ಕಥೆ ಶಾರದಾ ಕೃಷ್ಣಮೂರ್ತಿ

ಮನೆಗೆ ಹಿರಿಯರಾದ ರಾಧಕ್ಕ ಗೋಪಾಲರಾಯರು ಊರಿನಲ್ಲೇ ಉಳಿದುಬಿಟ್ಟಾಗ, ಕೆಲಸದ ಸಲುವಾಗಿ ಮಕ್ಕಳು ವಿದೇಶಕ್ಕೆ ಹೋಗಿ ನೆಲೆಸಿ, ಮೊಮ್ಮಕ್ಕಳು ಅಲ್ಲಿಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡರು. ಇವರೆಲ್ಲ ಅಜ್ಜ ಅಜ್ಜಿಯನ್ನು ನೋಡಲು ಊರಿಗೆ ಬಂದಾಗ ಹಬ್ಬದ ವಾತಾವರಣ ಹೇಗಿತ್ತು……?

ಇತ್ತೀಚೆಗಷ್ಟೇ ನಿರ್ಮಾಣಗೊಂಡ ನ್ಯೂ ಇಂಗ್ಲಿಷ್‌ ಸ್ಕೂಲ್‌ ನಲ್ಲಿ ಅಂದು ತುಂಬಾ ಸಡಗರ… ಅತೀ ಉತ್ಸಾಹ…ಸಂಭ್ರಮ….! ಎಂದಿಲ್ಲದ ಈ ಅತೀ ಸಂತಸ ಎಲ್ಲರ ಮುಖದಲ್ಲಿ ಮಿಂಚಿದಾಗ ಎಲ್ಲರೂ ಕುತೂಹಲ ಕೌತುಕದಲ್ಲಿ ತಲೆ ತುರಿಸಿಕೊಂಡು… `ಏನು ಉಂಟು ಮಾರಾಯ್ರೇ… ಇಂಥ ಗೌಜಿ ಇದೂಂತ…’ ಎಂದು ಮೂಗಿನ ಮೇಲೆ ಹೆಬ್ಬೆರಳು ಇಡದೆ ಇರರು.

ಶಾಲೆಯ ಪ್ರತಿ ಸದಸ್ಯ ವರ್ಗ ಶಿಸ್ತಾಗಿ ಬಂದಾಗಿತ್ತು. ಎಲ್ಲರೂ ಸರಿಯಾದ ವೇಳೆಗೆ ಬಂದಿದ್ದರು. ಆಗಸ್ಟ್ 15, ಜನವರಿ 26ನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ದರು. ಆದರೆ ಇಂದಿನ ದಿನ ವಿಜೃಂಭಣೆಯಿಂದ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಆಚರಿಸಲು ಹಮ್ಮಿಕೊಂಡಿದ್ದರು. ಅದು ಏಕೆಂದರೆ ಅಂದು ಕರ್ನಾಟಕ ರಾಜ್ಯೋತ್ಸ ದಿನ!

ಕನ್ನಡಾಂಬೆಯ ಕೀರ್ತನೆ…. ಅವಳ ಅಭ್ಯುದಯ….. ಅವಳನ್ನು ಗುಣಗಾನ ಮಾಡುತ್ತಾ ಸಂಪೂರ್ಣ ಕನ್ನಡಕ್ಕಾಗಿ ತಾಯಿ ಭುವನೇಶ್ವರಿಗಾಗಿ ಅರ್ಪಿಸಿದ ಮಹಾ ಸುದಿನ! ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸ ದಿನ. ಅದನ್ನು ಅಚ್ಚುಕಟ್ಟಾಗಿ ಮಾಡಲೆಂದೇ ವಹಿಸಿದ ಪರಿಶ್ರಮ. ಆ ಮಾತೃದೇವಿ ರಾಜರಾಜೇಶ್ವರಿ ನಮಗಿತ್ತ ವರಗಳನ್ನು ಪಡೆದ ನಾವು ಅವಳ ಮಡಿಲಲ್ಲಿ ಬೆಳೆದು ಸುಖ ಸಮೃದ್ಧಿಯಿಂದ ಜೀವನ ನಡೆಸುವಾಗ ಅವಳ ಉಪಕಾರ ಸ್ಮರಿಸಿ ಅವಳಿಗಾಗಿ ಅವಳ ಸ್ತುತಿ ಮಾಡಿ, ಇನ್ನಷ್ಟು ಶಕ್ತಿ ಕೊಡಲಿ ನಮ್ಮೆಲ್ಲರ ಕನ್ನಡಿಗರಲ್ಲಿ ಅವಳ ಹರಕೆಯಿಂದ ನಮ್ಮ ಕರ್ನಾಟಕ ಉತ್ತುಂಗ ಶಿಖರಕ್ಕೇರಲಿ, ಇಡೀ ಜಗತ್ತಿನಲ್ಲೇ ಪುಣ್ಯಭೂಮಿ ಆದ ಭಾರತಾಂಬೆಯ ಮಡಿಲಲ್ಲಿ… ಅದೂ ಕರ್ನಾಟಕದಲ್ಲಿ, ಕನ್ನಡ ನಾಡಿನಲ್ಲಿ ಹುಟ್ಟಿ ಅಲ್ಲ ಬದುಕು ಕಟ್ಟಿಕೊಂಡು ಅವಳಿಗಾಗಿ, ಕನ್ನಡ ಮಾತೆಗಾಗಿ ದುಡಿದು ತಮ್ಮ ಜೀವನ ಮಂಡಿಸಿಟ್ಟವರ ಪರವಾಗಿಯೂ ಅವರಿಗೆ ನಮ್ಮೆಲ್ಲರ ನಮನ ಅರ್ಪಿಸುವ ಮಹತ್ತರ ದಿನ.

ಶಾಲೆ ಸುಣ್ಣ ಬಣ್ಣಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು. ಬಣ್ಣ ಬಣ್ಣದ ಸೇವಂತಿಗೆ, ಮಲ್ಲಿಗೆ, ಜಾಜಿ, ಗುಲಾಬಿ ಹೂಗಳ ಮಾಲೆ ಮತ್ತು ಹಸಿರು ಮಾವಿನೆಲೆಯ ತೋರಣಗಳಿಂದ ಆಹಾ…. ಮಂಟಪ ಮದುವೆ ಮಂಟಪದಂತೆಯೇ ಸುಂದರವಾಗಿ ತೋರುತ್ತಿತ್ತು. ಗಾಳಿ ಬಂದಾಗ, ಇಳಿಬಿದ್ದ ಪುಷ್ಪ ಮಾಲೆಗಳು ತೂಗುತ್ತಾ ಕಂಪು ಬೀರುತ್ತಾ… ಬನ್ನಿ…. ಬನ್ನಿ ಎಂದು ಕರೆಯುವಂತೆ ಅನಿಸುತ್ತಿತ್ತು. ಇವೆಲ್ಲವನ್ನೂ ಮಕ್ಕಳೇ ಅಲಂಕರಿಸಿದ್ದರು ಎಂದು ಗೊತ್ತಾದಾಗ ಎಲ್ಲರಿಗೂ ಆಶ್ಚರ್ಯವಾಯಿತು.

