ಕಥೆ –  ಡಾ. ವಿನುತಾ ರಾವ್

ಬೇರೆಯವರಿಂದ ಪ್ರೀತಿ ಹಾಗೂ ಗೌರವಾದರ ಗಳಿಸಲು ಅಜ್ಜಿ ರೂಪಾಳಿಗೆ ಯಾವ ತಾರಕಮಂತ್ರ ಹೇಳಿಕೊಟ್ಟರು? ಅದರಿಂದ ಅವಳು ತಾನು ಬಯಸಿದ್ದನ್ನು ಪಡೆದದ್ದು ಹೇಗೆ…….?

ಸವಿತಾ ಒಂದು ಪತ್ರಿಕೆ ಹಿಡಿದು ಹೊರಗಿನ ಹಾಲ್ ‌ಗೆ ಬಂದು ಸೋಫಾದಲ್ಲಿ ಕುಳಿತರು. ಆಕೆಗೆ ವಾರಪತ್ರಿಕೆ, ಮಾಸಪತ್ರಿಕೆ ಹೀಗೆ ಏನೋ ಒಂದಿಷ್ಟು ಕನ್ನಡ ಸಾಹಿತ್ಯದ ನಂಟು ಅಗತ್ಯ ಬೇಕಿತ್ತು. ರಮಾ ಬಂದು ಅಲ್ಲಿದ್ದ ಟೀಪಾಯಿ ಮೇಲೆ ಟೀ ಇರಿಸಿ ಹೋದಳು. ರಮಾಗೆ ಸೆಪರೇಟ್‌ ಆಗಿ ಏನೂ ಹೇಳುವುದೇ ಬೇಡ, ಎಲ್ಲವನ್ನೂ ತಾನೇ ನೋಡಿ ಮಾಡಿ ಅರ್ಥ ಮಾಡಿಕೊಳ್ಳುವಳು. ಅವಳು ಮನಗೆಲಸಕ್ಕೆಂದು ಬಂದ ಹೊಸದರಲ್ಲಿ 2 ದಿನ ಹೀಗ್ಹೀಗೆ ನಿಭಾಯಿಸು ಅಂತ ಹೇಳಿದ್ದಷ್ಟೆ, ಬೆರಳು ತೋರಿದರೆ ಹಸ್ತ ನುಂಗುವ ಸ್ವಭಾವದ ರಮಾ ಚುರುಕಾಗಿ ಎಲ್ಲವನ್ನೂ ತಾನೇ ಮಾಡತೊಡಗಿದಳು.

“ಪಾಪೂಗೆ ಇವತ್ತು ಏನು ಮಾಡಿ ಕೊಡ್ಲಿ ಅಮ್ಮಾ…..?” ರಮಾ ಕೇಳಿದಳು.

“ಬೆಳಗ್ಗೆ ಅವಳು ಮಾಮೂಲಿ ಬಿಸಿ ಊಟ ಮಾಡಿಕೊಂಡೇ ಹೋಗ್ತಾಳೆ, ಸಂಜೆ ಅವಳು ಬರುನ ಹೊತ್ತಿಗೆ ಅನಲಕ್ಕಿ ಅಥವಾ ಶ್ಯಾವಿಗೆ ಉಪ್ಪಿಟ್ಟು ಏನೋ ಒಂದು ಮಾಡಿಡು,” ಎಂದರು ಸವಿತಾ.

ರಮಾ ಸಹ ತನ್ನ ಕಪ್‌ ಹಿಡಿದುಕೊಂಡು ಬಂದು ಅವರೆದುರು, ವರಾಂಡಾದ ಮೂಲೆಗೆ ಒರಗಿ ಕುಳಿತಳು. ಇಬ್ಬರ ಕಪ್ ತೆಗೆದುಕೊಂಡು ತೊಳೆಯಲು ಹಾಕಿ, ತನ್ನ ಅಡುಗೆ ಕೆಲಸ ಮುಂದುವರಿಸಿದಳು.

ಸವಿತಾರ ಮಗ ಸೊಸೆ ಇಬ್ಬರೂ ಬೆಂಗಳೂರಿನ ಪ್ರಖ್ಯಾತ ನರ್ಸಿಂಗ್‌ ಹೋಮ್ ನಲ್ಲಿ ವೈದ್ಯರಾಗಿದ್ದರು. ಇವರ ಮಗ ಡಾ. ಸಂತೋಷ್‌ ಆರ್ಥೊಪೆಡಿಕ್‌ ಸರ್ಜನ್‌ ಆದರೆ, ಸೊಸೆ ಡಾ. ಆರತಿ ಗೈನಕಾಲಜಿಸ್ಟ್ ಆಗಿ ಹೆಸರು ಗಳಿಸಿದ್ದಳು. ಇವರದೇ ನರ್ಸಿಂಗ್ ಹೋಂ, ಹೀಗಾಗಿ ಇವರಿಬ್ಬರಿಗೂ ಬಹಳ ಹೆಚ್ಚಿನ ಜವಾಬ್ದಾರಿಗಳಿದ್ದವು. ಒಮ್ಮೆ ಮಗ, ಒಮ್ಮೆ ಸೊಸೆ ಅಥವಾ ಒಮ್ಮೊಮ್ಮೆ ಇಬ್ಬರೂ ಮನೆಗೆ ಬರದೆ ರಾತ್ರಿ ಅಲ್ಲಿಯೇ ಉಳಿಯುವಂತಾಗುತ್ತಿತ್ತು.

ಆಸ್ಪತ್ರೆಯಲ್ಲಿ ರೋಗಿಗಳು ಸದಾ ಗಿಜಿಗುಟ್ಟುತ್ತಿದ್ದರು. ಹೀಗಾಗಿ ಈ ವೈದ್ಯ ದಂಪತಿಗಳು ಮನೆ ಸೇರುವುದಿರಲಿ, ಹೊತ್ತಿಗೆ ಊಟ ಕಾಣುವುದೂ ದುಸ್ತರಾಗುತ್ತಿತ್ತು. ಹೀಗಾಗಿ ಅವರ ಮಗಳು ರೂಪಾಳಿಗೆ 5 ತುಂಬಿದ ಮೇಲೂ, ಎರಡನೇ ಮಗು ಆಗಮಿಸುವ ಸೂಚನೆ ಕಾಣದಿದ್ದಾಗ, ಸೂಕ್ಷ್ಮ ಅರಿತ ಸವಿತಾ ಒಬ್ಬಳೇ ಮೊಮ್ಮಗಳು ರೂಪಾಳನ್ನೇ ಸರ್ವಸ್ವ ಎಂದು ಅರಿತು, ಅವಳ ಪೂರ್ತಿ ಜವಾಬ್ದಾರಿ ತಾವೇ ವಹಿಸಿಕೊಂಡರು. ತಾಯಿ ತಂದೆಯರ ಬಳಿ ಮಕ್ಕಳಿಗೆ ಕೊಡಲು ಸಮಯಲೇ ಇಲ್ಲದಾಗ 1 ಮಗು ಆದ ಮೇಲೆ ಸುಮ್ಮನಿರುವುದೇ ಸರಿ, ಇಬ್ಬರು ಮೂವರು ಮಕ್ಕಳಾದರೆ ಮುಂದೆ ಅವರನ್ನು ನೋಡಿಕೊಳ್ಳುವವರಾರು? ಮಗನ ಮದುವೆಗೆ ಮೊದಲೇ ಇವರು ಪತಿಯನ್ನು ಕಳೆದುಕೊಂಡಿದ್ದರು. ಸದಾ ಆಸ್ಪತ್ರೆಯಲ್ಲಿ ಬಿಝಿಯಾಗಿರುತ್ತಿದ್ದ ಮಗ, ಸೊಸೆಗಿಂತ ಅವರು ಪುಟ್ಟ ಮೊಮ್ಮಗಳನ್ನು ಹಚ್ಚಿಕೊಂಡಿದ್ದೇ ಜಾಸ್ತಿ.

ಅಸಲಿಗೆ ರೂಪಾ ಹುಟ್ಟಿದ ನಂತರ ಇವರ ಒಂಟಿತನ ಸಂಪೂರ್ಣ ದೂರವಾಗಿತ್ತು. 3 ತಿಂಗಳ ಮಗುವನ್ನು ಅತ್ತೆಗೊಪ್ಪಿಸಿ, ಸೊಸೆ ತನ್ನ ಕರ್ತವ್ಯದ ಕರೆಗಾಗಿ ಹೊರಟು ನಿಂತಳು. ಅದೂ ಕೊರೋನಾ ಕಾಲ. ಹೀಗಾಗಿ ಆಸ್ಪತ್ರೆಯ ವರ್ಕ್‌ ಲೋಡ್‌ ಡಬ್ಬಲ್ ಆಗಿತ್ತು. ಮನೆಗೆಲಸಕ್ಕೆಂದು ಹಿಂದೆ ಸಾವಿತ್ರಮ್ಮ ಇದ್ದರು. ಅಡುಗೆ ಮುಗಿಸಿ, ಇವರ ಮನೆಯಲ್ಲೇ ಉಳಿದು ಸುತ್ತು ಕೆಲಸ ನೋಡಿಕೊಳ್ಳುತ್ತಿದ್ದರು. ಅವರು ಮಗಳ ಮದುವೆ ಗೊತ್ತಾದಾಗ, 3 ತಿಂಗಳು ಬರಲಾಗದು ಎಂದು ಊರಿಗೆ ಹೊರಟು ನಿಂತರು. ಆಗಿನಿಂದ ರಮಾ ಇವರ ಬಲಗೈ ಭಂಟಳಾಗಿ ಆ ಮನೆಯ ಜವಾಬ್ದಾರಿ ಹೊತ್ತಿದ್ದಳು.

