ಕಥೆ - ಶಾರದಾ ಭಟ್
ಮಾವ ರಾಜಣ್ಣನವರ ಮನಸ್ಸಿನ ನೋವನ್ನು ನಿವಾರಿಸಲು ಅಂಜಲಿ ಅಂಥದ್ದೇನು ಉಪಾಯ ಹೂಡಿದಳು? ಅದರಿಂದ ಮನೆಯವರೆಲ್ಲ ಅವಳನ್ನು ಪ್ರಶಂಸಿಸುವಂತಾಯಿತೇ.......?
ಆ ರಾತ್ರಿ ಅಂಜಲಿ ಹಾಗೂ ಮನೋಜ್ ನಡುವೆ ಜೋರು ಜಗಳವಾಯಿತು. ಮನೋಜ್ ತನ್ನ ಗೆಳೆಯನ ಮನೆಯಿಂದ ಕುಡಿದು ಬಂದಿದ್ದ. ತನ್ನ ಅತ್ತೆಯ ಜೊತೆ ಮಾತಿನ ಚಕಮಕಿಯ ಬಳಿಕ ಅವಳು ಇನ್ಮುಂದೆ ತಾನು ಅತ್ತೆಯ ಮನೆಯಲ್ಲಿ ಯಾರಿಗೂ ಹೆದರುವುದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದಳು. ಈ ಎರಡು ಕಾರಣಗಳಿಂದಾಗಿ ಅವರ ನಡುವಿನ ಜಗಳ ಹೆಚ್ಚುತ್ತಲೇ ಹೋಯಿತು.
``ನೀನು ಈ ಮನೆಯಲ್ಲಿ ಇರುವ ಹಾಗಿದ್ದರೆ ಮನೆಯ ಕೆಲಸಗಳಲ್ಲಿ ಅಮ್ಮನಿಗೆ ನೆರವಾಗಬೇಕು. ನೀನು ಹರಟೆ ಹೊಡೆಯುತ್ತಾ ತಿರುಗೋದು, ಅಮ್ಮ ಮಾತ್ರ ಮನೆ ಕೆಲಸ ಮಾಡ್ತಿರಬೇಕು ಎನ್ನುವುದನ್ನು ನಾನು ಇನ್ಮುಂದೆ ಖಂಡಿತಾ ಸಹಿಸಿಕೊಳ್ಳುವುದಿಲ್ಲ,'' ಮನೋಜ್ ನ ಜೋರು ಧ್ವನಿ ಇಡೀ ಮನೆಯಲ್ಲಿ ಪ್ರತಿಧ್ವನಿಸಿತು.
``ಇಂದು ಆಫೀಸಿನಲ್ಲಿ ಹೆಚ್ಚು ಕೆಲಸವಿದ್ದರಿಂದ ತಡವಾಗಿ ಬಂದಿದ್ದೆ. ಆದರೂ ನಾನು ಅವರೊಂದಿಗೆ ಸೇರಿ ಒಂದಿಷ್ಟು ಕೆಲಸ ಮಾಡಿದೆ. ಅಮ್ಮನ ಪ್ರತಿಯೊಂದು ಮಾತನ್ನು ನೀವು ನಿಜವೆಂದು ತಿಳಿದರೆ ಪ್ರತಿದಿನ ನನ್ನೊಂದಿಗೆ ಜಗಳ ಆಡುತ್ತಿರಬೇಕಾಗುತ್ತೆ,'' ಎಂದು ಅಂಜಲಿ ಕೂಡ ಜೋರಾಗಿ ಕೂಗಿದಳು.
``ಯಾವ ದಿನ ನೀನು ಬೇಗ ಮನೆಗೆ ಬರುತ್ತೀಯೋ ಆ ದಿನ ಕೂಡ ನೀನು ಮನೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲವಂತೆ ಎಂದು ಅಮ್ಮ ದೂರು ಹೇಳುತ್ತಿರುತ್ತಾರೆ.''
``ಅದು ಸುಳ್ಳು.....''
``ನೀನು ಸುಳ್ಳುಗಾರ್ತಿ, ನನ್ನ ಅಮ್ಮ ಅಲ್ಲ.''