ಅದಲ್ಲದೆ, ಶಾಲೆಯ ಮಹಾದ್ವಾರದ ಬಳಿಯ ಧ್ವಜ ಕಟ್ಟೆಯವರೆಗೂ ಬಿಡಿಸಿದ್ದ ಅನೇಕ ಬಗೆಯ ರಂಗೋಲಿಗಳು ಒಂದಕ್ಕೊಂದು  ಅಂದಚೆಂದದ ಬಣ್ಣಗಳಿಂದ ಅಲಂಕೃತವಾಗಿದ್ದವು. ಧ್ವಜ ಕಟ್ಟೆಯ ಕೆಳಗೆ ಬಿಡಿಸಿದ 30 ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ರಾಜ್ಯದ ನಕ್ಷೆ, ಅದರ ಹಿಂದೆ ಚಾಮುಂಡೇಶ್ವರಿಯ ಭಾವಚಿತ್ರ ಎಲ್ಲವೂ ಸುಂದರವಾಗಿ ಮೂಡಿಬಂದಿದ್ದವು. ಎಲ್ಲವನ್ನೂ ಶಾಲೆಯ ಮಕ್ಕಳೇ ಬಿಡಿಸಿದ್ದಂತೂ ಬಹಳ ವಿಶೇಷವಾಗಿತ್ತು.

ನವಿಲಿನ ಆಕಾರದ ಎರಡು ದೊಡ್ಡ ದೊಡ್ಡ ಹಿತ್ತಾಳೆಯ ದೀಪಸ್ತಂಭಗಳು ಎಣ್ಣೆ ಬತ್ತಿಯೊಂದಿಗೆ ಉರಿಯುತ್ತಿದ್ದವು. ಆ ಸಮಾರಂಭಕ್ಕೆ  ಊರಿನವರೆಲ್ಲರೂ ಸೇರಿದ್ದರು. ವೇದಿಕೆಯ ಮೇಲೆ ದೇಶಕ್ಕಾಗಿ, ಕರ್ನಾಟಕದ ಏಳಿಗೆಗಾಗಿ ಹೋರಾಡಿದ ವೀರರ, ವೀರ ವನಿತೆಯರ, ಮಹನೀಯರ ಭಾವಚಿತ್ರಗಳು, ಜೊತೆಗೆ ಗಾಯಕ, ಕವಿ, ಸಾಹಿತಿಗಳ ಭಾವಚಿತ್ರಗಳು ಹೂಮಾಲೆಯಿಂದ ಅಲಂಕೃತವಾಗಿದ್ದವು.

ನಂತರ ಗಣ್ಯಾತಿಗಣ್ಯರು ವೇದಿಕೆಯ ಮೇಲೆ ಆಸೀನರಾದರು. ಶಿಕ್ಷಣ ಖಾತೆಯ ಹಿರಿಯ ಅಧಿಕಾರಿ ಗೋಪಾಲ್ ‌ರಾವ್‌ಧ್ವಜ ವಂದನೆ ಮಾಡಿದರು. ಅವರ ಮನೆಯವರು ದೀಪ ಬೆಳಗಿಸಿದರು. ಗೋಪಾಲ್ ‌ರಾಲ್ ‌ರವರ ಹಿರಿಯಕ್ಕ ರಾಧಕ್ಕನ ಹೆಸರಿನಲ್ಲಿ ಹೊಸ ಲೈಬ್ರೆರಿ ಸ್ಥಾಪಿಸಿ, ಅದರಲ್ಲಿ ಎಲ್ಲಾ ವೈವಿಧ್ಯಮಯ ಪುಸ್ತಕಗಳನ್ನು ಶೇಖರಿಸುವುದರ ಜೊತೆಗೆ ಎಲ್ಲರೂ ಆರಾಮವಾಗಿ ಕುಳಿತು ಓದುವಂತಹ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಮಕ್ಕಳು ಆಡಲು ಮೈದಾನ ಜೊತೆಗೆ ಎಝಡ್‌ ವ್ಯವಸ್ಥೆ, ಹೆಂಗಸರಿಗಾಗಿ ಶೌಚಾಲಯ, ಶುದ್ಧ ನೀರಿಗಾಗಿ ವ್ಯವಸ್ಥೆ ಇವೆಲ್ಲಕ್ಕೂ ಬೇಕಾದ ಹಣದ ವ್ಯವಸ್ಥೆಯನ್ನು ಅವರ ಕುಟುಂಬದವರೆ ನಿರ್ವಹಿಸುತ್ತಿದ್ದಾರೆ.

ನಿಜವಾಗಿ ಅವರು ಹೃದಯವಂತರು, ಕರ್ಣನಂತೆ ದಾನ ಮಾಡಿದ್ದಾರೆ. ಗಂಡನಿಗೆ ತಕ್ಕ ಹೆಂಡತಿ, ಮಕ್ಕಳೂ ಹಾಗೆಯೇ ಇದ್ದಾರೆ. ನಾವೆಲ್ಲ ಅವರಿಗೆ ಧನ್ಯವಾದ ಅರ್ಪಿಸೋಣ. ದೇವರು ಅವರ ಸಂಸಾರವನ್ನು ಸುಖವಾಗಿಟ್ಟಿರಲಿ ಎಂದು ಮಾತು ಮುಗಿಸಿ, ಗೋಪಾಲ್ ರಾವ್ ‌ರವರ ಕುಟುಂಬವನ್ನು ಹಾರ ತುರಾಯಿಗಳಿಂದ ಸತ್ಕರಿಸಿದರು.

ಊರಿನ ಗಣ್ಯ ವ್ಯಕ್ತಿಗಳು ಅವರನ್ನು ಹೊಗಳಿದರು, ಶಾಲೆಯ ಹೆಡ್‌ ಮಾಸ್ಟರ್‌ ಮುಂದೆ ಬಂದು ಸಾಯಂಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಲ್ಲರೂ ತಪ್ಪದೆ ಬರಬೇಕು, ಈಗ ಎಲ್ಲರೂ ಲಘು ಉಪಾಹಾರ ಸೇವಿಸಬೇಕೆಂದು ವಿನಂತಿಸಿದರು. ಈ ಎಲ್ಲಾ ಖರ್ಚು ವೆಚ್ಚಗಳನ್ನು ರಾಯರ ಅಣ್ಣ ತಮ್ಮಂದಿರೇ ವಹಿಸಿದ್ದರು. ಗೋಪಾಲ್ ‌ರಾವ್‌ ರವರ ಪತ್ನಿ ಎಲ್ಲವನ್ನೂ ಮಕ್ಕಳಿಂದ ಕೇಳಿ ಸಂತಸಗೊಂಡಿದ್ದರು.

