ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓರ್ವ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ , ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವರ್ಷ. .  ವೃದ್ಧನ ಹತ್ತಿರ ಒಂದು ಹಳೆಯದಾದ ಕಬ್ಬಿಣದ ಪಲಂಗು , ಒಂದೆರಡು ಅಲ್ಯುಮಿನಿಯಂ ತಟ್ಟೆ, ಪ್ಲಾಸ್ಟಿಕ್ ನ ಬಕೆಟ್ಟು ಹಾಗೂ ಹರಿದ ಹಾಸಿಗೆ ಹೊದಿಕೆ ಇವು ಅವರ ಹತ್ತಿರ ಇದ್ದುದನ್ನು ಮನೆಯ ಮಾಲೀಕ ರಸ್ತೆಯಲ್ಲಿ ಎಸೆದಿದ್ದ.

ಮುದುಕನು ಮನೆಯ ಮಾಲೀಕನಿಗೆ ಸ್ವಲ್ಪ ಸಮಯ ಕೊಡಿ ಎಂದು ಬೇಡಿಕೊಳ್ಳತೊಡಗಿದನು. ಇನ್ನಿತರ ಜನರಿಗೂ ವೃದ್ಧನ ಬಗ್ಗೆ ಕರುಣೆಯಾಗಿ ಮನೆಯ ಮಾಲೀಕನಿಗೆ ವೃದ್ಧನಿಗೆ ಕೆಲವು ದಿನಗಳವರೆಗೆ ಸಮಯ ಕೊಡಲು ಹೇಳಿದರು. ಮನೆಯ ಮಾಲೀಕ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಅಲ್ಲಿ ಕೂಡಿದ ಜನರಲ್ಲಿ ಕೆಲವರು  ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವೃಧ್ಧನ ಸಾಮಾನುಗಳನ್ನು ಮತ್ತೇ ಮನೆಯ ಒಳಗೆ ಒಯ್ದು ಇಟ್ಟರು.

ಅಲ್ಲಿಂದಲೇ ಹೋಗುತ್ತಿದ್ದ ಓರ್ವ ಪತ್ರಕರ್ತ, ಈ ಘಟನೆಯನ್ನು ನೋಡುತ್ತಾನೆ. ಒಬ್ಬ ವೃಧ್ಧನ ಮೇಲೆ ಈ ರೀತಿಯ ದೌರ್ಜನ್ಯ ನಡೆದಿರುವುದನ್ನು ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬ ಯೋಚನೆಯಿಂದ ತನ್ನ ಪತ್ರಿಕಾ ಕಾಯಾ೯ಲಯಕ್ಕೆ ಹೋಗುತ್ತಾನೆ. ಜೊತೆಗೆ ಅಲ್ಲಿನ ಘಟನಾವಳಿಗಳ ಕೆಲವು ಫೋಟೋಗಳನ್ನೂ ತೆಗೆದುಕೊಂಡು ಹೋಗಿರುತ್ತಾನೆ. ಆತ ಅದರ ಬಗ್ಗೆ ಸುದ್ದಿ ಬರೆಯುತ್ತಾನೆ. ಅದಕ್ಕೊಂದು ತಲೆಬರಹ ಹಾಕುತ್ತಾನೆ.   “ಕ್ರೂರ ಮನೆಯ ಮಾಲೀಕನಿಂದ ವೃದ್ಧನ ಮೇಲೆ ಅನ್ಯಾಯ ” !

ಇದೆಲ್ಲ ಘಟನಾವಳಿಗಳ ಬಗ್ಗೆ ತಾನು ಬರೆದ ಎಲ್ಲ ಲೇಖನವನ್ನು  ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಸಂಪಾದಕರಿಗೆ ತೋರಿಸುತ್ತಾನೆ. ತನ್ನ ವರದಿಗಾರನು ತಂದ ವರದಿ ಓದಿ , ಅಲ್ಲಿನ ಘಟನಾವಳಿಯ ಫೋಟೋ ನೋಡಿ ,  ಪತ್ರಿಕೆಯ ಸಂಪಾದಕರು ಒಂದು ಕ್ಷಣ ಗರಬಡಿದಂತೆ ದಿಗ್ಮೂಢರಾಗುತ್ತಾರೆ.  ಅವರು ತನ್ನ ವರದಿಗಾರನಿಗೆ ಕೇಳುತ್ತಾರೆ.

“ಈ ಫೋಟೋದಲ್ಲಿರುವ ಮುದುಕನ ಪರಿಚಯ ಇದೆಯೇ ? ”

ವರದಿಗಾರ “ಇಲ್ಲ ” ಅಂತ ತಲೆ ಅಲ್ಲಾಡಿಸುತ್ತಾನೆ.

ಮರುದಿನ ಆತನ ದಿನಪತ್ರಿಕೆಯಲ್ಲಿ ಮುಖಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ವರದಿ ಪ್ರಕಟವಾಗಿರುತ್ತದೆ.

” ಗುಲ್ಜಾರಿಲಾಲ್ ನಂದಾ ; ಭಾರತದ ಮಾಜಿ ಪ್ರಧಾನಿ, ದಯನೀಯ ಸ್ಥಿತಿಯಲ್ಲಿ ! ” ಎಂಬ ತಲೆಬರಹದಲ್ಲಿ ಪ್ರಕಟಗೊಂಡಿರುತ್ತದೆ.