``ಇಲ್ಲ.... ನಿಮ್ಮ ಅಮ್ಮನೇ ಸುಳ್ಳುಗಾರ್ತಿ.''
ಆ ದಿನ ಮನೋಜ್ ತನ್ನ ಎರಡನೇ ಹೆಂಡತಿಯ ಮೇಲೆ ಮೊದಲ ಬಾರಿ ಕೈ ಎತ್ತಿದ್ದ. ಅವರ ಮದುವೆಯಾಗಿ ಇನ್ನೂ 2 ತಿಂಗಳು ಕೂಡ ಆಗಿರಲಿಲ್ಲ.
``ನನ್ನ ಮೇಲೆ ಕೈ ಎತ್ತಲು ನಿಮಗೆ ಧೈರ್ಯವಾದರೂ ಹೇಗೆ ಬಂತು? ಮತ್ತೊಮ್ಮೆ ಕೈ ಎತ್ತಿ ನೋಡಿ. ನಾನು ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ,'' ಎಂದಳು ಅಂಜಲಿ.
ಅವಳು ಜೋರಾಗಿ ಕೂಗಿದ್ದಲ್ಲದೆ ಬೆದರಿಕೆ ಹಾಕಿದ್ದನ್ನು ಕೇಳಿಸಿಕೊಂಡು ರಾಜಣ್ಣ ಹಾಗೂ ಗೌರಮ್ಮ ಮಗ-ಸೊಸೆಯನ್ನು ಸಮಾಧಾನಗೊಳಿಸಲು ಅವನ ಕೋಣೆಗೆ ಹೋದರು.
ಕೋಪದಿಂದ ಕುದಿಯುತ್ತಿದ್ದ ಅಂಜಲಿ ತನ್ನ ಅತ್ತೆಯನ್ನು ನೋಡಿದ್ದೇ ಎಷ್ಟು ಸಾಧ್ಯವೋ ಅಷ್ಟು ಕಟು ಮಾತುಗಳಿಂದ ನಿಂದಿಸಿದ್ದಳು. ಇದಕ್ಕೆ ಪ್ರತ್ಯುತ್ತರ ಎಂಬಂತೆ ಅತ್ತೆ ಗೌರಮ್ಮ ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಮತ್ತೆ ಏಟಿಗೆ ಏಟು ಎಂಬಂತೆ ಮಾತಿಗೆ ಮಾತು ಪೋಣಿಸತೊಡಗಿದರು.
``ನನಗೆ ಈ ನರಕದಲ್ಲಿ ಇರಬೇಕಾಗಿಲ್ಲ. ನಾನು ನಾಳೆ ಬೆಳಗ್ಗೆಯೇ ನನ್ನ ತವರಿಗೆ ಹೊರಟುಬಿಡ್ತೀನಿ. ನಿಮ್ಮ ಅಪ್ಪ ಅಮ್ಮನ ಹೊರೆ ಹೊತ್ತುಕೊಳ್ಳಲು ನನಗಿಷ್ಟವಿಲ್ಲ,'' ಎಂದು ಹೇಳಿ ಅವಳು ಬಾಗಿಲನ್ನು ದಡ್ ಎಂದು ಹಾಕಿಕೊಂಡಳು.
`ಇದೆಂಥ ದಿನಗಳನ್ನು ನಾನು ನೋಡಬೇಕಾಗಿ ಬಂದಿದೆ. ಮೊದಲ ಹೆಂಡತಿ ನಡತೆಗೆಟ್ಟವಳಾಗಿದ್ದು, ನನ್ನನ್ನು ಬಿಟ್ಟು ತನ್ನ ಪ್ರಿಯಕರನೊಂದಿಗೆ ಓಡಿಹೋದಳು. ಈಗ ಈ ಎರಡನೆಯವಳು ಬಹಳ ದುಷ್ಟಬುದ್ಧಿಯವಳು,' ಎಂದು ತನ್ನನ್ನು ತಾನು ಹಳಿದುಕೊಳ್ಳುತ್ತಾ ಮನೋಜ್ ಆ ರಾತ್ರಿ ಸೋಫಾ ಮೇಲೆ ಮಲಗಿಕೊಂಡ.