ಸುಖ ಸಮೃದ್ಧಿಯಿಂದ ಬೆಳೆದ ಮೂರು ಮಕ್ಕಳಿಗಾಗಿ ಸಿಟಿಯಲ್ಲೇ ಪುಟ್ಟ ಮನೆಯಲ್ಲಿದ್ದರು. ಬೇಗ ವಿಧವೆ ಆದ ವಿಮಲಕ್ಕ ಕೊರಗಿ ತನ್ನ ಬದುಕು ಕಟ್ಟಿಕೊಳ್ಳಲಾಗದೆ ಇಡೀ ದಿನ ಏಕಾಂಗಿಯಾಗಿ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು, ಗಂಡನೇನೂ ಟಾಟಾ, ಬಿರ್ಲಾರಂಥ ಆಸ್ತಿವಂತರಲ್ಲ. ನಾವೆಲ್ಲ ಹಳ್ಳಿಯಲ್ಲೇ ದಿನ ದೂಡಿದೆ ಎಂದು ರಾಯರ ಅಮ್ಮ ಸಲಹೆ ಇತ್ತರು. ನಾನು ಇಲ್ಲೇ ಇರ್ತೀನಿ ರೂಮು ಮಾಡು, ಓದುವ ಮಕ್ಕಳು ಇವರ ಊಟದ ಯಾವ ಚಿಂತೆ ಇರಲ್ಲ. ನನ್ನ ಕೆಲಸ ಇಲ್ಲೇನಿದೆ? ರಾಧಾ ಬೇಕಾದಾಗ ನೀನೂ ಸಹ ಬಂದು ಹೋಗುವಂತೆ ಸಲಹೆ ನೀಡಿ, ಯಶಸ್ವಿ ಆಗಿ ಮೂವರೂ ಡಿಗ್ರಿ ಪಡೆದಾಗಿತ್ತು.

ಜಮೀನು, ಅಡಕೆ, ಕಬ್ಬು, ತೆಂಗಿನ ತೋಟಗಳು. ಕಾಫಿಯಿಂದ ಬರುವ ಹಣ ತಿಜೋರಿಯಲ್ಲಿತ್ತು. ಎಲ್ಲವನ್ನೂ ಮನೆಯಲ್ಲೇ ಬೆಳೆಯುವರು. ಹಿರಿಯರ ಆಸ್ತಿ ಏನೂ ಕಡಿಮೆ ಇರಲಿಲ್ಲ. ಆದರೆ ಶ್ರಮ ವಹಿಸಿ ಊರಿನ ಎಲ್ಲರ ಪ್ರೀತಿ ಅದೂ ಊರಿನ ಒಕ್ಕಲಿಗರೊಡನೆ ಅಂದರೆ ಆಳುಗಳೊಡನೆ ಬಡ ನಿರಕ್ಷಕರಂತೆ ಅಲಕ್ಷ್ಯವಹಿಸದೇ ಎಲ್ಲರಿಗೂ ಸದಾ ಸಹಾಯ ಮಾಡಿ. ಊರಿಗೆ ಊರೇ ಸ್ತುತಿ ಮಾಡುವಂತೆಯೇ ಇದ್ದರು ರಾಯರು. ದಾನ ಧರ್ಮ ತಮ್ಮ ಸಂಸ್ಕೃತಿ  ಮನೆಯ ವಂಶಪರಂಪರೆಯಿಂದ ಸಾಗಿಬಂದ ಕ್ರಮ ಕಿಂಚಿತ್ತೂ ಬಿಟ್ಟವರಲ್ಲ. ಸಂಸಾರ ಆನಂದದಿಂದ ಸಾಗುತ್ತಿರುವಾಗ ಇದೇ ಊರಲ್ಲಿದ್ದು ಕೆಲಸ ಹುಡುಕಿ ಇಲ್ಲೀ ಇಲ್ಲವೇ ನಮ್ಮ ನಾಡಿನಲ್ಲೇ ವೃತ್ತಿ ಹಿಡಿಯಲಿ ಎಂದರೆ ಈ ಒಂದು ವಿಷಯದಲ್ಲಿ ಮನಸ್ತಾಪವಾಗಿ ಇಬ್ಬರೂ ಪರದೇಶದಲ್ಲಿ ಜವಾಬು ಗಿಟ್ಟಿಸಿಕೊಂಡು ಮದುವೆ ನಂತರ ಸಹ ವಿದೇಶದಲ್ಲೇ ನೆಲೆಸಿದಾಗ ಗಂಡ ಹೆಂಡತಿಗೆ ತುಂಬಾ ನೋಡಿದಾಗ ಬೇಜಾರಾಗಿತ್ತು. ಆದರೆ ಎಲ್ಲವೂ ಆ ಬ್ರಹ್ಮ ಲಿಖಿತ, ಅಗಳು ಅಗಳಿನಲ್ಲಿ ಉಣ್ಣುವವನ ಹೆಸರು ಬರೆದಿರುತ್ತಾನಂತೆ ಬ್ರಹ್ಮ.

ಮಗಳ ಮದುವೆ ಮಗಳೂರಲ್ಲೇ ಇದ್ದು ತನ್ನ ಅಪ್ಪ ಅಮ್ಮಂದಿರೊಂದಿಗೆ ಅಲ್ಲೇ ಕೆಲಸ ಮಾಡಿಕೊಂಡಿದ್ದ ರವಿರಾಜನೊಂದಿಗೆ ರೂಪಾಳ ಮದುವೆ ಮಾಡಿ ಕನ್ಯದಾನದಿಂದ ಆನಂದಪಟ್ಟರು. ಅವಳ ಗಂಡನ ಮನೇಲಿ ಜಾಯಿಂಟ್‌ ಫ್ಯಾಮಿಲಿ. ಅವಳದು ತುಂಬು ಸಂಸಾರ. ಅತ್ತೆ ಮಾವಂದಿರ ಪ್ರಿಯ ಸೊಸೆ ಆಗಿ ಗಂಡಂಗೆ ತಕ್ಕಂತೆ ಚೆನ್ನಾಗಿಯೇ ಜೀವನ ಮಾಡುತ್ತಿದ್ದಾಳೆ. ಆಗಲೇ ರೂಪಾಳ ಎರಡೂ ಬಾಣಂತನ ಮಾಡಿ ಗೆದ್ದಿದ್ದರು. ಇಲ್ಲಿ ಮೊದಲಿನವನಿಗೆ ಎರಡು ಮಕ್ಕಳಾಗಿ 3-4 ವರ್ಷಗಳು ಉರುಳಿದರೂ ಎರಡನೆ ಸೊಸೆಗೆ ತಾಯಿಯಾಗಬೇಕು ಎಂಬ ಬಯಕೆ ಬಹುದೂರ. ಆದರೆ ಬಗಲಲ್ಲಿ ಒಂದಾದರೂ ಪುಟ್ಟಮಗು ಬೇಕು. ಈಗ ಗೊತ್ತಾಗಲ್ಲ ವೃದ್ಧಾಪ್ಯ ಬಂದಾಗ ಅದರ ಬಿಸಿ ಅರಿವಾಗುತ್ತದೆ. ಇವರು ಹೇಳಿ ಅವಳಮ್ಮ ಅಪ್ಪ ಹೇಳಿ ದೇವರಿಗೆ ಹರಕೆ ಹೊತ್ತ ನಂತರ ಡಬಲ್ ಧಮಾಕಾ…. ಎರಡು ಹೆಣ್ಣು ಶಿಶುಗಳು ಮನೇಲಿ ಅಪ್ರತಿಮ ಉಲ್ಲಾಸ. ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ನಿಲ್ಲುತ್ತವೆಯೇ? ಕಾಲಚಕ್ರ ಗಡಿಯಾರದ ಮುಳ್ಳಿನಂತೆ ಓಡುತ್ತಾ ಇತ್ತು. ವರ್ಷಕ್ಕೆ ಎರಡು ವರ್ಷಕ್ಕೆ ಒಬ್ಬೊಬ್ಬರೇ ಬಂದು ಒಂದೇ ವಾರ ಇದ್ದು ಹೋಗುತ್ತಿದ್ದರು.

