು ಸಿದ್ಧನಾಗಿದ್ದೇನೆ.

bojh-story2

“ನಿನ್ನ ಅತ್ತೆಗೆ  ಸ್ವಲ್ಪ ಕೋಪ ಜಾಸ್ತಿ. ಇಲ್ಲಿಗೆ ಬಂದ ನಂತರ ನಾನು ಆಕೆಗೆ ಸಾಕಷ್ಟು ತಿಳಿಸಿ ಹೇಳಿದೆ. ಇನ್ಮುಂದೆ ನಿನ್ನ ಜೊತೆ ಆಕೆ ಆ ರೀತಿ ವರ್ತಿಸುವುದಿಲ್ಲವೆಂದು ನನಗೆ ಮಾತು ಕೊಟ್ಟಿದ್ದಾಳೆ.

“ಆ ರಾತ್ರಿ ಮನೋಜ್‌ ಜೊತೆಗೆ ಜಗಳವಾಡುತ್ತಾ ನೀನು ಮನೆಬಿಟ್ಟು ಹೋಗುವ ಬಗ್ಗೆ ಬೆದರಿಕೆ ಹಾಕಿದೆ. ಆಗ ನಾನು ತತ್ತರಿಸಿ ಹೋಗಿದ್ದೆ. ಮನೆಯಲ್ಲಿ ಸುಖಶಾಂತಿ ನೆಲೆಸಲು ಯಾರಾದರೂ ಮನೆಬಿಟ್ಟು ಹೋಗಬೇಕು ಅಂದ್ರೆ ನಾನು ಹಾಗೂ ನಿನ್ನ ಅತ್ತೆಯೇ ಹೊರತು ನೀನಲ್ಲ ಎಂದು ನಾನು ಅದೇ ರಾತ್ರಿ ನಿರ್ಧರಿಸಿದೆ.

“ಅಂಜಲಿ, ಮನೋಜ್‌ ಗೆ ತನ್ನ ಮೊದಲ ಹೆಂಡತಿಯಿಂದ ವಿಚ್ಛೇದನ ಅಷ್ಟು ಸುಲಭವಾಗಿ ದೊರಕಿರಲಿಲ್ಲ. ಕೇಸ್‌ ನಡೆಯುತ್ತಿದ್ದ ದಿನಗಳಲ್ಲಿ ನಾವಂತೂ ಸಂಕೋಚದಿಂದ ಕುಗ್ಗಿಹೋಗಿದ್ದೆವು. ಬೇರೆಯವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ಶಕ್ತಿಯೂ ನಮ್ಮಲ್ಲಿರಲಿಲ್ಲ. ಆ ಕಾರಣದಿಂದ ನಾವು ಮನೆಯಿಂದ ಹೊರಗೇ ಬರುತ್ತಿರಲಿಲ್ಲ. ವಕೀಲರು ಹಾಗೂ ಪೊಲೀಸರು ನಮ್ಮನ್ನು ಬಹಳ ಸತಾಯಿಸಿದ್ದರು.

“ಅಂತಹ ಕೆಟ್ಟ ಕಾಲ ಮತ್ತೆ ಬರಬಹುದೆಂಬ ಕಲ್ಪನೆಯೇ ನನ್ನ ಎದೆ ನಡುಗಿಸಿಬಿಟ್ಟಿತು. ಅದೇ ಕಾರಣದಿಂದ ನಮ್ಮಿಬ್ಬರನ್ನು ನಿಮ್ಮ ಜೊತೆ ಕರೆದುಕೊಂಡು ಹೋಗಲು ಹಠ ಮಾಡಬೇಡ ಎಂದು ಹೇಳಿದ್ದು. ಒಂದು ವೇಳೆ ನಿಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗಿ ನೀವಿಬ್ಬರು ಬೇರೆ ಬೇರೆ ಆಗಬೇಕಾಗಿ ಬಂದರೆ ಹಿಂದಿನ ಅದೇ ನಾಚಿಗೆಗೇಡಿತನದ ಹೊರೆಯನ್ನು ಮತ್ತೊಮ್ಮೆ ಹೊರಬೇಕೆಂದರೆ ನಾವು ಇದ್ದೂ ಕೂಡ ಸತ್ತಂತೆ.” ಎಂದರು.

“ಮಾವ, ನೀವು ನಿಮ್ಮ ಕಣ್ಣೀರು ಒರೆಸಿಕೊಳ್ಳಿ ಪ್ಲೀಸ್‌, ನಾನು ಮನೆ ಬಿಟ್ಟು ಹೋಗುವ ಮಾತನ್ನು ಇನ್ನೆಂದೂ ಪ್ರಸ್ತಾಪಿಸುವುದಿಲ್ಲವೆಂದು ನಿಮಗೆ ಮಾತು ಕೊಡ್ತೀನಿ,” ಎಂದು ಹೇಳುವುದರ ಮೂಲಕ ಅಂಜಲಿ ತನ್ನ ಮಾವನ ನೋವನ್ನು ನಿವಾರಿಸಲು ತನ್ನ ತುಂಬಿದ ಕಂಠದಿಂದ ವಿಶ್ವಾಸ ತುಂಬಲು ಪ್ರಯತ್ನ ಮಾಡಿದಳು.

“ನಾನು ಇವತ್ತಿನಿಂದ ಮದ್ಯ ಸೇವನೆ ಮಾಡುವುದನ್ನು ನಿಲ್ಲಿಸಿಬಿಡುತ್ತೀನಿ,” ಎಂದ ಮನೋಜ್‌ ನ ನಿರ್ಧಾರ ಕೇಳಿಸಿಕೊಂಡು ಭಾವಾವೇಶದಿಂದ ರಾಜಣ್ಣ ಮಗನನ್ನು ತಬ್ಬಿಕೊಂಡರು.

“ಗೌರಮ್ಮ, ನೀನು ಪ್ಯಾಕಿಂಗ್‌ ಮಾಡಿಕೋ. ಈ ಖುಷಿಗೆ ನಾನು ಈಗಲೇ ಎಲ್ಲರಿಗೂ ಕೇಸರಿಭಾತ್‌ ಮಾಡಿಕೊಡ್ತೀನಿ,” ಬಹಳ ಖುಷಿಯಲ್ಲಿದ್ದವರಂತೆ ಕಂಡುಬಂದ ರಾಜಣ್ಣ ಮಗ ಮತ್ತು ಸೊಸೆಯ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಅಡುಗೆಮನೆ ಕಡೆ ನಡೆದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