ಹೀಗಾಗಿ ಸವಿತಾ ತಮ್ಮ ಇಡೀ ಸಮಯವನ್ನು ಮೊಮ್ಮಗಳಿಗಾಗಿಯೇ ಮೀಸಲಿಟ್ಟರು. ಶುಕ್ಲಪಕ್ಷದ ಚಂದ್ರನಂತೆ ದಿನೇ ದಿನೇ ಆರೋಗ್ಯಕರವಾಗಿ ಬೆಳೆಯುತ್ತಿದ್ದ ಮಗು, ಸದಾ ಅಜ್ಜಿಯ ಸೆರಗು ಹಿಡಿದೇ ಓಡಾಡುತ್ತಿತ್ತು. ಅಮ್ಮ ಬಿಡುವಾಗಿ ಬಂದಾಗ ಮಾತ್ರವೇ ಅವಳ ಬಳಿ ಹೋಗುತ್ತಿತ್ತು. ಸವಿತಾರ 45 ವರ್ಷದ ಒಬ್ಬಂಟಿ ಬದುಕಿಗೆ ಇದೀಗ ಸಾರ್ಥಕ ಅರ್ಥ ತುಂಬಿತು. ತಾನಾಯಿತು, ತಮ್ಮ ಮೊಮ್ಮಗಳಾಯಿತು ಎಂದು ಅವರು ಹಾಯಾಗಿದ್ದುಬಿಟ್ಟರು. ಹೀಗಾಗಿ ಮಗು ಮೊದಲು ಅಮ್ಮ ಬದಲು ಅಜ್ಜಿ ಎಂದೇ ತೊದಲು ನುಡಿಯಿತು. ಇವರ ಪಾಲಿಗೆ ಅವಳು ಪಾಪು ಹೆಚ್ಚು, ರೂಪಾ ಕಡಿಮೆ. ಅಪರೂಪಕ್ಕೆ ಬಿಡುವಾಗಿ ಸಿಗುತ್ತಿದ್ದ ಅಮ್ಮ ಅಪ್ಪನಿಗಿಂತ, ಸದಾ ತನ್ನ ಬೆಂಗಾವಲಿಗಿದ್ದ ಅಜ್ಜಿಯೇ ಅವಳ ಪ್ರಪಂಚವಾಗಿತ್ತು.

ಕ್ರಮೇಣ ಅವಳು ತನ್ನ ತಾಯಿ ತಂದೆಗಿಂತ, ಅಜ್ಜಿ ತನಗಾಗಿ ಜೀವವನ್ನೇ ಮುಡಿಪಾಗಿಟ್ಟರು ಎಂಬುದನ್ನು 45 ವರ್ಷದ ರೂಪಾ ಗುರುತಿಸಿ, ಅಜ್ಜಿಗೆ ಇನ್ನಷ್ಟು ಆಪ್ತಳಾದಳು. ಬಾಲ್ಯದಿಂದ ಯೌವನಕ್ಕೆ ಕಾಲಿರಿಸುವವರೆಗೂ ಅವಳ ಹೋಂವರ್ಕ್‌ ಸಮಸ್ಯೆ ಇರಲಿ, ವೈಯಕ್ತಿಕ ಸಂದೇಹಗಳಿರಲಿ, ಪ್ರಪಂಚವನ್ನು ಅರ್ಥೈಸಿಕೊಳ್ಳುವ ವಿಚಾರಗಳಿರಲಿ, ಎಲ್ಲಕ್ಕೂ ಈ ಮಾಡರ್ನ್‌ ಅಜ್ಜಿಯೇ ಅವಳ ಬೆಸ್ಟ್ ಫ್ರೆಂಡ್‌, ಫಿಲಾಸಫರ್‌, ಗೈಡ್‌!

ಆರೋಗ್ಯ ಕೆಟ್ಟರೆ ಅಜ್ಜಿಯ ಆರೈಕೆ, ಗೆಳತಿಯರ ಬಳಿ ಜಗಳ ಆಡಿಕೊಂಡು ಬಂದರೆ ಅಜ್ಜಿಗೆ ದೂರು, ತಾನು ಮೈ ನೆರೆದಾಗ ಅಜ್ಜಿಯನ್ನು 108 ಪ್ರಶ್ನೆ ಕೇಳಿ ಬೈಸಿಕೊಂಡು, ನಂತರ ಖರ್ಜೂರದ ಲೇಹ್ಯ ಮಾಡಿಸಿಕೊಂಡು ಬಾಯಿ ಚಪ್ಪರಿಸುವಳು. ಅವಳು ಏನೇ ಕುರುಕಲು ತಿಂಡಿ ಕೇಳಿರಲಿ, ಸಂಜೆ ಅವಳು ಮನೆಗೆ ಬರುವಷ್ಟರಲ್ಲಿ ಅಜ್ಜಿ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ ಇರಿಸುತ್ತಿದ್ದರು. ಹಾಯಾಗಿ ಅಜ್ಜಿ ಜೊತೆ ಹರಟುತ್ತಾ, ಕಾಫಿತಿಂಡಿ ಮುಗಿಸಿ, ಅಜ್ಜಿಯನ್ನು ಪಾರ್ಕಿಗೆ ವಾಕಿಂಗ್‌ ಹೊರಡಿಸಿ, ತಾನು ಫ್ರೆಂಡ್ಸ್ ಜೊತೆ ಆಡಲು ಹೋಗುತ್ತಿದ್ದಳು. ಹೀಗಾಗಿ ಎಲ್ಲಕ್ಕೂ ತಾನು ಅಜ್ಜಿಯನ್ನೇ ಅವಲಂಬಿಸುತ್ತೇನೆ ಎಂದು ಅವರಿಗೆ ವೈಟ್‌ ಹೌಸ್‌ ಎಂದು ಅಡ್ಡ ಹೆಸರಿಟ್ಟಳು.

“ನನಗೆ ಎಲ್ಲಾ ವಿಷಯಕ್ಕೂ ದಾರಿ ದೀಪ ಅಂದ್ರೆ ನೀನೇ ಅಜ್ಜಿ, ಹೀಗಾಗಿ ನೀನೇ ನನ್ನ ವೈಟ್‌ ಹೌಸ್‌,” ಎಂದು ರೇಗಿಸುವಳು.

“ವೈಟ್‌ ಹೌಸಾ….? ಅದು ಹೇಗೆ?” ಎಂದು ಸವಿತಾ ಬೇಕೆಂದೇ ಅವಳ ಮುಂದೆ ತನಗೇನೂ ತಿಳಿಯುವುದಿಲ್ಲ ಎಂಬಂತೆ ಆಂಗ್ಲದಲ್ಲೇ ಪಲುಕುತ್ತಿದ್ದ ಮೊಮ್ಮಗಳನ್ನು ಅಟ್ಟಕ್ಕೇರಿಸುವರು.

“ಇಂಥ ಟೆಕ್ನಿಕ್‌ ವಿಷಯ ಗೊತ್ತಾಗಲಿಲ್ಲ ಅಂದ್ರೆ ನೀನು ನನ್ನ ಕೇಳಬೇಕು ಅಜ್ಜಿ….. ಈಗ ಸಮುದ್ರದ ದಂಡೆಯಲ್ಲಿ ಲಂಗರುಗಳ ಬಳಿ ದೊಡ್ಡ ದೊಡ್ಡ ಹಡಗು, ದೋಣಿಗಳಿಗೆ ರಾತ್ರಿ ಹೊತ್ತು ಮಾರ್ಗ ಚೆನ್ನಾಗಿ ಕಾಣಲಿ ಅಂತ ವೈಟ್‌ ಹೌಸ್‌ ಕಟ್ಟಿರುತ್ತಾರೆ. ಅಲ್ಲಿಂದ ಬರುವ ಬೆಳಕಿನ ಮಾರ್ಗದರ್ಶನದಲ್ಲಿ ಈ ಹಡಗುಗಳು ತಮ್ಮ ಕೆಲಸ ಮಾಡಿಕೊಳ್ಳುತ್ತವೆ. ಇದರಿಂದ ಅವಕ್ಕೆ ಯಾವುದೇ ದುರ್ಘಟನೆ ಸಂಭವಿಸುವುದಿಲ್ಲ. ಅದೇ ತರಹ ನನ್ನ ಬದುಕಲ್ಲಿ  –  ಎಲ್ಲಾ ವಿಷಯಕ್ಕೂ ಆಧಾರಸ್ತಂಭವಾಗಿ ವೈಟ್‌ ಹೌಸ್‌ ಆಗಿರುವವಳು ನೀನೇ!” ಎಂದು ಅಜ್ಜಿಯನ್ನು ಅಪ್ಪಿ ಮುದ್ದಾಡುವಳು.

“ಸಾಕು ಹೋಗೇ ನಿನ್ನ ಹುಡುಗಾಟ! ಕಾಲೇಜು ಕನ್ಯೆ ಆಗಿದ್ದಿ, ಈ ಮುದುಕೀನ ಮಹಾ ಹೊಗಳುತ್ತಾಳೆ,” ಎಂದು ಅವಳ ತಲೆ ನೇವರಿಸಿ, ಜಡೆ ಹೆಣೆಯಲು ಕೂರಿಸಿಕೊಳ್ಳುವರು.