doosari-pari-story2

ರಾಯರದು ದೊಡ್ಡ ಮನೆ…. ಹೆಸರೇ ದೊಡ್ಡ ಮನೆ ಅಂತ. ಅವರಪ್ಪನ ಕಾಲದಿಂದಲೂ ಹೀಗೆ ಕರೆಯುತ್ತಿದ್ದರು. ಆದರೆ ಈಗ ರಾಯರಿಗೇನು ಕಡಿಮೆ…. ಅದೇ ಮನೇಲಿ ಆಧುನಿಕತೆಯ ಅನೇಕ ಸೌಲಭ್ಯ ಒದಗುವಂತೆ ಮಾಡಿಸಿದ್ದರು.

ಹಿರೀಮಗ ಬಂದಾಗ ಕಿರಿ ಮಗ ಬರುವುದಿಲ್ಲ, ಮಗಳಿಗೂ ಬರಲು ಆಗುವುದಿಲ್ಲ. ಎಷ್ಟೋ ವರ್ಷಗಳು ಉರುಳಿ ಹೋಗಿದ್ದವು. ಇಡೀ  ಕುಟುಂಬ ಒಂದೇ ಕಡೆ. ಮೂವರು ತಮ್ಮ ಮಕ್ಕಳು. ಅವರಿಬ್ಬರಿಗೂ ಮನದಲ್ಲಿ ತುಂಬಾನೇ ಕಸಿವಿಸಿ ತೋರುತ್ತಾ ಇತ್ತು. ಆದರೆ ತಾವೀಗ ವಯಸ್ಸಾದರು. ಮಕ್ಕಳು ತಮ್ಮ ಮಾತಲ್ಲಿ ಪಾಲಿಸುವರು, ಅದೆಲ್ಲ ರಾಮ ರಾಜ್ಯದಲ್ಲೇ ಆಗಿಹೋಯ್ತು. ಆ ಇಡೀ ದೊಡ್ಡ ಮನೆಯಲ್ಲಿ ಒಂದೊಂದು ದಿನ ತುಂಬಾನೇ ಆತಂಕ ಅನಿಸ್ತಾ ಇತ್ತು. ತುಂಬಿದ್ದ ಹಕ್ಕಿ ಗೂಡು ಪುಕ್ಕ ಬಂದನಂತರ ಆಕಾಶದೆಡೆ ಹಾರಿಹೋದ ಪಕ್ಷಿಗಳಂತೆ ಅವರ ದೊಡ್ಡಮನೆ ಖಾಲಿ ಖಾಲಿ.

ಆದರೆ ಅವರು ಸದಾ ಸಮಾಜ…. ಊರಿನವರ ಬಗ್ಗೆ ಚಿಂತಿಸುತ್ತಾ ಅವರಿಗಾಗಿ ಕೆಲಸ ಮಾಡುತ್ತಾ ಮಾಡುತ್ತಾ, ಬಡ ಬಗ್ಗರು, ದೀನದಲಿತರಿಗೆ ಎಲ್ಲ ತೆರನಾದ ಸಲಹೆ ಸರೀ ದಾರಿ ತೋರಿಸುತ್ತಾ ಕೈ ತುಂಬಾ ದಾನ ಮಾಡುತ್ತಾ ಜೀವನ ಪಾವನವಾಗಿ ಮಾಡಿಕೊಳ್ಳುತ್ತಾ ಇದ್ದರು. ಈ ಸಲದ ದಸರಾಕ್ಕೆ ಒಬ್ಬರು ಬಂದರೆ, ಉಳಿದಿಬ್ಬರೂ ದೀಪಾವಳಿಗೆ ಬರುತ್ತೇವೆ ಅಂದರು. ಅದಕ್ಕೆ ರಾಯರು, ಖಂಡ ತುಂಡವಾಗಿ ಯಾರೂ ಬರುವ ಅಗತ್ಯ ಇಲ್ಲ ಎಂದು ಹೇಳಿದರು. ಅದಕ್ಕೆ ಒಮ್ಮೆಲೇ ಎಲ್ಲರಿಗೂ ಶಾಕ್‌. ಅಪ್ಪ ಅಮ್ಮನ ಮಾತು ಲಾಲಿಸಿ ಯಾಕೆ? ಏನಾಯ್ತು? ನಾವು ಬರಬೇಕೆಂದು ಕಾಯ್ತಾ ಇದ್ದೆವು. ಈ ಸಲದ ನಕಾರಕ್ಕೆ ಕಾರಣ ಏಕೆ?  ಸದಾ ನಿಮ್ಮ ಮಾತನ್ನು ನೀವು ಮಾಡಿದ್ದನ್ನು ನಾವಿಬ್ಬರೂ ಸಹಿಸಬೇಕೆ? ಅದರಂತೆ ನಾವು ನಡೆಯಬೇಕೆ? ನಮಗೆ ನಾವಿಬ್ಬರೂ ನಮ್ಮದೇ ಆದ ಮಕ್ಕಳಿಗೆ, ನಮಗೆ ಬೇಕಾದಂತೆ ಮಾತನಾಡುತ್ತಾ ವರ್ತಿಸುವ ಅಧಿಕಾರ ಇಲ್ಲವೇ?

ಅಂದ್ರೆ ನಾವು ಬರುವುದರಿಂದ ನಿಮಗೆ ತೊಂದರೆ ಆಗುವಂತಿದ್ದರೆ ಖಂಡಿತಾ ಬರಲ್ಲ. ಬೇರೆಡೆ ತುಂಬಾ ನೋಡಲು ಇದೆ ದೇಶ ಪರದೇಶಗಳು! ಸೌಖ್ಯವಿಲ್ಲವಾ? ಅಥವಾ ನಿಮಗೆ ಎಲ್ಲಿಗಾದರೂ ಮದುವೆ ಮುಂಜಿಗೆ ಹೋಗಲಿಕ್ಕಿದ್ದರೆ ಹೇಳಿ ನಾವೆಲ್ಲ ಖಂಡಿತಾ ಬರಲ್ಲ. ಒಮ್ಮೆಲೇ ಎಲ್ಲರೂ ಸೇರಿ ಮೆಲ್ಲಗಿನ ಸ್ವರದಲ್ಲಿ ಅಂದರು.