ಆ ವರದಿಯಲ್ಲಿ , ಮಾಜಿ ಪ್ರಧಾನಿ ನಂದಾ ಅವರು ಮನೆಯ ಮಾಲೀಕನಿಗೆ ಬಾಡಿಗೆ ಕೊಡಲು ಶಕ್ಯವಿಲ್ಲದ ಪ್ರಸಂಗ , ಅವರ ಹಾಸಿಗೆ ಹೊದಿಕೆಯನ್ನು ಮಾಲಿಕನು ರಸ್ತೆಗೆ ಎಸೆದಿದ್ದರ ಬಗ್ಗೆ ಬರೆಯಲಾಗಿರುತ್ತದೆ. ಅದರಲ್ಲಿ ಮುಂದುವರೆದು , ಇಂದು ಒಂದೇ ಸಲ ಆರಿಸಿ ಬಂದವರೂ ಕೂಡ ಕೋಟ್ಯಾಧೀಪತಿಗಳಾಗಿರುತ್ತಾರೆ. ಆದರೆ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಾಗೂ ಬಹಳಷ್ಟು ವರ್ಷಗಳ ಕಾಲ ಕೇಂದ್ರದ ಮಂತ್ರಿಯಾಗಿದ್ದ  ವ್ಯಕ್ತಿಯ ಹತ್ತಿರ ವಾಸಿಸಲು ಸ್ವಂತದ್ದು ಅಂತ ಒಂದು ಮನೆಯೂ ಇಲ್ಲ.

ವಾಸ್ತವಿಕವಾಗಿ ಗುಲ್ಜಾರಿಲಾಲ್ ನಂದಾ ಅವರಿಗೆ ಪ್ರತಿ ತಿಂಗಳು ಐದು ನೂರು ರೂಪಾಯಿ ಭತ್ತೆ ಇತ್ತು. ಆದರೆ ತಾನು  ಆ ಭತ್ತೆಗಾಗಿ ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ಲ ಎಂದು ಹೇಳಿ ಐದು ನೂರು ರೂಪಾಯಿ ಭತ್ಯೆಯನ್ನು ಪಡೆಯಲು ನಿರಾಕರಿಸಿದ್ದರು. ಆದರೆ ನಂತರ ಅವರ  ಕೆಲವು ಗೆಳೆಯರು,  ನೀವು ಐದು ನೂರು ರೂಪಾಯಿಯ ಭತ್ಯೆಯನ್ನು ನಿರಾಕರಿಸಿದರೆ ನಿಮ್ಮ ಹೊಟ್ಟೆಗೆ ಏನು ಮಾಡುವಿರೀ ಎಂದೆಲ್ಲಾ ಅವರಿಗೆ ತಿಳಿಹೇಳಿ , ಆ ಭತ್ಯೆಯನ್ನು ಅವರು ತೆಗೆದುಕೊಳ್ಳುವ ಹಾಗೆ ನೋಡಿಕೊಂಡಿದ್ದರು.

ಆ ವರದಿ ಪ್ರಕಟವಾದ ಮರುದಿನವೇ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಅವರು ವಾಸಿಸುತ್ತಿದ್ದ ಮನೆಗೆ ಧಾವಿಸಿದರು. ಅಧಿಕಾರಿಗಳು ಹಾಗೂ ಅವರ ಜೊತೆಗೆ ಬಂದಿದ್ದ ಸರ್ಕಾರಿ ವಾಹನಗಳ ಭರಾಟೆ ನೋಡಿ , ಮನೆಯ ಮಾಲೀಕ ಅವಕ್ಕಾಗುತ್ತಾನೆ. ಆಗ ಆತನಿಗೆ ತಿಳಿಯುತ್ತದೆ. ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವೃದ್ಧ ಬೇರಾರೂ ಅಲ್ಲ. ಅವರು ಮಾಜಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಎಂದು. ತಕ್ಷಣ ಆತ ತನ್ನನ್ನು ಕ್ಷಮಿಸುವಂತೆ ಗುಲ್ಜಾರಿಲಾಲ್ ನಂದಾ ಅವರು ಕಾಲು ಹಿಡಿಯುತ್ತಾನೆ.

ಅಧಕಾರಿಗಳು ನಂದಾ ಅವರಿಗೆ ಸರ್ಕಾರಿ ನಿವಾಸ ಹಾಗೂ ಸರ್ಕಾರಿ ಸವಲತ್ತು ಪಡೆಯಲು ವಿನಂತಿಸಿಕೊಳ್ಳುತ್ತಾರೆ. ಆದರೆ ಗುಲ್ಜಾರಿಲಾಲ್ ನಂದಾ ಅವರು ಅಷ್ಟೇ ನಯವಿನಯದಿಂದ ತಿರಸ್ಕರಿಸುತ್ತಾರೆ. ತಮ್ಮ ಕೊನೆಯ ಉಸಿರು ಇರುವವರೆಗೂ ಅವರು ಓರ್ವ ಸಾಮಾನ್ಯ ನಾಗರಿಕನಂತೆ ಜೀವನ ಕಳೆಯುತ್ತಾರೆ.

1997 ರಲ್ಲಿ ಅವರಿಗೆ ” ಭಾರತ ರತ್ನ ” ನೀಡಿ ಗೌರವಿಸಲಾಯಿತು. ಅವರ  ಜೀವನದ ತುಲನೆ ಇಂದಿನ  ರಾಜಕಾರಣಿಗಳ ಜೊತೆಗೆ ಎಳ್ಳಷ್ಟೂ ಆಗುವುದಿಲ್ಲ. ಅವರು ನಮ್ಮನ್ನು ಅಗಲಿ  23 ವರ್ಷಗಳಾದವು.

— ನೀಲಕಂಠ ದಾತಾರ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