ಮಗಳ ಮದುವೆಯ ಗಡಿಬಿಡಿಯಿಲ್ಲದ್ದ ರೇಖಾ, ಮನೆಯ ಒಡವೆಗಳೆಲ್ಲಾ ಕಳುವಾದ ಎಂದು ಗೊತ್ತಾದಾಗ ಹೌಹಾರಿದಳು. ಮುಂದೆ ಅದು ಸಿಕ್ಕಿದ್ದು ಹೇಗೆ? ಕದ್ದವರು ಯಾರು.......?
ಬೆಳಗ್ಗೆ ಶ್ರೀಧರನಿಗೆ ಡಬ್ಬಿ ಕಟ್ಟಿ ಆಫೀಸಿಗೆ ಕಳಿಸಿದ ರೇಖಾ, ಒಂದು ಕಪ್ ಸ್ಟ್ರಾಂಗ್ ಫಿಲ್ಟರ್ ಕಾಫಿ ಮಾಡಿಕೊಂಡು ಉಸ್ಸಪ್ಪಾ ಅಂತ ಹಾಲ್ ನಲ್ಲಿ ಕುಳಿತು ಟಿವಿ ಹಾಕಿ, ಮೊಬೈಲ್ ಕೈಗೆತ್ತಿಕೊಂಡಳು. ಎಲ್ಲಾ ಚಾನೆಲ್ ಗಳಲ್ಲೂ ಬರೀ ಡ್ರಗ್ಸ್ ನದೇ ನಶೆ. `ಛೇ! ಏನು ಕಾಲ ಬಂತಪ್ಪ, ಇವರೂ ಹಾಳಾಗೋದಲ್ಲದೆ, ಯುವಜನರನ್ನೂ ಹಾಳು ಮಾಡುತ್ತಾರೆ,' ಎಂದು ಯೋಚಿಸುವಷ್ಟರಲ್ಲಿ ಅಚಿಂತ್ಯ ಮೈಮುರಿಯುತ್ತಾ ಎದ್ದು ಬಂದ.
``ಮಮ್ಮಿ, ನನಗೂ ಒಂದು ಕಪ್ ಕಾಫಿ,'' ಎನ್ನುತ್ತಾ ಸೋಫಾದ ಮೇಲೆ ಕಾಲು ಚಾಚಿ ಕುಳಿತು, ರಿಮೋಟ್ ತೆಗೆದುಕೊಂಡವನೇ, ಚಾನೆಲ್ ಬದಲಾಯಿಸುತ್ತಾ, ``ಇದೇನು ಹಾಕಿಕೊಂಡು ಕುಳಿತಿದ್ದೀಯಾ...? ನ್ಯೂಸ್ ಹೇಳೋರಿಗೂ ಬುದ್ಧಿ ಇಲ್ಲ, ನೋಡೋರಿಗೂ..... ನಮ್ಮ ಕಾಲೇಜಿನ ಹಾಸ್ಟೆಲ್ ನಲ್ಲಿ ಆರಾಮವಾಗಿ ಡ್ರಗ್ಸ್ ಸಪ್ಲೈ ಆಗುತ್ತೆ, ಪೊಲೀಸರಿಗೂ ಕೂಡಾ ಗೊತ್ತಿರುತ್ತೆ. ಹೊಸ ವಿಷಯ ಅನ್ನೋ ಹಾಗೆ ಮಾತಾಡ್ತಾರೆ,'' ಎಂದ.
ರೇಖಾಳ ಮೈ ಜುಮ್ ಎಂದಿತು, ``ಹೌದೇನೋ....? ಅಂಥ ಉಸಾಬರಿಗೆಲ್ಲ ನೀನು ಹೋಗ್ಬೇಡ್ವೋ. ಅಂಥೆಲ್ಲಾ ನೀನು ತೊಗೊಳಲ್ಲ ತಾನೇ...,'' ಎಂದು ಹೆದರುತ್ತಲೇ ಕೇಳಿದಳು.
``ಓಹ್ ಮಮ್ಮಿ.... ಹಾಗೆಲ್ಲ ನಿನ್ನ ಮಗ ದಾರಿ ತಪ್ಪಲ್ಲ, ಯೋಚನೆ ಮಾಡಬೇಡ,'' ಎಂದಾಗ ರೇಖಾಗೆ ಸಮಾಧಾನವಾಯಿತು.
``ಮೊದಲು ಬ್ರಶ್ ಮಾಡಿ ಬಾ,'' ಎಂದು ಅವನನ್ನು ಬಚ್ಚಲಿಗೆ ಸಾಗಹಾಕಿ, ಕಾಫಿ ಫಿಲ್ಟರ್ ಗೆ ಹಾಕಿಟ್ಟು, ಒಂದಿಷ್ಟು ವಾಟ್ಸ್ ಆ್ಯಪ್, ಫೇಸ್ ಬುಕ್ ನಲ್ಲಿ ಕಣ್ಣಾಡಿಸುವ ಹೊತ್ತಿಗೆ, ಹಿತ್ತಲಿನಲ್ಲಿ, ``ಆಂಟೀ, ಭಾಂಡೇ ಹೊರಗಿಡ್ತೀ,'' ಅಂತ ಬಾಗಿಲು ಬಡಿಯುತ್ತಾ ಫಾತಿಮಾ ಕೂಗಿದಳು.