ಹೀಗೆ ಬೆಳೆದ ರೂಪಾ ಮುಂದೆ ತಾಯಿ ತಂದೆಯರ ಹಾಗೆಯೇ ಡಾಕ್ಟರ್‌ ಆಗಬೇಕೆಂದು, ವೈದ್ಯಕೀಯ ಕೋರ್ಸ್‌ ಮುಗಿಸಿ, ಇದೀಗ ಇಂಟರ್ನ್‌ ಶಿಪ್‌ ನಲ್ಲಿ ಬಿಝಿ ಆಗಿದ್ದಳು. ಈಗ ಹಿಂದಿನಷ್ಟು ಅಜ್ಜಿ ಬಳಿ ಹರಟೆ, ವಿನೋದಕ್ಕೆ ಅವಳ ಬಳಿ ಸಮಯ ಇರಲಿಲ್ಲ. ತಾಯಿ ತಂದೆಯರಷ್ಟು ಅವರ ಪಾಲಿಗೆ ಅಪರೂಪ ಆಗದಿದ್ದರೂ, ಹಿಂದಿಗಿಂತ ಈಗ ಅವಳು ಅವರ ಕೈಗೆ ಸುಲಭವಾಗಿ ಸಿಗುತ್ತಿರಲಿಲ್ಲ. ಸದಾ ತನ್ನ ಕಾಲೇಜ್‌, ರೆಕಾರ್ಡ್ಸ್, ಪ್ರಾಕ್ಚಿಕಲ್ಸ್, ಪ್ರಾಜೆಕ್ಟ್ಸ್, ಹಾಸ್ಪಿಟಲ್ ವಿಸಿಟ್ಸ್, ಗೆಳತಿಯರು…… ಎಂದು ತನ್ನದೇ ಹೊಸ ಲೋಕ ಮಾಡಿಕೊಂಡಿದ್ದಳು. ಪುಟ್ಟ ಹಕ್ಕಿ ಇದೀಗ ಹಾರಲು ಕಲಿತಿತ್ತು. ಆದರೂ ಅವರಿಬ್ಬರ ನಡುವಿನ ನಿರ್ಮಲ ಬಾಂಧವ್ಯ ಹಾಗೇ ಗಟ್ಟಿಯಾಗಿ ಉಳಿದಿತ್ತು, ನಿರಂತರವಾಗಿತ್ತು.

ಆದರೆ ಸವಿತಾರಿಗೆ ಮೊಮ್ಮಗಳು ವೈದ್ಯಳೇ ಆಗಬೇಕೆಂಬ ಬಯಕೆ ಇರಲಿಲ್ಲ. ತಮ್ಮ ಮಗ ಸೊಸೆ ಸದಾ ಪ್ರೊಫೆಷನಲ್ ಲೈಫ್ ನಲ್ಲಿ ಬಿಝಿಯಾಗಿದ್ದುಕೊಂಡು, ಗೃಹಸ್ಥ ಜೀವನದಲ್ಲಿ ನೆಮ್ಮದಿ ಕಂಡಿದ್ದೇ ಕಡಿಮೆ ಎಂದು ಅವರಿಗೆ ಕೊರಗಿತ್ತು. ದುಡ್ಡು, ಐಶ್ವರ್ಯ, ಅನುಕೂಲ ಇದ್ದರಾಯಿತೇ….. ಅದನ್ನು ಅನುಭವಿಸಲು ಸಮಯ ಸಹ ಬೇಕಲ್ಲವೇ? ಆದರೆ ಬೆಳೆದು ನಿಂತಿದ್ದ ಅಷ್ಟು ದೊಡ್ಡ ಆಸ್ಪತ್ರೆಗೆ ಮುಂದೆ ಮೊಮ್ಮಗಳೇ ವಾರಸುದಾರಳು ಎಂದು ಅರಿತಿದ್ದ ಅಜ್ಜಿ ಅವಳನ್ನು ವಿರೋಧಿಸದಾದರು.

ಈ ಇಳಿ ವಯಸ್ಸಿನಲ್ಲೂ ಸವಿತಾ ತಾನೇ ಇಡೀ ಮನೆಯ ಆಡಳಿತ ತೂಗಿಸುತ್ತಿದ್ದರು. ಮನೆ ನಡೆಸಿಕೊಂಡು ಹೋಗು ಕಲೆ ಅರಿತುಕೊಳ್ಳಲು ಸೊಸೆಗೆ ಸಮಯವೇ ಇರಲಿಲ್ಲ, ಇನ್ನೂ ಮಗನನ್ನಂತೂ ಮಾತನಾಡಿಸಲಿಕ್ಕೆ ಅವನಿಗೆ ಪುರಸತ್ತಾದರೂ ಎಲ್ಲಿತ್ತು? ಮಗಳ ಬಾಲಲೀಲೆಗಳನ್ನು ಕಣ್ತುಂಬಿಸಿಕೊಳ್ಳಲು ಸಹ ಅವರಿಗೆ ಆಗಲಿಲ್ಲ. ಪುಟ್ಟ ಮಗಳು ಹೇಗೆ ಕಲಿತು ಕಾಲೇಜು ಸೇರಿದಳೆಂಬುದೂ ಅವರ ಗಮನಕ್ಕೆ ಬರಲಿಲ್ಲ. ಅಮ್ಮ ಇದ್ದಾರೆ, ಮ್ಯಾನೇಜ್‌ ಮಾಡ್ತಾರೆ ಎಂದು ತಮ್ಮದೇ ಲೋಕದಲ್ಲಿ ಉಳಿದರು.

ಈ ವೈದ್ಯರ ಬಳಿ ಸಾವಿರಾರು ಹೆಂಗಸರು ಬಂದು ಹೆರಿಗೆ ಮಾಡಿಸಿಕೊಂಡು, ಸಂತೋಷವಾಗಿ ಮಕ್ಕಳನ್ನು ಎತ್ತಿಕೊಂಡು ಹೋಗುತ್ತಿದ್ದರು, ಆದರೆ ಎಷ್ಟೋ ಸಲ ಇವರು ಮಗಳ ಬರ್ತ್‌ ಡೇಗೆ ಮನೆಗೆ ಬರಲಾಗದ ಸ್ಥಿತಿ ಆಗುತ್ತಿತ್ತು. ರೋಗಿಗಳ ಸೇವೆಯಲ್ಲೇ ತಮ್ಮ ಜೀವನ ಸವೆಸಿದ ಈ ದಂಪತಿ, ತಮ್ಮ ಕೌಟುಂಬಿಕ ಜೀವನದ ಕಡೆ ಗಮನ ಹರಿಸಲಾಗಲಿಲ್ಲ.

ಹೀಗಾಗಿ ಸವಿತಾ ಮೊಮ್ಮಗಳ ಪಾಲಿಗೆ ಕೇವಲ ಅಜ್ಜಿ ಆಗಿರದೆ ಎಲ್ಲ ಆಗಿದ್ದರು. ಎಂದೂ ಅವರು ಮೊಮ್ಮಗಳ ನಿರ್ವಹಣೆ ತಮಗೆ ಹೊರೆ ಎಂದು ಮಗ ಸೊಸೆ ಬಳಿ ದೂರಿದವರೇ ಅಲ್ಲ. ಅವರು ತಮ್ಮ ವೈದ್ಯ ವೃತ್ತಿಗೆ ಸಮರ್ಪಿತರಾದಂತೆ, ಸವಿತಾ ಮನಾರ್ತೆಯಲ್ಲಿ ಸಂಪೂರ್ಣ ಮುಳುಗಿಹೋಗಿದ್ದರು. ಹೀಗಾಗಿಯೇ ಮೊಮ್ಮಗಳು ಸಹ ಹಗಲೂ ಇರುಳೂ ದುಡಿಮೆಯಲ್ಲಿ ನಲುಗಬಾರದು, ವೈದ್ಯಳಾಗುವ ಬದಲು ಅದೇ ಕಾಲೇಜಿನ ಪ್ರೊಫೆಸರ್‌ ಆಗಲಿ ಎಂದು ಬಯಸಿದರು. ರೂಪಾ ಡಾಕ್ಟರ್‌ ಆದ ನಂತರ, ಮುಂದೆ ಅವಳು ಮದುವೆಯಾಗಿ ಸೇರಲಿರುವ ಮನೆಯಲ್ಲಿ, ಇವಳ ಮಗುವಿನ ಆರೈಕೆಗೆ ಯಾರೂ ಇಲ್ಲದಿದ್ದರೆ….ಆದರೆ ಕೊನೆಗೂ ರೂಪಾ ವೈದ್ಯೆಯಾಗಿ ಡ್ಯೂಟಿಗೆ ಹೊರಟು ನಿಂತಳು.

`ಅಜ್ಜೀ…..’ ಹೊರಗಿನಿಂದ ಮೊಮ್ಮಗಳ ದನಿ ಕೇಳಿ ಸವಿತಾ ಹೊರ ಬಂದರು. ರಮಾ ಬಾಗಿಲು ತೆರೆದ ತಕ್ಷಣ, ರೂಪಾ ಓಡಿ ಬಂದು ಅಜ್ಜಿಯನ್ನು ಅಪ್ಪಿಕೊಂಡಳು.