ಈಗಂತೂ ಯಾವುದೇ, ಮದುವೆ ಮುಂಜಿಯ ಕರೆಯೋಲೆ ಬಂದಿಲ್ಲ. ಹಾಗಾದರೆ ಏನಂತಾ ಬಿಡಿಸಿ ಹೇಳಬಾರದೆ? ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಯಾಕೆ ನಮ್ಮ ಸಸ್ಪೆನ್ಸ್ ನಲ್ಲಿ ಇಡ್ತಾ ಇದೀರಾ? ಅಲ್ವೇ ರೂಪಾ ಅದೇನು ಇಂದು ಎಲ್ಲರೂ ಒಂದೇ ವೇಳೆಲಿ ಒಂದೇ ಸಮ. ಒಂದೇ ಕಡೆ ಇದ್ದಂತೆ ಮಾತನಾಡ್ತಾ ಇದೀರಾ? ನನಗಂತೂ ತಲೆಬುಡ ಅರ್ಥವಾಗ್ತಿಲ್ಲ. ಆದರೆ ಆಶ್ಚರ್ಯವಾಗ್ತಿದೆ, ಎಂದು ಅಮ್ಮ ಕೇಳಿದರು.

ಅಯ್ಯೋ…. ಅಮ್ಮ ಇದಕ್ಕೆ ಕಾನ್ಛರೆನ್ಸ್ ಅಂತಾರೆ…. ಎಷ್ಟೋ ದೂರದಲ್ಲಿದ್ದರೂ ಸರಿ ಎಲ್ಲರೂ ಲ್ಯಾಪ್‌ ಟಾಪ್‌ ನಲ್ಲಿ ವಿಡಿಯೋ ಮುಖಾಂತರ ನೋಡ್ತಾ ಮಾತನಾಡಬಹುದು. ಎಷ್ಟೊಂದು ಟೆಕ್ನಾಲಜಿ ಬೆಳೆದಿದೆ ಅಂದರೆ ನಂಬಕ್ಕಾಗಲ್ಲ. ಹೌದೇ ಮಾರಾಯ್ತಿ? ಹೋಗಲಿಬಿಡು ಅದೆಲ್ಲಾ ನಮ್ಮ ಮಂಡೆಗೆ ಹೋಗುವಂಥದ್ದಲ್ಲ. ನಾನು ಈ ಸಲ ಅಂದರೆ ನಿಮ್ಮಪ್ಪ ಕೂಡಾ ನೀವೆಲ್ಲಾ ಅಕ್ಟೋಬರ್

ತಿಂಗಳಲ್ಲೇ ಎರಡನೇ ಮೂರನೇ ವಾರ ಇಲ್ಲಿಗೆ ಬನ್ನಿ. ಒಂದು ಸಲವಾದರೂ ಎಲ್ಲರೂ ಒಂದೇ ಸಲ ಈ ನಿಮ್ಮ ದೊಡ್ಡಮನೇಲಿ ಒಟ್ಟಿಗೇ ಇದ್ದು ಮಾಸ ಒಂದು ಕಳೆಯುವಾ ಮುಂದಿನದು ಕಂಡವರಾರು? ದೇವರಿದ್ದಾನೆ.

ಅಮ್ಮನ ಮಾತು ಎಲ್ಲರಿಗೂ ಸರಿ ಎನಿಸಿ ಹೇಗಾದರೂ ಲಾಗ ಹಾಕಿ ಎಲ್ಲರೂ ಒಂದೇ ಸಮಯ ಈ ಸಲ ಅಲ್ಲಿರುವಾ ಏನಂತೀರಾ….? ಗುಣಾಕಾರ ಭಾಗಾಕಾರ ಮಾಡಿ ಪ್ಲಸ್‌ ಮೈನೆಸ್‌ ಮಾಡಿ ಅಂತೂ ಇಂತೂ ನಿರ್ಧಾರ ಮಾಡಿ ಊರಿಗೆ ಹೊರಡುವುದೆಂದು ನಿರ್ಧರಿಸಿದರು.

ಅವರು ಬರುವ ದಿನ ನೆಲದ ಮೇಲೆ ಪತಿ ಪತ್ನಿಯ ಕಾಲು ಇರಲಿಲ್ಲ. ಎಲ್ಲವೂ ಭರ್ಜರಿ ತಯಾರಿ. ಅಡುಗೆ ಭಟ್ಟರನ್ನು ಕರೆಯಿಸಿದ್ದರು. ಮೊದಲಿನಿಂದಲೂ ಗುಂಡಾ ಭಟ್ಟರಂತೂ ಇದ್ದೇ ಇದ್ದರು. ಆದರೆ…. ಈ ಸಲ ಸಿಕ್ಕಾಪಟ್ಟೆ ಜನವಾಗಬಹುದು. ಬರುವವರು ಹೋಗುವವರು ಎಲ್ಲರೂ ಇರುತ್ತಾರೆ, ಬಳಗದವರೂ ಬರ್ತಾರೆ. ರೂಪಾಳಿಗೆ ಚಿಂತೆ. ಮಗಳಲ್ಲವೇ… ಅಮ್ಮಾ ಹೇಗೆ ನಿಭಾಯಿಸ್ತೀಯಾ? ಅದಕ್ಕೆ ಸೊಸೆಯಂದಿರೂ ಅಂದರು. ನಾವು ಎಲ್ಲ ಸೇರಿ ಸಹಾಯ ಮಾಡಿದರೆ ಆಯ್ತಪ್ಪ ಸರಿ ಸುಖವಾಗಿ ಬನ್ನಿ ಹೃದಯ ತುಂಬಿ ಬಂದು ಹೇಳಿದರು.

ಆ ಸುದಿನ ಬಂದೇ ಬಿಟ್ಟಿತು. ಮನೆ ನಂದಗೋಕುಲದಂತೆ ಕಾಣತೊಡಗಿತು. ಗೋಪಾಲ ರಾಯರ ಮಕ್ಕಳು  ಇಲ್ಲೇ ಹುಟ್ಟಿ ಬೆಳೆದವರು. ಅವರಿಗೆ ಸಹಜ ಇಷ್ಟವಾಗುವುದು. ಆದರೆ ಮೊಮ್ಮಕ್ಕಳಿಗೆ… ಪ್ರತಿಯೊಂದು ಅಪರಿಚಿತ. ಪರದೇಶದಲ್ಲಿ ಹುಟ್ಟಿ ಅಲ್ಲಿಯೇ ಬೆಳೆದದ್ದೆಲ್ಲಾ ಪೂರಾ ಎಲ್ಲ ಅಲ್ಲಿಯಂತೆಯೇ. ಅಲ್ಲಿಯ ತಿನ್ನುವ ಉಣ್ಣುವ ಮಾತನಾಡುವ ಭಾಷೆಯಿಂದ ವಸ್ತ್ರ, ಸಂಸ್ಕೃತಿ ಅಂದ್ರೆ ಪ್ರತಿಯೊಂದೂ ಪರದೇಶಿಯಾಗಿದ್ದಾರೆ.