ರೇಖಾ ಎದ್ದು ಹೋಗಿ ಹಿತ್ತಲು ಬಾಗಿಲು ತೆಗೆದು, ಅವಳನ್ನು ನೋಡಿ, ``ಇವತ್ತು ನೀನು ಯಾಕೆ ಬಂದಿರೋದು.... ನಿಮ್ಮಮ್ಮ ಎಲ್ಲಿ....'' ಎನ್ನುತ್ತಾ ಅಡುಗೆಮನೆಗೆ ಬಂದು ಮುಸುರೆ ಪಾತ್ರೆಗನ್ನೆಲ್ಲಾ ಪ್ಲಾಸ್ಟಿಕ್ ಬುಟ್ಟಿಗೆ ಹಾಕತೊಡಗಿದಳು.
``ಆಕೀ, ಗೋವಾಕ್ ಹೋಗ್ಯಾಳ್ರೀ....ಅಣ್ಣನ ಮನೀಗೆ. ಬರೂ ಮಟ ನಂಗಾ ಮಾಡಾಕ್ ಹೇಳ್ಯಾಳ್ರೀ,'' ಎನ್ನುತ್ತಾ ಹಾಕಿಕೊಂಡ ಬುರ್ಕಾ ತೆಗೆದು, ಹೊರಗೆ ಕಿಟಕಿಯಲ್ಲಿ ಮಡಚಿ ಇಡುತ್ತಾ, ಖಾಲಿ ಟಬ್ ನ್ನು ನಲ್ಲಿಯ ಕೆಳಗೆ ಇಟ್ಟು ನೀರು ಬಿಡುತ್ತಾ, ``ಚಾ ಆತೇನ್ರೀ ಆಂಟೀ,'' ಎಂದು ಕೇಳಿದಳು.
ಅವಳಿಗೆ ಚಾ ಮಾಡಿಕೊಡಬೇಕೆಂಬ ಸೂಚನೆ ಗೊತ್ತಾಗಿ, ``ಆತು.... ಚಾಗಿಡ್ತೀನಿ ತಡೀ,'' ಅಂತ ಅಡುಗೆಮನೆಗೆ ಬಂದು ಟೀಗೆ ನೀರಿಟ್ಟಳು. ಕೆಲಸದವರಿಗೆ ಇಂತಹ ಸಮಯದಲ್ಲಿ ಸ್ವಲ್ಪ ಚಾ, ತಿಂಡಿ ಕೊಟ್ಟು ಸರಿಯಾಗಿ ಇಟ್ಟುಕೊಳ್ಳಬೇಕೆಂಬ ಅನುಭವ ಇಪ್ಪತ್ತೈದು ವರ್ಷಗಳಿಂದ ಚೆನ್ನಾಗಿ ಆಗಿತ್ತು.
ಮೊದಲೇ ಮದುವೆ ಹತ್ತಿರಕ್ಕೆ ಓಡಿ ಬರ್ತಾ ಇದೆ. ನಿಶಾಳನ್ನು ಕೆಲಸಕ್ಕೆ ಕರೆಯುವ ಹಾಗೂ ಇಲ್ಲ. ಪಾಪ.... ಮದುವೆಯಾಗೋ ಹುಡುಗಿ. ಯಾವಾಗ ನೋಡಿದರೂ ಅನೂಪ್ ಜೊತೆ ಮೊಬೈಲ್ ನಲ್ಲಿ ಗುರು ಗುಸು, ಪಿಸು ಪಿಸು ಅಂತಾ ಮಾತನಾಡುತ್ತಲೇ ಇರುತ್ತಾಳೆ. ಇಲ್ಲದಿದ್ದರೆ ರೇಖಾ ಕೆಲಸ ಮಾಡುವಾಗೆಲ್ಲ ತಪ್ಪದೆ ಎಲ್ಲದಕ್ಕೂ ಕೈ ಹಾಕಿ ಸಹಕರಿಸುತ್ತಾಳೆ. ಎಂಜಿನಿಯರಿಂಗ್‌ಮಾಡಿ, ಬೆಂಗಳೂರಿನಲ್ಲಿ ಕೆಲಸ ಮಾಡಲು ಶುರು ಮಾಡಿ ಆಗಲೇ ಎರಡು ವರ್ಷವಾಯ್ತು. ಅಲ್ಲಿ ಉಳಿದುಕೊಂಡಿದ್ದ ಆಂಧ್ರ ಪಿಜಿಯ ಊಟ ಸರಿಹೋಗದೆ ಸ್ವಲ್ಪ ಸೊರಗಿದ್ದಾಳೆ. ಮದುವೆಯಾಗುವ ಸಮಯದಲ್ಲಿ ಸ್ವಲ್ಪ ಮೈ ಕೈ ತುಂಬಿಕೊಂಡಿದ್ದರೆ ಚಂದ ಎಂದು ಹೊತ್ತುಹೊತ್ತಿಗೂ ಅವಳಿಗಿಷ್ಟವಾದ ಅಡುಗೆಯನ್ನು ಮಾಡಿ ಹಾಕುತ್ತಿದ್ದಳು. ತುಂಬಾ ಮೃದು ಮನಸ್ಸಿನ ಹಾಗೂ ಸರಳವಾಗಿ ಎಲ್ಲರೊಡನೆ ಬೆರೆತು ಹೋಗು ಹುಡುಗಿ. ಮದುವೆಯಾದ ಮೇಲೆ ಸಂಸಾರದ ಜಂಜಾಟಗಳು ಇದ್ದದ್ದೇ.