“ಏ…. ಏನೇ ಇದು…. ಇಷ್ಟು ದೊಡ್ಡನಳಾಗಿದ್ದಿ…. ನಾಳೆಯಿಂದ ಆಸ್ಪತ್ರೆಗೆ ಡಾಕ್ಟರ್‌ ಆಗಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಬೇಕು…. ಈಗಲೂ ಚಿಕ್ಕವಳಂತೆ ಓಡಿ ಬಂದು ಅಜ್ಜೀನಾ ಹಿಡ್ಕೊಳ್ಳೋದೇ…..” ಅವಳ ತಲೆ ನೇವರಿಸುತ್ತಾ ಅಜ್ಜಿ ವಾತ್ಸಲ್ಯ ತೋರಿದರು.

“ನಾನು ಯಾವ ಮಹಾ ದೊಡ್ಡವಳಜ್ಜಿ…. ಹಿಂದಿನ ದಿನಗಳ ಹಾಗೆಯೇ ನಿಮಗಿಂತ ಚಿಕ್ಕವಳು, ಮುಂದೇನೂ ಚಿಕ್ಕವಳಾಗೇ ಇರ್ತೀನಿ,” ಅಜ್ಜಿಯ ಕೆನ್ನೆಗೆ ಮುದ್ದಿಡುತ್ತಾ ರೂಪಾ ಲಲ್ಲೆಗರೆದಳು.

“ಸಾಕು…. ಸಾಕಮ್ಮ ನಿನ್ನ ಈ ಹುಡುಗಾಟ…. ನಡಿ ಕೈ ಕಾಲು ತೊಳೆದು ಬಾ, ಏನಾದರೂ ತಿಂಡಿ ತಿಂತೀಯಂತೆ….”

“ಅಜ್ಜಿ ನಿನ್ನ ಕೈ ಕೋಡುಬಳೆ ರುಚಿ ನೋಡಿ ಬಹಳ ದಿನ ಆಯ್ತು. ನಾಳೆ ಖಂಡಿತಾ ಮಾಡಿಡು. ಈಗ ಮೊದಲು ಸ್ಟ್ರಾಂಗ್‌ ಕಾಫಿ ಕೊಟ್ಟುಬಿಡು,” ಎನ್ನುತ್ತಾ ತನ್ನ ಕೋಣೆ ಕಡೆ ಓಡಿದಳು.

“ಸ್ವಲ್ಪ ಹೊತ್ತಿಗೆ ಆ ದಡಿಯಾ ಸಂದೀಪ್‌ ಸಹ ಬರ್ತಾನಂತೆ!” ಎಂದು ಕೋಣೆಯಿಂದ ಹೊರಗೆ ಇಣುಕಿ ಅವಸರದಲ್ಲಿ ಹೇಳಿದಳು.

“ಏ…. ನಿನ್ನ ಜೊತೇನೇ ಅವನನ್ನೂ ಕರೆದುಕೊಂಡು ಬರಬಾರದಿತ್ತೇ?” ಸವಿತಾ ಕೇಳಿದರು.

“ಅವನು ಏಳುವಷ್ಟರಲ್ಲಿ ಯಾರೋ ಪೇಶೆಂಟ್‌ ಹುಡುಕಿಕೊಂಡು ಬಂದ್ರು. ಅವರನ್ನು ಕಳಿಸಿ ಬರ್ತೀನಿ ಅಂದ. ನಾನು ಹಾಗೇ ಸ್ಕೂಟಿ ತಗೊಂಡು ಹಾರಿ ಬಂದೆ,” ಎಂದು ಮುಖ ತೊಳೆದು ಬಂದಳು.

ಅಜ್ಜಿ ಅವಳ ಇಷ್ಟದ 2 ಮೆಂತ್ಯ ದೋಸೆ ಮಾಡುವಷ್ಟರಲ್ಲಿ ರಮಾ 2 ತಟ್ಟೆಗಳಲ್ಲಿ, ಚಟ್ನಿ, ಪಲ್ಯ ಜೋಡಿಸಿದ್ದಳು. ರೂಪಾ ಬಟ್ಟೆ ಬದಲಿಸಿ, ತಲೆ ಬಾಚುತ್ತಾ ಬಂದಳು. ಅಷ್ಟರಲ್ಲಿ ಸಂದೀಪ್‌ ಸಹ ಬಂದಿದ್ದ. ಅಜ್ಜಿ ಪಾದ ಮುಟ್ಟಿ ನಮಸ್ಕರಿಸಿ ಹಾಲ್ ನಲ್ಲಿ ಕುಳಿತ ಅವನನ್ನು ಡೈನಿಂಗ್‌ ಟೇಬಲ್ ಗೆ ಹೊರಡಿಸಿದರು ಸವಿತಾ. ಇಬ್ಬರಿಗೂ ತಿಂಡಿ ಕೊಟ್ಟು, ತಾವೇ ಸಡಗರದಿಂದ ಕಾಫಿ ಬೆರೆಸಲು ನಿಂತರು.

ಲೊಟ್ಟೆ ಹೊಡೆಯುತ್ತಾ ಇಬ್ಬರೂ ಮತ್ತೊಂದು ದೋಸೆ ಹಾಕಿಸಿಕೊಂಡರು. “ಅಜ್ಜಿ. ನೀನೂ ದೋಸೆ ತಗೊಂಡು ಇಲ್ಲೇ ಬಾ,” ರೂಪಾ ಕೂಗಿದಳು.

“ಬೇಡಮ್ಮ….. ಇಷ್ಟು ಹೊತ್ತಲ್ಲಿ ದೋಸೆ ತಿಂದರೆ ರಾತ್ರಿ ನನಗೆ ಊಟ ಸೇರಲ್ಲ,” ಎನ್ನುತ್ತಾ ಸವಿತಾ ಬಂದು ಅವರೆದುರು ಕುಳಿತರು. ರಮಾ ಮೂವರಿಗೂ ಹಬೆಯಾಡುವ ಕಾಫಿ ಕೊಟ್ಟಳು.

ಎಷ್ಟೋ ಸಲ ಸಂಜೆ ತನ್ನ ಮನೆಗೆ ಹೊರಡುವ ಮೊದಲು ರೂಪಾಳನ್ನು ಮನೆಗೆ ಡ್ರಾಪ್‌ ಮಾಡಿ. ಕಾಫಿ ಕುಡಿದು ನಂತರ ಹೊರಡುತ್ತಿದ್ದ ಡಾ. ಸಂದೀಪ್‌. ಇವರ ಆಸ್ಪತ್ರೆಯಲ್ಲೇ ಕೆಲಸಕ್ಕೆ ಸೇರಿದ್ದ ಅವನು, ರೂಪಾಳಿಗಿಂತ 2 ವರ್ಷ ಸೀನಿಯರ್‌ ಸಹಪಾಠಿ. ಮೊದಲಿನಿಂದಲೂ ಸಲಿಗೆ, ಸ್ನೇಹಾ ಬೆಳೆಸಿಕೊಂಡಿದ್ದ ಅವರು ಇದೀಗ ಪ್ರೇಮದಲ್ಲಿ ಬಂಧಿಗಳಾಗಿದ್ದರು. ಇವರ ಮನೆಯವರೆಲ್ಲರಿಗೂ ಅವರ ಈ ಜೋಡಿ ಆಪ್ಯಾಯಮಾನವಾಗಿತ್ತು.

ಸುಸಂಸ್ಕೃತ ಕುಟುಂಬಕ್ಕೆ ಸೇರಿದ್ದ ಸಂದೀಪ್‌, ಎಲ್ಲಾ ವಿಧದಲ್ಲೂ ರೂಪಾಳಿಗೆ ತಕ್ಕ ವರನಾಗಿದ್ದ. ಮದುವಂ ನಂತರ ರೂಪಾ ಸಹ ತನ್ನ ತಾಯಿಯ ತರಹವೇ ಆಸ್ಪತ್ರೆಗೆ ಸಮರ್ಪಿತಳಾದರೆ ಮುಂದೆ ಹೇಗೆ ಎಂಬುದೇ ಸವಿತಾರ ಚಿಂತೆ ಆಗಿತ್ತು. ತಮ್ಮ ಬಗ್ಗೆ ಆತ್ಮವಿಶ್ವಾಸ ತುಂಬಿದ್ದ ಸವಿತಾ, ಮುಂದೆ ಮೊಮ್ಮಗಳ ಮಗುವಿನ ಜವಾಬ್ದಾರಿ ತಾವೇ ಹೊರಲಿಕ್ಕೂ ಸಿದ್ಧರಾಗಿದ್ದರು.