ನಮ್ಮ ಭಾರತೀಯರ ವಂಶದಲ್ಲಿ ಹುಟ್ಟಿ ಬೆಳೆದ ಮೊಮ್ಮಕ್ಕಳು. ಹಿರಿಯರ ಪುಣ್ಯಕ್ಕೆ ಇಬ್ಬರೂ ಗಂಡು ಮಕ್ಕಳು ತಾಯ್ನಾಡು ಮರೆತಿಲ್ಲ. ಎರಡೆರಡು ವರ್ಷಕ್ಕಾದರೂ ಬಂದು 8-10 ದಿನ ಇದ್ದು ಹೋಗ್ತಾರೆ. ಮಗಳು ಮೈಸೂರು-ಮಂಗಳೂರಿನಲ್ಲಿ ಇರುವುದರಿಂದ ಬರುತ್ತಾ ಹೋಗುತ್ತಾ ಸ್ವಲ್ಪವಾದರೂ ಮಾಡ್ತಿರುತ್ತಾಳೆ. ಅವಳ ಮಕ್ಕಳಿಗೆ ಕನ್ನಡ ಬರುತ್ತೆ. ಬರೆಯಲೂ ಸಹ ಸಾಧಾರಣವಾದರೂ. ಪಾಪ! ಆ ಮಕ್ಕಳದೇನೂ ತಪ್ಪಿಲ್ಲ. ಉದರ ನಿಮಿತ್ತ…. ನಾನಾ ವೇಶ. ಇಲ್ಲಿ ಕೆಲಸ ಹಿಡಿಯದೇ ಅಲ್ಲಿಯ ಸುಖಭೋಗಗಳಿಗಾಗಿ ಹೋಗಿದ್ದಾರೆ. ಇರಲಿ ಹಾಗಂತ ಇಲ್ಲಿ ನಮ್ಮ ಕುಟುಂಬಕ್ಕೆ ಆ ದೇವರ ಆಶೀರ್ವಾದವಿದೆ. ಮಣ್ಣು ಮುಟ್ಟಿದರೂ ಚಿನ್ನವಾಗುವಂತೆ ವ್ಯಾಪಾರದಲ್ಲಿ ತೋಟದಲ್ಲಿ ತೆಂಗು, ಕಾಫಿ, ಅಡಕೆ ಬೆಳೆಗಳಿಂದ ಬಂದ ಲಾಭ  ಕಡಿಮೆ ಇರಲಿಲ್ಲ. ಕಣ್ಣು ಮುಚ್ಚಿ ದೇವರು ಎರಡೂ ಕೈಗಳಿಂದ ಕೊಟ್ಟಿದ್ದ.

ಆದರೆ ಮಾಡಿದ್ದನ್ನು ಉಂಡು ತಿಂದು ನಲಿದಾಡಲು ಈ ದೊಡ್ಡಮನೇಲಿ ಜನವೇ ಇರಲಿಲ್ಲ. ಇಲ್ಲದ್ದು ಬಯಸಿ ಗಲ್ಲ ಗಲ್ಲ ಬಡಿದುಕೊಂಡರಂತೆ. ತಾಯಿ ಚಿಂತಿಸುತ್ತಲೇ ಇದ್ದರು.

ಆಗ ರಾಯರು, ಯಾಕೆ ಚಿಂತಿಸ್ತೀಯಾ? ಇಷ್ಟಾದರೂ ಹಳ್ಳಿ ಮೇಲೆ ಪ್ರೀತಿ ಮಮಕಾರ ಇಟ್ಟುಕೊಂಡು ಬರುತ್ತಿದ್ದಾರೆ, ಬಂದಿದ್ದಾರೆ. ನೀನು ಏನೇನೋ ಅಂದು ಆಡಿ ಅವರ ಮನಸ್ಸು ಕೆಡಿಸಬೇಡ. ನಾಲ್ಕು ದಿನ ಚೆನ್ನಾಗಿ ಈ ಪುಟ್ಟ ಹಳ್ಳಿಯಲ್ಲಿ ಎಲ್ಲರೂ ಸುಖವಾಗಿದ್ದು ಹೋಗಲಿ. ಯಾವುದಕ್ಕೂ ಒತ್ತಾಯ ಬೇಡ ತಿಳೀತಾ…? ನಾನು ಹೇಳಿದ್ದು ಮಂಡೆಗೇ ಹೋಯ್ತಾ…? ಎಂದು  ಸಮಾಧಾನ ಪಡಿಸಿದರು.

ಹ್ಞಾಂ…. ಹ್ಞಾಂ…. ಹೋಗದೇ ಏನು? ನಾನು ಏನು ಅಂಥ ಪೆದ್ದಲ್ಲ…. ಆದರೂ ಮನೆಯವರೇ ನೆಂಟರಂತೆ ಬಂದು ನಾಲ್ಕು ದಿನ ಇದ್ದು ಹೋಗುವುದು ಏನು ಚೆಂದ? ತಿಂಗಳೊಪ್ಪತ್ತಾದರೂ ಇದ್ದು ಹೋಗಬಾರದೇ? ಮತ್ತೆಂದು ದರ್ಶನವೋ ಅವರದ್ದೆಲ್ಲಾ….?

ಸರಿ ಸರೀ…. ನನಗೆ ಗೊತ್ತಿದೆ. ನಿನ್ನ ಮನದ ಕಷ್ಟ, ಆದರೆ ನೀನೇ ನೋಡು ಪಾಪ ಆ ಮಕ್ಕಳಿಗೆ ಇಲ್ಲಿ ಒಂದೆರಡು ದಿನ ಕಳೆಯುವುದೇ  ಕಷ್ಟವಾಗಿ ಮಮ್ಮಿ…. ಪಪ್ಪಾ…. ಸಾಕಿನ್ನು ಇಲ್ಲಿ ಸ್ಟೇ ಮಾಡುವುದು? ಹೋಗೋಣ ನಮ್ಮ ಕಂಟ್ರಿಗೆ…. ಛೇ ಇಲ್ಲಿ ತುಂಬಾ ಬೋರು ಬೋರೂಂತ ಹೇಳಿ ಅಳಲು ಶುರು ಮಾಡಿದರೆ ಆಯ್ತು. ನಿನ್ನಿಬ್ಬರು ಗಂಡು ಮಕ್ಕಳು, ಸೊಸೆಯಂದಿರು ಸಾಮಾನು ಪ್ಯಾಕ್‌ ಮಾಡಿ….ಛೀ ಬಿಡ್ತೂ ಅನ್ನಿ…. ಅದು ನಿಮ್ಮ ಭ್ರಮೆ. ನಿಮಗೆ ನಿಮ್ಮ ಸಂತಾನದ ಮೇಲೆ ವಿಶ್ವಾಸ ಭರವಸೆ ಪ್ರೀತಿ ಇಲ್ಲ. ನಾನು ಖಂಡಿತಾ ನಿಶ್ಚಯ ಮಾಡಿರುವೆ. ಅವರು ಈ ಬಾರಿ ಒಂದು ತಿಂಗಳು ಇದ್ದೇ ಹೊರಡುವರು.

ಅಹ್ಹ….ಅಹ್ಹಾ….. ರಾಯರು ಜೋರಾಗಿ ಕುತ್ತಿಗೆಯಿಂದ ಶಲ್ಯ ತೆಗೆದು ಒದರುತ್ತಾ, ಸಾಧ್ಯವೇ ಇಲ್ಲ. ಎಂತಹ ಪಾಪದವಳು ನೀನು. ನಿನಗೆ ಹೊರಗಿನ ಪ್ರಪಂಚದ ಪರಿಚಯ ಇಲ್ಲ. ಬರೀ ಬುದ್ದು! ಇರು, ನಾನು ಹೇಳ್ತೀನಿ ಅಬ್ಬಬ್ಬಾ ಅಂದ್ರೆ 10 ದಿನ ಇದ್ದರೂ ಸಾಕು. ರಾಧಕ್ಕನನ್ನು ನೋಡುತ್ತಾ ಸವಾಲಿನಂತೆ ಹೇಳಿದರು.

jhataka-story2

ಅವರೇನು ಕಡಿಮೆಯೇ….ನೋಡಿ, ನಾನು ದೇವರನ್ನು ಬೇಡಿಕೊಂಡಿರುವೆ. ಅವರು ತಿಂಗಳಾದರೂ ಇಲ್ಲೇ ಇರುತ್ತಾರೆ. ಇದು ನನ್ನ ಪಂಥ! ಆ್ಞಂ….. ಭಾಪರೇ ಏನೆಂದಿ ಪಂಥ! ಅದೂ ಚಾಲೆಂಜಾ…. ವಾಹ್…. ವಾಹ್….. ಅದೆಲ್ಲ ಕಲಿತಿರುವಿ. ಇಷ್ಟೊಂದು ಎದುರಿಸುತ್ತಿರಲು. ಟಿ.ವಿ. ಮುಖಾಂತರವೇ ಅಥವಾ ನೀನು ಸೇರಿಕೊಂಡ ಆ ಶಕ್ತಿ ಸಂಘದಿಂದಲೋ…? ಅವರಿಗೆ ನಿಜವಾಗಿ ಒಂದೆಡೆ ನಗು. ಮತ್ತೊಂದೆಡೆ ಇಲ್ಲ. ನಾನೇ ಗೆಲ್ಲುವೆ. ನೋಡು ನೀನು ಸೋಲುವಂತ ಹೇಳ್ತಾ ತಮ್ಮ ರೂಮಿನಿಂದ ಹೊರಬಿದ್ದರು.

ಅಲ್ಲಾರಿ ಗೋಡೆಗಳಿಗೂ ಕಿವಿ ಇವೆ ಅಂತಾರೆ. ಬೇರೆ ಯಾರೂ ಕೇಳಿಸಿಕೊಂಡಿಲ್ಲ ತಾನೇ? ರಾಯರು ಅವರ ಬೆನ್ನ ಮೇಲೆ ಏಟಾಕಿ ಯಾರೂ ಇಲ್ಲಾಂತ ಅಂದು ತೋಟದತ್ತ ಸಾಗಿದರು. ಗಂಡಹೆಂಡತಿಯರ ಬಹುದಿನಗಳ ಆಸೆ ಈಡೇರಿಸಲೆಂದೇ ಪೂರಾ ಅವರ ಫ್ಯಾಮಿಲಿ ಅಕ್ಟೋಬರ್‌ ಮೂರನೇ ವಾರದಲ್ಲಿ ಬಂದು ನವೆಂಬರ್‌ 1ರ ಕರ್ನಾಟಕ ರಾಜ್ಯೋತ್ಸದ ನಿಮಿತ್ತ ಊರಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಿಗೆ ಅವರೆಲ್ಲ ಭಾಗಿಗಳಾಗಬೇಕೆಂಬ ಉದ್ದೇಶ ಸಫಲವಾಗಿತ್ತು. ಸಾಯಂಕಾಲ ಎಲ್ಲಾ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಗಲಿದೆ ಎಂದು ವಸಂತ ನೈಪುಣ್ಯತೆಯಿಂದ ವಿವರಿಸುತ್ತಿದ್ದ. ಜನಸ್ತೋಮ ಕಿಕ್ಕಿರಿದು ನೆರೆದಿತ್ತು. ಮೊದಲು ಓಂಕಾರೇಶ್ವರನ ಗಾನಸುಧೆ ಹರಿಸಿ ಕಾರ್ಯಕ್ರಮ ಶುರುವಾದವು. ಎದುರಿಗೇ ಮಕ್ಕಳು, ಸೊಸೆ, ಮೊಮ್ಮಕ್ಕಳು ಕುಳಿತಿದ್ದರು. ರಾಧಕ್ಕನಿಗೆ ಎರಡು ಕೋಡು ಬರುವುದೊಂದೇ ಬಾಕಿ. ನೃತ್ಯ, ನಾಟಕ, ಹಾಸ್ಯ ಪ್ರಹಸನ ಎಲ್ಲವನ್ನೂ ಬಿಟ್ಟಕಣ್ಣು ಬಿಟ್ಟಂತೆ ಮಕ್ಕಳು ನೋಡುತ್ತಿದ್ದ.

ನಂತರ ಎಲ್ಲರಿಗೂ ಬಹುಮಾನ ವಿತರಣೆ. ಎಲ್ಲಕ್ಕೂ ರಾಯರ ಮಕ್ಕಳೇ ಧನ ಸಹಾಯ ಮಾಡಿದ್ದರು. ನಂತರ ಊಟದ ವ್ಯವಸ್ಥೆಯೂ ಇದ್ದುದರಿಂದ ಎಲ್ಲರೂ ಊಟ ಮಾಡಿದರು. ಮಕ್ಕಳಿಗೆ ಮನೆಗೆ ಹೋಗಲು ಮನಸ್ಸೇ ಇರಲಿಲ್ಲ. ಮಕ್ಕಳೆಲ್ಲ ಹೀಗೆ ಇರಲೀ ಅಂತ ರಾಧಮ್ಮ ಮನದಲ್ಲೇ ಹರಸಿದರು.

ನಂತರ ದಿನಕ್ಕೊಂದು ವೆರೈಟಿ ತಿಂಡಿ, ಊಟ ಎಂದು 4-5 ದಿನಗಳು ಕಳೆದವು. ನಂತರ ಮಕ್ಕಳು ತಿರುಗಿ ಬೋರ್‌ ಎಂದು ಅದೇ ರಾಗ ತೆಗೆದ. ಬ್ಯಾಡ್ಮಿಂಟನ್‌, ಕೇರಂ ಮುಂತಾದ ಆಟಗಳನ್ನು ಆಡುತ್ತಾ ಕಾಲ ಕಳೆಯತೊಡಗಿದರು. ಮಕ್ಕಳು ಇನ್ನೂ 8-10 ದಿನಗಳಾದರೂ ಇರಲಿ ಎಂದು ಮನಸ್ಸಿನಲ್ಲಿ ನೆನೆಸಿಕೊಂಡರು.