ಹೀಗೆ ದಿನಗಳು ಉರುಳುತ್ತಾ ಹೋದವು. ತನ್ನ ಕೆಲಸ ಮುಂದುವರಿಸುತ್ತಾ ಸಂದೀಪ್‌ ಆಂಕಾಲಜಿಯಲ್ಲಿ ಎಂ.ಡಿ. ಮುಂದುವರಿಸಿದರೆ, ರೂಪಾ ಗ್ಯಾಸ್ಟ್ರೋ ಎಂಟರಾಲಜಿಯಲ್ಲಿ. ಇಬ್ಬರ ಸತತ ದುಡಿಮೆ ಕಂಡು ಸವಿತಾ ಒಂದು ಷರತ್ತು ಮುಂದಿಟ್ಟರು. ಏನೇ ಇರಲಿ, ಇಬ್ಬರೂ ಮಧ್ಯಾಹ್ನ ಮನೆಗೆ ಬಂದು ತಮ್ಮ ಜೊತೆ ಒಂದು ತುತ್ತು ಊಟ ಮಾಡಿಕೊಂಡೇ ಹೋಗಬೇಕೆಂದು ಪಟ್ಟು ಹಿಡಿದರು. ಅವರಿಬ್ಬರೂ ಖುಷಿ ಖುಷಿಯಾಗಿಯೇ ಒಪ್ಪಿಕೊಂಡರು. ಸಂದೀಪನಿಗಂತೂ ತನ್ನ ಮನೆಯಲ್ಲಿ ಅಜ್ಜಿ ಇಲ್ಲದ ಕಾರಣ, ರೂಪಾಳಂತೆಯೇ ಸವಿತಾರನ್ನು ತನ್ನ ಅಜ್ಜಿ ಮಾಡಿಕೊಂಡು ಆಗಾಗ, ಅವಳ ಮೇಲೆ ಹುಸಿ ದೂರು ನೀಡುತ್ತಿದ್ದ. ಇವರಿಬ್ಬರ ಪ್ರೇಮ ಕಲಹ ಅಜ್ಜಿಗೆ ಬಹಳ ವಿನೋದವಾಗಿತ್ತು.

ಇವರಿಬ್ಬರೂ ಈಗ ಸವಿತಾ ಅಜ್ಜಿಗೆ ಪ್ರಿಯ ಮೊಮ್ಮಕ್ಕಳೇ ಆಗಿಹೋಗಿದ್ದರು. ಇಬ್ಬರ ಎಂ.ಡಿ ಮುಗಿದ ತಕ್ಷಣ ಮದುವೆ ಎಂದು ಆಗಾಗ ನೆನಪಿಸಿ ಅವರನ್ನು ರೇಗಿಸುವರು. ಮುಂದೆ ಸಂದೀಪನನ್ನು ಏಕವಚನದಲ್ಲಿ ಸಂಬೋಧಿಸಬಾರದು ಎಂದು ಮೊಮ್ಮಗಳಿಗೆ ಕಿವಿಮಾತು ಹೇಳುತ್ತಿದ್ದರು. ಅದನ್ನು ಕೇಳಿ, “ಈ ಗಯ್ಯಾಳಿ ಅಷ್ಟು ಒಳ್ಳೆಯವಳಾಗ್ತಾಳಾ ಅಜ್ಜಿ….” ಎಂದು ಸಂದೀಪ್‌ ನಟಿಸಿದರೆ, ಬೇಕೆಂದೇ ರೂಪಾ ಅವನನ್ನು ಅಟ್ಟಿಸಿಕೊಂಡು ಹೋಗುತ್ತಿದ್ದಳು. ಅಂತೂ ಮನೆ ಇವರ ಆನಂದದ ಕಲರವದಿಂದ ತುಂಬಿಹೋಗಿತ್ತು.

ಬಿಡುವಾದಾಗೆಲ್ಲ ರಮಾಳನ್ನು ಜೊತೆ ಮಾಡಿಕೊಂಡು ಸವಿತಾ ಮದುವೆಗೆ ಬೇಕಾದ ಹಲವು ಸಾಮಗ್ರಿ ಕೊಂಡು ತಂದು ಸಂಗ್ರಹಿಸತೊಡಗಿದರು. ನೋಡಿದ್ದೆಲ್ಲ ಮೆಚ್ಚುಗೆಯೇ…. ಮೊಮ್ಮಗಳ ಮದುವೆಯ ಸಡಗರ, ಸಂಭ್ರಮದಲ್ಲಿ ವಾರಕ್ಕೆ 3 ಸಲ ಶಾಪಿಂಗ್‌ ಹೊರಡುತ್ತಿದ್ದರು. ಆರತಕ್ಷತೆಗೆ ಹೋಟೆಲ್ ಬುಕಿಂಗ್‌, ಕೇಟರರ್ಸ್‌, ಡೆಕೋರೇಟರ್‌, ಛತ್ರ ಇತ್ಯಾದಿ ದೊಡ್ಡ ಕೆಲಸಗಳನ್ನು ಇವರ ಮಗ ಸೊಸೆ ವಿಚಾರಿಸಿಕೊಂಡರು. ಉಳಿದ ಜವಳಿ ವ್ಯಾಪಾರ, ಯಾರು ಯಾರಿಗೆ ಏನೇನು ಬಳುವಳಿ, ಅತಿಥಿಗಳ ಲಿಸ್ಟ್ ಇತ್ಯಾದಿ ಹತ್ತು ಹಲವು ಉಳಿದ ತಯಾರಿ ಸವಿತಾರದಾಗಿತ್ತು. ಹೀಗೆ ರಮಾ ಜೊತೆ ಆಕೆ ಬೇಕಾದ ಎಲ್ಲಾ ತಯಾರಿ ಮುಗಿಸಿದ್ದರು.

ಒಂದೆಡೆ ಮನೆಯ ವಹಿವಾಟು, ಇದೀಗ ಮೊಮ್ಮಗಳ ಮದುವೆ ತಯಾರಿ, ಶಾಪಿಂಗ್‌ ಇತ್ಯಾದಿ ಎಲ್ಲಾ ಜವಾಬ್ದಾರಿ ಅವರ ಹೆಗಲಿಗೇರಿತ್ತು. ಇದೆಲ್ಲದರ ಮಧ್ಯೆ ಯಾವುದೋ ಕಾರಣಕ್ಕೆ ರೂಪಾ ತುಸು ಡಲ್ ಆಗಿದ್ದಾಳೆ ಎಂದು ಸೂಕ್ಷ್ಮ ಸ್ವಭಾವದ ಅಜ್ಜಿ ಗುರುತಿಸಿದರು. ತಾನು ಹೊಸ ಮನೆ, ಹೊಸ ಕುಟುಂಬಕ್ಕೆ ಸೇರಲಿದ್ದೇನೆ ಎಂಬ ಗಾಬರಿಯೋ ಅಥವಾ ಹುಟ್ಟಿದ ಮನೆ ತೊರೆದು ಹೋಗಬೇಕಲ್ಲ ಎಂಬ ಬೇಸರವೇ ತಿಳಿಯಲಿಲ್ಲ. ಮತ್ತೊಂದು ವಿಷಯ ಎಂದರೆ, ಸಂದೀಪ್‌ ಸಹ ಅಷ್ಟೇ ಡಲ್ ಆಗಿದ್ದ ಎಂಬುದು ಇತ್ತೀಚೆಗೆ ಅವನು ಬರುವುದು ಕಡಿಮೆ ಆಗಿಹೋಯಿತು. ಯಾವಾಗಲೋ ಬಂದರೂ, ಉತ್ಸಾಹ, ಉಲ್ಲಾಸ, ಆ ಕಳೆಕಳೆಯಾದ ನಗು ಇರಲಿಲ್ಲ. ಬಂದುದ್ದಕ್ಕೆ ನಾಲ್ಕು ಮಾತನಾಡಿ ಹೊರಟುಬಿಡುತ್ತಿದ್ದ.

ಸಂದೀಪ್‌ ನನ್ನು ಏನೂ ಕೇಳಲಾಗದು, ರೂಪಾ ಇದಕ್ಕೆ ಉತ್ತರಿಸಲಿ ಎಂದು ನಿರ್ಧರಿಸಿದರು ಸವಿತಾ. ಸದಾ ಕಲಕಲ ಎಂದು ನಗುತ್ತಾ, ಅಜ್ಜಿಯನ್ನು ರೇಗಿಸುತ್ತಿದ್ದ ಹುಡುಗಿ ಇದೀಗ ಮೌನ ಗೌರಿ ಆಗಿದ್ದಳು. ಅವಳು ಮದುವೆ ಮಾಡಿಕೊಂಡು ಹೊರಟುಹೋದರೆ ಹೇಗಪ್ಪ ಮುಂದೆ ಎಂದು ಸವಿತಾರಿಗೆ ಚಿಂತೆಯಾಯಿತು.

ಹೀಗೆ ಒಮ್ಮೆ ರೂಪಾ ತುಸು ಬಿಡುವಾಗಿದ್ದಾಗ ಅಜ್ಜಿ ಅವಳನ್ನು ಕೋಣೆಗೆ ಕರೆಸಿಕೊಂಡು ಈ ವಿಷಯವಾಗಿ ವಿಚಾರಿಸಿದರು. ಮದುವೆಗೆ ಇನ್ನೂ 2 ವಾರ ಮಾತ್ರ ಉಳಿದಿತ್ತು. ಈಗೆಂಥ ಬೇಸರ….? ಏನೇ ಸಮಸ್ಯೆ ಇದ್ದರೂ ಕುಳಿತು ಮಾತನಾಡಬೇಕಿತ್ತೇ ಹೊರತು ನಿರ್ಲಕ್ಷಿಸುವಂತಿರಲಿಲ್ಲ. ಅಜ್ಜಿಯ ಈ ಮಾತಿಗೆ ರೂಪಾ ಬಡಬಡನೆ ಉತ್ತರಿಸಿದಳು.

“ಬೇಸರ ಮಾಡಿಕೊಳ್ಳದೆ ಇನ್ನೇನಜ್ಜಿ…..? ಸಂದೀಪನ ತಾಯಿ ಹೇಳ್ತಾರೆ, ಧಾರೆಯ ದಿನ ನಾನು ಅವರ ಮನೆತನದ ಭಾರಿ ರೇಷ್ಮೆ ಸೀರೆ ಉಟ್ಟು, ಹಳೆಯ ಕಾಲದ ಒಡವೆ ಧರಿಸಿ ಗಂಗಮ್ಮ ಗೌರಮ್ಮನಂತೆ ಇರಬೇಕಂತೆ….. ಇದನ್ನು ಅವರತ್ತೆ ಅವರಿಗೆ ಕೊಟ್ಟಿದ್ದಂತೆ….. ಈ ಪದ್ಧತಿ ಹೀಗೇ ಮುಂದುವರಿಯಬೇಕು ಅಂತಿದ್ದಾರೆ….” ರೂಪಾ ವಿವರಿಸಿದಳು.

“ಸರಿ…… ಇದರಲ್ಲಿ ದೊಡ್ಡ ಕಷ್ಟವೇನಿದೆ?”

“ಅಯ್ಯೋ….. ಆ ಪೂರ್ವಕಾಲದ ಭಾರಿ ಭರ್ಜರಿ ಸೀರೆ. ಅದರಲ್ಲಿನ ಅಂದಿನ ಕಾಲದ ಕಸೂತಿ….. ಆ ಭಾರಿ ಗಾತ್ರದ ಒಡವೆಗಳನ್ನು ಹೇರಿಕೊಂಡು ನಾನು ಧಾರೆ ದಿನವಿಡೀ ಎಷ್ಟು ಸಲ ಎದ್ದುಬಿದ್ದು ಎಲ್ಲರಿಗೂ ನಮಸ್ಕಾರ ಮಾಡಲಿ? ಒಟ್ಟು 4 ಕಿಲೋ ತೂಕದ ಒಡವೆ…..  100 ವರ್ಷಗಳ ಹಳೆಯದು…. ಇಂದಿನ ಆಧುನಿಕ ಕಾಲಕ್ಕೆ ಇದೆಲ್ಲ ಬೇಕೇ?

“ನಾನು ಇಂದಿನ ಕಾಲಕ್ಕೆ ತಕ್ಕಂತೆ ಲೇಟೆಸ್ಟ್ ಮೈಸೂರು ಸಿಲ್ಕ್ ಸೀರೆ, ಲೈಟ್‌ ವೆಯ್ಟ್ ಒಡವೆ ಆರಿಸಿಟ್ಟಿದ್ದೀನಿ…. ಫ್ರೆಂಡ್ಸ್ ಮುಂದೆ ಅಪ್‌ ಟು ಡೇಟ್‌ ಆಗಿರುವುದು ಬಿಟ್ಟು ಪೂರ್ವಕಾಲದ ಪುಟ್ಟಮ್ಮನಂತೆ `ಕಪ್ಪುಬಿಳುಪು’ ಸಿನಿಮಾದಲ್ಲಿ ಕಲ್ಪನಾ ತರಹ ರಾಶಿ ಒಡವೆ ಹೇರಿಕೊಂಡು ಕೂರಲೇ? ಯಾರಿಗೆ ಬೇಕು ಈ ಗೊಡ್ಡು ಸಂಪ್ರದಾಯ…..? ಮದುವೆ ಆಗೋ ಮೂಡೇ ಹೋಯ್ತು…. ಇಂದಿನ ಕಾಲಕ್ಕೆ ಇವೆಲ್ಲ ಔಟ್‌ ಡೇಟೆಡ್‌ ಅಂತ ಅವರಿಗೆ ಯಾಕೆ ಅರ್ಥ ಆಗ್ಲಿಲ್ಲ….?” ರೂಪಾ ಬಡಬಡಿಸಿದಳು.

ಇಷ್ಟೇ ತಾನೇ? ಪ್ರಕರಣ ತೀರಾ ಗಂಭೀರ ಏನೂ ಅಲ್ಲ ಎಂದು ಸವಿತಾ ನಿಡುಸುಯ್ದರು.

“ಇದಕ್ಕೆ ನಮ್ಮ ಅಳಿಯಂದ್ರು ಏನಂತಾರೆ…..?”

“ಇನ್ನೇನು ಹೇಳ್ತಾನೆ….. ಅವರಮ್ಮನ ಮಾತಿಗೆ ಎದುರಾಡಲಾರ….. ನನ್ನ ಅಭಿಪ್ರಾಯ ಬೇಡ ಅನ್ನಲಾರ….” ಮಾತು ಪೂರೈಸುವಷ್ಟರಲ್ಲಿ ರೂಪಾ ಬಿಕ್ಕಿದಳು.

light-house-story2

ಸವಿತಾರಿಗೆ ಸಂದೀಪನ ಸಂದಿಗ್ಧ ಅರ್ಥವಾಯಿತು. ಅವನು ತನ್ನ ತಾಯಿಯನ್ನು ಬಿಟ್ಟುಕೊಡಲಾರ, ಇತ್ತ ಪ್ರೇಮಿಸಿದ ಹುಡುಗಿಯ ಮನ ನೋಯಿಸಲಾರ. ಪಾಪ, ಅವನು ತಾನೇ ಏನು ಮಾಡಬಲ್ಲ? ಇಬ್ಬರು ಹೆಂಗಸರನ್ನು ಏಕಕಾಲಕ್ಕೆ ಮೆಚ್ಚಿಸುವುದು ಅಂದ್ರೇನು ಎಂದು ಕಲಿಯಲಾರಂಭಿಸಿದ್ದ. ರೂಪಾ ತಾನೇ ಏನು ಮಾಡಿಯಾಳು? ಮೊದಲಿನಿಂದಲೂ ಅವಳು ತನ್ನ ಓದು, ವ್ಯಾಸಂಗ ಇದರಲ್ಲಿ ಮುಳುಗಿಹೋಗಿದ್ದಳು. ಅದಾಗಿ ಡಾಕ್ಟರ್‌ ವೃತ್ತಿಗೆ ಸೇರಿ, ಆಸ್ಪತ್ರೆಯಲ್ಲಿ ತಲ್ಲೀನಳಾದಳು. ಆಧುನಿಕ ಕಾಲಕ್ಕೆ ತಕ್ಕಂತೆ ಉಟ್ಟು, ತೊಟ್ಟು ನಲಿದಾಡಲು ಅವಳಿಗೆ ಪುರಸತ್ತೇ ಇರಲಿಲ್ಲ. ಅವಳು ಬಹಳ ಸರಳ ಜೀವಿ. ಬಲು ಸಿಂಪಲ್ ಸೋಬರ್‌. ಇಂಥ ಭಾರಿ ಜರಿ ಸೀರೆ, ಒಡವೆಗಳ ರಾಶಿ ನೋಡಿ ಗಾಬರಿಗೊಂಡಿದ್ದರೆ ಆಶ್ಚರ್ಯವಿಲ್ಲ.

ಸವಿತಾ ಸ್ವಲ್ಪ ಹೊತ್ತು ಯೋಚಿಸಿ ನಂತರ ಹೇಳಿದರು, “ನೀನು ನಿನ್ನ ಭಾವಿ ಅತ್ತೆ ಬಳಿ ಅಂದ್ರೆ ಮೀರಾ ಆಂಟಿ ಹತ್ತಿರ ಈ ಬಗ್ಗೆ ಮಾತನಾಡಿದ್ದೀಯಾ? ನೀನು ಧಾರೆಗೆ ರೆಡಿ ಮಾಡಿಸಿದ್ದ ಸೀರೆ, ಒಡವೆ ತೋರಿಸಿದೆಯಾ? ಅದನ್ನೇ ಮದುವೆಗೆ ಬಳಸುತ್ತೀನಿ ಅಂತ ಹೇಳಲಿಲ್ಲವೇ?”

“ಇವೆಲ್ಲ ತೋರಿಸಿದೆ, ಅವರಿಗೆ ಅದು ಇಷ್ಟಾನೂ ಆಗಿತ್ತು. ಇದೆಲ್ಲ ಬಹಳ ಲೈಟ್‌ ಆಯ್ತು, ತುಂಬಾ ಗ್ರಾಂಡ್‌ ಅಲ್ಲ ಅಂದ್ರು. ಇದನ್ನು ಮದುವೆಯ ಹಿಂದಿನ ದಿನ ವರಪೂಜೆಗೆ ಬಳಸಲು ಹೇಳಿದರು. ಧಾರೆಗೆ ಮಾತ್ರ ತಮ್ಮ ಮನೆತನದ ಆ ಭಾರಿ ಸೀರೆ, ಒಡವೆ ಧರಿಸಲೇಬೇಕು ಅಂತ ಒತ್ತಾಯ ಮಾಡಿದರು. ನೀನೇ ಹೇಳಜ್ಜಿ, ನಾನು ಕಲ್ಪನಾ ಗೆಟಪ್‌ ನಲ್ಲಿ ಮಣಭಾರದ ಆ ಸೀರೆ ಉಟ್ಟು, ಇಂಥ ಭಾರಿ ಒಡವೆ ಧರಿಸಿ ಕುಳಿತರೆ, ಎಲ್ಲರ ಮುಂದೆ ಕಾರ್ಟೂನ್‌ ಆಗೋಲ್ಲವೇ? ಖಂಡಿತಾ ನನ್ನಿಂದ ಆಗಲ್ಲ ಅಜ್ಜಿ….” ರೂಪಾಳ ಮೂಡ್‌ ಮತ್ತೆ ಕೆಟ್ಟಿತು.