ನಂತರ ಮಕ್ಕಳು, ಆಕಳು ಕರು ಹಾಕಿದ್ದನ್ನು ಫೋಟೋ ಹಿಡಿದರು. ಮಾದಣ್ಣ ಹಾಲು ಕರೆಯುವುದನ್ನು ಅಚ್ಚರಿಯಿಂದ ನೋಡತೊಡಗಿದರು. ಮರುದಿನ ಆಲೆಮನೆಗೆ ಹೋಗಿ ಅಲ್ಲಿ ಬೆಲ್ಲ ತಯಾರಾಗುವ ವೈವಿಧ್ಯತೆಯನ್ನು ಕಂಡು ಆನಂದಿಸಿದರು. ನಂತರ ಬೆಲ್ಲದ ಕಾಕಂಬಿಯೊಂದಿಗೆ ದೋಸೆ ತಿಂದರು.

ಮರುದಿನ ತೋಟದ ಪ್ರೋಗ್ರಾಂ. ತೋಟದಲ್ಲಿದ್ದ ಎಲ್ಲಾ ಹಣ್ಣಿನ ಮರಗಳನ್ನು ಕಂಡು ಮಕ್ಕಳು ಸಾವಿರಾರು ಪ್ರಶ್ನೆಗಳನ್ನು ಕೇಳಿದರು. ಮರಗಳ ಕೆಳಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡ ಮಕ್ಕಳು ಅಲ್ಲಿನ ಹಣ್ಣುಗಳ ರುಚಿ ನೋಡಿದರು. ನಂತರ ಹೂವಿನ ತೋಟಕ್ಕೆ ಹೋದ ಮಕ್ಕಳು ಬಗೆ ಬಗೆಯ ಹೂವಿನ ಬಗ್ಗೆ ಕೇಳಿ ತಿಳಿದುಕೊಂಡರು. ಅಲ್ಲಿದ್ದ ಪಾತರಗಿತ್ತಿಗಳು ಹೂವಿಂದ ಹೂವಿಗೆ ಹಾರುತ್ತಾ ಮಕರಂದ ಹೀರುತ್ತಿದ್ದುದನ್ನು ಕಂಡು ಮಕ್ಕಳು ಸಂಭ್ರಮಿಸಿದರು. ಆ ಚಿಟ್ಟೆಗಳನ್ನು ಹಿಡಿಯಲು ಅವುಗಳ ಹಿಂದೆ ಓಡಾಡಿದರು.

ಬಿಸಿಲಿನಿಂದ ಸುತ್ತಾಡಿದ ಬಂದ ಮಕ್ಕಳಿಗೆ ಕೋಲ್ಡ್ ಡ್ರಿಂಕ್‌ ಕೊಟ್ಟರು ರಾಧಮ್ಮ. ನಂತರ ಮಧ್ಯಾಹ್ನ ಬಿಸಿಬೇಳೆ ಭಾತ್‌, ಮೊಸರನ್ನ, ಉಪ್ಪಿನಕಾಯಿಯೊಂದಿಗೆ ಊಟ ಮುಗಿಸಿದರು. ಸಾಯಂಕಾಲ ಎಲ್ಲರೂ ಯಾವುದೇ ರೀತಿಯ ಆಧುನಿಕ ವ್ಯವಸ್ಥೆ ಇಲ್ಲದೆ ಕಳೆದರು. ಹೀಗೆ ಹದಿನೈದು ದಿನ ಕಳೆದರು.

ಎರಡು ವಾರದ ನಂತರ ಬಿಸಿಲು ಬಂದಾಗ ಮಕ್ಕಳು ಕುಣಿದು ಕುಪ್ಪಳಿಸಿದರು. ನಂತರ ಕ್ರಿಕೆಟ್‌, ಬ್ಯಾಡ್ಮಿಂಟನ್‌ ಮುಂತಾದ ಆಟ ಆಡಿದರು. ಸಂಜೆ ಅಜ್ಜಿಯಿಂದ ತೆನಾಲಿ ರಾಮ, ಪಂಚತಂತ್ರ ಕಥೆಗಳನ್ನು ಕೇಳಿ ಆನಂದಿಸಿದರು. ಮತ್ತದೆ ತೋಟ, ಆಲೆಮನೆ, ಆಕಳು ಕರು, ಪಕ್ಷಿ ಎಂದೆಲ್ಲಾ ಮುಂದುವರಿದ. ಮಕ್ಕಳು 67ನೇ ಕನ್ನಡ ರಾಜ್ಯೋತ್ಸದಿಂದ ಪ್ರೇರಿತರಾಗಿ ಕನ್ನಡ ಕಲಿಯಲು ಮುಂದಾದರು. ರಾಧಮ್ಮ ಖುಷಿಯಿಂದ ಸ್ಲೇಟ್‌, ಬಳಪ ಕೊಡಿಸಿದರು. ಮಕ್ಕಳು ನಿಧಾನವಾಗಿ ಕನ್ನಡ ಕಲಿಯಲು ಆರಂಭಿಸಿದರು. ನಂತರ ಮಕ್ಕಳು ಹೂವಿನ ಗಿಡಗಳನ್ನು ನೆಟ್ಟು ಅದು ಯಾವಾಗ ಹೂ ಬಿಡುತ್ತದೆ ಎಂದೆಲ್ಲಾ ಕೇಳಿದರು.

jhataka-story1

ಹೀಗೆ ಸಂಭ್ರಮದಿಂದ ಕಾಲ ಕಳೆದ ಮಕ್ಕಳು ಹೊರಡುವ ದಿನ ಸನಿಹವಾಯಿತು. ಅಂದು ಎಲ್ಲರಿಗೂ ಒತ್ತು ಶ್ಯಾಮಿಗೆ ಚಿತಾನ್ನ, ಗಸಗಸೆ ಪಾಯಸ ಮಾಡಿ ಉಪಚರಿಸಿದರು. ಪ್ರತಿ ವರ್ಷ ನವೆಂಬರ್‌ ಒಂದರಂದು ಕನ್ನಡ ರಾಜ್ಯೋತ್ಸವಕ್ಕೆ ಬರುವುದಾಗಿ ಹೇಳಿ ಎಲ್ಲರೂ ಹೊರಟರು. ಮನೆ ಬಿಕೋ ಎನ್ನತೊಡಗಿತು. ಮಕ್ಕಳು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ರಾಧಮ್ಮ, ಗೋಪಾಲ್ ‌ರಾವ್ ‌ರವರು ಸಂತಸದಿಂದ ಕಾಲ ಕಳೆಯತೊಡಗಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