“ನೋಡಮ್ಮ, ನಡುಯಸಲ್ಲೇ ಆಕೆ ಪತಿಯನ್ನು ಕಳೆದುಕೊಂಡು, ಒಬ್ಬರೇ ಕಷ್ಟಪಟ್ಟು ಸಂದೀಪ್‌ ನ ಬೆಳೆಸಿದ್ದಾರೆ. ಮೊದಲಿನಿಂದ ಅಂಥ ಪರಂಪರೆಯಲ್ಲಿ ಸೊಸೆಯಾಗಿ ಬಂದರು. ಆಕೆಗೆ ತಮ್ಮ ಕುಟುಂಬದ ಪ್ರತಿಷ್ಠೆಯೂ ಮುಖ್ಯ ಅಲ್ಲವೇ? ಆದರೂ ಈ ಸಮಸ್ಯೆಗೆ ಒಂದು ಪರಿಹಾರವಿದೆ….”

“ಅದೇನಜ್ಜಿ…..?” ರೂಪಾ ಕೇಳಿದಳು.

“ಇತ್ತೀಚೆಗೆ ನಿಮ್ಮ ಜನರೇಶನ್‌ ನವರು ಅದೇನು ನಡೆಸುತ್ತೀರಾ? ಪ್ರೀ ವೆಡ್ಡಿಂಗ್‌ ಶೂಟ್‌ ಅಂತ…. ಹಾಗಾಗಿ ಅದರಲ್ಲಿ ಅವರು ಹೇಳಿದಂತೆ ಆ ಸೀರೆ ಉಟ್ಟು, ಅವೆಲ್ಲ ಒಡವೆ ತೊಟ್ಟು ಫೋಟೋ ಶೂಟ್‌ ನಡೆಸೋದು…. ಅದು ನಿನಗೆ ಕಂಫರ್ಟೆಬಲ್ ಅಲ್ಲ ಅನಿಸಿದರೆ ನಂತರ ನಾನೇ ನಿನ್ನ ಅತ್ತೆ ಹತ್ತಿರ ಮಾತನಾಡ್ತೀನಿ, ಅವರನ್ನು ಒಪ್ಪಿಸ್ತೀನಿ. ಆಗ ನೀನು ನಿನ್ನ ಸೀರೆ ಒಡವೆ ಬಳಸಿಕೋ. ಒಂದು ವೇಳೆ ಈ ಫೋಟೋ ಶೂಟ್‌ ನಲ್ಲಿ ನಿನಗೆ ಆ ಸೀರೆ ಒಡವೆ ಸೂಟ್‌ ಆಗಿ, ಓಕೆ ಅನಿಸಿದರೆ ಮದುವೆ ದಿನ ಅದನ್ನೇ ಧರಿಸು!

“ನೋಡಮ್ಮ, ಮದುವೆ ಅನ್ನೋದು 2 ಮನೆತನಗಳ ಸಂಬಂಧದ ಸೇತುವೆ. ಮೀರಾ ಆಂಟಿ ನಿನ್ನ ಭಾವನೆ ಅರ್ಥ ಮಾಡಿಕೊಳ್ಳಲಿ ಅಂತ ನೀನು ಬಯಸಿದರೆ, ನಿನ್ನ ಕಡೆಯಿಂದ ಮೊದಲು ಆ ಪ್ರಯತ್ನ ಆಗಲಿ. ನೀನು ಈ ರೀತಿ ಮಾಡಿ ಸಂದೀಪ್‌ ನ ಮಗ ಗೆಲ್ಲಬಹುದು, ತನ್ನ ತಾಯಿಯ ಮಾತಿಗೆ ಭಾವಿ ಪತ್ನಿ ಇಷ್ಟು ಬೆಲೆ ಕೊಡ್ತಾಳೆ ಅಂತ ಅವನೂ ಹಿಗ್ಗುತ್ತಾನೆ. ಒಂದು ದಿನದ ವಿಷಯ ತಾನೇ? ಮತ್ತೆ ನೀನೇನೂ ಅದನ್ನು ಜೀವನವಿಡೀ ಆಗಾಗ ಧರಿಸುತ್ತಿರಬೇಕು ಅಂತ ಇಲ್ಲವಲ್ಲ….? ಹಾಗೆಯೇ ನಿನ್ನ ಆಯ್ಕೆಯ ಮಾಡ್‌ ಸೀರೆ ಒಡವೆ ಧರಿಸಲು ರಿಸೆಪ್ಶನ್‌ ಇದ್ದೇ ಇದೆಯಲ್ಲ?” ಸವಿತಾ ಮೊಮ್ಮಗಳ ಮನ ಓಲೈಸಿದರು.

“ಸರಿ ಅಜ್ಜಿ, ನೀನು ಹೇಳಿದಂತೆ ಆಗಲಿ. ನೀನು ಹೇಳಿದಂತೆಯೇ ನಾನು ಮಾಡ್ತೀನಿ,” ಎಂದ ರೂಪಾಳ ಮಾತುಗಳು ಅವಳು ಹಿಂದಿನಂತೆ ಸಹಜವಾದಳು ಎಂದು ಸಾರಿದ.

ನಂತರ ಸವಿತಾ ತಾವೇ ಬೀಗರ ಮನೆಗೆ ಹೊರಟು, ತಾಯಿ ಮಗನಿಗೆ ಮೊಮ್ಮಗಳ ಆಸೆಯ ಬಗ್ಗೆ ತಾವು ಅವಳನ್ನು ಒಪ್ಪಿಸಿದ್ದರ ಬಗ್ಗೆ ತಿಳಿಸಿದರು. ಅವರಿಬ್ಬರೂ ಖುಷಿ ಖುಷಿಯಾಗಿ ಈ ವಿಚಾರ ಒಪ್ಪಿಕೊಂಡರು. ಅದರ ಮರುದಿನ ರೂಪಾಳನ್ನು ಅವರ ಮನೆಗೆ ಕರೆದುಕೊಂಡು ಹೋಗಿ, ಅತ್ತೆ ಬಯಸಿದಂತೆ ಆ ಒಡವೆ ಸೀರೆಗಳಿಂದ ಸಿಂಗರಿಸಿದರು. ತನ್ನನ್ನು ಆ ಸಾಂಪ್ರದಾಯಿಕ ಗೆಟಪ್‌ ನಲ್ಲಿ ಗಮನಿಸಿದ ರೂಪಾ ನಾಚಿಕೊಂಡಳು. ಅವಳು ಆ ಸೀರೆ ಒಡವೆಗಳಲ್ಲಿ ಬಹು ಸುಂದರಳಾಗಿ ಕಂಡಳು.

ತನ್ನ ಭಾವಿ ಪತ್ನಿಯನ್ನು ಕಂಡು ಸಂದೀಪ್‌ ಗೂ ಸಂತೋಷವಾಯಿತು. ರೂಪಾ ಇದಕ್ಕೆ ಇಷ್ಟು ಸುಲಭವಾಗಿ ಒಪ್ಪಿ, ಇದೆಲ್ಲ ಸಲೀಸಾಗಿ ನಡೆಯುತ್ತದೆ ಎಂದು ಅವನು ಎಣಿಸಿರಲೇ ಇಲ್ಲ. ಅವನು ಎವೆಯಿಕ್ಕದೇ ಅವಳನ್ನೇ  ದಿಟ್ಟಿಸುತ್ತಿದ್ದ. ಎಲ್ಲರಿಗೂ ರೂಪಾಳ ಡ್ರೆಸ್‌ ಇಷ್ಟವಾಯಿತು. ಭಾರತೀಯ ಹುಡುಗಿ ಎಷ್ಟೇ ಆಧುನಿಕಳಾಗಿರಲಿ, ಹೆಚ್ಚು ಕಲಿತಿರಲಿ, ನವ ವಧುವಿನ ಡ್ರೆಸ್‌ ನಲ್ಲಿ ಅವಳು ಸಿದ್ಧಳಾದಾಗ ಅದು ಅವಳ ಪರ್ಸನಾಲ್ಟಿಯನ್ನೇ ಬದಲಿಸಿ ಬಿಡುತ್ತದೆ. ಮೀರಾಗೆ ತನ್ನ ಸೊಸೆ ಎಷ್ಟು ಸುಂದರವಾಗಿದ್ದಾಳೆ ಎಂದು ಹೆಮ್ಮೆ ಎನಿಸಿತು. ಫೋಟೋಗ್ರಾಫರ್‌ ಬಂದು ರೂಪಾಳ ಸಿಂಗಲ್, ಸಂದೀಪ್‌ ನ ಸಿಂಗಲ್, ನಂತರ ಜೋಡಿಯ ಫೋಟೋ, ಕುಟುಂಬದವರ ಜೊತೆಗಿನ ಫೋಟೋ ಎಂದು ಬಗಬಗೆಯ ಕೋನಗಳಲ್ಲಿ ಫೋಟೋ ಕ್ಲಿಕ್ಕಿಸಿದ.

ಅವಳು ಒಡವೆ ಧರಿಸುತ್ತಿದ್ದಾಗ, ಭಾವಿ ಅತ್ತೆ ಬಂದು ಹೇಳಿದರು, “ರೂಪಾ, ಈ ಮೂಗುತಿ ಬೇಡ ಬಿಡಮ್ಮ, ಸ್ವಲ್ಪ ಭಾರವಾಗಿದೆ. ನೀನು ಹಾಕಿಕೊಂಡ ನಂತರ ತುಂಬಾ ಹಿಂಸೆ ಎನಿಸಬಾರದು. ಧಾರೆಯ ದಿನ ನಿನಗೆ ಹಿಂಸೆ ಆಗೋದು ಬೇಡ. ಅದರ ಬದಲು ನೀನು ಅಮೆರಿಕನ್‌ ಡೈಮಂಡ್‌ ನ ಸಣ್ಣ ಮೂಗುತಿ ಹಾಕಿಕೋ. ಆಮೇಲೆ ಎಂದಾದರೂ ಪೂಜೆ ಟೈಮಲ್ಲಿ ಹಾಕಿಕೊಂಡರೆ ಆಯ್ತು. ಹಾಗೇ ಈ ಡಾಬು ಸಹ ಬೇಡ…. ಇಂದಿನ ದಿನಗಳಿಗೆ ಇದು ಭಾರಿ ಹೆವಿ ಅನಿಸುತ್ತೆ,” ಎಂದು ವಾತ್ಸಲ್ಯದಿಂದ ಹೇಳಿದರು.

ಆಗ ಸವಿತಾ ಅವಳ ಕಡೆ ನೋಡಿ ಮುಗುಳ್ನಕ್ಕರು. `ನೋಡಿದ್ಯಾ….. ನಾನು ಹೇಳಲಿಲ್ವಾ…. ನೀನು 2 ಮಾತು ಒಪ್ಪಿದರೆ ಅವರು ತಾನಾಗಿ 4 ಮೆಟ್ಟಿಲು ಇಳಿದು ಬರ್ತಾರೆ ಅಂತ…. ಪ್ರೀತಿ ವಿಶ್ವಾಸ ಅಂದ್ರೆ ಹೀಗೆ ಕಣಮ್ಮ……’  ಅಜ್ಜಿಯ ಮುಗುಳ್ನಗೆಯಲ್ಲೇ ರೂಪಾಳಿಗೆ ಎಲ್ಲ ಅರ್ಥವಾಗಿತ್ತು.

“ಒಟ್ಟಾರೆ ನಿನಗೆ ಯಾವುದು ತುಂಬಾ ಭಾರಿ ಅನ್ಸುತ್ತೋ ಅದನ್ನೆಲ್ಲ ಬದಲಾಯಿಸಿ ಬಿಡು,” ಎಂದು ಮತ್ತೊಮ್ಮೆ ಸಲಹೆ ನೀಡಿದರು.

“ಇಲ್ಲ ಅತ್ತೆ…. ಈ ಕಾಲುಗೆಜ್ಜೆ ತುಸು ಭಾರವಾದರೂ ಘಲ್ ಘಲ್ ಅಂತ ಎಷ್ಟು ಲಕ್ಷಣವಾಗಿದೆ ನೋಡಿ….. ನಾನು ಯಾವುದನ್ನೂ ಬದಲಾಯಿಸೋಲ್ಲ….. ಎಲ್ಲವನ್ನೂ ಹಾಗೇ ಹಾಕ್ಕೋತೀನಿ….. ಇದು ಫೋಟೋಗೆ ಬಹಳ ಚೆನ್ನಾಗಿ ಬರುತ್ತೆ,” ಎಂದು ಒಂದೊಂದಾಗಿ ಎಲ್ಲಾ ಒಡವೆ ಧರಿಸಿ, ಮೊದಲ ಬಾರಿಗೆ ಅವರಿಗೆ ಪಾದಕ್ಕೆರಗಿ ನಮಸ್ಕರಿಸಿದಳು.

“ನೂರು ಕಾಲ ನೀನು ಸುಖವಾಗಿರಮ್ಮ…..”

ಹೆಣ್ಣು ಮಕ್ಕಳಿಲ್ಲದ ಅವರಿಗೆ ಸೊಸೆಯೇ ತಮ್ಮ ಮಗಳು ಎನಿಸಿ, ಅವಳನ್ನು ಎದೆಗಾನಿಸಿಕೊಂಡರು. ಅವಳಿಗೆ ಹೃದಯ ತುಂಬಿ ಬಂದಂತೆನಿಸಿ, ಅವರ ಎದೆಗೊರಗಿ ಕಂಬನಿ ತುಳುಕಿಸಿದಳು.

“ಅಯ್ಯೋ….. ಮದುವೆ ಹುಡುಗಿ….. ಕಣ್ಣಲ್ಲಿ ನೀರು ಹಾಕಬಾರದಮ್ಮ,” ಎಂದು ತಮ್ಮ ಸೆರಗಿನಿಂದ ಅವಳ ಕಣ್ಣು ಒರೆಸಿದರು.

“ಇದು ಸಂತೋಷದ ಸಂತೃಪ್ತಿಯ ಆನಂದಬಾಷ್ಪ ಅತ್ತೆ…….” ಅವಳು ನುಡಿದಾಗ ಮೀರಾರಿಗೆ ಬಹಳ ಹೆಮ್ಮೆ ಎನಿಸಿತು.

ಹೀಗೆ ಮನಃಪೂರ್ವಕವಾಗಿ ಒಂದಾದ ಅತ್ತೆ ಸೊಸೆಯರನ್ನು ಕಂಡು ಸವಿತಾರ ಮನಸ್ಸು ತುಂಬಿ ಬಂತು. ತಮ್ಮ ಸೊಸೆ ಕಡೆ ತಿರುಗಿ ನೋಡಿದಾಗ, ಅವಳೂ ಕಣ್ಣೊರೆಸಿಕೊಳ್ಳುತ್ತಿದ್ದಳು.

“ಸರಿ….. ಸರಿ….. ಬೇಗ ಚೂರು ಮೇಕಪ್‌ ಗೆ ಟಚ್‌ ಕೊಡು…. ಫೋಟೋ ಸೆಷನ್‌ ಮುಗಿಸೋಣ…..” ಎಂದು ಸಂದೀಪ್‌ ಆ ಸನ್ನಿವೇಶ ತಿಳಿಗೊಳಿಸಿ ಎಲ್ಲರ ಮುಖದಲ್ಲಿ ನಗು ತರಿಸಿದ.

ಎಲ್ಲ ಸಾಂಗವಾಗಿ ಮುಗಿದು, ಅವಳು ಒಡವೆ ಸೀರೆ ಕಳಚಿ ಅತ್ತೆ ಕೈಗೆ ಕೊಟ್ಟು, ಅದನ್ನು ಅವರು ಒಳಗೆ ಕೊಂಡೊಯ್ದಾಗ, ರೂಪಾ ಓಡಿ ಬಂದು ಅಜ್ಜಿಯನ್ನು ಅಪ್ಪಿಕೊಂಡಳು.

“ಅಜ್ಜಿ…. ಅದಕ್ಕೆ ನಾನು ನಿನ್ನನ್ನು ಲೈಟ್‌ ಹೌಸ್‌ ಅನ್ನೋದು! ನಾವು ಇತರರ ಭಾವನೆಗಳಿಗೆ ಗೌರವಾದರ ಕೊಟ್ಟಾಗ, ಅವರು ನಮ್ಮ ಭಾವನೆಗಳನ್ನು ಎಷ್ಟು ಆದರಿಸುತ್ತಾರೆ ಎಂದು ಪ್ರತ್ಯಕ್ಷ ತೋರಿಸಿಕೊಟ್ಟೆ ಅಜ್ಜಿ. ನನ್ನ ಧಾರೆಯ ದಿನದ ಕಳವಳ ಎಲ್ಲಾ ಮಾಯವಾಯ್ತು!” ಎಂದು ಮತ್ತೆ ಅವರನ್ನು ಅಪ್ಪಿಕೊಂಡಳು.

“ಅಯ್ಯೋ….. ನಾನು ಸಂದೀಪ್‌ ಅಲ್ಲ….. ಬಿಡೇ…..” ಎಂದು ಅಜ್ಜಿ ತಮಾಷೆ ಮಾಡಿದಾಗ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರು. “ಅಜ್ಜಿ, ನೀವು ರೂಪಾಳಿಗೆ ಮಾತ್ರ ಲೈಟ್‌ ಹೌಸ್‌ ಅಲ್ಲ, ನನಗೂ ಸಹ! ಈ ಫೋಟೋ ಶೂಟ್‌ ವಿಷಯದ ಉದಾಹರಣೆ ಕೊಟ್ಟು ನೀವು ನನ್ನ ಮನಸ್ಸಿನ ಟೆನ್ಶನ್‌ ಪೂರ್ತಿ ಓಡಿಸಿದಿರಿ,” ಎಂದು ಸಂದೀಪ್‌ ಸವಿತಾರ ಪಾದಕ್ಕೆ ಎರಗಿದಾಗ, ಅವರು ಮೊಮ್ಮಗನನ್ನು ಸಂತೋಷವಾಗಿ ಆಶೀರ್ದಿಸಿದರು. ಇದನ್ನೆಲ್ಲ ದೂರದಿಂದ ಗಮನಿಸಿದ ಮೀರಾರಿಗೂ ಬಹಳ ಸಂತೋಷವಾಯಿತು. ರೂಪಾ ಸಂದೀಪ್‌ ರ ಮದುವೆ ನಿರ್ವಿಘ್ನವಾಗಿ ನಡೆಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